“ಸವಿಯಿರಣ್ಣ, ಸವಿಯಿರಿ!”

ಸಂಜೀವ್ ಹೆಚ್. ಎಸ್.

ಊಟದ ತಟ್ಟೆ, Meals Plate

“ಹಾಡು ಹಳೆಯದಾದರೇನು ಬಾವ ನವನವೀನ” – ಕೇಳಿದರೆ ಕೇವಲ ಹಾಡು. ಆಳಕ್ಕೆ ಇಳಿದಾಗ ಮಾತ್ರ ಅದರ ಬಾವ, ಸಾರ ಸರಿಯಾಗಿ ತಿಳಿಯುವುದು. ಇದು ಕೇವಲ ಸಂಗೀತ-ಸಾಹಿತ್ಯಕ್ಕೆ ಮಾತ್ರ ಅನ್ವಯವಾಗುವಂತದಲ್ಲ, ದಿನನಿತ್ಯದ ಆಹಾರ ಸೇವನೆಗೂ‌ ಅನ್ವಯಿಸುತ್ತದೆ. ಇಂದಿನ ವೇಗದ ಬದುಕಿನಲ್ಲಿ ಯಾರಿಗೂ ಸಮಯವಿಲ್ಲ, ಎಲ್ಲರೂ ಓಡುತ್ತಿರುವವರೇ. ಎಲ್ಲಿಗೆ ಎಂದು ಕೇಳಿ? ಯಾರಿಗೂ ಸ್ಪಶ್ಟ ಉತ್ತರ ಗೊತ್ತಿಲ್ಲ. ಇಂತಹ ದಾವಂತದ ಜೀವನದಲ್ಲಿ ಜೀವನದ ಮೂಲದಾತು ಆಹಾರದ ಸಾರವನ್ನು ಸವಿಯುವುದನ್ನು ಮರೆತುಬಿಟ್ಟಿದ್ದಾರೆ ಜನ. ಆಹಾರವನ್ನು ಕೇವಲ ಸೇವಿಸಿದರೆ ಸಾಕೇ ಸವಿಯುವುದು ಬೇಡವೇ?

ಗಬಗಬನೆ ಎರಡು ತುತ್ತು ತಿಂದು ಹೊರಡುವುದು, ಯಾವುದೋ ಆತುರಕ್ಕೆ ಬಿದ್ದು ಹೊಟ್ಟೆ ತುಂಬಿಸಿಕೊಳ್ಳುವುದು, ಆಟೋ ಬಸ್ಸು ಅತವಾ ಕಾರಿನಲ್ಲಿ ಕಾಟಾಚಾರಕ್ಕೆ ತಿಂದು ಮುಗಿಸುವುದು,‌ ಮನಸನ್ನು ಮತ್ತೊಂದೆಡೆ ಬಿಟ್ಟು ತುತ್ತನ್ನು ಗಂಟಲಲ್ಲಿ ಇಳಿಸಿಕೊಳ್ಳುವುದು, ಏನು ತಿಂದೆವು ಎಂದು ತಮಗೆ ಅರಿವಿಲ್ಲದಂತೆ ತಿನ್ನುವುದು, ತಿನ್ನುವಾಗ ಮೊಬೈಲ್ ಎಂಬ ಮಾಯೆಯೊಳಗೆ ಮುಳುಗುವುದು – ಇದೆಲ್ಲಾ ಈಗ ಅತಿ ಸಾಮಾನ್ಯವಾಗಿಬಿಟ್ಟಿದೆ. ದಾವಂತದ ಜೀವನದಲ್ಲಿ ಆಹಾರ ಸವಿಯುವ ಸಾದ್ಯತೆ ಅತಿ ಕಡಿಮೆಯಾಗಿಬಿಟ್ಟಿದೆ.  “ಎಲ್ಲರೂ ತಿನ್ನುವವರೇ ಆದರೆ ಕೆಲವರು ಮಾತ್ರ ಸವಿಯುವವರು” ಎಂದು ಚೈನಾ ದೇಶದ ಕನ್ಪ್ಯೂಶಿಯಸ್ ಹೇಳುತ್ತಾರೆ.

“ಆಸ್ವಾದನೆಯ ಮೊಟ್ಟಮೊದಲ ಸಾಮಗ್ರಿ ಹಸಿವು, ಹಸಿವಿಲ್ಲದಿದ್ದರೆ ಎಲ್ಲಾ ಸಪ್ಪೆ” ಎಂದು ಕ್ಯಾತ ಆಹಾರ ತಗ್ನರಾದ ಕೆ ಸಿ ರಗು ಅವರು ಹೇಳುತ್ತಾರೆ. Hunger is the best sauce, Eat When You Are Hungry ಎಂಬಂತೆ ಹಸಿದು ಆಹಾರ ತಿಂದಾಗ ಆಹಾರದ ಸ್ವಾದ, ಮಹತ್ವ ಎಲ್ಲವೂ ಅರಿವಾಗುತ್ತದೆ. ಆಹಾರ ಸೇವನೆ ಮನಸಮ್ಮನಿಗೆ ಅರ‍್ಪಿತ. ನಮ್ಮ ಪಂಚೇಂದ್ರಿಯಗಳು ಆಹಾರ ಸವಿಯನ್ನು ಅನುಬವಿಸಬೇಕು. ಆಹಾರವನ್ನು ನೋಡಿದಾಗ ಅದರ ಅರ‍್ದ ಸೇವನೆಯಾದಂತೆ. ಚೊಕ್ಕವಾಗಿಟ್ಟುಕೊಂಡ ಕೈಯಿಂದ ತಿನ್ನಬೇಕು. ಚಮಚೆಗಳನ್ನು ಬದಿಗಿರಿಸಿ ಕೈಯಿಂದ ತಿನ್ನುವ ಮಜವೇ ಬೇರೆ. ಆಹಾರವು ನಮ್ಮ ಬಾಯಿ ಸೇರಿ, ನಾಲಿಗೆ ಮುಟ್ಟಿ, ಅಗಿದು ಜಗಿದು  ಅದರ ಸವಿಯನ್ನು ಸವಿದು “ಆಹಾ ಅದ್ಬುತ” ಎಂದು ಆಸ್ವಾದಿಸಿದಾಗಲೆ‌ ಆಹಾರಕ್ಕೆ ಮುಕ್ತಿ ಸಿಗುವುದು! ಆದ್ದರಿಂದ Don’t Eat The Food, Feel And Eat The Food. ನಿಮ್ಮ ಅಚ್ಚುಮೆಚ್ಚಿನ ಆಹಾರವನ್ನು ನೀವು  ಸವಿಯುವುದು ಹೀಗೆ ಅಲ್ಲವೇ?

ಮೊಸರನ್ನವನ್ನು ಪ್ರತಿನಿತ್ಯ ತಿಂದರೂ ಕೂಡ ಪ್ರತಿ ತುತ್ತನ್ನು ಸವಿಯುತ್ತಾ ತಿಂದರೆ ಅದರ ಸುಕವೇ ಬೇರೆ. “ಹಾಡು ಹಳೆಯದಾದರೂ ಬಾವ ನವನವೀನ” ಅಂದಿದ್ದು ಇದಕ್ಕೆನೇ! ಆಹಾರದ ಆಸ್ವಾದನೆಯ ನೆನಪು ನಮ್ಮ ಸ್ಮ್ರುತಿಪಟಲದಲ್ಲಿ ಸದಾ ಇರುತ್ತದೆ. ಎಶ್ಟೋ ಬಾರಿ ಮನೆಯಲ್ಲಿ ಊಟಕ್ಕೆ ಕೂರುವ ಮುನ್ನ “ಅಮ್ಮ ಏನು ಅಡುಗೆ ಇವತ್ತು?, ನಾಳೆ ಬೆಳಗ್ಗೆ ಏನು ತಿಂಡಿ?” ಎಂದು ಕೇಳುವ ಅಬ್ಯಾಸವಾಗಿರುತ್ತದೆ. ಊಟಕ್ಕೆ ಕೂರುವ ಮುನ್ನ ಇಂತದೇ ಅಡುಗೆ-ಆಹಾರ ಎಂದು ಗೊತ್ತಾಗಿಬಿಟ್ಟರೆ ಮನದಲ್ಲೇ ಆ ಆಹಾರವನ್ನು ಕಲ್ಪಿಸಿಕೊಂಡು ಚಪ್ಪರಿಸಿ ತಿಂದು ತೇಗಿ ಬಿಡುತ್ತೇವೆ. ಇದೊಂದು ತರಹದ ಅನುಬವ ತಿನ್ನುವುದಕ್ಕೆ ಮುನ್ನುಡಿಯಿದ್ದಂತೆ.

ಮಕ್ಕಳು ಇಂತ ರಸರುಚಿ ಸವಿಯುವುದರಲ್ಲಿ ಎತ್ತಿದ ಕೈ.‌ ಅವರಿಗೆ ಅಶ್ಟಾಗಿ ಒತ್ತಡವಿರದ ಕಾರಣ ಆಹಾರವನ್ನು ಆಸ್ವಾದಿಸುತ್ತಾರೆ, ಇಂತದೇ ಆಹಾರವನ್ನು ನೆನಪಿಟ್ಟುಕೊಂಡು ಮತ್ತದೇ ಆಹಾರಕ್ಕಾಗಿ ಹಾತೊರೆಯುತ್ತಾರೆ, ಹಟ ಮಾಡುತ್ತಾರೆ. ಆದರೆ ಇಂತಹ ಮಕ್ಕಳ ನಾಲಿಗೆಯ ಸ್ವಾದ ಕೋಶಗಳನ್ನು ನಾವು ಸರಿಯಾದ ರೀತಿಯಲ್ಲಿ ಸಿದ್ದಗೊಳಿದೆ‌ ಹಾಳುಗೆಡವುತ್ತಿದ್ದೇವೆ.‌ ನಮ್ಮ ನಾಲಿಗೆ 10 ಸಾವಿರ ರುಚಿಗಳನ್ನು ಆಸ್ವಾದಿಸುವ ಸ್ವಾದಕೋಶ ಹೊಂದಿದೆ. ಅಂತಹ ಸ್ವಾದಕೋಶಗಳನ್ನು ಅನವಶ್ಯಕ ಅನಗತ್ಯ ಆಹಾರಗಳ ಸೇವನೆಯಿಂದ ಹಂತಹಂತವಾಗಿ ನಾಶ ಮಾಡುತ್ತಿದ್ದೇವೆ. ಕೇವಲ ನಾಲಿಗೆಗೆ ರುಚಿ ತರಿಸುವ ಹಲವು ರಾಸಾಯನಿಕಗಳ ದಿನನಿತ್ಯದ ಬಳಕೆಯಿಂದ ಸ್ವಾದ ಕೋಶಗಳ ಮಾರಣಹೋಮ ಮಾಡುತ್ತಿದ್ದೇವೆ.

ಅದ್ಬುತವಾದ ಆಹಾರವನ್ನು ಸೇವಿಸುವಾಗಲೂ ಕೂಡ ಅದರ ಸವಿಯನ್ನು ಸವಿಯಲಾಗದ ಜೀವನಶೈಲಿ‌ಯನ್ನು ರೂಡಿಸಿಕೊಂಡಿದ್ದೇವೆ. ಟಿ ವಿ ನೊಡುತ್ತಾ, ಮೊಬೈಲ್ ನಲ್ಲಿ ಬರುವ ತುಣುಕುಗಳನ್ನು ನೋಡುತ್ತಾ ಊಟ ಮಾಡುವುದು ಅಬ್ಯಾಸ ಮಾಡಿಕೊಂಡಿದ್ದೇವೆ, ಆದರೆ ಇದು ಒಳ್ಳೆಯದಲ್ಲ.‌ ಇದರಿಂದ ಆಹಾರದ ಸವಿಯನ್ನು ಸರಿಯಾಗಿ ಸವಿಯಲಾಗುವುದಿಲ್ಲ.

“ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂಬ ಮಾತಿದೆ. ಅಂತದರಲ್ಲಿ ತಿನ್ನುವ ಆಹಾರವನ್ನೇ ನಾವು ಸಂತೋಶದಿಂದ ಸವಿಯದಿದ್ದರೆ, ಅದರ ಸವಿಯನ್ನು ಅನುಬವಿಸದಿದ್ದರೆ ಏನು ಪ್ರಯೋಜನ? ಸೇವಿಸುವುದರ ಜೊತೆಗೆ ಸವಿಯುವುದನ್ನು ಕಲಿಯಬೇಕು. ‘ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ’ ಎಂದು ಹೇಳಿದ್ದಾರೆ ಅಲ್ಲಮಪ್ರಬು. ಪಂಚೇಂದ್ರಿಯಗಳು ಆಸ್ವಾದಿಸುವ ಆಹಾರ ದೇಹಕ್ಕೊ, ಮನಸ್ಸಿಗೂ ಮುದ ನೀಡುವುದು.

( ಚಿತ್ರಸೆಲೆ : perkinselearning.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: