‘ಪ್ರೀತಿ ಇರಲಿ, ಆದರೆ ಅತಿಯಾಗದಿರಲಿ’

ಪ್ರಕಾಶ್‌ ಮಲೆಬೆಟ್ಟು.

 ಮಮತೆ, attachment

ಕೆಲವೊಮ್ಮೆ ನಾವು ಕೆಲವರ ಮೇಲೆ, ಕೆಲವೊಂದರ ಮೇಲೆ, ವ್ಯಾಮೋಹವನ್ನು ಬೆಳೆಸಿಕೊಳ್ಳುತ್ತೇವೆ. ಅದು ಅತಿರೇಕ ತಲುಪುವುದೂ ಉಂಟು. ಬಾವನೆಗಳ ಮೇಲೆ ಹಿಡಿತ ಹೊಂದದಿದ್ದರೆ ಅದು ಒಂದು ನಕಾರಾತ್ಮಕ ಜೀವನದೆಡೆಗೆ ನಮ್ಮನ್ನು ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯ ಇಲ್ಲ.

ಒಬ್ಬ ಹುಡುಗ ಇದ್ದ. ತುಂಬಾ ಚುರುಕು. ಯಾವತ್ತೂ ಪ್ರತಮ ಸ್ತಾನ ಬಿಟ್ಟುಕೊಟ್ಟವನಲ್ಲ. ಆದರೆ ಅವನ ಸಹಪಾಟಿ ಹುಡುಗಿಯ ಬಗ್ಗೆ ಅತಿರೇಕದ ಒಲವನ್ನು ಬೆಳೆಸಿಕೊಂಡುಬಿಟ್ಟ. ಆದರೆ ಹುಡುಗಿ ಯಾವ ಬಾವವನ್ನು ವ್ಯಕ್ತಪಡಿಸಲಿಲ್ಲ. ಇದನ್ನು ಸಹಿಸಲು ಅವನಿಗೆ ಸಾದ್ಯವಾಗಲಿಲ್ಲ. ತನ್ನನ್ನು ನಿರಾಕರಿಸಲು ಅವಳಿಗೆ ಯಾವುದೇ ಕಾರಣಗಳಿಲ್ಲವೆಂಬುದು ಅವನ ಮನದ ಬಾವನೆಯಾಗಿತ್ತು. ಹಾಗಾಗಿ ಅವಳ ನಿರಾಕರಣೆಯ ಆಗಾತದಿಂದ ಅವನಿಗೆ ಹೊರಗೆ ಬರಲು ಸಾದ್ಯವಾಗಲಿಲ್ಲ. ತನ್ನ ಮನದ ಬಾವನೆಗಳ ಮೇಲಿನ ಹಿಡಿತವನ್ನು ಕಳೆದುಕೊಂಡು ಅವನು ಕಿನ್ನತೆಗೆ ಒಳಗಾಗಿ ಬಿಟ್ಟ. ಇನ್ನೊಬ್ಬ ಹುಡುಗನಿದ್ದ. ಅವನು ಕೂಡ ಅಶ್ಟೇ ಒಬ್ಬ ಹುಡುಗಿಯ ಬಗ್ಗೆ ತುಂಬಾ ಒಲವನ್ನು ಬೆಳೆಸಿಕೊಂಡುಬಿಟ್ಟ. ಇವನು ಯಾವ ವಿಚಾರಗಳಲ್ಲೂ ಅವಳಿಗೆ ಸರಿಸಮನಾಗಿರಲಿಲ್ಲ. ಅದು ಅವನಿಗೂ ಗೊತ್ತಿತ್ತು. ಆದರೆ ಅವನದು ಅತಿರೇಕದ ಒಲವು ಆಗಿರಲಿಲ್ಲ. ಅವನ ಪ್ರೀತಿ ಯಾವುದನ್ನೂ ತಿರುಗಿ ಬಯಸದ ನಿಸ್ವಾರ‍್ತ ಪ್ರೀತಿಯಾಗಿತ್ತು. ಆದರೂ ಅವಳಿಗೆ ಸರಿಸಮವಾಗಿ ತಾನು ನಿಲ್ಲಬೇಕೆಂಬ ಚಲ ಅವನಲ್ಲಿತ್ತು. ಹಾಗಾಗಿ ತನ್ನ ಗಮನವನ್ನು ಓದಿನ ಮೇಲೆ, ತನ್ನ ಬವಿಶ್ಯದ ಮೇಲೆ ಕೇಂದ್ರೀಕರಿಸಿದ.

ಅತಿಯಾದ ವ್ಯಾಮೋಹ ತುಂಬಾ ಅಪಾಯಕಾರಿ

ಹೌದು, ಪ್ರಪಂಚದಲ್ಲಿ ಮನುಶ್ಯ ಬಯಸಿದೆಲ್ಲ ದೊರಕಲು ಕಂಡಿತವಾಗ್ಲೂ ಸಾದ್ಯವಿಲ್ಲ. ಯಾವುದೇ ಕ್ಶೇತ್ರವಿರಲಿ, ಗೆಲುವು ಎಲ್ಲರಿಗೂ ದೊರಕುವುದಿಲ್ಲ. ಆದರೆ ಹಾಗಂತ ಜೀವನ ಪ್ರೀತಿಯನ್ನು ಯಾವುದೇ ಕ್ಶಣದಲ್ಲೂ ಕಳೆದುಕೊಳ್ಳಬಾರದು. ನಮ್ಮ ಗೆಳೆಯರನ್ನು, ಕುಟುಂಬವನ್ನು ಪ್ರೀತಿಸುವುದು ನಮ್ಮ ಕರ‍್ತವ್ಯ. ಆದರೆ ಅವರ ಮೇಲೆ ಅದಿಕಾರ ಸ್ತಾಪಿಸಲು ಪ್ರಯತ್ನ ಪಡುವುದು ಕಂಡಿತ ತಪ್ಪು. ಅದು ಗಂಡ-ಹೆಂಡತಿ, ಅಣ್ಣ -ತಮ್ಮ, ಅಕ್ಕ -ತಂಗಿ, ಗೆಳೆಯ-ಗೆಳತಿ ಯಾವುದೇ ಸಂಬಂದವಿರಲಿ, ಅತಿಯಾದ ವ್ಯಾಮೋಹ ತುಂಬಾ ಅಪಾಯಕಾರಿ. ಅದು ನಮ್ಮಲ್ಲಿ ಸಂಶಯ ಪ್ರವ್ರುತ್ತಿ ಹಾಗು ಹೊಟ್ಟೆಕಿಚ್ಚನ್ನು ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಆಲೋಚನೆಗಳು, ಕನಸುಗಳು ಇರುತ್ತದೆ. ಆ ಬಾವನೆಗಳಿಗೆ ಗೌರವ ಕೊಡುವುದು ನಮ್ಮ ಸಂಬಂದಗಳನ್ನು ಮತಶ್ಟು ಗಟ್ಟಿಗೊಳಿಸುವುದರಲ್ಲಿ ಸಹಕಾರಿ.

ಒಬ್ಬ ಉತ್ತಮ ಹಾಡುಗಾರ ತಾನು ಸ್ಪರ‍್ದೆಯಲ್ಲಿ ಸೋತುಹೋದೆ ಅಂತ ಕುಗ್ಗಿ ಹಾಡುವುದನ್ನು ನಿಲ್ಲಿಸಿದರೆ ಏನು ಪ್ರಯೋಜನ. ಗೆಲುವಿನ ಮೇಲಿನ ಅವನ ವ್ಯಾಮೋಹ ತಪ್ಪಲ್ಲ. ಆದರೆ ಗೆಲುವು ತಪ್ಪಿಹೋದ ಮೇಲೆ ಆಕಾಶನೇ ತಲೆಮೇಲೆ ಕಳಚಿ ಬಿದ್ದಂತೆ ಕುಳಿತುಕೊಂಡು ಹಾಡುವುದನ್ನೇ ಮರೆತುಬಿಟ್ಟರೆ ಅದು ಅವನ ಸೋಲು! ಜೀವನ ಅಲ್ಲಿಗೆ ಕೊನೆ ಅಲ್ಲ, ಅವಕಾಶಗಳಿಗೆ ಯಾವುದೇ ಕೊರತೆ ಇಲ್ಲ. ಬಹುಶಹ ಆ ಗೆಲುವು ಬೇರೆಯವರಿಗೆ ಮೀಸಲಾಗಿತ್ತು! ತನಗಾಗಿ ಬೇರೊಂದು ಗೆಲುವು ಕಾದಿದೆ ಎಂದು ನಂಬಿಕೆ ಅವನು ಬೆಳೆಸಿಕೊಂಡ್ರೆ ಜೀವನದಲ್ಲಿ ಏನಾದ್ರು ಸಾದನೆಮಾಡಲು ಕಂಡಿತ ಸಾದ್ಯವಾಗುತ್ತದೆ.

ವ್ಯಾಮೋಹ ಯಾವಾಗ ಹೆಚ್ಚಾಗುತ್ತದೆಯಂದ್ರೆ…

ಅತಿರೇಕದ ವ್ಯಾಮೋಹ ಯಾವಾಗ ಹೆಚ್ಚಾಗುತ್ತದೆಯಂದ್ರೆ ನಮ್ಮ ನಿಕಟ ಸಂಬಂದಗಳ ಬಗ್ಗೆ ಹೆದರಿಕೆ ಹಾಗು ಅಬದ್ರತೆ ನಮ್ಮನ್ನು ಕಾಡತೊಡಗಿದಾಗ! ಅವನು ತನ್ನ ಕೈ ತಪ್ಪಿ ಹೋಗಬಹುದು, ಮಕ್ಕಳು ನಮ್ಮ ಮಾತನ್ನು ಕೇಳದೆ ಇರಬಹುದು ಅತವಾ ನಮ್ಮನ್ನು ಬಿಟ್ಟುಹೋಗಬಹುದು – ಇಂತ ಬಾವನೆಗಳು ಮನಸಿನಲ್ಲಿ ಮೂಡತೊಡಗಿದಾಗ, ನಾವು ನಮ್ಮವರನ್ನು ನಿಯಂತ್ರಿಸಲು, ಅವರ ಮೇಲೆ ಅದಿಕಾರ ಸ್ತಾಪಿಸಲು ಮುಂದಾಗುತ್ತೇವೆ. ಆದರೆ, ಬೇರೆಯವರಿಗೂ ಒಂದು ಮನಸಿದೆ, ಅವರಿಗೆ ಅವರದೇ ಆದ ಬಾವನೆಗಳು ಇದೆ ಎಂದು ನಾವು ಮರೆತುಬಿಡುತ್ತೇವೆ. ನಾವು ಅವರ ಮೇಲೆ ಅದಿಕಾರ ಸ್ತಾಪಿಸಲು ಪ್ರಯತ್ನಿಸಿದಶ್ಟು ಅವರು ನಮ್ಮಿಂದ ದೂರ ಸರಿಯುತ್ತಾರೆ.

ಪ್ರೀತಿ ಕಿರಿಕಿರಿಯಾಗಬಾರದು

ಒಂದು ನೆನಪಿಡಿ ಯಾರಿಗೂ ಯಾರು ಪ್ರಪಂಚದಲ್ಲಿ ಅನಿವಾರ‍್ಯ ಅಲ್ಲ. ನಮ್ಮವರು ನಮಗೆ ಬೇಕು ಆದರೆ ಅವರಿಲ್ಲದೆ ಜೀವನ ಇಲ್ಲ ಎನ್ನುವುದು ತಪ್ಪು. ಹಾಗಾಗಿ ಯಾರನ್ನು ತುಂಬಾ ಅತಿಯಾಗಿ ಹಚ್ಚಿಕೊಳ್ಳಬಾರದು. ಇನ್ನೊಬ್ಬರ ಜೀವನದಲ್ಲಿ ನಾವು ಸಿಹಿ ತರಬೇಕೇ ಹೊರತು ಕಹಿಯನ್ನಲ್ಲ. ನಮ್ಮ ಪ್ರೀತಿ ಅವರಿಗೆ ಕಿರಿಕಿರಿಯಾಗಿ ಸಾಕಪ್ಪ ಸಾಕು ಅನ್ನಿಸುವಂತಿರಬಾರದು. ನಮ್ಮ ಪ್ರೀತಿ, ವ್ಯಾಮೋಹ ಸಂಬಂದಗಳನ್ನು ಬೆಸೆಯಬೇಕೇ ಹೊರತು ಹಾಳುಗೆಡವಬಾರದು.

ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಕೆಲವು ಗಟನೆಗಳನ್ನೇ ನೋಡಿ. ಇತ್ತೀಚೆಗೆ ಒಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟ. ಇದೆಂತ ಪ್ರೀತಿ! ಅವನು ಅವಳನ್ನು ನಿಜವಾಗ್ಲೂ ಇಶ್ಟಪಡುತಿದ್ದವನಾದ್ರೆ ಅವಳ ಕಣ್ಣಿನಿಂದ ಒಂದು ಹನಿ ನೀರು ಕೂಡ ಬರಲು ಬಿಡುತ್ತಿರಲಿಲ್ಲ, ಇನ್ನು ಹಾನಿ ಮಾಡುವುದೆಂತ ಬಂತು. ಇದಕೆಲ್ಲ ಕಾರಣ ಅತಿರೇಕದ ಪ್ರೀತಿ, ನಮ್ಮ ಮನಸ್ಸನ್ನು ಕಾಡುವ ಅತಿರೇಕದ ಬಾವ ಮತ್ತು ಬಯ.

ಬಾವನೆಗಳು ಹಿತಮಿತವಾಗಿದ್ರೆ ಚಂದ

ವಾಸ್ತವವನ್ನು ತಿಳಿದು ಜೀವಿಸುವುದರಲ್ಲೇ ನಿಜವಾದ ಜೀವನ ಸುಕ ಅಡಗಿದೆ. ಸಂಬಂದ ಯಾವುದೇ ಇರಲಿ, ಎಲ್ಲ ಬಾವನೆಯು ಹಿತಮಿತವಾಗಿದ್ರೆನೆ ಚೆಂದ. ನಾವು ನಮ್ಮ ಮಕ್ಕಳ ಬಗ್ಗೆ ಎಶ್ಟೊಂದು ಅತಿರೇಕದ ವ್ಯಾಮೋಹವನ್ನು ಬೆಳೆಸಿಕೊಳ್ಳುತೇವೆಯೆಂದ್ರೆ ಕೆಲವೊಮ್ಮೆ ಜೀವನದಲ್ಲಿ ಅವರು ಹಿಂದುಳಿಯಲು ನಾವೇ ಕಾರಣರಾಗಿಬಿಡುತ್ತೆವೆ. ಮಗು ಈಜು ಕಲಿಯಬೇಕೆಂದ್ರೆ ‘ಅಯ್ಯೋ ಬೇಡ, ನೀರು ಅಪಾಯಕಾರಿ’ ಅಂದುಬಿಡುತ್ತೇವೆ. ಕಲಿಕೆ ಒಂದನ್ನು ಬಿಟ್ಟರೆ ಜೀವನದ ಬೇರಾವ ಪಾಟವನ್ನು ಕಲಿಯುವ ಅವಕಾಶವನ್ನೇ ಕೊಡುವುದಿಲ್ಲ. ಎಶ್ಟೋ ಜನ ಮಕ್ಕಳು ಮನೆಯಲ್ಲಿ ತಾವು ಊಟಮಾಡಿದ ತಟ್ಟೆಯನ್ನು ಕೂಡ ಎತ್ತಲು ಅಮ್ಮನನ್ನು ಕರೆಯುತ್ತಾರೆ. ಇದಕೆಲ್ಲ ಕಾರಣ ನಮ್ಮ ಅತಿ ವ್ಯಾಮೋಹ. ಮುಂದೆ ಇದೇ ಮಕ್ಕಳು ತನ್ನ ಹೆತ್ತವರನ್ನು ಮನೆ ಕೆಲಸದವರನ್ನಾಗಿ ಮಾಡಿಬಿಡುತ್ತಾರೆ. ಚಿಕ್ಕವರಿದ್ದಾಗ ಜೀವನಪಾಟ ಕಲಿಯದ ಮಕ್ಕಳು ಬಳಿಕ ಪರ ಊರಿನ ಹಾಸ್ಟೆಲ್ ನಲ್ಲಿದ್ದು ಓದುವಾಗ ಅಂಕುಶ ಕಳೆದುಕೊಂಡವರಂತೆ ಆಡತೊಡಗತಾರೆ. ಯಾವಾಗಲು ಪ್ರತಮ ಸ್ತಾನ ಬರುತಿದ್ದ ಹುಡುಗ ಪರೀಕ್ಶೆಯಲ್ಲಿ ತೇರ‍್ಗಡೆಯಾಗದಿದ್ದಾಗ ಪೋಶಕರಿಗೆ ಅರಿವಾಗುತ್ತದೆ ತಮ್ಮ ತಪ್ಪೇನು ಎಂದು. ಆದರೆ ಅವಾಗ ಪರಿಸ್ತಿತಿ ಕೈ ಮೀರಿ ಹೋಗಿರುತ್ತದೆ.

ಹಾಗಾದರೆ ಏನು ಮಾಡಬೇಕು?

ಮೊದಲು ನಾವು ನಮ್ಮ ಬಾವನೆಗಳನ್ನು ನಿಯಂತ್ರಿಸಲು ಕಲಿಯಬೇಕು. ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದೆ, ವಿಚಾರಗಳಿಗೆ ಎಶ್ಟು ಮಹತ್ವ ಕೊಡಬೇಕೋ ಅಶ್ಟೇ ಮಹತ್ವ ಕೊಡುವುದನ್ನು ಕಲಿಯಬೇಕು. ಜೀವನ ಬಗವಂತ ಕೊಟ್ಟ ಒಂದು ಅವಕಾಶ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಮ್ಮ ಕರ‍್ತವ್ಯ. ಬದುಕನ್ನು ಸರಿಯಾಗಿ ಬದುಕಲು ಕಲಿಯಬೇಕು. ಪ್ರೀತಿಯನ್ನು  ಪಡೆಯಬೇಕಾದ್ರೆ ಅದಕ್ಕೆ ಪೂರಕವಾದ ವಾತವರಣವನ್ನು ಸ್ರುಶ್ಟಿಸಿಕೊಳ್ಳಬೇಕು. ಪೂರಕವಾದ ವಾತಾವರಣ ಸ್ರುಶ್ಟಿಯಾಗಬೇಕಾದ್ರೆ ಮೊದಲು ಆ ಪ್ರೀತಿಯನ್ನು ಪಡೆಯಲು ಅರ‍್ಹತೆ ಹೊಂದಬೇಕು. ಆ ಅರ‍್ಹತೆ ಹೊಂದಲು ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕು. ಮಿಕ್ಕಿದ್ದು ಬಗವಂತನಿಗೆ ಬಿಡಬೇಕು. ಒಂದು ವೇಳೆ ಸೋತರೂ ಅದು ನಮ್ಮ ಸೋಲಲ್ಲ. ಏಕೆಂದ್ರೆ ನಮಗಾಗಿ ಪ್ರಪಂಚದಲ್ಲಿ ಬೇರೇನೋ ಕಾದಿದೆ ಎಂದು ಅರ‍್ತ. ಆದ್ರೆ ಸೋತೆ ಎಂದು ಜೀವನೋತ್ಸಹವನ್ನು ಕಳೆದುಕೊಳ್ಳಬಾರದು. ಯಾವುದೇ ಸಂಬಂದ ನಿಂತಿರೋದು ನಂಬಿಕೆಯ ಮೇಲೆ. ಸಂಶಯ, ಬಯ ಮತ್ತು ಅಬದ್ರತೆಯ ಬಾವನೆಯನ್ನು ಮನಸಿನಿಂದ ತೆಗೆದು ಬಿಟ್ಟರೆ ಪ್ರೀತಿ, ನಂಬಿಕೆ ಗಟ್ಟಿಯಾಗುತ್ತದೆ. ಅಶ್ಟಕ್ಕೂ ಪ್ರಪಂಚದಲ್ಲಿ ಯಾರೂ ಕೂಡ ಯಾರ ಸ್ವತ್ತಲ್ಲ. ಮಕ್ಕಳು ಕೂಡ ಬೆಳೆದ ಮೇಲೆ ಸ್ವತಂತ್ರರಾಗುತ್ತಾರೆ. ರಜನೀಶ್ ರವರು ಹೇಳಿರುವಂತೆ – ‘ಅದಿಕಾರ ಸ್ತಾಪಿಕೆ (ಅತಿರೇಕದ ವ್ಯಾಮೋಹ) ಪ್ರೀತಿಯನ್ನು ನಾಶಪಡಿಸುತ್ತದೆ’ ಎಂಬ ತಿಳುವಳಿಕೆ ಅಗತ್ಯ.

( ಚಿತ್ರಸೆಲೆ : amherstburgchiropractic.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: