ಕಾಪಿ ಮತ್ತು ಬೆಳಗಿನ ಹಾರೈಕೆ!

–  ಪ್ರಕಾಶ್ ಮಲೆಬೆಟ್ಟು.

ಕಾಪಿ, ಬೆಳಗು, Coffee, Morning

ಸುತ್ತ ಮುತ್ತ ಎತ್ತ ಕಣ್ಣಾಡಿಸಿದರು ಕಾಪಿ ತೋಟ. ತೋಟದ ನಡುವೆ ಒಂದು ಹಳೆಯ ಕಾಲದ ಸುಂದರ ಮನೆ. ಕೂಗಳತೆಯ ದೂರದಲ್ಲಿ ಬೇರಾವ ಮನೆಯೂ ಇಲ್ಲ. ತೋಟದಲ್ಲಿ ಬಗೆ ಬಗೆಯ ಮರಗಳು, ಅದರ ಮೇಲೆ ಕುಳಿತಿರುವ ವಿವಿದ ಬಗೆಯ ಹಕ್ಕಿಗಳು, ಹತ್ತಿರದಲ್ಲಿ ನೀರಿನ ಹರಿವಿನ ಜುಳು ಜುಳು ಶಬ್ದ. ಇಂತಾ ಜಾಗದಲ್ಲಿ ನೀವಿದೀರಿ ಎಂದು ಹಾಗೆ ಅಂದುಕೊಳ್ಳಿ. ಮನೆಯ ಮುಂದೆ ಸುಂದರ ಹೂದೋಟ. ಅದರಲ್ಲಿ ಬಗೆ ಬಗೆಯ ಹೂಗಳು, ಕಾಪಿ ಹೂವಿನ ಸುವಾಸನೆ, ಬೆಳ್ಳಂಬೆಳಗಿನ ಚಳಿ , ಮನೆಯ ಎದುರು ಒಂದು ಕುರ‍್ಚಿ ಹಾಕಿ, ಕೈಯಲ್ಲಿ ಬೆಚ್ಚನೆ ಹಬೆಯಾಡುವ ಕಾಪಿಯ ಲೋಟ ಹಿಡಿದು ಕುಳಿತರೆ, ಸ್ವರ‍್ಗ ದರೆಗಿಳಿದು ಬಂದ ಅನುಬವ. ಮನಸಿನ ದುಗುಡ, ದುಮ್ಮಾನಗಳೆಲ್ಲ ಮರೆತು ಹೋಗಿಬಿಡುತ್ತದೆ. ಅನುಬವಿಸಿದವರಿಗೆ ಗೊತ್ತು ಅದರ ಸವಿ.​

ಗುಡ್ ಮಾರ‍್ನಿಂಗ್ ಎಂಬ ಹಾರೈಕೆ

​ಕಾಪಿಗೆ ಇರುವ ಶಕ್ತಿ ಒಂದು ಗುಡ್ ಮಾರ‍್ನಿಂಗ್/ನಲ್ಬೆಳಗು ಎಂಬ ಹಾರೈಕೆಗೂ ಕೂಡ ಇದೆ. ಹೇಗೆ ಅಂತ​ ನೀವು ತಲೆಕೆಡಿಸಿಕೊಳ್ಳುವ ಮೊದಲು ಹೇಳ್ತೇನೆ ಕೇಳಿ. ಬೆಳಗಿನ ಮನಸು ಆ ಕಾಪಿ ತೋಟದಂತೆ ಪ್ರಶಾಂತವಾಗಿರುತ್ತದೆ. ಮುಂಜಾನೆ ನಮ್ಮ ಮನಸು ನಿದ್ದೆ ಮುಗಿಸಿ ಆಗ ತಾನೇ ಎಚ್ಚರಗೊಳ್ಳುತಿರುತ್ತದೆ.​ ಒಮ್ಮೆ ದೇವರ ದ್ಯಾನ ಮಾಡಿ, ಬಳಿಕ ನಿಮಗೆ ಇಶ್ಟವಾದವರು ಯಾರು ಅಂತ ಒಂದು ನಿಮಿಶ ಯೋಚನೆ ಮಾಡಿ. ಆಗ ಯಾರು ನಿಮ್ಮ ಮನಸಿಗೆ ಬರುತ್ತಾರೋ ಅವರನ್ನು ನೀವು ಅತಿಯಾಗಿ ಪ್ರೀತಿಸುತ್ತೀರಿ ಎಂದು ತಿಳಿಯಬಹುದು. ಅವರು ನಿಮ್ಮ ಅಪ್ಪ ಅಮ್ಮ ಆಗಿರಬಹುದು, ಅಕ್ಕ-ಅಣ್ಣ-ತಮ್ಮ-ತಂಗಿ, ಗೆಳೆಯ-ಗೆಳತಿ, ಗಂಡ-ಹೆಂಡತಿ ಯಾರೇ ಆಗಿರಬಹುದು. ಬೆಳಿಗ್ಗೆ ಅವರಿಗೆ ಕುದ್ದಾಗಿ ಗುಡ್ ಮಾರ‍್ನಿಂಗ್ ಎಂದು ಹೇಳಿ. ಇಲ್ಲವೇ ಒಂದು ಕರೆ ಮಾಡಿ ಅತವಾ ಒಂದು ಮೆಸೇಜ್ ಕಳಿಸಿ “ಗುಡ್ ಮಾರ‍್ನಿಂಗ್” ವಿಶ್ ಮಾಡಿ. ಕಂಡಿತವಾಗಲೂ ಅದು ಅವರ ಮನಸಿಗೆ ಮುದ ನೀಡುವ ಕಾಪಿಯಾಗಿರುತ್ತದೆ. ಹಾಗೆ ನಿಮಗೆ ಕೂಡ ಕಂಡಿತವಾಗಲೂ ಕಾಪಿ ಕುಡಿದ ಅನುಬವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ದೂರದೂರಿನಲ್ಲಿರುವ ತನ್ನ ಮಗ/ಮಗಳು ಬೆಳಿಗ್ಗೆ ಪೋನ್ ಮಾಡಿ ಅತವಾ ಮೆಸೇಜ್ ಕಳುಹಿಸಿ ಶುಬ ಹಾರೈಸಿದಾಗ ಪಾಲಕರಿಗೆ ಅದೆಂತ ನೆಮ್ಮದಿ. ಮಕ್ಕಳು ಚೆನ್ನಾಗಿದ್ದಾರೆ ಎಂದು ಅವರಿಗೆ ಸಮಾದಾನ. ಹಾಗೆ ತಮ್ಮನ್ನು ಎಶ್ಟು ಪ್ರೀತಿಸುತ್ತಾರೆಂಬ ಸಂತೋಶ.​ ಬೆಳಿಗ್ಗೆ ನೀವು ಅವರನ್ನು ನೆನಪು ಮಾಡಿಕೊಂಡಿದ್ದೀರಿ ಎಂಬುದು ಅವರಿಗೆ ನೆಮ್ಮದಿ ತರುವುದು ಮಾತ್ರವಲ್ಲ ಇಡೀ ದಿನವನ್ನು ಅವರು ಉಲ್ಲಾಸದಾಯಕವಾಗಿ ಕಳೆಯುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.​​

ಹಾರೈಕೆ ನೀಡುವ ಶಕ್ತಿ!​

ಇಂದಿನ ಈ ಯಾಂತ್ರಿಕ ಬದುಕಿನಲ್ಲಿ, ಹಾರೈಕೆಯ ಮಾತಿರಲಿ, ಒಂದು ಮುಗುಳುನಗೆ ಕೂಡ ನಾವು ತೋರುತ್ತಿರುವುದಿಲ್ಲ. ಇದು ಬೆಳಗಿನ ಕಾಪಿ ಇಲ್ಲದ ಬದುಕಿನಂತೆ ನೀರಸ ಜೀವನ. ನಾಲ್ಕು ದಿನದ ಜೀವನದಲ್ಲಿ ಒಂದು ಮುಗುಳ್ನಗೆ ಕೂಡ ಬೀರಲು ನಮ್ಮಿಂದ ಸಾದ್ಯವಿಲ್ಲದಿದ್ರೆ ಇದೆಂತ ಜೀವನ ಅಲ್ವೇ! ಯಾರ ಮೇಲೆಯಾದ್ರೂ ತುಂಬಾ ಕೋಪವಿದ್ದು ಆಮೇಲೆ ಸಿಟ್ಟು ಕಡಿಮೆಯಾದರೂ ಮಾತನಾಡಲು ಮುಜುಗರವಾಗುತ್ತಿದ್ದರೆ, ಬೆಳಿಗ್ಗೆ ಒಂದು ಗುಡ್ ಮಾರ‍್ನಿಂಗ್ ಮೆಸೇಜ್ ಕಳುಹಿಸಿ, ಕಾಪಿ ಒಟ್ಟಿಗೆ ಕುಡಿಯುವ ಅಂತ ಹೇಳಿ. ಎಲ್ಲ ಕೋಪ ಮರೆತು ಅವರು ನಿಮಗೆ ತಿರುಗಿ ವಿಶ್ ಮಾಡದಿದ್ದರೆ ಕೇಳಿ! ಹಾಗೆ ಗಂಡ ಹೆಂಡತಿ ಹಿಂದಿನ ದಿನ ಕೋಪ ಮಾಡಿಕೊಂಡು ಮಲಗಿದ್ರು ಬೆಳಿಗ್ಗೆ ಯಾರಾದ್ರೂ ಒಬ್ಬರು ಕಾಪಿ ಮಾಡಿಕೊಂಡು ಬಂದು ಇನ್ನೊಬ್ಬರನ್ನು ಎಬ್ಬಿಸಿ ಗುಡ್ ಮಾರ‍್ನಿಂಗ್ ಹೇಳಿ ಕಾಪಿ ಕೈಯಲಿ ಇಟ್ಟ್ರೆ ಕೋಪವೆಲ್ಲ ಮಂಗಮಾಯ. ಬೆಳಗಿನ ಹಾರೈಕೆಗೆ ಒಂದು ತರಹದ ಶಕ್ತಿ ಇದೆ ಎಂದರೆ ತಪ್ಪೇನಿಲ್ಲ 🙂 .

ಸುಮ್ನೆ ಮೊಬೈಲ್ನಲ್ಲಿ ಇಂತವೇ ತುಂಬಿಕೊಳ್ಳುತ್ತೆ, ಯಾರಿಗೆ ಬೇಕು ಈ ಬೆಳಗಿನ ಗುಡ್ ಮಾರ‍್ನಿಂಗ್ ಮೆಸೇಜುಗಳು ಅಂದ್ಕೋಬೇಡಿ. ಜಂಕ್ ಮೆಸೇಜುಗಳನ್ನು ಮೊಬೈಲಿಂದ ಅಳಿಸಿ ಹಾಕಬಹುದು. ಆದರೆ ಆ ಒಂದು ಮೆಸೇಜ್ ನಿಮಗೆ ನೀಡುವ ಆಪ್ಯಾಯಮಾನತೆ ಇದೆಯಲ್ಲಾ, ಅದು ತುಂಬಾ ಮುಕ್ಯ. ಸಂಬಂದಗಳು ಗಟ್ಟಿಯಾಗಲು ಸಣ್ಣ ಸಣ್ಣ ವಿಚಾರಗಳು ಕಾರಣವಾಗುತ್ತೆ. ಬೆಳಗಿನ ಶುಬಾಶಯಗಳ ವಿನಿಮಯ ಈ ನಿಟ್ಟಿನಲ್ಲಿ ನೆರವಾಗುತ್ತೆ.

ವಿಶ್ ಮಾಡಲು ಪರಿಚಯ ಇರಬೇಕೆಂದು ಏನೂ ಇಲ್ಲ. ವಾಕ್ ಮಾಡುವಾಗ ಎದುರಿಗೆ ಸಿಕ್ಕ ವ್ಯಕ್ತಿಗೆ ವಿಶ್ ಮಾಡಿದ್ರು ಸಾಕು ಒಂದು ಹೊಸ ಗೆಳೆತನ ಶುರುವಾಗಿಬಿಡುತ್ತೆ. ಒಂದು ಮುಗುಳುನಗೆ, ಶುಬಾಶಯ ವಿನಿಮಯದಿಂದ ಲಾಬವೇ ಹೊರತು ನಶ್ಟವಂತೂ ಕಂಡಿತ ಇಲ್ಲ.

( ಚಿತ್ರಸೆಲೆ : pixabay.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.