ಜೋಳ ತಿಂಬವನು ತೋಳದಂತಾಗುವನು
ಜೋಳ ತಿಂಬವನು ತೋಳದಂತಾಗುವನು
ಅಕ್ಕಿ ತಿಂಬವನು ಹಕ್ಕಿಯಂತಾಗುವನು
ಈ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಜೋಳ ತುಂಬಾ ಕಸುವು ತುಂಬುವ ಕಾಳು ಆಗಿದ್ದು ಬಡಗಣ ಕರ‍್ನಾಟಕದ ಕಡೆ ಹೆಚ್ಚಾಗಿ ಬಳಸಲ್ಪಡುತ್ತದೆ. ಈಗ ಕರ‍್ನಾಟಕದ ತುಂಬೆಲ್ಲಾ ಜೋಳದ ರೊಟ್ಟಿಗಳು ಸಿಗುತ್ತಿವೆ. ಬಿಸಿ ರೊಟ್ಟಿ ಸಿಗದಿದ್ದರೂ ಒಣಗಿದ ತೆಳ್ಳನೆಯ ಕಡಕ್ ರೊಟ್ಟಿಗಳಂತೂ ಸಿಕ್ಕೇ ಸಿಗುತ್ತಿವೆ. ಕಡಕ್ ರೊಟ್ಟಿ ಮಾಡಿ ಪ್ಯಾಕಿಂಗ್ ಮಾಡಿ ಬೆಂಗಳೂರಿಗೆ ಟನ್ ಗಟ್ಟಲೇ ಕಳುಹಿಸುವ ದೊಡ್ಡ ರೊಟ್ಟಿ ಬಿಸಿನೆಸ್ ಸಾವಿರಾರು ಹೆಣ್ಣುಮಕ್ಕಳಿಗೆ, ಮನೆ ಕೈಗಾರಿಕೆ, ಕಿರು ಉದ್ದಿಮೆದಾರರಿಗೆ ಮತ್ತು ಹೋಟೆಲ್ ಉದ್ದಿಮೆದಾರರ ಬದುಕಿಗೆ ಲಾಬದಾಯಕ ದಾರಿಯನ್ನು ಮಾಡಿಕೊಟ್ಟಿದೆ. ಕೇವಲ ಕರ‍್ನಾಟಕದಲ್ಲಿಯೇ ಅಲ್ಲ ಹೊರನಾಡುಗಳಾದ ಮುಂಬಯಿ, ದೆಹಲಿಗೆ ಕೂಡ ಕಡಕ್ ರೊಟ್ಟಿಗಳು ರಪ್ತಾಗುತ್ತಿವೆ. ಹೊರ ದೇಶಗಳ ಲಂಡನ್, ನ್ಯೂಜೆರ‍್ಸಿ, ಕ್ಯಾಲಿಪೋರ‍್ನಿಯಾ ಗಳಿಗೂ ಕೂಡ ಕಡಕ್ ರೊಟ್ಟಿ, ಶೇಂಗಾ ಹಿಂಡಿಗಳು ಹೋಗುತ್ತಿವೆ!
ಜೋಳದ ರೊಟ್ಟಿ ತುಂಬಾ ಸುಲಬವಾಗಿ ಅರಗುವ ಮತ್ತು ಹೆಚ್ಚು ನಾರಿನಂಶ ಹೊಂದಿರುವ ಅಡುಗೆಯಾಗಿದೆ. ಹಳ್ಳಿ ಮದ್ದು ಕೊಡುವವರು ಬೇನೆ ಬಿದ್ದವರಿಗೆ ಹೇಳುವ ಮೊದಲ ಪತ್ಯದ ಅಡುಗೆ ಅದೇ ರೊಟ್ಟಿ ಮತ್ತು ತೊಗರಿ ಬೇಳೆ! ಈಗಲೂ ಕೂಡ ನಾಯಿ ಕಡಿತಕ್ಕೆ ಮದ್ದು ತೆಗೆದುಕೊಳ್ಳುವವರಿಗೆ ಕಡ್ಡಾಯವಾಗಿ ಕೇವಲ ರೊಟ್ಟಿ, ತೊಗರಿ ಬೇಳೆ ಸಪ್ಪೆ ಸಾರು ಊಟ ಮಾಡುವ ಸಲಹೆ ಕೊಡುತ್ತಾರೆ. ರೊಟ್ಟಿಗೆ ಯಾವ ತರಹದ ಸೈಡ್ ಇಪೆಕ್ಟ ಇಲ್ಲ. ಇದೂ ಒಂದು ಕಾರಣವಾಗಿದೆ. ಜೋಳವು ಅಂಟಿಲ್ಲದ (ಗ್ಲೂಟೆನ್ ಪ್ರೀ) ಕಾಳು ಆಗಿದೆ ಇದನ್ನು ಸುಳುವಾಗಿ ಅರಗಿಸಿಕೊಳ್ಳುತ್ತಾರೆ. 100 ಗ್ರಾಂ ಜೋಳದಲ್ಲಿ 339 ಕ್ಯಾಲೋರಿ ಕಸುವು ಇದೆ. ಜೋಳದ ನೆತ್ತರಿನಲ್ಲಿ ಅರಗುವ ಅಂಕ(Glycemic index) ಕಡಿಮೆ ಇದೆ. ಆದ್ದರಿಂದ ಇದು ಹೊಟ್ಟೆಯಲ್ಲಿ ಮೆಲ್ಲಗೆ ಕರಗುತ್ತಾ ಸರಿಯಾಗಿ ಗ್ಲೂಕೋಸ್ಅನ್ನು ನಮ್ಮ ನೆತ್ತರಿನಲ್ಲಿ ಸೇರಿಸುತ್ತದೆ. ಗೋದಿಯು ಹಾಗಲ್ಲ, ಗೋದಿಲ್ಲಿ ಗ್ಲೂಟೆನ್ ಪ್ರಮಾಣ ಹೆಚ್ಚು. ರಾಜಸ್ತಾನ, ಮಹಾರಾಶ್ಟ್ರ (ಮರವಟ್ಟಿ), ಕರ‍್ನಾಟಕ, ತೆಲಂಗಾಣ ಪ್ರದೇಶದಲ್ಲಿ ಜೋಳ ದಿನವೂ ಬಳಸುತ್ತಾರೆ.
ಅಡುಗೆಗಳಲ್ಲಿ ಜೋಳದ ರೊಟ್ಟಿ-ಶೇಂಗಾ ಹಿಂಡಿ ಹೇಳಿ ಮಾಡಿಸಿದ ಕಾಂಬಿನೇಶನ್. ಜೋಳದಿಂದ ರೊಟ್ಟಿಯನ್ನಶ್ಟೇ ಮಾಡುವದಿಲ್ಲ ದಪಾಟಿ, ನುಚ್ಚು, ಅಂಬಲಿ, ಎಂಬಲ ಬೋನ (ಜೋಳದ ನುಚ್ಚಿನ ಅನ್ನ), ಕಡುಬು, ಮುಟ್ಟಿಗೆ ಗಳನ್ನೂ ಮಾಡುತ್ತಾರೆ. ಜೋಳದ ರೊಟ್ಟಿ ಬೇರೆ ಬೇರೆ ಅಡುಗೆಗಳ ಜೊತೆ ಸರಿಹೊಂದುತ್ತದೆ. ರೊಟ್ಟಿಯ ಜೊತೆಗೆ ಎಲ್ಲ ಪಲ್ಯಗಳು, ಸಾರು, ಬಗೆಬಗೆಯ ಗುಗ್ಗುರಿಗಳು (ಉಸುಳಿ), ಉಪ್ಪಿನಕಾಯಿಗಳು, ಕೆನೆಮೊಸರು, ಹಿಂಡಿಗಳು, ಚಟ್ನಿಗಳು, ನಾಟಿ ಕೋಳಿ ಸಾರು ಜೊತೆಯಾಗುತ್ತವೆ. ರೊಟ್ಟಿಯ ಜೊತೆಗೆ ಸವಿಯಲು ಹಾಲಿನ ಕೆನೆ ಮತ್ತು ಸಕ್ಕರೆ ಕೂಡ ಚೆನ್ನಾಗಿರುತ್ತದೆ. ರೊಟ್ಟಿಯನ್ನು ಹಾಲು-ಸಕ್ಕರೆಯೊಂದಿಗೆ ಕಲಸಿಕೊಂಡು ತಿನ್ನುವ ಮಂದಿಯೂ ಇದ್ದಾರೆ. ಜೋಳದ ಎಳೆತೆನೆ ಗಳನ್ನು ಸುಟ್ಟು ಸೀತನಿ ಎನ್ನೋ ತಿಂಡಿಯನ್ನು ಕೂಡ ಮಾಡುತ್ತಾರೆ. ಸುಟ್ಟ ಎಳೆಯ ಜೋಳದ ಕಾಳುಗಳ ಜೊತೆ ಸಕ್ಕರೆ ಕೊಬ್ಬರಿ ಸೇರಿಸಿ ತಿನ್ನುತ್ತಾರೆ. ಬೇಸಿಗೆಯ ದಿನಗಳಲ್ಲಿ ನುಚ್ಚು-ಮಜ್ಜಿಗೆ ಮಾಡುತ್ತಾರೆ. ಜೋಳದ ಕಾಳುಗಳನ್ನು ಒಡೆದು ಅದರ ಮೇಲಿನ ಸಿಪ್ಪೆ ತೆಗೆದುಹಾಕಿ ನುಚ್ಚನ್ನು ನೆನೆಹಾಕುತ್ತಾರೆ. ಕುದಿಯುವ ನೀರಿನಲ್ಲಿ ಉಪ್ಪು ಸೇರಿಸಿ ಈ ನುಚ್ಚನ್ನು ಹಾಕಿ ಚೆನ್ನಾಗಿ ಕುದಿಸುತ್ತಾರೆ. ಈ ನುಚ್ಚು ಕುದಿದು ಹುಗ್ಗಿಯ ರೂಪಕ್ಕೆ ಬರುತ್ತದೆ. ನುಚ್ಚು ತಣಿಸಿದಾಗ ಅದರ ಜೊತೆ ಹುಳಿ ಮಜ್ಜಿಗೆ ಸೇರಿಸಿ ತಿನ್ನುತ್ತಾರೆ. ಈ ನುಚ್ಚು-ಮಜ್ಜಿಗೆ ಬೇಸಿಗೆಯ ಬಿಸಿಯನ್ನು ಮೈಯಿಂದ ಹೊರಹಾಕಿ ಮೈತಂಪಾಗುವ ಹಾಗೆ ಮಾಡುತ್ತದೆ.
ನನ್ನ ಅತ್ತೆಯ ಹಳ್ಳಿಯ ಮನೆಯಲ್ಲಿ, ಮೊದಲು ಅಡುಗೆ ಮನೆ ಹೊರಗಡೆ ಕಿಟಕಿಯ ಬಳಿ ಹಲವಾರು ಬೀಜದ ಜೋಳದ ತೆನೆಗಳನ್ನು ಸಾಲಾಗಿ ಕಟ್ಟುತ್ತಿದ್ದರು. ಅವರು ಹೇರಳವಾಗಿ ಜೋಳ ಬೆಳೆಯುತ್ತಿದ್ದರಿಂದ, ದಪ್ಪ ದಪ್ಪ ಕಾಳುಗಳಿದ್ದ ಜೋಳದ ತೆನೆಗಳನ್ನು ಹೊಲದಲ್ಲಿ ರಾಶಿ ಮಾಡದೆ ಮನೆಗೆ ತಂದು ಮುಂದಿನ ಬಿತ್ತನೆಗೆ ಹೀಗೆ ಕಾಪಿಡುತ್ತಿದ್ದರು. ಈ ತೆನೆಗಳಿಂದ ಕಾಳು ಕುಕ್ಕಿ ತಿನ್ನಲು ಮುಂಜಾನೆ ಗುಬ್ಬಚ್ಚಿಗಳು ಅಡುಗೆ ಮನೆ ಮುಂದೆ ಬರುತ್ತಿದ್ದವು. ಕೆಲವೊಮ್ಮೆ ಅಡುಗೆ ಮನೆಯೊಳಗೂ ಬಂದು ಬಿಡುತ್ತಿದ್ದವು! ಜೋಳ ಬಡಗಣ ಕರ‍್ನಾಟಕದ ನಿಚ್ಚದ ಉಣಿಸು(Staple food) ಆಗಿದೆ. ಜೋಳ ಬೆಳೆಯುವದು ತುಂಬಾ ಸುಲಬ. ಇದಕ್ಕೆ ಹೆಚ್ಚಿನ ಆರೈಕೆ, ಗೊಬ್ಬರ, , ಹುಳುನಾಶಕ ಕೆಮಿಕಲ್ ಸಿಂಪರಣೆ ಬೇಕಾಗಿಲ್ಲ. ಜೋಳವು ಬರಗಾಲವನ್ನು ಎದುರಿಸಿ ಕಡಿಮೆ ಮಳೆಯಲ್ಲೂ ಬೆಳೆಯುತ್ತದೆ. ಜೋಳಕ್ಕೆ ಹೆಚ್ಚಿನ ರೋಗಗಳು ಬಡಿಯುವದಿಲ್ಲ. ಇದು ರೋಗಗಳನ್ನೂ ಚೆನ್ನಾಗಿ ಎದುರಿಸುತ್ತದೆ. ಜೋಳದ ದಂಟಿನಲ್ಲಿ ತನೆಗಳು ಮೂಡಿ ಕಾಳು ಕಟ್ಟುವ ಹಂತದಲ್ಲಿ ಗುಬ್ಬಚ್ಚಿ ಗೀಜಗ ಮುಂತಾದ ಹಕ್ಕಿಗಳು ಹಿಂಡು ಹಿಂಡಾಗಿ ಬಂದು ತೆನೆಗಳ ಮೇಲೆ ಕೂತುಕೊಂಡು ಕಾಳುಗಳನ್ನು ತಿಂದು ಬಿಡುತ್ತವೆ.
ಜೋಳದಲ್ಲಿ ದೊಡ್ಡ ಜೋಳ (ಬಿಳಿ ಜೋಳ), ಸಣ್ಣ ಜೋಳ, ಹಸುರು ಜೋಳ, ಕೆಂಪು ಜೋಳ, ಹೈಬ್ರೀಡ್ ಜೋಳ, ಆಯೀ ಜೋಳ ಗಳಂತಹ ಹಲವು ಬಗೆಗಳು ಇವೆ. ಜೋಳಗಳಲ್ಲಿ ಇನ್ನೂ ಹೆಚ್ಚಿನ ಬಗೆಗಳು ಇವೆ ಆದರೆ ಅವನ್ನು ತುಂಬಾ ಕಡಿಮೆ ಹರವಿನಲ್ಲಿ ಬೆಳೆಯುವದರಿಂದ ಅಶ್ಟಾಗಿ ಹೆಸರು ಮಾಡಿಲ್ಲ. ಅಂತಹ ಜೋಳದ ಬಗೆಗಳು ಕಾಣೆಯಾಗುವ ಹಂತಕ್ಕೆ ತಲುಪಿವೆ. ಜಗತ್ತಿನ ಕಾಳುಗಳ ಹುಟ್ಟುವಳಿಯ ಪ್ರಮಾಣದಲ್ಲಿ ಸಾಲಾಗಿ ಅಕ್ಕಿ , ಗೋದಿ, ಮೆಕ್ಕೆಜೋಳ, ಬಾರ‍್ಲಿಯ ನಂತರದ 5 ನೇ ಜಾಗ ಜೋಳಕ್ಕೆ ಸಿಕ್ಕಿದೆ. ಜೋಳದ ಹಿಟ್ಟು ಸೂಪ್ ಗಟ್ಟಿ ಮಾಡಲೂ ಬಳಕೆಯಾಗುತ್ತದೆ. ಜೋಳದ ಒಂದು ತಳಿಯಾದ ಸ್ವೀಟ್ ಸೋರ‍್ಗಮ್ ನಿಂದ ಸಿಹಿ ಸಿರಪ್ ತಯಾರು ಮಾಡುತ್ತಾರೆ. ಜೋಳದ ಹಸಿ ದಂಟುಗಳನ್ನು ಗಾಣದಲ್ಲಿ ಹಿಂಡಿ ಅದರ ರಸ್ ತೆಗೆದು ಅದರಿಂದ ಮೊಲ್ಯಾಸಿಸ್ ಮಾಡುತ್ತಾರೆ. ಇದನ್ನು ಕೇಕು ಸಿರಿಯಲ್ ಗಳ ಮೇಲೆ ಹಾಕುತ್ತಾರೆ. ಇಂಡಿಯಾದಲ್ಲಿ ಜೋಳದ ದಂಟಿನಿಂದ ಮದುರಾ ಎನ್ನೋ ಸಿಹಿ ಸಿರಪ್ ತಯಾರು ಮಾಡುತ್ತಾರೆ. ಜೋಳದ ಈ ಸಿರಪ್ ತೆಂಕಣ ಅಮೆರಿಕ ರಾಜ್ಯ ಗಳಲ್ಲಿ ತುಂಬಾ ಬಳಕೆಯಲ್ಲಿ ಇದೆ. ಅಲ್ಲಿ ಜೋಳದ ಸಿರಪ್ ಅನ್ನು ಬಿಸ್ಕಿಟ್ ಗಳ ಮೇಲೆ ಹಾಕಿಕೊಂಡು ತಿನ್ನುತ್ತಾರೆ.
19 ನೂರೇಡಿನಲ್ಲಿ ಇತಿಯೊಪಿಯಾ ನಾಡಿನಲ್ಲಿ ಜೋಳವನ್ನು ಹೊಲದ ಮೊದಲ ಬೆಳೆಯಾಗಿ ಬಿತ್ತುತ್ತಿದ್ದರು. ಜೋಳ ರಾಶಿಯಾದ ಮೇಲೆ ಉಳಿದ ಪೈರು ಹೊಲಕ್ಕೆ ಗೊಬ್ಬರವಾಗುತ್ತಿತ್ತು. ಚೈನಾದಲ್ಲಿ ಗಾವೋಲಿಯಾಂಗ್ ಅನ್ನೊ ಕಳ್ಳು (liquor) ತಯಾರಿಸುತ್ತಾರೆ. ಜಿಂಬಾಬ್ವೆ ಬುರುಂಡಿ ಮಾಲಿ ಗಾನಾ ನೈಜೀರಿಯಾ ನಾಡುಗಳಲ್ಲಿ ಜೋಳದಿಂದ ಬಿಯರ್ ತಯಾರು ಮಾಡುತ್ತಾರೆ. ಆಪ್ರಿಕಾ, ನಡು ಅಮೆರಿಕ, ತೆಂಕಣ ಏಶ್ಯಾಗಳಲ್ಲಿ ಜೋಳ ಬೆಳೆಯುವದು ಹೆಚ್ಚಾಗಿದೆ. ಜೋಳದ ದಂಟಿನ ಸಿಹಿ ರಸವನ್ನು ಹುದುಗು ಬರಿಸಿ, ಅದರಿಂದ ಇತೆನಾಲ್ ತಯಾರು ಮಾಡುವದು ಈಗ ಗೊತ್ತಾಗಿರುವದರಿಂದ ಜೋಳದ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಮೊದಲು “ಗೋದಿ ಕೊಟ್ಟು ಜೋಳ ತಂದರು” ಅನ್ನೋ ಗಾದೆ ಇತ್ತು. ಅಂದರೆ ಗೋದಿ ಹೆಚ್ಚು ಬೆಲೆಯುಳ್ಳದ್ದು ಅದನ್ನು ಕೊಟ್ಟುಬಿಟ್ಟು ಕಡಿಮೆ ಬೆಲೆ ಇರುವ ಜೋಳ ತಂದರು. ಆದರೆ ಈಗ ಜೋಳ ಇತೆನಾಲ್ ಉತ್ಪಾದನೆಗೆ ಬಳಕೆಯಾಗುತ್ತಿರುವ ಕಾರಣಕ್ಕೆ ಅದರ ಬೆಲೆ ಹೆಚ್ಚಾಗಿದೆ. ಏಶ್ಯಾದಲ್ಲಿ 11 ಮಿಲಿಯನ್ ಹೆಕ್ಟೇರ್ ಮತ್ತು ಆಪ್ರಿಕಾದಲ್ಲಿ 23. 4 ಮಿಲಿಯನ್ ಹೆಕ್ಟೇರ್ ಬೂಮಿಯಲ್ಲಿ ಜೋಳವನ್ನು ಬೆಳೆಸಲಾಗುತ್ತಿದೆ. ಜೋಳ ಬೆಳೆಯುವಲ್ಲಿ ನೈಜಿರಿಯಾ, ಇಂಡಿಯಾ, ಮೆಕ್ಸಿಕೊ ಮತ್ತು ಅಮೆರಿಕ ರಾಜ್ಯಗಳು ಮುಂದೆ ಇವೆ.
(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು