ಜಲಪಾತಗಳ ರಾಜದಾನಿ – ಹ್ಯಾಮಿಲ್ಟನ್

– ಕೆ.ವಿ. ಶಶಿದರ.

Hamilton Falls

ಹರಿಯುವ ನದಿ ನೀರು ಸಾಗರ ಸೇರುವುದು ನಿಶ್ಚಿತ. ಹೀಗೆ ಹರಿಯುವಾಗ ಅಡ್ಡಬರುವ ಬೆಟ್ಟದ ಕೊರಕಲುಗಳಲ್ಲಿ ದಾರಾಕಾರವಾಗಿ ಬಿದ್ದು ಮುಂದೆ ಸಾಗುವುದು ಪ್ರಕ್ರುತಿ ನಿಯಮ. ಕೊರಕಲುಗಳಲ್ಲಿ ಬೀಳುವ ದ್ರುಶ್ಯ ನಯನ ಮನೋಹರ. ಬೀಳುವ ಎತ್ತರ ಹೆಚ್ಚಿದಶ್ಟೂ ಅದರ ಸೌಂದರ‍್ಯ ಹೆಚ್ಚು. ಪ್ರಕ್ರುತಿದತ್ತವಾದ ಇವು ಅಲ್ಲೊಂದು ಇಲ್ಲೊಂದು ಹರಡಿರುತ್ತವೆ. ಬೂ ವಿಸ್ತೀರ‍್ಣಕ್ಕೆ ಹೋಲಿಸಿದರೆ ನದಿಗಳ ಸಂಕ್ಯೆ ಬಹಳ ಕಡಿಮೆ. ಅದರಲ್ಲೂ ಎಲ್ಲಾ ನದಿಗಳೂ ಬೆಟ್ಟದ ಕೊರಕಲಿನಲ್ಲಿ ಬಿದ್ದು ಜಲಪಾತವನ್ನು ಸ್ರುಶ್ಟಿಸುತ್ತದೆ ಎನ್ನಲು ಸಾದ್ಯವಿಲ್ಲ. ಹಾಗಾಗಿ ಲಬ್ಯವಿರುವ ಜಲಪಾತಗಳು ವಿರಳ. ಜಲಪಾತಗಳ ರಮ್ಯತೆ, ದುಮ್ಮಿಕ್ಕುವಾಗಿನ ಶಬ್ದ, ಎತ್ತರದಿಂದ ಬೀಳುವ ನೀರಿನ ಲಾಸ್ಯ, ಬಿದ್ದ ರಬಸಕ್ಕೆ ಚಿಮ್ಮುವ ನೀರಿನ ಸಣ್ಣ ಕಣಗಳು, ಅದರಿಂದ ಸ್ರುಶ್ಟಿಯಾಗುವ ಕಾಮನ ಬಿಲ್ಲು ಎಲ್ಲಾ ಕಣ್ಣಿಗೆ ಹಬ್ಬ. ಇದು ಪ್ರವಾಸಿಗರನ್ನು, ಪ್ರಕ್ರುತಿ ಆರಾದಕರನ್ನು ಆಕರ‍್ಶಿಸಲು ಮುಕ್ಯ ಕಾರಣ. ಜಲಪಾತಗಳ ಬವ್ಯತೆಯನ್ನು ನೋಡಿ ಕಣ್ತುಂಬಿಸಿಕೊಳ್ಳಲು ಸಾವಿರಾರು ಮೈಲಿಗಳ ದೂರ ಕ್ರಮಿಸುವವರೂ ಇದ್ದಾರೆ. ಉತ್ತರ ಅಮೇರಿಕಾ-ಕೆನಡಾದಲ್ಲಿರುವ ನಯಾಗರಾ, ನಮ್ಮದೇ ಜೋಗ ಅತಿ ಹೆಚ್ಚು ಹೆಸರು ಮಾಡಿರುವ ಜಲಪಾತಗಳು.

ನಯಾಗರಾ ಜಲಪಾತಕ್ಕೆ ಕೇವಲ ಐವತ್ತು ಮೈಲಿಗಳಶ್ಟು ದೂರವಿರುವ, ಕೆನಡಾ ದೇಶದ ಹ್ಯಾಮಿಲ್ಟನ್ ನಗರ ವಿಶ್ವ ವಿಕ್ಯಾತವಾಗಿರುವುದು ಜಲಪಾತಕ್ಕೆ ಎಂದರೆ ನಂಬಲು ಸಾದ್ಯವೇ? ಹೌದು, ಹ್ಯಾಮಿಲ್ಟನ್ ನಗರ ಪ್ರಸಿದ್ದವಾಗಿರುವುದು ಜಲಪಾತಗಳ ರಾಜದಾನಿ ಎಂದು. ಹಾಗಾದರೆ ಇಲ್ಲಿರುವ ಜಲಪಾತಗಳ ಸಂಕ್ಯೆ ಎಶ್ಟಿರಬಹುದು? ಊಹಿಸಲು ಸಾದ್ಯವೇ? ಸಂಕ್ಯೆ ಕೇಳಿದರೆ ಆಶ್ಚರ‍್ಯವಾಗುತ್ತದೆ!!! ಎರಡು, ಮೂರು, ಹತ್ತು, ಹದಿನೈದಲ್ಲ, ಬದಲಿಗೆ ನೂರಕ್ಕಿಂತಲೂ ಅದಿಕ.

ಹ್ಯಾಮಿಲ್ಟನ್ ಕೆನಡಾದ ಅತ್ಯಂತ ಹೆಚ್ಚು ಕೈಗಾರಿಕೆಗಳಿಂದ ಕೂಡಿದ ಪ್ರದೇಶದ ಹ್ರುದಯ ಬಾಗದಲ್ಲಿರುವ ನಗರ. ನೈಸರ‍್ಗಿಕ ಸೌಂದರ‍್ಯದ ತವರು. ಈ ನಗರವು ನಯಾಗರಾ ಜಲಪಾತದ ಇಳಿಜಾರಿನಲ್ಲಿರುವ ಕಾರಣ ಅತಿ ಹೆಚ್ಚು ಜಲಪಾತಗಳನ್ನು ಹೊಂದಿದೆ. ಈ ಇಳಿಜಾರು ಕೊರಕಲಿನ ಕಮಾನು ಪ್ರದೇಶ ನಗರದ ಮದ್ಯ ಬಾಗದಲ್ಲಿದ್ದು, ಮುಂದೆ ನ್ಯೂಯಾರ‍್ಕ್, ಒಂಟಾರಿಯೋ, ಮಿಚಿಗನ್, ವಿಸ್ಕಾನ್ಸಿನ್ ಮತ್ತು ಇಲಿನಾಯ್ಸ್‍ನತ್ತ ಹಾದು ಹೋಗಿದೆ. ಈ ಇಳಿಜಾರಿನಲ್ಲಿ ಹರಿಯುವ ನದಿ, ತೊರೆ, ಹಳ್ಳಗಳು ಒಂದೊಂದೂ ಒಂದೊಂದು ಸಣ್ಣ ಸಣ್ಣ ಜಲಪಾತಗಳಾಗಿ ರೂಪುಗೊಂಡಿರುವುದು ವಿಶಿಶ್ಟ.

ಉಕ್ಕು ತಯಾರಿಕೆ ಇಲ್ಲಿನ ಜನರ ಪ್ರಮುಕ ಉದ್ಯಮ. ಐದು ಲಕ್ಶಕ್ಕೂ ಹೆಚ್ಚಿನ ಜನಸಂಕ್ಯೆ ಉಳ್ಳ ಈ ನಗರದ ನಿವಾಸಿಗಳಿಗೆ, ಇಲ್ಲಿನ ಜಲಪಾತ ಪ್ರತಿದಿನದ ದ್ರುಶ್ಯವಾದ ಕಾರಣ ಅದರತ್ತ ಹೆಚ್ಚು ಗಮನ ಕೇಂದ್ರೀಕರಿಸಿರಲಿಲ್ಲ. ಅವರುಗಳಿಗೆ ಹಲವು ಬ್ರುಹತ್ ಜಲಪಾತಗಳ ಅರಿವಿತ್ತು. ಜಲಪಾತದ ಬುಡದಲ್ಲಿ ಈಜಲು ಹಾಗೂ ವಾರಾಂತ್ಯದಲ್ಲಿ ಪಿಕ್ನಿಕ್‌ ಜಾಗಗಳಾಗಿ ಕುಟುಂಬದೊಡನೆ ಸಂತಸದ ಸಮಯ ಕಳೆಯಲು ಬಳಸುತ್ತಿದ್ದರು. ಹ್ಯಾಮಿಲ್ಟನ್ನಿನ ನಿಜವಾದ ಪ್ರಾಮುಕ್ಯತೆ ಬಗ್ಗೆ ತಿಳಿದಿರಲಿಲ್ಲ. ಇಲ್ಲಿನ ಕಿರು ತೊರೆಗಳನ್ನು ಗುರುತಿಸಿ ಉತ್ತೇಜಿಸುವ ದ್ರುಶ್ಟಿಯಿಂದ, 2008ರಲ್ಲಿ ಹ್ಯಾಮಿಲ್ಟನ್ ಮೂಲದ ಕ್ರಿಸ್ ಎಕ್ಲಂಡ್ ‘ಸಿಟಿ ಆಪ್ ವಾಟರ್ ಪಾಲ್ಸ್’ ಎಂಬ ಲಾಬರಹಿತ ಸಂಸ್ತೆಯನ್ನು ಸ್ತಾಪಿಸಿದ.

ಹ್ಯಾಮಿಲ್ಟನ್‍ನಲ್ಲಿನ ಜಲಪಾತಗಳನ್ನು ನಯಾಗರಾ ಜಲಪಾತಕ್ಕೆ ಹೋಲಿಸಲು ಸಾದ್ಯವಿಲ್ಲ. ಇಲ್ಲಿರುವುದೆಲ್ಲಾ ಸಣ್ಣ ಸಣ್ಣ ಜಲಪಾತಗಳು. ಪ್ರಶಾಂತವಾಗಿ ದುಮುಕುವ ಇವು ನಿಶ್ಯಬ್ದವಾಗಿವೆ. ಈ ಜಲಪಾತಗಳು ವೈವಿದ್ಯತೆಯಿಂದ ಕೂಡಿವೆ. ಇಲ್ಲಿರುವ ಜಲಪಾತಗಳಲ್ಲಿ ಹೆಚ್ಚು ಪಾಲು ಕಿರುಜಲಪಾತಗಳದ್ದು. ಬಹಳ ಎತ್ತರದಿಂದ ದುಮುಕುವ ಎಳೆಯಾಕಾರದ ಜಲಪಾತಗಳು, ಎತ್ತರ ಮತ್ತು ಅಗಲ ಸಮನಾಗಿರುವ ಜಲಪಾತಗಳು (ಶಾಸ್ತ್ರೀಯ ವೈವಿದ್ಯತೆ), ಪರದೆಯಂತೆ ಬೀಳುವ ಜಲಪಾತಗಳು (ಹೆಚ್ಚು ಅಗಲ ಮತ್ತು ಕಡಿಮೆ ಎತ್ತರ) ಇದರಲ್ಲಿ ಸೇರಿವೆ. ಇಲ್ಲಿರುವ ನೂರಾರು ಜಲಪಾತಗಳಲ್ಲಿ ಅತ್ಯಂತ ಸುಂದರವಾದ ಜಲಪಾತ ವೆಬ್ಟ್ಸರ‍್ಸ್ ಜಲಪಾತವಾಗಿದ್ದು, ಅತ್ಯಂತ ಎತ್ತರದ್ದು ಟ್ಯೂಸ್ ಜಲಪಾತ. ಇದು 41 ಮೀಟರ್ (ಅಂದಾಜು 125 ಅಡಿ) ಎತ್ತರವಿದೆ. ಲಿಟಲ್ ಡೇವಿಸ್ ಜಲಪಾತ ಅತಿ ಚಿಕ್ಕದು. ಇದು ದುಮುಕುವುದು ಕೇವಲ ಮೂರು ಮೀಟರ್ (ಅಂದಾಜು 10 ಅಡಿ) ಎತ್ತರದಿಂದ.

ಇಂದಿಗೂ ಹ್ಯಾಮಿಲ್ಟನ್‍ನಲ್ಲಿ ಇರುವ ನಿಕರವಾದ ಜಲಪಾತಗಳ ಸಂಕ್ಯೆಯನ್ನು ನೀಡಲು ಸಾದ್ಯವಿಲ್ಲ. ಕೆಲವೊಂದು ಕಡೆ, ಕ್ರಿಸ್ ಏಕ್ಲೆಂಡ್ ಅವರ ವೆಬ್‍ಸೈಟ್‍ನಲ್ಲಿ , 130ಕ್ಕೂ ಹೆಚ್ಚು ಜಲಪಾತಗಳ ಉಲ್ಲೇಕ ಇದೆ. ಆದರೆ ಬೇರೆಡೆ ಇದರ ಸಂಕ್ಯೆ 150 ಮೀರುತ್ತದೆ. ಈ ಅನಿಶ್ಚಿತತೆಗೆ ಮೂಲ ಕಾರಣ, ಇವುಗಳಲ್ಲಿ ವರ‍್ಶಪೂರ‍್ತಿ ಹರಿಯುವುದು ಕೇವಲ 50 ರಿಂದ 60 ಜಲಪಾತಗಳು ಮಾತ್ರ. ಮತ್ತೊಂದು ಕಾರಣವೆಂದರೆ ಹಲವಾರು ಜಲಪಾತಗಳು ಕಾಸಗಿ ಒಡೆತನದಲ್ಲಿವೆ. ಒಟ್ಟಾರೆ ಲೆಕ್ಕದಲ್ಲಿ ಇವುಗಳಲ್ಲಿ ಕೆಲವು ಸೇರಿರಬಹುದು ಇಲ್ಲದೆಯೂ ಇರಬಹುದು. ಕೇಂದ್ರ ಹ್ಯಾಮಿಲ್ಟನ್ ಪ್ರದೇಶದ ಬಹಳಶ್ಟು ಜಲಪಾತಗಳು, ಹೆಚ್ಚುತ್ತಿರುವ ಜನಸಂಕ್ಯೆಗೆ ಅವಶ್ಯವಿರುವ ಮನೆಗಳ ನಿರ‍್ಮಾಣದಿಂದಾಗಿ ಅವಸಾನ ಹೊಂದಿವೆ.

(ಮಾಹಿತಿ ಸೆಲೆ: amusingplanet.com cntraveler.com cityofwaterfalls.ca smithsonianmag.com heroninstruments.com )

(ಚಿತ್ರ ಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: