ವಿದ್ಯಾಗಮ – ಬನ್ನಿ ಕಲಿಸೋಣ…!!
– ವೆಂಕಟೇಶ ಚಾಗಿ.
ಅಂದು ಸೋಮವಾರ ಬೆಳಿಗ್ಗೆ ಸರಿಯಾಗಿ 9 ಗಂಟೆ. ಒಂದು ಮನೆಯ ಬಳಿ ನಾನು ನಿಂತಿದ್ದೆ. ಮನೆಯೊಳಗಿಂದ ಸುಮಾರು 10 ವರುಶ ವಯಸ್ಸಿನ ಬಾಲಕಿ ಹೊರ ಬಂದು ನನ್ನನ್ನು ನೋಡುತ್ತಲೇ ದಿಗ್ಬ್ರಮೆ, ಆಶ್ಚರ‍್ಯ, ಗೌರವ, ಬಯ ಎಲ್ಲವನ್ನೂ ಒಳಗೊಂಡಂತೆ, ” ನಮಸ್ಕಾರ ರೀ ಸರ, ಸರ‍್ ನೀವು ನಮ್ಮ ಮನೆಗೆ ಬಂದೀರಾ..ಬರ‍್ರಿ ಸರ‍್ ” ಎನ್ನುತ್ತಾ ಮನೆಯೊಳಗೆ ಹೋಗಿ “ಯವ್ವಾ ಬೇ.. ನಮ್ ಸರ‍್ ಬಂದಾರ, ಬಾ ಬೇ..” ಎನ್ನುತ್ತಾ ತನ್ನ ತಾಯಿಯನ್ನು ಒಂದೇ ಉಸಿರಿನಲ್ಲಿ ಕರೆಯತೊಡಗಿದಳು. ಕೈಯಲ್ಲಿ ಎರಡು ಪುಸ್ತಕಗಳನ್ನು, ಮುಕಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದ ನನ್ನ ಕಂಡು ನನ್ನ ವಿದ್ಯಾರ‍್ತಿನಿಯಾದ ಆ ಬಾಲಕಿಗೆ ನಾನು ಅವಳ ಮನೆ ಹತ್ತಿರ ಬಂದದ್ದು ಅವಳಿಗೆ ಸಂತೋಶವೋ ಸಂತೋಶ. ಕೋವಿಡ್-19 ನ ಈ ಸಂದರ‍್ಬದಲ್ಲಿ ಶಾಲೆಗಳು ಮುಚ್ಚಿ ಮಕ್ಕಳು ಹಾಗೂ ಶಿಕ್ಶಕರ ನಡುವಿನ ಒಡನಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.
ಶಾಲೆ ಎಂದರೇನೆ ಅದೊಂದು ಸ್ವರ‍್ಗ. ಮಕ್ಕಳ ಆಟಪಾಟಗಳು, ಅವರ ತುಂಟಾಟ, ಉತ್ಸಾಹ, ಕಪಟರಹಿತ ಮನಸ್ಸು, ಮುಗ್ದತೆ ಎಲ್ಲವೂ ಮುದ ನೀಡುವಂತದ್ದು. ಶಿಕ್ಶಕ ಹಾಗೂ ಮಕ್ಕಳ ನಡುವಿನ ಸಂಬಂದ ಅಂತಹದು. ಮಕ್ಕಳಿಗೆ ತಮ್ಮ ಗುರುಗಳು ಎಂದರೆ ತುಂಬಾ ಕುಶಿ. ಶಿಕ್ಶಕರಿಗೆ ಮಕ್ಕಳೊಂದಿಗೆ ಆಟಪಾಟಗಳಲ್ಲಿ ಸಮಯ ಕಳೆದಾಗಲೇ ಕುಶಿ.
ಬಾಲಕಿ ತಾಯಿ ಹೊರ ಬಂದು ನಮಸ್ಕಾರ ಹೇಳಿದರು. ಗುರುಗಳು ಮನೆಬಾಗಿಲವರೆಗೂ ಬಂದಿರುವುದು ಸಂತೋಶಗೊಂಡು ಅತಿತಿ ಸತ್ಕಾರಕ್ಕೆ ಮುಂದಾದರು. ನಾನು ಅದೆಲ್ಲವನ್ನು ನಯವಾಗಿ ತಿರಸ್ಕರಿಸಿ ನಾನು ಬಂದ ಉದ್ದೇಶವನ್ನು ತಿಳಿಸಿದೆ. ” ಕೋವಿಡ್ 19 ನ ಪರಿಣಾಮವಾಗಿ ಶಾಲೆಗಳು ಮುಚ್ಚಿ ನಾಲ್ಕು ತಿಂಗಳುಗಳೇ ಕಳೆದಿವೆ. ಇಂತಹ ಸಂದರ‍್ಬದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಬಾರಿ ಹಿನ್ನಡೆಯಾಗಿದೆ. ಮಕ್ಕಳು ಓದು ಬರಹದಲ್ಲಿ ತೊಡಗದೇ ಮನೆಗೆಲಸಗಳಲ್ಲಿ, ಆಟಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಇದೇ ಪರಿಸ್ತಿತಿ ಮುಂದುವರೆದಲ್ಲಿ ಮಕ್ಕಳ ಕಲಿಕೆ ಕುಂಟಿತಗೊಳ್ಳಬಹುದು. ಆದ್ದರಿಂದ ವಟಾರ ಶಾಲೆಯನ್ನು ಆರಂಬಿಸುತ್ತಿದ್ದೇವೆ. ಸಾಮಾಜಿಕ ಅಂತರದೊಂದಿಗೆ ಮಕ್ಕಳಿಗೆ ಮೂಲಬೂತ ಕಲಿಕಾಂಶಗಳ ಆದಾರದ ಮೇಲೆ ಓದು ಬರಹ ಲೆಕ್ಕಾಚಾರ ಕಲಿಸಲಾಗುವುದು. ಹಾಗೆಯೇ ಸ್ವಅದ್ಯಯನಕ್ಕೆ ಅನುಕೂಲವಾಗಲು ಮನೆಗೆಲಸವನ್ನೂ ನೀಡಲಾಗುವುದು. ಅದಕ್ಕಾಗಿ ನಿಮ್ಮ ಮಗಳನ್ನು ವಟಾರ ಶಾಲೆಗೆ ಕಳುಹಿಸಿಕೊಡಿ ” ಎಂದಾಗ ಬಾಲಕಿಯ ತಾಯಿ ನನ್ನ ಮಾತನ್ನು ಕೇಳಿ ತುಂಬಾ ಕುಶಿ ಪಟ್ಟರು. ಮತ್ತು ವಟಾರ ಶಾಲೆಗೆ ತಪ್ಪದೇ ಕಳಿಸಿಕೊಡುವುದಾಗ ತಿಳಿಸಿದರು. ಬಾಲಕಿ ಆಗಲೇ ಕೈಯಲ್ಲಿ ಎರಡು ಮೂರು ಪುಸ್ತಕಗಳನ್ನು ಹಿಡಿದುಕೊಂಡು ವಟಾರ ಶಾಲೆಗೆ ಬರಲು ಸಿದ್ದವಾಗೇ ನಿಂತಿದ್ದಳು. ವಟಾರ ಶಾಲೆ ಆ ಊರಿನಲ್ಲಿ ಹೊಸ ಅಲೆಯನ್ನೇ ಸ್ರುಶ್ಟಿಸಿ ಮಕ್ಕಳು ಓದಿನತ್ತ ಮುಕಮಾಡಲು ಸಹಕಾರಿಯಾಯಿತು.
ಹೌದು, ನಮ್ಮ ಹಳ್ಳಿಗಳಲ್ಲಿ ಬಡತನ ಜೀವಂತವಾಗಿದೆ. ಒಂದು ಕನಿಶ್ಟ ಸೌಲಬ್ಯದ ಮೊಬೈಲ್ ಇಲ್ಲದೇ ಇರುವಂತಹ ಕುಟುಂಬಗಳು ಸಾಕಶ್ಟಿವೆ. ಒಪ್ಪೊತ್ತಿನ ಊಟಕ್ಕಾಗಿ ಮನೆಮಂದಿಯೆಲ್ಲಾ ದುಡಿಯುವಂತಹ ಕುಟುಂಬಗಳು ಹಳ್ಳಿಗಳಲ್ಲಿವೆ. ಹೀಗಿರುವಾಗ ಆನ್ ಲೈನ್ ಶಿಕ್ಶಣದ ಮಾತೆಲ್ಲಿ. ಇಂತಹ ಕುಟುಂಬಗಳಲ್ಲಿ ಮಕ್ಕಳ ಶಿಕ್ಶಣದ ಬಗ್ಗೆ ಉಂಟಾಗುವ ನಿಶ್ಕಾಳಜಿ ಸಾಮಾನ್ಯ. ಆದರೂ ಮಕ್ಕಳಿಗೆ ಶಿಕ್ಶಣ ನೀಡುವುದು ಮಹತ್ವದ್ದಾಗಿದೆ. ಸಮುದಾಯವೂ ಇದಕ್ಕೆ ಕೈಜೋಡಿಸಿದಾಗ ಮಕ್ಕಳ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವುದು ಸಾದ್ಯ.
ಹಾಗಾದರೆ ಸಮಾಜ ಹೇಗೆ ಸಹಾಯಮಾಡಬಲ್ಲದು? ಇಂತಹ ಮನೆಗಳ ಅಕ್ಕ ಪಕ್ಕಗಳಲ್ಲಿ ಉನ್ನತ ವ್ಯಾಸಂಗ ಮಾಡಿದಂತವರು ಅತವಾ ಹಿರಿಯರು ಇದ್ದಲ್ಲಿ, ಅವರು ತಮಗೆ ಸಿಗುವ ಸಮಯದಲ್ಲಿ ಇಂತಹ ಎರಡು ಮೂರು ಮಕ್ಕಳಿಗೆ ಉಚಿತವಾಗಿ ಕಲಿಸಿದರೆ, ತಮಗೆ ಗೊತ್ತಿರುವ ವಿಶಯಗಳನ್ನು ಮಕ್ಕಳಿಗೆ ತಿಳಿಸಿದರೆ ಇಂತಾ ಕುಟುಂಬದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಸಾದ್ಯವಿಲ್ಲ ಎಂದು ನನ್ನ ಅನಿಸಿಕೆ. ಸಾಮಾಜಿಕ ಕಾಳಜಿ ಎಲ್ಲರಲ್ಲೂ ಬರಬೇಕು. ಶಿಕ್ಶಣ ಎನ್ನುವುದು ವ್ಯಾಪಾರವಾದಾಗ, ಮನೆಪಾಟ ಹೇಳಿಕೊಡುವುದೂ ವ್ಯಾಪಾರವಾದಾಗ ಬಡ ಮಕ್ಕಳ ಗತಿಯೇನು?
ಬಡಮಕ್ಕಳಲ್ಲಿ ಶಿಕ್ಶಣದ ಹಸಿವು ತುಂಬಾನೇ ಇದೆ. ಈ ಹಸಿವನ್ನು ನೀಗಿಸುವಂತಹ ಮೂಲಗಳು ಮಕ್ಕಳಿಗೆ ದಕ್ಕುತ್ತಿಲ್ಲ. ಆ ಮೂಲ ಸಮಾಜವೇ ಆಗಬೇಕು. ಒಬ್ಬ ಕಲಿತವ ನಾಲ್ಕೈದು ಮಕ್ಕಳಿಗೆ ಶಿಕ್ಶಣ ನೀಡಿದರೆ, ಒಂದು ಹಳ್ಳಿಯಲ್ಲಿರುವ ನೂರಾರು ಮಂದಿ ಕಲಿತವರಿಂದ ಹಳ್ಳಿಯ ಯಾವೊಬ್ಬ ಮಗುವೂ ಕಲಿಕೆಯಿಂದ ಹಿಂದುಳಿಯಲು ಸಾದ್ಯವೇ ಇಲ್ಲ. ಸರಕಾರದ ವಿದ್ಯಾಗಮ ಇದಕ್ಕಾಗಿಯೇ ಒಂದು ಸದವಕಾಶವನ್ನು ನೀಡಿದೆ. ಕಲಿತವರೆಲ್ಲಾ ಮುಂದೆ ಬನ್ನಿ, ನಿಮ್ಮ ಅಕ್ಕಪಕ್ಕದ ಮನೆಗಳ ಮಕ್ಕಳಿಗೆ ಪಾಟ ಹೇಳಿಕೊಡಿ. ಶಿಕ್ಶಕರಿಗೆ ಸಹಾಯ ಮಾಡಿ. ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿ. ಸರಕಾರಿ ಶಾಲೆಗಳನ್ನು ಉಳಿಸಿ ಕನ್ನಡವನ್ನು ಬೆಳೆಸಿ ಎಂಬುದೇ ನಮ್ಮ ಆಶಯ.
( ಚಿತ್ರಸೆಲೆ : prajavani.net )
ಇತ್ತೀಚಿನ ಅನಿಸಿಕೆಗಳು