ಮುಕಪುಟದ ಹುಡುಗಿ

ಬರತ್ ರಾಜ್. ಕೆ. ಪೆರ‍್ಡೂರು.

ವ್ಯಾಟ್ಸ್ಯಾಪ್, WhatsApp

ಅವತ್ತು ವ್ಯಾಟ್ಸ್ಯಾಪ್ನಲ್ಲಿ ಒಂದು ಸಂದೇಶವಿತ್ತು “ಅಣ್ಣ ಹೇಗಿದ್ದಿರಾ …ನನಗೆ ಸಹಾಯ ಮಾಡ್ತೀರಾ”. ಒಂದು ಕ್ಶಣ ತಬ್ಬಿಬ್ಬಾದರೂ ಕೂಡ “ಏನು ಸಹಾಯ ತಂಗಿ” ಅಂತ ಕೇಳಿಯೇ ಬಿಟ್ಟೆ. “ಅಣ್ಣ ನಾನು ನನ್ನ ಪರಿಚಯದ ಊರಿನ ಹುಡುಗನನ್ನು ಪ್ರೀತಿಸ್ತಿದೇನೆ. ಮನೆಯಲ್ಲಿ ಗೊತ್ತಿಲ್ಲ ನೀವು ಸಹಾಯ ಮಾಡ್ತೀರಾ” ಅನ್ನೊ ಸಂದೇಶ ಬಾಗಿಲು ತಟ್ಟಿದರೂ ಅಪ್ಪಣೆ ಕೊಡುವ ಮೊದಲೆ ನನ್ನ ವ್ಯಾಟ್ಸ್ಯಾಪ್ ಪೆಟ್ಟಿಗೆಯಲ್ಲಿ ಹಾಯಾಗಿ ಮಲಗಿತ್ತು. ಈಗ ಏನು ಅಂತ ಕೇಳಿದ ತಪ್ಪಿಗೆ ಕಶ್ಟಕ್ಕೆ ಸಿಕ್ಕಿಕೊಂಡವ ನಾನಾಗಿದ್ದೆ.

ನಾನು ಪ್ರೀತಿ-ಪ್ರೇಮದ ವಿರೋದಿಯಲ್ಲ. ನಾಲ್ಕು ವರ‍್ಶ ಪರದಾಡಿ ಹೆತ್ತವರ ಬಾವನೆಯೊಡನೆ ಬಡಿದಾಡಿ ಅವರ ಸಮ್ಮತಿ ಪಡೆದು ಮದುವೆ ಅನ್ನೊ ಯುದ್ದ ಗೆದ್ದ ವೀರ. ಅಂತದರಲ್ಲಿ ಇದು ಒಂದು ಹೊಸ ಸಮಸ್ಯೆಯಾಗಿ ನನಗೆ ಕಾಡಿತ್ತು.

ಪಾಪ, ಹುಡುಗಿ ಕಶ್ಟವನ್ನೆ ಬೆನ್ನಿಗೆ ಕಟ್ಟಿಕೊಂಡು ಬೆಳೆದಾಕೆ. ಕಲಿತು ನಲಿಯುವ ಸಮಯದಲ್ಲಿ ಅಪ್ಪನ ಪರಂದಾಮ ಪಯಣದಿಂದ ಕಂಗೆಟ್ಟಾಕೆ. ಸಂಪಾದನೆ ಎಂಬ ನೇಗಿಲು ಹೊತ್ತು ಸಂಸಾರದ ಹೊಲದಿ ಬೆಳೆ ತೆಗೆದು ತಾಯಿಯ ಸಲುಹುತ್ತಿರುವಾಕೆ. ಅಣ್ಣ ಅನ್ನೊ ಸಲುಗೆಯಲ್ಲಿ ತನ್ನ ಚಿಕ್ಕಪ್ಪನ ಮಗ ಅನ್ನೊ ನಂಬಿಕೆ ಇಟ್ಟುಕೊಂಡಿದ್ದ ತಂಗಿಗೆ ನಾನು ಮಾತನಾಡದೆ ಸುಮ್ಮನಿರಲು ಮನಸ್ಸಾಗಲಿಲ್ಲ.

‘ಆಯಿತು, ಊರಿಗೆ ಬಂದು ಹಿರಿಯರಲ್ಲಿ ಮಾತಾಡಿ ನಿಮ್ಮ ಪ್ರೀತಿ ಹಕ್ಕಿಗೆ ಒಂದು ಗೂಡು ಕಟ್ಟಿಕೊಡುವ ಪ್ರಯತ್ನ ಮಾಡುವ’ ಅಂದಿದ್ದೆ.

ಒಂದೆರಡು ದಿನ ಕಳೆದ ನಂತರ ಮತ್ತೆ ಸಂದೇಶ ಬಂತು “ಅಣ್ಣ ಅವನು ನನ್ನ ಬಿಟ್ಟು ಹೋದ. ನಾನು ಅವನಿಗೆ ಇಶ್ಟವಿಲ್ಲವಂತೆ. ನನಗೆ ಬದಕಲು ಇಶ್ಟ ಇಲ್ಲ ಅಣ್ಣ”. ಈಗ ನಿಜಕ್ಕೂ ನಾನು ದಿಗಿಲುಗೊಂಡಿದ್ದೆ. ಅಂತಹ ನಡೆಯಬಾರದು ಏನು ನಡೆಯಿತು ಇವರ ನಡುವೆ ಅನ್ನೋದು ತಿಳಿಯುವ ಕುತೂಹಲವಾಯಿತು.

ವಿಶಯ ಏನೂ ದೊಡ್ಡದಿರಲಿಲ್ಲ. ಇಲ್ಲಿ ಅವನು ಯಾವುದೊ ಪರಿಚಯದ ಹುಡುಗಿಯ ಬಾವಚಿತ್ರ ತನ್ನ ವ್ಯಾಟ್ಸ್ಯಾಪ್ ನ ಮುಕಪುಟಕ್ಕೆ ಅಂಟಿಸಿದ್ದನ್ನು ಕಂಡಿಸಿ ಇವಳು ಕ್ರಾಂತಿಕಾರಿ ಬಾರತೀಯ ಮಹಿಳೆಯಂತೆ ಅವನಿಗೆ ಮಾತಿನ ಕತ್ತಿ ಬೀಸಿದ್ದಳು. ಮೊದಲೇ ಬದುಕು, ಸಂಸಾರ ಅನ್ನೋದು ಚಲನಚಿತ್ರದಲ್ಲಿ ಓಡುವ ದ್ರುಶ್ಯದಂತೆ ಅಂದುಕೊಂಡಿದ್ದಾತ, ದಿಡೀರ್ ಸುರಿದ ಚಂಡಮಾರುತ ಪ್ರೇರಿತ ಮಳೆಗೆ ತೊಯ್ದು ತೊಪ್ಪೆಯಾಗಿದ್ದ ಅನ್ಸುತ್ತೆ. ಮದುವೆಗೆ ಮೊದಲೇ ಸುರಿದ ಈ ಅಕಾಲಿಕ ಮಳೆಗೆ ಕೊಡೆ ತರಲು ಮರೆತ ಯಾತ್ರಿಕನಾಗಿದ್ದ ಆ ಹುಡುಗ.

ನನಗೆ ಗೊತ್ತಿದ್ದ ತತ್ವಗ್ನಾನದ ಎಶ್ಟೇ ಪತ್ವಾ ಹೊರಡಿಸಿದರೂ, ಅದನ್ನೊಪ್ಪದ ಕಡು ವಿಮರ‍್ಶಕಿ ಅವಳಾಗಿದ್ದಳು. ಚಂಡಮಾರುತ ದುರ‍್ಬಲಗೊಂಡು ಸಣ್ಣ ತಂಪಾದ ಗಾಳಿ ಮಿಶ್ರಿತ ಎಳೆ ಬಿಸಿಲು ಮೂಡುವಂತೆ ಅವಳ ಕೋಪ ದೂರಾಗಲೂ ಅವನೆ ದೂರವಾಗಿದ್ದ. ಅವನ ಕಂಡು ಮಾತನಾಡಲು ಅವನ ಮನೆಯ ಬಳಿಯ ಮರದ ಮರೆಯಲ್ಲಿ ನಿಂತು ಮನೆಯತ್ತ ನೋಡುತ್ತಾ ಕಾಯುತ್ತಿರುವಾಗ ಆ ಮುಕಪುಟದಲ್ಲಿದ್ದ ಹುಡುಗಿ ಮನೆಯ ಬಾಗಿಲಲ್ಲಿ ರಂಗೋಲಿ ಹಾಕುತ್ತಿದ್ದಳು. ಹತ್ತು ದಿನದಲ್ಲಿ ಈಕೆ ಈ ಮನೆಯಲ್ಲಿ ಬಂದು ಸೇರಿಕೊಳ್ಳುವಶ್ಟು ಹತ್ತಿರವಾದರಾ ಎಂದು ಯೋಚಿಸುತ್ತಿರುವಾಗಲೇ ಒಳಗಿನಿಂದ ಅವನ ದನಿ ಕೇಳಿಸಿತು “ರಕ್ಶಾ ನನ್ನ ಅಂಗಿ ಎಲ್ಲಿ? ಹೊತ್ತಾಯಿತು ಬೇಗ ಬಾ..”

ಹೊರಗಿನಿಂದ ರಂಗೋಲಿ ಮುಗಿಸಿ ರಂಗೋಲಿ ಪುಡಿಯ ಬಟ್ಟಲು ಕೈಯಲ್ಲಿಡಿದು ಆ ಮುಕಪುಟದ ಹುಡುಗಿ “ಬಂದೆ ತಡಿ ಅಣ್ಣಾ” ಎನ್ನುತ್ತಾ ಒಳಗೋಡಿದಳು.

ಮನೆಗೆ ವಾಪಸ್ಸಾದ ಇವಳು “ಅಣ್ಣಾ ನಾನು ತಪ್ಪು ಮಾಡಿದೆ. ಪ್ರೀತಿ ಗಿಡಕ್ಕೆ ಕೈಯಾರೆ ಬಿಸಿನೀರು ಸುರಿದು ಕೊಂದು ಬಿಟ್ಟೆ” ಅನ್ನುವ ಸಂದೇಶ ಕಳಿಸಿದ್ದಳು. ಉತ್ತರಿಸಲು ನನ್ನಲ್ಲಿ ಉತ್ತರವಿರಲಿಲ್ಲ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: