‘ಹೇ ಸಿರಿ’ ನಾಟಕ ಲಾಯ್ಕ್ ಇತ್.. ಕಾಣಿ‌ ಮಾರ‍್ರೆ!

– ನರೇಶ್ ಬಟ್.

ಹೇ ಸಿರಿ, Hey Siri

ನಾ ಒಂದ್ ಸನ್ನಿವೇಶ ಹೇಳ್ತೆ, ಇಮ್ಯಾಜಿನ್ ಮಾಡ್ಕಣಿ ಅಕಾ? ನೀವ್ ಬೆಳಿಗ್ಗೆ ಎದ್ ಅಳವೆಡೆಗ್ ಹ್ವಾಪುಕೆ ತಯಾರಾಪು ಗಡಿಬಿಡಿಯಂಗೆ ಇರ‍್ತ್ರಿ. ತಯಾರಾಯ್ ಇನ್ನೇನ್ ಹೊರ‍್ಡುವ ಅಂದಲ್ ನಿಮ್ ಅಲೆಯುಲಿ (mobile) ತೋರುದಿಲ್ಲ! ಹಾಂಗೇ ಹುಡ್ಕುವತಿಗೆ ಮನೆಯಲ್ ನಿಮ್ ಮಗಳೂ ತೋರ‍್ದಿರೆ, ಎಲ್ ಹೋಯಿಲ್ ಅಂದೇಳಿ ಗೊತ್ತಾಯ್ದಿರೆ ಹ್ಯಾಂಗಾತ್? ಎದಿ ಒಂದ್ ನಮೂನಿ‌ ದಸಕ್ ಅಂಬುದಿಲ್ಯಾ?! ಹೀಂಗೇ ಶುರು ಆಪು ನಾಟಕ ‘ಹೇ ಸಿರಿ’!

ಹೆಸ್ರ್ ಕೇಂಡ್ರ್ ಕೂಡ್ಲೆ ಐ ಪೋನ್ ಇತ್ತಲಾ, ಅದ್ರದ್ ಬಳಕ(App) ಸಿರಿ ಬಗ್ಗೆ ಅಂತ ಅನ್ಸತ್ ಅಲಾ? ಆರೆ ಈ ನಾಟಕದಲ್ ಮಗ್ಳ್ ಕಾಣೆ ಆತ್ಲ್ ಅಂದ್ನಲಾ, ಅವ್ಳ್ ಹೆಸ್ರ್ ಸಿರಿ ಅಂದೇಳಿ. ಈಗಿನ್ ಕಾಲದ್ ಈ ಸುದ್ದಿ ವಾಹಿನಿಗಳ್ ಕೊಡು ಸುದ್ದಿಗಳ್, ವಾಟ್ಸಾಪ್ – ಪೇಸ್ಬುಕ್ಕಲ್ ಹರ‍್ದಾಡು ಸುದ್ದಿಗಳ್ ಆರಾಮಾಯ್ ಇಪ್ಪು ನಮ್ಮಲ್ಲೂ ಎಂತೆಂತಾ ಆಲೋಚ್ನಿ, ಆತಂಕ ಹುಟ್ಸತ್ ಅಂಬುದ್, ನಮ್ ಸುತ್ ಮುತ್ಲ್ ಇಪ್ಪು ನಮ್ಮವ್ರ್ ಬಗ್ಗೆ ನಮ್ಗೆ ಎಲ್ಲ ಗೊತ್ತಿತ್ ಅಂದ್ಕಂಡಿರತ್ ಆರೆ ನಾವ್ ಬ್ಯುಸಿ ಬ್ಯುಸಿ ಅಂತ ಓಡ್ತಾ ಇಪ್ಪುದ್ರೊಳಗೆ ಹ್ಯಾಂಗೆ ಅವ್ರ್ ಬಗ್ಗೆ ಹಲವಾರು ವಿಶ್ಯ ಎಲ್ಲ ನಮ್ಗೆ ಗೊತ್ತೆ ಇಪ್ಪುದಿಲ್ಲ ಅಂಬುದ್, ನಮ್ಗೆ ಸಿಕ್ಕಾಪಟ್ಟಿ ಸಿಟ್ ಇಲ್ಲ ಬೇಜಾರಾದಲ್ಲೇ ನಾವ್ ಯಾರಿಗೂ ಹೇಳುಕಾಗ ಅಂದ್ಕಂಡದ್ ಗುಟ್ಟೆಲ್ಲ ರಟ್ ಮಾಡತ್ ಅಂಬುದ್, ನಮ್ ಮನೆಯಲ್ ನಡು ಆಗುಹಗಳ್ ಬಗ್ಗೆ ನಮ್ಗಿಂತ ನಮ್ ನೆರ‍್ಮನಿ (ಪಕ್ಕದ್ಮನೆ) ಅವ್ರಿಗೇ ಹೆಚ್ ಆಲೋಚ್ನಿ ಅಂಬುದೆಲ್ಲ ಈ ನಾಟಕದಲ್ ಈರುಳ್ಳಿ ಸಿಪ್ಪಿ ಕಣಂಗೆ ಒಂದಾದ್ ಮೇಲೊಂದ್ ಬಿಚ್ಕಂತಾ ಹೋತ್.

ಹೀಂಗೆಲ್ಲ ಹೇಳ್ದೆ ಅಂದ್ಕಂಡ್ ಇದೊಂದು ಗಂಬೀರ, ತಲಿ ಹನ್ನೆರಡಾಣಿ ಮಾಡು ನಾಟಕ ಅಂದ್ಕಬೇಡಿ! ಇವ್ರ್ ಈ ಎಲ್ಲ ವಿಶ್ಯ ನಮ್ ಮನ್ಸಿಗ್ ನಾಟ್ಸುದ್ ಹಾಸ್ಯದ್ ಮೂಲಕವೇ! ನಾಟಕ ಕಾಂತಾ ಕಾಂತಾ ನೆಗ್ಯಾಡ್ತಾ ಇದ್ರೂ ಒಂದ್ ಸಲ ಮೌನ ಆವರ‍್ಸ್ದಲ್, ಹೌದಲಾ?! ನಾವ್ ಸುಮ್ನೆ ಓಡ್ತಾ ಇತ್ತಲ?! ನಮ್ ಸುತ್ತಮುತ್ತ ಇಪ್ಪೊರ್ ಬಗ್ಗೆ ನಮ್ಗ್ ನಿಜಕ್ಕೂ ಎಶ್ಟ ಗೊತ್ತಿತ್?! ಸಿಟ್ ಬಂದಲ್ ನಾವ್ ಮೈ‌ಮೇಲ್ ಬೂತ ಮೆಟ್ದಂಗ್ ಆಡತ್ತಲಾ?! ಹಿಂಗಿದ್ದೆಲ್ಲ ಕೇಳ್ವಿ ಮೂಡತ್.

‘ಹೇ ಸಿರಿ’ ಜುಲೈ 22ನೇ ತಾರೀಕ್ ಕೆ.ಹೆಚ್.ಕಲಾಸೌದದಲ್ ಇದ್ದಿತ್. ಮೊದ್ಲ್ ಸುಮಾರ್ ಸಲ ಪ್ರದರ‍್ಶನ ಆರೂ ನಂಗ್ ಹ್ಪಾಪುಕ್ ಆಯಿರ‍್ಲ. ಈ ಸಲ ಹೋಯ್ಕೆ ಅಂದೇಳಿ ಹೋಯ್ ಇದಿದೆ. ನಾಟಕದಲ್ ಸಿರಿ ಅಪ್ಪನ್ ಪಾತ್ರ ಮಾಡದ್ ಆದಿತ್ಯ ಹೆಗಡೆ, ಅಮ್ಮನ್ ಮಾತ್ರ ಮಾಡದ್ ಶಿಲ್ಪಾ ರುದ್ರಪ್ಪ, ತಮ್ಮನ್ ಪಾತ್ರ ಮಾಡದ್ ಅಂಜನ್, ಅವ್ನ್ ಗೆಳತಿ ಪಾತ್ರ ಮಾಡದ್ ವಿನುತಾ, ಅಬಿ ಪಾತ್ರ ಮಾಡದ್ ಸಚಿನ್, ಚಿಕ್ಕಮ್ಮನ್ ಪಾತ್ರ ಮಾಡದ್ ದಿವ್ಯಾ, ಚಿಕ್ಕಪ್ಪನ್ ಪಾತ್ರ ಮಾಡದ್ ಪ್ರಣವ್, ಕಿಶೋರ್ ಪಾತ್ರ ಮಾಡದ್ ಅನೂಪ್ ಮಯ್ಯ.. ಎಲ್ರೂ ಲಾಯ್ಕ್ ಮಾಡಿ ನಟ್ಸಿ ನಗೆಗಡ್ಲಲ್ ತೇಲ್ಸಿರ್. ಅವ್ರೆಲ್ಲರ್ ನಡ್ವೆ ಕೆಮಿಸ್ಟ್ರಿ ಕಾಂಬುದೇ ಚಂದ! ಈ ನಾಟಕ ಬರ‍್ದ್, ನಿರ‍್ದೇಶನ ಮಾಡಿ ದಿವ್ಯಾ ಕಾರಂತ್ರ್ ದೊಡ್ ದೊಡ್ ವಿಶ್ಯವನ್ನೂ ಸರಳ್ವಾಯಿ, ಒಂದ್ ಚೂರೂ ಬೇಜಾರ್ ಬರ‍್ಸ್ದೆ, ನೋಡುಗ್ರನ್ನ ಗಟ್ಟಿಯಾಯ್ ಹಿಡ್ದಿಟ್ಕಂಡ್, ನೆಗಾಡ್ಸಿ ನೆಗಾಡ್ಸಿ ತಲಪಿಸ್ಲಕ್ ಅಂಬುದನ್ನ ತೋರ‍್ಸಿಕೊಡ್ತ್ರ್.

ಮುಂದಿನ್ ಸಲ ಪ್ರದರ‍್ಶನ ಇದ್ದಲ್ ತಪ್ದೇ ಹೋಯ್ನಿ. ಹ್ವಾಪತಿಗೆ ಮನ್ಸಿಂದ್ ಒಂದ್ ಚೀಲದಲ್ ನಿಮ್ದ್ ಎಲ್ಲ ಮಂಡಿ ಬಿಸಿ, ತೊಂದ್ರಿ, ತಾಪತ್ರಯ ಎಲ್ಲ ಹಾಯ್ಕಂಡ್ ಹೋಯ್ನಿ. ನಾಟಕ ಮುಗ್ಸಿ ಹೆರಗ್ ಬಪ್ಪತಿಗೆ ಚೀಲ ಕಾಲಿ ಆಯಿ, ನೀವ್ ನಿರಾಳ ಆಯಿ ಬತ್ರಿ ಅಂಬುದಕ್ಕೆ ನಾ ಗ್ಯಾರಂಟಿ ಕೊಡ್ತೆ. ಹೋತ್ರ್ಯಲಾ?

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Divya Karanth says:

    Awesome! Thank you 🙂

ಅನಿಸಿಕೆ ಬರೆಯಿರಿ: