ಆ ಐದು ನಿಮಿಶಗಳು!

ಕೆ.ವಿ.ಶಶಿದರ.

ಸೈನಿಕ

‘ಪಪ್ಪಾ… ಐದು ನಿಮಿಶ ಪ್ಲೀಸ್’
ತಾನು ಕರೆದಾಕ್ಶಣ ಬಳಿ ಬಂದ ಪುಟಾಣಿ ರುತ್ವಿಕ್ ತನ್ನ ಪುಟ್ಟ ಬಲಗೈ ಮೂರು ಬೆರಳುಗಳನ್ನು ತೋರಿಸುವ ಸಲುವಾಗಿ ಕಶ್ಟಪಟ್ಟು ಎರಡು ಬೆರಳುಗಳನ್ನು ಎಡ ಕೈಯಿಂದ ಮಡಚಿ ಗೋಗರೆದಾಗ ಅಜ್ಜನಿಗೆ ಮಾತೇ ಹೊರಡಲಿಲ್ಲ. ಮುಕದಲ್ಲಿನ ಗಿರಿಜಾ ಮೀಸೆ ಕೆಳಗೆ ಕಿರುನಗೆ ಮೂಡಿ ಮಾಯವಾಯಿತು. ತಮಗೇ ಅರಿವಿಲ್ಲದಂತೆ ಗೋಣಾಡಿಸಿ ಪುಟ್ಟನ ವಿನಂತಿಗೆ ಸಮ್ಮತಿಸಿದ್ದರು. ಮತ್ತೆ ಪುಟ್ಟ ಓಡಿ ಹೋಗಿ ತನ್ನ ಗೆಳೆಯರನ್ನು ಕೂಡಿಕೊಂಡ.

ಅಜ್ಜ ಮಕ್ಕಳಾಡುವ ಆಟವನ್ನೇ ಗಮನಿಸುತ್ತಾ ಕುಳಿತರು. ಬಹುಶಹ ತನ್ನ ಮಗ ಸಹ ಈ ವಯಸ್ಸಿನಲ್ಲಿ ಹೀಗೆಯೇ ಅವರಮ್ಮನನ್ನು ಪೀಡಿಸಿರಬಹುದು. ಆಕೆಯೂ ಇದೇ ರೀತಿಯಲ್ಲಿ ಅವನಿಗೆ ಸಮ್ಮತಿಸಿರಬಹುದು. ಮಗ ಆಡುವ ರೀತಿ ಕಂಡು ಆ ಹೆಣ್ಣು ಹ್ರುದಯ ತನ್ನೆಲ್ಲಾ ನೋವುಗಳನ್ನು ಮರೆತಿರಬಹುದು. ಏಕಾಗ್ರತೆಯಿಂದ ತನ್ನ ಪಾಲಿಗೆ ಬಂದ ಕರ‍್ತವ್ಯವನ್ನು ಯಾವುದೇ ತಕರಾರಿಲ್ಲದೆ ನಿಬಾಯಿಸಿದ್ದಳು. ‘she is great’ ಎಂದುಕೊಳ್ಳುತ್ತಾ ಮೀಸೆಯ ಬಲತುದಿಯನ್ನು ತಿರುವತ್ತಾ ಪತ್ನಿಯ ಬಗ್ಗೆ ಹೆಮ್ಮೆಪಟ್ಟುಕೊಂಡರು ಅಜ್ಜ. ತನಗಾಗ ತನ್ನದೇ ಪ್ರಪಂಚ. ದಿನ ಬೆಳಗಾದರೆ ಕವಾಯತು, ಕಚೇರಿ. ಶಿಸ್ತಿಗೆ ಹೆಸರಾದ ರೆಜಿಮೆಂಟಿನಲ್ಲಿ ಆದಿಕಾರಿ. ದಿನಚರಿ ಬಹಳ ಕಟ್ಟುನಿಟ್ಟು. ಬೆಳಿಗ್ಗೆ ಆರರಿಂದ ಎಂಟರವರೆಗೆ ಕವಾಯತು. ನಂತರ ಒಂದೆರಡು ಗಂಟೆ ಬಿಡುವು. ಮತ್ತೆ ಕಚೇರಿ ಕೆಲಸ. ಮತ್ತೆ ಸಂಜೆ ಕವಾಯತು. ಬೆಳಗಾದ ಸ್ವಲ್ಪ ಹೊತ್ತಿನಲ್ಲೇ ರಾತ್ರಿಯಾಗುವುದು. ಕೆಲಸದ ಒತ್ತಡ ಹಾಗಿತ್ತು. ರಜೆ ಮರೀಚಿಕೆಯೇ. ಕಟ್ಟಿಕೊಂಡ ಹೆಂಡತಿಗೇ ಅಪರೂಪವಾಗಿದ್ದ ಕಾಲವದು!

ಹೆಂಡತಿಗೆ, ಮಕ್ಕಳೇ ಎಲ್ಲಾ ರೀತಿಯ ಮನರಂಜನೆ. ಆವುಗಳ ಆಟ ಪಾಟದಲ್ಲೇ ದಿನ ದೂಡುತ್ತಿದ್ದ ಪತ್ನಿಯರ ತ್ಯಾಗ, ದೇಶಕ್ಕಾಗಿ ಸಕಲವನ್ನು ಮುಡಿಪಿಟ್ಟ ಸೈನಿಕರಿಗಿಂತಾ ಹೆಚ್ಚು. ಯುದ್ದ ಬೂಮಿಯಲ್ಲಿ ಶತ್ರು ಪಡೆ ಮೇಲೆ ಗುಂಡು ಹಾರಿಸದೇ ಇರಬಹುದು, ವೈರಿ ಟ್ಯಾಂಕುಗಳನ್ನು ಉಡಾಯಿಸದೇ ಇರಬಹುದು, ಆಗಸದಿಂದ ಶತ್ರು ಪ್ರದೇಶದ ಮೇಲೆ ಬಾಂಬ್‍ಗಳನ್ನು ಸಿಡಿಸದೇ ಇರಬಹುದು, ಆದರೂ ನಿಜವಾದ ತ್ಯಾಗಮಯಿಗಳು ಇವರು. ಹೋದ ಗಂಡ ಹಿಂದಿರುಗಿ ಬರವಸೆಯಿಲ್ಲದಿದ್ದರೂ ದೈರ‍್ಯವಾಗಿ ಎಲ್ಲವನ್ನೂ ಎದುರಿಸಲು ಸಿದ್ದವಾಗಿದ್ದ ಅವರಿಗೊಂದು ದೊಡ್ಡ ಸಲಾಮ್. ವರಿಸಿದ ಗಂಡನಿಗಾಗಿ, ಹೆತ್ತ ಮಗುವಿಗಾಗಿ ಯೌವನ, ಆಸೆ, ಆಕಾಂಕ್ಶೆ ಸರ‍್ವಸ್ವವನ್ನು ತ್ಯಾಗ ಮಾಡಿ, ದ್ರುಡ ಮನಸ್ಸಿನಿಂದ ದೇಶದ ಒಳಿತಿಗಾಗಿ, ಮಕ್ಕಳ ಬವಿಶ್ಯಕ್ಕಾಗಿ, ದಿನವಿಡಿ ಯಾವುದೇ ಪಲಾಪೇಕ್ಶೆಯಿಲ್ಲದೆ ದುಡಿಯುವ ಹೆಣ್ಣು ಕುಲಕ್ಕೆ ಸೇರಿದವಳು ಅವಳು. ಹೆಮ್ಮೆ ಅನಿಸಿತು ಅವರಿಗೆ.

‘ಪಪ್ಪಾ… ಐದು ನಿಮಿಶ ಪ್ಲೀಸ್’ ಎಂದು ಮಗ ಕೇಳಲು ತಾವೇ ಅವನಿಗೆ ಅವಕಾಶವೇ ನೀಡಿರಲಿಲ್ಲ. ಸದಾಕಾಲ ಕಚೇರಿ, ಪ್ರವಾಸ ಎಂದೇ ದಿನದ ಬಹುಪಾಲು ಸಮಯ ಕಳೆದುಹೋಗುತ್ತಿದ್ದ ಕಾರಣ ಮನೆಯವರಿಗಾಗಿ ಮೀಸಲಿಟ್ಟ ಸಮಯ ಇಲ್ಲವೇ ಇಲ್ಲ ಎನ್ನಬಹುದು. ಬಹುಶಹ ಅವನು ಅವರಮ್ಮನ ಬಳಿ ‘ಅಮ್ಮಾ… ಐದು ನಿಮಿಶ ಪ್ಲೀಸ್’ ಎಂದು ಕೇಳಿರಬಹುದಲ್ಲವೆ ಆಕೆ ಎಶ್ಟು ಪುಣ್ಯವಂತೆ! ಮಗನನ್ನು ಸರಿಯಾಗಿ ನೋಡುವ ಹೊತ್ತಿಗೆ ಅವ ಸೆಕೆಂಡರಿ ಶಾಲೆಗೆ ದಾಕಲಾಗಿದ್ದ. ಅಲ್ಲಿಂದ ಅವನ ಬಹುಪಾಲು ಸಮಯ ಹೋಂ ವರ‍್ಕ್, ಪ್ರಾಜೆಕ್ಟ್, ಕ್ರಿಕೆಟ್, ಸ್ನೇಹಿತರು ಹೀಗೆ ಕಳೆದ ಹೋಗುತ್ತಿತ್ತು. ಅಪ್ಪನ ಜೊತೆ, ಅಪ್ಪ ಮನೆಯಲ್ಲಿದ್ದ ಸಮಯದಲ್ಲಿ, ಕಳೆಯುವುದು ಕನಸಾಗಿತ್ತು. ಅದಕ್ಕವನು ಒಗ್ಗಿ ಹೋಗಿದ್ದ ಕೂಡ.

‘ಪುಟ್ಟಾ… ಗಂಟೆ ಆರೂವರೆಯಾಯಿತು. ಬಾ ಮರಿ ಹೋಗೋಣ’ ಮತ್ತೆ ಮೊಮ್ಮಗನನ್ನ ಕರೆದರು ಅಜ್ಜ. ಪುಟಾಣಿ ರುತ್ವಿಕ್ ಬಳಿಗೆ ಓಡಿಬಂದು, ಮತ್ತೆ ತನ್ನ ಪುಟ್ಟ ಮೂರು ಬೆರಳುಗಳನ್ನು ತೋರಿಸುತ್ತಾ ‘ಇನ್ನೊಂದು ಐದು ನಿಮಿಶ ಪಪ್ಪಾ… ಪ್ಲೀಸ್’ ಎಂದು ತನ್ನ ಮ್ರುದುವಾದ ಪುಟ್ಟ ಕೈಗಳಲ್ಲಿ ಅಜ್ಜನ ಗಲ್ಲ ಹಿಡಿದು ಗೋಗರೆದ. ಅಜ್ಜನಿಗೆ ಸ್ವರ‍್ಗಕ್ಕೆ ಮೂರೇ ಗೇಣು. ಮೀಸೆಯಡಿಯಲ್ಲೇ ನಸುನಗುತ್ತಾ ‘ಇಲ್ಲ.. ಇಲ್ಲ.. ಕಮಾನ್..ಪಾಪು. ಟೈಂ ಆಯ್ತು ಕಂದಾ.. ಬಾ ಹೋಗೋಣ. ಬಹಳಶ್ಟು ಹೋಂ ವರ‍್ಕ್ ಇದೆ. ಬಾ ಮರಿ ಬೇಗ ಹೋಗೋಣ…’ ಎಂದು ಮ್ರುದುವಾದ ಗಲ್ಲವನ್ನು ಹಿಡಿದು ಮುಕದ ಮೇಲೆ ಇಳಿದಿದ್ದ ಬೆವರ ಹನಿಯನ್ನು ಒರೆಸಿದರು. ಮನದ ತುಂಬಾ ಆಸೆ ತುಂಬಿಕೊಂಡಿದ್ದ ರುತ್ವಿಕ್‍ನನ್ನು ನೋಡಿದ ಅಜ್ಜನಿಗೆ ಮನದಲ್ಲಿ ’ಮಗು, ಮನ ತಣಿಯೇ ಆಡಲಿ’ ಎನ್ನುವ ಬಯಕೆ. ಕರ‍್ತವ್ಯ ಪ್ರಜ್ನೆ. ಎಚ್ಚರಿಸಲೇ ಬೇಕು. ಎಚ್ಚರಿಸಿದ್ದರು. ತಮ್ಮ ಕರ‍್ತವ್ಯ ಚಾಚೂ ತಪ್ಪದೆ ನಿರ‍್ವಹಿಸಿದ್ದರು ಅಜ್ಜ. ಆದರೂ ಮನದಲ್ಲೆಲ್ಲೋ ಪುಟ್ಟ ಮಗುವಿನ ಬಯಕೆಯನ್ನು ಈಡೇರಿಸುವ ಆಸೆ. ಮೊಮ್ಮಗನ ಆಸೆಗೆ ಸೋತುಹೋದರು. ‘ಲಾಸ್ಟ್ ಟೈಂ. ಓಕೆ… ಬರಿ ಐದು ನಿಮಿಶ… ನಾನು ಕರೆದ ತಕ್ಶಣ ಬಂದ್ಬಿಡಬೇಕು” ಅಜ್ಜ ಸಣ್ಣದೊಂದು ರೈಡರ್ ಹಾಕಿ ಮತ್ತೆ ಐದು ನಿಮಿಶ ಸಮಯ ವಿಸ್ತರಿಸಿದರು. ‘ಓಕೆ ಡ್ಯಾಡ್.’ ಎನ್ನುತ್ತಾ ರುತ್ವಿಕ್ ಚಿಗರೆ ಮರಿಯಂತೆ ಹಾರಿಕೊಂಡು ಓಡಿದ. ಕೋಟಿ ಕೊಟ್ಟರೂ ಸಿಗದ ಸಂತೋಶ ಅವನದಾಗಿತ್ತು. ಅವನತ್ತಲೇ ನೋಡುತ್ತಾ ಕುಳಿತರು ಅಜ್ಜ. ಕಣ್ತುಂಬಿ ಬಂತು. ಮುಕದಲ್ಲಿ ಮಂದಹಾಸ ಮನೆ ಮಾಡಿತ್ತು.

ಬೇಸಿಗೆಯ ಸಂಜೆ. ಅಪರೂಪಕ್ಕೆ ಎಲ್ಲಿಂದಲೋ ತಣ್ಣನೆ ಗಾಳಿ ಬೀಸ ತೊಡಗಿತು. ಅಜ್ಜನಿಗೆ ‘ಹಾಯ್…’ ಎನಿಸಿತು. ಕುಳಿತಿದ್ದ ಕಲ್ಲು ಬೆಂಚಿಗೆ ಹಾಗೇ ಒರಗಿ ಪುಟ್ಟಾ ಹೋದ ಕಡೆಗೆ ದ್ರುಶ್ಟಿ ನೆಟ್ಟರು. ಅಂದೂ ಅಶ್ಟೆ. ಮುಸ್ಸಂಜೆ ಸಮಯ. ಕೇಂದ್ರ ಕಚೇರಿಯಿಂದ ತುರ‍್ತು ಬುಲಾವ್. ಅತಿ ರಹಸ್ಯ ಕಾರ‍್ಯಾಚರಣೆ. ಅದರಲ್ಲಿ ಬಾಗಿಯಾಗಲೇ ಬೇಕಿತ್ತು. ಎಲ್ಲಿ? ಯಾವ ರೀತಿಯ ಕಾರ‍್ಯಾಚರಣೆ? ಲವಲೇಶ ಸುಳಿವೂ ಇರಲಿಲ್ಲ. ಸೇರಬೇಕಿದ್ದ ಸ್ತಳ ತಲಪುವ ಹೊತ್ತಿಗೆ ಬುಲಾವ್ ಬಂದಿದ್ದ ಎಲ್ಲಾ ಸೀನಿಯರ್ ಅದಿಕಾರಿಗಳೂ ಬಂದಾಗಿತ್ತು. ಜೀಪ್ ಹತ್ತಿ ಕುಳಿತೊಡನೆ ಪ್ರಯಾಣ ಸಾಗಿದ್ದು ಹತ್ತಿರದ ವಿಮಾನ ನಿಲ್ದಾಣದತ್ತ. ಅಲ್ಲಿಯೂ ಸಹ ಪುಟ್ಟ ವಿಮಾನವೊಂದು ಕಾದು ನಿಂತಿತ್ತು. ಎಲ್ಲರೂ, ಅಂದರೆ ಕ್ಯಾಪ್ಟನ್ ಮತ್ತು ಉಳಿದ ಒಂಬತ್ತು ಮಂದಿ ಹತ್ತಿದ ಕೂಡಲೆ ವಿಮಾನ ಗಗನಕ್ಕೆ ಹಾರಿತು. ವಿಮಾನ ನೀಲ ಆಗಸದಲ್ಲಿ ತೇಲಿ ಹೋಗುತ್ತಿರುವಾಗ ಕ್ಯಾಪ್ಟನ್ ಎಲ್ಲರನ್ನು ಹತ್ತಿರಕ್ಕೆ ಕರೆದು ಹೋಗುತ್ತಿರುವ ಸ್ತಳ, ಕಾರ‍್ಯಾಚರಣೆಯ ವಿವರ, ಅದಕ್ಕೆ ತಗಲಬಹುದಾದ ಸಮಯ, ಅವಶ್ಯಕತೆಯಿರುವ ಮದ್ದು ಗುಂಡುಗಳು, ಯಾರು ಯಾರು ಮೂಲ ಕಾರ‍್ಯಾಚರಣೆಯಲ್ಲಿ ಬಾಗಿಯಾಗಬೇಕು, ಅವರ ಕಾರ‍್ಯಗಳೇನು? ಯಾರು ಯಾರು ಬೇಸ್ ಕ್ಯಾಂಪಿನಲ್ಲಿ ಉಳಿಯಬೇಕು? ಉಳಿದವರ ಕಾರ‍್ಯಗಳೇನು? ಎಲ್ಲವನ್ನೂ ವಿಶದವಾಗಿ ಮನದಟ್ಟಾಗುವಂತೆ ಎಳೆಎಳೆಯಾಗಿ ಬಿಚ್ಚಿಟ್ಟರು. ಏನಾದರೂ ಅನುಮಾನವಿದ್ದರೆ ಇಲ್ಲೇ ಪರಿಹರಿಸಿಕೊಳ್ಳಿ ಎಂದು ಹೇಳುವುದನ್ನು ಮರೆಯಲಿಲ್ಲ. ‘ಏನು ಇಲ್ಲ’ ಎಂದು ಎಲ್ಲರೂ ಗೋಣಾಡಿಸಿದ ಮೇಲೆ ತಾವು ನಿರ‍್ಣಯಿಸಿದ್ದ ಕಾರ‍್ಯಾಚರಣೆಯ ರೂಪುರೇಶೆಗಳನ್ನು ಮತ್ತೊಮ್ಮೆ ಪರಾಂಬರಿಸಿ, ಎಲ್ಲಾ ಸರಿಯಿದೆ ಎನ್ನಿಸಿದ ನಂತರ ಹಾಗೆಯೇ ಯೋಚನಾ ಮಗ್ನರಾದರು.

ಸಂಜೆ ಏಳೂವರೆ ಗಂಟೆಗೆ ವಿಮಾನ ಮೊದಲೇ ನಿರ‍್ಣಯಿಸಿದ ನಿಲ್ದಾಣದಲ್ಲಿ ಇಳಿಯಿತು. ಅದರಲ್ಲಿದ್ದ ಎಲ್ಲಾ ಸಾಮಾನು ಸರಂಜಾಮುಗಳನ್ನು ಪಕ್ಕದಲ್ಲೇ ಅಣಿಯಾಗಿದ್ದ ಹೆಲಿಕಾಪ್ಟರ್‌ಗೆ ವರ‍್ಗಾಯಿಸಿ ಎಲ್ಲರೂ ಅದರಲ್ಲಿ ಕುಳಿತರು. ಕತ್ತಲಾಗಿತ್ತು. ಚಂದ್ರನನ್ನು ಹಿಡಿಯುವಂತೆ ಹೆಲಿಕಾಪ್ಟರ್ ಮೇಲಮೇಲಕ್ಕೆ ಏರುತ್ತಾ ಹೋಯಿತು. ಅಲ್ಲಿಂದ ಒಂದು ಗಂಟೆಯ ಪ್ರಯಾಣದ ನಂತರ ಹೆಲಿಕಾಪ್ಟರ್ ದಟ್ಟ ಕಾಡಿನ ಮೇಲೆ ಹಾರುತ್ತಿದ್ದಂತೆ ಬಾಸವಾಯಿತು. ಕ್ಯಾಪ್ಟನ್, ಸ್ತಳ ಪರಿಶೀಲನೆ ಮಾಡಿ ‘ಇದೇ ಸ್ತಳ’ ಎಂದು ನಿರ‍್ಣಯಿಸಿ ಒಬ್ಬೊಬ್ಬರಾಗಿ ಇಳಿಯಲು ಹಸಿರು ನಿಶಾನೆ ಕೊಟ್ಟರು. ಅವರ ನಿರ‍್ದೇಶನದಂತೆ ಹೆಲಿಕಾಪ್ಟರ್‌ನಿಂದ ಇಳಿಬಿಟ್ಟಿದ್ದ ಹಗ್ಗವನ್ನು ಹಿಡಿದು ತಮಗೆ ವಹಿಸಿದ್ದ ಸಾಮಾನು ಸರಂಜಾಮನ್ನು ಹೊತ್ತು ಒಬ್ಬೊಬ್ಬರೆ ಇಳಿಯತೊಡಗಿದರು. ಎಲ್ಲರೂ ಇಳಿದ ಮೇಲೆ ಹೆಲಿಕಾಪ್ಟರ್ ಕತ್ತಲಲ್ಲಿ ಕಣ್ಮರೆಯಾಯಿತು. ಸುತ್ತಲೂ ಗಾಡಾಂದಕಾರ ಕತ್ತಲು. ತಮ್ಮಲ್ಲಿದ್ದ ಪುಟ್ಟ ಟಾರ‍್ಚ್ ಆನ್ ಮಾಡಿ ಸದ್ದಿಲ್ಲದೆ ಕಾಡಿನಲ್ಲಿ ಮತ್ತೆಲ್ಲಾ ಗುಂಪು ಸೇರಿ ಕ್ಯಾಪ್ಟನ್ ಸೂಚಿಸಿದಂತೆ ಅಲ್ಲಿಂದ ಐದು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಕ್ರಮಿಸಿ, ಇದ್ದದ್ದರಲ್ಲಿ ಸಮತಟ್ಟಾದ ಪ್ರದೇಶದವನ್ನು ತಲುಪಿದರು. ಅಲ್ಲಿದ್ದ ಸಣ್ಣ ಸಣ್ಣ ಗಿಡ ಮುಳ್ಳುಗಳನ್ನು ತೆಗೆದು, ಕಾರ‍್ಯಾಚರಣೆಯವರೆಗೆ ಉಳಿಯಲು, ಹಾಗೂ ಕಾರ‍್ಯಾಚರಣೆಯ ನಂತರ ಒಟ್ಟಾಗಿ ಸೇರಲು ಸಣ್ಣ ಡೇರೆ ಹಾಕಲಾಯಿತು.

ಸೆಂಟ್ರಿಯಾಗಿ ಕೆಲಸ ನಿರ‍್ವಹಿಸಲು ಇಬ್ಬರನ್ನು ಆಯ್ಕೆ ಮಾಡಿ, ಅವರಿಗೆ ಕೆಲಸ ವಹಿಸಿ, ಉಳಿದವರೊಡನೆ ಡೇರೆ ಸೇರಿ ನಡೆಸಬೇಕಿದ್ದ ಕಾರ‍್ಯಾಚರಣೆಯ ಬಗ್ಗೆ ನಿಮಿಶ ನಿಮಿಶದ ವಿವರಣೆಯನ್ನು, ಉಳಿದವರು ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನೂ ನೀಡುತ್ತಾ ಹೋದರು ಕ್ಯಾಪ್ಟನ್. ಅಂದಿನ ರಾತ್ರಿ ಹನ್ನೆರಡು ಮತ್ತು ಎರಡು ಗಂಟೆಯ ಅವದಿಯೊಳಗೆ ಕಾರ‍್ಯಾಚರಣೆ ನಡೆಸಲು ಸಮಯ ನಿಗದಿಯಾಗಿದ್ದನ್ನು ಕ್ಯಾಪ್ಟನ್ ತಿಳಿಸಿದರು. ಅಲ್ಲಿಯವರೆಗೂ ವಿಶ್ರಾಂತಿ ಪಡೆಯಲು ಎಲ್ಲರಿಗೂ ತಿಳಿಸಿದ ಕ್ಯಾಪ್ಟನ್, ಎಲ್ಲರೂ ನಿಗಾ ವಹಿಸಿ ಕಾರ‍್ಯಾಚರಣೆ ಮಾಡಿ, ಈಗ ಹಾಕಿರುವ ಬಿಡಾರ ಶತ್ರು ರಾಶ್ಟ್ರದಲ್ಲಿರುವ ಕಾರಣ, ಕಾರ‍್ಯಾಚರಣೆ ಮುಗಿದ ಕೂಡಲೆ ಜಾಗ ಕಾಲಿ ಮಾಡಿ, ಹೆಲಿಕಾಪ್ಟರ್‌ನಿಂದ ಇಳಿದ ಸ್ತಳಕ್ಕೆ ತ್ವರಿತವಾಗಿ ಬೆಳಗಾಗುವುದರೊಳಗೆ ಸೇರುವುದು ಅನಿವಾರ‍್ಯ ಎಂತಲೂ, ಮತ್ತೊಮ್ಮೆ ಸ್ಪಶ್ಟವಾಗಿ ತಿಳಿಸಿದರು.

