ರಂಗಬೂಮಿ – ಪ್ರೇಕ್ಶಕನ ಜವಾಬ್ದಾರಿ
– ಪವಿತ್ರ ಜತಿನ್.
ನಾನು ಮೂಲತಹ ಮಂಗಳೂರಿನವಳು. ಹುಟ್ಟಿ ಬೆಳೆದದ್ದೆಲ್ಲಾ ಅಲ್ಲೇ. ಚಿಕ್ಕ ವಯಸ್ಸಿನಿಂದ ತುಳು ನಾಟಕ, ಯಕ್ಶಗಾನ ನೋಡಿ ಬೆಳೆದವಳು. ಶಾಲೆ ಮತ್ತು ಕಾಲೇಜು ದಿನಗಳಲ್ಲಿ ನಾಟಕ ಮತ್ತು ಯಕ್ಶಗಾನದಲ್ಲಿ ಅಬಿನಯಿಸಿದ್ದೂ ಇದೆ. ಹೈಸ್ಕೂಲ್ ದಿನಗಳಲ್ಲಿ ಐ ಕೆ ಬೊಳ್ವಾರ್ ಮತ್ತು ಡಾ. ಪಾಲ್ತಾಡಿ ರಾಮಕ್ರಿಶ್ಣ ಆಚಾರ್ ಅವರ ತರಬೇತಿಯೊಂದಿಗೆ ಕೆಲವೊಂದು ನಾಟಕ, ನ್ರುತ್ಯ ರೂಪಕ ಮಾಡಿರುವ ಹೆಮ್ಮೆ.
ಕೆಲಸಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಯಾಕೋ ನಾಟಕದ ಒಡನಾಟ ಸ್ವಲ್ಪ ಕಡಿಮೆಯಾಯಿತು. 2014ರಲ್ಲಿ ರಂಗಶಂಕರ ಸಂಸ್ತೆಯ ಬಗ್ಗೆ ತಿಳಿದಾಗಿನಂದ ಮತ್ತೆ ನಾಟಕ ನೋಡುವ ಹುಚ್ಚು ಶುರುವಾಯಿತು. ನನ್ನ ಸ್ನೇಹಿತೆ ಜೊತೆ ನಾಟಕ ನೋಡುವ ಆನಂದವೇ ಬೇರೆ. ನಾವಿಬ್ಬರು ಹೆಚ್ಚಾಗಿ ಬೇಟಿಯಾಗುವುದೇ ರಂಗಶಂಕರದಲ್ಲಿ.
ರಂಗಶಂಕರ ನಮ್ಮ ಪಾಲಿಗೆ ಒಂತರಾ ಶ್ರದ್ದಾ ಕೇಂದ್ರವಿದ್ದಂತೆ. ಅಲ್ಲಿನ ನಿಯಮಗಳು ನಮ್ಮನ್ನು ರಂಗದತ್ತ ಸೆಳೆಯುವಲ್ಲಿ ಯಶಸ್ವಿ. ಅಲ್ಲಿನ ಶಿಸ್ತೇ ಬೇರೆ. ನಮ್ಮಿಬ್ಬರಿಗೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಹೋಗುವುದೆಂದರೆ ಬೇಜಾರು. ಕಾರ್ಯಕ್ರಮ 6ಕ್ಕೆ ಎಂದಿದ್ದರೆ 7ಕ್ಕೆ ಶುರು ಮಾಡುತ್ತಾರೆ. ಆದರೆ ರಂಗಶಂಕರದಲ್ಲಿ ಹಾಗಲ್ಲ. ಒಂದು ನಿಮಿಶ ತಡವಾದರೂ ಪ್ರವೇಶ ಇಲ್ಲ. 7.30 ಅಂದರೆ ಅಶ್ಟಕ್ಕೇ ಕಾರ್ಯಕ್ರಮ ಶುರು. ಹಾಗಾಗಿ ನಮಗೂ ರಂಗಶಂಕರದಲ್ಲಿ ನಾಟಕ ನೋಡುವುದೆಂದರೆ ಪ್ರಾಣ.
ನಾವು ನೋಡಿದ ನಾಟಕ ತಂಡಗಳ ಪೈಕಿ ರಂಗಮಂಟಪ ತಂಡ ಕೂಡ ಒಂದು. ಕರಾವಳಿ ಕಡೆಯವರಾದ ಪ್ರಕಾಶಣ್ಣ ಮತ್ತು ಚಂಪಾ ಅಕ್ಕ ಅವರ ಅದ್ಬುತ ತಂಡ. ಅವರ 4 ನಾಟಕಗಳ ಪೈಕಿ ಮೂರನ್ನು ನೋಡಿರುವ ಕುಶಿ. 2019 ರ ನವೆಂಬರ್ ತಿಂಗಳಲ್ಲಿ ಈ ತಂಡದ 3 ನಾಟಕಗಳು 25, 50 ಮತ್ತು 75 ಪ್ರದರ್ಶನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಶೇತ್ರದಲ್ಲಿ ಕಂಡವು. ತುಂಬಾ ಚೊಕ್ಕ ಕಾರ್ಯಕ್ರಮ. ರಂಗಮಂದಿರ ತುಂಬಿದ ಪ್ರದರ್ಶನ.
ನಾಟಕವನ್ನು ವೇದಿಕೆ ಹತ್ತಿರದಿಂದ ನೋಡುವುದರಲ್ಲಿರುವ ಸುಕ ಬೇರೊಂದಿಲ್ಲ. 3 ದಿನ ಹೇಗೋ ಎರಡನೆಯ ಸಾಲಿನ ಮದ್ಯದ ಕುರ್ಚಿ ಪಡೆಯುವಲ್ಲಿ ಸಪಲರಾದ ಕುಶಿ. ಮಲ್ಲಿಗೆ, ಅಕ್ಕು ಮತ್ತು ಅನಬಿಗ್ನ ಶಕುಂತಲಾ – ಅದ್ಬುತ ನಾಟಕಗಳು. ಈ ನಾಟಕಗಳ ಪ್ರತಿ ಕಲಾವಿದರು ಅಪ್ರತಿಮ ಪ್ರತಿಬಾವಂತರು. ಪಾತ್ರ ಎಶ್ಟೇ ದೊಡ್ಡದಿರಲಿ ಅತವಾ ಚಿಕ್ಕದಿರಲಿ ಪ್ರತಿಯೊಬ್ಬರ ನಟನೆ ಅಶ್ಟೇ ನಾಜೂಕು.
ನನ್ನಂತ ರಂಗಬೂಮಿ ಪ್ರೇಮಿಗೆ ಸ್ವರ್ಗ ಮೂರೇ ಗೇಣು. ಆದರೆ ಈ ನಾಟಕವನ್ನು ನೋಡುವಾಗ ಅಕ್ಕಪಕ್ಕದಲ್ಲಿ ಇದ್ದ ಸಹ ಪ್ರೇಕ್ಶರರು ನನ್ನಲ್ಲೊಂದು ಸವಾಲನ್ನು ಮೂಡಿಸಿದರು.
ರಂಗಬೂಮಿಗಾಗಿ ಪ್ರೇಕ್ಶಕನ ಜವಾಬ್ದಾರಿ ಏನು?
ಮೊದಲನೆಯದು ನಾಟಕ ನೋಡುವುದು. ನೋಡಿದರಶ್ಟೇ ಸಾಕೆ? ಅದನ್ನು ಆನಂದಿಸಬೇಕು ಮತ್ತು ಮುಕ್ಯವಾಗಿ ಸಹಪ್ರೇಕ್ಶಕರಿಗೆ ಆನಂದಿಸಲು ಅವಕಾಶ ಮಾಡಿ ಕೊಡಬೇಕು.
ಸಾದಾರಣವಾಗಿ ನಾಟಕ ಹೆಚ್ಚೆಂದರೆ ಒಂದೂವರೆ ಗಂಟೆ ಇಂದ 2 ಗಂಟೆ ಇರುತ್ತದೆ . ಅಶ್ಟು ಹೊತ್ತು ನಮ್ಮ ಮೊಬೈಲ್ ನಿಂದ ದೂರ ಇರಲಾಗದೆ? ಪೋನ್ ರಿಂಗ್ ಆಗದಂತೆ ಎಚ್ಚರ ವಹಿಸುವುದು ಬಿಡಿ, ಪ್ರದರ್ಶನದ ವೇಳೆ ಪೋನ್ ನಲ್ಲಿ ಮಾತನಾಡುತ್ತಾರೆ ನಮ್ಮ ಜನ. ಒಂದು ನಾಟಕ ಪ್ರದರ್ಶನಕ್ಕೆ ತಯಾರಾಗಬೇಕೆಂದರೆ ತಿಂಗಳುಗಳ ಪರಿಶ್ರಮ ಬೇಕಾಗುತ್ತದೆ. ಅಂತದರಲ್ಲಿ ಆ ಶ್ರಮಕ್ಕೆ 2 ಗಂಟೆ ನಮ್ಮ ಗೌರವ ಸಲ್ಲುವುದು ಬೇಡವೇ?
ಮೊಬೈಲ್ ರಿಂಗಣಗಳು, ಪೋನಲ್ಲಿ ಮಾತಾಡುವುದು, ಪೋಟೋ ಪ್ಲಾಶ್, ಇದೆಲ್ಲ ನನ್ನ ಪ್ರಕಾರ ನಟರನ್ನು ಅಪಮಾನಿಸಿದಂತೆ ಹಾಗೂ ಸಹಪ್ರೇಕ್ಶಕರಿಗೆ ಅಡಚಣೆ ಮಾಡಿದಂತೆ. ಇಂದಿನ ತಂತ್ರಗ್ನಾನದ ಯುಗದಲ್ಲಿ ಪ್ರತಿಯೊಬ್ಬರೂ ಚಾಯಾಗ್ರಾಹಕರೇ. ಎಲ್ಲಿ ನೋಡಿದರೂ ಜನ ವರ್ತಮಾನ ಕ್ಶಣವನ್ನು ಅನುಬವಿಸುವ ಬದಲಾಗಿ ಬವಿಶ್ಯ ಕಾಲಕ್ಕೆ ನೆನಪನ್ನು ಹೊಂದಿಸುವಲ್ಲಿ ನಿರತರಾಗಿದ್ದಾರೆ. ಅದು ತಪ್ಪೆಂದು ಅಲ್ಲ. ಆದರೆ ರಂಗಬೂಮಿಯಲ್ಲಿ ಪ್ರಸ್ತುತವನ್ನು ಅನುಬವಿಸುವುದೇ ಮಹತ್ವ. ಇಲ್ಲಿ ಮರು-ಅಬಿನಯಕ್ಕೆ ಅವಕಾಶವಿಲ್ಲ. ಅಬಿನಯ ಏನಿದ್ದರೂ ನಿಮ್ಮ ಮುಂದೆ. ಸರಿ ಪಡಿಸುವ ಅವಕಾಶವಿಲ್ಲ. ಏನಿದ್ದರೂ ಅಬ್ಯಾಸ ಸಮಯದಲ್ಲೇ ಪರಿಪಕ್ವವಾಗಬೇಕು.
ರಂಗಬೂಮಿ ಅಬಿಮಾನಿಯಾಗಿ ಸಣ್ಣದೊಂದು ಕೋರಿಕೆ. ನಾಟಕ ನೋಡೋಣ. ನಾಟಕವನ್ನು ಆನಂದಿಸೋಣ ಮತ್ತು ಸಹಪ್ರೇಕ್ಶಕರನ್ನು ಆನಂದಿಸಲು ಬಿಡೋಣ. ಎಲ್ಲಕ್ಕಿಂತ ಮುಕ್ಯವಾಗಿ ಕಲಾವಿದರ ಮತ್ತು ತಂಡದ ಪರಿಶ್ರಮವನ್ನು ಗೌರವಿಸೋಣ.
ಇತ್ತೀಚಿನ ಅನಿಸಿಕೆಗಳು