ಮಾಸ್ಕ್‌ಗಳ ಕುರಿತು ತಿಳಿದಿರಬೇಕಾದ ಸಂಗತಿಗಳು

ಮೆಡಿಕಲ್ ಮುಸುಕು medical mask
ಕೋವಿಡ್-19 ನಾಡುಗಳ ಎಲ್ಲೆ ದಾಟಿ ಹಬ್ಬುತ್ತಿದೆ. ಕೊರೊನಾಗೆ ಸರಿಯಾದ ಮದ್ದು ಕಂಡುಹಿಡಿಯುವ ಕೆಲಸ ನಡೆದೇ ಇದೆ. ಆದ್ದರಿಂದ ಕೊರೊನಾ ಬರುವುದನ್ನು ತಡೆಯುವ ಮುನ್ನೆಚ್ಚರಿಕೆಯೇ ಈಗ ಮದ್ದಾಗಿದೆ. ಕೊರೊನಾ ತಡೆಗಟ್ಟುವಲ್ಲಿ ಮುಕದ ಮುಸುಕುಗಳ (face mask) ಬಗ್ಗೆಯೂ ಹೆಚ್ಚೆಚ್ಚು ಮಾತನಾಡಲಾಗುತ್ತಿದೆ.  ಕೋವಿಡ್-19 ಹಬ್ಬುತ್ತಿರುವ ಈ ಹೊತ್ತಿನಲ್ಲಿ ಮುಕದ ಮುಸುಕುಗಳ ಬಳಕೆ ಮತ್ತು ಬೇಡಿಕೆ ಕೂಡ ಎಗ್ಗು-ಸಿಗ್ಗಿಲ್ಲದೇ ಹೆಚ್ಚಿದೆ. ರೋಗಗಳನ್ನು ತಡೆಗಟ್ಟುವಲ್ಲಿ ಮುಕ್ಯ ಪಾತ್ರವಹಿಸುವ ಮುಕ ಮುಸುಕುಗಳ ಬಗ್ಗೆ ಒಂದಶ್ಟು ಮಾಹಿತಿಯನ್ನು ಓದುಗರ ಮುಂದಿಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ವೈದ್ಯಕೀಯ ಕ್ಶೇತ್ರದಲ್ಲಿ ಎರಡು ಬಗೆಯ ಮುಸುಕುಗಳು ಬಳಕೆಯಾಗುತ್ತವೆ.

ಮೆಡಿಕಲ್/ಸರ‍್ಜಿಕಲ್ ಮುಸುಕು:

Medical mask, ಮೆಡಿಕಲ್ ಮುಸುಕು

  1. ಈ ಮುಸುಕನ್ನು ತೊಟ್ಟುಕೊಂಡಾಗ ಮೂಗು ಮತ್ತು ಬಾಯಿಯ ಸುತ್ತ ಸಡಿಲವಾಗಿ ಹೊಂದಿಕೊಳ್ಳುತ್ತದೆ.
  2. ಮೂಗು ಮತ್ತು ಬಾಯಿಯಿಂದ ಸೂಸುವ ಎಂಜಲು, ಉಸಿರಿನ-ತೇವದಂತ ಮಯ್ ರಸಗಳ-ಹನಿಗಳು (droplets) ತೊಟ್ಟುಕೊಂಡವರಿಂದ ಸುತ್ತ ಮುತ್ತಲಿನ ಮಂದಿಗೆ ತಗುಲದಂತೆ ಕಾಯುತ್ತದೆ.
  3. ಮೆಡಿಕಲ್ ಮುಸುಕು ಸುತ್ತ-ಮುತ್ತಲಿನ ಗಾಳಿಯಲ್ಲಿ ಇರಬಹುದಾದ ಮಯ್ಕ್ರಾನ್ ಗಾತ್ರದ ಕಿರುಕೆಡುಕು ಕಣಗಳನ್ನು ಸೋಸುವ ಅಳವನ್ನು ಹೊಂದಿರುವುದಿಲ್ಲ. ಹಾಗಾಗಿ, ಇದನ್ನು ತೊಟ್ಟುಕೊಂಡವರು ಉಸಿರನ್ನು ಎಳೆದುಕೊಂಡಾಗ, ಗಾಳಿಯಲ್ಲಿ ಇರಬಹುದಾದ ಕಿರುಕೆಡುಕು ಕಣಗಳು ಉಸಿರಾಟದ ಏರ‍್ಪಾಟಿಗೆ ನುಸುಳುವುದನ್ನು ತಡೆಯಲಾರದು.
  4. ಇದನ್ನು ಒಂದು  ಸಲ ತೊಟ್ಟಮೇಲೆ ಮತ್ತೆ ಬಳಸಕೂಡದು.

N95-ಉಸಿರ‍್ಗಾಪು (N95 Respirator):

N95 ಎನ್95

  1. ಇದನ್ನು ತೊಟ್ಟುಕೊಂಡಾಗ ಮೂಗು ಮತ್ತು ಬಾಯಿಯ ಸುತ್ತ ಎಡೆ ಇಲ್ಲದಂತೆ ಹೊಂದಿಕೊಳ್ಳುತ್ತದೆ.
  2. ಈ ಉಸಿರ‍್-ಗಾಪನ್ನು ತೊಟ್ಟಾಗ ಮೂಗು ಮತ್ತು ಬಾಯಿಯಿಂದ ಹೊರ ಬರುವ ಸಣ್ಣ ಮತ್ತು ದೊಡ್ಡ ಮಯ್ ರಸದ-ಹನಿಗಳು (droplets) ಸುತ್ತಮುತ್ತಲಿನವರಿಗೆ ತಗುಲುವುದನ್ನು ತಡೆಯುತ್ತದೆ.
  3. ಇದನ್ನು ಸರಿಯಾಗಿ ಬಳಸಿದಲ್ಲಿ, ಗಾಳಿಯಲ್ಲಿ ಇರುವ ಬ್ಯಾಕ್ಟೀರಿಯ ಮತ್ತು ವಯ್ರಸ್‌ಗಳು ಸೇರಿದಂತೆ, ಶೆಕಡ 95% ಕಿರುಕೆಡುಕು ಕಣಗಳನ್ನು ಸೋಸುವ ಅಳವನ್ನು ಹೊಂದಿದೆ. 0.3 ಮಯ್ಕ್ರಾನ್ ನಶ್ಟು ಕಿರಿದಾದ ಕೆಡುಕು ಕಣಗಳನ್ನು ಇವು ತಡೆ ಹಿಡಿಯುತ್ತವೆ.
  4. ಈ ಮೊದಲು, ಈ ಉಸಿರ‍್ಗಾಪನ್ನು ಮರುಬಳಕೆ ಮಾಡಕೂಡದೆಂದು ನಿಯಮವಿತ್ತು. ಸದ್ಯದ ಮಟ್ಟಿಗೆ, ಕೊವಿಡ್-19 ನ ಹಾವಳಿಯಿಂದಾಗಿ ಮುಕದ ಮುಸುಕುಗಳ ಕೊರೆತೆಯುಂಟಾಗಿರುವುದರಿಂದ, ಉಸಿರ‍್-ಗಾಪನ್ನು ಕೆಲವು ಸಲ ಮರುಬಳಸಲು ನಿಯಮವನ್ನು ಸಡಿಲಿಸಲಾಗಿದೆ.

ಮುಸುಕುಗಳ ಬಳಕೆಯ ಬಗ್ಗೆ ಏಳುವ ಸಾಮಾನ್ಯ ಕೇಳ್ವಿಗಳು:

ಮುಕದ ಮುಸುಕನ್ನು ಯಾರು ತೊಡಬೇಕು? 
– ನೀವು ಆರೋಗ್ಯವಾಗಿದ್ದಲ್ಲಿ ಮುಸುಕನ್ನು ತೊಡುವ ಅವಶ್ಯಕತೆ ಇಲ್ಲ. ಆದರೆ ಕರೋನ (ಮತ್ತು ಇತರ ಉಸಿರೇರ‍್ಪಾಟಿನ) ಸೋಂಕಿಗೆ ತುತ್ತಾದವರು ಇಲ್ಲವೇ ತುತ್ತಾಗಿರಬಹುದಾದವರ ಆರಯ್ಕೆಯಲ್ಲಿ ತೊಡಗಿದ್ದಲ್ಲಿ, ಮುಸುಕನ್ನು ತೊಡುವುದು ಒಳಿತು.
– ಸೀನು, ಕೆಮ್ಮು ಇಲ್ಲವೇ ನೆಗಡಿಯಿಂದ ಬಳಲುತ್ತಿದ್ದರೆ ಮುಸುಕನ್ನು ತೊಡಬೇಕು.
ಮಕದ ಮುಸುಕಿನ ಬಳಕೆ ಎಶ್ಟು ಪರಿಣಾಮಕಾರಿ?
ನಿಯಮಿತವಾಗಿ ಸೋಪು-ನೀರಿನಲ್ಲಿ ಇಲ್ಲವೇ ಚೊಕ್ಕಗೊಳಿಸುಗಗಳಿಂದ (sanitizer) ಕಯ್ ತೊಳೆಯುವುದನ್ನು ರೂಡಿಸಿಕೊಂಡಲ್ಲಿ ಮಾತ್ರ ಮುಸುಕಿನ ಬಳಕೆ ಪರಿಣಾಮಕಾರಿಯಾಗಿರುತ್ತದೆ.
– ತೊಡುವ ಮುನ್ನ ಸೋಪಿ ಮತ್ತು ನೀರಿನಿಂದ ಕಯ್ಯನ್ನು ಚನ್ನಾಗಿ ತೊಳೆದುಕೊಳ್ಳಬೇಕು.
– ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಮುಸುಕನ್ನು ತೊಡಬೇಕು. ಜೊತೆಗೆ ಮುಕ ಮತ್ತು ಮುಸುಕಿನ ನಡುವೆ ಎಡೆಯಿಲ್ಲದಂತೆ ಮುಸುಕನ್ನು ತೊಡಬೇಕು.
– ಮುಸುಕನ್ನು ಪದೆ ಪದೆ ಕೈಯಿಂದ ಮುಟ್ಟಬಾರದು. ಹಾಗೇನಾದರು ಸರಿಪಡಿಸಿಕೊಳ್ಳಲ್ಲು ಮುಟ್ಟಬೇಕಿದ್ದರೆ, ನೊರೆತ ಮತ್ತು ನೀರಿನಿಂದ ಕೈ ತೊಳೆದುಕೊಂಡು ಮುಟ್ಟಬೇಕು.
– ಮುಸುಕು ತೇವವಾದ ಕೂಡಲೆ, ಅದನ್ನು ತೆಗೆದು ಹೊಸ ಮುಸುಕನ್ನು ತೊಡಬೇಕು. ಒಂದೇ ಬಳಕೆಗೆಂದು ತಯಾರಿಸಲಾದ ಮುಸುಕನ್ನು ಒಂದಕ್ಕಿಂತ ಹೆಚ್ಚಿನ ಸಲ ಬಳಸುವಂತಿಲ್ಲ.
– ಮುಸುಕನ್ನು ತೆಗೆಯುವಾಗ ಮುಂದಿನ ಬಾಗವನ್ನು ಮುಟ್ಟದೇ ಹಿಂದಿನಿಂದ ತೆರೆಗೆಯಬೇಕು. ತೆಗೆದ ಕೂಡಲೆ ಕೈ ಅನ್ನು ನೊರೆತ ಮತ್ತು ನೀರಿನಿಂದ ತೊಳೆದುಕೊಳ್ಳಬೇಕು.
ಬಟ್ಟೆಯನ್ನು ಮುಕದ ಮುಸುಕಿನಂತೆ ಬಳಸಬಹುದೆ?
ಇಲ್ಲಿಯವರೆಗೆ ನಡೆಸಿರುವ ಅರಕೆಗಳ ಪ್ರಕಾರ ಮನೆಯಲ್ಲಿಯೇ ತಯಾರಿಸಬಹುದಾದ ಬಟ್ಟೆಯ ಮುಸುಕು ಇಲ್ಲವೇ ಬಟ್ಟೆಗಳು (ಟವೆಲ್, ಕರ್‌ಚೀಪ್, ಇತರೆ) ಮೆಡಿಕಲ್ ಮುಸುಕು ಮತ್ತು N95-ಉಸಿರ‍್ಗಾಪುಗಳಶ್ಟು ಪರಿಣಾಮಕಾರಿಯಾಗಲಾರವು. ಜಗತ್ತಿನ್ನೆಲ್ಲೆಡೆ ಹೆಚ್ಚಿನ ಸಂಕೆಯಲ್ಲಿ ಜನರು ಕರೋನ ವಯ್ರಸ್‌ಗೆ ತುತ್ತಾಗಿರುವ ಈ ಹೊತ್ತಿನ್ನಲ್ಲಿ ಮುಸುಕುಗಳ ಕೊರತೆಯುಂಟಾಗಿದೆ. ಹಾಗಾಗಿ, ಏನೂ ಇಲ್ಲದಿರುವುದಕ್ಕಿಂತ ಬಟ್ಟೆ/ಬಟ್ಟೆಯ ಮುಸುಕನ್ನು ತೋಡಬಹುದು ಎಂಬುದು ಮೆಡಿಕಲ್-ಕೂಡಣದ ಅನಿಸಿಕೆಯಾಗಿದೆ.

(ಚಿತ್ರಸೆಲೆfreepick, wiki/surgery, wiki/N95

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: