ಅನುಬವ ನೀಡುವ ಅರಿವು

ಸಂಜೀವ್ ಹೆಚ್. ಎಸ್.

ತಿಳಿವು ಹಂಚಿಕೆ, Knowledge share

ಕೆಲವು ದಿನಗಳ ಹಿಂದೆ ನನ್ನ ಪರಿಚಯದವರೊಬ್ಬರು ಹೀಗೆ ಲೋಕಾಬಿರಾಮವಾಗಿ ಮಾತನಾಡುತ್ತಿದ್ದರು. ‘ಇದು ಒಳ್ಳೆಯದಾ? ಅದು ಒಳ್ಳೆಯದಾ? ಏನು ತಿನ್ನಬೇಕು? ಹೇಗಿರಬೇಕು?’ ಎಂಬಂತ ವಿಶಯಗಳು ಪ್ರಸ್ತಾಪವಾದವು. ಕೊನೆಗೆ ಅವರಿಗೆ ಇಶ್ಟವಾದ ಒಂದು ಆಹಾರ ಪದಾರ‍್ತದ ಬಗ್ಗೆಯೂ ಕೂಡ ಪ್ರಸ್ತಾಪಿಸಿದರು. ನಾನು ನನಗಿದ್ದ ಮಾಹಿತಿ ಪ್ರಕಾರ, ಅವರಿಶ್ಟದ ಆಹಾರ ಪದಾರ‍್ತದ ಉಪಯೋಗಗಳು, ಅಡ್ಡ ಪರಿಣಾಮಗಳು, ಸೇವಿಸುವ ಪ್ರಮಾಣ ಎಶ್ಟಿದ್ದರೆ ಒಳ್ಳೆಯದು – ಹೀಗೆ ನನಗೆ ತಿಳಿದಶ್ಟು ಒಂದಶ್ಟು ಮಾಹಿತಿಯನ್ನು ಹಂಚಿಕೊಂಡೆ. ಅವರಿಗೆ ಇಶ್ಟದ ಆಹಾರ ಪದಾರ‍್ತವಾದ್ದರಿಂದ ಅವರು “ಇಲ್ಲ ಸರ‍್ ಇದು ನನ್ನ ಪೇವರೆಟ್, ಆದ್ದರಿಂದ ನಾನು ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಶ್ಟೋ ಜನರು ಇದನ್ನು ತುಂಬಾ ಇಶ್ಟಪಡುತ್ತಾರೆ ಅಂತವರಲ್ಲಿ ನಾನೂ ಒಬ್ಬ. ಏನಾದರೂ ಅಡ್ಡಪರಿಣಾಮಗಳು ಉಂಟಾದರೆ ಆಗಲಿ, ಆದಾಗ ನೋಡಿಕೊಳ್ಳೋಣ ಬಿಡಿ ಸಾರ‍್” ಎಂದರು. ಮಾತುಕತೆ ಹೀಗೆ ಮುಂದುವರಿಯಿತು. ಇಬ್ಬರು ಕೂಡ ಪ್ರಾಸಂಗಿಕವಾಗಿ ಮಾತನಾಡುತ್ತಿದ್ದರಿಂದ ವಿಶಯವನ್ನು ಅಶ್ಟಾಗಿ ಗಂಬೀರವಾಗಿ ತೆಗೆದುಕೊಳ್ಳಲಿಲ್ಲ. ಕೇವಲ ಮಾಹಿತಿ ಮತ್ತು ವೈಯಕ್ತಿಕ ಅಬಿಪ್ರಾಯಗಳ ಹಂಚಿಕೆ ಆಗಿದ್ದಶ್ಟೇ.

ಈ ಮಾತುಕತೆಯಾದ ಹಲವು ದಿನಗಳ ನಂತರ ಅವರೇ ನನ್ನ ಬಳಿ ಬಂದು “ಸರ‍್ ನೀವು ಹೇಳಿದ್ದು ಸರಿ, ಇದರ ಅತಿಯಾದ ಸೇವನೆ ಒಳ್ಳೆಯದಲ್ಲ, ನನಗೂ ಕೂಡ ಇದರ ಬಾದೆ ಈಗ ಅರ‍್ತವಾಗುತ್ತಿದೆ. ನಾನು ಅವತ್ತು ನಿಮ್ಮ ಮಾತು ಕೇಳಬೇಕಿತ್ತು ಮತ್ತು ಗಂಬೀರವಾಗಿ ಪರಿಗಣಿಸಬೇಕಿತ್ತು. ಈಗ ಇದರ ಅಡ್ಡಪರಿಣಾಮದ ನೋವನ್ನು ಅನುಬವಿಸುತ್ತಿದ್ದೇನೆ, ತುಂಬಾ ಸಲ ಇದೇ ತರಹದ ಅಡ್ಡಪರಿಣಾಮಗಳು ನನ್ನನ್ನು ಬಾದಿಸಿವೆ. ಆದರೆ ಕಾರಣ ಏನೆಂದು ನನಗೆ ಗೊತ್ತಿರಲಿಲ್ಲ ಮತ್ತು ಊಹಿಸಿರಲಿಲ್ಲ. ಈಗ ಅದರ ಅನುಬವವಾಗುತ್ತಿದೆ. ಸಾಕಪ್ಪಾ ಈ ನೋವು. ಇನ್ಮೇಲೆ ಇದರ ಸೇವನೆಯನ್ನು ಆದಶ್ಟು ಕಡಿಮೆ ಮಾಡುತ್ತೇನೆ” ಎಂದು ಹೇಳಿದರು.‌

ಇವರು ನನಗೆ 10 ವರುಶದ ಪರಿಚಯ. ಇಲ್ಲಿವರೆಗೂ ಎಂದೂ ಆರೋಗ್ಯ, ಜೀವನ ಶೈಲಿಯ ಬಗ್ಗೆ ಮಾತನಾಡಿದ್ದನ್ನು ನೋಡಿಯೇ ಇರಲಿಲ್ಲ. ಆದರೆ ಅಚಾನಕ್ಕಾಗಿ ಬಂದೊದಗಿದ ಕರೋನಾದಿಂದಾಗಿ ಆಹಾರ, ಆರೋಗ್ಯ ಮತ್ತು ಉತ್ತಮ ಜೀವನ ಶೈಲಿಯ ಬಗ್ಗೆ ಮಾತನಾಡಲು ಶುರು ಮಾಡಿದ್ದರು. ಕೇವಲ ಮಾತನಾಡಲು ಅಶ್ಟೇ ಅಲ್ಲ ಸ್ವಯಂ ಪಾಲಿಸಿದರೂ ಕೂಡ. ಅರ‍್ತಾತ್ ಆರೋಗ್ಯ ಮತ್ತು ಜೀವನಶೈಲಿಯ ಮಹತ್ವ ಅವರ ಅನುಬವಕ್ಕೆ ಬಂದಾಗಲಶ್ಟೇ ಅವರು ಎಚ್ಚೆತ್ತುಕೊಂಡರು.

ಮತ್ತೊಬ್ಬ ಪರಿಚಿತರು ನಾರಿನಂಶದ ಕೊರತೆಯಿಂದಾಗಿ ಆಗುವ ಆರೋಗ್ಯ ಸಮಸ್ಯೆಯಿಂದ ತೊಂದರೆ ಅನುಬವಿಸುತ್ತಿದ್ದರು. ಯಾವಾಗ ಈ ಸಮಸ್ಯೆಯ ಪರಿಣಾಮ ಹೆಚ್ಚಾಗತೊಡಗಿತೋ ಆಗ ಗೂಗಲ್ ನೋಡಿ ಮತ್ತು ತಿಳಿದವರಲ್ಲಿ ಕೇಳಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಕೊಂಡು, ಆಹಾರ ಪದ್ದತಿಯನ್ನು ಬದಲಾಯಿಸಿಕೊಂಡರು. ಇವರೆಲ್ಲರಿಗೂ ಇದರ ಬಗ್ಗೆ ಅರಿವು ಇಲ್ಲ/ಇರಲಿಲ್ಲ ಎಂದಲ್ಲ, ಆದರೆ ಈಗ ಇದರ ಬಗ್ಗೆ ಮತ್ತಶ್ಟು ತಿಳಿದುಕೊಂಡು ಜಾಗ್ರುತರಾಗಿದ್ದಾರೆ.

ಅನುಬವ…ಇದೊಂದು ಸುಂದರ ಪಾಡು. ಅನುಬವವನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದು ವೈಯಕ್ತಿಕ ವಿಚಾರ. ನಮಗಾಗುವ ಅನುಬವವನ್ನು ಸಕಾರಾತ್ಮಕವಾಗಿ ಇಲ್ಲವೇ ನಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಅನುಬವ ನೀಡುವ ತಿಳುವಳಿಕೆ ನಮ್ಮ ಆಲೋಚನೆಗಳ ದಿಕ್ಕಿನ ಮೇಲೆ ನಿಂತಿರುತ್ತದೆ ಎಂದರೆ ತಪ್ಪಾಗಲಾರದು. ಆರೋಗ್ಯದ ವಿಚಾರದಲ್ಲೂ ಅಶ್ಟೇ, ಉತ್ತಮ ಆಹಾರ, ಜೀವನಶೈಲಿ ಒಂದು ಅನುಬವ. ನಮಗಾದ ಅನುಬವದ ಮೇರೆಗೆ ನಾವು ಪರಿವರ‍್ತನೆಗೊಳ್ಳಬಹುದು ಅತವಾ ಮತ್ತೊಬ್ಬರ ಅನುಬವವನ್ನು ಕೇಳಿ ತಿಳಿದು, ಅವರ ಅನುಬವವನ್ನು ಆದರಿಸಿ ಸಕಾರಾತ್ಮಕ ಯೋಚನೆಗಳನ್ನೋ, ಚಿಂತನೆಗಳನ್ನೋ ಅತವಾ ಜೀವನಶೈಲಿಯನ್ನೋ ರೂಡಿಸಿಕೊಳ್ಳಬಹುದು.

ಎಲ್ಲರಿಗೂ ಹಲವು ಬಗೆಯ ಅನುಬವಗಳು ಆಗಿರುತ್ತವೆ. ಆ ಅನುಬವದ ಪರಿಣಾಮದಿಂದಾಗಿ ಅವರುಗಳು ತಮ್ಮ ಆಹಾರ ಅತವಾ ಜೀವನಶೈಲಿಯನ್ನು ಮಾರ‍್ಪಾಡು ಮಾಡಿಕೊಂಡಿರುತ್ತಾರೆ. ಪ್ರಸ್ತುತ ಜಗತ್ತು ಅನುಬವಿಸುತ್ತಿರುವ ನೋವಿಗೆ ಮತ್ತು ಕಶ್ಟಕ್ಕೆ ನಾವು ರೂಡಿಸಿಕೊಂಡ ಜೀವನ ಶೈಲಿಯೇ ಕಾರಣ ಎಂದೆನಿಸುತ್ತದೆ. ಮತ್ತೊಬ್ಬರ ಅನುಬವವನ್ನು ಕೇಳಿ ಅತವಾ ನೋಡಿಯೂ ಕೂಡ ನಾವುಗಳು ಬುದ್ದಿ ಕಲಿಯುವುದಿಲ್ಲ. ಸ್ವತಹ ನಮಗೆ ಅನುಬವ ಆಗೋವರೆಗೂ ನಾವು ನಮಗರಿವಿಲ್ಲದೆ ಕಾಯುತ್ತೇವೆ, ಆದರೆ ಅಶ್ಟೊತ್ತಿಗೆ ಸಮಯ ಮೀರಿರುತ್ತದೆ.

ರೋಗನಿರೋದಕ ಶಕ್ತಿಯ ಪ್ರಾಮುಕ್ಯತೆಯ ಬಗ್ಗೆ ಹಲವು ವರ‍್ಶಗಳಿಂದ ಹಲವರು ಹೇಳುತ್ತಿದ್ದರು. ಆದರೆ ಅದರ ಕೊರತೆಯ ಸ್ಪಶ್ಟ ಪರಿಣಾಮದ ಅನುಬವ ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಅದರ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ. ಇದು ಕೂಡ ಒಂದು ಅನುಬವವಲ್ಲವೆ? ರೋಗಮುಕ್ತ ಅತವಾ ಆಸ್ಪತ್ರೆ ರಹಿತ ಜೀವನ ನಡೆಸುವುದು ಸುಲಬದ ಮಾತಲ್ಲ. ಅದೊಂದು ರೀತಿಯ ತಪಸ್ಸು.

ಸ್ವಂತ ಅನುಬವಕ್ಕೆ ಮಿಗಿಲಾದದ್ದು ಇನ್ನೊಂದಿಲ್ಲ. ಆದರೂ ಕೂಡ ಚಾಣಕ್ಯರು ಹೇಳುವ ಹಾಗೆ ಪ್ರತಿಯೊಂದು ಅನುಬವ ನಮಗೆ ಆಗಲಿ ಎಂದು ಕಾಯಬೇಕಿಲ್ಲ. ಯಾಕೆಂದರೆ ನಮ್ಮ ಬಳಿ ಅಶ್ಟು ಸಮಯವಿರುವುದಿಲ್ಲ. ಹಾಗಾಗಿ ಬೇರೆಯವರ ಅನುಬವವನ್ನು ಕೇಳಿ ತಿಳಿದು ಅದರಿಂದ ಕಲಿಯುವುದರಲ್ಲೂ ಒಳಿತಿದೆ.

ಆದ್ದರಿಂದ ಅನುಬವವನ್ನು, ಮಾಹಿತಿಯನ್ನು, ತಿಳುವಳಿಕೆಯನ್ನು ಹಂಚಿಕೊಳ್ಳೋಣ. ಅನುಬವದಿಂದ ಸಿಗುವ ಅರಿವು ಮನೆ-ಮನದ ಸ್ವಾಸ್ತ್ಯ ಹೆಚ್ಚಿಸಲಿ ಎಂದು ಆಶಿಸೋಣ.

( ಚಿತ್ರಸೆಲೆ : entrepreneur.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: