ಮಡುರೊಡಾಮ್ ಎಂಬ ಚಿಕಣಿ ನಗರ

– ಕೆ.ವಿ. ಶಶಿದರ.

ನೆದರ್ ಲ್ಯಾಂಡ್ ಸಣ್ಣ ರಾಶ್ಟ್ರ. ಇಲ್ಲಿನ ಜನ ತಾವು ತಯಾರಿಸುವ ಪ್ರತಿಯೊಂದು ವಸ್ತುವಿಗೂ ನೀಡುವ ಸೂಕ್ಶ್ಮ ಗಮನದಿಂದ ಪ್ರಸಿದ್ದರಾಗಿದ್ದಾರೆ. ಇದರ ಪ್ರತಿಬಿಂಬವೇ ಮಡುರೊಡಾಮ್ ಎಂಬ ಚಿಕಣಿ ನಗರ. ಇದರಲ್ಲಿ ಹಾಲೆಂಡಿನ ಹಲವು ಸುಪ್ರಸಿದ್ದ ಹೆಗ್ಗುರುತುಗಳ ಕರಾರುವಾಕ್ಕಾದ ಪುಟ್ಟ ಪುಟ್ಟ ಪ್ರತಿಕ್ರುತಿಗಳಿವೆ. ಡಚ್ ಜಾನಪದದ ದೈನಂದಿನ ಜೀವನವನ್ನು ಪ್ರತಿಪಾದಿಸುವ ಆಕರ‍್ಶಕ ಚಿಕಣಿ (miniature) ಗೊಂಬೆಗಳನ್ನು ಸಹ ಇದರಲ್ಲಿ ಕಾಣಬಹುದು.

ಮಡುರೊಡಾಮ್ ಪ್ರಾರಂಬವಾಗಿದ್ದು ಜುಲೈ 1952ರಲ್ಲಿ. ಅಂದಿನಿಂದಲೂ ಇದು ಹಾಲೆಂಡಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದರಲ್ಲಿರುವ ಪ್ರತಿಯೊಂದು ವಿಶ್ವ ಪ್ರಸಿದ್ದ ಕಟ್ಟಡಗಳನ್ನು 1:25ರ ಅನುಪಾತದಲ್ಲಿ ನಿಕರವಾಗಿ ಹಾಗೂ ಪ್ರತಿ ಸಣ್ಣ ಸಣ್ಣ ವಿವರವನ್ನೂ ಗಮನಿಸಿ ಅದರಂತೆ ಚಾಚೂ ತಪ್ಪದೆ ತಯಾರಿಸಲಾಗಿದೆ. ಮಡುರೊಡಾಮ್‍ನಲ್ಲಿ ಹಲವಾರು ವರ‍್ಶಗಳ ಹಿಂದಿನ ಸುಪ್ರಸಿದ್ದ ಪ್ರಬಾವಶಾಲಿ ವಾಸ್ತು ಶಿಲ್ಪದ ಪಕ್ಶಿನೋಟವನ್ನು ಕಾಣಬಹುದು.

ಇಂತಹ ಚಿಕಣಿ ನಗರವನ್ನು ನಿರ‍್ಮಿಸುವ ಹಿಂದಿನ ಪ್ರೇರಣೆಯಾದರು ಯಾವುದು? ಯಾರ ಪ್ರಬಾವದಿಂದ ಇದು ರೂಪುಗೊಂಡಿದೆ?

17ನೇ ಮತ್ತು 18ನೇ ಶತಮಾನದಲ್ಲಿ ಶ್ರೀಮಂತ ಡಚ್ ವ್ಯಾಪಾರಿಗಳ ಪತ್ನಿಯರು ಚಿಕಣಿ ಗೊಂಬೆಗಳ, ಕೆಲವೊಮ್ಮೆ ತಮ್ಮದೇ ಮನೆಗಳ ಪ್ರತಿಕ್ರುತಿಯ ನಿರ‍್ಮಾಣ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದರು. ಬಿಡುವಿನ ವೇಳೆಯನ್ನು ಈ ರೀತಿಯಲ್ಲಿ ಕಳೆಯುತ್ತಿದ್ದರು. ಅತ್ಯಂತ ಶ್ರೀಮಂತರು ಮಾತ್ರ ನಿರ‍್ಮಿಸುತ್ತಿದ್ದ ಈ ಚಿಕಣಿಗಳನ್ನು ಯಾವುದೇ ಕಾರಣಕ್ಕೂ ಬೇಕಾಬಿಟ್ಟಿ ರಚಿಸಲು ಸಮ್ಮತಿಸುತ್ತಿರಲಿಲ್ಲ. ನಿಕರವಾದ ಅಳತೆ, ವಿವರಣೆ ಮತ್ತು ಸುಂದರವಾಗಿ ರಚಿಸಲು ಅವರಲ್ಲೇ ಪೈಪೋಟಿ ಇತ್ತೆಂದರೂ ತಪ್ಪಿಲ್ಲ. ಇವುಗಳೆಲ್ಲಿ ಪ್ರಾನ್ಸಿನ ಕುಶಲಕಾರ‍್ಮಿಕರ ಕೈವಾಡ ಕಾಣಬಹುದು. ಚೀನಿಯರು ಉಣ್ಣಲು ಬಳಸುವ ಸಣ್ಣ ಸಣ್ಣ ಸಲಕರಣೆಗಳನ್ನು ಈ ಚಿಕಣಿಗಳ ಅಲಂಕಾರಕ್ಕಾಗಿ ಉಪಯೋಗಿಸಿರುವುದು ವಿಶೇಶ. ಚಿಕಣಿ ಮನೆಗಳ ನಿರ‍್ಮಾಣಕ್ಕೆ ತಗಲುವ ವೆಚ್ಚ ಬಹಳ ಹೆಚ್ಚು. ಆಂಸ್ಟರ್‌ಡ್ಯಾಮ್’ನ ಕಾಲುವೆ ಬಳಿ ಮನೆ ನಿರ‍್ಮಾಣಕ್ಕೆ ಆಗುವಶ್ಟೇ ವೆಚ್ಚ ಈ ಗೊಂಬೆ ಮನೆಗಳ ನಿರ‍್ಮಾಣಕ್ಕೆ ಆಗುತ್ತಿತ್ತಂತೆ. ಹಾಗಾಗಿ ಇದು ಶ್ರೀಮಂತರಿಗೆ ಸೀಮಿತವಾದ ಹವ್ಯಾಸವಾಗಿತ್ತು.

17ನೇ ಶತಮಾನದಲ್ಲಿ ಅಂದರೆ 300 ವರ‍್ಶಗಳ ಹಿಂದೆ ನಿರ‍್ಮಾಣವಾದ ಚಿಕಣಿ ಮನೆಗಳಲ್ಲಿ ಹಲವು ಈಗಲೂ ಆಂಸ್ಟರ್ ಡ್ಯಾಂ ನ ರಿಜ್ಕ್ಸ್ ಮತ್ತು ಹಾರ‍್ಲೆಮ್ಮಿನ ಪ್ರಾನ್ಸ್ ಹಾಲ್ಸ್ ವಸ್ತು ಸಂಗ್ರಹಾಲಯದಲ್ಲಿ ಪ್ರದರ‍್ಶನಕ್ಕಿವೆ. ಇವುಗಳಲ್ಲಿ ಕೆಲವಂತೂ ಅತ್ಯುತ್ತಮವಾಗಿ ಸಂರಕ್ಶಿಸಲ್ಪಟ್ಟಿದ್ದು ಮತ್ತೆ ಕೆಲವು ಅತ್ಯದ್ಬುತವಾಗಿ ಅಲಂಕ್ರುತಗೊಂಡಿದೆ. ಬಹುಶಹ ಮಡುರೊಡಾಮ್ ಚಿಕಣಿ ನಗರದ ಸ್ರುಶ್ಟಿ ಈ ಸಂಪ್ರದಾಯದ ಮುಂದುವರೆದ ಬಾಗವಾಗಿರಬಹುದೇ? ಇರಲಿಕ್ಕೆ ಸಾದ್ಯ.

ಮಡುರೋಡಾಮ್ ನ ಹೆಸರಿನ ಹಿನ್ನೆಲೆ

ಈ ಚಿಕಣಿ ನಗರಕ್ಕೆ ಜಾರ‍್ಜ್ ಮಡುರೊನ ಗ್ನಾಪಕಾರ‍್ತವಾಗಿ ‘ಮಡುರೊಡಾಮ್’ ಎಂದು ನಾಮಕರಣ ಮಾಡಲಾಗಿದೆ. ಮಡುರೊ ಡಚ್ ಪ್ರತಿರೋದದ ಸದಸ್ಯನಾಗಿದ್ದ. ಯುದ್ದ ಕೈದಿಗಳು, ರಾಜಕೀಯ ವಿರೋದಿಗಳು, ನಿರಾಶ್ರಿತರನ್ನು ಬಂದಿಸಿಡುವ ಕಾನ್ಸಂಟ್ರೇಶನ್ ಕ್ಯಾಂಪ್‍ನಲ್ಲಿ ಜಾರ‍್ಜ್ ಮಡುರೊ 1945ರಲ್ಲಿ ಕೊನೆಯುಸಿರೆಳೆದ.. ಆತನ ಪೋಶಕರು ತಮ್ಮೆಲ್ಲಾ ಹಣವನ್ನು ತಮ್ಮ ಮಗನ ನೆನಪಿಗಾಗಿ ಅವನ ಹೆಸರಿನಲ್ಲಿ ಈ ಚಿಕಣಿ ನಗರವನ್ನು ನಿರ‍್ಮಿಸಲು ದಾನ ಮಾಡಿದರು. ಮಡುರೊಡಾಮ್ ಚಿಕಣಿ ನಗರದ ವಾಸ್ತು ಶಿಲ್ಪಿ ಎಸ್ ಜೆ ಬೌಮ ಈ ತೀಮ್ ಪಾರ‍್ಕಿನ ಸ್ರುಶ್ಟಿಕರ‍್ತ. ಇದರ ತೀಮ್ ‘ಹೆಟ್ ಸ್ಟಡ್ಜೆ ಮೆಟ್ ಡೆ ಗ್ಲಿಮ್ಲಾಚ್’ ಅಂದರೆ ‘ಕಿರು ನಗೆಯ ಕಿರು ನಗರ’. ಸಾರ‍್ತಕವಾದ, ನಿಕರವಾದ, ಅರ‍್ತಗರ‍್ಬಿತ ತೀಮ್. ಈ ಪುಟ್ಟ ನಗರ ಪ್ರವಾಸಿಗರ ಮನದಲ್ಲಿ ಕಿರು ನಗೆ ಹೊಮ್ಮಿಸುವಲ್ಲಿ ಆಶ್ಚರ‍್ಯಚಕಿತರನ್ನಾಗಿಸುವಲ್ಲಿ ಸಪಲತೆ ಕಂಡಿದೆ.

ಮಡುರೊಡಾಮ್‍ನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಕಲಾಕಾರರು ತಾವು ರಚಿಸಿರುವ ಪ್ರತಿಯೊಂದು ಚಿಕಣಿಯನ್ನು 1:25ರ ಅನುಪಾತದಲ್ಲಿ ನಿಕರವಾಗಿ ಕರಾರುವಾಕ್ಕಾಗಿ ರಚಿಸಿದ್ದಾರೆ. ಈ ತೆರೆದ ತೀಮ್ ಪಾರ‍್ಕಿನ ಬೀದಿ ಬದಿಯಲ್ಲಿರುವ ಮರದಿಂದ ಮೊದಲ್ಗೊಂಡು ಟುಲಿಪ್ ಹೂವಿನವರೆಗೂ ಪ್ರತಿಯೊಂದು ಸಹ ಅಳತೆಗೆ ತಕ್ಕಾಗಿದೆ. ಈ ತೀಮ್ ಪಾರ‍್ಕಿನಲ್ಲಿ ಹೊಸ ಆಕರ‍್ಶಣೆಯನ್ನು ಸೇರಿಸಬೇಕಾದಲ್ಲಿ ಮೊದಲು ಕಲಾಕಾರರು ಕಟ್ಟಡದ ಎಲ್ಲಾ ಅಂಶಗಳನ್ನು ಸಂಪೂರ‍್ಣವಾಗಿ ಅಬ್ಯಸಿಸಿ ವಿವರಗಳನ್ನು ಕಲೆಹಾಕುತ್ತಾರೆ. ಚಿಕ್ಕ ಚಿಕ್ಕವನ್ನೂ ಅಳತೆ ಮಾಡಿ ಅದಕ್ಕೆ ತಕ್ಕಂತೆ ಬೌತಿಕ ಮಾದರಿಯನ್ನು ರೂಪಿಸುವುದು ಮೊದಲ ಕೆಲಸ. ನಂತರ ಅಂತಿಮವಾಗಿ ಬಣ್ಣ ಹಚ್ಚಿ ಪಾರ‍್ಕಿನಲ್ಲಿ ಇರಿಸಲಾಗುತ್ತದೆ. ಪ್ರದರ‍್ಶನಕ್ಕೆ ಇಟ್ಟಿರುವ ಪ್ರತಿಯೊಂದು ಚಿಕಣಿ ಮಾದರಿಯ ಸಕಲ ವಿವರಗಳನ್ನು ಒಳಗೊಂಡ ಮಾಹಿತಿ ಪಲಕ ಮತ್ತು ಕೇಳ್ನೋಟದ (ಆಡಿಯೋ ವಿಸುಯಲ್) ತುಣುಕುಗಳು ಮಾದರಿಯ ಬಳಿ ಲಬ್ಯವಿದೆ.

ಮಡುರೊಡಾಮ್ ತೀಮ್ ಪಾರ‍್ಕ್ ತೆರೆದ ಉದ್ಯಾನವನ, ಹಾಗಾಗಿ ಇಲ್ಲಿರುವ ಪ್ರತಿಯೊಂದು ಮಾದರಿಯನ್ನೂ ಕಾಲಕಾಲಕ್ಕೆ ನಿರಂತರವಾಗಿ ಪರಿಶೀಲಿಸುವ ಅಗತ್ಯವಿದೆ. ಅವುಗಳ ರಕ್ಶಣೆ ಮತ್ತು ಪುನರ್ ಸ್ತಾಪನೆ ಬಹುಮುಕ್ಯ. ಈ ಮಿನಿ ನಗರದಲ್ಲಿನ ಜನರನ್ನೂ ಸಹ ಸರಿಯಾಗಿ ಗಮನಿಸಬೇಕಾದ್ದು ಮುಕ್ಯ. ಅವರುಗಳಿಗೆ ಕಾಲಕಾಲಕ್ಕೆ ಹಾಗೂ ವಾತಾವರಣಕ್ಕೆ ತಕ್ಕ ಬಟ್ಟೆಯನ್ನು ಹಾಕಲಾಗುತ್ತೆ.

ಉದ್ಯಾನವನವದ ಮೂರು ತೀಮ್‍

ಈ ಉದ್ಯಾನವನವನ್ನು ಮೂರು ತೀಮ್‍ಗಳಾಗಿ ವಿಂಗಡಿಸಿದೆ. ದೇಶದ ಸ್ತಳ ಲಕ್ಶಣದ ಮೇಲೆ ಮೊದಲನೆಯ ತೀಮ್, ‘ನೀರು ಸ್ನೇಹಿತ ಮತ್ತು ಶತ್ರು’. ಎರಡನೆಯ ತೀಮ್ ‘ಐತಿಹಾಸಿಕ ನಗರಗಳು’ ಕೊನೆಯ ಹಾಗೂ ಮೂರನೆಯ ತೀಮ್ ‘ದಿ ನೆದರ್ ಲ್ಯಾಂಡ್, ಈಸ್ ಯಾನ್ ಇನ್ಸಿಪಿರೇಶನ್ ಪಾರ್ ದ ವಲ್ಡ್’ ಅಂದರೆ ‘ನೆದರ್ ಲ್ಯಾಂಡ್ ವಿಶ್ವಕ್ಕೆ ಸ್ಪೂರ‍್ತಿಯಾಗಿದೆ’ ಎಂದು. ಮಡುರೊಡಾಮ್ ಚಿಕಣಿ ನಗರದಲ್ಲಿ ಹಾಲೆಂಡಿನ ಸುಪ್ರಸಿದ್ದ ಕಟ್ಟಡಗಳನ್ನು ಒಳಗೊಂಡಂತೆ ಸುಮಾರು 1148 ಮಾದರಿಗಳಿವೆ. ಇದರಲ್ಲಿ ಐತಿಹಾಸಿಕ ಸ್ಮಾರಕಗಳು, ಆದುನಿಕ ಕಟ್ಟಡಗಳು ಎಲ್ಲಾ ಸೇರಿವೆ. ವಾಸ್ತವತೆಗೆ ಹತ್ತಿರವಾಗಲು ಕಲಾಕಾರರು ಈ ಚಿಕಣಿ ನಗರದಲ್ಲಿ ಸಾರಿಗೆ ವ್ಯವಸ್ತೆಯನ್ನೂ ಮಾಡಿದ್ದಾರೆ. ಇದರಲ್ಲಿ ಬಸ್ಸುಗಳು, ರೈಲುಗಳು, ಟ್ರ್ಯಾಮ್‍ಗಳು ಮತ್ತು ವಾಸ್ತವವಾಗಿ ಚಲಿಸುವ ಹಡಗುಗಳಿವೆ.

ಇಲ್ಲಿ 4000 ಮೀಟರ್‍ನಶ್ಟು ಉದ್ದದ ರೈಲು ಮತ್ತು ಟ್ರ್ಯಾಮ್ ಹಳಿಗಳಿದ್ದು ಇವುಗಳ ಮೇಲೆ 14 ಮಾದರಿ ರೈಲುಗಳು ಓಡಾಡುತ್ತವೆ. ಇದರ ವಿಮಾನ ನಿಲ್ದಾಣದಲ್ಲಿ ವಿವಿದ ದೇಶಗಳ 32 ಚಿಕಣಿ ವಿಮಾನಗಳಿವೆ. ಮಡುರೊಡಾಮ್ ನಗರ ಕಾಲುವೆಯ ಬ್ರುಹತ್ ಜಾಲವನ್ನು ಹೊಂದಿದ್ದು ಇದರಲ್ಲಿ 58 ಹಡಗುಗಳು ಚಾಲನೆಯಲ್ಲಿರುತ್ತವೆ. ಈ ಕಾಲುವೆಗೆ ಅಡ್ಡಲಾಗಿ 27 ಸೇತುವೆ ಇದೆ. ರಸ್ತೆಗಳ ಇಕ್ಕೆಲಗಳಲ್ಲಿ 5000 ಮರಗಳಿದ್ದು, ಈ ಪುಟ್ಟ ನಗರವನ್ನು ಬೆಳಗಿಸಲು 50000 ಚಿಕಣಿ ದೀಪಗಳಿವೆ.

ಪ್ರವಾಸಿಗಳು ‘ಗಲಿವರ್’ ಆಗುವ ತಾಣ

ಮಾನವರಿಲ್ಲದೆ ಯಾವುದೇ ನಗರವನ್ನು ನಗರವೆನ್ನಲಾಗುವುದಿಲ್ಲ. ಹಾಗಾಗಿ ಮಡುರೊಡಾಮ್‍ನಲ್ಲಿ ಸರಿಸುಮಾರು ಹದಿನಾರು ಸಾವಿರ ಚಿಕಣಿ ನಿವಾಸಿಗಳಿದ್ದಾರೆ. ಚಿಕಣಿ ನಗರದ ಸುತ್ತಲೂ ಇವರುಗಳು ಹಂಚಿಹೋಗಿದ್ದಾರೆ. ಇವರಲ್ಲಿ ಬಹಳಶ್ಟು ಜನ ಪಾದಚಾರಿಗಳಾಗಿ ಕಾಣಿಸುತ್ತಾರೆ. ವಾಸ್ತವತೆಗೆ ಪೂರ‍್ಣ ಹತ್ತಿರವಾಗಲು ಮಡುರೊಡಾಮ್ ನಗರವು ಸಿಟಿ ಕೌನ್ಸಿಲ್, ಯೂತ್ ಕೌನ್ಸಿಲ್ ಮತ್ತು ಮೇಯರ್ ಅನ್ನು ಹೊಂದಿದೆ. ಮೂಲ ಮೇಯರ್ ಹದಿಹರೆಯದ ರಾಜಕುಮಾರಿ ಬಿಯಾಟ್ರಿಕ್ಸ್. ಮಡುರೊಡಾಮ್‍ನ ದೇಣಿಗೆ ಹಣವನ್ನು ನಿರ‍್ವಹಿಸಲು ಡೆನ್ ಹಾಗ್ ಶಾಲೆಯ ವಿದ್ಯಾರ‍್ತಿಯನ್ನು ಮಡುರೊಡಾಮ್ ಯೂತ್ ಕೌನ್ಸಿಲ್‍ಗೆ ನಾಮ ನಿರ‍್ದೇಶನ ಮಾಡುವ ಅವಕಾಶವಿದೆ.  ಪ್ರವಾಸಿಗರೆಲ್ಲಾ ಇಲ್ಲಿ ‘ಗಲಿವರ‍್’ ಗಳಾಗುವ ತಾಣವಾಗಿರುವ ಇದು ಸುತ್ತಾಡುಗರ ಮೆಚ್ಚುಗೆಯನ್ನು ಪಡೆದಿದೆ.

( ಮಾಹಿತಿ ಮತ್ತು ಚಿತ್ರಸೆಲೆ : everybodylovesamsterdam.wordpress.com, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: