ಮಾನವೀಯತೆ ಮತ್ತು ಸಹಕಾರ: ಏಳಿಗೆಗೆ ದಾರಿ

–  .

help, hands, ನೆರವು

ಬದುಕು ಎಂದರೆ ಅದು ಕಶ್ಟ-ಸುಕ, ‌ನೋವು-ನಲಿವುಗಳ ಸಮ್ಮಿಶ್ರಣ. ಕೆಲವರಿಗೆ ತುಸು ಹೆಚ್ಚಾಗಿಯೇ ಕಶ್ಟಗಳಿದ್ದು ಬದುಕಿನ ಬವಣೆಯಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಆ ಬವಣೆಯಿಂದ ಹೊರ ಬರಲಾರದೆ ಸೋತು ಸುಣ್ಣ ಆದವರನ್ನು ನಾವು ನೋಡಿದ್ದೇವೆ.

ಮನುಶ್ಯರಾಗಿ ಹುಟ್ಟಲು ಮತ್ತು ಇಂತಹವರ ಹೊಟ್ಟೆಯಲ್ಲೇ ಹುಟ್ಟಬೇಕು ಎಂದು ನಾವು ಆಯ್ಕೆ ಮಾಡಿಕೊಂಡು ಹುಟ್ಟಲು ಸಾದ್ಯವಿಲ್ಲ. ಹಾಗೇನಾದರು ಸಾದ್ಯವಿದ್ದಿದ್ದರೆ ಎಲ್ಲರೂ ಬಡತನವಿರದ ಅನೂಕೂಲಸ್ತರ ಮನೆಯಲ್ಲಿಯೇ ಹುಟ್ಟಬೇಕೆಂದು ಆಯ್ಕೆ ಮಾಡಿಕೊಳ್ಳುತಿದ್ದರು! ಹುಟ್ಟು ಆಕಸ್ಮಿಕ. ಹುಟ್ಟಿನ ಆಯ್ಕೆ ನಮ್ಮ ಕೈಯಲ್ಲಿಲ್ಲ. ಬಡತನದಲ್ಲಿ ಹುಟ್ಟಿದ ಮಕ್ಕಳು ಸಿರಿವಂತರ ಮಕ್ಕಳ ಅದ್ದೂರಿ ಜೀವನ ಕಂಡು ‘ನಾವು ಇವರಂತೆ ಹುಟ್ಟಬಾರದಿತ್ತೆ? ದಿನವೂ ಏನು ಬೇಕಾದ್ದು ಮಜವಾಗಿ ತಿನ್ನಬಹುದಿತ್ತು’ ಎಂಬ ಆಸೆ ವ್ಯಕ್ತಪಡಿಸುವುದು ಸಹಜ. ಅದೇ ಸಿರಿವಂತ ಮಕ್ಕಳಿಗೆ, ಈ ಬಡತನದಲ್ಲಿ ಹುಟ್ಟಿ, ಕೊಳಗೇರಿಯಲ್ಲಿ ಆಟವಾಡುವ ಅರೆ ಬೆತ್ತಲೆ ಮಕ್ಕಳನ್ನು ಕಂಡು ಅಸಹ್ಯ, ತಾತ್ಸಾರ, ಇವರೆಲ್ಲ ಕಳ್ಳ ಕದೀಮರು ಎಂಬ ಬಾವನೆ ಅವರ ಮನದಲ್ಲಿ ಹುಟ್ಟಬಹುದು. ಈ ರೀತಿಯ ಬಾವನೆ ಅವರಲ್ಲಿ ಹುಟ್ಟಲು ಮನೆಯ ಹಿರಿಯರ ನಡವಳಿಕೆಗಳ ಪ್ರಬಾವವೇ ಕಾರಣ. ಇಂತಹ ನಡವಳಿಕೆಗಳು ಮಕ್ಕಳ ಮೇಲೆ ಗಾಡ ಪರಿಣಾಮ ಬೀರಿ ಮನುಶ್ಯ-ಮನುಶ್ಯರ ನಡುವೆ ಬೇದ ಹುಟ್ಟಿ ಬಡತನ-ಸಿರಿತನ ಎಂಬ ದೊಡ್ಡ ಕಂದಕ ಮನುಶ್ಯರಲ್ಲಿ ಉಂಟಾಗುತ್ತಿದೆ.

ಯಾರ ಬಳಿಯಲ್ಲಾದರೂ ಸಂಪತ್ತು ಇದೆ ಎಂದರೆ ಅಂತವರು ಅಶಕ್ತರಿಗೆ, ನಿರ‍್ಗತಿಕರಿಗೆ, ಹಸಿವಿನಿಂದಿರುವವರಿಗೆ ಮಾನವೀಯ ಅಂತಹಕರಣದಿಂದ ತುಸು ಸಹಾಯ ಮಾಡಬೇಕು ಎಂಬುದು ಸಹಜ ನಿರೀಕ್ಶೆ. ಅಂತಹ ನಿರೀಕ್ಶೆ ಅತವಾ ಅನಿಸಿಕೆ ತಪ್ಪೇನಿಲ್ಲ.. ಮನುಶ್ಯ ಮನುಶ್ಯನಿಗೆ ಸಹಾಯ ಮಾಡಬೇಕು ತಾನೆ? ಅದುವೇ ಮಾನವೀಯತೆ.

ಕೆಲವರ ಅಂಬೋಣ ಹೀಗೂ ಇರಬಹುದು – “ಬಡತನದಲ್ಲಿ ಹುಟ್ಟಿ, ಅರೆಹೊಟ್ಟೆ ತಿಂದು, ಚಿಂದಿಯುಟ್ಟು ಜೀವಿಸುವುದು ಅವರ ಹಣೆಬರಹ. ಬಕ್ಶಬೋಜ್ಯ ತಿಂದು, ಒಳ್ಳೊಳ್ಳೆ ಉಡುಪು ದರಿಸಿ, ಮಜವಾಗಿ ಕಾರಿನಲ್ಲಿ ಓಡಾಡಿಕೊಂಡು ಜೀವಿಸುವುದು ನಾವು ಪಡೆದುಕೊಂಡು ಬಂದ ಬಾಗ್ಯ” ಇಂತಾ ಮನಸ್ತಿತಿ, ಮಾತುಗಳು ಅಹಂಬಾವ ತೋರಿದಂತೆ, ಮನುಶ್ಯತ್ವ ಮೀರಿ ರಾಕ್ಶಸತ್ವದೆಡೆಗೆ ನಡೆದಂತೆ.

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಗಳಿಂದ ಕರಕಷ್ಟ ಕೂಡಲಸಂಗಮದೇವಾ.

ಎಂಬ ಬಸವಣ್ಣನವರ ವಚನದಂತೆ ಸಿಕ್ಕ ಆಹಾರದಲ್ಲಿಯೇ ಪ್ರಾಣಿ ಪಕ್ಶಿಗಳು ಹಂಚಿ ತಿನ್ನುವ ಉದಾರತೆ ಮೆರೆವಾಗ, ಮನುಶ್ಯರಲ್ಲಿ ಹಂಚಿ ತಿನ್ನದೆ ಇರುವ ದುರ‍್ಬುದ್ದಿ, ಅತಿಯಾದ ಲಾಲಾಸೆ ನಿಜಕ್ಕೂ ನಾಚಿಕೆಗೇಡು.

ಉಳ್ಳವರ ದ್ರುಶ್ಟಿ ಕೋನದಲ್ಲಿ ಬಡವರು ಎಂದರೆ, ಮಹಾ ಮೈಗಳ್ಳರು, ಸದಾ ಕೈ ಚಾಚಿ ನಿಲ್ಲುವವರು. ಇನ್ನೂ ಮೀರಿ ಬೂಮಿಯ ಮೇಲೆ ಬದುಕಲು ನಾಲಾಯಕ್ಕು ಎಂಬ ಅಂತಿಮ ತೀರ‍್ಪು ಕೊಟ್ಟು ಬಿಡುತ್ತಾರೆ. ಆದರೆ ಅದು ಹಾಗಾಗುವುದಿಲ್ಲ. ಬಡವರು, ಸಿರಿವಂತರು ಎಲ್ಲರನ್ನೂ ಒಳಗೊಂಡು ಅದು ದೇಶ, ಸಮಾಜ ಎನಿಸಿಕೊಂಡಿರುತ್ತದೆ.  ಬಡವರ ಸಹಕಾರವಿಲ್ಲದೆ ಉಳ್ಳವರ ಜೀವನ ಸುಗಮವಾಗಿ ಸಾಗದು. ಹಾಗಾಗಿ ಆ ಬಡ ಸಮುದಾಯವನ್ನು ಕೈ ಹಿಡಿದು ಎತ್ತಿ ನಿಲ್ಲಿಸುವ ಅನಿವಾರ‍್ಯತೆ ಮತ್ತು ಅಗತ್ಯತೆ ಉಳ್ಳವರ ಸಮುದಾಯಕ್ಕೆ ಅನಿವಾರ‍್ಯವಾಗುತ್ತದೆ.

ಇವರ ಕಡುಬಡತನವನ್ನು ನೀಗಿಸಲು ನಮ್ಮ ದುಡಿಮೆಯ ಒಂದು ಪಾಲು ನಿರಂತರವಾಗಿ ಕೊಡುತ್ತಲೆ ಇರುವುದೇ? ಹಾಗೆ ಮಾಡಿದರೆ ಬಡವರ ಜೀವನ ಮಟ್ಟ ಸುದಾರಿಸುತ್ತದೆಯೇ? ಕೊಟ್ಟು ಕೊಟ್ಟು ನಾವು ಅವರನ್ನು ಮೈಗಳ್ಳರನ್ನಾಗಿಸುತ್ತೇವೆ ಎಂಬ ದೋರಣೆಯೂ ಕೂಡ ಉಳ್ಳವರ ಅಹಂಕಾರದ ಉಚ್ಚ್ರಾಯ ಮನೋಸ್ತಿತಿಯೇ ಆಗಿರುತ್ತದೆ.

ನಾವು ಬಡವರಿಗೆ ಕೊಡುವುದು ಎಂದರೇನು? ಅನ್ನ, ಹಣ, ಬಟ್ಟೆ, ನಿರಂತರ ಕೊಡುತ್ತಲೆ ಇರುವುದು ಮಾನವೀಯತೆಯೇ? ಇಲ್ಲ, ಇದು ಆ ಆಕ್ಶಣದ ಅವರ ಅನಿವಾರ‍್ಯತೆಗೆ ಪೂರೈಕೆ. ಆದರೆ ಉಳ್ಳವರು ಇವಿಶ್ಟನ್ನೇ ಪದೇ ಪದೇ ಮಾಡುವುದರಿಂದ ಬಡವನ ಸರ‍್ವತೋಮುಕ ಅಬಿವ್ರುದ್ದಿ ಆಗದು! ಬದಲಿಗೆ ಅವನನ್ನು, ಅವನ ಕುಟುಂಬವನ್ನು, ಅವನ ಸಮುದಾಯವನ್ನು ದಾರಿದ್ರ್ಯದಿಂದ ಮೇಲೆತ್ತುವಂತಹ ಸಹಾಯದ ಸಂಕಲ್ಪವನ್ನು ಉಳ್ಳ ಸಮುದಾಯ ಮಾಡಬೇಕು. ಅದು ಹೇಗೆ? ಎಂದರೆ ಅವರ ಶಿಕ್ಶಣಕ್ಕೆ, ಅವರಿಗೆ ಉದ್ಯೋಗ ಕಾತ್ರಿಗೆ, ಅವರ ನಿರಂತರ ಆದಾಯಕ್ಕೆ, ಅವರ ಆರೋಗ್ಯಕ್ಕೆ, ಅವರ ಸುದಾರಿತ ಸುಬದ್ರ ಜೀವನದ ಬದಲಾವಣೆಗೆ ಸಹಾಯ, ಸಹಕಾರ ನೀಡಿದರೆ ಉಳ್ಳವರ ಜೊತೆಗೆ ಬಡ ಸಮುದಾಯವೂ ಸುದಾರಿಸಿ ಒಂದು ಬವ್ಯ ಬಾರತ ನಿರ‍್ಮಾಣವಾಗುತ್ತದೆ.

ಈ ಬಡ ಸಮುದಾಯ ಸಾಮಾಜಿಕವಾಗಿ, ಶೈಕ್ಶಣಿಕವಾಗಿ, ಆರ‍್ತಿಕವಾಗಿ ಪ್ರಗತಿ ಸಾದಿಸಿ ಜೀವನ ಸುದಾರಿಸಿಕೊಂಡರೆ, ಮಾತು ಕೇಳದವರಾಗುತ್ತಾರೆ. ಮುಂದೆ ಇವರು ಆರ‍್ತಿಕವಾಗಿ ಮುಂದೆ ಹೋಗಿ ನಮ್ಮ ಮೇಲೆಯೇ ಸವಾರಿ ಮಾಡುತ್ತಾರೆ ಎಂಬ ಅಂತೆ-ಕಂತೆಗಳು ದೇಶವನ್ನು ಮತ್ತಶ್ಟು ಬಡವಾಗಿಸುತ್ತದೆ ಮತ್ತು ಬಡವರು ಬಡವರಾಗಿಯೇ ಇದ್ದುಬಿಡಲಿ ಎಂಬ ಮನಸ್ತಿತಿ ತೋರಿಸುತ್ತದೆ.

ಈ ದೇಶದ ಜನರು ಮಾನವೀಯತೆಯ ಕೊಂಡಿ ಬೆಸೆದು, ಎಲ್ಲರೂ ಸಮನಾಗಿ, ಶಿಕ್ಶಿತರಾಗಿ ಪರಸ್ಪರ ಸಹಕಾರ ತತ್ವದ ಮೇಲೆ ಬದುಕು ಹೆಣೆದುಕೊಂಡಿದ್ದೇ ಆದರೆ ನಮ್ಮ ದೇಶವು ಪ್ರಗತಿ ಸಾದಿಸಿ ಶ್ರೀಮಂತ ರಾಶ್ಟ್ರಗಳ ಸಾಲಿಗೆ ಸೇರುತ್ತದೆ ಎಂಬುದು ಅತಿಶಯೋಕ್ತಿಯಲ್ಲ.

(ಚಿತ್ರ ಸೆಲೆ: needpix.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಬದುಕಿಗೆ ಸ್ಫೂರ್ತಿ ನೀಡುವಂತಹ ಬರವಣಿಗೆ… ಶುಭಾಶಯಗಳು

ಅನಿಸಿಕೆ ಬರೆಯಿರಿ:

Enable Notifications