ಆದಯ್ಯನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಆದಯ್ಯ
ಕಾಲ: ಕ್ರಿ.ಶ.12ನೆಯ ಶತಮಾನ
ಊರು: ಸೌರಾಶ್ಟ್ರದಿಂದ ಪುಲಿಗೆರೆಗೆ ಬಂದು ನೆಲೆಸಿದರು
ದೊರೆತಿರುವ ವಚನಗಳು: 401
ಅಂಕಿತನಾಮ: ಸೌರಾಷ್ಟ್ರ ಸೋಮೇಶ್ವರ

ತನಗೊಬ್ಬರು ಮುನಿದರು
ತಾನಾರಿಗೂ ಮುನಿಯಲಾಗದು
ಮನೆಯ ಕಿಚ್ಚು ಮೊದಲೊಮ್ಮೆ
ಮನೆಯ ಸುಡುವಂತೆ
ತನ್ನ ಕೋಪ ತನ್ನನೆ ಸುಡುವುದು ನೋಡಯ್ಯ. (938-1039)

ತನಗೆ+ಒಬ್ಬರು; ಮುನಿ=ಸಿಟ್ಟಾಗು/ಕೋಪಗೊಳ್ಳು; ತಾನ್+ಆರಿಗೂ; ಆರಿಗೂ=ಯಾರಿಗೂ/ಯಾರೊಬ್ಬರಿಗೂ; ಮುನಿ+ಅಲ್+ಆಗದು; ಕಿಚ್ಚು=ಬೆಂಕಿ/ಅಗ್ನಿ; ಮೊದಲ್+ಒಮ್ಮೆ; ಮನೆಯ ಕಿಚ್ಚು=ಮನೆಯೊಳಗೆ ಹತ್ತಿಕೊಂಡ ಬೆಂಕಿ; ಮೊದಲೊಮ್ಮೆ=ಶುರುವಿನಲ್ಲಿ;

ಸುಡು+ಅಂತೆ; ಸುಡು=ಸುಟ್ಟುಹಾಕು/ದಹಿಸು/ಬೇಯಿಸು; ಅಂತೆ=ಹಾಗೆ/ಆ ರೀತಿ; ತನ್ನ=ವ್ಯಕ್ತಿಯಲ್ಲಿ ಉಂಟಾದ; ಕೋಪ=ಸಿಟ್ಟು/ಆಕ್ರೋಶ; ತನ್ನನ್ನೇ=ವ್ಯಕ್ತಿಯನ್ನೇ; ನೋಡು+ಅಯ್ಯಾ; ನೋಡು=ಕಾಣು; ಅಯ್ಯಾ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ವ್ಯಕ್ತಿಯು ಮಾಡುವ ಕೆಲಸಕ್ಕೆ ಅಡೆತಡೆಯುಂಟಾದಾಗ, ಆಸೆಪಟ್ಟ ಒಡವೆ ವಸ್ತುಗಳು ಕಯ್ ತಪ್ಪಿಹೋದಾಗ ಮತ್ತು ಇನ್ನಿತರ ನೂರೆಂಟು ಬಗೆಯ ಕಾರಣಗಳಿಂದ ವ್ಯಕ್ತಿಯ ಮನದಲ್ಲಿ ಕೆರಳುವ ಒಳಮಿಡತವೇ ಕೋಪ.

ಕೋಪವೆಂಬುದು ವ್ಯಕ್ತಿಗೆ ತನ್ನಲ್ಲಿಯೇ ಉಂಟಾಗಲಿ ಇಲ್ಲವೇ ಬೇರೆಯವರಲ್ಲಿ ಉಂಟಾಗಲಿ, ಅದಕ್ಕೆ ಗುರಿಯಾಗಿ ಆಕ್ರೋಶಗೊಂಡು ಬಯ್ಯುವುದರಿಂದ ಇಲ್ಲವೇ ಅವರ ಮಯ್ ಮೇಲೆ ಹಲ್ಲೆಮಾಡುವುದರಿಂದ ಇನ್ನೂ ಹೆಚ್ಚಿನ ಹಾನಿ ಉಂಟಾಗುತ್ತದೆ. ಮನೆಯೊಳಗೆ ಹತ್ತಿಕೊಂಡ ಬೆಂಕಿ ಹೇಗೆ ಮನೆಯನ್ನು ಸುಟ್ಟು ಅನಂತರ ನೆರಮನೆಗೆ ಹಬ್ಬುವುದೋ ಅಂತೆಯೇ ಕೋಪವೆಂಬುದು ವ್ಯಕ್ತಿಯ ಮನದಲ್ಲಿ ಹುಟ್ಟಿ ಬಹುಬಗೆಯ ಆಕ್ರೋಶ, ಆತಂಕ, ಆವೇಶ , ಅಂಜಿಕೆ ಮತ್ತು ತಲ್ಲಣಗಳನ್ನುಂಟು ಮಾಡಿ ಬೇರೆಯವರಿಗೆ ಹಾನಿಯನ್ನುಂಟುಮಾಡುವುದಕ್ಕಿಂತ ಹೆಚ್ಚಾಗಿ ತನ್ನ ಬದುಕಿಗೆ ಕೇಡನ್ನುಂಟುಮಾಡುತ್ತದೆ.

ಕಳೆದ ಎರಡು ವರುಶಗಳ ಹಿಂದೆ ನಾನು ಕೇರಳಕ್ಕೆ ಹೋಗಿದ್ದಾಗ, ಅಲ್ಲಿ ಒಂದು ಊರಿನಲ್ಲಿ ನಡೆದ ಪ್ರಸಂಗವಿದು. ಹೋಟೆಲ್ ಮುಂದುಗಡೆ ನಿಲ್ಲಿಸಿದ್ದ ಒಂದು ಕಾರನ್ನು ಹಿಂತೆಗೆಯುತ್ತಿದ್ದಾಗ, ಮತ್ತೊಂದು ಕಾರಿನ ಒಡೆಯನ ಜತೆಯಲ್ಲಿ ಉಂಟಾದ ಸಣ್ಣ ಜಗಳವೊಂದು ದೊಡ್ಡದಾಗಿ ಎರಡು ಕಾರಿನ ಒಡೆಯರು ಕೋಪದಿಂದ ಅರಚುತ್ತ ,ಬಯ್ದಾಡುತ್ತ, ಒಬ್ಬ ಜೋರಾಗಿ ಮತ್ತೊಬ್ಬನನ್ನು ದೂರ ತಳ್ಳಿದಾಗ, ಆತ ರಸ್ತೆಯಲ್ಲಿ ಬೀಳುತ್ತಿದ್ದಂತೆಯೇ ಅದೇ ಸಮಯಕ್ಕೆ ವೇಗವಾಗಿ ಬಂದ ಲಾರಿಯೊಂದು ಹರಿದು, ಆತ ಸಾವನ್ನಪ್ಪಿದ. ವ್ಯಕ್ತಿಯನ್ನು ರಸ್ತೆಗೆ ತಳ್ಳಿ ತಲೆಮರೆಸಿಕೊಂಡಿದ್ದ ವ್ಯಕ್ತಿಯು ಒಂದು ವಾರದ ನಂತರ ಕಾನೂನು ಕಟ್ಟಲೆಗೆ ಹೆದರಿ ಇಲ್ಲವೇ ತನ್ನಿಂದಾದ ಸಾವಿಗೆ ಪಶ್ಚಾತ್ತಾಪಗೊಂಡು ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ. ಸತ್ತ ಇಬ್ಬರೂ ಸುಮಾರು ನಲವತ್ತರ ವಯೋಮಾನದವರು ಮತ್ತು ಇಬ್ಬರಿಗೂ ಹೆಂಡತಿ ಮಕ್ಕಳಿದ್ದರು. ಇಬ್ಬರಲ್ಲಿ ಒಬ್ಬರಾದರೂ ಕೋಪವನ್ನು ಹತ್ತಿಕ್ಕಿಕೊಂಡಿದ್ದರೆ ಎರಡು ಕುಟುಂಬಗಳ ದುರಂತವನ್ನು ತಡೆಯಬಹುದಿತ್ತು

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: