ರಾಜಾ ರಾಮಣ್ಣ – ಹೆಮ್ಮೆಯ ನ್ಯೂಕ್ಲಿಯರ್ ಅರಿಮೆಗಾರ
1978 ರಲ್ಲಿ ಬಾರತದ ಕ್ಯಾತ ವಿಗ್ನಾನಿಯೊಬ್ಬರನ್ನು ಇರಾಕ್ ನ ಸರ‍್ವಾದಿಕಾರಿ ಸದ್ದಾಮ್ ಹುಸೇನ್ ಪ್ರವಾಸದ ನೆಪದಲ್ಲಿ ಬಾಗ್ದಾದ್ ಗೆ ಕರೆಸಿಕೊಳ್ಳುತ್ತಾರೆ. ಇದಕ್ಕೆ ತಗಲುವ ಕರ‍್ಚನ್ನೆಲ್ಲಾ ವಹಿಸಿಕೊಂಡ ಸದ್ದಾಮ್, ಆ ವಿಗ್ನಾನಿ ಇರಾಕ್ ನ ತುವೈತಾ ನ್ಯೂಕ್ಲಿಯರ್ ರಿಸೆರ‍್ಚ್ ಸೆಂಟರ್ ಹಾಗೂ ಬಾಗ್ದಾದ್ ನಗರ ನೋಡಿದ ಮೇಲೆ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಳ್ಳುತ್ತಾರೆ. ಅವರನ್ನು ಕಂಡು “ನಿಮ್ಮ ದೇಶಕ್ಕೆ ನೀವು ಸಾಕಶ್ಟು ದುಡಿದಿದ್ದೀರಿ. ಇಲ್ಲೇ ಇದ್ದು ಇರಾಕ್ ನ ನ್ಯೂಕ್ಲಿಯರ್ ಪರೀಕ್ಶೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ. ನೀವು ಕೇಳಿದಶ್ಟು ಹಣ ಕೊಡ್ತೀನಿ” ಎಂದು ಸದ್ದಾಮ್ ಹೇಳುತ್ತಾರೆ. ಇಂತಹ ಎದುರು ನೋಡದ ಗಟನೆಯಿಂದ ಆ ವಿಗ್ನಾನಿ ಸಹಜವಾಗಿಯೇ ಗಲಿಬಿಲಿಗೊಳ್ಳುತ್ತಾರೆ. ಮತ್ತೆ ನಾನು ದೇಶಕ್ಕೆ ಮರಳುತ್ತೇನೆಯೇ? ನನ್ನವರನ್ನು ನೋಡುತ್ತೇನೆಯೇ? ಎಂದು ಆ ರಾತ್ರಿಯೆಲ್ಲಾ ನಿದ್ರಿಸದೆ ಚಿಂತೆಯಲ್ಲೇ ಕಳೆಯುತ್ತಾರೆ. ಬಳಿಕ ಮಾರನೇ ದಿನವೇ ಮೊದಲ ವಿಮಾನ ಹಿಡಿದು ಬಾರತಕ್ಕೆ ಮರಳುತ್ತಾರೆ. ಹೀಗೆ ಸದ್ದಾಮ್ ಗೆ ಬೇಕಾಗಿದ್ದ ಆ ಕ್ಯಾತ ವಿಗ್ನಾನಿ ಬೇರ‍್ಯಾರೂ ಅಲ್ಲ, ಬಾರತದ ಮೊದಲ ನ್ಯೂಕ್ಲಿಯರ್ ಪರೀಕ್ಶೆ (1974), ‘ಆಪರೇಶನ್ ಸ್ಮೈಲಿಂಗ್ ಬುದ್ದ’ನ ರೂವಾರಿ ನಮ್ಮ ಹೆಮ್ಮೆಯ ಕನ್ನಡಿಗ ರಾಜಾ ರಾಮಣ್ಣ ಅವರು.
ಹುಟ್ಟು- ಎಳವೆಯ ಬದುಕು
ಕರ‍್ನಾಟಕದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನವರಿ 28, 1925 ರಲ್ಲಿ ಬಿ.ರಾಮಣ್ಣ ಹಾಗೂ ರುಕ್ಮಿಣಿಯಮ್ಮಅವರ ಮಗನಾಗಿ ಒಂದು ಪ್ರಬಾವಿ ಕುಟುಂಬದಲ್ಲಿ ರಾಜಾ ರಾಮಣ್ಣ ಹುಟ್ಟಿದರು. ತಂದೆ ರಾಮಣ್ಣ ಅವರು ಜಿಲ್ಲಾ ನ್ಯಾಯಾದೀಶರಾಗಿದ್ದರೆ ಅವರ ತಾಯಿ ರುಕ್ಮಿಣಿಯಮ್ಮ ಕೂಡ ಶಿಕ್ಶಿತರಾಗಿದ್ದರು. ತಂದೆ-ತಾಯಿ ಇಬ್ಬರಿಗೂ ಓದಿನ ಹೊರತಾಗಿ ಸಂಗೀತ, ಆಟೋಟ, ಪಿಲಾಸಪಿ ಹೀಗೆ ನಾನಾ ವಿಶಯಗಳ ಬಗ್ಗೆ ಒಲವಿತ್ತು. ಹಾಗಾಗಿ ಎಳವೆಯಿಂದಲೇ ರಾಜಾ ರಾಮಣ್ಣ ಅವರ ಮೇಲೆ ಹೆತ್ತವರ ಅಬಿರುಚಿಗಳ ಪ್ರಬಾವ ಬೀರಿತು. ಇವರಿಬ್ಬರ ಹೊರತಾಗಿ ಪುಟ್ಟ ವಯಸ್ಸಿನಲ್ಲಿ ಅವರ ಚಿಕ್ಕಮ್ಮ ರಾಜಮ್ಮ ಕೂಡ ರಾಜಾ ರಾಮಣ್ಣ ಅವರ ವ್ಯಕ್ತಿತ್ವ ರೂಪಿಸುವಲ್ಲಿ ಮುಕ್ಯ ಪಾತ್ರವಹಿಸಿದರು. ಸಣ್ಣ ವಯಸ್ಸಿನಲ್ಲೇ ವಿದವೆಯಾಗಿದ್ದ ರಾಜಮ್ಮ ಓದಿ 1930ರ ದಶಕದಲ್ಲಿ ಸರ‍್ಕಾರಿ ಶಾಲೆಯ ಮುಕ್ಯೋಪಾದ್ಯಾಯಿನಿಯಾಗಿ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು. ಎಳವೆಯಲ್ಲಿ ರಾಜಾ ರಾಮಣ್ಣರಿಗೆ ಅವರ ಚಿಕ್ಕಮ್ಮರ ಬಳಿ ಪುರಾಣ, ಪುಣ್ಯಕತೆಗಳನ್ನು ಕೇಳುವುದು ನೆಚ್ಚಿನ ಹವ್ಯಾಸವಾಗಿತ್ತು. ಮೈಸೂರಿನಲ್ಲಿ ಕೆಲವು ವರ‍್ಶಗಳು ಪ್ರಾತಮಿಕ ಶಿಕ್ಶಣ ಪಡೆದ ಮೇಲೆ ಅವರ ತಂದೆಯವರಿಗೆ ಬೆಂಗಳೂರಿಗೆ ವರ‍್ಗವಾಗುತ್ತದೆ. ಆಗ ಬೆಂಗಳೂರಿನ ಪ್ರತಿಶ್ಟಿತ ಬಿಶಪ್ ಕಾಟನ್ ಶಾಲೆಯಲ್ಲಿ ರಾಜಾ ರಾಮಣ್ಣ ತಮ್ಮ ಓದನ್ನು ಮುಂದುವರೆಸುತ್ತಾರೆ. ಜೊತೆಗೆ ಶಾಸ್ತ್ರೀಯ ಸಂಗೀತ ಕಲಿಕೆ ಕೂಡ ಮೊದಲು ಮಾಡುತ್ತಾರೆ. ಪಿಯಾನೋ ಅವರ ನೆಚ್ಚಿನ ಸಂಗೀತ ವಾದ್ಯವಾಗಿರುತ್ತದೆ. ಅದನ್ನು ನುಡಿಸುವುದನ್ನು ಆ ವಯಸ್ಸಿನಲೇ ಕರಗತ ಮಾಡಿಕೊಳ್ಳುತ್ತಾರೆ. ಒಳ್ಳೆಯ ವಿದ್ಯಾರ‍್ತಿಯಾಗಿದ್ದ ಅವರು, ಶಿಸ್ತಿಗೆ ಹೆಸರುವಾಸಿಯಾಗಿದ್ದ ಬಿಶಪ್ ಕಾಟನ್ ಶಾಲೆಯ ಕಲಿಕಾ ವ್ಯವಸ್ತೆಯಿಂದ ತಮ್ಮ ಬದುಕಿನಲ್ಲೂ ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ. ಇಂಗ್ಲಿಶ್ ಮಾದ್ಯಮಕ್ಕೆ ಬೇಗನೆ ಹೊಂದಿಕೊಂಡ ರಾಜಾ ರಾಮಣ್ಣನವರು ಮೊದಲ ದರ‍್ಜೆಯಲ್ಲಿ ತಮ್ಮ ಶಾಲಾ ಶಿಕ್ಶಣ ಪೂರೈಸುತ್ತಾರೆ. ಆ ಬಳಿಕ ಸೆಂಟ್ ಜೊಸೆಪ್ಸ್ ಕಾಲೇಜಿನಲ್ಲಿ ವಿಗ್ನಾನ ವಿಬಾಗದಲ್ಲಿ ಇಂಟರ‍್-ಮೀಡಿಯೇಟ್‌ನಲ್ಲೂ ಮೊದಲ ದರ‍್ಜೆಯಲ್ಲಿ ಪಾಸಾಗುತ್ತಾರೆ.
ಪದವಿ ಶಿಕ್ಶಣ
ಮದ್ರಾಸ್ ನ ತಾಂಬರಮ್ ನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ಬಿ.ಎಸ್ಸಿ ಹಾನರ‍್ಸ್ ಪಿಸಿಕ್ಸ್ ನಲ್ಲಿ ಪದವಿ ಪಡೆದ ರಾಜಾ ರಾಮಣ್ಣನವರು ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಪಿಸಿಕ್ಸ್ ನಲ್ಲಿ ಎಮ್.ಎಸ್.ಸಿ ಪದವಿ ಪಡೆಯುತ್ತಾರೆ. ತಮ್ಮ ವ್ರುತ್ತಿ ಶಿಕ್ಶಣದ ಜೊತೆ ಸಂಗೀತ ಕಲಿಕೆಯನ್ನೂ ಮುಂದುವರೆಸಿದ್ದ ಅವರು ಮಾಸ್ಟರ್ ಆಪ್ ಮ್ಯೂಸಿಕ್ ಪದವಿಯನ್ನು ಮ್ಯೂಸಿಕ್ ತಿಯರಿ ವಿಶಯದಲ್ಲಿ ಪಡೆಯುತ್ತಾರೆ. ತಮ್ಮ ವ್ರುತ್ತಿ ಶಿಕ್ಶಣದಾದ್ಯಂತ ಮೊದಲ ದರ‍್ಜೆಯಲ್ಲಿ ಪಾಸಾಗಿದ್ದ ಅವರಿಗೆ ಕಾಮನ್ ವೆಲ್ತ್ ಸ್ಕಾಲರ‍್ಶಿಪ್ ದೊರೆಯುತ್ತದೆ. ಆಗ ಕಿಂಗ್ಸ್ ಕಾಲೇಜ್ ನಲ್ಲಿ ‘ನ್ಯೂಕ್ಲಿಯರ್ ಪಿಸಿಕ್ಸ್’ ವಿಶಯದಲ್ಲಿ ಡಾಕ್ಟರೇಟ್ ಶಿಕ್ಶಣಕ್ಕೆ ಲಂಡನ್ ಗೆ ತೆರಳುತ್ತಾರೆ. ಆ ವೇಳೆ ಲಂಡನ್ ಗೆ ರಜೆಯನ್ನು ಕಳೆಯಲು ಬಂದಿದ್ದ ಬಾರತದ ಕ್ಯಾತ ವಿಗ್ನಾನಿ ಹೋಮಿ ಜಹಂಹಗೀರ್ ಬಾಬಾರನ್ನು ರಾಜಾ ರಾಮಣ್ಣ ಬೇಟಿಯಾಗುತ್ತಾರೆ. ಒಂದೇ ಬೇಟಿಯಲ್ಲಿಅವರ ಮೇಲೆ ಬಾಬಾ ಗಾಡವಾದ ಪ್ರಬಾವ ಬೀರುತ್ತಾರೆ. ರಾಜಾ ರಾಮಣ್ಣ ಅವರ ಅಳವನ್ನು ಬೇಗನೆ ಅರಿತ ಅವರು, ಯುವ ವಿಗ್ನಾನಿಗಳ ಅವಶ್ಯಕೆತೆ ಬಾರತಕ್ಕೆ ಬಹಳಶ್ಟಿದೆ ಎಂದು ಹೇಳಿ, ಆಗ ದೇಶದ ಆಟೋಮಿಕ್ ಶಕ್ತಿ ಹಮ್ಮುಗೆಯಾಗಿದ್ದ ‘Tata Institute of fundamental research’ (TIFR) ಸಂಸ್ತೆಯಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತಾರೆ. ತಮ್ಮ ಡಾಕ್ಟರೇಟ್ ಪದವಿ ಪಡೆದ ಕೂಡಲೇ ರಾಜಾ ರಾಮಣ್ಣನವರು ಬಾರತಕ್ಕೆ ಮರಳಿ ಹೋಮಿ ಬಾಬಾ ಅವರ ಮಾರ‍್ಗದರ‍್ಶನದಲ್ಲಿ ವಿಗ್ನಾನಿಯಾಗಿ ಬಾಂಬೆಯಲ್ಲಿ ತಮ್ಮ ವ್ರುತ್ತಿ ಬದುಕು ಮೊದಲು ಮಾಡುತ್ತಾರೆ.
ವಿಗ್ನಾನಿ ರಾಜಾ ರಾಮಣ್ಣ
ವಿಗ್ನಾಗಿಯಾಗಿ ನ್ಯೂಟ್ರಾನ್, ನ್ಯೂಕ್ಲಿಯರ್ ಹಾಗೂ ರಿಯಾಕ್ಟರ್ ಪಿಸಿಕ್ಸ್ ವಿಶಯಗಳಲ್ಲಿ ಅವರು ಸಾಕಶ್ಟು ಕೊಡುಗೆ ನೀಡಿದರು. 1956 ರಲ್ಲಿ ಬಾರತದ ಮೊದಲ ರಿಸರ‍್ಚ್ ರಿಯಾಕ್ಟರ್ ‘ಅಪ್ಸರಾ’ ಅನ್ನು ಹುಟ್ಟುಹಾಕುವಲ್ಲಿ ರಾಜಾ ರಾಮಣ್ಣರ ಪಾತ್ರ ದೊಡ್ಡದಿತ್ತು. ನ್ಯೂಟ್ರಾನ್ ತರ‍್ಮಲೈಸೇಶನ್ ಅನ್ನು ವಿವಿದ ನಿಯಮಗಳಡಿಯಲ್ಲಿ ಅರಕೆ ಮಾಡಿ ಅವರು ನೀಡಿದ ಪಲಿತಾಂಶಗಳು ಅಣು ವಿಗ್ನಾನಕ್ಕೆ ಹೊಸದೊಂದು ಆಯಾಮ ನೀಡಿತು. ನ್ಯೂಕ್ಲಿಯರ್ ಪಿಶನ್(Nuclear fission) ತಿಯರಿಯಲ್ಲಿ ‘fission fragment’ ಗಳ ನಡುವೆ ಆಗುವ ನ್ಯೂಕ್ಲಿಯಾನ್ ಬದಲಾವಣೆ, ಹಾಗೂ ಅಟಾಮಿಕ್ ಮತ್ತು ನ್ಯೂಕ್ಲಿಯರ್ ಬೈಂಡಿಂಗ್ ಶಕ್ತಿಗಳ ಕುರಿತು ಅವರ ಅರಕೆ ಅಣು ವಿಗ್ನಾನದಲ್ಲಿ ಮೈಲುಗಲ್ಲುಗಳಾದವು. ಈ ವಿಶಯದಲ್ಲಿ ಹಲವಾರು ಮೊದಲುಗಳಿಗೆ ಅವರು ಕಾರಣರಾದರು. ನಂತರ ಹಲವಾರು ಯುವ ವಿಗ್ನಾನಿಗಳಿಗೆ ಮಾರ‍್ಗದರ‍್ಶಕರಾದ ಅವರು ಅಳವುಳ್ಳ ವಿಗ್ನಾನಿಗಳನ್ನು ಗುರುತಿಸಿ ಮುನ್ನಲೆಗೆ ತಂದರು. ಎಮ್.ಆರ‍್ ಶ್ರೀನಿವಾಸನ್, ಬಿ.ವಿ. ಶ್ರೀಕಂಟನ್, ಹಾಗೂ ಕೆ.ಎಸ್ ಪಾರ‍್ತಸಾರತಿ ರಂತಹ ವಿಗ್ನಾನಿಗಳ ಕೆಲಸವನ್ನು ಹತ್ತಿರದಿಂದ ನೋಡಿ, ತಿದ್ದಿ, ಅವರನ್ನು ಹುರಿದುಂಬಿಸಿ ವಿಗ್ನಾನಿಗಳ ಒಂದು ತಂಡವನ್ನೇ ಕಟ್ಟಿ 1954 ರಲ್ಲಿ ಬಾಬಾ ಅಟಾಮಿಕ್ ರಿಸರ‍್ಚ್ ಸೆಂಟರ್ (BARC) ಗೆ ಕೊಡುಗೆಯಾಗಿ ನೀಡಿದರು. ಇಂದು ಈ ಸಂಸ್ತೆ ಇಶ್ಟು ದೊಡ್ಡ ಮಟ್ಟಕ್ಕೆ ಬೆಳೆದು ಪ್ರಪಂಚದಾದ್ಯಂತ ಹೆಸರು ಮಾಡಿರುವುದರ ಹಿಂದೆ ರಾಜಾ ರಾಮಣ್ಣರ ಶ್ರಮ ಬಹಳಶ್ಟಿದೆ.
ಆಪರೇಶನ್ ಸ್ಮೈಲಿಂಗ್ ಬುದ್ದ – ಬಾರತದ ಮೊದಲ ಪರಮಾಣು ಪರೀಕ್ಶೆ
ಬಾರತವನ್ನು ನ್ಯೂಕ್ಲಿಯರ್ ಶಕ್ತಿಯುಳ್ಳ ದೇಶವನ್ನಾಗಿ ಮಾಡುವಲ್ಲಿ ರಾಜಾ ರಾಮಣ್ಣ ಪ್ರಮುಕ ಪಾತ್ರ ವಹಿಸಿದರು. 1966 ರಲ್ಲೇ ಇದರ ರೂಪು ರೇಶೆಗಳನ್ನು ಆಲೋಚಿಸಿ ಪರೀಕ್ಶೆಯ ಸಾದಕ-ಬಾದಕಗಳು ಹಾಗೂ ಇದರಿಂದ ಮುಂದೆ ಬಾರತ ವಿಶ್ವ ಮಟ್ಟದಲ್ಲಿ ಎದುರಿಸಬಹುದಾದ ಕೇಳ್ವಿಗಳ ಬಗ್ಗೆ ಚೆನ್ನಾಗಿ ಅರಿತಿದ್ದರು. ಈ ಕಾರ‍್ಯಾಚರಣೆಯನ್ನು ಕೊನೆಯ ಹಂತದ ವರೆಗೂ ಅತ್ಯಂತ ಗೌಪ್ಯವಾಗಿಟ್ಟಿದ್ದರು. ಒಂದು ಬಗೆಯಲ್ಲಿ ಈ ನ್ಯೂಕ್ಲಿಯರ್ ಪರೀಕ್ಶೆ ಅವರ ಕನಸಿನ ಕೂಸಾಗಿತ್ತು. ಯಾರಿಗೂ ತೊಡಕು ಮಾಡದೆ ನಮ್ಮ ದೇಶದ ಅಳವನ್ನು ವಿಶ್ವ ಮಟ್ಟದಲ್ಲಿ ತೋರಿಸುವುದೇ ಈ ನ್ಯೂಕ್ಲಿಯರ್ ಪರೀಕ್ಶೆಯ ಉದ್ದೇಶ ಎಂದು ಎಲ್ಲರಿಗೂ ಮನದಟ್ಟು ಮಾಡಿಸಿ, ಪ್ರದಾನಿ ಇಂದಿರಾ ಗಾಂದಿಯವರಿಂದ ಪರವಾನಗಿ ಪಡೆದು, 1974 ರ ಮೇ 18 ರಂದು ರಾಜಸ್ತಾನದ ಪೋಕ್ರಾನ್ ನಲ್ಲಿ ನ್ಯೂಕ್ಲಿಯರ್ ಪರೀಕ್ಶೆಗೆ ಅವರು ಎಲ್ಲಾ ಏರ‍್ಪಾಡು ಮಾಡಿದರು. ಬಳಿಕ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಿ, ಬಲಿಶ್ಟ ದೇಶಗಳ ಸ್ಯಾಟಲೈಟ್ ಗಳ ಕಣ್ಣು ತಪ್ಪಿಸಿ ಬೂಮಿಯೊಳಗೆ ನ್ಯೂಕ್ಲಿಯರ್ ಪರೀಕ್ಶೆಯನ್ನು ಯಶಸ್ವಿಯಾಗಿ ಪೂರೈಸಿದರು. ಈ ಸಾದನೆ ಮಾಡಿದ ಕೆಲವೇ ಕೆಲವು ಶಕ್ತಿಶಾಲಿ ದೇಶಗಳ ಪಟ್ಟಿಗೆ ರಾಜಾ ರಾಮಣ್ಣರು ಬಾರತವನ್ನು ಸೇರಿಸಿ, ಬಾರತದಂತಹ ಬಡ ದೇಶಕ್ಕೆ ಇಂತಹ ಒಂದು ಅಳವು ಇದೆಯೇ ಎಂದೆಲ್ಲಾ ಚೇಡಿಸುತ್ತಿದ್ದ ದೇಶಗಳಿಗೆ ತಕ್ಕ ಉತ್ತರ ನೀಡಿದರು. ವಿಶ್ವ ಮಟ್ಟದಲ್ಲಿ ಈ ಪರೀಕ್ಶೆಗೆ ಟೀಕೆಗಳು ಕೇಳಿ ಬಂದಾಗ, “ನಾವೇಕೆ ನ್ಯೂಕ್ಲಿಯರ್ ಶಕ್ತಿಯುಳ್ಳ ದೇಶವಾಗಬಾರದು? ಪ್ರಾನ್ಸ್ ತನ್ನ 75% ವಿದ್ಯುತ್ ಅನ್ನು ಹಾಗೂ ಅಮೇರಿಕ 25% ವಿದ್ಯುತ್ ಅನ್ನು ನ್ಯೂಕ್ಲಿಯರ್ ಶಕ್ತಿಯಿಂದ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ನ್ಯೂಕ್ಲಿಯರ್ ವಿದ್ಯುತ್ ಇನ್ನೂ ಹೆಚ್ಚು ಮುನ್ನಲೆಗೆ ಬರಲಿದೆ. ಅದಕ್ಕಾಗಿ ನಾವು ಸಜ್ಜಾಗುತ್ತಿದ್ದೇವೆ. ನಾವೇಕೆ ಹಿಂದುಳಿಯಬೇಕು? ನಮ್ಮನ್ನು ಬಡ ದೇಶ ಎಂದು ಮೂದಲಿಸುವವರಿಗೆ ಇನ್ನಾದರೂ ನಮ್ಮ ಅಳವು ತಿಳಿಯಲಿ” ಎಂದು ಟೀಕೆಗಳಿಗೆ ಉತ್ತರಿಸುತ್ತಾರೆ. ಅವರ ಈ ದೂರದ್ರುಶ್ಟಿಯ ಪರಿಣಾಮವಾಗಿ ಸಾದಿಸಿದ ಈ ಹಿರಿಮೆ ಬಾರತದ ವಿಗ್ನಾನ ಕ್ಶೇತ್ರದಲ್ಲಿ ದೊಡ್ಡ ಮೈಲುಗಲ್ಲು ಎಂದೇ ಹೇಳಬೇಕು. ಇದರಿಂದ, ವಿಗ್ನಾನ ಕ್ಶೇತ್ರದಲ್ಲಿ ನಾವೂ ಏನನ್ನಾದರೂ ಸಾದಿಸಬಲ್ಲೆವು ಎಂಬ ತನ್ನಂಬಿಕೆ ಬಾರತಕ್ಕೆ ಬಂದದ್ದು ಸುಳ್ಳಲ್ಲ.
ರಾಜಾ ರಾಮಣ್ಣರ ವ್ರುತ್ತಿ ಬದುಕು
‘TFIR’ ನಲ್ಲಿ ವಿಗ್ನಾನಿಯಾಗಿ ತಮ್ಮ ವ್ರುತ್ತಿ ಬದುಕು ಆರಂಬಿಸಿದ ರಾಜಾ ರಾಮಣ್ಣ ತಮ್ಮ ಬದುಕಿನಾದ್ಯಂತ ಅನೇಕ ವೈಗ್ನಾನಿಕ ಸಂಸ್ತೆಗಳನ್ನು ಹುಟ್ಟು ಹಾಕುವುದರ ಜೊತೆಗೆ ಅದರ ಮುಂದಾಳ್ತನವನ್ನೂ ವಹಿಸಿದರು. ‘BARC’ ನ ಡೈರೆಕ್ಟರ್ (1972-78 ಮತ್ತು 1981-83). ರಕ್ಶಣಾ ಮಂತ್ರಿಯ ವೈಗ್ನಾನಿಕ ಸಲಹೆಗಾರರಾಗಿ. ಬಳಿಕ ‘DRDO’ ವಿನ ಡೈರೆಕ್ಟರ್ ಜೆನೆರಲ್ ಆಗಿ (1978-81) ದುಡಿದರು. ಅಟಾಮಿಕ್ ಎನರ‍್ಜಿ ಕಮಿಶನ್ ನ ಅದ್ಯಕ್ಶನಾಗಿ (1984-87) ಕೂಡ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಅವರೇ ಹುಟ್ಟು ಹಾಕಿದ ‘National Institute of Advanced Studies’ ನ ಮೊದಲ ಡೈರೆಕ್ಟರ್ ಆದ ಹೆಗ್ಗಳಿಕೆ ಕೂಡ ಅವರದೇ. IIT ಬಾಂಬೆಯ ಬೋರ‍್ಡ್ ಆಪ್ ಗವರ‍್ನರ‍್ಸ್ ನ ಅದ್ಯಕ್ಶರಾಗಿ (1972-78), ಬಳಿಕ ‘Indian National Science Academy’ ಯ ಅದ್ಯಕ್ಶ ರಾಗಿ(1977-78) ಈ ಸಂಸ್ತೆಗಳನ್ನು ಮುನ್ನಡೆಸಿದರು. 80 ರ ದಶಕದಲ್ಲಿ ಇಂಡೋರ್ ನ ‘Centre of Advanced Technology’ ಅನ್ನು ಹುಟ್ಟುಹಾಕುವಲ್ಲಿ ಹೆಚ್ಚು ಸಮಯ ಮೀಸಲಿಟ್ಟರು. ಲೇಸರ್ ಹಾಗೂ ಅಕ್ಸೆಲರೇಟರ್ ಗೆ ಸಂಬಂದಿಸಿದ ತಾಂತ್ರಿಕತೆಯನ್ನು ಸದ್ರುಡಗೊಳಿಸುವುದು ಇದರ ಉದ್ದೇಶವಾಗಿತ್ತು. ಕೋಲ್ಕತ್ತಾದ ‘Variable Energy Cyclotron Centre’ (VEC) ವನ್ನು ಹುಟ್ಟು ಹಾಕಿದರು. ಅಂತರಾಶ್ಟ್ರೀಯ ಅಟಾಮಿಕ್ ಎನರ‍್ಜಿ ಏಜೆನ್ಸಿಯ 30ನೇ ಜೆನೆರಲ್ ಕಾನ್ಪರೆನ್ಸ್ ನ (1986) ಅದ್ಯಕ್ಶರಾದ ಹೆಗ್ಗಳಿಕೆ ಕೂಡ ಇವರದಾಯಿತು. ನಂತರ ವಿ.ಪಿ ಸಿಂಗ್ ರ ಮಂತ್ರಿ ಮಂಡಲದಲ್ಲಿ ಕೇಂದ್ರ ರಕ್ಶಣಾ ಸಚಿವ(ರಾಜ್ಯ) ಮಂತ್ರಿಯಾಗಿದ್ದರು (1990). ಮೊದಲ ‘National Security Advisory Board’ ನ ಸದಸ್ಯ ಆಗಿದ್ದರು. ಬಳಿಕ 1997-2003 ರ ಅವದಿಯಲ್ಲಿ ರಾಜ್ಯಸಬಾ ಸದಸ್ಯರು ಕೂಡ ಆಗಿದ್ದರು. ಹೀಗೆ ದಶಕಗಳ ಕಾಲ ಬಿಡುವಿಲ್ಲದೆ ಹಲವಾರು ವೈಗ್ನಾನಿಕ ಸಂಸ್ತೆಗಳಲ್ಲಿ ದುಡಿದ ರಾಜಾ ರಾಮಣ್ಣ ಕೆಲವು ಆವಿಶ್ಕಾರಗಳಿಗೆ ಸಾಕ್ಶಿಯಾದರು. ಯಾವ ಕೆಲಸ ಕೈಗೆತ್ತಿಕೊಂಡರೂ ಹುಮ್ಮಸ್ಸಿನಿಂದ ದುಡಿದು, ಮಾರ‍್ಗದರ‍್ಶಕರಾಗಿ ತಮ್ಮ ಸಹೋದ್ಯೋಗಿಗಳನ್ನೂ ಹುರಿದುಂಬಿಸಿ ಕಾರ‍್ಯ ಸಾದಿಸುತ್ತಿದ್ದರು. ಅವರ ಗರಡಿಯಲ್ಲಿ ಪಳಗಿದ ವಿಗ್ನಾನಿಗಳು ಈಗಲೂ ಸಹ ಈ ವಿಚಾರವಾಗಿ ರಾಜಾ ರಾಮಣ್ಣರ ಬಗ್ಗೆಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
ಸಂಗೀತ ಕ್ಶೇತ್ರದಲ್ಲಿ ರಾಜಾ ರಾಮಣ್ಣ
ಎಳವೆಯಿಂದಲೇ ಸಂಗೀತದ ಗೀಳು ಹಚ್ಚಿಕೊಂಡಿದ್ದ ರಾಜಾ ರಾಮಣ್ಣ ವ್ರುತ್ತಿಪರರಂತೆ ಪರಿಣಿತಿ ಹೊಂದಿದ್ದರು. ಸಂಸ್ಕ್ರುತ ಸಾಹಿತ್ಯದ ಅರಿವೂ ಇದ್ದ ಅವರು ಬಹುಮುಕ ಪ್ರತಿಬೆ ಎಂದೇ ಹೇಳಬೇಕು. ಶಾಸ್ತ್ರೀಯ ಸಂಗೀತದ ಜೊತೆ ಯೂರೇಪಿಯನ್ ಸಂಗೀತ ಕೂಡ ಅಬ್ಯಾಸ ಮಾಡಿ ಅದರಲ್ಲಿಯೂ ಪದವಿ ಪಡೆದ್ದಿದ್ದರು. ಆರನೇ ವಯಸ್ಸಿಗೆ ಪಿಯಾನೋ ಕಲಿಕೆ ಮೊದಲು ಮಾಡಿದ್ದ ಅವರು 1937 ರಲ್ಲಿ ಹನ್ನೆರಡು ವರುಶದ ಹುಡುಗನಾಗಿದ್ದಾಗಲೇ ಮೈಸೂರಿನ ಜಗನ್ ಮೋಹನ್ ಅರಮನೆಯ ಸಂಗೀತ ಕಚೇರಿಯಲ್ಲಿ ಪಿಯಾನೋ ನುಡಿಸಿ ನಾಲ್ವಡಿ ಕ್ರಿಶ್ಣರಾಜ ವಡೆಯರ್ ರಿಂದ ಮೆಚ್ಚುಗೆ ಗಳಿಸಿ ಪಾರಿತೋಶಕ ಪಡೆದ್ದಿದ್ದರು. ನಂತರ ದೊಡ್ಡ ವಿಗ್ನಾನಿಯಾದ ಮೇಲೂ ಸಂಗೀತದಿಂದ ಅವರು ಎಂದೂ ದೂರವಾಗಲಿಲ್ಲ. ರಾಯಲ್ ಸ್ಕೂಲ್ ಆಪ್ ಮ್ಯೂಸಿಕ್, ಲಂಡನ್ ನಿಂದ ಪಿಯಾನೋ ಪರವಾನಗಿ ಪಡೆದು, ನುರಿತ ಪಿಯೋನಾಕಾರರಾಗಿದ್ದ ಅವರು ಬಿಡುವು ಮಾಡಿಕೊಂಡು ಆಗಾಗ ತಮ್ಮ ಪಿಯಾನೋ ಕಚೇರಿಗಳನ್ನು ನೀಡುತ್ತಿದ್ದರು. ನಂತರ ‘ಬೆಂಗಳೂರು ಸ್ಕೂಲ್ ಆಪ್ ಮ್ಯೂಸಿಕ್’ ಜೊತೆ ಗುರುತಿಸಿಕೊಂಡು ಅಳವುಳ್ಳ ಯುವ ಸಂಗೀತಗಾರರಿಗೆ ಮಾರ‍್ಗದರ‍್ಶನ ನೀಡುತ್ತಿದ್ದರು. ಅವರ ಆತ್ಮಕತೆ ‘Years of Pilgrimage’ ನಂತರ ಸಂಗೀತದ ಕುರಿತು ‘The structure of Music in Raga and Western Systems’ ಎಂಬ ವಿಶೇಶ ಹೊತ್ತಗೆ ಬರೆದರು. ಒಬ್ಬ ಮೇರು ವಿಗ್ನಾನಿ ವ್ರುತ್ತಿಪರ ಸಂಗೀತದ ಬಗ್ಗೆ ಹೊತ್ತಗೆ ಹೊರತಂದದ್ದು ರಾಜಾ ರಾಮಣ್ಣರ ಸಂಗೀತ ಚಳಕದ ಎತ್ತುಗೆ ಎಂದೇ ಹೇಳಬೇಕು.
ರಾಜಾ ರಾಮಣ್ಣರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು
ವಿಗ್ನಾನಿಯಾಗಿ ಅದ್ವಿತೀಯ ಸಾದನೆಗೈದ ಅವರಿಗೆ ಹಲವಾರು ಪ್ರತಿಶ್ಟಿತ ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದವು. 1963 ರಲ್ಲಿ ಶಾಂತಿ ಸ್ವರೂಪ್ ಬಟ್ನಾಗರ್ ವಿಗ್ನಾನ ಪ್ತಶಸ್ತಿ, 1968 ರಲ್ಲಿ ಬಾರತ ಸರ‍್ಕಾರದ ಪದ್ಮಶ್ರೀ, 1973 ರಲ್ಲಿ ಪದ್ಮಬೂಶಣ ಹಾಗೂ 1975 ರಲ್ಲಿ ಪದ್ಮವಿಬೂಶಣ ಪ್ರಶಸ್ತಿಗಳು ರಾಜಾ ರಾಮಣ್ಣರಿಗೆ ದೊರೆತವು. ‘Indian National Science Academy’ಯ ಮೇಗನಾದ್ ಸಾಹಾ ಪದಕ (1984); R.D ಮೆಮೋರಿಯಲ್ ಪ್ರಶಸ್ತಿ (1985/86); ಆಶುತೋಶ್ ಮುಕರ‍್ಜಿ ಚಿನ್ನದ ಪದಕ (1996) ಹಾಗೂ ಪ್ರಪಂಚದ ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಡೆದರು. 70 ರ ದಶಕದಲ್ಲೇ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮವಿಬೂಶಣಕ್ಕೆ ಬಾಜನರಾಗಿದ್ದ ಅವರಿಗೆ ‘ಬಾರತ ರತ್ನ’ ಪ್ರಶಸ್ತಿ ಸಿಗದೇ ಹೋದದ್ದು ದೊಡ್ಡ ದುರಂತ. ಅವರು ನಿಜಕ್ಕೂ ಬಾರತ ರತ್ನಕ್ಕೆ ಅರ‍್ಹರಾಗಿದ್ದರು. ಅವರೊಟ್ಟಿಗೆ ಕೆಲಸ ಮಾಡಿದ, ಮಾರ‍್ಗದರ‍್ಶನ ಪಡೆದು ಶ್ರೇಶ್ಟ ವಿಗ್ನಾನಿಗಳಾಗಿ ಬೆಳೆದ ಹಲವರು, ರಾಜಾ ರಾಮಣ್ಣರಿಗೆ ಎಂದೋ ‘ಬಾರತ ರತ್ನ’ ಸಿಗಬೇಕಿತ್ತು ಎಂದೇ ಹೇಳುತ್ತಾರೆ. ಈ ನಿಟ್ಟಿನಲ್ಲಿ ಯಾವ ಸರ‍್ಕಾರವೂ ಕಿವಿಗೊಡದಿದ್ದು ನಿಜಕ್ಕೂ ಬೇಸರದ ವಿಶಯ.
ರಾಜಾ ರಾಮಣ್ಣರ ಬಗ್ಗೆ ಮೇರು ವಿಗ್ನಾನಿಗಳ ಅನಿಸಿಕೆ
ಬಾರತದ ಮಿಸೈಲ್ ಮ್ಯಾನ್ ಎಂದೇ ಪ್ರಕ್ಯಾರತರಾಗಿದ್ದ ಮಾಜಿ ರಾಶ್ಟ್ರಪತಿ APJ ಅಬ್ದುಲ್ ಕಲಾಮ್ ತಮ್ಮ ‘Wings of fire’ ಹೊತ್ತಗೆಯಲ್ಲಿ ರಾಜಾ ರಾಮಣ್ಣರ ಬಗ್ಗೆ ಸಾಕಶ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಏನೇ ಕೆಲಸ ಕೈಗೆತ್ತಿಕೊಂಡರೂ ಅದನ್ನು ಸಾದಿಸುವ ತನಕ ಅವರು ಬಿಡುತ್ತಿರಲಿಲ್ಲ. ನಮಗೆಲ್ಲಾ ಅವರು ಸ್ಪೂರ‍್ತಿಯ ಸೆಲೆ. ಯುವ ವಿಗ್ನಾನಿಯಾಗಿ ಅವರ ಮಾರ‍್ಗದರ‍್ಶನದಲ್ಲಿ ನಾನು ಸಾಕಶ್ಟು ಕಲಿತೆ” ಎಂದು ಅಬ್ದುಲ್ ಕಲಾಮ್ ಹೇಳಿದ್ದಾರೆ. ಅಟಾಮಿಕ್ ಎನರ‍್ಜಿ ಕಮಿಶನ್ ನ ಅದ್ಯಕ್ಶರಾಗಿದ್ದ ವಿಗ್ನಾನಿ ಪಿ.ಕೆ. ಅಯ್ಯಂಗಾರ್ ಅವರು “ಇಂದು ಬಾರತ ನ್ಯೂಕ್ಲಿಯರ್ ಸೈನ್ಸ್ ನಲ್ಲಿ ಮುಂದುವರೆದ ದೇಶವಾಗಿ ಬೆಳೆದಿದೆ ಎಂದರೆ ಅದರ ಸಂಪೂರ‍್ಣ ಶ್ರೇಯ 1950ರ ದಶಕದಲ್ಲೇ ಅರಕೆ ಮೊದಲು ಮಾಡಿ ಬಾರತವನ್ನು ವಿಗ್ನಾನದೆಡೆಗೆ ಕೊಂಡೊಯ್ದ ದಿಗ್ಗಜ ರಾಜಾ ರಾಮಣ್ಣರಿಗೆ ಸಲ್ಲಬೇಕು” ಎಂದು ಹೇಳಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಿದ ಪಾರ‍್ತಸಾರತಿ ಅವರ ಪ್ರಕಾರ ರಾಜಾ ರಾಮಣ್ಣ ಎಂತಹ ಕ್ಲಿಶ್ಟಕರ ಸಮಯದಲ್ಲೂ ಎದೆಗುಂದುತ್ತಿರಲಿಲ್ಲ. ತಾಳ್ಮೆಯಿಂದ ಸಮಸ್ಯೆಯನ್ನು ಅರಿತು ಅದನ್ನು ಬಿಡಿ ಬಿಡಿಯಾಗಿಸಿ ಪರಿಹಾರ ಕಂಡುಕೊಳ್ಳುತ್ತಿದ್ದರಂತೆ. ಅವರ ನಾಯಕತ್ವದ ಗುಣ ನಮ್ಮನ್ನೆಲ್ಲಾ ಪರಿಪಕ್ವ ವಿಗ್ನಾನಿಗಳನ್ನಾಗಿ ಮಾಡಿತು ಎಂದು ಹೇಳಿದ್ದಾರೆ.
ಕನ್ನಡಿಗ ರಾಜಾ ರಾಮಣ್ಣ ಬಾರತದ ಹೆಮ್ಮೆ
ಡಾಕ್ಟರೇಟ್ ಪದವಿಯ ಬಳಿಕ ಇಂಗ್ಲೆಂಡ್ ನಲ್ಲಿ ನೆಲೆಸುವ ಅವಕಾಶವಿದ್ದರೂ ಹೋಮಿ ಬಾಬಾ ಹಾಗೂ ನೆಹರೂ ಅವರಿಂದ ಪ್ರಬಾವಿತರಾಗಿದ್ದ ರಾಜಾ ರಾಮಣ್ಣ ಅವರು ಬಾರತಕ್ಕೆ ಮರಳಿ ದೇಶದ ನ್ಯೂಕ್ಲಿಯರ್ ವಿಗ್ನಾನದ ಬೆಳವಣಿಗೆಯ ನೊಗ ಹೊತ್ತರು. ಬಾರತ ಬಲಿಶ್ಟ ದೇಶಗಳೆದರು ಸ್ವಾಬಿಮಾನದಿಂದ ತಲೆ ಎತ್ತಿ ನಿಲ್ಲುವಂತಹ ಕೊಡುಗೆ ನೀಡಿದರು. ಸುಮಾರು ಐದು ದಶಕಗಳ ಕಾಲ ವಿಗ್ನಾನಿಯಾಗಿ ಬಿಡುವಿಲ್ಲದೆ ಬಾರತಕ್ಕಾಗಿ ದುಡಿದ ರಾಜಾ ರಾಮಣ್ಣ 2004 ರ ಸೆಪ್ಟಂಬರ್ 24 ರಂದು ಮುಂಬೈನಲ್ಲಿ ಹ್ರುದಯಾಗಾತದಿಂದ ನಮ್ಮನ್ನೆಲ್ಲಾ ಅಗಲಿದರು. ವಿಗ್ನಾನ ಲೋಕದ ಒಂದು ಕೊಂಡಿ ಅಂದಿಗೆ ಕಳಚಿತು. ಅವರ ನೆನಪಿಗಾಗಿ ಅವರೇ ಇಂಡೋರ್ ನಲ್ಲಿ ಹುಟ್ಟುಹಾಕಿದ್ದ ‘Centre of Advanced Technology’ ಅನ್ನು ‘Raja Ramanna Centre of Advanced Technology’ ಎಂದು ಬಾರತ ಸರ‍್ಕಾರ ಮರು ಹೆಸರಿಸಿತು. ಹೀಗೆ ನ್ಯೂಕ್ಲಿಯರ್ ವಿಗ್ನಾನದಲ್ಲಿ ಹಲವಾರು ಮೊದಲುಗಳಿಗೆ ಸಾಕ್ಶಿಯಾಗಿ ಪ್ರಪಂಚದಾದ್ಯಂತ ಹೆಸರು ಗಳಿಸಿದ್ದ ನಮ್ಮ ಕನ್ನಡಿಗ ರಾಜಾ ರಾಮಣ್ಣರ ಬಗ್ಗೆ ಕನ್ನಡಿಗರಿಗೇ ಹೆಚ್ಚು ತಿಳಿಯದಿರೋದು ದುರದ್ರುಶ್ಟಕರ. ಅಂತಹ ಮೇರು ಸಾದನೆಗೈದ ನಮ್ಮ ವಿಗ್ನಾನಿ ಕನ್ನಡ ಸಮಾಜದಲ್ಲಿ ಎಲೆಮರೆಯ ಕಾಯಿಯಾಗಿರೋದು ನಮ್ಮ ವ್ಯವಸ್ತೆಯ ವೈಪಲ್ಯವನ್ನು ತೋರಿಸುತ್ತದೆ. ಇಂದಿನ ಪೀಳಿಗೆಯ ಕನ್ನಡದ ಮಕ್ಕಳಿಗೆ ರಾಜಾರಾಮಣ್ಣರ ಹೆಸರೂ ಕೂಡ ತಿಳಿದಿಲ್ಲ. ಹಾಗಾಗಿ ನಮ್ಮ ನಾಡಿನ ಇಂತಹ ಮೇರು ಸಾದಕರ ಕುರಿತು ಅರಿವು ಮೂಡಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಹೊಣೆ ರಾಜ್ಯ ಸರ‍್ಕಾರದ ಜೊತೆಗೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಅದೇ ನಾವು ನಿಸ್ವಾರ‍್ತವಾಗಿ ಬಾರತಕ್ಕಾಗಿ ದುಡಿದ ಇಂತಹ ಮೇರು ವ್ಯಕ್ತಿತ್ವದ ವಿಗ್ನಾನಿ, ಸಂಗೀತಕಾರ ರಾಜಾ ರಾಮಣ್ಣರಿಗೆ ನೀಡಬಹುದಾದ ಗೌರವ.
(ಸೆಲೆ: wikipedia.org)
ಬಹಳ ಸೊಗಸಾಗಿ ವಿವರಿಸಿದ್ದೀರಿ?
ಚೆನ್ನಾಗಿದೆ ?? ?? ನಮ್ಮ ಹೆಮ್ಮೆಯ ವಿಜ್ಞಾನಿ ರಾಜ ರಾಮಣ್ಣ ರವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ ರಾಮು ಅವರೆ. ? ಒಳ್ಳೆಯದಾಗಲಿ.
ಒಳ್ಳೆಯ ಮಾಹಿತಿ 😉