ನಮ್ಮ ಗೆಲುವಿಗಾಗಿ ನಮ್ಮೊಳಗಿನ ಸೈನ್ಯ

ಸಂಜೀವ್ ಹೆಚ್. ಎಸ್.

ರೋಗ ನಿರೋದಕ ಶಕ್ತಿ, immune system

ಬಲಿಶ್ಟವಾದ ಕಂಬಗಳ ಮೇಲೆ ನಿಂತಿರುವ ದೊಡ್ಡ ಅರಮನೆ. ಇಂತಹ ಅರಮನೆಯಲ್ಲಿ ರಾಜ ವಾಸಿಸುವವನು.‌ ರಾಜ ತನ್ನ ರಾಜ್ಯಾಡಳಿತವನ್ನು ಬಹಳ ಅಚ್ಚುಕಟ್ಟಾಗಿ ನಿರ‍್ವಹಿಸುತ್ತಿರುತ್ತಾನೆ. ರಾಜ-ರಾಜ್ಯ ಎಂದರೆ ಹೊರಗಿನವರ ಆಕ್ರಮಣ ಸರ‍್ವೇಸಾಮಾನ್ಯ ಅದಕ್ಕಾಗಿಯೇ ರಾಜ ತನ್ನದೇ ಒಂದು ದೊಡ್ಡ ಸೈನ್ಯವನ್ನು ಕಟ್ಟಿರುತ್ತಾನೆ. ಸೈನಿಕರು ಅಂದರೆ ಏತಕ್ಕಾಗಿ? ಆಕ್ರಮಣ ಮಾಡಿದವರ ವಿರುದ್ದ ಹೋರಾಡುವುದಕ್ಕಾಗಿ. ಹೊರಗಿನವರಿಂದ ಆಕ್ರಮಣವಾದಾಗ ಶತ್ರುಗಳ ವಿರುದ್ದ ಹೋರಾಡಿ ತನ್ನ ರಾಜ್ಯವನ್ನು ಉಳಿಸುವುದು ಮತ್ತು ವಿಜಯ ಸಾದಿಸುವುದು ಸೈನಿಕನ ಕರ‍್ತವ್ಯ. ಒಂದು ವೇಳೆ ಸೈನಿಕ ದುರ‍್ಬಲನಾಗಿದ್ದರೆ ಆಕ್ರಮಣವೆಸಗಿದ್ದವರ ಎದುರಲ್ಲಿ ಮಂಡಿಯೂರಿ ಸೋಲು ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸೈನಿಕರ ಶಕ್ತಿ ಮತ್ತು ಬಲವನ್ನು ಹೆಚ್ಚಿಸುವುದು ರಾಜನ ಆದ್ಯ ಕರ‍್ತವ್ಯ.‌ ತನ್ನ ಮತ್ತು ರಾಜ್ಯದ ರಕ್ಶಣೆಗಾಗಿ ರಾಜ ಸೈನಿಕರನ್ನು ಬಳಸಿಕೊಳ್ಳುತ್ತಾನೆ. ತನ್ನ ರಾಜ್ಯದ ಸೈನಿಕರ ಸಂಕ್ಯಾಬಲ ಮತ್ತು ಶಕ್ತಿ-ಸಾಮರ‍್ತ್ಯವನ್ನು ಹೆಚ್ಚಿಸುತ್ತಿದ್ದರೆ ಸೋಲುವ ಮಾತೇ ಇಲ್ಲ.

ಆತ್ಮೀಯ ಓದುಗರೇ ಇಲ್ಲಿ ರಾಜ ಎಂದರೆ, ನಮಗೆ ನಾವೇ ರಾಜರು, ನಮ್ಮ ದೇಹವೇ ಅರಮನೆ-ರಾಜ್ಯ ಎಲ್ಲಾ. ನಮ್ಮ ದೇಹದ ಮೇಲೆ ಆಕ್ರಮಣ ಮಾಡಿ ನಮ್ಮ ದೇಹವನ್ನು ಗಾಸಿಗೊಳಿಸಿದರೆ ಅವರ ವಿರುದ್ದ ಹೋರಾಡುವ ಸೈನಿಕರು ಅಂದರೆ‌ ನಮ್ಮ ದೇಹದ “ರೋಗನಿರೋದಕ ಜೀವಕಣಗಳು”. ಈಗ ಹೇಳಿ ರೋಗನಿರೋದಕ ಕಣಗಳ ಶಕ್ತಿ ಮತ್ತು ಸಾಮರ‍್ತ್ಯವನ್ನು ಹೆಚ್ಚಿಸುವ ಹೊಣೆ ಮತ್ತು ಜವಾಬ್ದಾರಿ ಯಾರದು? ನಮ್ಮದೇ ಅಲ್ಲವೇ?.

ಜಗತ್ತನ್ನೇ ಆವರಿಸಿರುವ ಕೊರೊನಾ ಎಲ್ಲರ ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.‌ ಈ ರೋಗಕ್ಕೆ ಮದ್ದು ಇನ್ನೂ ಸಿಗದಿರುವ ಕಾರಣ ವಿಶ್ವ ಆರೋಗ್ಯ ಸಂಸ್ತೆ ಕೂಡ, ಸ್ವಚ್ಚತೆ ಕಾಪಾಡಿಕೊಂಡು ಹಲವು ಕ್ರಮಗಳನ್ನು ಅನುಸರಿಸಿ ಕೊರೊನಾ ಹರಡದಂತೆ ತಡೆಗಟ್ಟಿ ಎಂದು ಹೇಳುತ್ತಿದೆ. ಇದರ ಜೊತೆಜೊತೆಗೆ ಈ ರೋಗದ ಜೊತೆ ಹೊಡೆದಾಡಲು ರೋಗನಿರೋದಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಹಲವು ತಗ್ನರು ಮಾರ‍್ಗದರ‍್ಶನ ನೀಡುತ್ತಿದ್ದಾರೆ. ಹಾಗಾದರೆ ಈ ರೋಗ ನಿರೋದಕ ಶಕ್ತಿ ಅಂದರೆ ಏನು?

ಸಾಮಾನ್ಯ ಬಾಶೆಯಲ್ಲಿ ಹೇಳುವುದಾದರೆ ಮನುಶ್ಯನ ದೇಹ ಸರಿಸುಮಾರು 50 ಟ್ರಿಲಿಯನ್ ಜೀವಕೋಶಗಳಿಂದ ಮಾಡಲ್ಪಟ್ಟಿದೆ. 50 ಟ್ರಿಲಿಯನ್ ಜೀವಕೋಶಗಳ ಕಣಗಳನ್ನು ಸೈನಿಕರು ಎಂದು ಬಾವಿಸೋಣ. ಎಲ್ಲಾ ಜೀವಕೋಶಗಳಿಗೆ ಅದರದೇ ಆದ ಸ್ವಬಾವ ಮತ್ತು ಗುಣಲಕ್ಶಣಗಳು ಇರುತ್ತವೆ. ನಮ್ಮಲ್ಲಿರುವ ಹಲವು ಜೀವಕೋಶಗಳು ಹಲವು ರೀತಿಯ ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಈ ಸೈನಿಕರ ಶಕ್ತಿ ಮತ್ತು ಸಾಮರ‍್ತ್ಯವೇ ರೋಗನಿರೋದಕ ಶಕ್ತಿ. ಹೊರಗಿನಿಂದ ಆಕ್ರಮಣ ಮಾಡುವ ವೈರಿಗಳೇ ವೈರಸ್ ಬ್ಯಾಕ್ಟೀರಿಯಾ ಇತ್ಯಾದಿಗಳು. ಇವುಗಳು ನಮ್ಮ ದೇಹಕ್ಕೆ ರೋಗ ರುಜಿನಗಳನ್ನು ತಂದೊಡ್ಡುವವು. ಹೊರಗಿನಿಂದ ಆಕ್ರಮಣ ಮಾಡುವ ಇಂತಹ ಜೀವಿಗಳು ಹೆಚ್ಚಿವೆ. ಅವುಗಳನ್ನೆಲ್ಲಾ ನಾಶ ಮಾಡುವ ಸಾಹಸವಂತೂ ಅಸಾದ್ಯ. ಅದರ ಬದಲು ನಮ್ಮನ್ನು ನಾವು ರಕ್ಶಣೆ ಮಾಡಿಕೊಂಡರೆ ನಾವು ವಿಜಯ ಸಾದಿಸಬಹುದು. ಅಂದರೆ ಅವುಗಳ ವಿರುದ್ದ ಹೋರಾಡುವ ಶಕ್ತಿ ಸಾಮರ‍್ತ್ಯವನ್ನು ಬಲಿಶ್ಟಗೊಳಿಸಬೇಕು.

ಒಂದು ವೇಳೆ ಇಂತಹ ಒಂದು ರಕ್ಶಾ ಕವಚ ನಮಗೆ ಕೈ ಕೊಟ್ಟರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುವುದರಲ್ಲಿ ಎರಡು ಮಾತಿಲ್ಲ. ಹುಟ್ಟಿದಾಗಿನಿಂದ ಸಾಯುವ ಕೊನೆಯ ಕ್ಶಣದವರೆಗೂ ಮನುಶ್ಯನ ರೋಗ ನಿರೋದಕ ಶಕ್ತಿ ಕೆಲಸ ಮಾಡುತ್ತಲೇ ಇರುತ್ತದೆ. ಕಾಣದ ವೈರಿಯೊಂದಿಗೆ ಕಾದಾಟ ಮಾಡಲು ನಮ್ಮ ಕಣ್ಣಿಗೆ ಕಾಣದ ರೋಗನಿರೋದಕ ಶಕ್ತಿಯೇ ಪ್ರಮುಕವಾಗುತ್ತದೆ. ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಅವರ ದೇಹದ ರೋಗ ನಿರೋದಕ ಶಕ್ತಿ, ಯುವಕರಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಆದ್ದರಿಂದ ಚಿಕ್ಕ ಮಕ್ಕಳ ಮತ್ತು ವಯಸ್ಸಾದವರ ರಕ್ಶಣೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಜೀವಕೋಶಗಳ ಶಕ್ತಿ ಮತ್ತು ಸಾಮರ‍್ತ್ಯವನ್ನು ಹೆಚ್ಚಿಸುವ ಕೆಲಸವನ್ನು ಹಲವು ವಿದಗಳಲ್ಲಿ ಮಾಡಬಹುದು. ಅವುಗಳಲ್ಲಿ ಮುಕ್ಯವಾದುದೆಂದರೆ ಆಹಾರ. ಆಹಾರವೇ ಎಲ್ಲದಕ್ಕೂ ಮೂಲ. ಆರೋಗ್ಯಕರವಾಗಿರಬೇಕಾದರೆ ಕೆಲವೊಂದರ ಸೇವನೆ ಅತ್ಯಗತ್ಯ.‌ ಸ್ತಳೀಯವಾಗಿ ಬೆಳೆಯುವ ಮತ್ತು ಲಬ್ಯವಿರುವ ಹಣ್ಣು-ತರಕಾರಿ, ಹಲವು ರೀತಿಯ ಸೊಪ್ಪು, ಹಸಿರು ಎಲೆಗಳ ತರಕಾರಿಗಳು, ಒಣ ಹಣ್ಣುಗಳು (Dry Fruits), ಮಸಾಲಾ ಪದಾರ‍್ತಗಳು, ದ್ವಿದಳಗಳು, ಕಾಳುಗಳು, ಔಶದಿ ಗುಣಗಳು ಇರುವಂತಹ ಗಿಡಮೂಲಿಕೆಗಳು ಇತ್ಯಾದಿ ಇತ್ಯಾದಿ. ಇವುಗಳಲ್ಲಿ ಇಂತದೇ ಪದಾರ‍್ತ ಎಂದು ಹೇಳುವ ಗೋಜಿಗೆ ನಾನು ಹೋಗುವುದಿಲ್ಲ ಏಕೆಂದರೆ ಮೇಲೆ ಹೇಳಿದ ಪ್ರತಿಯೊಂದು ಆಹಾರ ಪದಾರ‍್ತದಲ್ಲಿಯೂ ಒಂದಲ್ಲ ಒಂದು ಪೌಶ್ಟಿಕಾಂಶ ಮತ್ತು ಔಶದೀಯ ಗುಣ ಇದ್ದೇ ಇದೆ.

ಅಡುಗೆಮನೆಯ ವೈವಿದ್ಯತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಬಿಟ್ಟುಹೋದ ಹಳೆಯ ಆಹಾರ ಪದ್ದತಿಗಳು ಮರೆತುಹೋದ ಹಳೆಯ ಆಹಾರಕ್ರಮಗಳು ಮತ್ತೆ ಮರುಕಳಿಸಬೇಕಾಗಿರುವುದು ಅವಶ್ಯಕ. ಕೇವಲ ಅದಿಕ ಪೋಶಕಾಂಶಗಳಲ್ಲನ್ನಲ್ಲದೇ ಸೂಕ್ಶ್ಮ ಪೋಶಕಾಂಶಗಳನ್ನು ಒದಗಿಸುವ ವೈವಿದ್ಯಮಯ ಆಹಾರ ಪದ್ದತಿ ನಮ್ಮ ಪ್ರತಿನಿತ್ಯದ ಆಹಾರಕ್ರಮವಾಗಬೇಕಿದೆ. ಕೇವಲ ಆಹಾರವಲ್ಲದೇ ಜೀವನ ಶೈಲಿಯೂ ಕೂಡ ಅತ್ಯಂತ ಪ್ರಮುಕ ಪಾತ್ರ ವಹಿಸುತ್ತದೆ. ಅದರ ಬಗ್ಗೆಯೂ ಗಮನ ಹರಿಸುವ ಅವಶ್ಯಕತೆಯಿದೆ.

ಈಗಾಗಲೇ ಹಲವು ಜಾಹೀರಾತುಗಳು ‘ರೋಗನಿರೋದಕ ಶಕ್ತಿ’ ಎನ್ನುವ ಪದವನ್ನು ಇಟ್ಟುಕೊಂಡು ಹಲವು ರೀತಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ವಿಬಿನ್ನ ಮತ್ತು ವಿಶಿಶ್ಟ ರೀತಿಯಲ್ಲಿ ಪರಿಚಯಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರತಿಯೊಂದನ್ನು ಕೂಲಂಕುಶವಾಗಿ ನೋಡಿ ಅಳೆದು-ತೂಗಿ ಸರಿಯೆನಿಸಿದರೆ ಹಿತಮಿತವಾಗಿ ಸೇವಿಸಬೇಕಿದೆ.  ಇಶ್ಟೇ ಅಲ್ಲದೆ ಯಾವುದೇ ರೋಗಗಳಿಗೆ ನೀಡುವ ಔಶದಿ ಮದ್ದು ಕೂಡ ನಮ್ಮ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುವ ಒಂದು ಕ್ರಮವೇ ಆಗಿರುತ್ತದೆ. ಅದರಿಂದಾಗಿ ರೋಗನಿರೋದಕ ಶಕ್ತಿಯನ್ನು ಮತ್ತಶ್ಟು ಬಲಿಶ್ಟಗೊಳಿಸುವ ಮತ್ತು ಸುಸ್ತಿರ ಸ್ತಿತಿಯಲ್ಲಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು.‌

ಹೊರಗಿನ ಹೆಮ್ಮಾರಿ ಅರಮನೆಯ ಅಂಗಳಕ್ಕೆ ಲಗ್ಗೆ ಇಡುವ ಮುನ್ನ ರಣರಂಗದಲ್ಲಿ ಮಣಿಸಿದರೆ ರಾಜನ ಸ್ವಾಸ್ತ್ಯ ಮತ್ತು ಸಂಪತ್ತು ಎರಡೂ ಸುರಕ್ಶಿತ ಮತ್ತು ಕ್ಶೇಮ 🙂

( ಚಿತ್ರಸೆಲೆ : timesnow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: