ಪಿಂಡಯಾ – 9 ಸಾವಿರ ಬುದ್ದ ವಿಗ್ರಹಗಳ ಗುಹೆ
– ಕೆ.ವಿ.ಶಶಿದರ.
ಮಯನ್ಮಾರ್ ದೇಶದ ಶಾನ್ ರಾಜ್ಯದಲ್ಲಿರುವ ಪಿಂಡಯಾ ಗುಹೆಗಳು ತೆರವಾಡ ಬೌದ್ದರಿಗೆ ಅತ್ಯಂತ ಪ್ರಬಾವಶಾಲಿ ಸ್ತಳ. ಈ ಗುಹೆಗಳಲ್ಲಿ ಕಂಚು, ಅಮ್ರುತ ಶಿಲೆ, ಮರ, ಜಿಪ್ಸಮ್, ಮರ ಮುಂತಾದವುಗಳಿಂದ ತಯಾರಿಸಿದ 9000 ಕ್ಕೂ ಹೆಚ್ಚು ಬುದ್ದನ ವಿಗ್ರಹಗಳಿವೆ. ಇಂತಹ ವೈವಿದ್ಯಮಯ ಬೌದ್ದ ಶಿಲ್ಪಶಾಸ್ತ್ರದ ವಿವಿದ ಶ್ರೇಣಿಯ ಶೈಲಿಗಳಲ್ಲಿ ತಯಾರಾದ ಬುದ್ದನ ವಿಗ್ರಹಗಳು ಇಡೀ ಮಯನ್ಮಾರ‍್‌ನ ಬೇರೆಲ್ಲೂ ಕಾಣುವುದಿಲ್ಲ. 1750ರಲ್ಲಿ ತಯಾರಾದ ವಿಗ್ರಹಗಳಿಂದ ಮೊದಲ್ಗೊಂಡು ಇಂದಿನವರೆಗಿನ ಹಲವು ವಿಗ್ರಹಗಳನ್ನು ಇಲ್ಲಿ ಕಾಣಬಹುದು.
ಈ ಗುಹೆಯನ್ನು ನೋಡಲು ಬರುವ ಯಾತ್ರಾರ‍್ತಿಗಳು ಬುದ್ದನ ವಿಗ್ರಹದ ರೀತಿಯಲ್ಲಿ ತಮ್ಮ ಕಾಣಿಕೆಯನ್ನು ಸಲ್ಲಿಸುವುದರಿಂದ ಇಲ್ಲಿ ಸಂಗ್ರಹವಾಗುತ್ತಿರುವ ಬುದ್ದನ ಪ್ರತಿಮೆಗಳ ಸಂಕ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಗುಹೆಗಳನ್ನು ಉಪಯೋಗಿಸುತ್ತಿದ್ದ ಮಹಾಯಾನ ಬಿಕ್ಕುಗುರು ಆರಾದಕರಿಂದ ಬಂದುದರಿಂದ 70 ಬುದ್ದನ ವಿಗ್ರಹಗಳು ಅನನ್ಯವಾದವು. ಇಲ್ಲಿರುವ ಬುದ್ದನ ವಿಗ್ರಹಗಳು ಮಯನ್ಮಾರ್‌ನಲ್ಲಿನ ಇತರೆ ಬುದ್ದನ ವಿಗ್ರಹಗಳಿಗಿಂತ ತೀರ ಬಿನ್ನವಾದವು.
ಈ ಗುಹೆಗಳು ಇನ್ಲೆ ಸರೋವರದ ಬಳಿಯಿರುವ ಸುಣ್ಣದ ಕಲ್ಲಿನ ಬೆಟ್ಟದಲ್ಲಿ ಅಡಗಿವೆ. ಇಲ್ಲಿ ಒಟ್ಟಾರೆ ಮೂರು ಗುಹೆಗಳಿವೆ. ನಾಗರಿಕರಿಗೆ ಮತ್ತು ಯಾತ್ರಾರ‍್ತಿಗಳಿಗೆ ಒಂದು ಗುಹೆಯನ್ನು ವೀಕ್ಶಿಸಲು ಮಾತ್ರ ಅವಕಾಶವಿದೆ. 150 ಮೀಟರ್ ಉದ್ದವಿರುವ ಗುಹೆಯಲ್ಲಿ ನೆಲದಿಂದ ಮಾಳಿಗೆಯವರೆಗೂ ಬುದ್ದನ ವಿಗ್ರಹಗಳನ್ನು ಇಕ್ಕಟ್ಟಾಗಿ ಜೋಡಣೆ ಮಾಡಲಾಗಿದೆ. ಗುಹೆಯ ಕೆಲವೊಂದು ಸ್ತಳದಲ್ಲಿ ನಡೆದಾಡಲು ಕೂಡ ಸಾದ್ಯವಿಲ್ಲ, ಅಶ್ಟು ಇಕ್ಕಟ್ಟಾಗಿದೆ. ಅದರೊಳಗಿರುವ ಬುದ್ದನ ವಿಗ್ರಹಗಳನ್ನು ನೋಡಿಬೇಕೆಂದಲ್ಲಿ ತೆವಳುತ್ತಾ ಒಳ ಹೋಗುಬಾಕುತ್ತದೆ.
ಪಿಂಡಯಾ ಗುಹೆಗಳನ್ನು ಪ್ರವೇಶಿಸಬೇಕಾದಲ್ಲಿ 1100ರಲ್ಲಿ ರಾಜ ಅಲುನ್ಸಿತು ನಿರ‍್ಮಿಸಿದ ದೈತ್ಯ ಜೇಡದಿಂದ ರಕ್ಶಿಸಲ್ಪಟ್ಟ ಶ್ವೆ-ಓ-ಮಿನ್ ಪಗೋಡವನ್ನು ದಾಟಿ ಹೋಗಬೇಕು. ಇಲ್ಲಿನ ನೆಲಸಿಗರ ದಂತ ಕತೆಯಂತೆ ಒಮ್ಮೆ ದೈತ್ಯ ಜೇಡ ಏಳು ರಾಜಕುಮಾರಿಯರನ್ನು ಸೆರೆಹಿಡಿದು ಈ ಗುಹೆಗಳಲ್ಲಿ ಅಡಗಿಸಿಟ್ಟಿತ್ತಂತೆ. ರಾಜಕುಮಾರ ಕುಮ್ಮಬಾಯಾ ರಾಜಕುಮಾರಿಯರನ್ನು ದೈತ್ಯ ಜೇಡನ ಹಿಡಿತದಿಂದ ಮುಕ್ತಿ ಪಡಿಸಲು ಅದನ್ನು ತನ್ನ ಬಾಣದಿಂದ ಹೊಡೆದುರುಳಿಸಿ ‘ಪಿಂಕೂ ಯಾ-ಪ್ಯಿ!’ ಎಂದು ಅರಚಿದನಂತೆ. ಅಂದರೆ ‘ನಾನು ದೈತ್ಯ ಜೇಡನನ್ನು ಸಂಹರಿಸಿದೆ’. ಇದೇ ಮಾತು ಶತಮಾನಗಳು ಉರುಳಿದಂತೆ ಬಾಯಿಂದ ಬಾಯಿಗೆ ಬರುವಾಗ ಬದಲಾಗಿ ‘ಪಿಂಡಯಾ’ ಎಂದಾಗಿದೆ.
ಈ ದಂತ ಕತೆಯ ಸ್ಮಾರಕಾರ‍್ತವಾಗಿ ದೈತ್ಯ ಜೇಡನ ಹಾಗೂ ರಾಜಕುಮಾರನ ವಿಗ್ರಹಗಳನ್ನು ಗುಹೆಯ ಪ್ರವೇಶದಲ್ಲಿ ಸ್ತಾಪಿಸಲಾಗಿದೆ. ದೈತ್ಯ ಜೇಡನಿರುವ ದ್ವಾರದ ಮೂಲಕ ಪ್ರವೇಶಿಸಿದರೆ ಚಿನ್ನದ ಲೇಪನದಿಂದ ಕಂಗೊಳಿಸುವ ಶ್ವೆ-ಓ-ಮಿನ್ ಪಗೋಡ ಇದೆ. ಮುಂದೆ ದೊಡ್ಡ ಹಜಾರವಿದ್ದು ಅಲ್ಲಿ ಅಲಂಕ್ರುತವಾದ ಮಂಡಲಗಳು ಕಾಣುತ್ತವೆ. ಹಾಗೆಯೇ ಮುಂದುವರೆದರೆ ಸಾವಿರಾರು ಬುದ್ದನ ವಿಗ್ರಹಗಳನ್ನು ಸ್ತಾಪಿಸಿರುವ ಸ್ತಳ ಕಾಣುತ್ತದೆ. ಇದಾದ ನಂತರ ಇಳಿ ಬಿದ್ದಿರುವ ನೀರ‍್ಗಲ್ಲುಗಳಿರುವ ಕೋಣೆಗಳು, ಗುಹೆಯ ಸಣ್ಣ ಸರೋವರ, ಪ್ರಕಾಶಮಾನವಾದ ಬೌದ್ದ ಯಜ್ನವೇದಿಕೆಗಳು ಸಿಗುತ್ತವೆ. ಇಲ್ಲಿರುವ ಕೆಲವು ಕೋಣೆಗಳನ್ನು ಇಂದಿಗೂ ದ್ಯಾನ ಮಂದಿರವಾಗಿ ಉಪಯೋಗಿಸಲಾಗುತ್ತಿದೆ. ಪ್ರವಾಸಿಗರೂ ಸಹ ದ್ಯಾನ ಮಾಡಬಹುದು.
ಪ್ರವೇಶ ದ್ವಾರದಿಂದ ಬುದ್ದನ ವಿಗ್ರಹಗಳನ್ನು ಇಕ್ಕಟ್ಟಾಗಿ ಜೋಡಿಸಿರುವುದನ್ನು ನೋಡಿದರೆ ಹೊಸದಾಗಿ ಸೇರ‍್ಪಡೆಯಾಗುತ್ತಿರುವ ವಿಗ್ರಹಗಳು ಸ್ತಳಾಬಾವವನ್ನು ಎದುರಿಸಲು ಗುಹೆಯ ಹಿಂಬಾಗ ಸೇರಿರುವುದು ಸ್ಪಶ್ಟವಾಗಿ ಕಂಡು ಬರುತ್ತದೆ.
(ಮಾಹಿತಿ ಮತ್ತು ಚಿತ್ರ ಸೆಲೆ: theiconichand.com, theitravelchannel.tv)
ಇತ್ತೀಚಿನ ಅನಿಸಿಕೆಗಳು