ಸಣ್ಣ ಕತೆ : ಆತ್ಮಗಳಿಗೆ ಎಡೆ
“ಯುಗಾದಿ ಹಬ್ಬದ ಹಿಂದಿನ ರಾತ್ರಿ ಅಮಾವಾಸ್ಯೆ…ಅಂದು ಹಿರಿಯರ ಆತ್ಮ ಮನೆಗಳಿಗೆ ಬೇಟಿ ಕೊಡುತ್ತವೆ…!?” ಎಂದು ಪರಮೇಶ ಮಕ್ಕಳಿಗೆ ಹೇಳುತಿದ್ದ. “ಆತ್ಮಗಳ ಸಂತೋಶ ಮತ್ತು ತ್ರುಪ್ತಿಗಾಗಿ ಅವುಗಳಿಗೆ ಇಶ್ಟವಾದ ಬಕ್ಶ್ಯಗಳು, ಪಾನೀಯಗಳು ಮತ್ತು ಅವು ಉಪಯೋಗಿಸುತಿದ್ದ ವಸ್ತುಗಳನ್ನು ಇಟ್ಟು ಪೂಜೆ ಮಾಡಬೇಕು ಇಲ್ಲದಿದ್ದರೆ ಆತ್ಮಗಳು ಮುನಿಸಿಕೊಳ್ಳುತ್ತವೆ..!” ಎಂದು ಬುರಡೆ ಬಿಡುತಿದ್ದ. ಅದಕ್ಕೆ ಮಕ್ಜಳು ಕುತೂಹಲದಿಂದ “ಅಪ್ಪ ಆತ್ಮಗಳು ಎಡೆ ಇಟ್ಟಿದ್ದನ್ನು ತಿನ್ನುತ್ತಾವಾ?” ಎಂದ ಕೇಳಿದರೆ. “ಓ… ಯಾಕ್ ತಿನ್ನಲ್ಲ..!? ಬೆಳಿಗ್ಗೆ ಎದ್ದು ನೋಡಿ…! ಆತ್ಮಗಳು ನಾವಿಟ್ಟ ಎಡೆ ಸ್ವಲ್ಪ ಸ್ವಲ್ಪ ಕಾಲಿ ಮಾಡಿರುತ್ತವೆ” ಎಂದು ಮಕ್ಕಳ ಕುತೂಹಲ ಮತ್ತಶ್ಟು ಕೆರಳಿಸಿದ್ದ.
ಅಂದು ಯುಗಾದಿ ಹಬ್ಬದ ಹಿಂದಿನ ದಿನ ಅಮಾವಾಸ್ಯೆ. ಕೂಲಿಕಾರ ಪರಮೇಶ ತನ್ನ ಹಿರಿಯರಿಗೆ ಎಡೆ ಇಡಲು ತನ್ನ ಸಾಹುಕಾರನಿಂದ ಸಾಲ ಇಸಿದುಕೊಂಡು ಕುರಿಮಾಂಸ, ಕೋಳಿಮಾಂಸ, ಮೀನು, ಹೊಸ ಬಟ್ಟೆ, ಎಲೆ ಅಡಿಕೆ ಮುಂತಾದವು ತಂದು ಮಾಂಸ, ಮೀನು ಬೇಯಿಸಿ ಹಿರಿಯರಿಗೆ ಎಡೆ ಇಟ್ಟ. ಪರಮೇಶಿ ಮಕ್ಕಳಿಗೆ ಕುತೂಹಲ, ‘ಇವತ್ತು ನಮ್ಮ ಹಿರಿಯರ ಆತ್ಮಗಳು ಬಂದು, ಅವರಿಗಾಗಿ ಮಾಡಿಟ್ಟ ಎಡೆ ತಿನ್ನುತ್ತವೆ’ ಎಂದು.
ಆತ್ಮಗಳು ಹೇಗೆ ತಿನ್ನುತ್ತವೆ ಎಂದು ನೋಡಲು ರಾತ್ರಿ ಕಾಯ್ದು ಕುಳಿತರು. ಎಶ್ಟೊತ್ತಾದರೂ ಅವುಗಳು ಬಂದ ಸುಳಿವಿಲ್ಲ. ಕಣ್ಣು ಸೋತು ಕಡೆಗೆ ಗಾಡ ನಿದ್ರೆಗೆ ಜಾರಿದರು. ಅವರು ನಿದ್ರಿಸಿದ ಮೇಲೆ ಪರಮೇಶಿ ದುತ್ತನೆ ಎದ್ದು ಎಡೆಗೆ ಇಟ್ಟ ಬೇಯಿಸಿದ ಮಾಂಸ, ಮೀನು ಪಟ್ಟಾಗಿ ಬಾರಿಸಿ ಎಲೆ ಅಡಿಕೆ ಜಗಿದು ಮೆತ್ತಗೆ ಹಾಸಿಗೆ ಸೇರಿ, ಮುಸುಕಿನಲ್ಲಿ ಮೆತ್ತಗೆ ಡರ‍್ರ‍್ ಎಂದು ತೇಗಿ ಗಾಡವಾದ ನಿದ್ರೆಗೆ ಜಾರಿದ.
ಮಕ್ಕಳು ಬೆಳಿಗ್ಗೆ ದಡಬಡಿಸಿ ಎದ್ದು ಹೋಗಿ ಹಿರಿಯರಿಗೆ ಇಟ್ಟ ಎಡೆಯನ್ನು ನೋಡಿದರೇ ಹೌದು… ಮಾಂಸ ಮೀನು ಎಲೆ ಅಡಿಕೆ ತಿಂದಿವೆ! ‘ಅಯ್ಯೊ ನಾವು ಆತ್ಮಗಳು ಬಂದು ತಿನ್ನುವುದನ್ನು ನೋಡಲು ಆಗಲೇ ಇಲ್ಲ’ ಎಂದು ಮಕ್ಕಳು ಬೇಸರಪಟ್ಟುಕೊಳ್ಳುತ್ತಿರುವಾಗ ಮುಸುಕಿನೊಳಗೆ ಪಿಳಿ ಪಿಳಿ ಕಣ್ಣು ಬಿಡುತಿದ್ದ ಪರಮೇಶಿ ಎಂಬ ಜೀವಂತ ಬೂತ ಮುಸಿ ಮುಸಿ ನಗುತಿತ್ತು.
( ಚಿತ್ರಸೆಲೆ : pixabay.com )
ಇತ್ತೀಚಿನ ಅನಿಸಿಕೆಗಳು