‘ರನ್ ವೇ’ಗೆ ಅಡ್ಡಲಾಗಿ ರೈಲ್ವೆ ಹಳಿ ಹೊಂದಿರುವ ವಿಮಾನ ನಿಲ್ದಾಣ
ಸಾರಿಗೆ ವ್ಯವಸ್ತೆಯಲ್ಲಿ ಪ್ರಸ್ತುತ ವಿಮಾನ ಪ್ರಯಾಣ ಅತಿ ಸುರಕ್ಶಿತ. ಇಂದಿನ ವೇಗದ ಜೀವನಕ್ಕೆ ಇದು ಸಮಯ ಉಳಿತಾಯದ ಸಾದನವೂ ಹೌದು. ಶತಮಾನಗಳ ಹಿಂದೆ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುವ ಕಲ್ಪನೆಯೇ ರೋಮಾಂಚನವೀಯುತ್ತಿತ್ತು. ಈಗ ಸಾಕ್ಶಾತ್ಕಾರವಾಗಿದೆ. ಒಂದು ಅಂದಾಜಿನ ಪ್ರಕಾರ, ವಿಶ್ವಾದ್ಯಂತ ಪ್ರತಿವರ‍್ಶ, ಕನಿಶ್ಟ 40 ಮಿಲಿಯನ್ ವಿಮಾನ ಹಾರಾಟ ನಡೆಯುತ್ತದೆ. ಇದರ ಪ್ರಮಾಣ ವರ‍್ಶದಿಂದ ವರ‍್ಶಕ್ಕೆ ಹೆಚ್ಚಾಗುವ ಸಂಬವವೇ ಜಾಸ್ತಿ. ಇಂದು ವಿಮಾನದಲ್ಲಿ ಹಾರಾಡುವುದು ಕಾರಿನಲ್ಲಿ ಚಲಿಸಿದಶ್ಟೇ ಸಾಮಾನ್ಯ. ಇಶ್ಟೆಲ್ಲಾ ಇದ್ದರೂ ವಿಮಾನ ಹಾರಾಟದಲ್ಲಿ ಕೆಲವು ವಿಶಯಗಳು ಅತ್ಯಂತ ಅನುಬವಿ ಪೈಲಟ್‍ಗಳನ್ನು ಹಾಗೂ ಪ್ರಯಾಣಿಕರನ್ನು ಆಗಾತಗೊಳಿಸುತ್ತದೆ. ಇದರಲ್ಲಿ ಮಂಚೂಣಿಯಲ್ಲಿರುವುದು ನ್ಯೂಜಿಲೆಂಡಿನ ಗಿಸ್ಬೋರ‍್ನ್ ವಿಮಾನ ನಿಲ್ದಾಣ ಹಾಗೂ ಅದರ ರನ್ ವೇ.
ಎಲ್ಗಿನ್ ಉಪನಗರದಲ್ಲಿರುವ ಗಿಸ್ಬೋರ‍್ನ್ ವಿಮಾನ ನಿಲ್ದಾಣ, ನ್ಯೂಜಿಲೆಂಡಿನಲ್ಲಿರುವ 62 ಆಂತರಿಕ ಮತ್ತು ಅಂತರರಾಶ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು. ಇದು 400 ಎಕರೆ ಪ್ರದೇಶದಲ್ಲಿ ಹರಡಿದೆ, ಉಪಯೋಗದಲ್ಲಿರುವ ಪಾಮರ್‍ಸ್ಟನ್- ಗಿಸ್ಬೋರ‍್ನ್ ರೈಲು ಮಾರ‍್ಗದ ರೈಲ್ವೇ ಹಳಿ, ವಿಮಾನದ ರನ್ ವೇ ನಡುವೆ ಹಾದುಹೋಗುವುದು ಈ ವಿಮಾನ ನಿಲ್ದಾಣದ ವಿಶೇಶತೆ. ಅಂದರೆ ಬಾನಿನಿಂದ ಇಳಿಯುವ ವಿಮಾನದಿಂದ ಕೆಲವೇ ಅಡಿಗಳ ದೂರದಲ್ಲಿ ರೈಲು ಅಡ್ಡಲಾಗಿ ಸಂಚರಿಸುತ್ತದೆ. ಎರಡು ವಿಬಿನ್ನ ರೀತಿಯ ಸಾರಿಗೆ ವಾಹನಗಳು, ಪರಸ್ಪರ ಡಿಕ್ಕಿ ಹೊಡೆಯುವ ಕೆಟ್ಟ ಅಲೋಚನೆ ಎಂತಹ ಅನುಬವಿ ಪ್ರಯಾಣಿಕರನ್ನೂ ಆತಂಕಕ್ಕೀಡು ಮಾಡುವುದರಲ್ಲಿ ಸಂದೇಹವಿಲ್ಲ. ಸಕಾರಣ ಈ ಮಾರ‍್ಗದಲ್ಲಿ ಸಂಚರಿಸುವ ರೈಲು ಮತ್ತು ವಿಮಾನದ ಚಲನವಲನವನ್ನು ಅತಿ ಜಾಗರೂಕತೆಯಿಂದ ನಿಯಂತ್ರಿಸಬೇಕಾದ ಅವಶ್ಯಕತೆಯಿದೆ.
ಗಿಸ್ಬೋರ‍್ನ್ ವಿಮಾನ ನಿಲ್ದಾಣದ 4297 ಅಡಿ ಉದ್ದದ ಈ ‘ರನ್ ವೇ’ಯ ಹೊರತಾಗಿ, ಹುಲ್ಲು ಹಾಸಿನ ಮೂರು ಸಣ್ಣ ಸಣ್ಣ ‘ರನ್ ವೇ’ಗಳಿವೆ. ಇವುಗಳ ಬಳಕೆ ಲಗು ವಿಮಾನ ಹಾರಾಟಕ್ಕೆ ಮಾತ್ರ. ಮುಕ್ಯ ‘ರನ್ ವೇ’ಯನ್ನು ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ವಿಮಾನಗಳ ಹಾರಾಟಕ್ಕಾಗಿ ಬಳಸಲಾಗುತ್ತಿದೆ. ಈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ದಟ್ಟಣೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಪಾಮರ್‍ಸ್ಟನ್-ಗಿಸ್ಬೋರ‍್ನ್ ರೈಲು ಮಾರ‍್ಗದಿಂದ ಇದುವರೆಗೂ ಯಾವುದೇ ಅಚಾತುರ‍್ಯದ ಗಟನೆ ಸಂಬವಿಸಿಲ್ಲ.
ವಿಮಾನ ದುರಂತಗಳ ಹಾಗೂ ಅಪಗಾತಗಳ ಶೇಕಡಾವರು ಪ್ರಮಾಣ ವಿಶ್ವಾದ್ಯಂತ ವರ‍್ಶದಿಂದ ವರ‍್ಶಕ್ಕೆ ಇಳಿಮುಕವಾಗುತ್ತಿರುವುದಕ್ಕೆ, ಕಟ್ಟುನಿಟ್ಟಾದ ಹಾಗೂ ಆದುನಿಕ ನಿಯಂತ್ರಣ ಕ್ರಮಗಳು ಜಾರಿಗೊಂಡಿರುವುದೇ ಮೂಲ ಕಾರಣ. ಇದರ ಸರಿ ಸಮನಾಗಿ ಗಿಸ್ಬೋರ‍್ನ್ ವಿಮಾನ ನಿಲ್ದಾಣವೂ ಆದುನಿಕ ನಿಯಂತ್ರಣಗಳನ್ನು ಅಳವಡಿಸುವತ್ತ ಹೆಜ್ಜೆ ಹಾಕಿದೆ. ಇದಕ್ಕೆ ಸಾಕಶ್ಟು ಹಣಕಾಸಿನ ನೆರವೂ ಸಹ ಲಬಿಸಿದ್ದು ಮೂಲ ರನ್ ವೇ, ಹಾಗೂ ಅದಕ್ಕೆ ಅಡ್ಡಲಾಗಿ ಸಾಗಿರುವ ರೈಲ್ವೇ ಹಳಿಗೆ ಅವಶ್ಯವಿರುವ ರಕ್ಶಣೆಯ ಕಾರ‍್ಯಕ್ಕೆ ಹಾಗೂ ಬದ್ರತೆಗೆ ವಿನಿಯೋಗಿಸಲಾಗಿದೆ. ಈ ತಾಣವು ತೈಯಾಹ್ವಿಟಿ ಪ್ರದೇಶದ ವಿಶಿಶ್ಟ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.
(ಮಾಹಿತಿ ಸೆಲೆ: amusingplanet, timesofindia.indiatimes.com, newzealand.com)
(ಚಿತ್ರ ಸೆಲೆ: unusualplaces.com )
ಇತ್ತೀಚಿನ ಅನಿಸಿಕೆಗಳು