“ಮಾನವೀಯತೆ ಮರೆಯದಿರೋಣ, ಒಟ್ಟಿಗೆ ಬೆಳೆಯೋಣ”

ಸಂಜೀವ್ ಹೆಚ್. ಎಸ್.

ಒಂದಾಗಿರುವಿಕೆ, Unity

ಇತ್ತೀಚಿನ ದಶಕಗಳಲ್ಲಿ ಕ್ರುಶಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಜಗತ್ತು ಗಮನಾರ‍್ಹ ಪ್ರಗತಿಯನ್ನು ಸಾದಿಸಿದೆ. ಎಲ್ಲರಿಗೂ ಸಾಕಾಗುವಶ್ಟು ಹೆಚ್ಚು ಆಹಾರವನ್ನು ಉತ್ಪಾದಿಸುತ್ತಿದ್ದರೂ, ನಮ್ಮ ಆಹಾರ ವ್ಯವಸ್ತೆ ಸಮತೋಲನದಲ್ಲಿಲ್ಲ. ಹಸಿವು, ಪರಿಸರ ನಾಶ, ಕ್ರುಶಿ-ಜೈವಿಕ ವೈವಿದ್ಯತೆಯ ನಶ್ಟ, ಆಹಾರ ಸರಪಳಿಯ ಏರುಪೇರು ಈ ಅಸಮತೋಲನವನ್ನು ಎತ್ತಿ ತೋರಿಸುತ್ತದೆ. ಇಂತಹ ಸಂಕಶ್ಟವನ್ನು ಸುದಾರಿಸುವುದಕ್ಕಾಗಿ ‌ಹೆಣಗಾಡುತ್ತಿರುವ ಸಮಯದಲ್ಲಿ ಮಹಾಮಾರಿ ಕೊರೊನಾ ಬಂದು ಒಕ್ಕರಿಸಿ ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಮತ್ತಶ್ಟು ಜಟಿಲಗೊಳಿಸಿದೆ. ಮಹಾಮಾರಿಯ ಮರಣ ಮ್ರುದಂಗದ ಹೊಡೆತಕ್ಕೆ ಬೇರೆ ಎಲ್ಲಾ ಕ್ಶೇತ್ರಗಳು ಮಕಾಡೆ ಮಲಗಿದ್ದವು. ಆದರೆ ಇದರ ನಡುವೆಯೂ ಕೂಡ ಕ್ರುಶಿ ಕ್ಶೇತ್ರ ಸಕಾರಾತ್ಮಕವಾಗಿ ಸ್ಪಂದಿಸಿ ಶೇಕಡಾ 3.4% ನಶ್ಟು ಜಿಡಿಪಿಗೆ ತನ್ನ ಕೊಡುಗೆ ನೀಡಿದೆ. ಕ್ರುಶಿ ಕ್ಶೇತ್ರವನ್ನು ಕಡೆಗಣಿಸುತ್ತಿದ ಹಲವರಿಗೆ ಇದೊಂದು ಬೆರಗು. ಬೆಳವಣಿಗೆ ಎಂದರೆ ಕೇವಲ ಕಾರ‍್ಕಾನೆಗಳು ಆಟೋಮೊಬೈಲ್ಸ್ ಹೆದ್ದಾರಿ ಅಬಿವ್ರುದ್ದಿ ದೊಡ್ಡ ಕಟ್ಟಡಗಳು ಎಂದಶ್ಟೇ ತಿಳಿದಿದ್ದವರಿಗೆ ಕ್ರುಶಿ ಕ್ಶೇತ್ರದ ಮಹತ್ವ ಅರಿವಾಗತೊಡಗಿದೆ.‌

ಇಡೀ ದೇಶವೇ ಬಾಗಿಲು ಮುಚ್ಚಿ ಮನೆಯಲ್ಲಿ ಬೆಚ್ಚಗೆ ಇದ್ದಾಗಲೂ ಕೂಡ, ರೈತ ತನ್ನ ಹೊಲಗದ್ದೆಗಳಿಗೆ ಹೋಗುವುದನ್ನು ಬಿಡಲಿಲ್ಲ, ದಿನಸಿ ಅಂಗಡಿಯವರು ಅಂಗಡಿಗಳನ್ನು ತೆರೆದು ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸುವುದನ್ನು ಮರೆಯಲಿಲ್ಲ. ರೈತರು ಮತ್ತು ದಿನಸಿ ಅಂಗಡಿಯವರು, ಹಲವು ಅಡೆತಡೆಗಳ ನಡುವೆಯೂ ಆಹಾರವನ್ನು ಜಮೀನಿಂದ ತಿನ್ನುವವರ ತಟ್ಟೆಯನ್ನು ತಲುಪಿಸಿದ್ದಾರೆ. ಜಮೀನಿನಲ್ಲಿ ಕ್ರುಶಿಯಲ್ಲಿ ತೊಡಗುವ ರೈತ ಒಂದು ನೆಲ್ಲು ಚೆಲ್ಲಿ ರಾಶಿ ಬೆಳೆಯನ್ನು ಬೂಮಿ ತಾಯಿಂದ ಪಡೆಯುತ್ತಾನೆ. ಬೆಳೆದ ಬೆಳೆಯನ್ನು ಹಲವು ಗಟ್ಟಗಳಲ್ಲಿ ಪೋಶಿಸಿ ರಕ್ಶಿಸಿ ಸುರಕ್ಶಿತ ಮತ್ತು ಪೌಶ್ಟಿಕ ಆಹಾರವನ್ನು ಮನೆ ಮನೆಯ ಬಾಗಿಲಿಗೆ ತಲುಪಿಸುವಲ್ಲಿ ಕಾರ‍್ಮಿಕರ ಪಾತ್ರ ಬಲುದೊಡ್ಡದು, ಇವರೆಲ್ಲರೂ ಮಹಾನ್ ವೀರರೇ ಸರಿ. ಕೊರೋನದಂತಹ ಮಹಾಮಾರಿ ಬಂದರೂ ಕೂಡ ಇವರೆಲ್ಲರೂ ತಮ್ಮ ಜೀವನವನ್ನು ಪಣವಾಗಿಟ್ಟು ನಮ್ಮೆಲ್ಲರನ್ನು ಪೋಶಿಸುತ್ತಿದ್ದಾರೆ ಎಂದರೆ ಅತಿಶಯವಲ್ಲ.

ಆಹಾರ ಸರಪಳಿಯ ವ್ಯವಸ್ತೆಯಲ್ಲಿ ಇನ್ನೂ ದೊಡ್ಡ ಕಾರ‍್ಮಿಕವರ‍್ಗ ಕೈಜೋಡಿಸಿದೆ. ಇವರೆಲ್ಲರನ್ನು “ಆಹಾರ ವೀರರು”ಎಂದು ಕರೆದರೆ ತಪ್ಪೇನಿಲ್ಲ. ಆಹಾರವನ್ನು ವ್ಯರ‍್ತಮಾಡದೆ ನಮಗೆ ಎಶ್ಟು ಬೇಕೋ ಅಶ್ಟನ್ನು ಮಾತ್ರ ‌ಸೇವಿಸಿ ಮುಂದಿನ ಪೀಳಿಗೆಗೂ ಉಳಿಸಿ ಹೋಗುವುದು ನಮ್ಮ ಆದ್ಯ ಕರ‍್ತವ್ಯ. ಈಗಲೂ ಪ್ರಪಂಚದಾದ್ಯಂತ ಹಸಿವು ತಾಂಡವವಾಡುತ್ತಿವೆ, ನಾವು ವ್ಯರ‍್ತ ಮಾಡುವ ಅರ‍್ದದಶ್ಟು ಆಹಾರ, ಹಸಿದವರ ಸಮುದಾಯಕ್ಕೆ ವರ‍್ಶದ ಕೂಳು. ಈಗಾಗಲೇ ಬಡ ಮತ್ತು ದುರ‍್ಬಲ ಸಮುದಾಯಗಳು, ಸಾಂಕ್ರಾಮಿಕ‌ ರೋಗ ಮತ್ತು ಆರ‍್ತಿಕ ಆಗಾತಗಳಿಂದ ತೀವ್ರವಾಗಿ ತತ್ತರಿಸಿದ್ದಾರೆ. ಆದ್ದರಿಂದ ದಯವಿಟ್ಟು ಆಹಾರವನ್ನು ವ್ಯರ‍್ತ ಮಾಡಬೇಡಿ.

ಇದರ ಜೊತೆಜೊತೆಗೆ ಮತ್ತಶ್ಟು ಉತ್ತಮವಾದದ್ದನ್ನು ಮುಂದಿನ ಪೀಳಿಗೆಗೆ ನಿರ‍್ಮಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕೆ ಇದು ತಕ್ಕ ಸಮಯವು ಕೂಡ ಹೌದು. ಹಲವು ದೇಶಗಳು COVID-19 ಚೇತರಿಕೆ ಯೋಜನೆಗಳನ್ನು ಕಾರ‍್ಯಗತಗೊಳಿಸಲು ಪ್ರಾರಂಬಿಸಿರುವಾಗ, ವೈಜ್ನಾನಿಕ ಪುರಾವೆಗಳ ಆದಾರದ ಮೇಲೆ ಹೊಸ ಹೊಸ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಇದೊಂದು ಸದಾವಕಾಶ. ಸುದಾರಿತ ಸಾಮಾಜಿಕ ಸಂರಕ್ಶಣಾ ಯೋಜನೆಗಳು, ಡಿಜಿಟಲೀಕರಣ ಮತ್ತು ಇ-ಕಾಮರ‍್ಸ್ ನೀಡುವ ಹೊಸ ಅವಕಾಶಗಳು, ಇದರ ಜೊತೆಗೆ ನೈಸರ‍್ಗಿಕ ಸಂಪನ್ಮೂಲಗಳು, ನಮ್ಮ ಆರೋಗ್ಯ ಮತ್ತು ಹವಾಮಾನವನ್ನು ಕಾಪಾಡುವ ಹೆಚ್ಚು ಸುಸ್ತಿರ ಕ್ರುಶಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕಿದೆ.

ನಾವೆಲ್ಲರೂ ಆಹಾರ ವ್ಯವಸ್ತೆಯಲ್ಲಿ ಕೊಂಡಿಗಳು ಇದ್ದ ಹಾಗೆ. ಎಲ್ಲರಿಗೂ ಅವರದೇ ಆದ ಮಹತ್ತರ ಪಾತ್ರವಿದೆ. ಪಾತ್ರವರಿತು ಹೆಜ್ಜೆ ಇಡಬೇಕು. ಕೊಂಡಿ ಕಳಚಿದರೆ ಪೂರ‍್ತಿ ಸರಪಳಿಯೇ ಕಳಚುವುದು ನಿಶ್ಚಿತ. ಆಹಾರವು ಜೀವನದ ಮೂಲತತ್ವ, ನಮ್ಮ ಸಂಸ್ಕ್ರುತಿ ಮತ್ತು ಸಮುದಾಯಗಳ ತಳಪಾಯ. ಇಂತ ಆಹಾರ ಮತ್ತು ಆಹಾರ ಸರಪಳಿಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅಗಾದವಾದ ಸಾಮಾಜಿಕ ಜವಾಬ್ದಾರಿ ಇದೆ. ಮುಂಬರುವ ಸಮಸ್ಯೆಗಳು ಮತ್ತಶ್ಟು ಜಟಿಲ ಮತ್ತು ಕಟಿಣವಾಗಿರುತ್ತದೆ. ಅಂತಹ ಜಟಿಲ ಸಮಸ್ಯೆಗಳನ್ನು ಎದುರಿಸುವಲ್ಲಿ ಮಾನವ ಸಂಕುಲ ಒಟ್ಟಾಗಿ ಇರದಿದ್ದರೆ ಉಳಿಯುವುದು ಕಶ್ಟ. ಈ ಎಲ್ಲಾ ಸವಾಲುಗಳಿಗೆ ಉತ್ತರ “ರಕ್ಶಿಸುವುದು, ಉಳಿಸುವುದು, ಒಬ್ಬರಿಗೊಬ್ಬರು ಆಸರೆಯಾಗುವುದು, ಒಟ್ಟಾಗಿ ಬೆಳೆಯುವುದು”. ಆದ್ದರಿಂದ “ಮಾನವೀಯತೆ ಮರೆಯದಿರೋಣ, ಉಳಿಸೋಣ, ಒಟ್ಟಿಗೆ ಬೆಳೆಯೋಣ”

( ಚಿತ್ರಸೆಲೆ : cuinsight.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: