ಸ್ಕಾಟ್ಲೆಂಡಿನ ಸುಮದುರ ಸಂಗೀತದ ಗುಹೆ

– ಕೆ.ವಿ. ಶಶಿದರ.

Fingal's Cave, ಪಿಂಗಲ್ ಕೇವ್

ಸ್ಕಾಟ್ಲೆಂಡಿನ ಇನ್ನರ್ ಹೆಬ್ರೈಡ್ಸ್‍ನ ಜನವಸತಿಯಿಲ್ಲದ ದ್ವೀಪ ಸ್ಟಾಪಾದಲ್ಲಿನ ಸಮುದ್ರ ಗುಹೆಗಳಲ್ಲಿ ಪಿಂಗಲ್ ಕೇವ್ಸ್ ಪ್ರಮುಕವಾದದ್ದು. ಇದರ ಬೌಗೋಳಿಕ ರಚನೆಯೇ ಅದ್ಬುತ. ಇಲ್ಲಿರುವ ಆರು ಮುಕದ ಕಂಬಗಳು(Hexagon) ಬಸಾಲ್ಟಿಕ್ ಕಂಬಗಳು, ಬಹಳ ವರ‍್ಶಗಳ ಹಿಂದೆ ಸಂಬವಿಸಿದ ಸ್ಪೋಟದ ಪರಿಣಾಮ ಹೊರಬಂದ ಲಾವಾ ಹರವಿನಿಂದ ಹುಟ್ಟಿದ ರಚನೆಗಳು. ಕ್ವೀನ್ ವಿಕ್ಟೋರಿಯಾ, ಪ್ರೆಂಚ್ ಕಾದಂಬರಿಕಾರ ಜೂಲ್ಸ್ ವರ‍್ನ್ , ಹೆಸರಾಂತ ರಾಕ್ ಬ್ಯಾಂಡ್ ಪಿಂಕ್ ಪ್ಲಾಯ್ಡ್ ಅವರಿಗೆ ಈ ಗುಹೆಗಳು ಸ್ಪೂರ‍್ತಿ ನೀಡಿದ್ದವು ಎಂದೂ ಕೂಡ ಹೇಳಲಾಗುತ್ತದೆ. ಪಿಂಗಲ್ ಗುಹೆಗಳು ಒಂದು ವಿಶಿಶ್ಟವಾದ, ಅದ್ಬುತವಾದ ಬಂಡೆಯ ರಚನೆಯಾಗಿದೆ.

ಪಿಂಗಲ್ ಕೇವ್ಸ್ ಸರಿ ಸುಮಾರು ಒಂದು ಕೋಟಿ ವರುಶಗಳಶ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಅಟ್ಲಾಂಟಿಕ್ ಮಹಾ ಸಾಗರದಿಂದ ಸುತ್ತುವರೆದ ಈ ಗುಹೆಗಳ ಆಕಾರವನ್ನು ಗಮನಿಸಿದರೆ ಇದು ಮಾನವ ನಿರ‍್ಮಿತ ಎಂಬಂತೆ ಕಾಣಿಸುತ್ತವೆ. ಒಟ್ಟು 270 ಅಡಿ ಎತ್ತರವಿರುವ ಈ ಕಂಬಗಳು, ನೀರಿನ ಮೇಲ್ಮೈನಿಂದ ಕೇವಲ 72 ಅಡಿ ಮಾತ್ರ ಕಾಣಸಿಗುತ್ತವೆ. ಈ ಗುಹೆಯ ನೋಟ ಪ್ರವಾಸಿಗರನ್ನು ಆಕರ‍್ಶಿಸುವ ಅಂಶವಾಗಿದೆ. ಇಲ್ಲಿಗೆ ತಲುಪಲು ಪ್ರವಾಸಿಗರು ಬೋಟುಗಳನ್ನು ಬಳಸಬಹುದು.

ಕಪ್ಪು ಶಿಲೆಯಿಂದ ರೂಪುಗೊಂಡಿರುವ ಈ ವಿಶಿಶ್ಟ ಕಂಬಗಳು ಅರವತ್ತು ದಶಲಕ್ಶ ವರ‍್ಶಗಳ ಹಿಂದೆ ಬ್ರುಹತ್ ಲಾವಾ ಹರಿವಿನಿಂದಾಗಿ ಈ ಆಕಾರವನ್ನು ಪಡೆದುಕೊಂಡಿರಬಹುದು. ಲಾವಾದ ಗನೀಕರಣ ಮತ್ತು ತಂಪಾಗಿಸುವಿಕೆಯ ಪ್ರಕ್ರಿಯೆ ಆಕಾರಕ್ಕೆ ಕಾರಣವಾಗಿದೆ ಎನ್ನಲಾಗುತ್ತದೆ. ಈ ಪಿಂಗಲ್ ಗುಹೆಯ ಗಾತ್ರ ಮತ್ತು ಸಾಗರದ ಕಾರಣ, ಅಲ್ಲಿನ ಶಬ್ದ ದೊಡ್ಡ ದೇವಾಲಯ, ಇಗರ‍್ಜಿಗಳಲ್ಲಿ ಪ್ರತಿದ್ವನಿಸುವಂತೆ ಕೇಳಿಸುತ್ತದೆ. ಈ ವಿದ್ಯಮಾನವು ಪಿಂಗಲ್ ಗುಹೆಯ ಸೌಂದರ‍್ಯ ಮತ್ತು ರಹಸ್ಯವನ್ನು ಇನ್ನೂ ಹೆಚ್ಚಿಸಿದೆ ಎಂದರೆ ತಪ್ಪಿಲ್ಲ.

ನೈಸರ‍್ಗಿಕ ಹಳಮೆಗಳ ಕುರಿತ ಅದ್ಯಯನ ನಡೆಸುತ್ತಿದ್ದ ಜೋಸೆಪ್ ಬ್ಯಾಂಕ್ಸ್ 1772ರಲ್ಲಿ ಈ ಗುಹೆಗಳನ್ನು ಕಂಡುಹಿಡಿದ. ಈ ಗುಹೆ ಇಪ್ಪತ್ತು ಮೀಟರ‍್ನಶ್ಟು ಎತ್ತರದಲ್ಲಿ ಗೋಳಾಕಾರದ ಕಮಾನು ಹೊಂದಿದ್ದು, ಎಪ್ಪತ್ತು ಮೀಟರ್‍ನಶ್ಟು ಒಳಗೆ ಚಾಚಿಕೊಂಡಿದೆ. ಯುರೋಪಿಯನ್ ದೇಶಗಳಲ್ಲಿರುವ ಅನೇಕ ಕ್ಯಾತೆಡ್ರೆಲ್‍ ಚರ‍್ಚಿನಂತೆ ಕಾಣುತ್ತದೆ. ಈ ಬವ್ಯವಾದ ನೈಸರ‍್ಗಿಕ ಸ್ಮಾರಕವು ದ್ವನಿವಿಜ್ನಾನಕ್ಕೆ ಹೆಸರುವಾಸಿಯಾಗಿದೆ. ಇದರ ಪರಿಣಾಮವೇ ‘ಸುಮದುರ ಸಂಗೀತದ ಗುಹೆ’ ಎನ್ನುವ ಅನ್ವರ‍್ತನಾಮ ಇದರದ್ದಾಗಿದ್ದು. ಈ ಎಲ್ಲಾ ಕಾರಣದಿಂದಾಗಿ ಈ ನೈಸರ‍್ಗಿಕ ದ್ರುಶ್ಯದ ವೀಕ್ಶಣೆಗೆ ಬರುವ ಪ್ರವಾಸಿಗರ ಸಂಕ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ.

ಕ್ವೀನ್ ವಿಕ್ಟೋರಿಯಾ ಈ ಗುಹೆಗೆ ಬೇಟಿ ನೀಡಿದ್ದರೂ ಸಹ ಇದು ವಿಶ್ವದಲ್ಲಿ ಅಶ್ಟೊಂದು ಹೆಸರುವಾಸಿಯಾಗಿರಲಿಲ್ಲ. 1829ರ ನಂತರದಲ್ಲಿ ಇದು ಪ್ರವಾಸಿಗರ ಆಕರ‍್ಶಣೀಯ ಕೇಂದ್ರವಾಗಿ ಬೆಳೆಯತೊಡಗಿತು. ಈ ಗುಹೆಯಲ್ಲಿನ ವಿಶಿಶ್ಟ ಪ್ರತಿದ್ವನಿಯಿಂದ ಪ್ರೇರಿತನಾದ ಪೆಲಿಕ್ಸ್ ಮೆಂಡೆಲ್ ಸೊನ್ – ಹೆಸರಾಂತ ಪ್ರಣಯ ಗೀತೆಗಳ ಸಂಯೋಜಕ, “ಪಿಂಗಲ್ ಕೇವ್ಸ್ ಓವರ‍್ಚರ‍್” ಕವನವನ್ನು ಬರೆದು ಅದರ ಕ್ಯಾತಿಯನ್ನು ವಿಶ್ವದಾದ್ಯಂತ ಪಸರಿಸಿದ್ದಾರೆ. ಅಟ್ಲಾಂಟಿಕ್ ಸಾಗರದ ಅಲೆಗಳು ಈ ಗುಹೆಯ ಗೋಡೆಗಳ ಮೇಲೆ ಅಪ್ಪಳಿಸುವಾಗ ಹೊರಹೊಮ್ಮುವ ಶಬ್ದ, ಅದರಿಂದ ಉದ್ಬವವಾಗುವ ಪ್ರತಿದ್ವನಿಯಿಂದ ಪ್ರೇರಿತರಾದ ಅನೇಕ ಸಂಗೀತಗಾರರು ಆ ಶಬ್ದದ ತುಣುಕುಗಳನ್ನು ಬಳಸಿಕೊಂಡು ವಿಶ್ವ ವಿಕ್ಯಾತ ರಚನೆಗಳನ್ನು ಮಾಡಿದ್ದಾರೆ.

ಪ್ರಸಿದ್ದ ಬ್ಯಾಂಡ್ ಪಿಂಕ್ ಪ್ಲಾಯ್ಡ್ ಗುಹೆಯ ಹೆಸರನ್ನೇ ಬಳಸಿಕೊಂಡು ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದು ಅವರ ಆರಂಬಿಕ ಹಾಡುಗಳಲ್ಲಿ ಒಂದಾದರೂ, ಈ ಸ್ಕಾಟಿಶ್ ತುಂಡು ಬೂಮಿಯ ಜನಪ್ರಿಯತೆಯನ್ನು ವಿಶ್ವದ ಉದ್ದಗಲಕ್ಕೂ ಹಬ್ಬಿಸಲು ಸಪಲವಾಗಿದೆ. ಪಿಂಗಲ್ ಗುಹೆಗಳಿಗೆ ಬೇಟಿ ನೀಡಲು ಮತ್ತು ಅದರಲ್ಲಿ ಹೊರಹೊಮ್ಮುವ ಸುಮದುರ ಸ್ವರವನ್ನು ಆಸ್ವಾದಿಸಲು ಅತ್ಯುತ್ತಮ ಸಮಯವೆಂದರೆ ಏಪ್ರಿಲ್‍ನಿಂದ ಸೆಪ್ಟಂಬರ‍್‌. ಈ ಸಮಯದಲ್ಲಿ ಸಾಗರದ ಅಲೆಗಳ ಏರಿಳಿತ ಕಡಿಮೆಯಿದ್ದು ನೀರು ಶಾಂತವಾಗಿರುತ್ತದೆ. ಗುಹೆಯಲ್ಲಿನ ಅಲೆಗಳ ಹಾಗೂ ಅದರ ಪ್ರತಿದ್ವನಿಯ ಶಬ್ದ ಕೇಳಲು ಆನಂದ. ಉಳಿದ ಸಮಯದಲ್ಲಿ ಇಲ್ಲಿಗೆ ಪ್ರವೇಶವನ್ನು ನಿರ‍್ಬಂದಿಸಲಾಗುತ್ತದೆ. ಆದಾಗ್ಯೂ ಸಣ್ಣ ಸಣ್ಣ ದೋಣಿಗಳಲ್ಲಿ ಪ್ರವೇಶದ್ವಾರದವರೆಗೂ ಹೋಗಿ ಬರಲು ಸಾದ್ಯತೆಯಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: unusualplaces.org, wikimedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.