ರಾತ್ರಿ, ಆಗ ತಾನೆ ಹನ್ನೊಂದು ದಾಟಿರಬಹುದು. ಡೇರೆಯಲ್ಲಿ ಕುಳಿತಿದ್ದ ಕ್ಯಾಪ್ಟನ್ ಇದ್ದಕ್ಕಿಂದಂತೆ ಎದ್ದು ನಿಂತು, ಯಾರಿಗೂ ಸದ್ದು ಮಾಡದಂತೆ ಕೈತೋರಿಸಿದರು. ಮತ್ತೆ ಐದು ನಿಮಿಶ ನೀರವ ಮೌನ. ನಂತರ ಲಗುಬಗೆಯಿಂದ ತನ್ನೆಲ್ಲಾ ಪರಿಕರಗಳನ್ನು ಸಿದ್ದ ಪಡಿಸಿಕೊಂಡ ಕ್ಯಾಪ್ಟನ್ “ಜಸ್ಟ್ ಪೈವ್ ಮಿನಿಟ್ಸ್…” ಎನ್ನುತ್ತಾ ಡೇರೆಯಿಂದ ಹೊರ ನಡೆದರು. ಹೊರಟ ಹತ್ತು ಸೆಕೆಂಡುಗಳಲ್ಲಿ ಸೆಂಟ್ರಿರಿಗಳಿಗೂ ಕಾಣದಂತೆ ಕತ್ತಲಲ್ಲಿ ಲೀನವಾದರು. ಮತ್ತೈದು ನಿಮಿಶಗಳಲ್ಲಿ ಸುಮಾರು ದೂರದಿಂದ, ಗುಂಡುಗಳು ಹಾರಿದ ಶಬ್ದ ಕೇಳಿ ಬಂತು. ಕೇಳಿಬಂದ ಗುಂಡಿನ ಶಬ್ದದ ಗಾಡತೆಯಿಂದ ಅದು ಅಂದಾಜು ಇನ್ನೂರು-ಮುನ್ನೂರು ಮೀಟರ್ ದೂರದ ಪ್ರದೇಶದಲ್ಲಿ ನಡೆದಿರುವ ಚಕಮಕಿ ಎನಿಸಿತು. ಎಲ್ಲರಿಗೂ ಆತಂಕ. ಸುತ್ತಲೂ ಬೆಟ್ಟ ಗುಡ್ಡಗಳಿದ್ದಿದ್ದರಿಂದ ಅದರ ಪ್ರತಿದ್ವನಿಯ ತರಂಗಗಳು ಹತ್ತಾರು ಬಾರಿ ಕಿವಿಗೆ ಅಪ್ಪಳಿಸಿತ್ತು. ವಿರಮಿಸುತ್ತಿದ್ದವರಿಗೆಲ್ಲಾ ಏನೋ ಆಪತ್ತು ಸಂಬವಿಸಿದೆ ಎಂದು ಕಾತ್ರಿಯಾಯಿತು. ಕೂಡಲೆ ಎಲ್ಲರೂ ಜಾಗರೂಕರಾಗಿ, ಮದ್ದು ಗುಂಡುಗಳನ್ನು ಹಗಲಿಗೇರಿಸಿ ಸಜ್ಜಾದರು. ಗಂಟೆ ಹನ್ನೆರಡು ಸಮೀಪಿಸುತ್ತಿದೆ. ‘ಪೈವ್ ಮಿನಿಟ್ಸ್’ ಎಂದು ಹೇಳಿ ಹೋದ ಕ್ಯಾಪ್ಟನ್ ಇನ್ನೂ ಹಿಂದಿರುಗಿಲ್ಲ. ಒಬ್ಬರೆ ಏಕೆ ಹೋದರು? ಯಾರನ್ನಾದರು ಜೊತೆಯಲ್ಲಿ ಕರೆದೊಯ್ಯಬಹುದಿತ್ತಲ್ಲಾ? ಅವರ ಮನದಲ್ಲಿ ನಡೆದಿರಬಹುದಾದ ವಿಚಾರ ಸರಣಿ ಏನು? ಅವರ ನಡೆ ಯಾರಿಗೂ ಅರ‍್ತವಾಗಲಿಲ್ಲ. ಅದರ ಮದ್ಯೆ ಗುಂಡುಗಳು ಹಾರಿದ ಶಬ್ದ. ಎಲ್ಲರಿಗೂ ಆತಂಕ ಎದುರಾಯಿತು. ಕ್ಯಾಪ್ಟನ್ ‘ಪೈವ್ ಮಿನಿಟ್ಸ್’ ಅಂತ ಹೇಳಿ ಹೋಗಿದ್ದಾದರು ಎಲ್ಲಿಗೆ? ಅವರು ಇಲ್ಲಿಂದ ಹೋದ ಐದು ನಿಮಿಶದಲ್ಲಿ ಕೇಳಿ ಬಂದ ಗುಂಡಿನ ಶಬ್ದಕ್ಕೂ, ಇವರಿಗೂ ಏನಾದರು ಸಂಬಂದವಿದೆಯೆ? ಶತ್ರಗಳ ಸೀಮೆಯಲ್ಲಿರುವ ಕಾರಣ ಅವರಿಂದ ದಾಳಿಗೆ ಒಳಾಗದವೆ?

ಕ್ಯಾಪ್ಟನ್‍ಗೆ ಏನಾದರೂ ತೊಂದರೆಯಾಯಿತೇ? ಹಾಗೇನಾದರೂ ಆಗಿದ್ದಲ್ಲಿ ಮುಂದಿನ ಕಾರ‍್ಯಾಚರಣೆಯ ಮುಂದಾಳತ್ವ ಯಾರ ಹೆಗಲಿಗೆ? ಕಾರ‍್ಯಾಚರಣೆ ಮುಂದುವರೆಸಬೇಕಾ? ಇಲ್ಲಾ ಕ್ಯಾಪ್ಟನ್‍ರನ್ನು ಹುಡುಕಬೇಕಾ? ಗುಂಡಿನ ಚಕಮಕಿಯಲ್ಲಿ ಅವರಿಗೇನಾದರೂ ಆಗಿದ್ದರೆ? ಚೇ… ಇಲ್ಲ. ಹಾಗಾಗಿರಲು ಸಾದ್ಯವಿಲ್ಲ. ಆತ ಚಾಣಾಕ್ಶ, ಬಲಶಾಲಿ, ದೈರ‍್ಯವಂತ ಎಲ್ಲಕ್ಕೂ ಮಿಗಿಲಾಗಿ ಬುದ್ದಿವಂತ.. ಬಡಪೆಟ್ಟಿಗೆ ಸಿಕ್ಕಿಹಾಕಿಕೊಳ್ಳುವ ವ್ಯಕ್ತಿ ಅಲ್ಲ. ಅದರೂ ಎಲ್ಲರ ಮನದ ಮೂಲೆಯಲ್ಲಿ ಏನೋ ಆತಂಕ. ಅಕಸ್ಮಾತ್ ಏನಾದರೂ ಅವಗಡ ಸಂಬವಿಸಿಬಿಟ್ಟಿದ್ದರೆ? ಹಾಗಾಗುವುದು ಬೇಡ. ಎಲ್ಲರೂ ಮನದಲ್ಲೇ ಇಲ್ಲದ ದೇವರನ್ನು ಪ್ರಾರ‍್ತಿಸಿದರು, ಹನ್ನೆರೆಡು ಗಂಟೆಗೆ ಇನ್ನೈದು ನಿಮಿಶವಿದೆ. ಕಾರ‍್ಯಾಚರಣೆ ಪ್ರಾರಂಬವಾಗಬೇಕು. ಕ್ಯಾಪ್ಟನ್ ನಂತರ ಈತನೇ ಹಿರಿಯನಾದ ಕಾರಣ, ಮುಂದಾಳತ್ವದ ಹೊಣೆ ಇವನ ಹೆಗಲೇರಿತು. ಕ್ಯಾಪ್ಟನ್ ಸುಳಿವಿಲ್ಲದ ಕಾರಣ, ಕಾರ‍್ಯಾಚರಣೆಯಲ್ಲಿ ಬಾಗವಹಿಸುವವರನ್ನು ಬಿಟ್ಟು ಉಳಿದವರಿಗೆ, ಅವರನ್ನು ಹುಡುಕಿ ಡೇರೆಗೆ ವಾಪಸ್ಸು ತರುವ ಜವಾಬ್ದಾರಿ ವಹಿಸಿ, ಬಂದಿದ್ದ ಮೂಲ, ಮುಕ್ಯ ಕಾರ‍್ಯಾಚರಣೆ ನಡೆಸಲು ಹೊರಟಿತು ಆ ಗುಂಪು.

ಕ್ಯಾಪ್ಟನ್ ಕಾಣೆಯಾಗಿರುವ ನೋವು, ಅವರಿಗೇನಾಗಿದೆ? ಎಂದು ತಿಳಿಯದೆ, ಅವರನ್ನು ಹುಡುಕಲು ತಾವುಗಳು ಪ್ರಯತ್ನಿಸದೆ, ದೇಶದ ಹಿತಕ್ಕಾಗಿ ತಮ್ಮ ಪಾಲಿನ ಕಾರ‍್ಯಾಚರಣೆ ನಡೆಸಲು ಹೋಗುತ್ತಿದ್ದುದು, ಒಂದು ರೀತಿಯ ಮಿಶ್ರ ಬಾವನೆ ಅವರೆಲ್ಲರ ಮನದಲ್ಲಿ ಮೂಡಿತ್ತು. ತಾವು ಮಾಡುತ್ತಿರುವುದು ‘ಸೈ’ ಎನ್ನುವ ಬಾವನೆ ಎಲ್ಲರಲ್ಲಿತ್ತು. ಯಾರೊಬ್ಬ ಯೋದನಿಗಿಂತಲೂ ದೇಶ ದೊಡ್ಡದು ಎಂಬುದು ಅರಿವಾಗಿ, ಅದನ್ನು ಪ್ರಮಾಣೀಕರಿಸಲು ಸೂಕ್ತ ಸಮಯ ಇದು ಎಂದುಕೊಂಡು, ಯಾವುದೇ ಚ್ಯುತಿ ಬರದಂತೆ ಕಾರ‍್ಯಾಚರಣೆ ಮಾಡುವ ಎಂದು ಉಳಿದವರನ್ನು ಹುರಿದುಂಬಿಸಿ ಹೆಜ್ಜೆ ಹಾಕಲು ಆರಂಬಿಸಿದರು. ಪ್ರಾಣದ ಹಂಗು ತೊರೆದು, ಕ್ಯಾಪ್ಟನ್ ಬಗ್ಗೆಯೂ ಯೋಚಿಸದೆ, ಚಿಂತಿಸದೆ, ಅವರು ಹಾಕಿಕೊಟ್ಟ ಯೋಜನೆಯಂತೆ ಕಾರ‍್ಯಾಚರಣೆಯನ್ನು ಕರಾರುವಾಕ್ಕಾಗಿ ಮುಗಿಸಿದ ತಂಡ, ಯಾವುದೇ ಪ್ರಾಣ ಹಾನಿಯಿಲ್ಲದೆ ಡೇರೆಗೆ ಹಿಂದಿರುಗಿದಾಗ ಆಗಿನ್ನೂ ಎರಡು ಗಂಟೆ ದಾಟಿ ಹತ್ತು ನಿಮಿಶ. ಅಶ್ಟರಲ್ಲಿ ಡೇರೆಯಲ್ಲಿದ್ದವರು ಕ್ಯಾಪ್ಟನ್‍ರನ್ನು ಆ ಗಾಡಾಂದಕಾರ ಕತ್ತಲಲ್ಲಿ ಹುಡುಕಿ, ಬಯಂಕರವಾಗಿ ಗಾಯಗೊಂಡಿದ್ದ ಅವರನ್ನು ಹೊತ್ತು ತಂದು ಮಲಗಿಸಿದ್ದರು. ಕ್ಯಾಪ್ಟನ್‍ರನ್ನು ಕಂಡ ಕುಶಿ ಒಂದೆಡೆಯಾದರೆ, ಅವರ ಸ್ತಿತಿ ನೋಡಿ ಕರಳು ಬಿರಿಯಿತು. ಮೈಕೈ ಎಲ್ಲಾ ಕಡೆ ಗುಂಡುಗಳು ತೂರಿದ ಗಾಯ. ಎಡ ತೊಡೆಗೆ ಬಿದ್ದ ಗುಂಡಿನಿಂದ, ಕಾಲು ಆಡಿಸದಂತಾಗಿದ್ದು ನೋಡಿ ಎಲ್ಲರಿಗೂ ಸಂಕಟವಾಯಿತು. ಅವರ ಸ್ತಿತಿ ನೋಡಿ ‘ಏನಾಯಿತು?’ ಎಂದು ವಿಚಾರಿಸುವಶ್ಟರಲ್ಲಿ, ಅವರೇ ಬಲವಂತದಿಂದ ರಕ್ತ ಸಿಕ್ತ ಬಲಗೈ ಮೇಲೆತ್ತಿ ಎಲ್ಲರಿಗೂ ‘ತ್ಯಾಂಕ್ಸ್’ ಕೊಡುವ ಸಂಜ್ನೆ ಮಾಡಿದರು. ಆ ನೋವಿನಲ್ಲೂ ಕ್ಯಾಪ್ಟನ್ ಮುಕದಲ್ಲಿ ಮಂದಹಾಸ ಮಿಂಚಿತು. ಎಲ್ಲರಿಗೂ ಹ್ರುದಯ ತುಂಬಿ ಬಂತು. ಕಾರ‍್ಯಾಚರಣೆಗೆ ಹೋಗಿ ಬಂದಿದ್ದಕ್ಕೆ “ತಮ್ಸ್ ಅಪ್” ಮಾಡಿ ಶ್ಲಾಗಿಸಿದರು. ಕಾರ‍್ಯಾಚರಣೆಯ ಪೂರ‍್ಣ ವಿವರ ತಿಳಿದಾಗ, ಅವರ ಮುಕದಲ್ಲಿ ದನ್ಯತಾ ಬಾವ ಮೂಡಿತು. ಎಲ್ಲರನ್ನೂ ಪ್ರಶಂಸಿಸುವಂತೆ, ಆ ನೋವಿನಲ್ಲೂ ಸೆಲ್ಯೂಟ್ ಹೊಡೆದು, ಆಯಾಸ, ನೋವು ತಡೆಯಲಾರದೆ ಹಾಗೇ ಮೆಲ್ಲನೆ ಕಣ್ಣು ಮುಚ್ಚಿದರು. ಮುಕದಲ್ಲ್ಲಿ ಸಂತ್ರುಪ್ತಿ ಮನೆಮಾಡಿತ್ತು. ದೇಶಕ್ಕಾಗಿ ಪ್ರಾಣ ತೆತ್ತ ದೈನ್ಯತೆ ಮುಕವನ್ನು ಪ್ರಸನ್ನವಾಗಿಸಿತ್ತು. ಸಲ್ಯೂಟ್ ಮಾಡಿದ ಕೈ ಹಾಗೇ ಹಣೆಯ ಮೇಲಿಂದ ಜಾರಿತು. ಪ್ರಾಣ ಪಕ್ಶಿ ಹಾರಿಹೋಗಿತ್ತು.
‘ಅಜ್ಜಾ…. ಅಜ್ಜಾ… ಬಾ ಹೋಗೋಣ?’ ರುತ್ವಿಕ್ ಮೈ ಹಿಡಿದು ಅಲ್ಲಾಡಿಸಿದಾಗಲೇ ನೆನಪಿನ ಸುಳಿಯಿಂದ ಹೊರಬಂದಿದ್ದು. ಬಾರವಾದ ಹ್ರುದಯದಿಂದ, ಮೊಮ್ಮಗನ ಕೈ ಹಿಡಿದು, ಮಲ್ಲನೆ ಮನೆಯತ್ತ ಹೆಜ್ಜೆ ಹಾಕಿದರು.

(ಚಿತ್ರ ಸೆಲೆ: commons.wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: