ತಪ್ಪನ್ನು ಮರೆಮಾಚಲು ಅದನ್ನು ಸಮರ‍್ತಿಸಿಕೊಳ್ಳುವುದು ಎಶ್ಟು ಸರಿ?

– ಪ್ರಕಾಶ್ ಮಲೆಬೆಟ್ಟು.

truliebuisness

 

ಮನುಶ್ಯ ತನ್ನ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣವನ್ನು ಹೊಂದಿದ್ದರೆ ಮನುಕುಲದ ಕತೆಯೇ ಬೇರೆ ಇರುತ್ತಿತ್ತು. ಆದರೆ ನಾವು ಅಶ್ಟೊಂದು ದೊಡ್ಡ ಗುಣ ಹೊಂದಿಲ್ಲ ಅಲ್ವ? ಆದರೆ ಇದಕ್ಕೆ ಅಪವಾದ ಎನ್ನುವಂತೆ ಕೆಲವು ರಾಶ್ಟ್ರಗಳು ಇವೆ. ಪ್ರಮುಕವಾಗಿ ಐಸ್ಲ್ಯಾಂಡ್. 3,40,000 ಜನಸಂಕ್ಯೆ ಇರುವ ಒಂದು ಪುಟ್ಟ ರಾಶ್ಟ್ರ. ಕಳೆದೆ 12 ವರುಶಗಳಿಂದ ವಿಶ್ವದ ಅತ್ಯಂತ ಸುರಕ್ಶಿತ ರಾಶ್ಟ್ರ ಎನ್ನುವ ಪಟ್ಟವನ್ನು ಆಲಂಕರಿಸಿದೆ. ಉನ್ನತ ಮಟ್ಟದ ಜೀವನ, ಅವರ ಸುಶಿಕ್ಶಿತ, ಉನ್ನತ ಶಿಕ್ಶಣ ಪಡೆದ ಪೊಲೀಸ್ ಪಡೆ, ಉನ್ನತ ಮಟ್ಟದ ನಂಬಿಕೆ, ಸಾಮಾಜಿಕ ಮತ್ತು ಆರ‍್ತಿಕತೆಯ ನಡುವಿನ ಉದ್ವಿಗ್ನತೆಯ ಕೊರತೆಯಿಂದಾಗಿ ಕಡಿಮೆ ಅಪರಾದದ ಮಟ್ಟವನ್ನು ಹೊಂದಿದೆ. ಐಸ್ಲ್ಯಾಂಡ್ ನಲ್ಲಿ ಮಿಲಿಟರಿ ಇಲ್ಲ ಮತ್ತು ಅಲ್ಲಿನ ಪೋಲೀಸರ ಹತ್ತಿರ ಬಂದೂಕು ಕೂಡ ಇಲ್ಲ. ದಾರ‍್ಮಿಕ ಸ್ವಾತಂತ್ರ‍್ಯ, ಪುರುಶರು ಮತ್ತು ಮಹಿಳೆಯರಿಗೆ ಸಮಾನ ವೇತನದಂತಹ ಸಮಾನತೆಯನ್ನು ಕಾತರಿಪಡಿಸುವ ಕಾನೂನುಗಳನ್ನು ಐಸ್ಲ್ಯಾಂಡ್ ಹೊಂದಿದೆ. ಅದೇನೇ ಇರಲಿ, ನಾವು ಸದ್ಯಕ್ಕೆ ಅಂತಹ ಕನಸನ್ನು ಕಾಣುವ ಸ್ತಿತಿಯಲ್ಲಿ ಇಲ್ಲ ಅಲ್ವೇ!

ನಮ್ಮ ಶಾಲೆಗಳಲ್ಲಿ ವಿದ್ಯಾಬ್ಯಾಸದ ಜೊತೆಗೆ ನೀತಿ ಬೋದನೆ ಎನ್ನುವ ತರಗತಿ ಇರುತ್ತೆ. ಆದರೆ ಆ ತರಗತಿಗೆ ಅಶ್ಟೊಂದು ಮಹತ್ವ ಸಿಗುತ್ತಿಲ್ಲ. ವಿದ್ಯಾಬ್ಯಾಸದ ಜೊತೆಗೆ ಸಮಾಜದಲ್ಲಿ ನಮ್ಮ ವರ‍್ತನೆ ಹೇಗೆ ಇರಬೇಕು ಮತ್ತು ಅದನ್ನು ಪ್ರತಿನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಿದರೆ ಮುಂದೆ ಐಸ್ಲ್ಯಾಂಡ್ ನಲ್ಲಿರುವ ವಾತಾವಾರಣ ನಮ್ಮಲ್ಲೂ ನಿರ‍್ಮಾಣವಾಗಬಹುದೇನೋ. ಹಾಗೆ ನೊಡಿದರೆ ನಮ್ಮ ಸಂಸ್ಕ್ರುತಿಯು ಬವ್ಯ, ಪುರಾತನ ಹಾಗೂ ಜಗತಿನಲ್ಲೇ ಅತ್ಯಂತ ಶ್ರೇಶ್ಟ. ಆದರೆ ಏಕೋ ಏನೋ ನಮ್ಮ ಜೀವನ ಶೈಲಿಯಲ್ಲಿ ಆದುನಿಕತೆಯ ಪ್ರವೇಶವಾದಂತೆ ನಮ್ಮೊಳಗೇ ಅಸಹನೆ, ಅಸಹಿಶ್ಣುತೆ ಹೆಚ್ಚಾಗುತ್ತಿದೆ. ಅಶ್ಟೇ ಅಲ್ಲ, ನಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸುತರಾಮ್ ನಾವು ತಯಾರಿಲ್ಲ. ಬದಲಿಗೆ ಬೇರೆಯವರನ್ನು ಸಿಕ್ಕಿಸಲು ಇಲ್ಲವೇ ‘ಅವನು ತಪ್ಪು ಮಾಡಿಲ್ಲವೇ’ ಎಂದು ಬೆರಳು ತೋರಿಸುವುದನ್ನು ಜಾಸ್ತಿ ಮಾಡಿದ್ದೇವೆ. ಇನ್ನೊಬ್ಬನ ದುಕ್ಕದಲ್ಲಿ ನಾವು ಹೆಚ್ಚಿನ ಸಂತೋಶ ಕಾಣುತ್ತಿದ್ದೇವೆ.

ಅವನು ತಪ್ಪು ಮಾಡಿದ ಹಾಗಾಗಿ ನಾನು ಕೂಡ ತಪ್ಪು ಮಾಡಿದೆ!

ಒಂದು ಉದಾಹರಣೆ. ಸೋಮ ಮಾವಿನ ತೋಟಕ್ಕೆ ಹೋಗಿ ಹಣ್ಣು ಕದ್ದು ಸಿಕ್ಕಿ ಬಿದ್ದ. ವಿಚಾರಿಸಿದಾಗ ಹೌದು ನಾನು ಮಾಡಿದ್ದೂ ತಪ್ಪು ಎಂದು ಒಪ್ಪಿಕೊಳುವುದರ ಬದಲು, ‘ಇಲ್ಲ, ಮೊನ್ನೆ ಶಾಮು ಹೋಗಿ ಹಣ್ಣು ಕದ್ದಿದ್ದ. ಹಾಗೆ ಇವತ್ತು ನಾನು ಹೋಗಿ ಹಣ್ಣನ್ನು ಕದ್ದೆ’ ಎನ್ನುತ್ತಾನೆ. ಗಮನಿಸಿ, ಇಲ್ಲಿ ಸೋಮ ಪ್ರಾಮಾಣಿಕ ವಿದ್ಯಾರ‍್ತಿಯಾಗಿದ್ದರೆ ಶಿಕ್ಶಕರ ಬಳಿ ಅಂದೇ ಶ್ಯಾಮನ ಬಗ್ಗೆ ದೂರು ಕೊಡುತಿದ್ದ. ಇಲ್ಲವೇ ಶಾಮನಿಗೆ ಹೇಳುತಿದ್ದ, ‘ನೋಡು ಶ್ಯಾಮ ನೀನು ಮಾಡಿದ್ದೂ ತಪ್ಪು, ಇನ್ನೊಮ್ಮೆ ಹಾಗೆ ಮಾಡಿದಲ್ಲಿ ನಾನು ದೂರು ಕೊಡುತ್ತೇನೆ’ ಎಂದು, ಅವನಿಗೆ ಮತ್ತೊಂದು ಅವಕಾಶ ಕೊಡುತ್ತಿದ್ದ. ಆದರೆ ಅವೆರಡನ್ನು ಅವನು ಮಾಡಲಿಲ್ಲ, ತಾನು ಕೂಡ ಹೋಗಿ ಹಣ್ಣು ಕದ್ದ. ವಿಚಾರಿಸಿದಾಗ ಅವನ ಉತ್ತರ ‘ಶಾಮ ಮೊನ್ನೆ ಕದ್ದಿದ್ದ, ಹಾಗಾಗಿ ಇಂದು ನಾನು ಕದ್ದೆ’ ಎಂದು. ಹೌದು, ಬಾಲ್ಯದಲ್ಲೇ ಇಂತಹ ಮನಸ್ತಿತಿಯಲ್ಲಿ ಮಕ್ಕಳು ಬೆಳೆಯಲಾರಂಬಿಸುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಸ್ತಿತಿಯಲ್ಲಿಯೇ ಅವರು ಇರುವುದಿಲ್ಲ. ಇಂತ ಗಟನೆಗಳು ನಮ್ಮ ಜೀವನದ ಪ್ರತಿ ಹಂತದಲ್ಲೂ ಕಂಡುಬರುತ್ತೆ.

ಕೆಲವು ಉದಾಹರಣೆಗಳು

‘ಗಾಡಿ ಓಡಿಸುವಾಗ ಹೆಲ್ಮೆಟ್ ಯಾಕೆ ಹಾಕ್ಲಿಲ್ಲ ದಂಡ ಕಟ್ಟಿ’ ಎಂದರೆ, ‘ಯಾಕ್ರೀ ದಂಡ ಕಟ್ಟಬೇಕು? ಮೊದ್ಲು ರಸ್ತೆ ರಿಪೇರಿ ಮಾಡ್ಸಿ!’ – ಇದು ನಮ್ಮ ಉತ್ತರ. ಪ್ರತಿಯೊಂದಕ್ಕೂ ನಮ್ಮ ಬೆರಳು ಬೇರೆಯವರನ್ನು ಬೊಟ್ಟು ಮಾಡಿ ತೋರಿಸುತ್ತೆ. ರಸ್ತೆ ರಿಪೇರಿ ಮಾಡಿಸಬೇಕು ನಿಜ. ಆದರೆ ಹೆಲ್ಮೆಟ್ ದರಿಸುವುದು ನಮ್ಮ ಪ್ರಾಣ ರಕ್ಶಣೆಗಾಗಿ. ಎರಡನೆಯದಾಗಿ, ಅದು ಕಾನೂನು ಹಾಗು ಅದನ್ನು ಗೌರವಿಸಬೇಕಾದದ್ದು ನಮ್ಮ ಕರ‍್ತವ್ಯ. ಆದರೆ ಪ್ರಮುಕವಾದ ಆ ಎರಡು ಉದ್ದೇಶವನ್ನು ಮರೆತುಬಿಟ್ಟು ರಸ್ತೆ ಸರಿಯಿಲ್ಲ ಎನ್ನುವ ಸಬೂಬು ಕೊಡುತ್ತೇವೆ.

ಆದರೆ ಅದೇ ಜವಾಬ್ದಾರಿಯುತ ನಾಗರಿಕರಾಗಿ, ಓಟು ಕೇಳಲು ಬರುವವರಲ್ಲಿ ‘ಯಾಕ್ರೀ ಓಟು ಕೊಡಬೇಕು, ನೀವು ಬರವಸೆ  ಕೊಟ್ಟಿದ್ದರಲ್ಲಿ ಎಶ್ಟನ್ನು ಈಡೇರಿಸಿದ್ದೀರಿ’ ಎಂದು ಪ್ರಶ್ನಿಸುವ ದೈರ‍್ಯ ನಾವು ತೋರಲ್ಲ. ಕೆಲವೊಮ್ಮೆ ಅನಿಸುತ್ತೆ, ಈ ಬೆರಳು ತೋರಿಸುವ ಗುಣ ರಾಜಕಾರಣಿಗಳಿಂದ ನಮಗೆ ಬಂದ ಬಳುವಳಿ ಅಂತ. ಮತ ಕೇಳುವಾಗ ಒಂದು ಪಕ್ಶ, ಗೆದ್ದ ಮೇಲೆ ಅದಿಕಾರಕ್ಕೋಸ್ಕರ ಮತ್ತೊಂದು ಪಕ್ಶ. ಹಣದ ಆಮಿಶ ಒಡ್ಡಿ ಸರ‍್ಕಾರಗಳನ್ನು ಬೀಳಿಸಿ ಹೊಸ ಸರ‍್ಕಾರ ರಚಿಸಲು ಇವರಿಗೆ ಯಾವುದೇ ಮುಲಾಜು ಇಲ್ಲ. ಅದು ಅವರ ಪ್ರಕಾರ ತ್ಯಾಗ! ಇನ್ನೊಂದು ಪಕ್ಶದ ಪ್ರಕಾರ ಅದು ಅನಾಚಾರ ಹಾಗು ದ್ರೋಹ. ಸರಿ ಅನಾಚಾರ ಮತ್ತು ದ್ರೋಹ ಎನ್ನುವ ಪಕ್ಶವೇ ತಾನು ಅದೇ ಹಿಂಬಾಗಿಲಿನ ದಾರಿ ಹಿಡಿದಾಗ ಕೊಡುವ ಸಮರ‍್ತನೆ ಏನೆಂದರೆ, ‘ಅವರು ಮಾಡ್ಲಿಲ್ವಾ? ಅದನ್ನೇ ನಾವು ಮಾಡ್ತಾ ಇರೋದು’ ಅಂತ. ಈಗ ಮೊದಲು ಆ ದಾರಿ ಹಿಡಿದ ಪಕ್ಶದ ಪ್ರಕಾರ ಈಗ ಇವರು ಮಾಡುತ್ತಿರುವುದು ಅಪರಾದ!

ಬದಲಾವಣೆಯ ದಿಕ್ಕು

ನಾವು ಬದಲಾಗೋದು ಯಾವಾಗ? ನಮ್ಮ ತಪ್ಪನ್ನು ಒಪ್ಪಿಕೊಂಡು ತಿದ್ದಿ ನಡೆಯಲು ನಮ್ಮಿಂದ ಸಾದ್ಯ ಇಲ್ಲವೇ? ಯಾವಾಗಲು ತಪ್ಪಿನ ಸಮರ‍್ತನೆಯನ್ನು ನಾವ್ಯಾಕೆ ಮಾಡಿಕೊಳ್ಳುತ್ತೇವೆ? ಇದು ಉತ್ತರ ಸಿಗದ ಪ್ರಶ್ನೆಗಳು. ಇವತ್ತು ಬದಲಾವಣೆ ಸಾದ್ಯವೇ ಇಲ್ಲ ಎನ್ನುವ ಸ್ತಿತಿಯಲ್ಲಿ ನಾವಿದ್ದೀವಿ. ಆದ್ರೂ, ಆ ಬದಲಾವಣೆಯ ದಿಕ್ಕಿನಲ್ಲಿ ನಾವು ಯೋಚನೆ ಮಾಡಬೇಕು ಎನ್ನುವುದು ನನ್ನ ಈ ಬರಹದ ಆಶಯ. ಕಡಿಮೆ ಪಕ್ಶ ಒಂದು ಕುಟುಂಬ ತನ್ನ ಮಕ್ಕಳನ್ನು ‘ನಮ್ಮ ಬವ್ಯ ಬಾರತೀಯ ಸಂಸ್ಕ್ರುತಿಯ ಪದ್ದತಿಯೊಳಗೆ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಸುತ್ತೇವೆ’ ಎನ್ನುವ ನಿರ‍್ದಾರ ಮಾಡಿದ್ರು ಸಾಕು. ಆ ವಿಚಾರದಾರೆ ಮುಂದೆ ಬೆಳೆದು ಹೆಮ್ಮರವಾಗುತ್ತೆ.

(ಚಿತ್ರಸೆಲೆ: uncyclopedia.wikia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications