ಪ್ರಕ್ರುತಿಯೇ ಮಹಾ ವೈದ್ಯ

– ಸಂಜೀವ್ ಹೆಚ್. ಎಸ್.

ಬೂಮಿ, ನಾಶ, earth, destruction

ಪ್ರಕ್ರುತಿಯೇ ಹಾಗೆ! ತನ್ನ ಒಡಲಿನೊಳಗೆ ಹಲವು ವಿಸ್ಮಯಗಳನ್ನು ಹುದುಗಿಸಿಕೊಂಡಿದೆ. ಅಗೆದಶ್ಟೂ ಕಾಲಿಯಾಗದ ಬೊಕ್ಕಸ, ತಿಳಿದುಕೊಂಡಿರುವುದು ಸಾಸಿವೆಯಶ್ಟು, ತಿಳಿಯಬೇಕಾದದ್ದು, ವಿಶಾಲವಾದ ಆಕಾಶದಶ್ಟು. ಪ್ರಕ್ರುತಿಯ ವಿಚಿತ್ರ ಮತ್ತು ವಿಸ್ಮಯಗಳಿಗೆ ಸೋಕಾಲ್ಡ್ ಬುದ್ದಿವಂತ ಮಾನವ ಒಂದಶ್ಟು ವಿಚಾರಗಳಿಗೆ ಮಾತ್ರವೇ ಕಾರಣ ಮತ್ತು ಉತ್ತರ ಕಂಡುಕೊಂಡಿದ್ದಾನೆ. ಆದರೆ ಅದೆಶ್ಟು ಕಣ್ಣಿಗೆ ಕಾಣದ, ಮನಸ್ಸಿಗೆ ಅರಿಯದ, ಬುದ್ದಿಗೆ ತೋಚದ ವಿಚಿತ್ರ ವಿಸ್ಮಯಗಳಿಗೆ ಇನ್ನೂ ಉತ್ತರ ಹುಡುಕುತ್ತಿದ್ದಾನೆ. ಎಶ್ಟೇ ಹೋರಾಟ ಮಾಡಿದರೂ ಕೊನೆಗೆ ಗೆಲ್ಲುವುದು ಪ್ರಕ್ರುತಿಯೇ ಎಂಬ ಸಾಮಾನ್ಯ ಅರಿವು ಕೂಡ ಮನುಶ್ಯ ಜೀವಿಗೆ ಇಲ್ಲ. ನಮ್ಮ ಆಹಾರ ಆರೋಗ್ಯ ಎಲ್ಲವೂ ಈ ಪ್ರಕ್ರುತಿಯ ಕೊಡುಗೆ ಎಂಬುದು ನಿಮ್ಮ ಗಮನಕ್ಕಿರಲಿ.

ಕೋಟ್ಯಂತರ ಜೀವ ಸಂಕುಲಗಳಿಗೆ ಆಶ್ರಯ ಕೊಟ್ಟ ಪ್ರಕ್ರುತಿ ಮಾತೆ ಮನುಶ್ಯ ಜೀವಿಗೂ ಆಶ್ರಯ ಕಲ್ಪಿಸಿದ್ದಾಳೆ. ಬೂಮಿಯ ಮೇಲೆ ಆಶ್ರಯ ಪಡೆದ ಕೋಟ್ಯಂತರ ಜೀವ ಸಂಕುಲಗಳು ಪ್ರಕ್ರುತಿ ಮಾತೆಗೆ ವಿರುದ್ದವಾಗಿ ನಡೆಯದೆ ಪ್ರಕ್ರುತಿಯ ನಾಡಿಮಿಡಿತವನ್ನು ಅರಿತು ನಡೆಯುತ್ತವೆ. ಪ್ರಕ್ರುತಿಯ ನಿಯಮ ಮತ್ತು ನಿರ‍್ಬಂದನೆಗಳನ್ನು ಎಲ್ಲಿಯೂ ಮೀರುವ ಸಾಹಸವನ್ನು ಮಾಡಿಲ್ಲ. ಹಾಗೊಂದು ವೇಳೆ ಮಾಡಿದರೆ ಅವುಗಳ ಅಂತ್ಯವಾಗಿದೆ ಅಶ್ಟೇ. ಅದರಲ್ಲೆಲ್ಲಾ ಪ್ರಕ್ರುತಿಗೆ ವಿರುದ್ದ ದಿಕ್ಕಿನಲ್ಲಿ ನಡೆಯುವ ಪ್ರಾಣಿಯೆಂದರೆ ಈ ಮನುಶ್ಯ ಜೀವಿ ಮಾತ್ರ. ಪ್ರಕ್ರುತಿಯನ್ನು ತನ್ನ ದರ‍್ಮ ಕರ‍್ಮಕ್ಕೆ ತೆಗೆದುಕೊಂಡ ಮಾನವ ಪ್ರಕ್ರುತಿಗೆ ವಿರುದ್ದ ದಿಕ್ಕಿನಲ್ಲಿ ನಡೆಯುವ ಸಾಹಸ ಮತ್ತು ಪ್ರಕ್ರುತಿಯನ್ನೇ ಪರೀಕ್ಶೆಗೆ ಒಳಪಡಿಸಿದ್ದಾನೆ. ಪ್ರಕ್ರುತಿಯ ಒಳಗೆ ನಾವಿದ್ದೇವೆ ಹೊರತು ನಮ್ಮಿಂದ ಪ್ರಕ್ರುತಿ ಇಲ್ಲ. ಮನುಶ್ಯ ಪ್ರಕ್ರುತಿ ಕೊಟ್ಟ ಕೊಡುಗೆಗಳನ್ನು ಪ್ರಗ್ನಾಪೂರ‍್ವಕವಾಗಿ ಬಳಸಿಕೊಳ್ಳುವಲ್ಲಿ ವಿಪಲವಾಗಿದ್ದಾನೆ.

ಅಕಂಡ ಸ್ರುಶ್ಟಿಗೆ ಕಾರಣವಾದ ಬ್ರಹ್ಮ ಅಕಂಡದೊಳಗೆ ಒಳ್ಳೆಯವು ಕೆಟ್ಟವು ಎಲ್ಲವೂ ಸಮತೋಲನದಿಂದ ಬಾಗಿಯಾಗಬೇಕು‌ ಎಂದು ಎಲ್ಲವನ್ನೂ ತುಂಬಿಸಿದ್ದಾನೆ. ನಾವು ನೀವು ಪ್ರಕ್ರುತಿಯನ್ನು ಎಶ್ಟು ಶುಚಿತ್ವವಾಗಿ ಇಟ್ಟುಕೊಳ್ಳುತ್ತೇವೋ ಅಶ್ಟೇ ಆದರದಿಂದ ಪ್ರಕ್ರುತಿ ನಮ್ಮನ್ನು ಸಂರಕ್ಶಿಸುತ್ತದೆ. 21ನೇ ಶತಮಾನದಲ್ಲಿ ಇರುವ ನಾವು ಶುಚಿತ್ವದ ಬಗ್ಗೆ ಈಗ ಎಚ್ಚರಗೊಳ್ಳುತ್ತಿದ್ದೇವೆ. ಇದರ ಅರ‍್ತ ಮುಂಚೆ ಶುಚಿತ್ವ ಇರಲಿಲ್ಲ ಎಂದಲ್ಲ. ಇದ್ದದ್ದನ್ನು ಹಾಳು ಮಾಡಿ ಮತ್ತೆ ಅದನ್ನೇ ಪುನಶ್ಚೇತನಗೊಳಿಸುತ್ತಿದ್ದೇವೆ ಅಶ್ಟೇ. ಚಂದವಾಗಿರುವ ಮನೆಯನ್ನು ಗಲೀಜು ಮಾಡಿ ನಂತರ ತಾನೊಬ್ಬ ಸ್ನಾನ ಮಾಡಿ ಶುಚಿಗೊಂಡಂತೆ ಆಗಿದೆ ಈಗಿನ ಪರಿಸ್ತಿತಿ. ಮುಂಚೆ ಮನೆಯು ಶುಚಿತ್ವದಿಂದ ಕೂಡಿತ್ತು ಮನುಶ್ಯನು ಪ್ರಗ್ನಾಪೂರ‍್ವಕವಾಗಿ ವರ‍್ತಿಸುತ್ತಿದ್ದ.‌ ನಾಗರಿಕತೆಗಳು ಹುಟ್ಟಿದಂತಹ ಕಾಲದಲ್ಲೇ ಇವೆಲ್ಲವೂ ಮುನ್ನೆಲೆಗೆ ಬಂದದ್ದು. ನಾಗರೀಕತೆ ಪ್ರಕ್ರುತಿ ಶುಚಿತ್ವ ಮತ್ತು ಪ್ರಗ್ನಾಪೂರ‍್ವಕ ನಡವಳಿಕೆಗಳನ್ನು ಹೇಳಿಕೊಟ್ಟಿತ್ತು ಆದರೆ ಆದುನೀಕರಣದ ಬರದಲ್ಲಿ ವಿದ್ಯಾವಂತರಾದ ನಾವು ನೀವುಗಳು ತಿಳಿದವರಂತೆ ವರ‍್ತಿಸಲಿಲ್ಲ ಮತ್ತು ಈಗಲೂ ವರ‍್ತಿಸುತ್ತಿಲ್ಲ ಕೂಡ.

ಆದುನೀಕರಣದ ಹೆಸರಿನಲ್ಲಿ ‌ಪ್ರಕ್ರುತಿಗೆ ಇರುವ ರೋಗನಿರೋದಕ ಶಕ್ತಿಯನ್ನು ಮನುಶ್ಯ ಹಾಳುಗೆಡವಿದ್ದಾನೆ. ಇದು ಮನುಶ್ಯ ತನಗೆ ತಾನು ಮಾಡಿಕೊಂಡ ಸ್ವಯಂಕ್ರುತ ಅಪರಾದವೆ ಹೊರತು ಮತ್ತೇನೂ ಅಲ್ಲ. ಮನುಶ್ಯ ತನಗೆ ತಾನೇ ತೋಡಿಕೊಂಡ ಗುಂಡಿ ಇದು. ಸೆಲ್ಪ್-ಡಿಸ್ಟ್ರಕ್ಶನ್ ಎಂದೇ ಕರೆಯೋಣ. ಪ್ರಕ್ರುತಿಯನ್ನು ಹಾಳು ಮಾಡುವ ಮೂಲಕ ಸ್ವಾರ‍್ತ ಮನುಶ್ಯಜೀವಿ ತನ್ನ ಸ್ವಯಂ ರೋಗನಿರೋದಕ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇಶ್ಟಾದರೂ ಪ್ರಕ್ರುತಿ ಮಹಾ ಕರುಣಾಮಯಿ, ನಮ್ಮನ್ನು ಕೈಬಿಡುವುದಿಲ್ಲ, ಎಲ್ಲವನ್ನೂ ವಾಸಿ ಮಾಡುತ್ತಾಳೆ ನಮ್ಮವ್ವ ಪ್ರಕ್ರುತಿ. ನಮ್ಮ ಈ ಪುಣ್ಯಕ್ಶೇತ್ರವಾದ ಮಣ್ಣಿನಲ್ಲಿ, ಹವಾಗುಣದಲ್ಲಿ ಅಂತಹ ಶಕ್ತಿ ಇದೆ. ತಮ್ಮ ಆರೋಗ್ಯದ ಕಾಳಜಿ ಇದ್ದವರು ತಮ್ಮ ಪ್ರಕ್ರುತಿಯ ಬಗ್ಗೆ ಕಾಳಜಿ ವಹಿಸುತ್ತಾರೆ.

ತನ್ನ ಶುಚಿತ್ವ, ತನ್ನ ಕೇರಿಯ ಊರಿನ ರಾಜ್ಯದ ದೇಶದ ಶುಚಿತ್ವ ಕಾಪಾಡಿಕೊಂಡರೆ ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಈಗ ಬಂದೊದಗಿರುವ ಸಾಂಕ್ರಾಮಿಕ ರೋಗಕ್ಕೆ ನಾವು ಯಾರನ್ನು ಎಶ್ಟೇ ದೂಶಿಸಿದರು, ಅದರಲ್ಲಿ ನಮ್ಮ ಪಾಲು ಕೂಡ ಬಹಳಶ್ಟಿದೆ ಎಂಬುದು ನೆನಪಿನಲ್ಲಿರಲಿ. ನಾವು ಪ್ರಕ್ರುತಿಯನ್ನು ಇಶ್ಟು ಹಾಳು ಮಾಡಿರುವುದರಿಂದಾಗಿಯೇ ಪ್ರಕ್ರುತಿ ಇಂದು ಸ್ವಲ್ಪಮಟ್ಟಿಗೆ ಮುನಿಸಿಕೊಂಡಿದ್ದಾಳೆ. ಇಶ್ಟೆಲ್ಲಾ ಆದರೂ ಕಾಲರಾ, ಮಲೇರಿಯಾ, ಪ್ಲೇಗ್, ಡೆಂಗ್ಯೂ, ಎಚ್ಒನ್ಎನ್ಒನ್, ಹಂದಿಜ್ವರ, ಹಕ್ಕಿಜ್ವರ, ಟೆಟನಸ್, ಮಂಗನಬಾವು ಇನ್ನೂ ಅದೆಶ್ಟು ಸಾಂಕ್ರಾಮಿಕ ರೋಗಗಳಿಗೆ ಮಾನವನಿರ‍್ಮಿತ ಲಸಿಕೆ ಜೊತೆಗೆ ಅವುಗಳನ್ನು ತಡೆಗಟ್ಟುವಲ್ಲಿ ಪ್ರಕ್ರುತಿ ಸಹಕರಿಸಿದ್ದಾಳೆ. ಯಾವುದೇ ರೋಗರುಜಿನಗಳನ್ನು ಮುಲಾಜಿಲ್ಲದೆ ಹೊಡೆದು ಹಾಕುವ ಶಕ್ತಿ ಪ್ರಕ್ರುತಿಗೆ ಇದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರಕ್ರುತಿ ಇದೆಲ್ಲಕ್ಕೂ ಇತಿಶ್ರೀ ಹಾಡುತ್ತಾಳೆ. ಅದೇ ಪ್ರಕ್ರುತಿಯನ್ನು ನಾವೆಶ್ಟು ಸರಿಯಾಗಿ ನಡೆಸಿಕೊಂಡಿದ್ದೇವೆ ಎನ್ನುವುದು ಯಕ್ಶ ಪ್ರಶ್ನೆ!

ಪ್ರಕ್ರುತಿಯೊಳಗೆ ‌ಯಾವಾಗ ನಕರಾತ್ಮಕ ಕ್ರಿಯೆಗಳು ಎಲ್ಲೆ ಮೀರುತ್ತವೋ ಆಗ ಅಕಂಡವಾದ ಪ್ರಪಂಚ ತಾನೇ ಸರ‍್ವನಾಶವಾಗುವ (self-destruction) ಅತವಾ ಪುನರ್ ಸ್ರುಶ್ಟಿ (reconstruction)‌ ಆಗುವ ಹಾಗೆ ಕೂಡ ಮಾಡಿದ್ದಾನೆ ಬಗವಂತ! ತನಗೆ ಬಾರ ಆದಾಗಲೆಲ್ಲ ಜಲಪ್ರಳಯ, ಬೂಕಂಪ, ಪ್ರವಾಹ‌, ರೋಗ-ರುಜಿನ, ಅತಿವ್ರುಶ್ಟಿ-ಅನಾವ್ರುಶ್ಟಿಯನ್ನು ಸ್ರುಶ್ಟಿಸಿ ಒಂದಲ್ಲ ಒಂದು ರೀತಿ ತನ್ನ ಬಾರವನ್ನು ಕಮ್ಮಿ ಮಾಡಿಕೊಂಡಿದೆ ಪ್ರಕ್ರುತಿ. ಇದು ಪ್ರಕ್ರುತಿ ಸಮತೋಲನವನ್ನು ಕಾಪಾಡಿಕೊಳ್ಳುವ ಬಗೆ. “ಪ್ರಕ್ರುತಿಯೇ ಮಹಾ ವೈದ್ಯ”!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. vani raj says:

    ಸುಪರ್ ಸತ್ಯ

ಅನಿಸಿಕೆ ಬರೆಯಿರಿ: