ಅಪರಾದಿಗಳ ತವರಾಗಿದ್ದ ‘ಕೌಲೂನ್’

– ಮಾರಿಸನ್ ಮನೋಹರ್.

ಸರಿಯಾಗಿ ಆರು ಎಕರೆ ಕೂಡ ಇರದ ಹಾಂಕಾಂಗ್‌ನ ಕೌಲೂನ್‌ (Kowloon) ಪಟ್ಟಣದಲ್ಲಿ 1990ರಲ್ಲಿ ಒಂದೊಮ್ಮೆ 50,000 ಮಂದಿ ಒಕ್ಕಲಿದ್ದರು. ಜಗತ್ತಿನ ತುಂಬಾ ಮಂದಿ ದಟ್ಟಣೆಯ ಪಟ್ಟಣಗಳಲ್ಲಿ ಇದು ಒಂದಾಗಿತ್ತು. ಕೌಲೂನ್‌ಗೆ ಕಾವಲು, ಏರ‍್ಪಾಡು, ನೀರು, ಮಿಂಚು (electricity) ಮುಂತಾದ ಬೇಕುಗಳನ್ನು ಪಟ್ಟಣಪಾಲಿಕೆ ಕೊಡುತ್ತಿರಲಿಲ್ಲ. ಕೌಲೂನ್‌ ಪಟ್ಟಣವನ್ನು ಇತ್ತ ಬ್ರಿಟಿಶರು ಅತ್ತ ಚೀನಿಯರು ತಮ್ಮ ಸುರ‍್ಪದಿಯೊಳಗೆ ತೆಗೆದುಕೊಳ್ಳದ ಕಾರಣಕ್ಕೆ ಇದು ಚೀನಿ ಮಾಪಿಯಾಗಳ ಕೈಗೆ ಸೇರಿತ್ತು. ಮಾಪಿಯಾಗಳೇ ಕೌಲೂನ್‌ ಪಟ್ಟಣವನ್ನು ಆಳುತ್ತಿದ್ದರು. ನೀರು ಮತ್ತು ಮಿಂಚಿನ ಜಾಲವನ್ನು ಮಾಪಿಯಾಗಳೇ ಹರಡಿದ್ದರು. ಅವರು ಕಾಳಸಂತೆಯಲ್ಲಿ ನೀರು ಮತ್ತು ಮಿಂಚು ಕರೀದಿ ಮಾಡಿ ಮಂದಿಗೆ ಮಾರುತ್ತಿದ್ದರು.

ಮಂದಿ ದಟ್ಟಣೆಯ ಕೌಲೂನ್‌ನ ಹಳಮೆಯೂ ತುಂಬಾ ಆಸಕ್ತಿಕರವಾಗಿದೆ!

ಬ್ರಿಟಿಶರ ಮತ್ತು ಚೀನಿ ದೊರೆಗಳ ನಡುವೆ ಅಪೀಮು ಕಾದಾಟಗಳು ನಡೆದವು. ಚೀನಿಯರಿಗೆ ಅಪೀಮು ಮಾರುವ ಪೂರ‍್ತಿ ಅದಿಕಾರ ತನಗೆ ಬೇಕೆಂದು ಬ್ರಿಟಿಶ್ ಕಂಪನಿ ಕಾದಾಡುತ್ತಿತ್ತು. 1842 ರಲ್ಲಿ ಕ್ವಿಂಗ ಅರಸರು ಮತ್ತು ಬ್ರಿಟಿಶರ ನಡುವೆ ‘ನಾನ್‌ಕಿಂಗ್’ ಒಪ್ಪಂದವಾಯ್ತು. ಆ ಒಪ್ಪಂದದ ಮೇರೆಗೆ ಕ್ವಿಂಗ್ ಅರಸರು ಹಾಂಕಾಂಗ್ ಅನ್ನು ಬ್ರಿಟಿಶರಿಗೆ ಬಿಟ್ಟುಕೊಡುತ್ತಾರೆ. ಆದರೆ ಬ್ರಿಟಿಶರು ಇನ್ನೂ ಮುಂದಕ್ಕೆ ಬರಬಾರದೆಂದು ತಮ್ಮ ಗಡಿಯಲ್ಲಿ ಒಂದು ಕಾವಲು ಗೋಡೆ ಎಬ್ಬಿಸುತ್ತಾರೆ. ಈ ಕಾವಲು ಗೋಡೆಯ ಸುತ್ತಮುತ್ತ ಕೌಲೂನ್‌ ಪಟ್ಟಣ ಬೆಳೆಯತೊಡಗಿತು. ಗೋಡೆಯ ಸುತ್ತಮುತ್ತ ಬೆಳೆದ ಪಟ್ಟಣಕ್ಕೆ ಕೌಲೂನ್‌ ಗೋಡೆ ಪಟ್ಟಣ (Kowloon walled city) ಎಂಬ ಹೆಸರು ಬಿತ್ತು.

1912 ರಲ್ಲಿ ಕ್ವಿಂಗ್ ಅರಸರ ಆಳ್ವಿಕೆ ನಿಂತು ಹೋಯಿತು. ಆಗ ಕೌಲೂನ್‌ ಪಟ್ಟಣ ಬ್ರಿಟಿಶರ ಕೈಸೇರಿತು. ಆದರೆ ಬ್ರಿಟಿಶರಿಗೆ ಹಾಂಕಾಂಗ್ ನ ಮೇಲೆ ಆಸಕ್ತಿಯಿತ್ತು. ಈ ಪಟ್ಟಣದ ಮೇಲೆ ಇರಲಿಲ್ಲ, ಹೀಗಾಗಿ ಕೌಲೂನ್‌ ಅತ್ತ ಚೀನಿಯರಿಗೂ ಸೇರದೆ ಇತ್ತ ಬ್ರಿಟಿಶರಿಗೂ ಸೇರದೆ ತಬ್ಬಲಿಯಾಗಿ ಹಾಳು ಪಟ್ಟಣವಾಯ್ತು‌. ಆಗ ಈ ಏರ‍್ಪಾಡು ತಬ್ಬಲಿತನವನ್ನು (lawlessness) ಬಳಸಿಕೊಂಡು ಎದ್ದ ಚೀನಿ ಮಾಪಿಯಾಗಳು ಈ ಪಟ್ಟಣವನ್ನು ತಮ್ಮ ಗುಟ್ಟುಕೂಟವಾಗಿ(secret societies) ಮಾಡಿಕೊಂಡು ಆಳತೊಡಗಿದವು. ಚೀನಿಯರ ಈ ಗುಟ್ಟುಕೂಟಗಳನ್ನು ಟ್ರಿಯಾಡುಗಳು ಅಂತ ಕರೆಯುತ್ತಾರೆ. ಮುನಿಸಿಪಾಲಿಟಿಗಳು ಪಟ್ಟಣದ ಮಂದಿಯಿಂದ ತೆರಿಗೆ ವಸೂಲು ಮಾಡಿದಂತೆ ಈ ಮಾಪಿಯಾಗಳು ಕೌಲೂನ್‌ನ ಮಂದಿಯಿಂದ ಅಂಗಡಿಗಳಿಂದ ತೆರಿಗೆ ಎಳೆದುಕೊಳ್ಳುತ್ತಿದ್ದವು.

ಇಲ್ಲಿನ ಕ್ರೂರತೆಗೆ ಹೆದರಿ ಪೋಲೀಸರೂ ಕಾಲಿಡುತ್ತಿರಲಿಲ್ಲ!

ಎರಡನೇ ದೊಡ್ಡಕಾದಾಟದಲ್ಲಿ ಜಪಾನ್ ಚೀನಾವನ್ನು ಸೋಲಿಸಿ ಹಾಂಕಾಂಗ್ ತನ್ನದಾಗಿ ಮಾಡಿಕೊಂಡಿತು. ಆದರೆ 1945 ರಲ್ಲಿ ಜಪಾನ್ ಸೋತುಹೋಯಿತು. ಆಗ ಮತ್ತೆ ಕೌಲೂನ್‌ ಚೀನಿಯರಿಗೆ ಸೇರಿತು. ಚೀನಾದಿಂದ ಕಾದಾಟ ನಿರಾಶ್ರಿತರು ಬಂದು ಹಾಂಕಾಂಗ್ ಸೇರಿದಾಗ ಅವರಿಗೆ ಇರಲು ಜಾಗ ಕೊಟ್ಟದ್ದು ಇದೇ ಕೌಲೂನ್‌. ಆದರೆ ಚೀನಾದ ಕಣ್ಣೆಲ್ಲಾ ಸಿರಿವಂತ ಹಾಂಕಾಂಗ್ ಪಟ್ಟಣದ ಮೇಲೆ ಇತ್ತು. ಅದಕ್ಕೆ ಈ ಕೌಲೂನ್‌ ಕೊಳಗೇರಿಯ ಮೇಲೆ ಯಾವ ಮಮಕಾರವೂ ಇರಲಿಲ್ಲ. 1945 ರಿಂದ ಬ್ರಿಟಿಶ್ ಸಾಮ್ರಾಜ್ಯ ಕೂಡ ಅಳಿಯುವ ಹಾದಿ ಹಿಡಿದಿತ್ತು. ಬ್ರಿಟಿಶರಿಗೂ ಹಾಂಕಾಂಗ್ ಮೇಲೆ ಕಣ್ಣಿತ್ತು, ಅವರಿಗೂ ಈ ಕೌಲೂನ್‌ ಬೇಡವಾಗಿತ್ತು. ಹೀಗೆ ಎಲ್ಲರಿಗೂ ಬೇಡವಾದ ಕೌಲೂನ್‌ನಲ್ಲಿ ತನ್ನದೇ ಆದ ಮಾಪಿಯಾ ಸರಕಾರ, ತೆರಿಗೆ, ಮನೆ ಒಕ್ಕಲು ಕಟ್ಟಳೆಗಳು, ಮತ್ತು ಕಾರಕಾನೆಗಳು ಹುಟ್ಟಿಕೊಂಡವು. ಇವೆಲ್ಲವುಗಳ ಮೇಲೆ ‘14K’ ಮತ್ತು ‘ಸುನ ಯೀ ಆನ’ ಎಂಬ ಟ್ರಿಯಾಡು ಮಾಪಿಯಾಗಳು ಬಿಗಿಯಾದ ಹಿಡಿತ ಹೊಂದಿದ್ದವು. ಕೌಲೂನ್‌ನ ಒಳಗೆ ಕಾಲಿಡಲು ಹಾಂಕಾಂಗ್ ಪೋಲಿಸರೇ ಹೆದರಿ ಹೋಗುತ್ತಿದ್ದರು! ಈ ಮಾಪಿಯಾಗಳು ಅಶ್ಟು ಕ್ರೂರತೆ ಬೆಳೆಸಿಕೊಂಡಿದ್ದವು!

ತಲೆ ಮರೆಸಿಕೊಂಡ ಅಪರಾದಿಗಳ ಅಡ್ಡೆಯಾದ ಕೌಲೂನ್

ಯಾವ ಕಾನೂನು ಕಟ್ಟಳೆ ಏರ‍್ಪಾಡು ಇರದ ಕಾರಣಕ್ಕೆ ಹಾಂಕಾಂಗ್ ನ ಅಪರಾದಿಗಳು ಅಲ್ಲಿನ ಪೋಲಿಸರಿಂದ ತಪ್ಪಿಸಿಕೊಂಡು ಬಂದು ಕೌಲೂನ್‌ನ್ನು ಹೊಕ್ಕು ತಲೆಮರೆಸಿಕೊಳ್ಳುತ್ತಿದ್ದರು. ಹಾಂಕಾಂಗ್ ಕೋರ‍್ಟುಗಳ ಸರಹದ್ದಿನ ಹೊರಗೆ ಇದ್ದ ಕೌಲೂನ್‌ನಲ್ಲಿ ಯಾರನ್ನೂ ಬಂದಿಸುವ ಅದಿಕಾರವೂ ಪೋಲಿಸರಿಗೆ ಇರಲಿಲ್ಲ! ಇವೆಲ್ಲವುಗಳಿಂದ ಕೌಲೂನ್‌ ಎಲ್ಲ ಅಪರಾದಿ ಚಟುವಟಿಕೆಗಳಿಗೆ ರಾಜದಾನಿಯಾಯ್ತು. ಇಲ್ಲಿ ಜೂಜು ಅಡ್ಡೆಗಳು, ಡ್ರಗ್ಸ್ ಮತ್ತು ಅಪೀಮು ಕಳ್ಳ ಮಾರಾಟ ನಳನಳಿಸಿದವು. ಈ ಪಟ್ಟಣದ ಕಿರಿದಾದ ಕತ್ತಲೆ ತುಂಬಿದ ಬೀದಿಗಳಲ್ಲಿ ಡ್ರಗ್ಸ ತೆಗೆದುಕೊಳ್ಳುವವರು ಬಿದ್ದುಕೊಂಡಿರುತ್ತಿದ್ದರು.

ಕೇವಲ‌ ಆರು ಎಕರೆ ಜಾಗದಲ್ಲಿ ಒಂದರ ಮೇಲೆ ಒಂದು ಹದಿನೈದು ಮಹಡಿಗಳವರೆಗೆ ಮನೆಗಳು ಬೆಂಕಿಪೊಟ್ಟಣಗಳ ಹಾಗೆ ಕಟ್ಟಿದ್ದರು. ಮನೆಗಳು ತುಂಬಾ ಕಿರಿದಾಗಿಯೂ ಒಂದರ ಪಕ್ಕ ಒಂದು ಗಾಳಿ ಆಡಲೂ ಜಾಗ ಇಲ್ಲದ ಹಾಗೆ ಕಟ್ಟಿ ಕೊಂಡಿದ್ದರು. ಕಿಕ್ಕಿರಿದು ತುಂಬಿದ ಈ ಪಟ್ಟಣವನ್ನು ಪದಗಳಲ್ಲಿ ಕಟ್ಟಿಕೊಡಲು ಸಾದ್ಯವೇ ಇಲ್ಲ. ಅದನ್ನು ನೋಡಿದ ಮೇಲೆಯೇ ಗೊತ್ತಾಗುತ್ತದೆ! ಮುಂಬಯಿಯ ಚಾಳ್ ಗಳು ಎಶ್ಟೋ ವಾಸಿ ಅಂತ ನಿಮಗೆ ಅನ್ನಿಸದೇ ಇರದು. ಆರು ಎಕರೆ ಜಾಗದಲ್ಲಿ ಒಂದು ಇಂಚು ಜಾಗ ಕೂಡ ಗಾಳಿ ಬೆಳಕು ಆಡದ ಹಾಗೆ ಮನೆ, ಗಾಣ, ಅಂಗಡಿ ಅಲ್ಲದೇ ಮದ್ದುಮನೆಗಳನ್ನು ಕಿಕ್ಕಿರಿದು ಕಟ್ಟಿಕೊಂಡಿದ್ದರು.

ಇದು ಹಲವು ಕಸುಬುಗಳಿಗೆ ತಾಣ

ಇದನ್ನು ಕೊಳಗೇರಿ ಅಂತ ಊಹಿಸಲು ಬಾರದು. ಏಕೆಂದರೆ ಇದರಲ್ಲಿ ಮನೆಗಳೇ ಅಲ್ಲದೇ ನ್ಯೂಡಲ್ ಮಾಡುವ ಗಾಣಗಳು, ಎಲ್ಲ ತರಹದ ಸಾಮಾನು ಮಾರುವ ಅಂಗಡಿಗಳು, ಹಲ್ಲಿನ ಮದ್ದು ಮನೆಗಳು (dentist), ಬೇನೆಗಳ ಮದ್ದು ಮನೆಗಳು, ಬಟ್ಟೆ ನೇಯುವ ಕರೆಂಟು ಮಗ್ಗಗಳು, ಮೀನು ಕತ್ತರಿಸಿ ತೊಳೆದು ದೊಡ್ಡ ರೆಸ್ಟೋರೆಂಟುಗಳಿಗೆ ಮಾರುವ ಕಸುಬುಗಳು, ಕುರ‍್ಚಿಗಳಿಗೆ ಮೆತ್ತುಹಾಸು ಹಾಕುವ ಕಸುಬುದಾರರು, ಪೈಲ್‌ಗಳನ್ನು ಮಾಡಿ ಕೊಡುವವರು, ಬಟ್ಟೆ ಹೊಲೆಯುವವರು, ಕಬ್ಬಿಣ ಮತ್ತು ಉಕ್ಕಿನ ಲೇತ್ ಗಾಣದವರು, ದೊಡ್ಡ ಬ್ರಾಂಡುಗಳ ನಕಲಿ ಸಾಮಾನು ಮಾಡುವ ಇಮಿಟೇಶನ್ ಕಸುಬುದಾರರು ಎಲ್ಲ ಇದ್ದರು. ತೆರಿಗೆ ಟ್ಯಾಕ್ಸ ಇಲಾಕೆಗಳ ಯಾವ ಹಿಡಿತಕ್ಕೂ ಸಿಗದ ಈ ಗಾಣಗಳು ಕಸುಬುದಾರರು ತಾವೇ ಕಿರು ಉದ್ದಿಮೆಗಳನ್ನು ಮಾಡಿಕೊಂಡು ಅಗ್ಗದ ದರದಲ್ಲಿ ಕಳಪೆ ಗುಣಮಟ್ಟದ ಸಾಮಾನುಗಳನ್ನು ಮಾಡಿ ಕೊಡುತ್ತಾ ಇದ್ದರು. ಇಲ್ಲಿನ ಮದ್ದುಮನೆಗಳ ಡಾಕ್ಟರುಗಳು ಎಂದೂ ಸ್ಕೂಲಿಗೆ ಹೋಗಿದ್ದವರಲ್ಲ. ತಾವೇ ತಮ್ಮ ತಂದೆಗಳಿಂದ ಬಳುವಳಿಯಾಗಿ ಕಲಿತ ಕಸುಬಾಗಿತ್ತು!

ಕೊನೆಗೂ ನಡೆಯಿತು ಪೋಲೀಸ್ ರೈಡ್

ಬರಬರುತ್ತಾ ಕೌಲೂನ್‌ನಲ್ಲಿ ತಲೆಮರೆಸಿಕೊಂಡ ಅಪರಾದಿಗಳು ತುಂಬ ಹೆಚ್ಚಾದರು. ಜೂಜು ಮತ್ತು ಡ್ರಗ್ಸ್ ದಂದೆಗಳು ಹೆಚ್ಚಾಗಿ ಹೋದವು. ಹಾಂಕಾಂಗ್ ನ ಅಪರಾದಿಗಳೆಲ್ಲ ಇಲ್ಲಿಗೇ ಓಡಿಬರುತ್ತಾ ಪೋಲಿಸರಿಗೆ ತಾಳ್ಮೆ ಕೆಟ್ಟಿತು. 1974 ರಲ್ಲಿ ಹಾಂಕಾಂಗ್ ಪೋಲಿಸರು ಎಡೆಬಿಡದೆ 3,500 ಬಾರಿ ಕೌಲೂನ್‌ಅನ್ನು ರೇಡ್ ಮಾಡಿದರು. ಈ ದೊಡ್ಡ ಮಟ್ಟದ ಪೋಲಿಸ್ ಕಲಕಿನಿಂದಾಗಿ 1,800 ಕಿಲೋ ಡ್ರಗ್ಸ್ ಸಿಕ್ಕವು ಮತ್ತು 2,500 ಮಂದಿ ಅರೆಸ್ಟ್ ಆದರು! ಇಂತಹ ಪೋಲಿಸ್ ದಾಳಿಗಳಿಂದ ಟ್ರಿಯಾಡು ಮಾಪಿಯಾಗಳು ತಮ್ಮ ಕಸುವು ಕಳೆದುಕೊಂಡವು. ಇದೇ ಅಲ್ಲದೇ ಕೌಲೂನ್‌ನಲ್ಲಿ ಆಗ ಮನೆ ಕಟ್ಟಲು ಜಾಗವೇ ಸಿಗದಂತಾಗಿ ಪಟ್ಟಣ ಮಿತಿಯನ್ನು ಮೀರಿತ್ತು.

ಇಲ್ಲಿ ಒಕ್ಕಲಿದ್ದ ಎಲ್ಲಾ ಮಂದಿ ಅಪರಾದಿ ಕೆಲಸಗಳನ್ನು ಮಾಡುತ್ತಿರಲಿಲ್ಲ. ಇಲ್ಲಿ ಒಕ್ಕಲಿದ್ದ ಹೆಚ್ಚಿನ ಮಂದಿಯೆಲ್ಲಾ ಕಡಿಮೆ ಗಳಿಸುವ ಬಡಮಂದಿಯೇ ಆಗಿದ್ದರು. ಬಡಮಂದಿ ಆಗಿದ್ದರೂ ಇಲ್ಲಿ ಚೀನಿ ಸಂಸ್ಕ್ರುತಿಗೆ ಕೊರತೆ ಇರಲಿಲ್ಲ. ಕೌಲೂನ್‌ನಲ್ಲಿ ಕಾಲಿ ಇದ್ದ ಜಾಗ ಅದುವೇ ಕಟ್ಟಡಗಳ ಮೇಲ್ಚಾವಣಿಗಳು. ಕೌಲೂನ್‌ಿನ ಮಂದಿ ತಮ್ಮ ಸಮಾರಂಬ ಹುಟ್ಟುಹಬ್ಬ ಮೇಲ್ಚಾವಣಿಯ ಮೇಲೆಯೇ ಮಾಡಿಕೊಳ್ಳತ್ತಿದ್ದರು, ಮಕ್ಕಳು ಆಡವಾಡುತ್ತಿದ್ದವು ಕಲಿಕೆಮನೆಗೆ ಹೋಗುತ್ತಿದ್ದ ಕೆಲ ಮಕ್ಕಳು ಮನೆಕೆಲಸ ಅಲ್ಲಿಯೇ ಮಾಡಿಕೊಳ್ಳುತ್ತಿದ್ದವು. ಕೌಲೂನ್‌ನಲ್ಲಿ ಕಲಿಕೆಮನೆಗಳೇ ಇರಲಿಲ್ಲ. ಕೌಲೂನ್‌ಿನ ಕತ್ತಲೆ ತುಂಬಿದ ಬೀದಿಗಳಲ್ಲಿ ಚೀನಿ ಕಲಾವಿದರು ತಮ್ಮ ಸಂಗೀತ ನಾಟಕ ಜಾದೂ ಕೂಡ ಆಡಿ ಪುಡಿಗಾಸು ಸಂಪಾದಿಸಿಕೊಳ್ಳುತ್ತಿದ್ದರು! ಕೌಲೂನ್‌ಿನ ಹತ್ತಿರವೇ ಹಾಂಕಾಂಗ್ ಇಂಟರನ್ಯಾಶನಲ್ ವಿಮಾನ ನಿಲ್ದಾಣ ಇದ್ದುದರಿಂದ ಪ್ಲೇನುಗಳ ಹಾರಾಟದ ಸದ್ದು ತುಂಬಾ ಸದ್ದುದಟ್ಟಣೆಯನ್ನು ಅಲ್ಲಿನ ಮಂದಿಗೆ ಉಂಟು ಮಾಡಿತ್ತು. ಹಾಂಕಾಂಗ್ ನಂತಹ ಸುಂದರ ಪಟ್ಟಣದ ಒಳಗೆ ಕೌಲೂನ್‌ ಕಲೆಯಾಗಿ ಕಾಣಿಸತೊಡಗಿತು. ಹಾಂಕಾಂಗ್ ಪಟ್ಟಣಕ್ಕೆ ಬಂದ ಪ್ರವಾಸಿಗರು ಹಾಂಕಾಂಗ್ ಚೆಲುವನ್ನು ನೋಡಿ ಕೌಲೂನ್‌ಿನ ಕಿಕ್ಕಿರಿತ ನೋಡಿ ದಂಗಾಗುತ್ತಿದ್ದರು.

1987 ರಲ್ಲಿ ಹಾಂಕಾಂಗ್ ಪಟ್ಟಣಪಾಲಿಕೆ ಕೌಲೂನ್‌ನ್ನು ನೆಲಮಟ್ಟ ಮಾಡುವ ನಿರ‍್ದಾರ ತೆಗೆದುಕೊಂಡಿತು. ಕೌಲೂನ್‌ನ ಬಡಮಂದಿಗೆ ಬೇರೆ ಕಡೆ ಹೋಗಿ ಮನೆ ಕಟ್ಟಿಕೊಳ್ಳಲು ನೆರವಾಗಿ 350 ಮಿಲಿಯನ್ ಡಾಲರ್ ಕೊಡಲಾಯ್ತು.ಆದರೆ ಕೆಲವು ಮಂದಿ ತಮಗೆ ಕೊಟ್ಟ ಪರಿಹಾರಹಣ ಕಡಿಮೆ ಆಯಿತೆಂದು ಕೌಲೂನ್‌ನ್ನು ಬಿಡಲಿಲ್ಲ ಅಂತಹವರನ್ನು ಎಳೆದು ಹೊರಗೆ ಹಾಕಲಾಯ್ತು. 1994 ರಲ್ಲಿ ಕೌಲೂನ್‌ನ್ನು ಇಡಿಯಾಗಿ ಬೀಳಿಸಿಹಾಕಿ ನೆಲಮಟ್ಟ ಮಾಡಿದರು. ಆದರೆ ನೆನಪಿಗಾಗಿ ಪಳಿಯುಳಿಕೆಯಂತೆ ಕೌಲೂನ್‌ನ ಮುಂದಿನ ಬಾಗಿಲನ್ನು ಮತ್ತು ಮಂದಿಸೇರುವ ಜಾಗವಾಗಿದ್ದ ಪಟ್ಟಣದ ನಡುಬಾಗ ‘ಯೆಮನ್ ಹೌಸ್’ (yemen house) ಅನ್ನು ಉಳಿಸಿದ್ದಾರೆ. ಈಗ ಕೌಲೂನ್‌ ಇದ್ದ ಜಾಗದಲ್ಲಿ ಆರು ಎಕರೆಯ ಮಂದಿತೋಟ (public garden) ಮಾಡಿದ್ದಾರೆ. ಈ ಕೌಲೂನ್‌ನ ಬಗ್ಗೆ ಎಳೆಎಳೆಯಾಗಿ ಇಯಾನ ಲ್ಯಾಂಬೆಟ ಮತ್ತು ಗ್ರೇಗ ಗಿರಾರ‍್ಡ ಅವರು ‘ಸಿಟಿ ಆಪ ಡಾರ‍್ಕ್‌ನೆಸ್’ ಎಂಬ ಹೊತ್ತಿಗೆ ಬರೆದಿದ್ದಾರೆ. ಇದರ ಮೇಲಿನ ಡಾಕ್ಯುಮೆಂಟರಿಗಳು ಯೂಟ್ಯೂಬಿನಲ್ಲಿ ನೋಡಬಹುದು.

ಡಾಕ್ಯುಮೆಂಟರಿ ಕೊಂಡಿ

(ಮಾಹಿತಿ ಮತ್ತು ಚಿತ್ರ ಸೆಲೆ: youtube, wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: