‘ನಾವೂ ಕೂಡ ನಾಯಕರಾಗಬಹುದು’

ಪ್ರಕಾಶ್‌ ಮಲೆಬೆಟ್ಟು.

ನಾಯಕ, Hero

‘ಹೀರೋ’ ಇಲ್ಲವೇ ‘ನಾಯಕ’ ಈ ಪದಕ್ಕೆ ಒಂದು ಅಸಾಮಾನ್ಯ ಶಕ್ತಿ ಇದೆ . ನಾಯಕನೆಂದ ಕೂಡಲೇ ನಮ್ಮ ಮನಸಿನಲ್ಲಿ ನಮ್ಮ ನೆಚ್ಚಿನ ನಾಯಕನ ಚಿತ್ರ ಮೂಡತೊಡಗುತ್ತದೆ. ಅಸಾದ್ಯವನ್ನು ಸಾದ್ಯವನ್ನಾಗಿಸುವ ಸಕಲಕಾಲವಲ್ಲಬನೇ ನಾಯಕನೆನೆಸಿಕೊಳ್ಳುತಾನೆ. ಸಿನಿಮಾವನ್ನೇ ನೋಡಿ, ಪಾತ್ರವರ‍್ಗದಲ್ಲಿ ಅನೇಕ ನಟರಿರುತ್ತಾರೆ. ಆದರೆ ಅವರ‍್ಯಾರೂ ನಾಯಕರಲ್ಲ. ಆದರೆ ಅದೇ ನಾಯಕ ನಟ ತನ್ನ ನಾಯಕ ಪಟ್ಟವನ್ನು ಉಳಿಸಿಕೊಳ್ಳಬೇಕಾದ್ರೆ ನಿಜಜೀವನದಲ್ಲಿ ಎಶ್ಟೊಂದು ಶ್ರಮ ಪಡ್ಬೇಕು! ಎಶ್ಟೊಂದು ತ್ಯಾಗ ಮಾಡಬೇಕು! ತನ್ನ ದೇಹ ಸೌಂದರ‍್ಯವನ್ನು ಕಾಪಾಡಿಕೊಳ್ಳಲು ಆತ ತುಂಬಾ ಕಶ್ಟಪಡಬೇಕು. ನಾಯಕ ನಟನೇ ಆಗಲಿ, ನಿಜಜೀವನದ ನಾಯಕರೇ ಆಗಲಿ ಅವರು ಸುಲಬದಲ್ಲಿ ಹೀರೋ ಎನಿಸಿಕೊಳ್ಳುವುದಿಲ್ಲ. ತುಂಬಾ ಶ್ರಮ ಪಟ್ಟು ಅವರು ಆ ಪಟ್ಟ ಪಡೆಯುತ್ತಾರೆ.

ಇವಿಶ್ಟು ನಾವು ನಮ್ಮ ಜೀವನದಲ್ಲಿ ನೋಡುತ್ತಿರುವ ಪ್ರಸಿದ್ದ ನಾಯಕರುಗಳ ಕತೆ! ನಾವು ಕೂಡ ನಾಯಕರಾಕಾಗಬಾರದು? ಕಂಡಿತವಾಗಲೂ ನಾವು ನಾಯಕರಾಗಲು ಸಾದ್ಯವಿದೆ. ನಾವು ನಾಯಕರಾಗಬಹುದು ನಮ್ಮ ಹ್ರುದಯಕ್ಕೆ, ನಮ್ಮ ಆತ್ಮಸಾಕ್ಶಿಗೆ. ನಾವು ನಾಯಕರಾಗಬಹುದು ನಮ್ಮ ಬಾಳಸಂಗಾತಿಯ ದ್ರುಶ್ಟಿಯಲ್ಲಿ! ನಾವು ನಾಯಕರಾಗಬಹುದು ನಮ್ಮ ಮಕ್ಕಳ ಮನಸಿನಲ್ಲಿ! ನಾವು ನಾಯಕರಾಗಬಹುದು ನಮ್ಮ ಸ್ನೇಹಿತರ ಹ್ರುದಯದಲ್ಲಿ! ನಾವು ನಾಯಕರಾಗಬಹುದು ಅಪ್ಪ-ಅಮ್ಮನ ಕಣ್ಣಿನಲ್ಲಿ! ನಾವು ನಾಯಕರಾಗಬಹುದು ನಮ್ಮ ಸುತ್ತಮುತ್ತಲ ಜನರ ಮನದಲ್ಲಿ ನಮ್ಮ ಬಗ್ಗೆ ಮೂಡುವ ಮೆಚ್ಚುಗೆಯಲ್ಲಿ! ಅಶ್ಟಕ್ಕೂ ಇಂದಿನ ಸಾಮಾಜಿಕ ಮಾದ್ಯಮಗಳ ಬರಾಟೆಯಿಂದಾಗಿ ಎಶ್ಟೋ ಜನ ರಾತ್ರೋ ರಾತ್ರಿ ಹೀರೋ ಅದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ, ಅಲ್ಲವೇ?

ನಾವು ಹೇಗೆ ಹೀರೊ ಆಗಬಹುದು ಎಂದು ಯೋಚಿಸಿದಾಗ ಚಿಕ್ಕ ಪುಟ್ಟ ಬದಲಾವಣೆಗಳು, ನಮ್ಮ ವ್ಯಕ್ತಿತ್ವ , ನಮ್ಮ ಆಲೋಚನೆಗಳು, ನಮ್ಮ ತ್ಯಾಗಗಳು ನಮ್ಮನ್ನು ಹೀರೋ ಮಾಡಿ ಬಿಡುತ್ತವೆ . ಕುಡಿತದಿಂದ ಮನೆಯಲ್ಲಿ ಯಾವಾಗಲು ಹೆಂಡತಿಯೊಂದಿಗೆ ಜಗಳ, ಕುಡಿತದಿಂದಾಗಿ ನಿಮ್ಮನ್ನು ಕಂಡರೆ ಮಕ್ಕಳಿಗೆ ಹೆದರಿಕೆ ಇರುವಾಗ ಗಟ್ಟಿ ಮನಸು ಮಾಡಿ ಕುಡಿತ ನಿಲಿಸಿಬಿಟ್ಟು ನೋಡಿ. ನಿಮ್ಮ ಆತ್ಮಸಾಕ್ಶಿಗೆ ನೀವೇ ಹೀರೊ ಆಗೋದ್ರಲ್ಲಿ ಯಾವ ಸಂಶಯವೂ ಇಲ್ಲ. ಅಶ್ಟೇ ಅಲ್ಲ ನಿಮ್ಮ ಪತ್ನಿಗೂ ನಿಮ್ಮ ಮಕ್ಳಳಿಗೂ ನೀವೇ ಹೀರೋ. ಇಲ್ಲಿ ನಿಮ್ಮ ಚಟದ ತ್ಯಾಗ ನಿಮ್ಮನ್ನು ನಾಯಕನನ್ನಾಗಿಸುತ್ತದೆ. ಮಕ್ಕಳಿಗೆ ಸಮಯಕೊಡಿ, ಮಕ್ಕಳೊಂದಿಗೆ ಮಕ್ಕಳಾಗಿಬಿಡಿ. ಅವರ ದ್ರುಶ್ಟಿಯಲ್ಲಿ ನೀವು ಯಾವಾಗಲೂ ಹೀರೋ ಆಗಿ ಬಿಡುವಿರಿ. ನಿಮ್ಮ ಸುತ್ತ ಮುತ್ತಲಿನ ಜನರ ಕಶ್ಟಕ್ಕೆ ನಿಮ್ಮ ಕೈಯಿಂದ ಸಾದ್ಯವಾದಶ್ಟು ಸಹಾಯಮಾಡಿ, ಮಾನವೀಯತೆಯೊಂದಿಗೆ ಬದುಕಿ. ನಿಮ್ಮ ಕೆಲಸವನ್ನು ದಕ್ಶತೆಯಿಂದ ಮೈಗಳ್ಳತನ ತೋರದೆ, ಬ್ರಶ್ಟಾಚಾರಕ್ಕೆ ಅಹ್ವಾನ ಕೊಡದೆ ನಿರ‍್ವಹಿಸಿ. ಜನರ ದ್ರುಶ್ಟಿಯಲ್ಲಿ ನೀವು ಹೀರೋ ಆಗಿ ಬಿಡುತ್ತೀರಾ! ನಾಲ್ಕು ಜನ ನಿಮ್ಮ ಬಗ್ಗೆ ಒಳ್ಳೆ ಮಾತನಾಡಿದರೆ ನಿಮ್ಮ ಅಪ್ಪ ಅಮ್ಮ ಹೆಮ್ಮೆಯಿಂದ ತಲೆ ಎತ್ತಿ, ಎದೆ ತಟ್ಟಿ ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಸಮಾಜದಲ್ಲಿ ಒಬ್ಬ ಆದರ‍್ಶ ವ್ಯಕ್ತಿಯಾಗಿ ಬಾಳಿ. ನೀವು ಸಿನಿಮಾ ಹೀರೋಗಳನ್ನು ಮೀರಿಸಿದ ಹೀರೋ ಆಗಿ ಬಿಡುವಿರಿ. ನಮ್ಮದೇ ದ್ರುಶ್ಟಿಯಲ್ಲೂ ಕೂಡ ನಾವು ಹೀರೋ ಆಗಬಹುದು.

ಬದುಕಿನಲ್ಲಿ ತಮ್ಮ ಒಳ್ಳೆತನದಿಂದ ಪ್ರತಿಯೊಬ್ಬರೂ ಉತ್ತಮ ನಾಯಕರಾಗಲು ಸಾದ್ಯವಿದೆ. ಆದರೆ ಆ ಸಾದನೆಗೆ ದ್ರುಡ ಇಚ್ಚಾಶಕ್ತಿ, ತ್ಯಾಗ ಹಾಗು ಪ್ರಯತ್ನದ ಅಗತ್ಯತೆ ಇದೆ. ದೇಹದ ತೂಕ ಜಾಸ್ತಿ ಇದೆಯಾ? ‘ನಾನು ಇಶ್ಟು ಸಮಯದಲ್ಲಿ ನನ್ನ ತೂಕ ಇಳಿಸಿಕೊಳ್ಳುತೇನೆ’ ಎಂದು ಒಂದು ಗುರಿಯನ್ನು ನಿಗದಿಪಡಿಸಿಕೊಳ್ಳಿ . ಅದಕ್ಕೆ ಬೇಕಾದ ಆಹಾರ ಪದ್ದತಿಯನ್ನು  ಅಳವಡಿಸಿಕೊಳ್ಳಿ. ನೀವು ಗೆದ್ದ ದಿನ ನೀವೇ ಹೀರೋ. ಒಂದು ಉದಾಹರಣೆ ಕೊಡೋದಾದ್ರೆ – ವಿರಾಟ್ ಕೊಹ್ಲಿ , ಹೆಸರಾಂತ ಕ್ರಿಕೆಟಿಗ. ಆತ ಕ್ರಿಕೆಟ್ ಗೋಸ್ಕರ ತನ್ನ ದೇಹದಾರ‍್ದತೆಯನ್ನು ಕಾಪಾಡಿಕೊಳ್ಳಲು ಮಾಂಸಾಹಾರ ಬಿಟ್ಟು ಸಸ್ಯಾಹಾರಿಯಾಗಿದ್ದಾನೆ. ಈಗ ಹೇಳಿ ಹೀರೋ ಆಗೋದು ಸುಲಬಾನಾ? ಕಂಡಿತ ಅಲ್ಲ. ಆದರೆ ನಿಜವಾದ ಪರಿಶ್ರಮ ನಮ್ಮನ್ನು ಕಂಡಿತವಾಗ್ಲೂ ಹೀರೋ ಮಾಡಿ ಬಿಡುತ್ತೆ.

ಹೀಗೆ ಜೀವನದ ಅನೇಕ ವಿಶಯಗಳಲ್ಲಿ ನಾವು ಗುರಿಯನ್ನು ನಿಗದಿಪಡಿಸಿಕೊಂಡು ಅದನ್ನು ಸಾದಿಸಲು ಶ್ರಮಪಟ್ಟರೆ, ಸಿನಿಮಾಗಳಲ್ಲಿ ಅಂತಿಮ ಗೆಲವು ನಾಯಕನಿಗೇ ದೊರೆತ ಹಾಗೆ ನಮಗೂ ಕೂಡ ಕಂಡಿತಾ ಒಂದಲ್ಲ ಒಂದು ದಿನ ಗೆಲವು ಸಿಗುತ್ತದೆ 🙂

( ಚಿತ್ರಸೆಲೆ : aier.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: