ಬೆಟ್ಟದ ಕರಡಿಯ ಕೂಗು

– ಶಾಂತ್ ಸಂಪಿಗೆ.

ಬೆಟ್ಟದ ಕರಡಿ

ಕರಡಿ ಒಂದು ವಿಶಿಶ್ಟವಾದ, ಹೆಚ್ಚು ನಾಚಿಕೆ ಸ್ವಬಾವವುಳ್ಳ ಪ್ರಾಣಿ ಮತ್ತು ಯಾರ ಕಣ್ಣಿಗೂ ಕಾಣದೆ ಬೆಟ್ಟ, ಗುಡ್ಡದ ಗವಿಗಳಲ್ಲಿ ವಾಸಿಸುತ್ತ ಅಳಿವಿನ ಅಂಚಿನಲ್ಲಿರುವ ಜೀವ ಪ್ರಬೇದ. ಊರಿನಲ್ಲಿ ರಾತ್ರಿಯಾದರೆ ಸಾಕು, ಎಲ್ಲರೂ ಬೆಟ್ಟದ ಕರಡಿಗೆ ಹೆದರಿ ಬೇಗ ಮಲಗಿಬಿಡುತ್ತಾರೆ. ಊರಿನ ಯಾವ ಬೀದಿಯಲ್ಲು ಜನರ ಸುಳಿವಿಲ್ಲದೆ ಮೌನ ಆವರಿಸಿರುತ್ತದೆ. ಇಂತಹ ಸಮಯದಲ್ಲಿ ಆ ಬೆಟ್ಟದ ಕರಡಿ ಊರಿನ ಕಡೆ ದಾವಿಸುತ್ತದೆ. ಆ ಕರಡಿಯ ಆಗಮನ ಊರಿನ ಎಲ್ಲರಿಗೂ ತಿಳಿಯುತ್ತದೆ, ಹೇಗೆಂದರೆ ಅದರ ಕೂಗು ಬಯಂಕರವಾಗಿರುತ್ತೆ. ಸಣ್ಣ ಮಕ್ಕಳ ಎದೆಯಲ್ಲಿ ನಡುಕ ಹುಟ್ಟಿಸಿ, ದೊಡ್ಡವರಲ್ಲಿ ಬಯವನ್ನು ಮೂಡಿಸಿ ಊರಿನ ಬೀದಿ ಬೀದಿಗಳಲ್ಲಿ ನಿರ‍್ಬಯವಾಗಿ ತಿರುಗಾಡುತ್ತದೆ.

ಈ ಬೆಟ್ಟದ ಕರಡಿಗೆ ಬೆಳಕು ಎಂದರೆ ಶಾಪವಾಗಿದೆ ಎನಿಸುತ್ತದೆ. ರಾತ್ರಿ ವೇಳೆ ಊರಿನ ಬೀದಿಗಳಲ್ಲಿ ದೈರ‍್ಯವಾಗಿ ತಿರುಗಾಡುವ ಕರಡಿ ಹಗಲಾಗುತ್ತಿದ್ದಂತೆ ಬೆಟ್ಟದ ಮೇಲೇರಿ ಕಲ್ಲುಗವಿಗಳಲ್ಲಿ ಅಡಗಿಕೊಳ್ಳುತ್ತದೆ. ಊರಿನ ಅನೇಕ ಹಿರಿಯರು ಬೆಟ್ಟದ ಕರಡಿಯನ್ನು ದೇವರೆಂದು ಪೂಜಿಸುತ್ತಾರೆ ಮತ್ತು ಅದನ್ನು ಕೊಲ್ಲಬಾರದು ಎಂದು ಕಿರಿಯರಿಗೆ ಬುದ್ದಿ ಹೇಳುತ್ತಾರೆ. ಏಕೆಂದರೆ ಅನೇಕ ವರುಶಗಳಿಂದ ರಾತ್ರಿ ವೇಳೆ ಊರನ್ನು ಗಸ್ತು ತಿರುಗಿ ನಮ್ಮನ್ನು ಕಾಯುತ್ತದೆ ಎನ್ನುವ ನಂಬಿಕೆ ಜನರಿಗೆ.

ಬೆಟ್ಟದ ಕರಡಿ ಅನೇಕ ವರುಶಗಳಿಂದ ಊರನ್ನು ಕಾಯುತ್ತಿದೆ, ಆದರೆ ಯಾರಿಗೂ ಒಂದು ಸಣ್ಣ ತೊಂದರೆಯನ್ನು ಮಾಡಿಲ್ಲ ಮತ್ತು ಹಗಲೊತ್ತು ಯಾರ ಕಣ್ಣಿಗೂ ಕಾಣಿಸಿಕೊಂಡೇ ಇಲ್ಲ ಎನ್ನುತ್ತಾರೆ ಊರಿನ ಜನ. ನನಗೆ ನನ್ನ ಊರಿನಲ್ಲಿ ಕಳೆದ ಎಳವೆಯ ದಿನಗಳು ನೆನಪಾಗುತ್ತವೆ.  ಆಗ ಜನ, ಕರಡಿಗಳನ್ನು ಹಿಡಿದು ಮನೆಗಳಲ್ಲಿ ಸಾಕುತ್ತಿದ್ದರು ಮತ್ತು ಊರಿಂದ ಊರಿಗೆ ಕರೆದೊಯ್ದು ಸಣ್ಣ ಮಕ್ಕಳಿಗೆ ಹೆದರಿಕೆ ಹೋಗಲಾಡಿಸಲು ಜಾಂಬವಂತನ ಆಶೀರ‍್ವಾದ ಮಾಡಿಸುತ್ತಿದ್ದರು. ಅವರು ಕರಡಿಯ ಮುಂದೆ ನಿಂತು ಹೇಳುತ್ತಿದ್ದ ಆ ಮಾತುಗಳೇ ಅತ್ಯಂತ ಚಂದವಾಗಿತ್ತು – “ಮಕ್ಕಳು, ಚಿಕ್ಕವರು, ದೊಡ್ಡವರು, ಬಸರಿಯರು, ಬಾಣಂತಿಯರು, ಮನೆ ಯಜಮಾನ, ಯಜಮಾನತಿ ಬೆದರಿದ್ದು ಬೆಚ್ಚಿದ್ದು, ಬೀತಿಗೆ ಹೆದರಿದ್ದು, ದಾರೀಲಿ ಬಿದ್ದಿದ್ದು, ನಿದ್ದೆ ಕಣ್ಣಲ್ಲಿ ಬೆಚ್ಚಿದ್ದು, ಪೀಡೆ, ಪಿಶಾಚಿಗೆ ಹೆದರಿದ್ದು, ಎಲ್ಲ ಕಳೆದೋಗಲಿ ಅಂತ ಆಶೀರ‍್ವಾದ ಮಾಡು ಜಾಂಬವಂತ” ಅಂತ ಹೇಳಿದರೆ ಕರಡಿ ಆಶೀರ‍್ವಾದ ಮಾಡಿ ಬಾಯಲ್ಲಿ ತಾಯತವನ್ನು ಎಸೆಯುತ್ತಿತ್ತು,

ಆದರೆ ಈಗ ಕರಡಿಗಳ ಸಂಕ್ಯೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿವೆ ಈ ಜೀವ ಪ್ರಬೇದ. ಊರಿನ ಎಲ್ಲಾ ಜನರು ಬೆಟ್ಟದ ಕರಡಿಗೆ ಬಯಪಡುತ್ತಿದ್ದಾರೆ. ಅದು ವಿಚಿತ್ರವಾಗಿ ಕೂಗುವ ಪರಿಗೆ ಬೆಚ್ಚಿದ್ದಾರೆ. ಆದರೆ ಸೂಕ್ಶ್ಮವಾಗಿ ಕೇಳಿದರೆ, ಈ ಬೆಟ್ಟದ ಕರಡಿಯ ಕೂಗು ಬೇರೆಯದೇ ಕಾರಣಕ್ಕೆ ಕಾಡುವುದು. ಊರಿನ ಬೆಟ್ಟದ ಕಡೆ ಸಾಗಿದರೆ ಬೆಟ್ಟವೆಲ್ಲವು ಬಯಲಾಗಿರುವುದು ಕಾಣುತ್ತದೆ. ಸ್ವಲ್ಪ ಬಂಜರು ಬೂಮಿ, ಕಲ್ಲುಗಳಿಂದ ಕೂಡಿದ ಜಾಗ ಬಿಟ್ಟು ಸುತ್ತ ಎಲ್ಲಾ ಕಡೆ ಹೊಲ. ಜನ ತಮ್ಮ ಹೊಲಗಳಲ್ಲಿ ಆಯುದಗಳನ್ನು ಇಟ್ಟುಕೊಂಡು ಕರಡಿದಾಳಿ ಎದುರಿಸಲು ಸಜ್ಜಾಗಿರುತ್ತಾರೆ.

ಆದರೆ ಆ ಮೂಕ ಪ್ರಾಣಿ ಇದೆಲ್ಲವನ್ನು ಸಹಿಸಿ ಬೆಟ್ಟದ ಕಲ್ಲು ಗವಿಗಳಲ್ಲಿ ಹಸಿವಿನಿಂದ ನರಳುತ್ತ, ಬಾಯಾರಿಕೆಯಿಂದ ಬಳಲುತ್ತ, ಮುಳ್ಳಿನ ಗಿಡದ ಕೆಳಗೆ ಇರುವ ಗೆದ್ದಲು ಹುಳಗಳನ್ನು ತಿಂದು ಬದುಕಿರುವ ಬಗೆ ನೋಡಿದರೆ ಅಚ್ಚರಿ ಜೊತೆಗೆ ಮರುಕ ಉಂಟಾಗದೇ ಇರದು. ಬೆಟ್ಟದ ಕೆಳಗೆ ಇರುವ ಕೆರೆಯ ಮೀನುಗಳನ್ನಾದರು ತಿನ್ನೋಣವೆಂದರೆ, ಮನುಶ್ಯರು ಆಗಲೆ ಮೀನನ್ನು ಹಿಡಿಯಲು ಬಲೆ ಹಾಸಿ ಕಾಯುತ್ತ ಕುಳಿತಿರುವ ದ್ರುಶ್ಯ ಕರಡಿಗೆ ಮತ್ತೆ ಅವಿತುಕೊಳ್ಳುವಂತೆ ಪ್ರೇರೇಪಿಸುತ್ತದೆ. ಮೊದಲು ಬೆಟ್ಟದಲ್ಲಿ ವಿವಿದ ರೀತಿಯ ಹಣ್ಣುಗಳು ದೊರೆಯುತ್ತಿದ್ದವು ಆದರೆ ಈಗ ಒಂದು ಮರವೂ ಬೆಟ್ಟದಲ್ಲಿ ಸಿಗದ ಹಾಗೆ ಆಗಿದೆ, ಇನ್ನು ಹಣ್ಣುಗಳು ಎಲ್ಲಿಂದ ಬರಬೇಕು.

ಬೆಟ್ಟದ ಕರಡಿಯ ಕೂಗು ನಮ್ಮ ಒಳಮನಸಿನ ಕದ ತಟ್ಟುತ್ತದೆ. ಬೆಟ್ಟದ ಕರಡಿಗೆ ಈಗ ಅಗತ್ಯವಾಗಿ ಸಹಾಯ ಬೇಕಿದೆ ಎಂದೆನಿಸುತ್ತದೆ. ಬೆಟ್ಟದ ಕರಡಿ ಊರೆಲ್ಲ ಅಲೆದು, ‘ನಮ್ಮನ್ನು ರಕ್ಶಿಸಿ’ ಅಂತ ಕೇಳುತ್ತಿರುವಂತೆ ಅನಿಸುತ್ತದೆ. ಆದರೆ ಬುದ್ದಿವಂತ ಮಾನವ ಕುಲ ಈಗಲಾದರು ಬೆಟ್ಟದ ಕರಡಿಯ ಬಾವನೆಯನ್ನು ಅರ‍್ತಮಾಡಿಕೊಳ್ಳುವುದೇ ಮತ್ತು ಕರಡಿ ಸಂಕುಲವನ್ನು ರಕ್ಶಿಸುವುದೇ ಎನ್ನುವುದು ಚಿಂತನೆಯ ಸಂಗತಿ. ಬೆಟ್ಟದ ಕರಡಿಯ ರಕ್ಶಣೆಗೆ ಜನರ ನಡುವೆ ಸಹಕಾರ ಬೇಕು, ಊರು ಊರಲ್ಲಿ ಜಾಗ್ರುತಿಯಾಗಬೇಕು. ಬೆಟ್ಟದ ಕರಡಿ ಏನೇನು ರಕ್ಶಣೆ ಕೇಳುತ್ತಿದೆ ಎಂದು ಮನಸ್ಸಿಟ್ಟು ಅದರ ಕೂಗನ್ನು ಕೇಳಿದರೆ, ಆ ಕೂಗು ಅರ‍್ತವಾಗದೆ ಇರದು. ಬೆಟ್ಟದ ಕರಡಿಗೆ

  • ಮನುಜರ ಬಯವಿಲ್ಲದ ಸಂಪೂರ‍್ಣ ಬೆಟ್ಟ ಪ್ರದೇಶ ಬೇಕು
  • ಬೆಟ್ಟದಿಂದ ಹರಿಯುವ ನೀರಿಗೆ ಅಡ್ಡಲಾಗಿ ಕೆರೆ ಇರಬೇಕು ಮತ್ತು ಬಾಯಾರಿಕೆಯನ್ನು ತಣಿಸಲು ವರ‍್ಶವಿಡೀ ಕೆರೆಯಲ್ಲಿ ನೀರಿರಬೇಕು.
  • ವರ‍್ಶಪೂರ‍್ತಿ ಹೊಟ್ಟೆ ತುಂಬಾ ಊಟ ಬೇಕು (ಬುದ್ದಿವಂತ ಮನುಶ್ಯರು ಪ್ರಯತ್ನಿಸಿದರೆ ಬಗೆ ಬಗೆಯ ಹಣ್ಣುಗಳನ್ನು ಬೆಟ್ಟದಲ್ಲಿ ಬೆಳೆಸಬಹುದು ಅಲ್ಲವೇ!?)
  • ಸಂತತಿಯನ್ನು ಹೆಚ್ಚಿಸಿಕೊಳ್ಳಲು ಬೆಟ್ಟ ಹಸಿರು ಮರಗಳಿಂದ ಕೂಡಿರಬೇಕು.
  • ಅನಾರೋಗ್ಯವಾದರೆ ತಕ್ಶಣ ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸುವ ಸೌಲಬ್ಯವಿರಬೇಕು.

“ನೀವು ಮನುಶ್ಯರು ನಿಮಗೆ ಅಸಾದ್ಯವಾದುದು ಯಾವುದೂ ಇಲ್ಲ. ನಮ್ಮ ಸಂತತಿ ತುಂಬಾ ಕಡಿಮೆ ಇದೆ. ಆದ್ದರಿಂದ ತಮ್ಮ ಮುಂದೆ ನಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದೇವೆ ಅಶ್ಟೆ. ನೀವು ಮನಸ್ಸು ಮಾಡಿದರೆ ಎಲ್ಲವನ್ನು ಒದಗಿಸಬಹುದು ಇದನ್ನೆಲ್ಲ ನೆರವೇರಿಸಿದರೆ ನಾವು ನಿಮ್ಮ ಊರಿಗೆ ರಾತ್ರಿ ಬರುತ್ತೇವೆ, ಆದರೆ ನೀವುಗಳು ಹೆದರುವಂತೆ ಕೂಗುವುದಿಲ್ಲ. ಬದಲಿಗೆ ನಿಮಗೆ ಸಂತೋಶವಾಗುವಂತೆ ಆಶೀರ‍್ವಾದ ಮಾಡುತ್ತೇವೆ” ಎಂದು ಹೇಳಿದ ಹಾಗೆ, ಕರಡಿಯ ಕೂಗು ಒಂದು ಬೇಡಿಕೆಯ ದನಿಯಾಗಿ ಮನುಜರನ್ನು ಕೇಳಿಕೊಳ್ಳುತ್ತಿರುವಂತಿದೆ ಅಂತ ನನಗೆ ಅನಿಸುತ್ತದೆ. ಈ ಕೂಗನ್ನು ಬುದ್ದಿವಂತರೆಂದೆನಿಸಿಕೊಂಡ ನಾವು ಮನುಜರು ಪರಿಗಣಿಸಬೇಕಲ್ಲವೇ?

(ಚಿತ್ರ ಸೆಲೆ: publicdomainpictures.net)

1 ಅನಿಸಿಕೆ

  1. ಕರಡಿಗೆ ಕನ್ನಡ ಸಂಸ್ಕ್ರುತಿಯಲ್ಲಿ ವಿಶಿಶ್ಟ ಸ್ತಾನವಿದೆ,ಬರಹ ತುಂಬಾ ಚೆನ್ನಾಗಿದೆ.ಮನದಟ್ಟು ಆಗುವ ಹಾಗೆ ಬರೆದಿದ್ದೀರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.