ದೇವರಾಯನದುರ‍್ಗ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್.

 

ಬೆಂಗಳೂರಿನಿಂದ ಸುಮಾರು 70 ಕಿ.ಮೀ ಅಂತರದಲ್ಲಿರುವ ತುಮಕೂರು ಜಿಲ್ಲೆ ಒಂದು ಯಾತ್ರಾಸ್ತಳಗಳ ಆಗರ ಎಂದರೆ ತಪ್ಪಾಗಲಾರದು. ಅಂತಹ ಯಾತ್ರಾಸ್ತಳಗಳಲ್ಲಿ ದೇವರಾಯನದುರ‍್ಗವು ಒಂದು ಪವಿತ್ರವಾದ ಕ್ಶೇತ್ರ. ದೇವರಾಯನದುರ‍್ಗವು ಒಂದು ಪುಟ್ಟ ಗಿರಿದಾಮದಂತಿದ್ದು, ಸುತ್ತಲೂ ದಟ್ಟವಾದ ಹಸಿರು ಹಸಿರಾದ ವನಸಿರಿ ನಡುವೆ ಇರುವಂತಹ ಸುಂದರವಾದ ಹಿರಿದಾದ ಬೆಟ್ಟವಾಗಿದೆ. ಈ ಕಾಡಿನಲ್ಲಿ ಚಿರತೆ, ಕರಡಿ, ಜಿಂಕೆ ಮುಂತಾದ ವನ್ಯ ಪ್ರಾಣಿಗಳಿವೆ. ದೇವರಾಯನದುರ‍್ಗದಲ್ಲಿನ ಬೋಗ ನರಸಿಂಹ ಸ್ವಾಮಿ ಹಾಗೂ ಯೋಗ ನರಸಿಂಹ ಸ್ವಾಮಿ ದೇವಾಲಯಗಳು ತುಂಬಾ ಪ್ರಸಿದ್ದಿ ಪಡೆದಿವೆ. ಈ ಕ್ಶೇತ್ರವು ತುಮಕೂರು ನಗರದಿಂದ 16 ಕಿಲೋಮೀಟರ‍್ ಅಂತರವಿದ್ದು, 10 ಕಿಲೋ ಮೀಟರ‍್ ಕ್ರಮಿಸಿದಂತೆಯೇ ದೇವರಾಯನದುರ‍್ಗದ ಕಾಡು ಗೋಚರಿಸುತ್ತದೆ.  14 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಅರಸ, ದೇವರಾಯನ ಕಾಲದಲ್ಲಿ ಈ ಜಾಗವು ಮುನ್ನೆಲೆಗೆ ಬಂತು ಎಂದು ಹೇಳುವುದುಂಟು. ವಿಜಯನಗರ ಸಾಮ್ರಾಜ್ಯದ ಆಗಿನ ಪೆನುಗೊಂಡ ಸಂಸ್ತಾನಕ್ಕೆ ಈ ದೇವರಾಯನದುರ‍್ಗವು ಸೇರಿದ್ದಾಗಿಯೂ, ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರು ಸಂಸ್ತಾನಕ್ಕೆ ವರ‍್ಗವಾಯಿತು ಎಂದು ಹೇಳಲಾಗುತ್ತದೆ. ಮೈಸೂರು ಒಡೆಯರ ಕಾಲದಲ್ಲಿ ಬೋಗ ಲಕ್ಶ್ಮೀನರಸಿಂಹ ಸ್ವಾಮಿ ಹಾಗೂ ಯೋಗ ಲಕ್ಶ್ಮೀನರಸಿಂಹಸ್ವಾಮಿ ದೇವರ ವಿಗ್ರಹಗಳಿರುವ ದೇವಾಲಯಗಳು ಪ್ರತಿಶ್ಟಾಪನೆಯಾಗಿ, ಈ ಪ್ರದೇಶವು ಮತ್ತಶ್ಟು ಅಬಿವ್ರುದ್ದಿಗೊಂಡಿತು ಎನ್ನುವ ಪ್ರತೀತಿಯಿದೆ. ಹಾಗೆಯೇ ಇದೇ ಬೆಟ್ಟದ ಮೇಲೆ ಇರುವ ಪುರಾತನ ಕಾಲದ ಬಂಗಲೆಯು ಮೈಸೂರು ಅರಸರು ಈ ಪ್ರದೇಶಗಳಿಗೆ ಬೇಟಿ ನೀಡಿದಾಗ ಅಲ್ಲಿ ತಂಗಲು ನಿರ‍್ಮಿಸಿದ್ದರೆಂದು ಹೇಳಲಾಗುತ್ತದೆ.

ಯೋಗ ನರಸಿಂಹ ಸ್ವಾಮಿ

ದೇವರಾಯನದುರ‍್ಗದ ಬೆಟ್ಟದಲ್ಲಿ ನರಸಿಂಹ ತೀರ‍್ತ, ಪರಾಶಯ ತೀರ‍್ತ, ಪದಾ ತೀರ‍್ತ ಎಂಬ ಮೂರು ಕಲ್ಯಾಣಿಗಳಿವೆ. ಅದರಲ್ಲಿ ಒಂದು ಕಲ್ಯಾಣಿಯು ದುಸ್ತಿತಿಯಲ್ಲಿದ್ದು, ಬೋಗ ಹಾಗೂ ಯೋಗ ನರಸಿಂಹ ದೇವಾಲಯಗಳ ಬಳಿ ಇರುವ ಕಲ್ಯಾಣಿಯು ತಕ್ಕ ಮಟ್ಟಿಗೆ ಸುಸ್ತಿತಿಯಲ್ಲಿವೆ. ಬೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದ್ದು, ಅದರ ಉತ್ತರಾಬಿಮುಕವಾಗಿ ಸ್ವಲ್ಪ ದೂರದಲ್ಲಿ ಸಂಜೀವರಾಯ ಅಂದರೆ ಆಂಜನೇಯ ಮೂರ‍್ತಿಯ ದೇವಾಲಯವಿದೆ. ಇತ್ತೀಚೆಗೆ ಶ್ರೀ ರಾಗವೇಂದ್ರ ಸ್ವಾಮಿಗಳ ಮಟವನ್ನು ನಿರ‍್ಮಿಸಲಾಗಿದೆ. ದೇವರಾಯನದುರ‍್ಗದಲ್ಲಿ ಪ್ರತಿವರ‍್ಶವು ಹೋಳಿ ಹುಣ್ಣಿಮೆ ಹಬ್ಬದ ಹೊತ್ತಿನಲ್ಲಿ ಸುಪ್ರಸಿದ್ದ ನರಸಿಂಹ ಜಾತ್ರೆಯು ಜರುಗುತ್ತದೆ ಮತ್ತು ಈ ಜಾತ್ರೆಗೆ ಸಹಸ್ರಾರು ಮಂದಿ ಸೇರಿರುತ್ತಾರೆ.

ಬೆಟ್ಟದ ಬುಡದಿಂದ ಸುಮಾರು 2 ಕಿ.ಮೀ ನಶ್ಟು ಎತ್ತರಕ್ಕೆ ಸಾಗಿ ನಂತರ ಸುಸಜ್ಜಿತವಾದ ಮೆಟ್ಟಿಲುಗಳಿಂದ ಕೂಡಿರುವ ಬೆಟ್ಟವನ್ನು ಹತ್ತಿ ನಡೆದರೆ ಮೊದಲಿಗೆ ಹನುಮನ ವಿಗ್ರಹದ ದರ‍್ಶನವಾಗುತ್ತದೆ. ಇನ್ನೂ ಸ್ವಲ್ಪ ದೂರ ಹತ್ತಿ ನಡೆದರೆ ಯೋಗ ಲಕ್ಶ್ಮೀನರಸಿಂಹನ ದೇವಸ್ತಾನವು ಸಿಗುವುದು . ಮುಂಬಾಗದಲ್ಲಿ ಕಲ್ಯಾಣಿ ಇದ್ದು, ದೇವಸ್ತಾನದ ಪಕ್ಕದಲ್ಲಿ ಇರುವ ಅಂತರ ಗಂಗೆಯು ಸದಾ ನೀರಿನಿಂದ ಕೂಡಿರುತ್ತದೆ. ಈ ದೇವಸ್ತಾನವಿರುವ ಅದೇ ಬೆಟ್ಟದ ತುದಿಯಲ್ಲಿ ಗರುಡ ಗಂಬವಿದ್ದು ಅಲ್ಲಿ ದೀಪವನ್ನು ಹಚ್ಚಲಾಗುತ್ತದೆ. ಇದನ್ನು’ ಕುಂಬಿ’ ಎಂದು ಕರೆಯಲಾಗುತ್ತದೆ.

ತುಮಕೂರು ಜಿಲ್ಲೆಯ ಸುಪ್ರಸಿದ್ದ ನದಿಯಾದ ಜಯಮಂಗಲಿ ನದಿಯ ಉಗಮಸ್ತಾನ ಇರುವುದು ಇದೇ ದೇವರಾಯನದುರ‍್ಗದ ತಪ್ಪಲಿನಲ್ಲಿ ಹಾಗೂ ತುಮಕೂರಿನಿಂದ ದೇವರಾಯನದುರ‍್ಗಕ್ಕೆ ಹೋಗುವ ಮಾರ‍್ಗ ಮದ್ಯದಲ್ಲಿ ಸಿಗುವ ನಾಮದ ಚಿಲುಮೆ ಒಂದು ಪ್ರಕ್ಯಾತ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ . ನಾಮದ ಚಿಲುಮೆಯು ಸಸ್ಯ ವನ ಹಾಗೂ ಜಿಂಕೆವನವನ್ನು ಹೊಂದಿದೆ. ತ್ರೇತ್ರಾಯುಗದಲ್ಲಿ ಶ್ರೀರಾಮನು ವನವಾಸದ ಸಮಯದಲ್ಲಿ ವಿಹಾರಕ್ಕಾಗಿ ತಂಗಿದ್ದಾಗ, ಹಣೆಗೆ ನಾಮವನ್ನು ಇಡಲು ನೀರು ದೊರಕದಿದ್ದಾಗ , ಇದೇ ಜಾಗದಲ್ಲಿ ಬಾಣವನ್ನು ಬಿಟ್ಟಾಗ ನೀರು ಚಿಮ್ಮಿತೆಂಬ ಕಾರಣಕ್ಕಾಗಿ, ಈ ಪ್ರದೇಶಕ್ಕೆ ನಾಮದ ಚಿಲುಮೆ ಎಂದು ಹೆಸರು ಬಂದಿತೆಂಬ ಪ್ರತೀತಿ ಇದೆ. ಇಲ್ಲಿ ನೀರು ಈಗಲೂ ಚಿಮ್ಮಿ ಹರಿಯುತ್ತಿರುವುದು ಅದ್ಬುತವಾದ ವಿಶೇಶ. ದೇವರಾಯನ ದುರ‍್ಗದ ಬೆಟ್ಟದ ಪ್ರದೇಶಕ್ಕೆ ಸೇರಿದ ದುರ‍್ಗದಹಳ್ಳಿಯಲ್ಲಿ 8ನೇ ಶತಮಾನದಲ್ಲಿ ಶ್ರೀ ಶಂಕರಾಚಾರ‍್ಯರು ಸಂಸ್ತಾಪಿಸಿದ ವಿದ್ಯಾ ಶಂಕರ ದೇವಾಲಯವಿದೆ.

ದೇವರಾಯನದುರ‍್ಗವು ಚಾರಣಿಗರಿಗೂ ಸಹ ಹೇಳಿ ಮಾಡಿಸಿದಂತಹ ಜಾಗವಾಗಿದೆ. ಆದರೆ ದಟ್ಟ ಅರಣ್ಯವಾದ್ದರಿಂದ ಇಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಸ್ವಲ್ಪ ಜಾಗರೂಕರಾಗಿರಬೇಕಾಗುತ್ತದೆ. ಒಂದು ದಿನದ ಪ್ರವಾಸಕ್ಕೆ ದೇವರಾಯನದುರ‍್ಗವು ಸೂಕ್ತವಾಗಿದ್ದು, ಇಲ್ಲಿಗೆ ಓಡಾಡುವ ಬಸ್ಸುಗಳು ನಿಗದಿತವಾದ್ದರಿಂದ ಹೆಚ್ಚಾಗಿ ಸ್ವಂತ ವಾಹನಗಳಲ್ಲೆ ಈ ಸ್ತಳಕ್ಕೆ ಪ್ರವಾಸಿಗರು ಬೇಟಿ ನೀಡುತ್ತಾರೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ಉಪಯುಕ್ತ ಮಾಹಿತಿ. ಚೆನ್ನಾಗಿದೆ

  2. G.P. RAMANNA ಜಿ ಪಿ ರಾಮಣ್ಣ says:

    ಉತ್ತಮ‌ಮಾಹಿತಿ

ಅನಿಸಿಕೆ ಬರೆಯಿರಿ:

%d bloggers like this: