ರಾಹುಲ್ ದ್ರಾವಿಡ್ – ದಿಗ್ಗಜ ಬ್ಯಾಟ್ಸ್‌ಮನ್ ಮಾತ್ರವಲ್ಲ, ಮೇರು ಕ್ರಿಕೆಟಿಗ

ರಾಮಚಂದ್ರ ಮಹಾರುದ್ರಪ್ಪ.

 

ರಾಹುಲ್ ದ್ರಾವಿಡ್, Rahul Dravid

90ರ ದಶಕದ ಆರಂಬದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗುತ್ತಿದ್ದಂತೆ ಟೀ.ವಿ ಯನ್ನು ಆರಿಸುತ್ತಿದ್ದ ಬಾರತದ ಕ್ರಿಕೆಟ್ ಅಬಿಮಾನಿಗಳು ಆ ದಶಕದ ಕೊನೆಯಲ್ಲಿ, ತೆಂಡೂಲ್ಕರ್ ಔಟ್ ಆದರೆ ಏನಂತೆ ಇನ್ನೂ ಕ್ರೀಸ್ ನಲ್ಲಿ ಗೋಡೆಯಂತೆ ನಿಂತು ತಂಡವನ್ನು ದಡ ಸೇರಿಸುವ ಆಪತ್ಬಾಂದವ ಇದ್ದಾನೆ. ಅವನಿರುವವರೆಗೂ ತಂಡಕ್ಕೆ ಸೋಲುವ ಯಾವುದೇ ಅಂಜಿಕೆಯಿಲ್ಲ ಎಂದು ನೆಮ್ಮದಿಯಿಂದ ಪಂದ್ಯ ನೋಡುವಂತ ವಾತಾವರಣ ಹುಟ್ಟಿಕೊಂಡಿತು. ಹೀಗೆ ತೆಂಡೂಲ್ಕರ್ ರಿಗೆ ಸರಿಸಮಾನರಾಗಿ ಬೆಳೆದು ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ವಿಶಿಶ್ಟ ಚಾಪು ಮೂಡಿಸಿ ಅಜಾತಶತ್ರುವೆನಿಸಿದ ‘ಗೋಡೆ’ ನಮ್ಮ ಕರ‍್ನಾಟಕದ ರಾಹುಲ್ ದ್ರಾವಿಡ್.

ಎಳವೆಯಿಂದಲೇ ಕ್ರಿಕೆಟ್ ಬಗ್ಗೆ ಒಲವು

ಶರದ್ ದ್ರಾವಿಡ್ ಮತ್ತು ಪುಶ್ಪ ದ್ರಾವಿಡ್ ದಂಪತಿಗಳ ಎರಡನೇ ಮಗನಾಗಿ ರಾಹುಲ್ ದ್ರಾವಿಡ್ 11ನೇ ಜನವರಿ 1973 ರಲ್ಲಿ ಮದ್ಯಪ್ರದೇಶದ ಇಂಡೋರ್ ನಲ್ಲಿ ಹುಟ್ಟಿದರು. ಪುಟ್ಟ ರಾಹುಲ್ ಇನ್ನು ನಡೆಯಲು ಶುರು ಮಾಡುವ ಮೊದಲೇ ಅವರ ಕುಟುಂಬ ಬೆಂಗಳೂರಿನ ಇಂದಿರಾನಗರದಲ್ಲಿ ನೆಲೆಸಿತು. ಶರದ್ ದ್ರಾವಿಡ್ ಕೂಡ ವಿಶ್ವವಿದ್ಯಾಲಯ ಮಟ್ಟದ ಕ್ರಿಕೆಟ್ ಆಡಿದ್ದವರಾಗಿದ್ದರಿಂದ ಸಣ್ಣ ವಯಸ್ಸಿನಿಂದಲೇ ರಾಹುಲ್ ರಿಗೆ ಕ್ರಿಕೆಟ್ ಗೆ ಬೇಕಾದ ಎಲ್ಲಾ ಬಗೆಯ ಪ್ರೋತ್ಸಾಹ ದೊರೆಯಿತು. ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಿರಲಿ ಅತವಾ ಕರ‍್ನಾಟಕದ ರಣಜಿ ರಾಹುಲ್ ದ್ರಾವಿಡ್, Rahul Dravidಪಂದ್ಯಗಳಿರಲಿ ಶರದ್ ದ್ರಾವಿಡ್ ತಮ್ಮ ಮಕ್ಕಳೊಟ್ಟಿಗೆ ಪಂದ್ಯ ನೋಡಲು ಚಿನ್ನಸ್ವಾಮಿ ಅಂಗಳದಲ್ಲಿ ಹಾಜರಿರುತ್ತಿದ್ದರು. ಹೀಗೆ ತಂದೆಯ ಪ್ರಬಾವದಿಂದ ಕ್ರಿಕೆಟ್ ಗೀಳು ರಾಹುಲ್ ರಲ್ಲಿ ಮೊಳಕೆ ಒಡೆಯಿತು. ಪ್ರಾತಮಿಕ ಶಾಲೆ ಸೇಂಟ್ ಅಂತೋಣಿಯಲ್ಲಿ ಕಲಿಯುತ್ತಿರುವಾಗಲೇ ತಮ್ಮ ಕ್ರಿಕೆಟ್ ಕಲಿಕೆಯನ್ನೂ ರಾಹುಲ್ ಮೊದಲು ಮಾಡಿದರು. ನಂತರ ಹೈ-ಸ್ಕೂಲ್ ಕಲಿಕೆಗೆ ಸೇಂಟ್ ಜೋಸೆಪ್ಸ್ ಶಾಲೆಗೆ ಸೇರಿದ ಒಂದೇ ವರ‍್ಶದಲ್ಲಿ ಶಾಲಾ ಕ್ರಿಕೆಟ್ ತಂಡದ ಕಾಯಮ್ ಸದಸ್ಯರಾದರು. ಕ್ರಿಕೆಟ್ ಜೊತೆ ಹಾಕಿ ಆಟವನ್ನೂ ಆಡುತ್ತಿದ್ದ ರಾಹುಲ್ ಕರ‍್ನಾಟಕದ ಕಿರಿಯರ ಹಾಕಿ ತಂಡವನ್ನು ಪ್ರತಿನಿದಿಸಿದ್ದು ವಿಶೇಶ.

ಕ್ಲಬ್ ಕ್ರಿಕೆಟ್ – ವ್ರುತ್ತಿಪರ ಕ್ರಿಕೆಟ್ ಗೆ ಅಡಿಪಾಯ

ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿ.ಯು.ಸಿ.ಸಿ) ತಂಡವನ್ನು ಸೇರುವ ಮೂಲಕ ದ್ರಾವಿಡ್ ತಮ್ಮ ವ್ರುತ್ತಿಪರ ಕ್ರಿಕೆಟ್ ಬದುಕನ್ನು ಶುರು ಮಾಡಿದರು. ಎಳವೆಯಿಂದಲೂ ಬಾರತದ ದಿಗ್ಗಜ ಬ್ಯಾಟ್ಸ್ಮೆನ್ ಗಳಾದ ಗುಂಡಪ್ಪ ವಿಶ್ವನಾತ್ ಮತ್ತು ಸುನಿಲ್ ಗಾವಸ್ಕರರ ಆಟದಿಂದ ಪ್ರಬಾವಿತರಾಗಿದ್ದ ದ್ರಾವಿಡ್ ತಮ್ಮ ಮೊದಲ ತರಬೇತುರಾದ ಕೆ.ಕೆ ತಾರಾಪೊರ್ ರ ಗರಡಿಯಲ್ಲಿ ಪಳಗಿ ಆಟದ ಪಟ್ಟುಗಳನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಕಲಿತರು. ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಪಟ್ಟುಗಳನ್ನೂ ಕಲಿತು ಮೊದಲ ಹಲವು ವರುಶ ತಮ್ಮ ಕ್ಲಬ್ ನ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಡಿದರು. ಹೀಗೇ ಆಟದಲ್ಲಿ ಮುಂದುವರಿಯುತ್ತಾ ಕರ‍್ನಾಟಕದ ಹಲವು ಕಿರಿಯರ (ಅಂಡರ್ -15,17,19) ತಂಡಗಳ ಪರವಾಗಿ ಆಡಿದರು. ಕಾಮರ‍್ಸ್ ವಿಬಾಗದಲ್ಲಿ ಪದವಿ ಪಡೆಯಲೆಂದು ಸೇಂಟ್ ಜೋಸೆಪ್ಸ್ ಕಾಲೇಜ್ ಸೇರುವ ರಾಹುಲ್ ದ್ರಾವಿಡ್, Rahul Dravidಹೊತ್ತಿಗಾಗಲೇ ದ್ರಾವಿಡ್ ಕರ‍್ನಾಟಕದ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿ ರಾಜ್ಯದ ರಣಜಿ ತಂಡದ ಕದವನ್ನು ತಟ್ಟುತ್ತಿದ್ದರು. 1990/91 ರ ಸಾಲಿನ ಬೆಂಗಳೂರಿನ ಕಾಲೇಜ್ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಸೇಂಟ್ ಜೋಸೆಪ್ಸ್ ತಂಡ ಆರ್.ವಿ ಕಾಲೇಜ್ ಆಪ್ ಇಂಜಿನೀಯರಿಂಗ್ ಎದುರು ಕಣಕ್ಕಿಳಿದಾಗ ಆರ್ .ವಿ ತಂಡದ ಪ್ರಮುಕ ಬೌಲರ್ ಹಾಗೂ ಆಗಾಗಲೇ ಬೆರಳೆಣಿಕೆಯಶ್ಟು ಟೆಸ್ಟ್ ಪಂದ್ಯಗಳನ್ನಾಡಿದ್ದ ಅನಿಲ್ ಕುಂಬ್ಳೆರ ಬೌಲಿಂಗ್ ಅನ್ನು ಎದುರಿಸಲಾಗದೆ ಜೋಸೆಪ್ಸ್ ತಂಡದ ಬ್ಯಾಟ್ಸ್ಮೆನ್ ಗಳು ತತ್ತರಿಸಿ ಹೋದರೂ ದ್ರಾವಿಡ್ ಮಾತ್ರ ದಿಟ್ಟತನದಿಂದ ಕುಂಬ್ಳೆರನ್ನು ಎದುರಿಸಿ ಅವರಿಗೆ ವಿಕೆಟ್ ಒಪ್ಪಿಸದೇ ಅಜೇಯರಾಗಿ ಉಳಿದು ತಾವು ಎಲ್ಲರಿಗಿಂತ ವಿಬಿನ್ನ ಹಾಗೂ ವಿಶಿಶ್ಟ ಎಂದು ಮತ್ತೊಮ್ಮೆ ಸಾಬೀತು ಮಾಡುತ್ತಾರೆ.

ರಣಜಿ – ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ದ್ರಾವಿಡ್ ಚಾಪು

ದ್ರಾವಿಡ್ ಇನ್ನೂ 17 ವರ‍್ಶದವರಿರುವಾಗಲೇ 1990/91 ರ ಸಾಲಿನ ರಣಜಿ ಟೂರ‍್ನಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಪುಣೆಯಲ್ಲಿ ಮಹಾರಾಶ್ಟ್ರ ಎದುರು ನಡೆದ ಈ ಪಂದ್ಯದಲ್ಲಿ 82 ರನ್ ಗಳಿಸಿ ತಮ್ಮ ಮೊದಲ ದರ‍್ಜೆ ಕ್ರಿಕೆಟ್ ಬದುಕಿಗೆ ಬದ್ರ ಬುನಾದಿ ಹಾಕಿಕೊಂಡರು. ನಂತರದ ಬೆಂಗಾಳ ಎದುರಿನ ಪಂದ್ಯದಲ್ಲಿ (134) ರನ್ ಗಳಿಸಿ ಆ ಬಳಿಕ ಗೋವಾ ಹಾಗೂ ಕೇರಳ ಎದುರು ಕೂಡ ಶತಕ ಬಾರಿಸಿದರು. ಹೀಗೆ ಪಾದಾರ‍್ಪಣೆ ಪಂದ್ಯದ ನಂತರದ ಮೂರೂ ಪಂದ್ಯಗಳಲ್ಲಿ ಮೂರು ಶತಕ ಗಳಿಸಿ ಅಪರೂಪದ ಸಾದನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. 1992/93 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಆಂದ್ರ ಎದುರು ತಮ್ಮ ಚೊಚ್ಚಲ ದ್ವಿಶತಕ (ಅಜೇಯ 200) ಗಳಿಸಿ ಬಾರತದ ಪರ ಟೆಸ್ಟ್ ಆಡಲು ಸಜ್ಜಾಗಿದ್ದೀನಿ ಎಂದು ಸಾರಿ ಹೇಳಿದರು. ರಣಜಿ ಹೊರತು ಪಡಿಸಿ ಹಲವು ದೇಸೀ ಪಂದ್ಯಾವಳಿಗಳಾದ ಇರಾನಿ, ದುಲೀಪ್ ಟ್ರೋಪಿಗಳಲ್ಲಿಯೂ ದ್ರಾವಿಡ್ ರ ಬ್ಯಾಟ್ ಸದ್ದು ಮಾಡಿತು. ಅದಲ್ಲದೇ ಬಾರತ-ಎ ತಂಡದ ಪರ ಹಲವಾರು ಪ್ರವಾಸಗಳನ್ನು ಮಾಡಿ ಅಲ್ಲಿಯೂ ಪ್ರಾಬಲ್ಯ ಮೆರೆದರು. 1994 ರ ಹೊತ್ತಿಗೆ ದ್ರಾವಿಡ್ ರ ಹೆಸರು ಬಾರತದ ಕ್ರಿಕೆಟ್ ವಲಯದಲ್ಲಿ ಮನೆಮಾತಾಗಿತ್ತು. ಕಡೆಗೆ ಆಯ್ಕೆಗಾರರು ಅಕ್ಟೋ ಬರ್ 1994 ರಲ್ಲಿ ಬಾರತದಲ್ಲಿ ನಡೆಯುತ್ತಿದ್ದ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲ್ಯಾನ್ಡ್ ತಂಡಗಳನ್ನೊಳಗೊಂಡ ವಿಲ್ಸ್ ವರ‍್ಲ್ಡ್ ಸರಣಿಯ ಕಡೆಯ ಎರಡು ಒಂದು-ದಿನದ ಪಂದ್ಯಗಳಿಗೆ ದ್ರಾವಿಡ್ ರನ್ನು ಬಾರತ ತಂಡಕ್ಕೆ ಆಯ್ಕೆ ಮಾಡುತ್ತಾರೆ. ಆದರೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗದೇ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ಇದರಿಂದ ಎದೆಗುಂದದ ದ್ರಾವಿಡ್ 1994/95 ರ ಇಂಗ್ಲೆಂಡ್-ಎ ಎದುರಿನ ಸರಣಿಯಲ್ಲಿ ಬಾರತ-ಎ ಪರ ರನ್ ಗಳ ಹೊಳೆಯನ್ನೇ ಹರಿಸುತ್ತಾರೆ. 1995/96 ರ ರಣಜಿ ಟೂರ‍್ನಿಯಲ್ಲಿ 58ರ ಸರಾಸರಿಯಲ್ಲಿ ಮೂರು ಶತಕಗಳೊಂದಿಗೆ 460 ರನ್ ಗಳನ್ನು ಬಾರಿಸಿ ಕರ‍್ನಾಟಕ ಹದಿಮೂರು ವರ‍್ಶಗಳ ಬಳಿಕ ರಣಜಿ ಟ್ರೋಪಿ ಗೆಲ್ಲುವಲ್ಲಿ ಪ್ರಮುಕ ಪಾತ್ರ ವಹಿಸುತ್ತಾರೆ. ಇದರ ಬೆನ್ನಲ್ಲೇ 1996 ರ ವಿಶ್ವಕಪ್ ನ ಸಂಬಾವ್ಯ ಆಟಗಾರರ ಪಟ್ಟಿಯಲ್ಲಿ ಎಡೆ ಪಡೆದರೂ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗದೆ ನಿರಾಸೆ ಅನುಬವಿಸುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಗೆ ದ್ರಾವಿಡ್ ಪ್ರವೇಶ

ಕೆಲವು ಮಂದಿ ಒಂದೆರಡು ವರ‍್ಶ ದೇಸೀ ಕ್ರಿಕೆಟ್ ನಲ್ಲಿ ಒಳ್ಳೆ ಪ್ರದರ‍್ಶನ ತೋರಿ ಬಾರತ ತಂಡದ ಕದವನ್ನು ತಟ್ಟಿ ಆಯ್ಕೆಗಾರರ ಗಮನ ಸೆಳೆಯುತ್ತಾರೆ. ಆದರೆ ದ್ರಾವಿಡ್ ಸತತ ಐದು ವರ‍್ಶಗಳ ಕಾಲ ದೇಸೀ ಕ್ರಿಕೆಟ್ ಮತ್ತು ಹಲವು ಬಾರತ-ಎ ಸರಣಿಗಳಲ್ಲಿ ರನ್ ಕಲೆ ಹಾಕುತ್ತಾ ಬಾರತ ತಂಡದ ಕದ ತಟ್ಟುತ್ತಿದ್ದರೂ ಆಯ್ಕೆಗಾರರು ಕಿವಿಗೊಡುವುದಿಲ್ಲ. ಕಡೆಗೆ ದ್ರಾವಿಡ್ ಕದವನ್ನು ಮುರಿದೇ ಬಾರತ ತಂಡದಲ್ಲಿ ಎಡೆ ಪಡೆದದ್ದು ಸುಳ್ಳಲ್ಲ. ಮತ್ತು ದ್ರಾವಿಡ್ ಕರ‍್ನಾಟಕ ರಾಜ್ಯ ತಂಡ ಬಿಟ್ಟು ಬೇರೆ ತಂಡದಲ್ಲಿದ್ದಿದ್ದರೆ ಅವರು ಇಶ್ಟು ಹೊತ್ತು ಕಾಯಬೇಕಿರಲಿಲ್ಲ ಎಂದು ಆಗ ಹಲವಾರು ಪತ್ರಿಕೆಗಳು ವರದಿ ಮಾಡಿದ್ದವು. 96ರ ವಿಶ್ವಕಪ್ ನ ನಿರಾಸೆಯ ಬಳಿಕ ಹೊಸ ಆಟಗಾರರಿಗೆ ಅವಕಾಶ ನೀಡಲು ಆಯ್ಕೆಗಾರರು ಮನಸ್ಸು ಮಾಡಿದಾಗ ರಾಹುಲ್ ದ್ರಾವಿಡ್ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳೊಂದಿಗೆ ಸಿಂಗಾಪುರದ ತ್ರಿಕೋಣ ಸರಣಿ ಮತ್ತು ಆ ನಂತರದ ಶಾರ‍್ಜಾ ಟೂರ‍್ನಿ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಆಗುತ್ತಾರೆ. ಏಪ್ರಿಲ್ 3 1996 ರಂದು ಸಿಂಗಾಪುರದಲ್ಲಿ ಶ್ರೀಲಂಕಾ ಎದುರು ದ್ರಾವಿಡ್ ತಮ್ಮ ಮೊದಲ ಒಂದು ದಿನದ ಪಂದ್ಯವನ್ನಾಡಿದರು. 3 ರನ್ ಗಳನ್ನಶ್ಟೇ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆ ನಂತರದ ಪಂದ್ಯದಲ್ಲಿ 4 ರನ್ ಮತ್ತು ಆ ಬಳಿಕ ನಡೆದ ಶಾರ‍್ಜಾ ಟೂರ‍್ನಿಯ ಎರಡು ಪಂದ್ಯದಲ್ಲೂ ವೈಪಲ್ಯ ಅನುಬವಿಸಿ ನಿರಾಸೆ ಮೂಡಿಸಿದರು. ಆಗ ಹಲವಾರು ಮಂದಿ ಇವರಲ್ಲಿ ನಿಜವಾಗಲೂ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಅಳವು ಇದಿಯೇ ಎಂದು ಅನುಮಾನವನ್ನು ವ್ಯಕ್ತ ಪಡಿಸಿದರು.

ಟೆಸ್ಟ್ ಪಾದಾರ‍್ಪಣೆ – ಲಾರ‍್ಡ್ಸ್ ಮೈದಾನ

ಇಂಗ್ಲೆಂಡ್ ಪ್ರವಾಸದ ಎರಡನೇ ಟೆಸ್ಟ್ ನ ಮುಂಜಾನೆ ಸಂಜಯ್ ಮಂಜ್ರೇಕರ್ ಗಾಯಾಳುವಾಗಿ ಆಡಲು ಅನರ‍್ಹರು ಎಂದು ಕಾತ್ರಿಯಾದಾಗ ದ್ರಾವಿಡ್ ರಿಗೆ ತಮ್ಮ ಚೊಚ್ಚಲ ಟೆಸ್ಟ್ ಅನ್ನು ಕ್ರಿಕೆಟ್ ನ ಕಾಶಿ – ಲಾರ‍್ಡ್ಸ್ ನಲ್ಲಿ ಆಡುವ ಅವಕಾಶ ಸಿಗುತ್ತದೆ. ಆ ಅಂಗಳದಲ್ಲಿ ಒಂದು ರಾಹುಲ್ ದ್ರಾವಿಡ್, Rahul Dravidಸಂಪ್ರದಾಯವಿದೆ. ಪಂದ್ಯದಲ್ಲಿ ಐದು ವಿಕೆಟ್ ಅತವಾ ಶತಕ ಗಳಿಸುವ ಆಟಗಾರರ ಹೆಸರು ಅಲ್ಲಿಯ ಹಾನರ‍್ಸ್ ಪಟ್ಟಿಯಲ್ಲಿ ಅಚ್ಚಾಗುತ್ತದೆ. ಆ ಪಟ್ಟಿಯನ್ನು ತೋರಿಸುತ್ತಾ ಕರ‍್ನಾಟಕದ ಬೌಲರ್ ವೆಂಕಟೇಶ್ ಪ್ರಸಾದ್, ‘ನಾನು ಐದು ವಿಕೆಟ್ ಪಡೆಯುತ್ತೇನೆ, ನೀನು ಶತಕ ಬಾರಿಸು. ಆಗ ಇಬ್ಬರ ಹೆಸರು ಈ ಹಾನರ‍್ಸ್ ಪಟ್ಟಿ ಸೇರಲಿದೆ’ ಎಂದು ತಮ್ಮ ಗೆಳೆಯ ದ್ರಾವಿಡ್ ರನ್ನು ಹುರಿದುಂಬಿಸುತ್ತಾರೆ. ಕರ‍್ನಾಟಕದ ಪರ ಸದಾ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್ ರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳಿಸಿದರೂ ಅದು ಅವರ ಆಟದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನೇರ ಬ್ಯಾಟ್ ನಿಂದ ಆಡುವ ಸಾಂಪ್ರದಾಯಿಕ ಬ್ಯಾಟಿಂಗ್ ಚಳಕವನ್ನು ಲಾರ‍್ಡ್ಸ್ ನಲ್ಲಿ ನೆರೆದಿದ್ದವರಿಗೆ ತೋರುತ್ತಾ, ಇಂಗ್ಲೆಂಡ್ ನ ವೇಗದ ಬೌಲರ್ ಗಳನ್ನು ನಿರಾಯಾಸವಾಗಿ ಬೌಂಡರಿಗಳಿಗೆ ಅಟ್ಟುತ್ತಾ ದ್ರಾವಿಡ್ ಸೊಗಸಾದ 95 ರನ್ ಗಳಿಸಿ ಕೀಪರ್ ಗೆ ಕ್ಯಾಚಿಟ್ಟು ಅಂಪೈರ್ ಔಟ್ ಎಂದು ಹೇಳುವ ಮೊದಲೇ ಪೆವಿಲಿಯನ್ ಹಾದಿ ಹಿಡಿದಾಗ ಇಡೀ ಲಾರ‍್ಡ್ಸ್ ಅಂಗಳ 23ರ ಹರೆಯದ ದ್ರಾವಿಡ್ ರನ್ನು ಬೀಳ್ಕೊಡಲು ಎದ್ದು ನಿಲ್ಲುತ್ತದೆ. ವೆಂಕಟೇಶ್ ಪ್ರಸಾದ್ ಐದು ವಿಕೆಟ್ ಪಡೆದು ಹಾನರ‍್ಸ್ ಪಟ್ಟಿ ಸೇರಿದರೆ ದ್ರಾವಿಡ್ 5 ರನ್ ಗಳ ಅಂತರದಲ್ಲಿ ಆ ಗೌರವವನ್ನು ತಪ್ಪಿಸಿಕೊಂಡರೂ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಅದೇ ಪಂದ್ಯದಲ್ಲಿ ಪಾದಾರ‍್ಪಣೆ ಮಾಡಿದ ಗಂಗೂಲಿ ಶತಕ ಗಳಿಸಿ ಮುಕ್ಯ ಸುದ್ದಿಯಾದರೂ, ತಾವಿಂದು ಒಂದು ಅಪರೂಪದ ಪ್ರತಿಬೆಯನ್ನು ನೋಡಿದೆವು ಎಂದು ಬ್ರಿಟಿಶ್ ಪತ್ರಿಕೆಗಳು ದ್ರಾವಿಡ್ ರ ಬ್ಯಾಟಿಂಗ್ ಬಗ್ಗೆ ವರದಿ ಮಾಡುತ್ತವೆ. ಆ ನಂತರದ ನಾಟಿಂಗ್ಹ್ಯಾಮ್ ಟೆಸ್ಟ್ ನಲ್ಲಿ 84 ರನ್ ಗಳಿಸಿ ಮತ್ತೊಮ್ಮೆ ಶತಕ ವಂಚಿತರಾಗುವರು. ಇಡೀ ಪ್ರವಾಸದಲ್ಲಿ ಶತಕ ಗಳಿಸದ್ದಿದ್ದರೂ ಟೆಸ್ಟ್ ಕ್ರಿಕೆಟ್ ಮಟ್ಟಿಗೆ ದ್ರಾವಿಡ್ ಬಾರತದ ಬರವಸೆಯ ಬೆಳಕಾಗಿ ಮೂಡುತ್ತಾರೆ.

ಟೆಸ್ಟ್ ಕ್ರಿಕೆಟ್ ದಿಗ್ಗಜ ದ್ರಾವಿಡ್

ಟೆಸ್ಟ್ ಕ್ರಿಕೆಟ್ ಗೆ ನಿರಾಯಾಸವಾಗಿ ಹೊಂದಿಕೊಂಡ ದ್ರಾವಿಡ್ ಹಲವಾರು ಅರ‍್ದ ಶತಕಗಳನ್ನು ಗಳಿಸಿದರೂ ತಮ್ಮ ಚೊಚ್ಚಲ ಶತಕ ಬಾರಿಸಲು 9ನೇ ಪಂದ್ಯದವರೆಗೂ ಕಾಯಬೇಕಾಯಿತು. 1997 ರಲ್ಲಿ ದಕ್ಶಿಣ ಆಪ್ರಿಕಾದ ಗಟಾನುಗಟಿ ವೇಗದ ಬೌಲರ್ ಗಳ ಎದುರು ಜೋಹಾನೆಸ್ಬರ‍್ಗ್ ನಲ್ಲಿ 148 ರನ್ ಗಳಿಸಿ ತಮ್ಮ ಶತಕಗಳ ಕಾತೆಯನ್ನು ತೆರೆದರು. ಆ ಬಳಿಕ ಜಿಂಬಾಬ್ವೆ, ನ್ಯೂಜಿಲ್ಯಾನ್ಡ್ ಮತ್ತು ಶ್ರೀಲಂಕಾ ದೇಶಗಳಲ್ಲಿ ಶತಕಗಳನ್ನು ಗಳಿಸಿದರೂ ಅಚ್ಚರಿ ಎಂಬಂತೆ ಬಾರತದಲ್ಲಿ ಅವರ ಮೊದಲ ಶತಕ ಬಂದದ್ದು 1999 ರ ನ್ಯೂಜಿಲ್ಯಾನ್ಡ್ ಎದುರಿನ ಮೊಹಾಲಿ ಟೆಸ್ಟ್ ನಲ್ಲಿ. ಇದು ಅವರ 30ನೇ ಟೆಸ್ಟ್ ಆಗಿತ್ತು ಎಂದರೆ ನಂಬಲಸಾದ್ಯ. 1999/00 ರ ಆಸ್ಟ್ರೇಲಿಯಾ ಪ್ರವಾಸದ ವೈಪಲ್ಯ ಮತ್ತು ನಂತರ ತವರಿನಲ್ಲಿ ದಕ್ಶಿಣ ಆಪ್ರಿಕಾ ಎದುರು ಅನುಬವಿಸಿದ ರನ್ ಬರ ಅವರನ್ನು ಕಂಗೆಡಿಸಿತ್ತು. 2000 ರ ಬೇಸಿಗೆಯಲ್ಲಿ ಕೆಂಟ್ ಪರ ಇಂಗ್ಲಿಶ್ ಕೌಂಟಿ ಆಡಿ 16 ಪಂದ್ಯಗಳಲ್ಲಿ 2 ಶತಕ ಹಾಗೂ 8 ಅರ‍್ದಶತಕ ಗಳೊಂದಿಗೆ 1221 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಲ್ಲಿಂದ ಹೆಚ್ಚು ಪಳಗಿ ಬಂದವರೇ ಜಿಂಬಾಬ್ವೆ ಎದುರು ತಮ್ಮ ಮೊದಲ ದ್ವಿಶತಕ ಗಳಿಸಿದರು. ಅದಾದ ನಂತರ 2001 ರಲ್ಲಿ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಸರಣಿ ದ್ರಾವಿಡ್ ರ ಕ್ರಿಕೆಟ್ ಬಾಳಿನ ಮರುಹುಟ್ಟು ಎಂದೇ ಹೇಳಬೇಕು. ಮೊದಲ ಮೂರು ಇನ್ನಿಂಗ್ಸ್ ಗಳಲ್ಲಿ ಹೆಚ್ಚು ರನ್ ಗಳಿಸದೆ ಬ್ಯಾಟಿಂಗ್ ಲಯ ಕಳೆದುಕೊಂಡಾಗ ಅವರ ಬಗ್ಗೆ ಅವರಿಗೇ ಅನುಮಾನಗಳು ಕಾಡತೊಡಗುತ್ತವೆ. ಕೊಲ್ಕತ್ತಾ ಟೆಸ್ಟ್ ನಲ್ಲಿ ಪಾಲೋ-ಆನ್ ಮಾಡುವ ಸಂದರ‍್ಬ ಬಂದಾಗ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದ ಅವರನ್ನು ಆರನೇ ಕ್ರಮಾಂಕಕ್ಕೆ ತಳ್ಳಲಾಯಿತು. ಇದಕ್ಕೆ ಉತ್ತರವಾಗಿ ತೀವ್ರ ಒತ್ತಡದಲ್ಲಿಯೇ ವಾರ‍್ನ್, ಮೆಗ್ರಾರನ್ನು ಎದುರಿಸಿ ಸೊಗಸಾದ 180 ರನ್ ಗಳಿಸಿ ಲಕ್ಶ್ಮಣ್ ರೊಟ್ಟಿಗೆ 376 ರನ್ ಗಳ ಜೊತೆಯಾಟವಾಡಿ ಬಾರತಕ್ಕೆ ಗೆಲುವು ತಂದು ಕೊಟ್ಟರು. ಅದೇ ಸರಣಿಯ ಕಡೆಯ ಚೆನ್ನೈ ಟೆಸ್ಟ್ ನಲ್ಲಿ 81 ರನ್ ಗಳಿಸಿ ಸರಣಿ ಗೆಲುವಿಗೂ ತಮ್ಮ ಕೊಡುಗೆ ನೀಡಿದರು. ಇಲ್ಲಿಂದ ದ್ರಾವಿಡ್ ಟೆಸ್ಟ್ ಗಳಲ್ಲಿ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ. 2003 ರಲ್ಲಿ ಕೌಂಟಿ ಕ್ರಿಕೆಟ್ ಗೆ ಮತ್ತೆ ಮರಳಿ ಸ್ಕಾಟ್ಲ್ಯಾನ್ಡ್ ಪರ ಆಡಿ ಮೂರು ಶತಕಗಳನ್ನು ಬಾರಿಸಿ ಆ ತಂಡದಲ್ಲಿ ಅದಿಕ ರನ್ ಗಳಿಸಿದ ಬ್ಯಾಟ್ಸ್ಮನ್ ಎಂದೆನಿಸಿದರು.

ರಾಹುಲ್ ದ್ರಾವಿಡ್, Rahul Dravidತವರಿಗಿಂತ ಹೆಚ್ಚು ವಿದೇಶದಲ್ಲೇ ಅವರ ಬ್ಯಾಟ್ ಸದ್ದು ಮಾಡಿತು. 2002 ರ ಲೀಡ್ಸ್ ಟೆಸ್ಟ್ ನ ಹುಲ್ಲುಹಾಸಿನ ಪಿಚ್ ಮೇಲೆ ಅವರು ಗಳಿಸಿದ 148 ರನ್ ಬಾರತೀಯನೊಬ್ಬನ ಶ್ರೇಶ್ಟ ಪ್ರದರ‍್ಶನ ಎಂದು ಅಂಕಣಕಾರ ರಾಮಚಂದ್ರ ಗುಹಾ ಹೇಳುತ್ತಾರೆ. ಆ ಪ್ರದರ‍್ಶನದಿಂದ ಬಾರತ ಇಂಗ್ಲೆಂಡ್ ನಲ್ಲಿ 16 ವರ‍್ಶಗಳ ಬಳಿಕ ಟೆಸ್ಟ್ ಗೆದ್ದಿತು. ನಂತರ 2003 ರ ಆಡಿಲೇಡ್ ಟೆಸ್ಟ್ ನಲ್ಲಿ ಅವರು ಗಳಿಸಿದ (233 ಮತ್ತು 72) ರನ್ ಗಳು 22 ವರ‍್ಶದ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಬಾರತ ಒಂದು ಟೆಸ್ಟ್ ಗೆದ್ದಿದ್ದು ಆ ಇನ್ನಿಂಗ್ಸ್ ನ ತೂಕವನ್ನು ಇನ್ನಶ್ಟು ಹೆಚ್ಚಿಸುತ್ತದೆ. ಹೀಗೇ 2004 ರ ರಾವಲ್ಪಿಂಡಿ ಟೆಸ್ಟ್ ನಲ್ಲಿ ಅವರ 270 ರನ್ ಟೆಸ್ಟ್ ಗೆಲುವಿನ ಜೊತೆಗೆ ಪಾಕಿಸ್ತಾನದ ನೆಲದಲ್ಲಿ ಬಾರತದ ಮೊಟ್ಟ ಮೊದಲ ಹಾಗೂ ಏಕೈಕ ಟೆಸ್ಟ್ ಸರಣಿ ಗೆಲುವು ಕೂಡ ತಂದು ಕೊಟ್ಟಿತು. 2006 ರ ಜಮೈಕಾ ಟೆಸ್ಟ್ ನ ಕಳೆಪೆ ಪಿಚ್ ತೀವ್ರ ಟೀಕೆಗೆ ಗುರಿಯಾಗಿತ್ತು. ಮೂರೇ ದಿನಗಳಲ್ಲಿ ಮುಗಿದ ಈ ಪಂದ್ಯದ ಕಳಪೆ ಪಿಚ್ ಮೇಲೂ ಆಗ ನಾಯಕರಾಗಿದ್ದ ದ್ರಾವಿಡ್ 81 ಮತ್ತು 68 ರನ್ ಗಳಿಸಿ ವೆಸ್ಟ್ ಇಂಡೀಸ್ ನೆಲದ ಮೇಲೆ 35 ವರ‍್ಶಗಳ ನಂತರ ಬಾರತದ ಮೊದಲ ಸರಣಿ ಗೆಲುವು ತಂದುಕೊಟ್ಟರು. ಬ್ಯಾಟಿಂಗ್ ದಂತಕತೆ ಬ್ರಯಾನ್ ಲಾರಾರ ಆಟ ಕೂಡ ಆ ಪಿಚ್ ಮೇಲೆ ನಡೆಯಲಿಲ್ಲ. ಲಾರಾ ಬ್ಯಾಟ್ ಮಾಡುತ್ತಿರುವಾಗ ಕುಂಬ್ಳೆರ ಒಂದು ಚೆಂಡು ಪುಟಿದು ವಿಚಿತ್ರವಾಗಿ ವರ‍್ತಿಸಿದನ್ನು ಕಂಡು ಪಿಚ್ ಕ್ಯೂರೇಟರ್ ಗೆ ಅವರು ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿದ್ದು ಆ ಪಂದ್ಯದ ಮರೆಯಲಾಗದ ಕ್ಶಣಗಳಲ್ಲೊಂದು. ‘ದ್ರಾವಿಡ್ ಹೇಗೆ ರನ್ ಮಾಡಿದರೋ ನಾನರಿಯೆ. ಅದೊಂದು ಪವಾಡ’ ಎಂದು ಲಾರಾ ಕೂಡ ದ್ರಾವಿಡ್ ರ ಗುಣಗಾನ ಮಾಡಿದರು. 2008 ರ ಪರ‍್ತ್ ಟೆಸ್ಟ್ ಗೆಲುವಿನಲ್ಲೂ ಅವರ 93 ರನ್ ಗಳ ಕೊಡುಗೆ ಇತ್ತು. ಕಡೆಗೆ 2011 ರಲ್ಲಿ ಕೂಡ ಜಮೈಕಾದಲ್ಲಿ 110 ರನ್ ಗಳಿಸಿ ಗೆಲುವು ದಕ್ಕಿಸಿ ಕೊಟ್ಟರು. ಬಾರತ ವಿದೇಶಗಳಲ್ಲಿ ಪೈಪೋಟಿ ನೀಡಿ ಟೆಸ್ಟ್ ಗೆಲ್ಲಲು ಶುರು ಮಾಡಿದ್ದು ದ್ರಾವಿಡ್ ಮುನ್ನೆಲೆಗೆ ಬಂದು ಶತಕ-ದ್ವಿಶತಕ ಗಳನ್ನು ಗಳಿಸಿದ ನಂತರವಶ್ಟೇ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶ. ಆದರೆ 2011 ರ ಇಂಗ್ಲೆಂಡ್ ಪ್ರವಾಸದಲ್ಲಿ ದ್ರಾವಿಡ್ ಮೂರು ಶತಕ (ಲಾರ‍್ಡ್ಸ್, ನಾಟಿಂಗ್ಹ್ಯಾಮ್ ಮತ್ತು ಓವಲ್) ಗಳಿಸಿದರೂ ಬಾರತ 4-0 ಇಂದ ಸರಣಿ ಸೋತದ್ದು ದುರಂತ.

ದ್ರಾವಿಡ್ ತಮ್ಮ ವ್ರುತ್ತಿ ಬದುಕಿನಲ್ಲಿ ಒಟ್ಟು 164 ಟೆಸ್ಟ್ ಗಳನ್ನಾಡಿ 52.31 ರ ಸರಾಸರಿಯಲ್ಲಿ 36 ಶತಕ ಮತ್ತು 5 ದ್ವಿಶತಕ ಗಳೊಂದಿಗೆ 13,288 ರನ್ ಗಳಿಸಿ ದಿಗ್ಗಜ ಎನಿಸಿದರು. ಅವುಗಳಲ್ಲಿ ಹೆಚ್ಚು ರನ್ ಹಾಗು ಶತಕಗಳು ವಿದೇಶದಲ್ಲಿ ಬಂದದ್ದು ಮತ್ತು ವಿದೇಶದಲ್ಲೇ ಅವರು ಹೆಚ್ಚು ಸರಾಸರಿ ಹೊಂದಿರುವುದು ಅವರನ್ನು ವಿಶಿಶ್ಟ ಸಾಲಿನಲ್ಲಿ ನಿಲ್ಲಿಸುತ್ತದೆ. ಅವರ 36 ಶತಕಗಳಲ್ಲಿ 32 ಶತಕಗಳು ಬಾರತಕ್ಕೆ ಗೆಲುವು ತಂದುಕೊಟ್ಟಿದೆ ಅತವಾ ಸೋಲದಂತೆ ಡ್ರಾ ಮಾಡಿಸುವಲ್ಲಿ ಉಪಯೋಗವಾಗಿದೆ ಎಂದರೆ ಅವರ ಆಟದ ಬೆಲೆ ಏನೆಂದು ಯಾರಾದರೂ ಊಹಿಸಬಹುದು. 2004 ರಲ್ಲಿಯೇ ಟೆಸ್ಟ್ ಆಡುವ ಎಲ್ಲಾ ದೇಶದಲ್ಲಿಯೂ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಕೂಡ ದ್ರಾವಿಡ್ ರ ಪಾಲಾಯಿತು. ಗಾವಸ್ಕರ್ ನಂತರ ಬಾರತದ ಪರ ಅತಿ ಹೆಚ್ಚು ಸತತ (93) ಟೆಸ್ಟ್ ಆಡಿರುವುದೂ ಅವರ ಒಂದು ದಾಕಲೆ. ಜೊತೆಗೆ ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿರುವ ದಾಕಲೆಯಲ್ಲೂ ಗಾವಸ್ಕರ್ ರ ಹಿಂದೆ ದ್ರಾವಿಡ್ ಇದ್ದಾರೆ. ಗಾವಸ್ಕರ್ ಮೂರು ಬಾರಿ ಈ ಸಾದನೆ ಮಾಡಿದರೆ ದ್ರಾವಿಡ್ ಎರಡು ಬಾರಿ: ವೆಲ್ಲಿಂಗ್ಟನ್ ನಲ್ಲಿ ನ್ಯೂಜಿಲ್ಯಾನ್ಡ್ ಎದುರು (190 ಮತ್ತು 104) ಹಾಗೂ ಕೊಲ್ಕಾತಾದಲ್ಲಿ ಪಾಕಿಸ್ತಾನದ ಎದುರು (136 ಮತ್ತು 110) ಮಾಡಿದ್ದಾರೆ. ಮೂರನೇ ಕ್ರಮಾಂಕ ಒಂದರಲ್ಲೇ ಮೊದಲು 10,000 ರನ್ ಪೂರೈಸಿದ ಚೊಚ್ಚಲ ಬ್ಯಾಟ್ಸ್ಮನ್ ಕೂಡ ಇವರೇ. ಹೆಚ್ಚು ನೂರು ರನ್ ಗಳ ಜೊತೆಯಾಟ (66) ಆಡಿರುವ, ಹೆಚ್ಚು ಕ್ಯಾಚ್ (210) ಹಿಡಿದಿರುವ, ಮತ್ತು ಹೆಚ್ಚು ಚೆಂಡನ್ನು ಎದುರಿಸಿರುವ (31,258) ದಾಕಲೆ ಕೂಡ ದ್ರಾವಿಡ್ ರ ಹೆಸರಲ್ಲೇ ಇನ್ನೂ ಇದೆ.

ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ದ್ರಾವಿಡ್ ಚಳಕ

ದ್ರಾವಿಡ್ ಕೇವಲ ಟೆಸ್ಟ್ ಆಡಲಿಕ್ಕಶ್ಟೇ ಲಾಯಕ್ಕು ಎಂದು 1996 ರಿಂದ 98 ರ ವರೆಗೆ ಮೂಗು ಮುರಿಯುತ್ತಿದ್ದವರಿಗೆಲ್ಲಾ ಒಂದು ದಿನದ ಕ್ರಿಕೆಟ್ ನಲ್ಲೂ ಸಾಕಶ್ಟು ಸಾದನೆ ಮಾಡಿ ದಿಗ್ಗಜನಾಗಿ ಬೆಳೆದು, ಟೀಕೆ ಮಾಡಿದವರು ತಮ್ಮ ಮಾತನ್ನು ತಾವೇ ನುಂಗಿಕೊಳ್ಳುವ ಹಾಗೆ ದ್ರಾವಿಡ್ ಮಾಡಿದ್ದು ಸುಳ್ಳಲ್ಲ. ಅವರು ಆರಂಬದ ಮೂರು ವರ‍್ಶಗಳಲ್ಲಿ ಹಲವಾರು ಬಾರಿ ಒಂದು ದಿನ ತಂಡದ ಹೊರಗೂ ಒಳಗೂ ಇದ್ದು ನೆಲೆ ಕಾಣದೆ ಅತಂತ್ರವಾಗಿದ್ದರು. 1997 ರಲ್ಲಿ ಪಾಕಿಸ್ತಾನದ ಎದುರು ಚೆನ್ನೈ ನಲ್ಲಿ ಗಳಿಸಿದ ಶತಕ ಮತ್ತು ಹಲವು ಅರ‍್ದ ಶತಕಗಳನ್ನು ಹೊರತು ಪಡಿಸಿ ದ್ರಾವಿಡ್ ರಿಂದ ರಾಹುಲ್ ದ್ರಾವಿಡ್, Rahul Dravidಹೇಳಿಕೊಳ್ಳುವಂತಹ ಪ್ರದರ‍್ಶನವೇನು ಬಂದಿರುವುದಿಲ್ಲ. ಸಾಲದಕ್ಕೆ ಅವರು ಆಮೆ ಗತಿಯಲ್ಲಿ ರನ್ ಗಳಿಸುತ್ತಾರೆ ಎಂಬ ಹಣೆಪಟ್ಟಿ ಬೇರೆ ಅವರ ಮೇಲೆ ಹೊರಿಸಲಾಗಿತ್ತು. 1998/99 ರ ನ್ಯೂಜಿಲ್ಯಾನ್ಡ್ ಪ್ರವಾಸದ ಒಂದು ದಿನದ ತಂಡದಿಂದ ಅವರನ್ನು ಕೈಬಿಟ್ಟಿದ್ದರೂ ಟೆಸ್ಟ್ ನಲ್ಲಿ ಅವರ ಸೊಗಾಸಾದ ಬ್ಯಾಟಿಂಗ್ ಅನ್ನು ಕಂಡು ನಾಯಕ ಅಜರುದ್ದೀನ್ ಆಯ್ಕೆಗಾರರಿಗೆ ದ್ರಾವಿಡ್ ರ ಅವಶ್ಯಕತೆ ಒಂದು ದಿನದ ತಂಡಕ್ಕೂ ಇದೆ ಎಂದು ಆಯ್ಕೆಗಾರರಿಗೆ ಮನದಟ್ಟು ಮಾಡಿಸಿ ಅವರನ್ನು ತಂಡದೊಟ್ಟಿಗೆ ಉಳಿಸಿಕೊಳ್ಳುತ್ತಾರೆ. ನಾಯಕನ ನಂಬಿಕೆಯನ್ನು ಹುಸಿ ಮಾಡದೆ ದ್ರಾವಿಡ್ ಟೋಪೋಲಿ ನಡೆದ ಮೊದಲ ಪಂದ್ಯದಲ್ಲೇ ಅಜೇಯ 123 ರನ್ ಗಳಿಸಿ ಅವರ ಬಗ್ಗೆ ಇದ್ದ ಅನುಮಾನಗಳನ್ನು ಕೊಂಚ ಮಟ್ಟಿಗೆ ದೂರ ಮಾಡುತ್ತಾರೆ. ಆ ಸರಣಿಯಲ್ಲೇ ಇನ್ನೆರಡು ಅರ‍್ದಶತಕ ಗಳಿಸಿ 1999ರ ವಿಶ್ವಕಪ್ ತಂಡಕ್ಕೂ ಆಯ್ಕೆ ಆಗುತ್ತಾರೆ. ವಿಶ್ವಕಪ್ ನಲ್ಲಿ ಎರಡು ಶತಕಗಳೊಂದಿಗೆ ಅತ್ಯದಿಕ 461 ರನ್ ಗಳಿಸಿ ಒಂದು ದಿನದ ಆಟಕ್ಕೂ ತಾವು ಸೈ ಎಂದು ಸಾಬೀತು ಮಾಡುತ್ತಾರೆ.

2001 ನೇ ಇಸವಿನಿಂದಾಚೆಗೆ ಯುವಕರು ತಂಡಕ್ಕೆ ಬಂದ ಮೇಲೆ ತಮ್ಮ ಮೂರನೇ ಕ್ರಮಾಂಕ ಬಿಟ್ಟು ಕೊಟ್ಟು ಹೆಚ್ಚಾಗಿ ಕೆಳಗಿನ ಕ್ರಮಾಂಕದಲ್ಲಿ ಆಡಿದ್ದರಿಂದ ಅವರಿಂದ ಹೆಚ್ಚು ಶತಕಗಳು ಬರಲಿಲ್ಲ. ಆದರೆ ಪರಿಸ್ತಿತಿಗೆ ತಕ್ಕಂತೆ ಬ್ಯಾಟ್ ಬೀಸುವ ಚಳಕವನ್ನು ಮೈಗೂಡಿಸಿಕೊಂಡಿದ್ದ ದ್ರಾವಿಡ್ ಒಮ್ಮೆ 22 ಬಾಲ್ ಗಳಲ್ಲಿ 50 ರನ್ ಗಳಿಸಿದ್ದು ಒಂದು ದಾಕಲೆ. ಎರಡು ಮುನ್ನೂರು ರನ್ ಗಳ ಜೊತೆಯಾಟ ಆಡಿರುವುದು ದ್ರಾವಿಡ್ ಒಬ್ಬರೇ. ಮತ್ತು 1999 ರಿಂದ 2004 ರವರೆಗೂ ಒಟ್ಟು ಸತತ 120 ಒಂದು ದಿನದ ಇನ್ನಿಂಗ್ಸ್ ಗಳಲ್ಲಿ ಒಮ್ಮೆಯೂ ಸೊನ್ನೆಗೆ ಔಟ್ ಆಗದ ಅಪರೂಪದ ದಾಕಲೆ ದ್ರಾವಿಡ್ ರ ಹೆಸರಲ್ಲೇ ಇದೆ. ಅವರ ಒಂದು ದಿನದ ಪಂದ್ಯಗಳ ವ್ರುತ್ತಿ ಬದುಕಿನಲ್ಲಿ 344 ಪಂದ್ಯಗಳನ್ನಾಡಿ 39.16 ರ ಸರಾಸರಿಯಲ್ಲಿ 12 ಶತಕಗಳು ಮತ್ತು 83 ಅರ‍್ದಶತಕಗಳೊಂದಿಗೆ ಬರೋಬ್ಬರಿ 10889 ರನ್ ಗಳಿಸಿದರು. 2007 ರಲ್ಲಿ ಅವರು ಪ್ರಪಂಚದ ಐದನೇ ಆಟಗಾರನಾಗಿ ಹತ್ತು ಸಾವಿರ ರನ್ ಪೂರೈಸಿದರು. ಹಾಗೂ ಅವದಿಯ ಲೆಕ್ಕದಲ್ಲಿ ಆಗ ಎಲ್ಲರಗಿಂತ ವೇಗವಾಗಿ (10 ವರ‍್ಶ 317 ದಿನಗಳಲ್ಲಿ) ಈ ದಾಕಲೆ ಮಾಡಿದ ಕೀರ‍್ತಿ ದ್ರಾವಿಡ್ ರ ಪಾಲಾಗಿತ್ತು. ಒಂದು ಕಾಲದಲ್ಲಿ ಕೇವಲ ಟೆಸ್ಟ್ ಆಟಗಾರನೆಂಬ ಹಣೆಪಟ್ಟಿ ಹೊತ್ತಿದ್ದ ದ್ರಾವಿಡ್ ರ ಒಂದು ದಿನದ ಅಂಕಿಗಳನ್ನು ನೋಡಿದರೆ ಅದೊಂದು ಪವಾಡ ಎಂದೇ ಹೇಳಬೇಕು. ಕಡೆಯದಾಗಿ 2011 ರಲ್ಲಿ ಇಂಗ್ಲೆಂಡ್ ಎದುರು ಒಂದು ಟಿ-20 ಪಂದ್ಯವನ್ನೂ ಆಡಿ ಸತತ ಮೂರು ಸಿಕ್ಸ್ ಬಾರಿಸಿ 31 ರನ್ ಗಳಿಸಿದ್ದರು.

ಬಾರತ ಕ್ರಿಕೆಟ್ ತಂಡದ ನಾಯಕನಾಗಿ ದ್ರಾವಿಡ್

ಬಾರತದ ಶ್ರೇಶ್ಟ ನಾಯಕ ಯಾರು ಎಂಬ ಕೇಳ್ವಿಗೆ ಗಂಗೂಲಿ, ಕಪಿಲ್ ದೇವ್ ಮತ್ತು ದೋನಿ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತವೆ. ಆದರೆ 2007 ರ ವಿಶ್ವಕಪ್ ದುರಂತವನ್ನು ಮುಂದಿಟ್ಟಿಕೊಂಡು, ದ್ರಾವಿಡ್ ಕೂಡ ಬಾರತ ಕಂಡ ಒಬ್ಬ ಶ್ರೇಶ್ಟ ನಾಯಕ ಹಾಗೂ ಸಾಕಶ್ಟು ಗೆಲುವುಗಳನ್ನು ತಂದು ಕೊಟ್ಟ ನಾಯಕ ಎಂಬುದನ್ನು ಮರೆಮಾಚಲಾಗಿದೆ. ಅದಕ್ಕೆ ಗ್ರೆಗ್ ಚಾಪಲ್ ಕೋಚ್ ಆಗಿದ್ದ ಗೊಂದಲಮಯ ಕಾಲದಲ್ಲಿ ದ್ರಾವಿಡ್ ನಾಯಕರಾಗಿದ್ದೂ ಒಂದು ಕಾರಣವಿರಬಹುದು. ದ್ರಾವಿಡ್ ರ ನಾಯಕತ್ವದಲ್ಲಿ ಬಾರತ 2004 ರಲ್ಲಿ ಪಾಕಿಸ್ತಾನದಲ್ಲಿ ತನ್ನ ಮೊದಲ ಟೆಸ್ಟ್ ಗೆಲುವು ಸಾದಿಸಿತು. ಅವರ ತಂಡವೇ 2006 ರಲ್ಲಿ ದಕ್ಶಿಣ ಆಪ್ರಿಕಾದಲ್ಲೂ ಕೂಡ ಮೊದಲ ಟೆಸ್ಟ್ ಗೆಲುವು ಪಡೆಯಿತು. ಮತ್ತು ಅದೇ ವರ‍್ಶ ವೆಸ್ಟ್ ಇಂಡೀಸ್ ನೆಲದ ಮೇಲೆ ಬಾರತ 35 ವರ‍್ಶಗಳ ಬಳಿಕ ಟೆಸ್ಟ್ ಸರಣಿ ಗೆಲುವು ದಾಕಲಿಸಿತು. ಹಾಗೂ 2007 ರಲ್ಲಿ ಇಂಗ್ಲೆಂಡ್ ನಲ್ಲೂ 21 ವರ‍್ಶದ ಬಳಿಕ ಟೆಸ್ಟ್ ಸರಣಿ ಗೆದ್ದಾಗ ದ್ರಾವಿಡ್ ರೇ ಮುಂದಾಳು. ನಾಯಕನಾಗಿ ಇಶ್ಟೆಲ್ಲಾ ಸಾದಿಸಿದ ದ್ರಾವಿಡ್ ರನ್ನು ಕಡೆಗಣಿಸಿರೋದು ದುರಂತವೇ ಸರಿ. ಒಟ್ಟು 25 ಟೆಸ್ಟ್ ಗಳಲ್ಲಿ ತಂಡವನ್ನು ಮುನ್ನಡೆಸಿ 8 ರಲ್ಲಿ ಗೆಲುವು ಪಡೆದು 8 ರಲ್ಲಿ ಸೋಲುಂಡಿದ್ದಾರೆ. ಒಂದು ದಿನದ ತಂಡದ ನಾಯಕರಾಗಿಯೂ ದ್ರಾವಿಡ್ ಒಳ್ಳೆ ದಾಕಲೆ ಹೊಂದಿದ್ದಾರೆ. ಒಟ್ಟು 79 ಪಂದ್ಯಗಳಲ್ಲಿ 42 ರಲ್ಲಿ ಗೆಲುವು ಕಂಡು 33 ರಲ್ಲಿ ಸೋತಿದ್ದಾರೆ. ಅವರ ನಾಯಕತ್ವದಲ್ಲೇ ಬಾರತ ಸತತ 17 ಬಾರಿ ರನ್ ಗುರಿ ಬೆನ್ನಟ್ಟಿ ದಾಕಲೆ ಮಾಡಿತು. 2006 ರಲ್ಲಿ ಪಾಕಿಸ್ತಾನದಲ್ಲಿ 4-1 ರ ಸರಣಿ ಗೆಲುವು ಕೂಡ ಸಾದಿಸಿತು. 2007 ರ ವಿಶ್ವಕಪ್ ನಂತರ ಜನ ತಿಳಿದಿರುವಂತೆ ಅವರೇನು ನಾಯಕತ್ವವನ್ನು ಕಳೆದುಕೊಳ್ಳಲಿಲ್ಲ. ಗೆಲುವಿನ ಇಂಗ್ಲೆಂಡ್ ಪ್ರವಾಸದ ನಂತರ ಅವರೇ ಆ ಹೊಣೆಯನ್ನು ಬಿಟ್ಟುಕೊಟ್ಟಿದ್ದು ಬಹುತೇಕ ಮಂದಿಗೆ ತಿಳಿದಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಯುವರಾಜ್ ಬದಲು ದೋನಿ ಅವರನ್ನು ಉಪನಾಯಕರನ್ನಾಗಿ ಮಾಡಿ, ಆ ನಂತರ 2007 ರ ಟಿ-20 ವಿಶ್ವಕಪ್ ನಲ್ಲಿ ತಾವೂ ಆಡದೆ ಎಲ್ಲಾ ಹಿರಿಯ ಆಟಗಾರರಿಗೂ ದೂರ ಸರಿಯಲು ಹೇಳಿ ಯುವಕರ ತಂಡವನ್ನು ಕಳಿಸಿದ್ದು ದ್ರಾವಿಡ್ ರ ದೂರಾಲೋಚನೆಯಿಂದ ಎಂದು ಬಾರತ ಕ್ರಿಕೆಟ್ ಮರೆತಿದೆ. ಅಂದು ದ್ರಾವಿಡ್ ದೋನಿರನ್ನು ಉಪನಾಯಕರನ್ನಾಗಿ ಮಾಡದ್ದಿದ್ದರೆ ಟಿ-20 ವಿಶ್ವಕಪ್ ಗೆ ಅವರು ನಾಯಕರಾಗುತ್ತಿರಲಿಲ್ಲ ಎಂಬುದನ್ನು ಮರೆಯಕೂಡದು. ಆದರೆ ನಂತರ ಕೇವಲ ಒಂದು ಸರಣಿಯ ವೈಪಲ್ಯದಿಂದ ದೋನಿ ದ್ರಾವಿಡ್ ರನ್ನು 2007 ರಲ್ಲಿ ಒಂದು ದಿನದ ತಂಡದಿಂದ ಹೊರಹಾಕಿದ್ದು ಬೇಸರದ ಸಂಗತಿ. ಇದು ದ್ರಾವಿಡ್ ರ ನಿಸ್ವಾರ‍್ತ ಸೇವೆಗೆ ಸಿಕ್ಕ ಬಳುವಳಿ!

ಮುಲ್ತಾನ್ ಟೆಸ್ಟ್ ವಿವಾದ – ಬೆಂಬಿಡದ ಬೂತ

‘ಮುಲ್ತಾನ್ ಡಿಕ್ಲೆರೇಶನ್ ನ ಪ್ರತಿ ಒಂದು ಕೇಳ್ವಿಗೂ ನನಗೆ ಒಂದು ರೂಪಾಯಿ ಸಿಕ್ಕಿದ್ದರೆ ಇಶ್ಟೊತ್ತಿಗೆ ನಾನು ಕೋಟಿ ರೂಪಾಯಿ ಗಳಿಸಿರುತ್ತಿದ್ದೆ’ ಎಂದು ಆ ವಿವಾದದ ಬಗ್ಗೆ ಮಾತಾಡುವಾಗಲೆಲ್ಲಾ ದ್ರಾವಿಡ್ ನಸುನಕ್ಕು ಹೇಳುತ್ತಾರೆ. 2004 ರ ಮುಲ್ತಾನ್ ಟೆಸ್ಟ್ ಗೆ ಗಾಯಾಳು ಗಂಗೂಲಿ ಬದಲು ದ್ರಾವಿಡ್ ನಾಯಕರಾಗಿದ್ದರು. ತೆಂಡೂಲ್ಕರ್ 194 ರನ್ ಗಳಿಸಿ ಆಡುತ್ತಿದ್ದಾಗ ಅವರು ಡಿಕ್ಲೇರ್ ಮಾಡಿದ್ದು ದೊಡ್ಡ ವಿವಾದವಾಯಿತು. ಬಾರತ ಎರಡನೇ ದಿನದ ಆಟದಲ್ಲಿ ಕೇವಲ 18 ಓವರ್ ಗಳಿರುವಾಗ 675/5 ತಲುಪಿತ್ತು. ಬೌಲರ್ ಗಳಿಗೆ ಸ್ವಲ್ಪವೂ ಸಹಾಯವಿಲ್ಲದ ಆ ಸತ್ವವಿಲ್ಲದ ಪಿಚ್ ಮೇಲೆ ಪಾಕಿಸ್ತಾನವನ್ನು ಎರಡು ಬಾರಿ ಆಲ್- ಔಟ್ ಮಾಡಲು ಹೆಚ್ಚು ಹೊತ್ತು ಹಿಡಿಯಲಿದೆ ಎಂದು ಅರಿತ ದ್ರಾವಿಡ್ ಒಬ್ಬ ಆಟಗಾರನ ವಯಕ್ತಿಕ ಮೈಲುಗಲ್ಲಿಗೆ ಬೆಲೆ ಕೊಡದೆ ಡಿಕ್ಲೇರ್ ಮಾಡಿದರು. ಆ ಪಂದ್ಯದ ಪಿಚ್ ವಿವರಣೆ ನೀಡಿದ್ದ ಪಾಕಿಸ್ತಾನದ ದಿಗ್ಗಜ ಇಮ್ರಾನ್ ಕಾನ್ ಕೂಡ ‘ಇಂತಾ ಬಿಸಿಲಿನಲ್ಲಿ ಹುಲ್ಲಿನ ಸುಳಿವೂ ಇಲ್ಲದ ಈ ಪಿಚ್ ನಲ್ಲಿ ಪಲಿತಾಂಶ ಬರುವುದು ಅನುಮಾನ, ಡ್ರಾ ಆಗಬಹುದು’ ಎಂಬ ಅನಿಸಿಕೆ ವ್ಯಕ್ತ ಪಡಿಸಿದ್ದರು. ಅಲ್ಲಿವರೆಗೂ ಪಾಕಿಸ್ತಾನದಲ್ಲಿ ಒಂದೂ ಟೆಸ್ಟ್ ಗೆಲ್ಲದ ಬಾರತ ತಂಡದ ಗೆಲುವಿನ ಹಿತದ್ರುಶ್ಟಿಯಿಂದ ದ್ರಾವಿಡ್ ಈ ತೀರ‍್ಮಾನ ಕೈಗೊಂಡ್ಡಿದ್ದರೂ ದ್ವಿಶತಕ ಕೈತಪ್ಪಿತೆಂದು ಸಿಟ್ಟಾದ ಸಚಿನ್ ತಮ್ಮ ಅಸಮಾದಾನವನ್ನು ತಂಡದ ಕೋಚ್, ಸದಸ್ಯರು ಮತ್ತು ಪತ್ರಕರ‍್ತರ ಮುಂದೂ ಹೊರಹಾಕಿದರು. ಆಸ್ಟ್ರೇಲಿಯಾ, ಇಂಗ್ಲೆಂಡ್ ನಲ್ಲಿ ಇದು ವಿವಾದವೇ ಆಗುತ್ತಿರಲಿಲ್ಲ ಅನ್ನೋದು ದಿಟ. ಆದರೆ ಸಚಿನ್ ದೇವರು ಎಂದು ನಂಬಿರೋ ಬಾರತದ ಮಾದ್ಯಮ ಮತ್ತು ಅಬಿಮಾನಿಗಳು ಸಚಿನ್ ಪರ ವಕಾಲತ್ತು ವಹಿಸಿದರು. ಕ್ರಿಕೆಟ್ ಒಂದು ತಂಡದ ಆಟ ಎಂಬುದನ್ನೇ ಮರೆತು ಪತ್ರಿಕೆಗಳು ದ್ರಾವಿಡ್ ರನ್ನು ಹರಕೆಯ ಕುರಿ ಮಾಡಿದವು. ಕಡೆಗೆ ದ್ರಾವಿಡ್- ತೆಂಡೂಲ್ಕರ್ ಇಬ್ಬರೇ ಪರಸ್ಪರ ಮಾತನಾಡಿ ಈ ವಿವಾದಕ್ಕೆ ತೆರೆ ಎಳೆದದ್ದು ಈಗ ಇತಿಹಾಸ. ಆದರೆ ಸಚಿನ್ ಇದರ ಬಗ್ಗೆ 2014 ರಲ್ಲಿ ಅವರ ಹೊತ್ತಗೆ “ಪ್ಲೇಯಿಂಗ್ ಇಟ್ ಮೈ ವೇ” ಲಿ ಪ್ರಸ್ತಾಪಿಸಿದಾಗ ಮತ್ತೊಮ್ಮೆ ಈ ವಿವಾದ ಬುಗಿಲೆದ್ದಿತು. ಆಗಲೂ ದ್ರಾವಿಡ್ ತಾಳ್ಮೆ ಕಳೆದುಕೊಳ್ಳದೆ ಎಂದಿನಂತೆ ಸಂಯಮದಿಂದ “ಆ ಪಂದ್ಯವನ್ನು ಅಶ್ಟು ಸುಳುವಾಗಿ ನಾವು ಗೆಲ್ಲುತ್ತೇವೆ ಎಂದು ಮೊದಲೇ ನನಗೆ ಗೊತ್ತಿದ್ದರೆ ಸಚಿನ್ 200 ರನ್ ತಲುಪುವವರೆಗೂ ಕಾಯುತ್ತಿದ್ದೆ” ಎಂದು ಪತ್ರಕರ‍್ತರ ಕೇಳ್ವಿಗೆ ಉತ್ತರಿಸಿದ್ದರು. 2004 ರ ಸಿಡ್ನಿ ಟೆಸ್ಟ್ ನಲ್ಲಿ ದ್ರಾವಿಡ್ 91 ರನ್ ಗಳಿಸಿ ಆಡುತ್ತಿದ್ದಾಗ ಗಂಗೂಲಿ ಡಿಕ್ಲೇರ್ ಮಾಡಿದ್ದು ವಿವಾದವೇ ಆಗಲಿಲ್ಲ ಅನ್ನೋದು ಇಲ್ಲಿ ಗಮನಿಸಬೇಕಾದ ಒಂದು ಅತಿಮುಕ್ಯವಾದ ವಿಶಯ. ಅದು ವಿವಾದವಾಗುವುದಿರಲಿ ಬಹುತೇಕ ಮಂದಿಗೆ ದ್ರಾವಿಡ್ ಶತಕದ ಬಳಿ ಇದ್ದರೂ ಯೋಚಿಸದೆ ನಾಯಕ ಡಿಕ್ಲೇರ್ ಮಾಡಿದೊಡನೆ ಚಕಾರವೆತ್ತದೆ ಹೊರ ನಡೆದದ್ದು ಗೊತ್ತೇ ಇಲ್ಲ. ಯಾಕೆಂದರೆ ದ್ರಾವಿಡ್ ಸಿಟ್ಟಾಗಿ ಗಂಗೂಲಿ ನನ್ನ ಶತಕ ಪೂರೈಸಲು ಬಿಡಲಿಲ್ಲ ಎಂದು ಮಾದ್ಯಮದವರ ಮುಂದೆ ಹೇಳಿಕೆ ನೀಡಲಿಲ್ಲ. ಅವರು ಎಂದೂ ಸಹ ತಮ್ಮ ವೈಯುಕ್ತಿಕ ದಾಕಲೆಗಳಿಗಾಗಲಿ ಶತಕಗಳಿಗಾಗಲಿ ಆಡಿದವರಲ್ಲ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆ ಎತ್ತುಗೆ ಬೇಕಿಲ್ಲ.

ನಿಸ್ವಾರ‍್ತ ಆಟಗಾರ ರಾಹುಲ್ – ತಂಡಕ್ಕಾಗಿ ಏನು ಮಾಡಲೂ ಸೈ!

ರಾಹುಲ್ ದ್ರಾವಿಡ್, Rahul Dravidವಿದೇಶದ ಟೆಸ್ಟ್ ಗಳಲ್ಲಿ ಹೆಚ್ಚುವರಿ ಓಪನರ್ ಇಲ್ಲದ್ದಿದ್ದಾಗ ದ್ರಾವಿಡ್ ಅವರೇ ಓಪನರ್ ಆಗಿ ಹೊಸ ಚೆಂಡನ್ನು ಎದುರಿಸಲು ಹೋಗುತ್ತಿದ್ದರು. ಗಂಗೂಲಿ-ತೆಂಡೂಲ್ಕರ್ ಒಂದು ದಿನದ ಕ್ರಿಕೆಟ್ ನಲ್ಲಿ ನೂರಾರು ಬಾರಿ ಓಪನರ್ ಗಳಾಗಿ ಆಡಿದರೂ ಟೆಸ್ಟ್ ನಲ್ಲಿ ಅದೇ ಹೊಣೆಯನ್ನು ಹೊರುವ ಸಾಹಸ ಇಬ್ಬರೂ ತೋರಲಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಟೆಸ್ಟ್ ಗಳಲ್ಲಿ ಇಬ್ಬರೂ ತಲಾ ಒಂದೊಂದು ಇನ್ನಿಂಗ್ಸ್ ಅದೂ ತವರಿನಲ್ಲೇ ಓಪನ್ ಮಾಡಿದ್ದಾರೆ ಎಂದರೆ ವಿದೇಶದಲ್ಲಿ ಹೊಸ ಚೆಂಡನ್ನು ಎದುರಿಸುವುದು ಎಂತಾ ಸವಾಲು ಎಂದು ಊಹಿಸಬಹುದು. ದ್ರಾವಿಡ್ ಒಟ್ಟು 17 ಟೆಸ್ಟ್ ಗಳಲ್ಲಿ ಆರಂಬಿಕ ಬ್ಯಾಟ್ಸ್ಮನ್ ಆಗಿ ಆಡಿ 4 ಶತಕಗಳನ್ನು ಗಳಿಸಿದ್ದಾರೆ. ಇವೆಲ್ಲವೂ ವಿದೇಶದಲ್ಲೇ ಅನ್ನೋದು ಗಮನಿಸಬೇಕಾದ ಅಂಶ. 2002-04 ರ ವರೆಗೂ ತಂಡದಲ್ಲಿ ಬ್ಯಾಟಿಂಗ್ ಅಳವುಳ್ಳ ವಿಕೆಟ್ ಕೀಪರ್ ಇಲ್ಲದ್ದುದ್ದರಿಂದ ಅವರು ಆ ಜಾಗ ತುಂಬಿದರೆ ತಂಡದ ಅಗತ್ಯಕ್ಕೆ ತಕ್ಕಂತೆ ಒಬ್ಬ ಹೆಚ್ಚುವರಿ ಬ್ಯಾಟ್ಸ್ಮನ್ ಅತವಾ ಬೌಲರ್ ನನ್ನು ಆಡಿಸಬಹುದೆಂದು ಅರಿತು ಕಶ್ಟವೆನಿಸಿದರೂ ತಂಡದ ಸಲುವಾಗಿ ಒಟ್ಟು 73 ಒಂದು ದಿನದ ಪಂದ್ಯಗಳಲ್ಲಿ ದ್ರಾವಿಡ್ ಕೀಪಿಂಗ್ ಹೊಣೆಯನ್ನೂ ಹೊತ್ತರು. ಆ ಪಂದ್ಯಗಳಲ್ಲಿ 44 ರ ಸರಾಸರಿಯಲ್ಲಿ 4 ಶತಕಗಳೊಂದಿಗೆ 2300 ರನ್ ಕಲೆಹಾಕಿದ್ದು ವಿಶೇಶ. ಚಕಾರವೆತ್ತದೆ ತಂಡಕ್ಕಾಗಿ ತಮ್ಮನ್ನು ಅರ‍್ಪಿಸಿಕೊಳ್ಳೋದು ದ್ರಾವಿಡ್ ರ ಹುಟ್ಟು ಗುಣ ಎಂದೇ ಹೇಳಬೇಕು.

ಐಪಿಎಲ್ ನಲ್ಲಿ ದ್ರಾವಿಡ್

2008 ರಿಂದ 2013 ರ ವರೆಗೂ ಬೆಂಗಳೂರು ಮತ್ತು ರಾಜಸ್ತಾನ ಐಪಿಎಲ್ ತಂಡಗಳ ಪರ ದ್ರಾವಿಡ್ ಟಿ-20 ಮಾದರಿಯ ಚುಟುಕು ಕ್ರಿಕೆಟ್ ಆಡಿ ಅಲ್ಲಿಯೂ ಯಶಸ್ಸು ಕಂಡಿದ್ದು, ಆಟಕ್ಕೆ ತಕ್ಕಂತೆ ತಮ್ಮ ಬ್ಯಾಟಿಂಗ್ ಅನ್ನು ಅಳವಡಿಸಿಕೊಳ್ಳುವ ಚಳಕವನ್ನು ಅವರು ಹೇಗೆ ಕರಗತ ಮಾಡಿಕೊಂಡಿದ್ದರು ಎಂಬುದಕ್ಕೆ ಎತ್ತುಗೆ. ಅವರ ಪೀಳಿಗೆಯ ಆಟಗಾರರ ಪೈಕಿ ಈ ಚುಟುಕು ಕ್ರಿಕೆಟ್ ಗೆ ದ್ರಾವಿಡ್ ರಶ್ಟು ಸೊಗಸಾಗಿ ಬೇರ‍್ಯಾರು ಹೊಂದಿಕೊಳ್ಳಲಿಲ್ಲ ಎಂದು ಹಲವಾರು ವಿಮರ‍್ಶಕರು ಅಬಿಪ್ರಾಯ ಪಟ್ಟರು. ಒಟ್ಟು 89 ಐಪಿಎಲ್ ಪಂದ್ಯಗಳಲ್ಲಿ 29 ರ ಸರಾಸರಿ, 116 ರ ಸ್ಟ್ರೈಕ್ ರೇಟ್ ನಲ್ಲಿ 11 ಅರ‍್ದಶತಕಗಳೊಂದಿಗೆ 2174 ರನ್ ಗಳಿಸಿದರು. ಯುವ ಆಟಗಾರರಾದ ಕೊಹ್ಲಿ ಹಾಗೂ ರೋಹಿತ್ ಶರ‍್ಮ ಅವರಿಗಿಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ ಅವರು ಐಪಿಎಲ್ ನಲ್ಲಿ 2000 ರನ್ ಪೂರೈಸಿದ್ದರೆಂದರೆ ಅವರ ಆಟದ ತೀವ್ರತೆಯ ಬಗ್ಗೆ ಅರಿವಾಗುತ್ತದೆ. ಎರಡೂ ತಂಡಗಳ ನಾಯಕರಾಗಿಯೂ ಆಡಿದ ದ್ರಾವಿಡ್ 2013 ರಲ್ಲಿ ಯುವಕರೇ ತುಂಬಿದ್ದ ರಾಜಸ್ತಾನ ತಂಡವನ್ನು ಸೆಮಿಪೈನಲ್ ಹಂತದವರೆಗೂ ಕೊಂಡೊಯ್ದಿದ್ದರು. ರಹಾನೆ, ಸ್ಟುವರ‍್ಟ್ ಬಿನ್ನಿ, ಸಂಜು ಸಾಮ್ಸನ್ ಅವರ ಆಟ ಸಾಕಶ್ಟು ಸುದಾರಿಸಿ ಇವರೆಲ್ಲಾ ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆಯಲು ದ್ರಾವಿಡ್ ಮಾರ‍್ಗದರ‍್ಶನವೇ ಕಾರಣ ಎನ್ನುವುದು ಸುಳ್ಳಲ್ಲ.

ಕರ‍್ನಾಟಕ ಕ್ರಿಕೆಟ್ ಗೆ ದ್ರಾವಿಡ್ ರ ಕೊಡುಗೆ

ಜ್ಯಾಮಿ ( ಜಾವಗಲ್ ಶ್ರೀನಾತ್ ಇಟ್ಟ ಅಡ್ಡಹೆಸರು ) ಎಂದೂ ಕರೆಸಿಕೊಳ್ಳುವ ದ್ರಾವಿಡ್ ರಾಜ್ಯ ಕ್ರಿಕೆಟ್ ಗೆ 20 ವರ‍್ಶಗಳ ಕಾಲ ಹಲವಾರು ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ‍್ನಾಟಕದೊಂದಿಗೆ ಎರಡು ರಣಜಿ ಟ್ರೋಪಿ ಗೆದ್ದಿದ್ದು, ಒಂದನ್ನು (1997/98) ನಾಯಕನಾಗಿ ಗೆದ್ದಿದ್ದಾರೆ. ಕರ‍್ನಾಟಕದ ಪರ ಒಟ್ಟು 48 ರಣಜಿ ಪಂದ್ಯಗಳನ್ನಾಡಿ 81.23 ರ ಸರಾಸರಿಯಲ್ಲಿ 17 ಶತಕಗಳೊಂದಿಗೆ 4874 ಗಳಿಸಿದ್ದಾರೆ. ಹಾಗೂ 11 ಪಂದ್ಯಗಳಲ್ಲಿ ಕರ‍್ನಾಟಕದ ಮುಂದಾಳತ್ವವನ್ನು ವಹಿಸಿ ಒಂದೂ ಪಂದ್ಯ ಸೋಲದೆ 5 ರಲ್ಲಿ ಗೆಲುವು ಕಂಡಿದ್ದಾರೆ. ಅಂತರಾಶ್ಟ್ರೀಯ ಕ್ಯಾತಿ ಪಡೆದ ಬಳಿಕವೂ ಬಾರತ ತಂಡದಿಂದ ಬಿಡುವು ಸಿಕ್ಕಾಗಲೆಲ್ಲ ದ್ರಾವಿಡ್ ರಾಜ್ಯದ ಪರ ಆಡುತ್ತಿದ್ದರು. 2004/05 ರಲ್ಲಿ ಬಾಂಗ್ಲಾದೇಶ ಪ್ರವಾಸದಿಂದ ಮರಳಿದ ಎರಡೇ ದಿನಗಳ ನಂತರ, ಕರ‍್ನಾಟಕ ಸೆಮಿಪೈನಲ್ ತಲುಪುವ ಅವಕಾಶ ಇಲ್ಲಿದ್ದಿದ್ದರೂ ಸುಮ್ಮನೆ ಔಪಚಾರಿಕವಾಗಿದ್ದ ರೈಲ್ವೇಸ್ ಎದುರಿನ ಕಡೆಯ ರಣಜಿ ಲೀಗ್ ಪಂದ್ಯವನ್ನು ಆಡಿದ್ದು ರಾಜ್ಯ ತಂಡದ ಪರ ಅವರರಿಗಿದ್ದ ಬದ್ದತೆಗೆ ಸಾಕ್ಶಿ. 2007/08 ರಲ್ಲಿ ಬಾರತದ ಒಂದು ದಿನದ ತಂಡದಿಂದ ಸ್ತಾನ ಕಳೆದುಕೊಂಡ ಮೇಲೆ 2009/10 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಕರ‍್ನಾಟಕದ ನಾಯುಕತ್ವದ ಹೊಣೆಯನ್ನು ಹೊತ್ತು ಸೆಮಿಪೈನಲ್ ನಲ್ಲಿ ಉತ್ತರಪ್ರದೇಶದ ಎದುರು ಅಜೇಯ ದ್ವಿಶತಕ ಸಿಡಿಸಿ 10 ವರ‍್ಶಗಳ ಬಳಿಕ ತಂಡವನ್ನು ಪೈನಲ್ ತಲುಪುವಂತೆ ಮಾಡಿದ್ದರು. ಮೈಸೂರಲ್ಲಿ ಮುಂಬೈ ಎದುರು ನಡೆದ ಪೈನಲ್ ನಲ್ಲಿ ಅವರ ಸೇವೆ ಸಿಗದೆ ತಂಡ 6 ರನ್ ಗಳಿಂದ ಸೋತರೂ ಅವರು ಅಂದು ಬೆಂಬಲಿಸಿ ಅವಕಾಶ ನೀಡಿದ ಯುವ ಆಟಗಾರರು ನಂತರ ಎರಡು ರಣಜಿ ಟೂರ‍್ನಿಗಳನ್ನು ಕರ‍್ನಾಟಕದ ಮಡಿಲಿಗೆ ಹಾಕಿದರು. ಮನೀಶ್ ಪಾಂಡೆ, ಶ್ರೀನಾತ್ ಅರವಿಂದ್, ಸಿ.ಎಮ್ ಗೌತಮ್, ಅಬಿಮನ್ಯು ಮಿತುನ್, ಗಣೇಶ್ ಸತೀಶ್ ಹಾಗೂ ಅಮಿತ್ ವರ‍್ಮಾ ಇವರೆಲ್ಲರೂ ದ್ರಾವಿಡ್ ರಾಜ್ಯ ತಂಡಕ್ಕೆ ಮರಳಿದ ಅವದಿಯಲ್ಲಿ ಬೆಳಕಿಗೆ ಬಂದ ಆಟಗಾರರು. ಕೆ.ಎಲ್ ರಾಹುಲ್ ರೊಟ್ಟಿಗೆ ಅವರು ಆಡದ್ದಿದ್ದರೂ 2009 ರಲ್ಲೇ ಅವರ ಪ್ರತಿಬೆಯನ್ನು ಗುರುತಿಸಿ ರಾಜ್ಯ ಕ್ರಿಕೆಟ್ ಸಂಸ್ತೆಗೆ ಅವರ ಬೆಳವಣಿಗೆ ಬಗ್ಗೆ ನಿಗಾ ವಹಿಸಲು ದ್ರಾವಿಡ್ ಹೇಳಿದ್ದರು. ಅವರು ಅಂದು ಯುವಕರನ್ನು ಪ್ರೋತ್ಸಾಹಿಸಿ ಹಾಕಿಕೊಟ್ಟ ಅಡಿಪಾಯದ ಪಲವಾಗಿ ಕರ‍್ನಾಟಕ ಹತ್ತು ವರ‍್ಶಗಳ ಬಳಿಕವೂ ಎಲ್ಲಾ ಬಗೆಯ ದೇಸೀ ಟೂರ‍್ನಿಗಳಲ್ಲಿ ಪ್ರಾಬಲ್ಯ ಮೆರೆಯುತ್ತಿದೆ. ಅವರ ಗೆಳೆಯರಾದ ಶ್ರೀನಾತ್ ಮತ್ತು ಕುಂಬ್ಳೆ ಕೆ.ಎಸ್.ಸಿ.ಎ ವಿನ ಅದಿಕಾರದ ಚುಕ್ಕಾಣಿ ಹಿಡಿದಾಗ ಅವರಿಗೆ ಬೆಂಬಲವಾಗಿ ನಿಂತು ರಾಜ್ಯ ಕ್ರಿಕೆಟ್ ಅನ್ನು ಸುದಾರಿಸಲು ಸಾಕಶ್ಟು ಯೋಜನೆಗಳನ್ನೂ ಅವರೊಂದಿಗೆ ಚರ‍್ಚಿಸಿದ್ದುಂಟು.

2011/12 ಆಸ್ಟ್ರೇಲಿಯಾ ಪ್ರವಾಸ – ವ್ರುತ್ತಿ ಬದುಕಿನ ಕೊನೆ ಪ್ರವಾಸ

2011 ರ ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಹೊಳೆ ಹರಿಸಿದ್ದ 38 ರ ಹರೆಯದ ದ್ರಾವಿಡ್ ರಿಂದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಾಕಶ್ಟು ನಿರೀಕ್ಶೆಗಳಿದ್ದವು. ಆ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ದಂತಕತೆ ಬ್ರಾಡ್ಮನ್ ರ “ಒರೇಶನ್ ಬಾಶಣ” ಮಾಡಿದ ಮೊದಲ ಆಸ್ಟ್ರೇಲಿಯೇತರ ಆಟಗಾರ ಎಂಬ ಹೆಗ್ಗಳಿಕೆ ದ್ರಾವಿಡ್ ರ ಪಾಲಾಯಿತು. ಆದರೆ ಇದ್ದಕ್ಕಿದ್ದ ಹಾಗೆ ಅವರು ತಮ್ಮ ಬ್ಯಾಟಿಂಗ್ ಲಯ ಕಳೆದುಕೊಂಡರು. 4 ಪಂದ್ಯಗಳಲ್ಲಿ ಒಂದೇ ಒಂದು ಅರ‍್ದಶತಕ ಗಳಿಸಿ ನಿರಾಸೆ ಮೂಡಿಸಿದರು. ಜೊತೆಗೆ ಆರು ಬಾರಿ ಬೌಲ್ಡ್ ಆಗಿ ಗೋಡೆ ಕ್ಯಾತಿಯ ದ್ರಾವಿಡ್ ತೀವ್ರ ಮುಜುಗುರಕ್ಕೆ ಒಳಗಾದರು. ಬಾರತ ಕೂಡ 4-0 ಇಂದ ಹೀನಾಯ ಸೋಲು ಕಂಡಿತು. ಆಸ್ಟ್ರೇಲಿಯಾದಿಂದ ಮರಳಿದ ಎರಡು ತಿಂಗಳ ಬಳಿಕ ಮಾರ‍್ಚ್ 2012 ರಲ್ಲಿ ದಿಡೀರನೆ ಕ್ರಿಕೆಟ್ ನಿಂದ ದೂರ ಸರಿಯುವ ತಮ್ಮ ತೀರ‍್ಮಾನವನ್ನು ತಿಳಿಸಿದರು. ‘ನನಗೀಗ 38 ಆಗಿದೆ ಇನ್ನು ಒಂದೂವರೆ ವರ‍್ಶ ಕಾಲ ಬಾರತ ತವರಲ್ಲೇ 10 ಟೆಸ್ಟ್ ಗಳನ್ನು ಆಡಲಿದೆ, ಹಾಗಾಗಿ ಒಬ್ಬ ಯುವ ಆಟಗಾರನಿಗೆ ಮೊದಲಿಗೆ ತವರಲ್ಲಿ ಆಡುವ ಅವಕಾಶ ಸಿಕ್ಕರೆ ಮುಂಬರುವ ವಿದೇಶದ ಸವಾಲುಗಳನ್ನು ಎದುರಿಸುವಶ್ಟರಲ್ಲಿ ತಕ್ಕಮಟ್ಟಿಗೆ ಅನುಬವ ಬಂದಿರುತ್ತದೆ. ಅದು ತಂಡಕ್ಕೆ ನೆರವಾಗುತ್ತದೆ. ಈ ತವರಿನ ಟೆಸ್ಟ್ ಗಳನ್ನು ನಾನು ಆಡುವುದರಲ್ಲಿ ಯಾವುದೇ ಅರ‍್ತವಿಲ್ಲ ಏಕೆಂದರೆ ಮುಂದಿನ ವಿದೇಶ ಟೆಸ್ಟ್ ಸರಣಿ ಸಾಕಶ್ಟು ದೂರವಿದೆ’ ಎಂದು, ಒಂದು ಬೀಳ್ಕೊಡುಗೆ ಪಂದ್ಯವನ್ನೂ ಬಯಸದೆ ನಿಸ್ವಾರ‍್ತ ದ್ರಾವಿಡ್ ಸದ್ದಿಲ್ಲದೇ ಕ್ರಿಕೆಟ್ ನಿಂದ ದೂರ ಸರಿದ್ದಿದ್ದು ಅವರ ವ್ಯಕ್ತಿತ್ವಕ್ಕೆ ಒಂದು ಎತ್ತುಗೆ ಎಂದೇ ಹೇಳಬೇಕು.

ನಿವ್ರುತ್ತಿ ನಂತರದ ಬದುಕು

2012 ರಿಂದಾಚೆಗೆ ಕೆಲ ಕಾಲ ಸ್ಟಾರ್ ಸ್ಪೋರ‍್ಟ್ಸ್ ನ ನೇರುಲಿಗರಾಗಿ ಹಾಗೂ ರಾಜಸ್ತಾನ ಮತ್ತು ದೆಹಲಿ ಐಪಿಎಲ್ ತಂಡಗಳ ಕೋಚ್ ಆಗಿ ದ್ರಾವಿಡ್ ಕೆಲಸ ಮಾಡಿದರು. ಆ ಬಳಿಕ ಬಾರತ- ಎ ಮತ್ತು ಬಾರತ ಕಿರಿಯರ ತಂಡದ ಕೋಚ್ ಆಗಿ ಯುವ ಆಟಗಾರರನ್ನು ಮುನ್ನೆಲೆಗೆ ತರುವತ್ತಾ ಶ್ರಮಿಸಿದರು. ಬಾರತ-ಎ ತಂಡದೊಂದಿಗೆ ಹಲವಾರು ಸರಣಿಗಳನ್ನು ಗೆದ್ದರೆ 2018 ರಲ್ಲಿ ಕಿರಿಯರ ತಂಡದೊಂದಿಗೆ ವಿಶ್ವಕಪ್ ಅನ್ನು ಗೆದ್ದರು. ಅವರ ಗರಡಿಯಲ್ಲಿ ಪಳಗಿದ ಹಲವಾರು ಆಟಗಾರರು ಬಾರತ ತಂಡಕ್ಕೆ ಆಡುವ ಹೊಸ್ತಿಲ್ಲಲ್ಲಿದ್ದರೆ ಇನ್ನು ಕೆಲವರು ಬಾರತ ತಂಡಕ್ಕೆ ಲಗ್ಗೆ ಇಟ್ಟಿದ್ದಾರೆ. ಇದು ದ್ರಾವಿಡ್ ಬಾರತ ಕ್ರಿಕೆಟ್ ಗೆ ಮಾಡುತ್ತಿರುವ ದೊಡ್ಡ ಸೇವೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಬೆಂಗಳೂರಿನಲ್ಲಿರುವ “ನ್ಯಾಶನಲ್ ಕ್ರಿಕೆಟ್ ಅಕಾಡೆಮಿ”ಯ ಅದ್ಯಕ್ಶರಾಗಿ ಅವರು ಆಯ್ಕೆಯಾಗಿರುವುದು ಸಾಕಶ್ಟು ನಿರೀಕ್ಶೆಗಳನ್ನು ಮೂಡಿಸಿದೆ.

ದ್ರಾವಿಡ್ ರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು

ತಮ್ಮ ಕ್ರಿಕೆಟ್ ಸಾದನೆಗೆ ದ್ರಾವಿಡ್ ರಿಗೆ ಕರ‍್ನಾಟಕ ಸರ‍್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸರ‍್ಕಾರದಿಂದ ಅರ‍್ಜುನ, ಪದ್ಮಶ್ರೀ ಹಾಗೂ ಪದ್ಮಬೂಶಣ ಪ್ರಶಸ್ತಿಗಳು ದೊರೆತಿವೆ. 2004 ರಲ್ಲಿ ಐಸಿಸಿಯ ಟೆಸ್ಟ್ ಕ್ರಿಕೆಟಿಗ ಹಾಗೂ ವರ‍್ಶದ ಕ್ರಿಕೆಟಿಗನ ಗೌರವ ಪಡೆದ ಮೊದಲ ಆಟಗಾರ ದ್ರಾವಿಡ್.ರಾಹುಲ್ ದ್ರಾವಿಡ್, Rahul Dravid ಅವರು ಟೆಸ್ಟ್ ನಲ್ಲಿ ಹತ್ತು ಸಾವಿರ ರನ್ ಪೂರೈಸಿದಾಗ ಚಿನ್ನಸ್ವಾಮಿ ಅಂಗಳದಲ್ಲಿ ಅವರ ಕೊಡುಗೆಯನ್ನು ನೆನೆಯಲು ಒಂದು ‘ಗೋಡೆ’ಯನ್ನು ’10 ಸಾವಿರ ಇಟ್ಟಿಗೆ’ಗಳಿಂದ ಕಟ್ಟಿಸಿ ಅವರ ಬ್ಯಾಟಿಂಗ್ ಬಂಗಿಯ ತಿಟ್ಟದ ಜೊತೆ “Commitment, Consistency, Class” ಎಂಬ ಅವರ ಗುಣಗಳನ್ನು ಅಚ್ಚು ಹಾಕಿಸಿ ಗೌರವಿಸಲಾಯಿತು. ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟ್ರೇಟ್ ನೀಡಲು ಮುಂದಾದಾಗ ಅದನ್ನು ನಯವಾಗಿ ತಿರಸ್ಕರಿಸಿ “ಡಾಕ್ಟರೇಟ್ ಪಡೆಯಲು ನನ್ನ ತಾಯಿ ಎಶ್ಟು ಶ್ರಮಿಸಿದ್ದಾರೆ ಎನ್ನುವುದು ನನಗೆ ಗೊತ್ತು. ನನಗೂ ಡಾಕ್ಟರೇಟ್ ಪಡೆಯಬೇಕೆನಿಸಿದರೆ ನಿಜವಾಗಿಯೂ ಶ್ರಮಿಸಿ ಪಡೆಯುತ್ತೇನೆ” ಎಂದು ಹೇಳಿ ತಮ್ಮ ದೊಡ್ಡತನ ತೋರಿದರು. ದ್ರಾವಿಡ್ ರಲ್ಲದೇ ಇನ್ಯಾರು ಹೀಗೆ ಮಾಡಿಯಾರು?

ಇನ್ನೊಬ್ಬ ದ್ರಾವಿಡ್ ಬರಲು ಸಾದ್ಯವೇ ಇಲ್ಲ

ದ್ರಾವಿಡ್ ಎಂಬ ಒಬ್ಬ ಆಟಗಾರನನ್ನು ಅಂಕಿ-ಸಂಕ್ಯೆಗಳಿಂದ ಅಳಿಯುವುದು ತಪ್ಪಾದೀತು. ಒಬ್ಬ ಆಟಗಾರನಾಗಿ ಅವರ ಕೊಡುಗೆ ಇವೆಲ್ಲಕ್ಕೂ ಮೀರಿದ್ದು. ತಮ್ಮ ವ್ರುತ್ತಿ ಬದುಕಿನಾದ್ಯಂತ ಯಾವುದೇ ವಿವಾದಕ್ಕೆ ಒಳಗಾಗದೆ ದಿಗ್ಗಜರುಗಳಾದ ಪ್ರಸನ್ನ, ಚಂದ್ರಶೇಕರ್ ಹಾಗೂ ವಿಶ್ವನಾತ್ ಅಂತವರು ಹುಟ್ಟುಹಾಕಿದ ಕರ‍್ನಾಟಕದ ಸಂಬಾವಿತ ಆಟಗಾರರ ಪರಂಪರೆಯನ್ನು ಮುಂದುವರಿಸಿದರು. ಬಹುಶಹ ದ್ರಾವಿಡ್ ಎಂದರೆ ಇಶ್ಟಪಡದವರು ಯಾರೂ ಇರಲಿಕ್ಕಿಲ್ಲ. ಅಂತಹ ಸರಳ ಮತ್ತು ಸೌಮ್ಯ ವ್ಯಕ್ತಿತ್ವ ಅವರದು. ಹಾಗಾಗಿ ಪ್ರಪಂಚದಾದ್ಯಂತ ಅವರು ಅಬಿಮಾನಿಗಳನ್ನು ಸಂಪಾದಿಸಿದ್ದಾರೆ. ಒಮ್ಮೆ ಸ್ಪಿನ್ ಬೌಲಿಂಗ್ ಎದುರಿಸಲು ಹೆಣಗಾಡುತ್ತಿದ್ದ ಇಂಗ್ಲೆಂಡ್ ನ ಕೆವಿನ್ ಪೀಟರ‍್ಸನ್ ದ್ರಾವಿಡ್ ರ ಸಲಹೆ ಕೇಳಿದಾಗ ಮಿಂಚೆ (mail) ಮೂಲಕ ಸ್ಪಿನ್ ಆಡುವುದರ ಬಗೆಗೆ ಅವರು ನೀಡಿದ ಸಲಹೆ-ಸೂಚನೆಗಳು ಅವರಿಗೆ ಸಹಾಯವಾಯಿತು ಎಂದು ಪೀಟರ‍್ಸನ್ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ದಿಗ್ಗಜ ನಾಯಕ ಸ್ಟೀವ್ ವಾ ತುಂಬಾ ಇಶ್ಟ ಪಡುವ ಆಟಗಾರ ದ್ರಾವಿಡ್. ಹಾಗಾಗಿ ಅವರ ಹೊತ್ತಗೆ “ಔಟ್ ಆಪ್ ಮೈ ಕಂಪರ‍್ಟ್ ಜೋನ್” ಗೆ ದ್ರಾವಿಡ್ ರಿಂದಲೇ ಮುನ್ನುಡಿ ಬರೆಸಿದರು. ಒಮ್ಮೆ ಮೈದಾನದಲ್ಲಿ ವಿನಾಕಾರಣ ದ್ರಾವಿಡ್ ರೊಂದಿಗೆ ಜಟಾಪಟಿಗೆ ಬಿದ್ದಿದ್ದ ಸ್ಲೇಟರ್, “ಆ ಗಟನೆ ಈಗಲೂ ನನ್ನನ್ನು ನಾನೇ ಶಪಿಸಿಕೊಳ್ಳುವಂತೆ ಮಾಡುತ್ತಿದೆ. ನಾನು ಅಶ್ಟು ರೇಗಿ ನಿಂದಿಸಿದರೂ ರಾಹುಲ್ ಮರು ಮಾತನಾಡದೆ ದೊಡ್ಡತನ ತೋರಿದರು. ಆ ತುಣುಕನ್ನು ನೋಡಿದಾಗಲೆಲ್ಲಾ ಈಗಲೂ ಅದು ಬದುಕಿನಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದೆನಿಸಿ ನಾಚಿಕೆಯಾಗುತ್ತದೆ” ಎಂದು ಸ್ಲೇಟರ್ ಹೇಳಿಕೊಂಡಿದ್ದಾರೆ.

ನಿವ್ರುತ್ತಿ ನಂತರ 2013 ರಲ್ಲಿ ತಮ್ಮ ಕ್ಲಬ್ ಬಿಯುಸಿಸಿ ಯನ್ನು ಕೆಳಗಿನ ಡಿವಿಜನ್ ಗೆ ಕುಸಿಯುವುದನ್ನು ತಪ್ಪಿಸಲು ಬೆಂಗಳೂರಿನ ಎಚ್.ಎ.ಎಲ್ ಅಂಗಳದಲ್ಲಿ ಪ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್ ಎದುರು ಎರಡು ದಿನಗಳ ಪಂದ್ಯ ಆಡಿ ಶತಕ ಸಿಡಿಸಿ ತಮ್ಮ ಕ್ಲಬ್ ಅನ್ನು ಕಾಪಾಡಿದ್ದರು. ಇದು ಅಪರೂಪ ಎನಿಸಿದರೂ ದ್ರಾವಿಡ್ ಒಬ್ಬರಿಂದ ಮಾತ್ರ ಇದು ಸಾದ್ಯ ಎಂದು ಕ್ರಿಕೆಟ್ ಜಗತ್ತಿಗೆ ಗೊತ್ತಿದೆ. ಒಬ್ಬ ದಿಗ್ಗಜ ಆಟಗಾರರ ಕ್ಲಬ್ ಕ್ರಿಕೆಟ್ ಗೆ ಮರಳುವುದು ನಂಬಲಸಾದ್ಯ ಆದರೆ ದ್ರಾವಿಡ್ ರಿಗೆ ಕ್ರಿಕೆಟ್ ಅಶ್ಟೇ ಮುಕ್ಯ. ಯಾವ ಮಟ್ಟದ ಪಂದ್ಯವಿದ್ದರೂ ಅಶ್ಟೇ ತೀವ್ರತೆಯಿಂದ ಆಡೋದು ಅವರ ಹುಟ್ಟುಗುಣ. ಅದು ಬದುಕಿನಲ್ಲಿ ತಮಗೆಲ್ಲಾ ನೀಡಿದ ಕ್ರಿಕೆಟನ್ನು ಅವರು ಗೌರವಿಸುವ ಬಗೆ. ಅವರಿಗೆ ಐಪಿಎಲ್ ಕೋಚ್ ಅತವಾ ಕಿರಿಯರ ತಂಡದ ಕೋಚ್ ಇವೆರಡರಲ್ಲಿ ಒಂದನ್ನಶ್ಟೇ ಆರಿಸಿಕೊಳ್ಳುವ ಪ್ರಮೇಯ ಬಂದಾಗ ಕಡಿಮೆ ಸಂಬಳದ ಕಿರಿಯರ ತಂಡದ ಕೋಚ್ ಹುದ್ದೆಯನ್ನು ಆರಿಸಿಕೊಂಡಿದ್ದಲ್ಲದೇ ಆ ತಂಡ ವಿಶ್ವಕಪ್ ಗೆದ್ದಾಗ ಅವರಿಗಶ್ಟೇ ಹೆಚ್ಚುವರಿ ಹಣ ಕೊಡಲು ಬಿಸಿಸಿಐ ಮುಂದಾದಾಗ, ಒಲ್ಲೆ ಎಂದು ತಂಡದ ಎಲ್ಲಾ ಸದಸ್ಯರಿಗೂ ಸಮವಾಗಿ ಪ್ರಶಸ್ತಿ ಹಣ ಸಿಗುವಂತೆ ಮಾಡಿದರು. ಹೀಗೇ ಅವರ ಆಟದ ದಿನಗಳಲ್ಲಿಯೂ ನಾಯಕನಾದೊಡನೆ ಜಾಹೀರಾತಿಗೆ ಹಳೆಯ ಸಂಸ್ತೆಗಳ ಹಳೇ ಕರಾರುಗಳ ಅಡಿಯಲ್ಲೇ ಹೆಚ್ಚು ಹಣವನ್ನು ಪಡೆಯುವ ಅವಕಾಶವಿದ್ದರೂ ಹಾಗೆ ಮಾಡದೆ ಮೊದಲ ಒಪ್ಪಂದದ ಹಣವನ್ನೇ ಪಡೆದ ಏಕೈಕ ನಾಯಕ ದ್ರಾವಿಡ್. ಇವೆಲ್ಲವೂ ದ್ರಾವಿಡ್ ರ ನೈಜ ಹಾಗೂ ನಿಸ್ವಾರ‍್ತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 2004 ರಲ್ಲಿ ಅವರು ಕರ‍್ನಾಟಕ ಪ್ರವಾಸೋದ್ಯಮದ ರಾಯಬಾರಿ ಆಗಿದ್ದರು. ಶಿಸ್ತಿಗೆ ಇನ್ನೊಂದು ಹೆಸರಾದ ದ್ರಾವಿಡ್ ಜನರಲ್ಲಿ ಸಂಚಾರಿ ನಿಯಮದ ಅರಿವು ಮೂಡಿಸಲು 2012 ರಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ನ ರಾಯಬಾರಿ ಕೂಡ ಆಗಿದ್ದರು.

ದ್ರಾವಿಡ್ ರ ಕ್ರಿಕೆಟ್ ಸಾದನೆ ಅದ್ವಿತೀಯ. ಅದರ ಹೊರತಾಗಿಯೂ ಅವರನ್ನು ಮೆಚ್ಚಲು ಹಾಗೂ ಅವರ ಗುಣಗಳನ್ನು ಆದರ‍್ಶವಾಗಿ ಸ್ವೀಕರಿಸಲು ಸಾಕಶ್ಟು ಕಾರಣಗಳಿವೆ. ತೆಂಡೂಲ್ಕರ್ ಬಾರತ ಕಂಡ ಶ್ರೇಶ್ಟ ಬ್ಯಾಟ್ಸ್ಮನ್ ಆಗಿರಬಹುದು. ಆದರೆ ದ್ರಾವಿಡ್ ಶ್ರೇಶ್ಟ ಬ್ಯಾಟ್ಸ್ಮನ್ ಅಶ್ಟೇ ಅಲ್ಲದೇ ಶ್ರೇಶ್ಟ ‘ಕ್ರಿಕೆಟಿಗ’ ಅಂದರೆ ಅತಿಶಯವೇನಲ್ಲ. ಇಂತಹ ಒಬ್ಬ ಆಟಗಾರ ನಮ್ಮ ರಾಜ್ಯದವರು ಅನ್ನೋದು ಕನ್ನಡಿಗರಿಗೆ ಎಂತಾ ಹೆಮ್ಮೆ ಅಲ್ವೇ!!

( ಚಿತ್ರಸೆಲೆ : dailyasianage.com, india.com, in.news.yahoo.com, deccanherald.com, espncricinfo.com, icc-cricket.com, wallpapercave.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. The Last Samurai says:

    ಇದು ದ್ರಾವಿಡ್ ಬಗ್ಗೆ ನಾನು ಓದಿದ ಉತ್ತಮ ಲೇಖನಗಳಲ್ಲಿ ಒಂದು.. Nice summary of all important phases of his life. ದ್ರಾವಿಡ್ ಅವರ ಕಮಿಟ್ಟಮೆಂಟ್ ಮತ್ತು ಸರಳತೆಯನ್ನು ಮೀರಿಸೋ ಆಟಗಾರ ಮುಂದಿನ ದಿನಗಳಲ್ಲಿ ಹುಟ್ಟಿಬರುವುದು ಅಸಾಧ್ಯ ಅಂತಾನೆ ಅನ್ಸತ್ತೆ!

  2. ವಿಶಾಲಾಕ್ಷಿ says:

    ನಮ್ಮ ಜಾಮ್ಮಿ ಬಗ್ಗೆ ಬಹಳ ವಿವರವಾಗಿ ಬರೆದ ಬರಹ. ಅವರು ಬೆಳೆದು ಬಂದ ದಾರಿ, ಹಂತ ಹಂತವಾಗಿ ತುಂಬಾ ಚೆನ್ನಾಗಿ ಬರೆದಿದ್ದೀರಿ. ?

  3. thippanna m.s. jamadagni says:

    Fantastic article.

ಅನಿಸಿಕೆ ಬರೆಯಿರಿ: