ಮಕ್ಕಳ ಕತೆ : ಪರರ ವಸ್ತು

ವೆಂಕಟೇಶ ಚಾಗಿ.

ಪೆನ್ನು, pen

ರಾಮಪುರದ ಶಾಲೆಯ ವಿದ್ಯಾರ‍್ತಿಗಳು ತುಂಬಾ ಜಾಣರಾಗಿದ್ದರು. ಅವರು ಆಟಪಾಟಗಳಲ್ಲಿ ಯಾವಾಗಲೂ ಮುಂದು. ಮನೆಯಲ್ಲಿ ತಂದೆ-ತಾಯಿಯರು ಹೇಳಿದ ಮಾತುಗಳನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಗುರುಹಿರಿಯರಿಗೆ ಗೌರವ ಕೊಡುತ್ತಿದ್ದರು, ನಯ ವಿನಯದಿಂದ ಅವರ ಮಾತುಗಳನ್ನು ಕೇಳುತ್ತಿದ್ದರು. ಶಾಲೆಯಲ್ಲಿ ಗುರುಗಳು ವಿದ್ಯಾರ‍್ತಿಗಳಿಗೆ ಉತ್ತಮ ಮಾರ‍್ಗದರ‍್ಶಕರಾಗಿ, ಸರಿ-ತಪ್ಪುಗಳ ಬಗ್ಗೆ ತಿಳಿಸಿ ವಿದ್ಯಾರ‍್ತಿಗಳು ಸರಿಯಾದ ದಾರಿಯಲ್ಲಿ ನಡೆಯುವಂತೆ ತಿಳುವಳಿಕೆಯನ್ನು ನೀಡುತ್ತಿದ್ದರು.

ರಮೇಶ್ ರಾಮಪುರದ ಶಾಲೆಯ ವಿದ್ಯಾರ‍್ತಿ. ರಮೇಶನು ಒಂದು ದಿನ ಶಾಲೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂದು ಹೊಸದಾದ ದುಬಾರಿ ಪೆನ್ನು ಬಿದ್ದಿರುವುದನ್ನು ಕಂಡನು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ಪೆನ್ನಿನ ಬಗ್ಗೆ ವಿಚಾರಿಸಲು ಸಾದ್ಯವಾಗದೇ ಅದನ್ನು ತಾನೆ ಇಟ್ಟುಕೊಂಡು ಶಾಲೆಗೆ ನಡೆದ. ಶಾಲೆಯಲ್ಲಿಯೂ ಅದರ ಬಗ್ಗೆ ವಿಚಾರಿಸಿದೆ, ಸುಂದರವಾದ ಪೆನ್ನನ್ನು ಉಪಯೋಗಿಸತೊಡಗಿದ. ಸ್ನೇಹಿತರು ಕೇಳಿದಾಗ ತಾನು ಊರಿಗೆ ಹೋಗಿದ್ದಾಗ ತನಗೆ ಸಿಕ್ಕಿದ್ದು ಎಂದು ಹೇಳತೊಡಗಿದ. ತರಗತಿಯ ಎಲ್ಲಾ ವಿದ್ಯಾರ‍್ತಿಗಳಿಗೂ ಅವನ ಪೆನ್ನನ್ನು ನೋಡುವ ಆಸೆಯಿಂದ ಅವನ ಬಳಿ ಬರತೊಡಗಿದರು. ಎಲ್ಲರಿಗೂ ಪೆನ್ನನ್ನು ತೋರಿಸುತ್ತಾ ಕುಶಿಯಿಂದ ಬೀಗುತ್ತಿದ್ದ.

ಮರುದಿನ ಬೆಳಿಗ್ಗೆಯೇ ಪಕ್ಕದ ತರಗತಿಯಲ್ಲಿ ಗದ್ದಲ ಶುರುವಾಗಿತ್ತು. ರಮೇಶ ಗಲಾಟೆಯನ್ನು ನೋಡಲು ಪಕ್ಕದ ಕೊಟಡಿಗೆ ತೆರಳಿದ. ಅಲ್ಲಿ ಸಚಿನ್ ಎಂಬ ವಿದ್ಯಾರ‍್ತಿ ತನ್ನ ಪೆನ್ನನ್ನು ಕಳೆದುಕೊಂಡಿದ್ದ. ಗುರುಗಳು ಎಲ್ಲರನ್ನು ವಿಚಾರಿಸುತ್ತಿದ್ದರು. ಸಚಿನ್ ತಂದೆ ಗುರುಗಳ ಬಳಿ ಬಂದು, ದುಬಾರಿ ಪೆನ್ ಆದದ್ದರಿಂದ ತರಗತಿಯ ವಿದ್ಯಾರ‍್ತಿಗಳು ಯಾರೋ ಕದ್ದಿರಬಹುದು ಎಂದು ದೂರು ನೀಡಿದರು. ಎಲ್ಲರೂ ತಾವು ನೋಡಿಲ್ಲ ಹಾಗೂ ಕದ್ದಿಲ್ಲವೆಂದು ಹೇಳುತ್ತಿದ್ದರು. ರಮೇಶನಿಗೆ ಆತನ ಬಳಿ ಇರುವ ಪೆನ್ನು ಸಚಿನನದ್ದೇ ಇರಬಹುದು ಎಂದು ಅನುಮಾನ ಮೂಡತೊಡಗಿತು..

ರಮೇಶ, ‘ಆ ಪೆನ್ನನ್ನು ತಾನು ಕರೀದಿಸಿಲ್ಲ, ಆದ್ದರಿಂದ ಪೆನ್ನು ತನ್ನದಲ್ಲದ್ದು, ಪರರ ವಸ್ತು. ಪರವಸ್ತು ಪಾಶಾಣಕ್ಕೆ ಸಮಾನ’ ಎಂದು ಮನಸ್ಸಿನಲ್ಲಿ ಅಂದುಕೊಂಡ. ಆದರೆ ಮತ್ತೆ ಯೋಚಿಸುತ್ತಾ ‘ಪೆನ್ನು ನನಗೆ ದಾರಿಯಲ್ಲಿ ಸಿಕ್ಕಿದ್ದು, ನಾನು ಕದ್ದಿರುವುದಲ್ಲ, ನಾನೇಕೆ ಕೊಡಬೇಕು? ನಾನು ಯಾರಿಗೂ ಕೊಡುವುದಿಲ್ಲ’ ಎಂದಂದುಕೊಂಡ. ಮನೆಗೆ ಹೋದಾಗಲೂ ತನ್ನ ಬಳಿ ಇರುವ ಪೆನ್ನಿನ ಬಗ್ಗೆ ವಿಚಾರ ಮಾಡತೊಡಗಿದ. ರಮೇನ ಸ್ನೇಹಿತರೂ ‘ಇದು ಸಚಿನನದ್ದೇ ಇರಬೇಕು. ಗುರುಗಳಿಗೆ ಕೊಟ್ಟುಬಿಡು’ ಎಂದು ಸಲಹೆ ನೀಡಿದರು. ಪೆನ್ನಿನ ವಿಚಾರವಾಗಿ ಅವನ ನೆಮ್ಮದಿ ಹಾಳಾಗಿತ್ತು.

ಮರುದಿನ ರಮೇಶ ಗುರುಗಳ ಬಳಿ ಬಂದು “ಈ ಪೆನ್ನು ತನಗೆ ದಾರಿಯಲ್ಲಿ ದೊರಕಿದ್ದು ಕಳೆದುಕೊಂಡವರಿಗೆ ಕೊಡಿ” ಎಂದು ಗುರುಗಳಿಗೆ ಕೊಟ್ಟನು. ಗುರುಗಳು ತರಗತಿಗೆ ಬಂದು ಪೆನ್ನನ್ನು ತೋರಿಸಿ “ಪೆನ್ನನ್ನು ಯಾರಾದರೂ ಕಳೆದುಕೊಂಡಿದ್ದೀರಾ” ಎಂದು ಕೇಳಿದಾಗ, ಪೆನ್ನನ್ನು ಕಳೆದುಕೊಂಡಿದ್ದ ಸಚಿನ್ “ಸರ್ ಅದು ನನ್ನದು” ಎಂದ. ಗುರುಗಳು ಸಚಿನ್ ಗೆ ಪೆನ್ನು ಕೊಟ್ಟಾಗ ಅವನು ತುಂಬಾ ಸಂತೋಶಗೊಂಡು ತನ್ನ ಪೆನ್ನನ್ನು ಎಲ್ಲರಿಗೂ ತೋರಿಸಿದ.

ರಮೇಶನಿಗೆ ಪರರ ವಸ್ತುವನ್ನು ಹಿಂದಿರುಗಿಸಿದ ತ್ರುಪ್ತಿ ದೊರೆಯಿತು. ತನ್ನದಲ್ಲದ ಪೆನ್ನಿನ ವಿಚಾರವಾಗಿ ನೆಮ್ಮದಿಯನ್ನು ಕಳೆದುಕೊಂಡಿದ್ದ ರಮೇಶ ‘ಪರರ ವಸ್ತು ಪಾಶಾಣಕ್ಕೆ ಸಮ’ ಎಂದು ಯಾಕೆ ಹೇಳುತ್ತಾರೆ ಎಂದು ತಿಳಿದುಕೊಂಡ.

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *