ಕವಿತೆ: ನೀಡು ನಿನ್ನಯ ಮಡಿಲನು

– ಚೇತನ್ ಪಟೇಲ್.

ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ
ನೀಡು ನಿನ್ನಯ ಮಡಿಲನು
ಒಡಲ ಒಳಗಿನ ಎಲ್ಲ ಬಾವನೆಗಳಿಗೆ
ನೀಡು ನಿನ್ನಯ ಮಡಿಲನು

ಕಣ್ಣು ತುಂಬಿ ನಿಂತ ಗಳಿಗೆ
ಕಂಡ ನಾ ನಿನ್ನ ಎದುರಾಳಿ
ನನ್ನೇ ಮರೆತೆ ನಗುವ ಕಂಡು
ಎಶ್ಟು ಚೆಂದ ಈ ಸಣ್ಣ ಸೋಲಲಿ

ಕಡಲ ಬೇಟಿಗೆ ನದಿಯ ಕಾತುರ
ನಿನ್ನ ಕಾಣದ ಕಂಗಳಿಗೆ ಕೊಂಚ ಬೇಸರ

ಪ್ರೀತಿ ಮೂಡಲು
ಮನ ಸೋಲದೆ ಇರುವುದೇ
ಸೋತರೂ ಸರಿಯೇ
ಕನಸಿಗೆ ನಿನ್ನದೇ ಹೆಸರಿದೆ
ಕುಶಿಯ ಸಂಚಿಕೆ ಸಣ್ಣಗೆ ಚಿಗುರಿದೆ
ಪ್ರತಿ ಕನಸಿನಲ್ಲೂ ನಿನ್ನದೇ ಪಿಸುಮಾತಿದೆ

ಕಣ್ಣಿಗೆ ಕಾವಲು ಈ ಕಣ್ಣಾಗಿರಲು
ಕಾಡಿಗೆ ಏತಕೆ
ಜೀವಕೆ ಉಸಿರು ನೀನಾಗಿರಲು
ನಾ ನೆಪಮಾತ್ರಕೆ

ಈ ನೆರಳು ಸಹ ನಿನ್ನದೇ
ಅದಕ್ಕೂ ಇರಲಿ ನಿನ್ನ ಅಪ್ಪುಗೆ
ಆ ಒಲವ ಊರಿಗೆ
ಸಾಗಲಿ ಪಯಣ ನಿನ್ನೊಟ್ಟಿಗೆ
ಜೀವದ ಸಂಗತಿ ಬಾವದ ಜೊತೆಗಾತಿ
ನೀಡು ನಿನ್ನಯ ಮಡಿಲ ನನ್ನೆಲ್ಲ ಕನಸಿಗೆ

(ಚಿತ್ರ ಸೆಲೆ: ninjamarketing.it)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: