ಸೋಮಚಾಪ – ಕತ್ತಲಿನಲ್ಲಿ ಕಾಣುವ ಕಾಮನಬಿಲ್ಲು!

moonrainbow, ಸೋಮಚಾಪ
ಕವಿಗಳು ಹೆಣ್ಣಿನ ಸೌಂದರ‍್ಯವನ್ನು ವರ‍್ಣಿಸಲು ಕಾಮನಬಿಲ್ಲನ್ನು ತಮ್ಮ ಕಾವ್ಯದಲ್ಲಿ ಬಹಳವಾಗಿ ಬಳಸಿರುವುದನ್ನು ಕಾಣಬಹುದು. ಆಗಸದಲ್ಲಿ ಎಲ್ಲರ ಕಣ್ಣಿಗೆ ಕಾಣುವ ಅತ್ಯದ್ಬುತ ರಂಗು ರಂಗಿನ ಬಿಲ್ಲು ಇದು. ಬಿಳಿಯ ಬಣ್ಣದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ಬಣ್ಣಗಳನ್ನು ಬೆತ್ತೆಲೆಯಾಗಿ ನಿಲ್ಲಿಸುವುದು ಈ ಕಾಮನಬಿಲ್ಲು. ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಶಯವೆಂದರೆ, ಕಾಮನಬಿಲ್ಲು ಆಗಸದಲ್ಲಿ ಕಾಣಿಸಿಕೊಳ್ಳಲು ಪ್ರಮುಕವಾಗಿ ಮಳೆಯ(ನೀರಿನ) ಹನಿ ಮತ್ತು ಸೂರ‍್ಯನ ಬಿಸಿಲು ಅತ್ಯಾವಶ್ಯಕ. ಇದನ್ನು ಸಾಬೀತು ಪಡಿಸಲು ಪ್ರಯೋಗಾಲಯಗಳಲ್ಲಿ ಸಾದ್ಯ. ಆದರೂ ಆಗಸದಲ್ಲಿ ಕಾಲನಬಿಲ್ಲು ಮೂಡಿದಾಗ ಪದೇ ಪದೇ ನೋಡದೆ ಇರಲು ಸಾದ್ಯವಿಲ್ಲ. ಅದನ್ನು ನೋಡಿ ಅದರ ಪ್ರಾಕ್ರುತಿಕ ಸೌಂದರ‍್ಯ ಆಸ್ವಾದಿಸದ ಮಾನವ ಇಲ್ಲ ಎನ್ನಬಹುದು.
ಕತ್ತಲಿನಲ್ಲೂ ಕಾಮನಬಿಲ್ಲನ್ನು ಕಾಣಬಹುದು ಎಂದರೆ “ಇದು ಹುಚ್ಚರಾಡುವ ಮಾತು“ ಎಂದು ಅಸಡ್ಡೆ ತೋರುವುದು ಜಾಸ್ತಿ. ಆದರೆ ಇದು ನಿಜ. ಹುಣ್ಣಿಮೆಯ ರಾತ್ರಿಯಲ್ಲಿ ರಾತ್ರಿಯ ಕಾಮನಬಿಲ್ಲು ಕಾಣಿಸುತ್ತದೆ. ಇನ್ನು ಸೋಮಚಾಪ ಎನ್ನಲಾಗುತ್ತದೆ. ಸೋಮಚಾಪ ಚಂದ್ರನ ಬೆಳಕಿನಿಂದ ಉಂಟಾಗುವ ಕಾಮನಬಿಲ್ಲು. ಇದನ್ನು ಬಿಳಿ ಕಾಮನಬಿಲ್ಲು ಎಂದು ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ಚಂದ್ರನ ಬೆಳಕು ಮಂದವಾಗಿರುವುದರಿಂದ ಸೋಮಚಾಪದ ಹೊಳಪು ಕಡಿಮೆ ಮತ್ತು ಅದನ್ನು ಗುರುತಿಸುವುದು ತುಸು ತ್ರಾಸದಾಯಕ ಕೂಡ. ಸೋಮಚಾಪವು ಯಾವಾಗಲೂ ಆಗಸದಲ್ಲಿ ಚಂದ್ರನ ಸ್ತಾನಕ್ಕೆ ವಿರುದ್ದ ದಿಕ್ಕಿನಲ್ಲಿ ಗಟಿಸುತ್ತದೆ. ಸೋಮಚಾಪದ ಹೊಳಪು ಕಡಿಮೆ ಇರುವುದರಿಂದ ಬರಿಗಣ್ಣಿಗೆ ಅದರಲ್ಲಿನ ಬಣ್ಣಗಳನ್ನು ಬೇರೆಬೇರೆಯಾಗಿ ನೋಡುವುದು ಸಾಮಾನ್ಯವಾಗಿ ಕಶ್ಟಕರ. ಬಹುಮಟ್ಟಿಗೆ ಸೋಮಚಾಪ ಕಣ್ಣಿಗೆ ಬಿಳಿಯ ಬಣ್ಣದ್ದಾಗಿ ಕಾಣಿಸುವುದು.
ಹುಣ್ಣಿಮೆಯ ಆಸುಪಾಸಿನ ದಿನಗಳಲ್ಲಿ ಸೋಮಚಾಪವನ್ನು ಕಾಣುವ ಸಂಬವ ಹೆಚ್ಚು. ಚಂದ್ರನು ಕೆಳ ಆಗಸದಲ್ಲಿದ್ದು ರಾತ್ರಿಯ ಆಗಸವು ಕಪ್ಪಾಗಿರುವಾಗ ಚಂದ್ರನ ಸ್ತಾನದ ವಿರುದ್ದ ದಿಕ್ಕಿನಲ್ಲಿ ಮಳೆ ಬೀಳುತ್ತಿರುವ ಸನ್ನಿವೇಶದಲ್ಲಿ ಸೋಮಚಾಪ ಉಂಟಾಗುತ್ತದೆ. ಸೋಮಚಾಪದ ಗಟಿಸುವಿಕೆಗೆ ಇಶ್ಟು ಬಗೆಯ ಪೂರ‍್ವಾವಶ್ಯಕತೆಗಳಿರುವ ಕಾರಣದಿಂದಾಗಿ ಕಾಮನಬಿಲ್ಲಿಗೆ ಹೋಲಿಸಿದಾಗ ಇದು ಒಂದು ಅಪರೂಪದ ವಿದ್ಯಮಾನವಾಗಿದೆ. ಆದರೆ ಜಲಪಾತಗಳ ಆಸುಪಾಸಿನಲ್ಲಿ ಸೋಮಚಾಪದ ಸಂಬವನೀಯತೆ ಹೆಚ್ಚು. ಕೆಲವೊಮ್ಮೆ ಅತಿ ಅಪರೂಪವಾಗಿ ಮಂಜುಮುಸುಕಿದ ವಾತಾವರಣದಲ್ಲಿ ಚಂದ್ರನ ಸುತ್ತಲೂ ಸೋಮಚಾಪ ಕಾಣಿಸಿಕೊಳ್ಳುತ್ತದೆ. ವಿಶ್ವದಲ್ಲಿ ಸೋಮಚಾಪ ಹೆಚ್ಚಾಗಿ ಗಟಿಸುತ್ತಲೇ ಇರುವ ತಾಣಗಳು ಬಲು ಕಡಿಮೆ. ಅವುಗಳಲ್ಲಿ ಅಮೇರಿಕದ ಕಂಬಲ್ಯಾರ‍್ಂಡ್ ಜಲಪಾತ, ಹವಾಯ್‌ನ ವೈಮಿಯಾ ಮತ್ತು ಆಪ್ರಿಕಾದ ವಿಕ್ಟೋರಿಯಾ ಜಲಪಾತಗಳು ಪ್ರಸಿದ್ದ.
ಪ್ರಪಂಚದ ಕೆಲವು ಸ್ತಳಗಳಲ್ಲಿ ಮೂನ್ ಬೋಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಸ್ತಳಗಳಲ್ಲಿ ಹೆಚ್ಚಿನವು ಜಲಪಾತಗಳನ್ನು ಹೊಂದಿವೆ. ಜಲಪಾತದ ನೀರು ದುಮುಕುವಾಗ ಗಾಳಿಯಲ್ಲಿ ಮಂಜಿನ ಪದರಗಳನ್ನು ಸ್ರುಶ್ಟಿಯಾಗುತ್ತವೆ. ಕ್ಯಾಲಿಪೋರ‍್ನಿಯಾದ ಯೊಸೆಮೈಟ್ ರಾಶ್ಟ್ರೀಯ ಉದ್ಯಾನ, ಜಾಂಬಿಯಾ ಮತ್ತು ಜಿಂಬಾಬ್ವೆಯ ಗಡಿಯಲ್ಲಿರುವ ವಿಕ್ಟೋರಿಯಾ ಜಲಪಾತ; ಮತ್ತು ಹವಾಯಿಯಲ್ಲಿ ವೈಮಿಯಾ, ಸೋಮಚಾಪ ನೋಡಲು ಸೂಕ್ತ ಸ್ತಳಗಳು.
(ಚಿತ್ರಸೆಲೆ: wiki

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: