ಆಡಂಬರದಿಂದ ಆನಂದದೆಡೆಗೆ…!

– ಸಂಜೀವ್ ಹೆಚ್. ಎಸ್.

ಮದುವೆ, marriage

“ಮದುವೆ…” ಪ್ರತಿಯೊಬ್ಬರ ಜೀವನದಲ್ಲೂ ನಿರ‍್ಣಾಯಕ ಗಟ್ಟ, ಅದೊಂದು ವಿಬಿನ್ನ ಅನುಬವ. ಸಂತೋಶ ಸಂಬ್ರಮ ಸಡಗರ ತುಂಬಿ ತುಳುಕಾಡುವ ಕ್ಶಣಗಳು. ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ನಾಣ್ಣುಡಿಯೇ ಹೇಳುವಂತೆ ಮದುವೆ ಮಾಡಿದವರಿಗೆ ಮಾತ್ರ ಗೊತ್ತು ಅದರ ಕಶ್ಟ-ಸುಕ, ನೋವು-ನಲಿವು ಎಲ್ಲ. ಗಂಡು-ಹೆಣ್ಣು, ಶಾಸ್ತ್ರ, ಸಂಪ್ರದಾಯ, ಹೊಸಬಟ್ಟೆ, ಕೊಟ್ಟು ತೆಗೆದುಕೊಳ್ಳುವ ವ್ಯವಹಾರ, ಶುಬ ಹಾರೈಸಲು ಬಂದ ಬಂದು-ಬಳಗ ನೆಂಟರಿಶ್ಟರ ಜೊತೆ ಮಾತುಕತೆ-ಹರಟೆ, ಇವೆಲ್ಲವೂ ಮದುವೆಯ ಒಂದು ಬಾಗವಾದರೆ ಮತ್ತೊಂದೆಡೆ ಮದುವೆ ಮನೆಯಲ್ಲಿ ಮಾಡಿದ ಅಡುಗೆ ಪ್ರಮುಕ ಆಕರ‍್ಶಣೆ. ಮದುವೆಗೆ ಬಂದ ಎಲ್ಲರಿಗೂ ಸಿಹಿಯೂಟ ಬಡಿಸುವುದೇ ಮದುವೆಯ ಪ್ರಮುಕ ಬಾಗ.

ನಮ್ಮ ಹಿರಿಯರ ಕಾಲದಲ್ಲಿ ಮದುವೆಯೆಂದರೆ ಸಂಬ್ರಮ-ಸಡಗರ. ಮದುವೆಗೆ ಒಂದಿಶ್ಟು ಬಂದು-ಬಳಗ ನೆಂಟರಿಶ್ಟರನ್ನು ಕರೆದು ಅನ್ನದಾಸೋಹ ಮಾಡುವುದು ಪದ್ದತಿ ಮತ್ತು ಪ್ರತೀತಿ. ನಮ್ಮ ಪೂರ‍್ವಜರ ಮದುವೆ ಶುಬ ಸಮಾರಂಬಗಳು ಮನೆಯಲ್ಲಿಯೋ ಅತವಾ ಊರಿನ ದೇವಸ್ತಾನದಲ್ಲಿಯೋ ನಡೆಯುತ್ತಿದ್ದವು. ಹೆಚ್ಚು ದುಂದುವೆಚ್ಚವಿಲ್ಲದೆ, ಬೇಕಾದ ಎಲ್ಲಾ ಬಂದು ಬಳಗ ನೆಂಟರಿಶ್ಟರನ್ನು ಕರೆದು ಅವರು ಎಶ್ಟು ಆರ‍್ತಿಕವಾಗಿ ಸಬಲರೋ ಅಶ್ಟರಲ್ಲಿಯೇ ಶುಬ ಕಾರ‍್ಯಗಳನ್ನು ಮಾಡುತ್ತಿದ್ದರು. ಸ್ತಳೀಯ ಮತ್ತು ದೇಸೀಯ ಆಹಾರವನ್ನೇ ಉಣಬಡಿಸುತ್ತಿದ್ದರು. ಎಲ್ಲಾ ಆಹಾರ ತಯಾರಿಕೆಗೆ ಬೇಕಾಗಿರುವ ಸಾಮಗ್ರಿಗಳು ಸ್ತಳೀಯವಾಗಿಯೇ ಸಿಗುವಂತಿದ್ದವು. ಊರಿನ ಜನರೇ ಸೇರಿ ಮದುವೆ ಮಾಡುತ್ತಿದ್ದುದ್ದರಿಂದ ಹೆಚ್ಚಿನ ಮಟ್ಟದಲ್ಲಿ ಆಹಾರವೂ ವ್ಯರ‍್ತವಾಗುತ್ತಿರಲಿಲ್ಲ, ತ್ಯಾಜ್ಯ ವಿಲೇವಾರಿ ಕೂಡ ಹಳ್ಳಿಯ ಜನರು ಅಶ್ಟೇ ಅಚ್ಚುಕಟ್ಟಾಗಿ ವೈಜ್ನಾನಿಕವಾಗಿ ಮಾಡಿ ಮುಗಿಸುತ್ತಿದ್ದರು. ಯಾವುದೇ ಹಮ್ಮುಬಿಮ್ಮು ಶೋಕಿಗಳಿಲ್ಲದೆ ಶುಬಕಾರ‍್ಯಗಳು ಕೊನೆಗೊಳ್ಳುತ್ತಿದವು. ಆದರೆ ಬದಲಾದ ಕಾಲದಲ್ಲಿ, ಜಾಗತೀಕರಣದ ಬರಾಟೆಯಲ್ಲಿ ಜನರು ಕೂಡ ಬದಲಾದರು. ನಮ್ಮ ಆಚರಣೆ ಸಂಪ್ರದಾಯಗಳು ಬದಲಾದವು, ನಮ್ಮ ಪ್ರಾಮುಕ್ಯತೆಗಳು ಬೇರೆಡೆಗೆ ಸರಿದುಬಿಟ್ಟವು, ನಮ್ಮ ಊಟೋಪಚಾರಗಳು ಬದಲಾದವು, ಕೇವಲ ಬದಲಾಗಲಿಲ್ಲ ಬುಡಮೇಲಾದವು ಎಂದರೆ ತಪ್ಪಾಗಲಾರದು.

“ಆದರದಿಂದ ಉಣಬಡಿಸುತ್ತಿದ್ದ ಊಟೋಪಚಾರ ಇಂದಿಗೆ ಅಂತಸ್ತು ತೋರ‍್ಪಡಿಸುವ ವೇದಿಕೆಯಾಗಿದೆ”. ಇಂದಿಗೆ ಮದುವೆಯೆಂದರೆ ಸಂಬ್ರಮವಲ್ಲ ಸಾವಿರಾರು ಜನರನ್ನು ಸೇರಿಸುವ ಸಮಾರಂಬ ಅಶ್ಟೇ. “ಪ್ರೀತಿಯ ಬದಲು ಪ್ರತಿಶ್ಟೆ” “ಆನಂದದ ಬದಲು ಆಡಂಬರ” ತೋರಿಸಿಕೊಳ್ಳುವ ವಸ್ತುವಾಗಿದೆ. ಅದೆಲ್ಲಾ ಪಕ್ಕಕ್ಕಿಡಿ, ಆಹಾರದ ವಿಚಾರದಲ್ಲಂತೂ ಬಹಳಶ್ಟು ಬದಲಾವಣೆ. ಸಾವಿರಾರು ಜನಕ್ಕೆ ಅಡುಗೆ ಮಾಡಿಸಿ ಬಂದವರ ಹಸಿವು ನೀಗಿಸುವುದು ದರ‍್ಮ, ಅದರಲ್ಲಿ ತಪ್ಪಿಲ್ಲ. ಆದರೆ ಅದರ ಜೊತೆಜೊತೆಗೆ ನಾವು ಪ್ರಕ್ರುತಿಯ ವಿರುದ್ದವಾಗಿ ನಡೆದುಕೊಳ್ಳುವ ರೀತಿ ಮಾತ್ರ ಒಪ್ಪುವಂತದ್ದಲ್ಲ. ಪ್ಲಾಸ್ಟಿಕ್ ಬಾಳೆಎಲೆ, ಪ್ಲಾಸ್ಟಿಕ್ ಲೋಟಗಳು ಅತವಾ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಪಂಕ್ತಿಯಲ್ಲಿ ಹಾಕುವುದಕ್ಕೆ ಪ್ಲಾಸ್ಟಿಕ್ ರೋಲ್‌ಗಳು ಹೀಗೆ ಎಲ್ಲವೂ ಪ್ಲಾಸ್ಟಿಕ್ ಮಯ. ಎಲ್ಲವೂ ಪರಿಸರಕ್ಕೆ ಹಾನಿಕಾರಕ, ಯಾವುದು ಕೊಳೆಯುವುದಿಲ್ಲ ಮತ್ತು ಅದರ ವಿಲೇವಾರಿ ಕೂಡ ಸರಿಯಾದ ವೈಜ್ನಾನಿಕ ರೀತಿಯಲ್ಲಿ ಇರುವುದಿಲ್ಲ. ಲಕ್ಶಾಂತರ ರೂಪಾಯಿ ಕರ‍್ಚು ಮಾಡಿ ಮದುವೆ ಮಾಡುವಾಗ ಒಂದಶ್ಟು ಸಾವಿರ ರೂಗಳನ್ನು ಪರಿಸರಕ್ಕೆ ಹಾನಿಯಾಗದಂತಹ ವಸ್ತುಗಳಿಗೆ ಬಳಸುವುದಕ್ಕೆ ನಮಗೆ ಮನಸೇ ಬರೋದಿಲ್ಲ ಅಲ್ಲವೇ?!

ಮದುವೆಯ ನಂತರ ಬರುವ ತ್ಯಾಜ್ಯಗಳು ಪರಿಸರಕ್ಕೆ ಅಪಾರ ಹಾನಿ ಉಂಟುಮಾಡುವಂತದ್ದು, ಮೀತೇನ್ ಗ್ಯಾಸ್ ಇದೇ ರೀತಿಯ ಆಹಾರ ಪದಾರ‍್ತಗಳ ತ್ಯಾಜ್ಯದಿಂದಲೇ ಹೊರಸೂಸಿ ಪರಿಸರಕ್ಕೆ ಹಾನಿ ಉಂಟುಮಾಡುವುದು. ಲಕ್ಶಾಂತರ ಜನರನ್ನು ಸೇರಿಸಿ ಮಾಡುವ ಮದುವೆಯಿಂದ ಹೆಚ್ಚು ಹೆಚ್ಚು ಪರಿಸರಕ್ಕೆ ತ್ಯಾಜ್ಯ ಉತ್ಪತ್ತಿಯಾದಂತೆ. ತ್ಯಾಜ್ಯ ಒಂದು ಕಡೆಯಾದರೆ ಮಾಡಿದ ಅಡುಗೆ ಅದಿಕ ಪ್ರಮಾಣದಲ್ಲಿ‌ ಉಳಿದು ಬಿಡುವುದು, ಅದರ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗದೆ ಇದ್ದರೆ ಅದು ಕೂಡ ತ್ಯಾಜ್ಯವೇ ಅಲ್ಲವೇ?

ಆಹಾರ ಸಚಿವಾಲಯದ ಪ್ರಕಾರ ಮದುವೆ ಸಮಾರಂಬಗಳು ನಡೆಯುವ ಕಾಲಾವದಿಯಲ್ಲಿ ಬಾರತದಲ್ಲಿ ಪ್ರತಿದಿನ ಸರಿಸುಮಾರು ಒಂದು ಲಕ್ಶ ಮದುವೆಗಳು ನಡೆಯುತ್ತದೆ, ವಾರ‍್ಶಿಕವಾಗಿ ಏನಿಲ್ಲವೆಂದರೂ ಒಂದು ಕೋಟಿ ಮದುವೆಗಳು ಬಾರತದಲ್ಲಿ ನಡೆಯುತ್ತವಂತೆ. ಇಶ್ಟು ಮದುವೆಗಳಿಂದ ಬರುವ ತ್ಯಾಜ್ಯದ ಬೆಲೆ ಎಶ್ಟು ಗೊತ್ತೆ? ಸರಿಸುಮಾರು ಹದಿನಾಲ್ಕು ಬಿಲಿಯನ್ ಡಾಲರ‍್ ನಶ್ಟು. ಇಶ್ಟು ದೊಡ್ಡ ಮಟ್ಟದ ಮೊತ್ತ, ಆಹಾರ ರೂಪದಲ್ಲಿ ವ್ಯರ‍್ತವಾಗಿ ತ್ಯಾಜ್ಯ ರೂಪದಲ್ಲಿ ಪರಿಸರಕ್ಕೆ ಸೇರುತ್ತಿರುವುದು ವಿಶಾದದ ಸಂಗತಿ. ಪೀಡಿಂಗ್ ಇಂಡಿಯಾ ಎಂಬ NGO ನಡೆಸಿದ ಸರ‍್ವೇ ಪ್ರಕಾರ ಮದುವೆಗಳಲ್ಲಿ ನೀಡಲಾಗುವ ಆಹಾರದ ಶೇಕಡಾ 10 ರಿಂದ 20 ರಶ್ಟು ವ್ಯರ‍್ತವಾಗುತ್ತದೆ. ಅವಶ್ಯಕತೆಗಿಂತ ಹೆಚ್ಚು ಹೆಚ್ಚು ಆಹಾರ ಪದಾರ‍್ತಗಳನ್ನು ಮದುವೆ ಮತ್ತು ಇತರೆ ಸಮಾರಂಬಗಳಲ್ಲಿ ಬಡಿಸಿ ಅದನ್ನು ತಿನ್ನುವುದಕ್ಕೆ ಆಗದೆ ಕಸದ ಬುಟ್ಟಿಗೆ ಸೇರಿಸುವುದೇ ಅಬ್ಯಾಸವಾಗಿಬಿಟ್ಟಿದೆ. ಎಲೆಯ ಮೇಲೆ ಜಾಗ ಇಲ್ಲದ ಹಾಗೆ ಹಲವು ರೀತಿಯ ಬಕ್ಶ್ಯ ಬೋಜನಗಳನ್ನು ಉಣಬಡಿಸಿ ಅತಿತಿಗಳು ಅವುಗಳನ್ನು ಎಲೆಯ ಮೇಲೆಯೇ ಬಿಟ್ಟರೆ ಅದು ಅದ್ದೂರಿತನದ ಮದುವೆಯ ಮಾಪನ. ಇದೇ ವ್ಯರ‍್ತವಾದ ಆಹಾರ ಬಡವರ ಹೊಟ್ಟೆ ಸೇರಿದರೆ ಪುಣ್ಯ ಬರುತ್ತದೆ. ವ್ಯರ‍್ತವಾದ ಆಹಾರ ಲಕ್ಶಾಂತರ ಬಡಜನರ ವರ‍್ಶದ ಊಟಕ್ಕೆ ಸಮ.

ಅದ್ದೂರಿಯಾಗಿ ದುಂದುವೆಚ್ಚ ಮಾಡಿ ಮದುವೆ ಮಂಟಪಗಳಲ್ಲಿ ನಡೆಯುತ್ತಿದ್ದ ಮದುವೆಗಳು ಸರಳವಾಗಿ ಮನೆಯ ಹತ್ತಿರವೇ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಹಿಂದಿನ ಕಾಲದಲ್ಲಿ ನಮ್ಮ ಪೂರ‍್ವಜರು ಎಲ್ಲಾ ಸಮಾರಂಬಗಳನ್ನು ಮನೆಯ ಹತ್ತಿರ ಇಲ್ಲವೇ ಗುಡಿಯಲ್ಲಿಯೋ ಮಾಡುತ್ತಿದ್ದರು. ಆನಂದದಿಂದ ನಡೆಯುತ್ತಿದ್ದ ಮದುವೆಗಳು ಆಡಂಬರದಡೆಗೆ ತಿರುಗಿದ್ದವು ಆದರೆ ಯಾರೂ ನಿರೀಕ್ಶಿಸಿದಂತೆ ಬಂದೊದಗಿದ ಕೊರೊನಾ ಪರಿಣಾಮವಾಗಿ ಮತ್ತೆ ನಾವು ಅದೇ ಪದ್ದತಿಗೆ ಮರಳಿದ್ದೇವೆ. ಮದುವೆ ಮತ್ತು ಇತರೆ ಸಮಾರಂಬಗಳು ಬಹಳ ಸರಳವಾಗಿ ಮನೆಯಲ್ಲೋ ದೇವಸ್ತಾನದಲ್ಲೋ ಜರುಗುತ್ತಿವೆ, ಇಂತಿಶ್ಟೇ ಅತಿತಿಗಳು ಎಂಬ ನಿಯಮವಿದೆ. ಇವು ಹೀಗೆಯೇ ಮುಂದುವರೆದರೆ ಎಶ್ಟು ಚಂದ ಅಲ್ಲವೇ. ಕೊನೆಪಕ್ಶ ಹೆಚ್ಚಿನ ಪ್ರಮಾಣದಲ್ಲಿ ಆಹಾರ ವ್ಯರ‍್ತವಾಗುವುದಿಲ್ಲ. ಒಂದು ವೇಳೆ ಆಹಾರ ಪದಾರ‍್ತ ಉಳಿದರೂ ಕೂಡ ಕಡಿಮೆ ಪ್ರಮಾಣದಲ್ಲಿ ಉಳಿಯುವುದು ಮತ್ತು ಆ ತ್ಯಾಜ್ಯ ವಿಲೇವಾರಿ ಸುಲಬವಾಗುತ್ತದೆ. ಸುಕಾಸುಮ್ಮನೆ ಅದಿಕವಾಗಿ ದುಂದುವೆಚ್ಚ ಮಾಡಿ ಕಸದ ಬುಟ್ಟಿಗೆ ಹಾಕುವ ಬದಲು ಬೇಕಾದಶ್ಟೇ ಪ್ರಮಾಣದಲ್ಲಿ ಮಾಡಿ ಸಂತ್ರುಪ್ತಿ ಪಡುವುದು ಮೇಲು.

ಆರ‍್ತಿಕ ಪರಿಸ್ತಿತಿ ಸರಿ ಇಲ್ಲದಿದ್ದರೂ ಸಾಲಸೋಲ ಮಾಡಿ ಪ್ರತಿಶ್ಟೆ ಮತ್ತು ಆಡಂಬರಕ್ಕೆ ಮದುವೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಎಕರೆಗಟ್ಟಲೆ ಜಮೀನು ಮಾರಿ ಆಡಂಬರದ ಮದುವೆ ನಡೆದ ಎಶ್ಟೋ ಉದಾಹರಣೆಗಳಿವೆ. ನವದಂಪತಿಗಳಿಗೆ ನಿಜವಾದ ಹೋರಾಟ ಇರುವುದು ಮದುವೆಯ ನಂತರ. ಹಾಗಾಗಿ ಸರಳವಾಗಿ ಮದುವೆ ಮಾಡಿ ಅವರ ಮುಂದಿನ ಹಾದಿಯನ್ನು ಸುಲಬಗೊಳಿಸಬೇಕಾಗಿದೆ. ಲಕ್ಶಾಂತರ ರೂಪಾಯಿ ಕರ‍್ಚು ಮಾಡಿದ್ದೆಲ್ಲವೂ ಒಂದು ಅತವಾ ಎರಡು ದಿನದ ಮಟ್ಟಿಗೆ ಅಶ್ಟೇ ಸೀಮಿತವಾಗಿಬಿಡುತ್ತದೆ. ಒಂದೆರಡು ದಿನದ ತೋರ‍್ಪಡಿಕೆಗಾಗಿ ಜೀವನಪೂರ‍್ತಿ ಮುಡಿಪಾಗಿಟ್ಟು ದುಡಿಯಬೇಕಾಗುತ್ತದೆ. ಕನಿಶ್ಟ ಅತಿತಿಗಳಿಂದ ನಡೆಯುತ್ತಿರುವ ಸರಳ ವಿವಾಹ ಮುಂದೆಯೂ ಹೀಗೇ ನಡೆಯಲಿ ಎಂಬುದೇ ನಮ್ಮ ಆಶಯ. ಸರಳ ಮದುವೆಯಲ್ಲಿಯೇ ಅದ್ದೂರಿತನ ತೋರಿಸುವ ಔದಾರ‍್ಯತೆ ನಮ್ಮದಾಗಲಿ.

“ಆಡಂಬರಕ್ಕಿಂತ ಆನಂದ ಹೆಚ್ಚಾಗಲಿ, ಪ್ರತಿಶ್ಟೆ ಗಿಂತ ಪ್ರೀತಿ ತುಂಬಿ ತುಳುಕಲಿ”

(ಚಿತ್ರ ಸೆಲೆ: wiki

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: