ಮಾಡಿ ಸವಿಯಿರಿ ಸೊಗಸೊಬ್ಬಟ್ಟು
– ಸವಿತಾ.
ತುಮಕೂರು ಕಡೆ ಹಬ್ಬದ ಅಡುಗೆಯಾಗಿ ಸೊಗಸೊಬ್ಬಟ್ಟು ಮಾಡಲಾಗುತ್ತದೆ.
ಬೇಕಾಗುವ ಸಾಮಾನುಗಳು
ಗೋದಿ ಹಿಟ್ಟು – 2 ಲೋಟ
ಮೈದಾ – 1/4 ಲೋಟ
ಚಿರೋಟಿ ರವೆ – 1/4 ಲೋಟ
ಎಣ್ಣೆ – 2 ಟೀ ಸ್ಪೂನ್
ಅಕ್ಕಿ ಹಿಟ್ಟು – 1 ಲೋಟ
ಒಣ ಕೊಬ್ಬರಿ ತುರಿ – 1 ಲೋಟ
ಬೆಲ್ಲ – 1 ಲೋಟ
ಏಲಕ್ಕಿ – 2
ಗಸಗಸೆ – 1 ಚಮಚ
ಜಾಯಿಕಾಯಿ ಪುಡಿ – ಸ್ವಲ್ಪ
ಮಾಡುವ ಬಗೆ
ಮೈದಾ ಹಿಟ್ಟು, ಚಿರೋಟಿ ರವೆ, ಗೋದಿ ಹಿಟ್ಟಿಗೆ ಎರಡು ಚಮಚ ಕಾದ ಎಣ್ಣೆ, ಸ್ವಲ್ಪ ನೀರು ಹಾಕಿ ಹಿಟ್ಟು ಕಲಸಿ ಒಂದು ಗಂಟೆ ಕಾಲ ನೆನೆಯಲು ಇಡಬೇಕು.
ಒಂದು ಸಣ್ಣ ಪಾತ್ರೆಗೆ ನೀರು ಹಾಕಿ ಬಿಸಿ ಮಾಡಿ. ಅದನ್ನು ತವೆ ಮೇಲೆ ಇಡಿ. ಸಣ್ಣ ಉರಿ ಇಟ್ಟು, ಒಂದು ಚಮಚ ತುಪ್ಪ ಹಾಕಿ. (ತವೆ ಮೇಲೆ ಇಟ್ಟು ಕುದಿಸಿದರೆ ಸೀದು ಹೋಗುವುದಿಲ್ಲ). ನೀರಿಗೆ ಅಕ್ಕಿ ಹಿಟ್ಟು ಸೇರಿಸಿ ಕೈಯಾಡಿಸಿ. ಮುದ್ದೆಯಾಗಿ ಬರುತ್ತದೆ. ನಂತರ ಒಣ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕೂಡಿಸಿ. ಬೆಲ್ಲ ಹಾಕಿ ಸ್ವಲ್ಪ ಕುದಿಸಿ ಇಳಿಸಿ. ಏಲಕ್ಕಿ, ಗಸಗಸೆ, ಜಾಯಿಕಾಯಿ ಸ್ವಲ್ಪ ಹುರಿದು ಪುಡಿ ಮಾಡಿ ಸೇರಿಸಿ. ಚೆನ್ನಾಗಿ ಕಲಸಿ ತುಂಬಲು ಹೂರಣದ ಉಂಡೆ ಕಟ್ಟಿ ಇಟ್ಟುಕೊಳ್ಳಿ.
ಕಲಸಿ ಇಟ್ಟ ಹಿಟ್ಟು ಹಿಡಿದು ಹೂರಣ ತುಂಬಿ ನಿಮಗೇ ಬೇಕಾದ ಅಳತೆ ಪೂರಿ ಎಣ್ಣೆ ಹಚ್ಚಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ . ಈಗ ಸೊಗಸೊಬ್ಬಟ್ಟು ಸವಿಯಲು ಸಿದ್ದ . ಒಂದು ವಾರ ಇಟ್ಟು ತಿನ್ನಬಹುದು .
ಇತ್ತೀಚಿನ ಅನಿಸಿಕೆಗಳು