1971ರ ಬಾರತದ ಐತಿಹಾಸಿಕ ಸರಣಿ ಗೆಲುವು
ಬಾರತದ ಕ್ರಿಕೆಟ್ ಅಬಿಮಾನಿಗಳನ್ನು ದೇಶದ ಕ್ರಿಕೆಟ್ ನ ಮೊದಲ ಐತಿಹಾಸಿಕ ಕ್ಶಣ ಯಾವುದೆಂದು ಕೇಳಿದರೆ ಒಡನೆ ಎಲ್ಲರೂ ಕಪಿಲ್ ದೇವ್ ಅವರ 1983ರ ವಿಶ್ವಕಪ್ ಗೆಲುವು ಎಂದೇ ಹೇಳುತ್ತಾರೆ. ಆದರೆ ಆಗಿನ್ನೂ ಒಂದು ದಿನದ ಕ್ರಿಕೆಟ್ ಗೆ ಮಹತ್ವವಿರಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ವಿಶ್ವಕಪ್ ಗೆಲುವಿಗೂ ಒಂದು ದಶಕದ ಮುನ್ನ 1971 ರಲ್ಲಿ ಬಾರತ ತಂಡವನ್ನು ಯಾರೂ ಗಂಬೀರವಾಗಿ ಪರಿಗಣಿಸದೇ ಇದ್ದ ಕಾಲದಲ್ಲಿ, ಬಲಾಡ್ಯ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಲ್ಲಿ ಪವಾಡ ಮಾಡಿ ಟೆಸ್ಟ್ ಸರಣಿಗಳನ್ನು ಗೆದ್ದು ಬೀಗಿತ್ತು. ವಿದೇಶದಲ್ಲಿ ಬ್ಯಾಟಿಂಗ್ ಮತ್ತು ಸ್ಪಿನ್ ಬಲದ ಮೇಲೆ ವಾಡೇಕರ್ ರ ಮುಂದಾಳ್ತನದಲ್ಲಿ ಗೆದ್ದ ಈ ಅವಳಿ ಸರಣಿ ಗೆಲುವುಗಳು ಅಸಲಿಗೆ ಬಾರತ ಕ್ರಿಕೆಟ್‌ನ ಅತೀ ಮುಕ್ಯ ಗೆಲುವುಗಳು. ಆ ಬಳಿಕವೇ ಬಾರತಕ್ಕೆ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಮನ್ನಣೆ ದೊರಕಿದ್ದು ಎನ್ನುವುದು ಅಶ್ಟೇ ದಿಟ. ಮತ್ತು ಈ ಗೆಲುವುಗಳೇ ತಂಡದ ತನ್ನಂಬಿಕೆ ಹೆಚ್ಚಿಸಿ ಹಂತ ಹಂತವಾಗಿ ಇನ್ನೂ ಬಲಗೊಳ್ಳುವಂತೆ ಮಾಡಿ ಮುಂದಿನ ದಿನಗಳಲ್ಲಿ ಬಾರತವನ್ನು ಒಂದು ಬಲಿಶ್ಟ ತಂಡವನ್ನಾಗಿ ರೂಪಿಸಿತು. ಆದರೆ ಇದರ ಬಗ್ಗೆ ಹೆಚ್ಚು ಮಂದಿಗೆ ತಿಳಿದಿಲ್ಲ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದ ಆಯ್ಕೆ
ಆಯ್ಕೆ ಪ್ರಕ್ರಿಯೆಯ ಹೊಣೆ ಹೊತ್ತಿದ್ದ ವಿಜಯ್ ಮರ‍್ಚೆಂಟ್, ಮನ್ಸೂರ್ ಅಲಿ ಕಾನ್ ಪಟೌಡಿಯವರ ಬದಲು ಬಾಂಬೆಯ ಅಜಿತ್ ವಾಡೇಕರ್ ರನ್ನು ನಾಯಕರನ್ನಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸುತ್ತಾರೆ. ಇದರಲ್ಲಿ ತಮಾಶೆಯ ವಿಶಯವೆಂದರೆ ಸ್ವತಹ ವಾಡೇಕರ್ ಅವರಿಗೇ ತಾವು ಪ್ರವಾಸಕ್ಕೆ ತಂಡದಲ್ಲಿರುವುದರ ಬಗ್ಗೆಯೇ ಅನುಮಾನವಿತ್ತು. ಹಾಗಾಗಿ ಪ್ರವಾಸಕ್ಕೂ ಮುನ್ನ ನಾಯಕ ಪಟೌಡಿರಿಗೆ ತಮ್ಮ ಹೆಸರನ್ನು ಆಯ್ಕೆಗಾರರ ಬಳಿ ಶಿಪಾರಸ್ಸು ಮಾಡುವಂತೆ ಕೇಳಿಕೊಂಡಿರುತ್ತಾರೆ. ಆದರೆ ಮರ‍್ಚೆಂಟ್ ರ ಬೆಂಬಲದಿಂದ ವಾಡೇಕರ್ ಏಕಾಏಕಿ ನಾಯಕರಾಗುತ್ತಾರೆ. ಅಪಗಾತದ ಬಳಿಕ ಚೇತರಿಸಿಕೊಂಡು ಎರಡು ವರುಶ ದೇಸೀ ಕ್ರಿಕೆಟ್ ನಲ್ಲಿ ಸಾಕಶ್ಟು ವಿಕೆಟ್ ಪಡೆದ್ದಿದ್ದ ಕರ‍್ನಾಟಕದ ಬಿ.ಎಸ್ ಚಂದ್ರಶೇಕರ‍್ ಅವರನ್ನು ಕಡೆಗಣಿಸಲಾಗುತ್ತದೆ. ಮರ‍್ಚೆಂಟ್ ರಿಗೆ ಚಂದ್ರರ ಬೌಲಿಂಗ್ ಶೈಲಿ ಹಿಡಿಸದೇ ಇದ್ದದ್ದು ಇದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳಿಂದ ಬೇಸತ್ತ ಪಟೌಡಿ ತಾವು ಹರಿಯಾಣದಲ್ಲಿ ಚುನಾವಣೆ ಎದುರಿಸಲು ಅಣಿಯಾಗಬೇಕೆಂದು ನೆಪವೊಡ್ಡಿ ಪ್ರವಾಸಕ್ಕೆ ಆಟಗಾರನಾಗಿ ಬರುವುದಿಲ್ಲವೆಂದು ಟೆಲಿಗ್ರಾಮ್ ಮೂಲಕ ಆಯ್ಕೆಗಾರರಿಗೆ ತಿಳಿಸುತ್ತಾರೆ. ಇದರಿಂದಾಗಿ ಅನುಬವಿ ನಾಯಕನ ಬ್ಯಾಟಿಂಗ್ ಬಲವೂ ಬಾರತ ತಂಡಕ್ಕೆ ಇಲ್ಲದಂತಾಗುತ್ತದೆ. ವೆಂಕಟರಾಗವನ್ ಉಪನಾಯಕರಾಗಿ ಆಯ್ಕೆಯಾದರೆ ಬಾಂಬೆಯ ಯುವ ಬ್ಯಾಟ್ಸ್ಮನ್ ಸುನಿಲ್ ಗವಾಸ್ಕರ್ ಮೊದಲ ಬಾರಿಗೆ ಬಾರತ ತಂಡಕ್ಕೆ ಆಯ್ಕೆಯಾಗುತ್ತಾರೆ. ಇನ್ನುಳಿದಂತೆ ವಿಶ್ವನಾತ್, ಬೇಡಿ, ಸಲೀಮ್ ದುರಾನಿ, ದಿಲೀಪ್ ಸರ‍್ದೇಸಾಯಿ, ಅಬಿದ್ ಅಲಿ, ಪ್ರಸನ್ನ, ಸೋಲ್ಕರ್, ಜೈಸಿಂಹ, ಅಶೋಕ್ ಮಂಕಡ್ ರಂತಹ ಪ್ರಮುಕರು ತಂಡದಲ್ಲಿ ತಮ್ಮ ಜಾಗ ಉಳಿಸಿಕೊಳ್ಳುತ್ತಾರೆ. ಹಿಂದಿನ ಬಾರಿ 1961/62 ರಲ್ಲಿ ಬಾರತ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ 5-0 ಇಂದ ಸೋಲುಂಡು ತೀವ್ರ ಮುಜುಗುರಕ್ಕೊಳಗಾಗಿರುತ್ತದೆ. ಹಾಗಾಗಿ 1971 ರಲ್ಲಿ ಮತ್ತೊಮ್ಮೆ ಬಾರತ ದ್ವೀಪ ರಾಶ್ಟ್ರಗಳಿಗೆ ಐದು ಟೆಸ್ಟ್ ಗಳ ಪ್ರವಾಸಕ್ಕೆ ಹೊರಟಾಗ ಸಹಜವಾಗಿಯೇ ಯಾರಿಗೂ ಬಾರತ ಗೆಲ್ಲಲಿದೆ ಎಂಬ ನಂಬಿಕೆ ಇರುವುದಿಲ್ಲ. ಮೇಲಾಗಿ ನ್ಯೂಜಿಲ್ಯಾಂಡ್ ನಲ್ಲಿ ಪಟೌಡಿರ ತಂಡ 1967/68 ರಲ್ಲಿ (3-1) ರಿಂದ ಸರಣಿ ಗೆದ್ದದ್ದನ್ನು ಬಿಟ್ಟರೆ ಬಾರತ ಇನ್ಯಾವುದೇ ದೇಶದಲ್ಲಿ ಒಂದು ಪಂದ್ಯ ಕೂಡ ಗೆದ್ದಿರುವುದಿಲ್ಲ. ಹೊರದೇಶದಲ್ಲಿ ಬಾರತ ಸದಾ ಕಳಪೆ ಆಟ ಆಡುತ್ತದೆ ಎಂಬಹಣೆಪಟ್ಟಿ ಇತ್ತು. ಹಾಗೂ ಕೆರೆಬಿಯನ್ ನಲ್ಲಿ ಗೆಲ್ಲುವುದು ದೂರದ ಮಾತು, ಆಟಗಾರರಾರಿಗೆ ಪೆಟ್ಟು ಬೀಳದೆ, ಒಂದು ಪಂದ್ಯವನ್ನಾದರೂ ಡ್ರಾ ಮಾಡಿಕೊಂಡು ವೆಸ್ಟ್ ಇಂಡೀಸ್ ನಿಂದ ಸುರಕ್ಶಿತವಾಗಿ ಹಿಂದಿರುಗುವುದೇ ಆಗಿನ ಕಾಲದಲ್ಲಿ ಪ್ರವಾಸಿ ತಂಡಗಳಿಗೆ ದೊಡ್ಡ ಸವಾಲಾಗಿತ್ತು.
ಕೆರೆಬಿಯನ್ ಪ್ರವಾಸ ಆರಂಬ
ಬಾಂಬೆಯಿಂದ ಲಂಡನ್- ನ್ಯೂಯಾರ‍್ಕ್ ಮಾರ‍್ಗವಾಗಿ ಜಮೈಕಾ ತಲುಪಬೇಕಿದ್ದ ಬಾರತ ತಂಡ ನ್ಯೂಯಾರ‍್ಕ್ ನಲ್ಲಿ ತಡ ಮಾಡಿಕೊಂಡು ಜಮೈಕಾ ವಿಮಾನವನ್ನು ತಪ್ಪಿಸಿಕೊಳ್ಳುತ್ತಾರೆ. ಇದು ಒಂದು ಬಗೆಯಲ್ಲಿ ಬಾರತ ತಂಡಕ್ಕೆ ಮತ್ತು ಗವಾಸ್ಕರ್ ರಿಗೆ ವರವಾಗುತ್ತದೆ. ಬೆರಳಿನ ಗಾಯದಿಂದ ನರಳುತ್ತಿದ್ದ ಗವಾಸ್ಕರ್ ನ್ಯೂಯಾರ‍್ಕ್ ನಲ್ಲಿ ವೈದ್ಯರ ಬಳಿಹೋದಾಗ ಚಿಕಿತ್ಸೆ ನೀಡಿ, “ನೀವು ಇಂದೇ ಬಂದದ್ದು ಒಳ್ಳೆಯದಾಯ್ತು. ಇನ್ನು 24 ಗಂಟೆ ತಡ ಮಾಡಿದ್ದರೂ ಈ ಗಾಯ ಗ್ಯಾಂಗ್ರೀನ್ ಗೆ ಬದಲಾಗಿ ಬೆರಳನ್ನೇ ಕತ್ತರಿಸುವ ಪರಿಸ್ತಿತಿ ಬರುತ್ತಿತ್ತು” ಎಂದು ವೈದ್ಯರು ಹೇಳಿದಾಗ ಗವಾಸ್ಕರ‍್ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೂ ಈ ಗಾಯದ ಸಮಸ್ಯೆಯಿಂದ ಅವರು ಮೊದಲ ಟೆಸ್ಟ್ ಆಡಲಾಗುವುದಿಲ್ಲ. ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವಿಶ್ವನಾತ್ ಕೂಡ ಮೊದಲ ಪಂದ್ಯದಿಂದ ಹೊರಗುಳಿಯುತ್ತಾರೆ.
ಕೆರೆಬಿಯನ್ ಕಾಳಗ
ಸರ್ ಗಾರ‍್ಪೀಲ್ಡ್ ಸೋಬರ‍್ಸ್ ಮುಂದಾಳ್ತನದ ವಿಂಡೀಸ್ ತಂಡದಲ್ಲಿ ಈ ಬಾರಿ ಚಾರ‍್ಲೀ ಗ್ರಿಪಿತ್ ಮತ್ತು ವೆಸ್ಲೀ ಹಾಲ್ ರಂತಹ ದಿಗ್ಗಜ ವೇಗದ ಬೌಲರ್ ಗಳು ಇಲ್ಲದ್ದಿದ್ದರೂ ಹೋಲ್ಡರ್, ಶಿಲಿಂಗ್ಪೋರ‍್ಡ್ ರಂತಹ ಅಳವುಳ್ಳ ಯುವ ಬೌಲರ‍್ಗಳು ತಂಡಕ್ಕೆ ಆಸರೆಯಾಗಿದ್ದರು. ಕಿಂಗ್ಸ್ಟನ್ ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಸರ‍್ದೇಸಾಯಿರ ಬರ‍್ಜರಿ 212 ರನ್ ಗಳಕೊಡುಗೆಯಿಂದ 387 ಗಳಿಸಿದರೆ ಪ್ರಸನ್ನರ ಬೌಲಿಂಗ್ ಕೈಚಳಕದಿಂದ (4/65), ಬಾರತ ದೊಡ್ಡ ಮುನ್ನಡೆ ಪಡೆದು ಪಾಲೋ-ಆನ್ ಹೇರುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ರೋಹನ್ ಕನೈ ರ ಶತಕದಿಂದ ವಿಂಡೀಸ್ ಸೋಲು ತಪ್ಪಿಸಿಕೊಂಡರೂ, ಉತ್ತಮ ಪ್ರದರ‍್ಶನದಿಂದ ಪ್ರವಾಸಿ ತಂಡದ ತನ್ನಂಬಿಕೆ ಹೆಚ್ಚಾಗುತ್ತದೆ. ತವರಿನಲ್ಲಿ ಬಲಾಡ್ಯ ವಿಂಡೀಸ್ ತಂಡದ ಮೇಲೆ ಪಾಲೋ-ಆನ್ ಹೇರುವುದು ಅಂದಿಗೆ ದೊಡ್ಡ ಸಾದನೆಯೇ ಆಗಿತ್ತು.
ಎರಡನೇ ಟೆಸ್ಟ್ – ಇತಿಹಾಸ ಬರೆದ ಬಾರತ ತಂಡ
ಟ್ರಿನಿಡಾಡ್ ನಲ್ಲಿ ನಡೆದ ಈ ಎರಡನೇ ಟೆಸ್ಟ್ ನಲ್ಲಿ ಸುನಿಲ್ ಗವಾಸ್ಕರ್ ಪಾದಾರ‍್ಪಣೆ ಮಾಡುತ್ತಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ತಂಡವನ್ನು ಸ್ಪಿನ್ ಅವಳಿಗಳಾದ ಪ್ರಸನ್ನ (4/54) ಮತ್ತು ಬೇಡಿ (3/46) ಬೌಲಿಂಗ್ ದಾಳಿಯಿಂದ 214 ರನ್ ಗಳಿಗೆ ಕಟ್ಟಿ ಹಾಕುತ್ತಾರೆ. ಇದಕ್ಕೆ ಉತ್ತರವಾಗಿ ಸರ‍್ದೇಸಾಯಿರ (112) ಹಾಗೂ ಗವಾಸ್ಕರ್ ರ (65) ರನ್ ಗಳ ಬಲದಿಂದ 352 ಕಲೆ ಹಾಕಿ ಬಾರತ 138 ರನ್ ಗಳ ಮುನ್ನಡೆ ಪಡೆಯುತ್ತದೆ. ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ವೆಂಕಟರಾಗವನ್ ರ (5/95) ದಾಳಿಯಿಂದ ಎದುರಾಳಿಯನ್ನು 261 ರನ್ ಗಳಿಗೆ ಸೀಮಿತಗೊಳಿಸಿ ಬಾರತ ಗೆಲ್ಲಲು 125 ರನ್ ಗಳ ಗುರಿ ಪಡೆಯುತ್ತದೆ. ಸಾದಾರಣ ಗುರಿಯನ್ನು ಬೆನ್ನತ್ತಿದ್ದ ಪ್ರವಾಸಿಗರು ಗವಾಸ್ಕರ್ ರ 67* ರನ್ ಗಳ ತಾಳ್ಮೆಯ ಆಟದಿಂದ 7 ವಿಕೆಟ್ ಗಳ ನಿರಾಯಾಸ ಗೆಲುವು ಪಡೆದು ಕೆರೆಬಿಯನ್ ದ್ವೀಪಗಳಲ್ಲಿ ಮೊದಲ ಬಾರಿ ಗೆಲುವಿನ ಕಾತೆ ತೆರೆಯುತ್ತಾರೆ.
ಗವಾಸ್ಕರ್ ರ ಅದ್ರುಶ್ಟ!!
ಒಬ್ಬ ಆಟಗಾರನ ಬದುಕಲ್ಲಿ ಅದ್ರುಶ್ಟ ಎಶ್ಟು ದೊಡ್ಡ ಪಾತ್ರ ವಹಿಸುತ್ತದೆ ಎಂಬುದಕ್ಕೆ ಗವಾಸ್ಕರ್ ರ ವ್ರುತ್ತಿ ಬದುಕು ಒಂದು ಒಳ್ಳೆ ಎತ್ತುಗೆ. ಪ್ರವಾಸದ ಆರಂಬದಲ್ಲೇ ಅದ್ರುಶ್ಟದಿಂದ ಗ್ಯಾಂಗ್ರೀನ್ ಅಪಾಯದಿಂದ ಪಾರಾಗಿ ಟ್ರಿನಿಡಾಡ್ ನಲ್ಲಿ ಚೊಚ್ಚಲ ಟೆಸ್ಟ್ ಆಡಿದ ಗವಾಸ್ಕರ್, ಮೊದಲಿಗೆ ಲೆಗ್ ಬೈಯನ್ನು ಅಂಪೈರ್ ಗುರಿತಿಸದೆ ಆ ರನ್ ಗಳನ್ನು ತಪ್ಪಾಗಿ ಗವಾಸ್ಕರ್ ರಿಗೆ ನೀಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ರನ್ ಗಳ ಕಾತೆ ತೆರೆಯುತ್ತಾರೆ. ಅದು ಸಾಲದು ಎಂಬಂತೆ ಐದು ರನ್ ಗಳಿಸಿದ್ದಾಗ ಅವರ ಬ್ಯಾಟ್ ಗೆ ತಾಗಿ ಕೈಗೆ ಬಂದಿದ್ದ ಸುಳುವಾದ ಕ್ಯಾಚನ್ನು ಒಳ್ಳೆ ಪೀಲ್ಡರ್ ಆಗಿದ್ದ ಸೋಬರ‍್ಸ್ ಕೈಚೆಲ್ಲುತ್ತಾರೆ. ಆ ಬಳಿಕ ಗವಾಸ್ಕರ್ ತಮ್ಮ ವ್ರುತ್ತಿ ಬದುಕಿನಾದ್ಯಂತ ಹಿಂದಿರುಗಿ ನೋಡದಿದ್ದದ್ದು ಈಗ ಇತಿಹಾಸ. ಈಗಲೂ ತಮ್ಮ ಅದ್ರುಶ್ಟವನ್ನು ನೆನೆಯುವ ಬಾಂಬೆಯ ದಿಗ್ಗಜ ಬ್ಯಾಟ್ಸ್ಮನ್ ಗವಾಸ್ಕರ್, “ನೋಡಿ, ಮೊದಲ ಟೆಸ್ಟ್ ನಲ್ಲಿ ಜಯಂತಿಲಾಲ್ ನೀಡಿದ ಅತೀ ಕಶ್ಟದ ಕ್ಯಾಚನ್ನು ಮುಂದಕ್ಕೆ ಡೈವ್ ಮಾಡಿ ಹಿಡಿದ ಸೋಬರ‍್ಸ್, ನನ್ನ ಸುಳುವಾದ ಕ್ಯಾಚನ್ನು ಬಿಟ್ಟದ್ದು ವಿದಿಲಿಕಿತ ಅಲ್ಲವೇ? ಹೀಗೆ ಔಟಾದ ಜಯಂತಿ ಲಾಲ್ ಆ ಬಳಿಕ ಒಂದೂ ಟೆಸ್ಟ್ ಆಡಲಿಲ್ಲ. ನಾನು 125 ಟೆಸ್ಟ್ಆಡಿದೆ. ಇದು ಅದ್ರುಶ್ಟ ಅಲ್ಲದೇ ಮತ್ತೇನು? ಸೋಬರ‍್ಸ್ ನನ್ನ ಆ ಕ್ಯಾಚನ್ನು ಹಿಡಿದ್ದಿದ್ದರೆ ಅದೇ ನನ್ನ ಕಡೆಯ ಪಂದ್ಯವಾಗುತ್ತಿತ್ತೇನೋ ಯಾರಿಗೆ ಗೊತ್ತು?” ಎಂದು ನೆನಪುಗಳನ್ನು ಈಗಲೂ ಮೆಲಕು ಹಾಕುತ್ತಾರೆ.
ಡ್ರಾನಲ್ಲಿ ಕೊನೆ ಆದ ಕಡೇ ಮೂರೂ ಟೆಸ್ಟ್ ಗಳು
ಎರಡನೇ ಟೆಸ್ಟ್ ನಲ್ಲೇ ಗೆಲುವು ಸಾದಿಸಿ ಸರಣಿಯಲ್ಲಿ ಮುನ್ನಡೆ ಪಡೆದಿದ್ದ ಬಾರತ ತಂಡ ಇನ್ನುಳಿದ ಟೆಸ್ಟ್ ಗಳಲ್ಲೂ ಒಳ್ಳೆಯ ಆಟ ಮುಂದುವರೆಸುತ್ತದೆ. ಗಯಾನದಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ಗವಾಸ್ಕರ್ ತಮ್ಮ ವ್ರುತ್ತಿ ಬದುಕಿನ ಚೊಚ್ಚಲಶತಕ (116) ಬಾರಿಸಿದರೆ ವಿಶ್ವನಾತ್ (50) ರನ್ ಗಳಿಸಿ ತಂಡಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ದಕ್ಕಿಸಿ ಕೊಡುತ್ತಾರೆ. ನಂತರ ಪಂದ್ಯ ನೀರಸ ಡ್ರಾನಲ್ಲಿ ಕೊನೆಗೊಳ್ಳುತ್ತದೆ. ಇದರ ಬೆನ್ನಲ್ಲೇ ಬಾರ‍್ಬಡಾಸ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಸರ‍್ದೇಸಾಯಿರ 150 ರನ್ ಗಳ ಹೊರತಾಗಿಯೂ ತಂಡ ಮೊದಲ ಇನ್ನಿಂಗ್ಸ್ ಹಿನ್ನಡೆ ಅನುಬವಿಸುತ್ತದೆ. ಬಳಿಕ ನಾಲ್ಕನೇ ಇನ್ನಿಂಗ್ಸ್ ನಲ್ಲಿ 335 ರನ್ ಗಳ ಗುರಿಯನ್ನು ಬೆನ್ನತ್ತಿ ಹೊರಟ ತಂಡಕ್ಕೆ ಗವಾಸ್ಕರ್ (117*) ಗಳಿಸಿ ಆಸರೆಯಾಗಿ ತಂಡವನ್ನು ಸೋಲಿನ ಅಪಾಯದಿಂದ ಕಾಪಾಡುತ್ತಾರೆ.
ಐದನೇ ಟೆಸ್ಟ್ – ರೋಚಕ ಡ್ರಾ
ಟ್ರಿನಿಡಾಡ್ ನಲ್ಲಿ ನಡೆದ ಐದನೇ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾರತ ತಂಡ ಗವಾಸ್ಕರ್ ರ 124 ರನ್ ಗಳ ನೆರವಿನಿಂದ 360 ರನ್ ಗಳಿಸುತ್ತದೆ. ಆದರೆ ವಿಂಡೀಸ್ ಸೊಗಸಾದ ಬ್ಯಾಟಿಂಗ್ ಮಾಡಿ 526 ರನ್ ಗಳಿಸಿ, ದೊಡ್ಡ ಮುನ್ನಡೆ ಪಡೆದು ಪಂದ್ಯದ ಮೇಲೆ ಬಿಗಿ ಹಿಡಿತ ಪಡೆಯುತ್ತದೆ. ಸೋಲಿನ ಬೀತಿಯಲ್ಲಿದ್ದ ತಂಡವನ್ನು ಗವಾಸ್ಕರ‍್ ಬರ‍್ಜರಿ ದ್ವಿಶತಕ (220) ಗಳಿಸಿ ಮೇಲೆತ್ತುತ್ತಾರೆ. ಒಂದು ಹಂತದಲ್ಲಿ ಸೋಲನ್ನು ಎದುರು ನೋಡುತ್ತಿದ್ದ ಬಾರತ ಗವಾಸ್ಕರ್ ರ ಬ್ಯಾಟಿಂಗ್ ನಿಂದ ವಿಂಡೀಸ್ ಗೆ 262 ರನ್ ಗಳ ಗುರಿ ನೀಡುತ್ತದೆ. ಕೊನೆಗೆ ಬಾರತವೇ ಪಂದ್ಯ ಗೆಲ್ಲಲಿದೆ ಎಂಬಂತ ವಾತಾವರಣ ಕೂಡ ಹುಟ್ಟಿಕೊಳ್ಳುತ್ತದೆ. ಆದರೆ 165/8 ರನ್ ಗಳಿಸಿ ವಿಂಡೀಸ್ ಕಡೇ ದಿನ ಕೂದಲೆಳೆಯಲ್ಲಿ ಸೋಲು ತಪ್ಪಿಸಿಕೊಂಡು ಡ್ರಾ ಮಾಡಿಕೊಳ್ಳುತ್ತದೆ. ಬಾರತ ಈ ಪಂದ್ಯದಲ್ಲಿ ಸಾದಿಸಿದ್ದ ಹಿಡಿತವನ್ನು ಗೆಲುವಾಗಿ ಮಾರ‍್ಪಡಿಸುವಲ್ಲಿ ವಿಪಲರಾದರೂ, 1-0 ಅಂತರದಿಂದ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ‍್ಮಿಸುತ್ತದೆ. ಹೊಸ ನಾಯಕ ವಾಡೇಕರ್ ರ ತಂಡ ಪೆಬ್ರವರಿ 1971 ರಲ್ಲಿ ವಿಂಡೀಸ್ ಗೆ ಹೊರಟಾಗ ಯಾರೂ ಎಣಿಸದ ಒಂದು ಪಲಿತಾಂಶ ಏಪ್ರಿಲ್ ತಿಂಗಳಲ್ಲಿ ಬಾರತದ ಅಬಿಮಾನಿಗಳಿಗೆ ನೋಡಸಿಗುತ್ತದೆ. ಮುಂಜಾನೆ 6 ಗಂಟೆಗೆ ರೇಡಿಯೋ ಮೂಲಕ ಈ ಸುದ್ದಿ ತಿಳಿಯುತ್ತಿದ್ದಂತೆ ಬಾರತದಾದ್ಯಂತ ಗೆಲುವಿನ ಸಂಬ್ರಮ ಮುಗಿಲು ಮುಟ್ಟುತ್ತದೆ. ವಿಂಡೀಸ್ ತಂಡವನ್ನು ಅವರ ತವರಲ್ಲಿ ಅಳವುಳ್ಳ ವೇಗದ ಬೌಲರ್ ಗಳೇ ಇಲ್ಲದ ಬಾರತ ತಂಡ ಮಣಿಸಿ ಪವಾಡ ಮಾಡಿತ್ತು. 43 ವರುಶಗಳಲ್ಲಿ ವಿಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ ತವರಲ್ಲಿ ಇದು ಅವರ ನಾಲ್ಕನೇ ಸರಣಿ ಸೋಲಾಗಿತ್ತು. ವಿಂಡೀಸ್ ನೆಲದಲ್ಲಿ ಗೆಲುವು ಕಂಡ ಏಶಿಯಾದ ಮೊದಲ ತಂಡ ಎಂಬ ಹೆಗ್ಗಳಿಕೆ ಪಡೆದ ಬಾರತದತ್ತ ಅಂದು ಕ್ರಿಕೆಟ್ ಜಗತ್ತೇ ತಿರುಗಿನೋಡಿತು.
ಚೊಚ್ಚಲ ಸರಣಿ ಆಡಿದ ಗವಾಸ್ಕರ್ ಅತಿ ಹೆಚ್ಚು 774 ರನ್ ಗಳಿಸಿದರೆ ದಿಲೀಪ್ ಸರ‍್ದೇಸಾಯಿ 642 ರನ್ ಗಳಿಸಿದರು. ಗವಾಸ್ಕರ್ ರ 774 ರನ್ ಗಳು ಮೊದಲ ಸರಣಿಯಲ್ಲಿ ಬ್ಯಾಟ್ಸ್ಮನ್ ಒಬ್ಬ ಗಳಿಸಿದ ಗರಿಶ್ಟ ಮೊತ್ತವಾಗಿ 50 ವರುಶಗಳ ಬಳಿಕವೂ ಇನ್ನು ಉಳಿದಿದೆ. ಬೌಲಿಂಗ್ ನಲ್ಲಿ ವೆಂಕಟರಾಗವನ್ ಅತಿ ಹೆಚ್ಚು 22 ವಿಕೆಟ್ ಪಡೆದರೆ, ಬೇಡಿ 15 ಹಾಗೂ ಪ್ರಸನ್ನ 11 ವಿಕೆಟ್ ಪಡೆದರು. ವಿಂಡೀಸ್ ನ ವೇಗದ ಪಿಚ್ ಗಳಲ್ಲಿ ಸ್ಪಿನ್ನರ್ ಗಳ ಬಲದ ಮೇಲೆ ಬಾರತ ಸರಣಿಗೆದ್ದದ್ದು ನಿಜಕ್ಕೂ ಪವಾಡವೇ.
ತವರಿಗೆ ಮರಳಿದ ಗೆಲುವಿನ ಸರದಾರರು
ವಿಜೇತ ಬಾರತ ತಂಡ ತಡರಾತ್ರಿ ಬಾಂಬೆಯ ಸಾಂತ-ಕ್ರೂಜ್ ವಿಮಾನ ನಿಲ್ದಾಣ ತಲುಪಿದಾಗ ಅವರನ್ನು ಬರಮಾಡಿಕೊಳ್ಳಲು ಸುಮಾರು ಹತ್ತು ಸಾವಿರ ಅಬಿಮಾನಿಗಳು ನೆರೆದಿರುತ್ತಾರೆ! ‘Welcome home heroes’; ‘Sobers Sobered’; ‘Golden age of Indian cricket’; ಎಂಬ ಕೈಬರಹದ ಪಲಕಗಳನ್ನು ಹಿಡಿದು ಆಟಗಾರರಿಗೆ ಜಯಗೋಶ ಕೂಗುತ್ತಾ ಹಾರ ತುರಾಯಿಗಳಿಂದ ಸನ್ಮಾನ ಮಾಡುತ್ತಾರೆ. ತಡ ರಾತ್ರಿ ಇಶ್ಟು ಉತ್ಸಾಹದಿಂದ ಜನ ಸೇರಿದ್ದರು ಎಂದರೆ ಈ ಟೆಸ್ಟ್ ಸರಣಿ ಗೆಲುವಿನ ಮಹತ್ವ ಏನೆಂದು ಯಾರಾದರೂ ಊಹಿಸಬಹುದು. ಈ ಗೆಲುವಿನ ಬಳಿಕವೇ ಕ್ರಿಕೆಟ್ ಆಟದ ಬಗ್ಗೆ ತನ್ನಂಬಿಕೆ ಮೂಡಿ ಬಾರತ ತಂಡದ ಆಲೋಚನೆ ಬದಲಾದದ್ದು ಸುಳ್ಳಲ್ಲ. ಡ್ರಾ ಮಾಡಿಕೊಂಡರೆ ಸಾಕು ಅನ್ನುವ ಮನೋಬಾವದಿಂದ ವಿದೇಶ ಪ್ರವಾಸಕ್ಕೆ ವಿಮಾನ ಏರುತ್ತಿದ್ದ ತಂಡ ಈ ಗೆಲುವಿನಿಂದ ಹೊಸ ಹುರುಪು ಪಡೆದು ಬಲಾಡ್ಯ ಇಂಗ್ಲೆಂಡ್, ವಿಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳೊಟ್ಟಿಗೆ ಸರಿಸಮಾನವಾಗಿ ಸೆಣೆಸಲು ಮೊದಲುಮಾಡಿತು. ತಂಡದ ಮುಂದಿನ ಎಲ್ಲಾ ಗೆಲುವುಗಳಿಗೆ ಮುನ್ನುಡಿ ಬರೆದದ್ದು ಈ 1971 ರ ಗೆಲುವು ಎಂದರೆ ತಪ್ಪಾಗಲಾರದು. ಈ ಕಾರಣಕ್ಕಾಗಿಯೇ ಬಾರತದ ಕ್ರಿಕೆಟ್ ಇತಿಹಾಸದಲ್ಲಿ ವಿಂಡೀಸ್ ನ ಈ ಸರಣಿ ಗೆಲುವು ವಿಶಿಶ್ಟವಾದ ಸ್ತಾನ ಪಡೆದುಕೊಂಡಿದೆ. ಬಾರತದಲ್ಲಿ ಕ್ರಿಕೆಟ್ ಆಟವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ಸಾಹಸಗಾತೆ ಇದು.
(ಚಿತ್ರ ಸೆಲೆ: sportskeeda.com)
ಇತ್ತೀಚಿನ ಅನಿಸಿಕೆಗಳು