ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಕಿರಿಯರಾದಡೇನು
ಹಿರಿಯರಾದಡೇನು
ಅರಿವಿಂಗೆ ಹಿರಿದು ಕಿರಿದುಂಟೆ. (1115-240)

( ಕಿರಿಯರ್+ಆದಡೆ+ಏನು; ಕಿರಿಯರ್=ವಯಸ್ಸಿನಲ್ಲಿ ಚಿಕ್ಕವರು; ಆದಡೆ=ಆದರೆ; ಏನು=ಪ್ರಶ್ನೆಯನ್ನು ಮಾಡುವಾಗ ಬಳಸುವ ಪದ/ಯಾವುದು;

ಹಿರಿಯರ್+ಆದಡೆ+ಏನು; ಹಿರಿಯರ್=ವಯಸ್ಸಿನಲ್ಲಿ ದೊಡ್ಡವರು; ಅರಿವು=ತಿಳುವಳಿಕೆ/ವಿವೇಕ; ಅರಿವಿಂಗೆ=ತಿಳುವಳಿಕೆಗೆ/ವಿವೇಕಕ್ಕೆ; ಹಿರಿದು=ದೊಡ್ಡದು/ಮಿಗಿಲಾದುದು/ಹೆಚ್ಚಾದುದು; ಕಿರಿದು+ಉಂಟೆ; ಕಿರಿದು=ಚಿಕ್ಕದು/ಮಿತಿಯುಳ್ಳದ್ದು/ಸಣ್ಣದಾದುದು; ಉಂಟೆ=ಇರುವುದೇ;

ಅರಿವಿಂಗೆ ಹಿರಿದು ಕಿರಿದುಂಟೆ=ಅರಿವಿನಲ್ಲಿ ಚಿಕ್ಕದು ದೊಡ್ಡದು ಎಂಬ ತಾರತಮ್ಯವಾಗಲಿ ಇಲ್ಲವೇ ಮೇಲುಕೀಳು ಎಂಬುದಾಗಲಿ ಇಲ್ಲ. ಏಕೆಂದರೆ ಒಳಿತಿನ ನಡೆನುಡಿಗಳಿಗೆ ನೆರವಾಗುವ ಎಲ್ಲ ಬಗೆಯ ತಿಳುವಳಿಕೆಯೂ ಅದು ಚಿಕ್ಕ ಸಂಗತಿಯಾಗಿರಲಿ ಇಲ್ಲವೇ ದೊಡ್ಡ ಸಂಗತಿಯಾಗಿರಲಿ ಮಾನವ ಬದುಕಿಗೆ ಅತ್ಯಗತ್ಯ;

ಸಹ ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳನ್ನು ಸೂಚಿಸುವ ಅರಿವನ್ನು ದೊಡ್ಡದೆಂದು ತಿಳಿಯಬೇಕೆ ಹೊರತು, ಅದನ್ನು ಹೇಳಿದವರು ವಯಸ್ಸಿನಲ್ಲಿ ಚಿಕ್ಕವರೋ ಇಲ್ಲವೇ ದೊಡ್ಡವರೋ ಎಂಬುದನ್ನು ನೋಡಬಾರದು.

ಕೌಪ ಕಾಷಾಂಬರವ ಕಟ್ಟಿ
ಮಂಡೆ ಬೋಳಾದಡೇನಯ್ಯ
ಮನದಲ್ಲಿ ನಿಜವಿಲ್ಲದನ್ನಕ್ಕರ. (1139-242)

( ಕೌಪ=ಲಂಗೋಟಿ/ಕಚ್ಚೆಪಡೆ; ಕಾಷಾಯ+ಅಂಬರ; ಕಾಷಾಯ=ಕೆಂಪನೆಯ ಬಣ್ಣದ; ಅಂಬರ=ಬಟ್ಟೆ/ಅರಿವೆ; ಕಾಷಾಂಬರ=ಕಾವಿ ಬಣ್ಣದ ಬಟ್ಟೆ/ಉಡುಗೆ; ಕಟ್ಟಿ=ಉಟ್ಟುಕೊಂಡು/ತೊಟ್ಟುಕೊಂಡು;

ಕೌಪ ಕಾಷಾಂಬರವ ಕಟ್ಟಿ=ಕುಟುಂಬದಲ್ಲಿ ಹೆಂಡತಿ ಮತ್ತು ಮಕ್ಕಳೊಡನೆ ಇದ್ದ ನಂಟನ್ನು ತೊರೆದು, ಮಯ್ಯಲ್ಲಿ ತುಡಿಯುವ ಕಾಮ ಮತ್ತು ಮನದಲ್ಲಿ ಮಿಡಿಯುವ ಕೆಟ್ಟ ಆಸೆಗಳಿಂದ ಬಿಡುಗಡೆಯನ್ನು ಪಡೆಯಲೆಂದು ಕಾವಿಬಟ್ಟೆಯನ್ನುಡುವುದು;

ಮಂಡೆ=ತಲೆ/ಬುರುಡೆ; ಬೋಳ್+ಆದಡೆ+ಏನ್+ಅಯ್ಯ; ಬೋಳ್=ಬರಿದಾದ/ಬೊಕ್ಕಾದ/ತಲೆಯಲ್ಲಿದ್ದ ಕೂದಲನ್ನು ತೆಗೆಸಿರುವುದು; ಮಂಡೆ ಬೋಳಾಗುವುದು=ಸಂಸಾರದಿಂದ ದೂರ ಸರಿದು ಸಂನ್ಯಾಸಿಯಾದ ವ್ಯಕ್ತಿಯು ತಲೆಯ ಮೇಲಣ ಕೂದಲನ್ನು ತೆಗೆಸುವುದು ಒಂದು ಬಗೆಯ ಆಚರಣೆಯಾಗಿದೆ. ಈ ರೀತಿ ಮಂಡೆ ಬೋಳಾಗಿರುವುದು ಸನ್ಯಾಸತ್ವದ ಒಂದು ಗುರುತು/ಸಂಕೇತ;

ಆದಡೆ=ಆದರೆ; ಏನ್=ಯಾವ ಪ್ರಯೋಜನ/ಯಾವುದು; ಅಯ್ಯ=ಇತರ ವ್ಯಕ್ತಿಗಳನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಮನ+ಅಲ್ಲಿ; ಮನ=ಮನಸ್ಸು/ಚಿತ್ತ; ನಿಜ+ಇಲ್ಲದ+ಅನ್ನಕ್ಕರ; ನಿಜ=ಸತ್ಯ/ದಿಟ/ವಾಸ್ತವ;

ಮನದಲ್ಲಿ ನಿಜವಿಲ್ಲದಿರುವುದು=ಮನದಲ್ಲಿ ನಿರಂತರವಾಗಿ ಮೂಡುವ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಒಳ್ಳೆಯತನದಿಂದ ಬಾಳಬೇಕೆಂಬ ನಿಲುವು ಇಲ್ಲದಿರುವುದು; ಅನ್ನಕ್ಕರ=ಅಂದ ಮೇಲೆ/ವರೆಗೆ;

ಬಹಿರಂಗದಲ್ಲಿ ಜನರ ಕಣ್ಣಿಗೆ ವಿರಾಗಿಯಂತೆ/ಸಂನ್ಯಾಸಿಯಂತೆ/ ಒಳ್ಳೆಯವನಂತೆ ಕಾಣಿಸಿಕೊಳ್ಳಲು ವ್ಯಕ್ತಿಯು ಉಡುವ ತೊಡುವ ಬಟ್ಟೆಬರೆಗಳಿಂದ ಯಾವ ಪ್ರಯೋಜನವೂ ಇಲ್ಲ. ಇದಕ್ಕೆ ಬದಲಾಗಿ ವ್ಯಕ್ತಿಯು ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ಹಂಬಲವನ್ನು ಅಂತರಂಗದ ಮನದಲ್ಲಿ ಹೊಂದಿರಬೇಕು.

ಘನತರವಾದ ಚಿತ್ರದ ರೂಹ ಬರೆಯಬಹುದಲ್ಲದೆ
ಪ್ರಾಣವ ಬರೆಯಬಹುದೆ ಅಯ್ಯಾ. (79-144)

( ಘನ=ದೊಡ್ಡದು/ಉತ್ತಮವಾದುದು/ಅತಿಶಯವಾದುದು; ತರ=ರೀತಿ/ಬಗೆ/ಪ್ರಕಾರ; ಘನತರ=ದೊಡ್ಡದಾಗಿರುವ/ಉತ್ತಮವಾಗಿರುವ/ಅತಿಶಯವಾಗಿರುವ; ಚಿತ್ರ=ಗೆರೆ/ಬಣ್ಣಗಳ ವಿನ್ಯಾಸದಿಂದ ಕಲಾತ್ಮಕವಾಗಿ ರಚನೆಗೊಂಡಿರುವ ವಸ್ತು; ರೂಹು=ರೂಪ/ಆಕಾರ; ರೂಹ=ಆಕಾರವನ್ನು/ರೂಪವನ್ನು; ಬರೆಯಬಹುದು+ಅಲ್ಲದೆ; ಬರೆ=ರಚಿಸು/ಗೆರೆಯನ್ನು ಎಳೆ; ಬರೆಯಬಹುದು=ರಚಿಸಲು ಆಗುತ್ತದೆ; ಅಲ್ಲದೆ=ಹಾಗೆ ಮಾಡದೆ/ಅದನ್ನು ಬಿಟ್ಟು;

ಪ್ರಾಣ=ಉಸಿರು/ಜೀವ; ಬರೆಯಬಹುದೇ=ಬರೆಯಲು ಆಗುತ್ತದೆಯೇ/ಜಡವಾದ ಚಿತ್ರಕ್ಕೆ ಜೀವವನ್ನು ನೀಡಲು/ಉಸಿರನ್ನು ತುಂಬಲು ಆಗುತ್ತದೆಯೇ;

ನೋಡುವವರ ಕಣ್ಮನಗಳನ್ನು ಸೆಳೆಯುವಂತಹ ಗಿಡ, ಮರ, ಪ್ರಾಣಿ, ಹಕ್ಕಿ, ಹೆಣ್ಣು, ಗಂಡು ಮತ್ತು ನಿಸರ‍್ಗದ​ ಇರುವಿಕೆಯನ್ನು ಕುರಿತ ಸುಂದರವಾದ ಚಿತ್ರಗಳನ್ನು ಕಲಾತ್ಮಕವಾಗಿ ರಚಿಸುವ ಕಯ್ ಚಳಕವನ್ನು ಕಲಾವಿದನಾದ ವ್ಯಕ್ತಿಯು ಹೊಂದಿರುತ್ತಾನೆ. ಆದರೆ ಚಿತ್ರಗಾರನು ತಾನು ರಚಿಸಿದ ಚಿತ್ರಗಳಿಗೆ ಜೀವವನ್ನು ತುಂಬಿ, ಅವು ಚೇತನಗೊಂಡು ಉಸಿರಾಡುವಂತೆ/ಬಾಳುವಂತೆ ಮಾಡಲಾರ. ಜಗತ್ತಿನಲ್ಲಿ ಮಾನವನಿಗಿರುವ ಶಕ್ತಿಯ ಮತ್ತು ಕುಶಲತೆಯ ಇತಿಮಿತಿಯನ್ನು ಈ ರೂಪಕ ಸೂಚಿಸುತ್ತಿದೆ.

( ಚಿತ್ರ ಸೆಲೆ: lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.