ಕವಿತೆ: ಒಮ್ಮೆ ನಿಂತು ನೋಡಿ
– ಬರತ್ ಎಂ.
ಕಾಣದ ಜೀವಿ ತಂದ
ಜೀವದ ಬಯವ
ಮನೆಯಂಚಿನ ಮಣ್ಣಲ್ಲೇ
ಕಳೆಯುತಿಹ ಮಾನವ
ಹಿಂಡಾಗಿ ಅಲೆದ ಕಾಲು
ಕಂಡದ್ದೆಲ್ಲ ಬೇಕೆಂದ ಮನ
ನರಳುತಿಹ ಪರಿಯ
ಒಮ್ಮೆ ನಿಂತು ನೋಡಿ
ದಾರಿದೀಪಕೆ ಗಾಳಿ ಹಾಡುತಿದ್ದ
ಲಾಲಿ ಕೇಳಿತು ಇಂದು
ನರರಾಟ ಇಲ್ಲದ ಹಾದಿಬೀದಿಗೆ
ಮೌನದೂಟವು ಇಂದು
ಜಗವ ತುಳಿಯುತ ಮೆರೆದ ಮನುಜಗೆ
ನರನಾಡಿಯಲ್ಲಿಯೂ ಸಾವಿನ ನಾದವೇ
ಅರಚುತಿರುವ ಪರಿಯ
ಒಮ್ಮೆ ನಿಂತು ನೋಡಿ
ಕಡಲ ಒಡಲಿಗೆ ಅಂದು
ಬೆಂಕಿ ಹಚ್ಚಿದ
ಇಂದು ತನ್ನತನದಲ್ಲೆ
ಬೆಂದು ತೀರುವ
ಅಂಚೇ ಇರದ ಸಂಚು ರೂಪಿಸಿಹ
ಕೊರೋನ ಕೆಂಡಕೆ ಬದುಕು
ಸುಡುತಿಹ ಪರಿಯ
ಒಮ್ಮೆ ನಿಂತು ನೋಡಿ
(ಚಿತ್ರ ಸೆಲೆ: pixabay)
?? nice one