ಸ್ವಾತಂತ್ರ್ಯ ಮತ್ತು ಕಡಿವಾಣ : ಒಂದು ಅನಿಸಿಕೆ

ಪ್ರಕಾಶ್‌ ಮಲೆಬೆಟ್ಟು.

ಬಿಡುಗಡೆ, ಕಡಿವಾಣ, Freedom, Restriction

“ಸ್ವಾತಂತ್ರ್ಯ ಯಾರಿಗೆ ಬೇಡ? ಸ್ವಾತಂತ್ರ್ಯವನ್ನು ಆತ್ಮದ ಪ್ರಾಣವಾಯು ಅಂತ ಕರೆಯುತ್ತಾರೆ. ಎಲ್ಲರೂ ಬಿಡುಗಡೆ ಬಯಸುವವರೇ. ಮಕ್ಕಳಿಗೆ ತಂದೆ-ತಾಯಿಯ ತೆಕ್ಕೆಯಿಂದ, ಶಿಕ್ಶಕರ ಹಿಡಿತದಿಂದ,  ಉದ್ಯೋಗಿಗಳಿಗೆ ಮೇಲಾದಿಕಾರಿಯ ಬೈಗುಳದಿಂದ, ಹೀಗೆ ಪಟ್ಟಿ ಮಾಡುತ್ತ ಹೋದರೆ ಪಟ್ಟಿ ಉದ್ದವಾಗುತ್ತೆ ವಿನಾ ಮುಗಿಯುವುದಿಲ್ಲ. ಬಹುಶಹ ಚರ‍್ಚೆ ಮಾಡದೇ ಪ್ರತಿಯೊಬ್ಬರೂ ಒಕ್ಕೊರಲಿನಿಂದ ನಮಗೆ ಸ್ವತಂತ್ರ ಬೇಕು ಎಂದು ಕೇಳಿಕೊಳ್ಳುವವರೇ!

ಆದರೆ ವಾಸ್ತವದಲ್ಲಿ ಕಡಿವಾಣವಿಲ್ಲದ ಬದುಕಿದೆಯೇ? ಕಂಡಿತವಾಗಿಯೂ ಇಲ್ಲ! ಪ್ರತಿಯೊಬ್ಬ ಜೀವಿಯು ತನ್ನ ಜೀವಿತಾವದಿಯಲ್ಲಿ ನಿಯಂತ್ರಣಕ್ಕೆ ಒಳಪಡಲೇ ಬೇಕು. ಆ ಬದುಕು ಸುಂದರ ಕೂಡ.  ಮಕ್ಕಳನ್ನು ಬೆಳೆಸುವಾಗ  ಕಣ್ಣಿಗ ಕಾಣದ ಬಗವಂತನ ಬಗ್ಗೆ ಅವರಲ್ಲಿ ಅರಿವನ್ನು ಮೂಡಿಸುತ್ತೇವೆ. ನಮ್ಮನು ನಿಯಂತ್ರಿಸುವ ಒಂದು ಶಕ್ತಿ ಇದೆ ಎನ್ನುವ ಬಾವವನ್ನು ಮಕ್ಕಳ ಮನದಲ್ಲಿ ಮೂಡಿಸುತ್ತೇವೆ. ಆ ಅದ್ರುಶ್ಯ ಶಕ್ತಿಯ ಮೇಲಿನ ಬಕ್ತಿ ಇಲ್ಲವೇ ಹೆದರಿಕೆ ಅಂತ ಏನಾದರೂ ತಿಳಿದುಕೊಳ್ಳಿ, ‘ನನಗೆ ಸ್ವಾತಂತ್ರ್ಯವಿದೆ’ ಎಂದು ಸ್ವೇಚ್ಚಾಚಾರವಾದ ಜೀವನ ನಡೆಸುತ್ತ ಹಾದಿ ತಪ್ಪದಂತೆ ಕಾಪಾಡುವುದು ಆ ಬಗವಂತನೆಂಬ ನಿಯಂತ್ರಕ ಶಕ್ತಿ ಎಂದು ಮಕ್ಕಳಿಗೆ ತಿಳಿಸುತ್ತೇವೆ. ಮಕ್ಕಳಿಗೆ ನಾವು ಹೇಳಿಕೊಡುತ್ತೇವೆ, ‘ಸರಿದಾರಿಯಲ್ಲಿ ನಡೆಯಬೇಕು, ಸರಿದಾರಿಯಲಿ ನಡೆದರೆ ಬಗವಂತ ಎಂದಿಗೂ ಕೈ ಬಿಡುವುದಿಲ್ಲ’ ಎಂದು. ಆ ಬಗವಂತನ ಮೇಲಿರುವ ಹೆದರಿಕೆ, ಬಕ್ತಿ, ಪ್ರೀತಿ ನಮ್ಮನು ಸನ್ಮಾರ‍್ಗದಲ್ಲಿ ಮುನ್ನಡೆಸುತ್ತದೆ. ಹೀಗಿರುವಾಗ, ಆ ಸರ‍್ವಶಕ್ತ ನಿಯಂತ್ರಕ ಇಲ್ಲ, ನಾನು ಸ್ವತಂತ್ರ ಎನ್ನುವ ಬಾವನೆ ಮನದಲ್ಲಿ ಬಾಲ್ಯದಲ್ಲೇ ಮೂಡಿದರೆ ಮಕ್ಕಳು ಒಳ್ಳೆಯ ದಾರಿ ಹಿಡಿಯಲು ಸಾದ್ಯವಿದೆಯೇ?

ಬಗವಂತನ ನಂತರ ನಮ್ಮ ಅಪ್ಪ ಅಮ್ಮ ನಮ್ಮನ್ನು ನಿಯಂತ್ರಿಸುತ್ತಾರೆ. ನಾವು ಸ್ವತಂತ್ರವಾಗಿ ಹಾರಲು ತಯಾರಾಗುತ್ತೇವೆ. ಆದರೆ, ‘ಮಗೂ ಸಲ್ಪ ನಿದಾನ, ಜೋಪಾನ , ನಿನ್ನ ದಾರಿ ಸರಿಯಿಲ್ಲ, ಹೀಗೆ ಮುಂದೆ ಸಾಗಬೇಕು’ ಎಂದು ನಮ್ಮನ್ನು ಕೈ ಹಿಡಿದು ದಾರಿ ತೋರಿಸುವವರು ನಮ್ಮ ಹೆತ್ತವರು. ಆದರೂ ಅವರ ಮಾತನ್ನು ನಾವು ಕೇಳದಿದ್ದಾಗ ನಮ್ಮನು ನಿಯಂತ್ರಿಸಲು ಕೆಲವೊಂದು ಕಟಿಣ ನಿರ‍್ದಾರಗಳನ್ನು ಅವರು ಕೈಗೊಳ್ಳಬೇಕಾಗುತ್ತದೆ. ಅವರು ಏನು ಮಾಡಿದರೂ ನಮ್ಮ ಒಳ್ಳೆಯದಕ್ಕೆ. ನಮ್ಮ ಸುಂದರ ಬದುಕಿಗಾಗಿ ಅವರು ಶ್ರಮಿಸುತ್ತಾರೆ, ತಮೆಲ್ಲ ಕನಸನ್ನು ಗಂಟುಮೂಟೆ ಕಟ್ಟಿ ಆಚೆಗೆ ಎಸೆದು ಮಕ್ಕಳ ಕನಸನ್ನು ನನಸು ಮಾಡಲು ತಮ್ಮ ಬದುಕನ್ನು ತ್ಯಾಗ ಮಾಡುತ್ತಾರೆ. ಅಪ್ಪ ಅಮ್ಮನ ನಿಯಂತ್ರಣ ತಪ್ಪಿದ ಮಕ್ಕಳು ಹೇಗೆ ಸಮಾಜಕ್ಕೆ ಮಾರಕವಾಗಿದ್ದಾರೆ ಎನ್ನುವುದನ್ನು ದಿನನಿತ್ಯ ನೋಡುತ್ತಿದ್ದೇವೆ.

ಮಕ್ಕಳು ಸಲ್ಪ ಹಾದಿ ತಪ್ಪುತ್ತಿದ್ದಾರೆ ಎಂದು ಗೊತ್ತಾದಾಗ ಪಾಲಕರು ಮೊದಲು ಯೋಚನೆ ಮಾಡುವುದೇ ಮಕ್ಕಳ ಮದುವೆ ಬಗ್ಗೆ. ಮದುವೆ ಮಾಡಿದರೆ ಸರಿಹೋಗುತ್ತಾರೆ ಎಂಬ ಒಂದು ನಂಬಿಕೆಯಿಂದ. ಮದುವೆ ಒಂದು ದೈವಿಕ ಬಂದವಾದ್ರೂ ಅಲ್ಲಿ ಪ್ರೀತಿಯ ಜೊತೆಗೆ ಒಂದು ನಿಯಂತ್ರಣ ಕೂಡ ಇರುತ್ತೆ . ಕೆಲವು ಸಂದರ‍್ಬಗಳಲ್ಲಿ, ಮದುವೆಯಾದ ಹೊಸತರಲ್ಲಿ ಗಂಡನಿಗೆ ಇಲ್ಲವೆ ಹೆಂಡತಿಗೆ ತಾನು ತನ್ನ ಸ್ವತಂತ್ರವನ್ನು ಕಳೆದುಕೊಂಡೆ ಎಂದೆನಿಸಬಹುದು. ಆದರೆ ವರುಶಗಳು ಉರುಳಿದಂತೆ ಆ ಕಾಳಜಿ, ಆ ನಿಯಂತ್ರಣ ತನ್ನ ಬದುಕಿಗೆ ಎಶ್ಟು ಅಗತ್ಯವಾಗಿತ್ತು ಎನ್ನುವ ಅರಿವು ಇಬ್ಬರಲ್ಲೂ ಮೂಡುತ್ತದೆ. ನಮ್ಮ ದೇಶಕ್ಕೆ ಬ್ರಿಟೀಶರಿಂದ ಬಿಡುಗಡೆ ದೊರಕಿತು,  ಆದರೆ ಸ್ವಾತಂತ್ರ್ಯದ ಜೊತೆ ಸಂವಿದಾನವೆಂಬ ನಿಯಂತ್ರಕ ಶಕ್ತಿಯನ್ನು ತಂದಿರದೇ ಇದ್ದಿದ್ದರೆ, ನಾವು ಒಂದು ಒಕ್ಕೂಟವಾಗಿ ಉಳಿಯಲು ಸಾದ್ಯವಿತ್ತೇ? ಹೀಗೆ ಬದುಕಿನ ಪ್ರತಿಯೊಂದು ಸಂದರ‍್ಬದಲ್ಲೂ ಸ್ವಾತಂತ್ರದ ಜೊತೆ ನಿಯಂತ್ರಣ ಶಕ್ತಿ ಇರುತ್ತದೆ.

ಸಮಾಜದಲ್ಲಿ ನಡೆಯುವ ಕೆಲವೊಂದು ಗಟನೆಗಳನ್ನೇ ನೋಡಿ. ಮದ್ಯಸಾರ ಸೇವಿಸಲು ಸ್ವತಂತ್ರವಿದೆ, ನಿಜ! ಹಾಗಂತ ಮನಸಿನ ಮೇಲೆ ನಿಯಂತ್ರಣವಿಲ್ಲದೆ, ಮನಸನ್ನು ಹತೋಟಿಯಲ್ಲಿಡಲು ಸಾದ್ಯವಾಗದಶ್ಟು ಕುಡಿದು, ಅತ್ಯಾಚಾರ, ಕೊಲೆಯಂತಹ ಅಪರಾದಗಳನ್ನು ಮಾಡಿ, ಕಡೆಗೆ ತಮ್ಮ/ತಮ್ಮ ಮತ್ತು ಮತ್ತೊಬ್ಬರ ಬದುಕನ್ನು ಹಾಳುಮಾಡಿದ್ರೆ ಬದುಕಿಗೆ, ನಮ್ಮ ಸ್ವಾತಂತ್ರಕ್ಕೆ ಏನು ಅರ‍್ತ, ಏನು ಬೆಲೆ? ಸ್ವತಂತ್ರ ಹಾಗು ಕಡಿವಾಣ ಎರಡು ಕೂಡ ಒಂದೇ ನಾಣ್ಯದ ಎರಡು ಮುಕಗಳು. ಅವು ಬೇರ‍್ಪಟ್ಟಾಗ ಒಳ್ಳೆಯದಾಗುವುದಕ್ಕಿಂತ, ಆಗುವ ಅನಾಹುತಗಳೇ ಜಾಸ್ತಿ.

ಕಡಿವಾಣವಿಲ್ಲದ ಸ್ವಾತಂತ್ರ್ಯ, ಗಾಳಿ ಇಲ್ಲದ ಬಲೂನಿನಂತೆ. ಯಾವುದೇ ಪ್ರಯೋಜನಕ್ಕೆ ಬಾರದು. ಬಲೂನಿಗೆ ಗಾಳಿ ತುಂಬಿದಾಗಲೇ ಅದು ಸುಂದರವಾಗಿ ಕಾಣುವುದು. ಹಾಗೆ ನಮ್ಮ ಸ್ವತಂತ್ರ ಕೂಡ. ನಿಯಂತ್ರಣವಿದ್ದಾಗ ಮಾತ್ರ ಸುಂದರ ಬದುಕು ಅರಳುವುದು. ಇಲ್ಲಿ ನಿಯಂತ್ರಣ ಎಂದೊಡನೆ ಕೇವಲ ನಮ್ಮ ಬದುಕಿನ ಮೇಲೆ ಪರರ ನಿಯಂತ್ರಣ ಅಂತಲ್ಲ. ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು ಕೂಡ ಅಶ್ಟೇ ಮುಕ್ಯ.  ನಾನು ಸ್ವತಂತ್ರ , ನನ್ನನ್ನು ಕೇಳುವವರು ಯಾರೂ ಇಲ್ಲ ಎಂದು ಸ್ವೇಚ್ಚಾಚಾರವಾಗಿ ವರ‍್ತಿಸಿದರೆ ನಮ್ಮ ಸ್ವತಂತ್ರವನ್ನು ನಾವು ಕಳೆದುಕೊಂಡ ಹಾಗೆ. ಸ್ವತಂತ್ರದ ಜೊತೆ ನಮ್ಮನ್ನು ಸರಿದಾರಿಯಲ್ಲಿ ನಡೆಸುವ ಕಡಿವಾಣವೂ ಇರಬೇಕು. ಅದರಿಂದ ಒಳ್ಳೆಯ ಬದುಕು ಸಾದ್ಯ ಎಂಬುದು ನನ್ನ ಅನಿಸಿಕೆ.

( ಚಿತ್ರಸೆಲೆ : twitter.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: