ದೇಶಿಕೇಂದ್ರ ಸಂಗನ ಬಸವಯ್ಯನ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ದೇಶಿಕೇಂದ್ರ ಸಂಗನ ಬಸವಯ್ಯ
ಕಾಲ: ಕ್ರಿ.ಶ. 17ನೆಯ ಶತಮಾನ
ದೊರೆತಿರುವ ವಚನಗಳು: 1182
ವಚನಗಳ ಅಂಕಿತನಾಮ: ಗುರುನಿರಂಜನ ಚನ್ನಬಸವಲಿಂಗ

ಒಂದನಾಡಹೋಗಿ ಮತ್ತೊಂದನಾಡುವರು
ಹಿಂದೆ ಹೋದುದ ಮುಂದೆ ತಂದಿಡುವರು
ಮುಂದಿನ ಮಾತ ಹಿಂದಕ್ಕೆ ನೂಕುವರು
ಇಲ್ಲದುದನುಂಟು ಮಾಡಿ ಗಂಟನಿಕ್ಕಿ ನೋಯಿಸುವರು ಗುರುಹಿರಿಯರ
ಮತ್ತೆ ತಾವು ಶರಣರೆಂದು ನುಡಿವರು (ವಚನ ಮಹಾಸಂಪುಟ:ಎರಡು: 649/607)

ಒಂದನ್+ಆಡಲ್+ಹೋಗಿ; ಆಡು=ನುಡಿ/ಹೇಳು; ಒಂದನಾಡಹೋಗಿ=ಒಂದು ಸಂಗತಿಯನ್ನು ಹೇಳಲು ತೊಡಗಿ; ಮತ್ತೊಂದನ್+ಆಡುವರು; ಮತ್ತೊಂದನ್=ಬೇರೆಯ ಸಂಗತಿಯನ್ನು; ಹಿಂದೆ ಹೋದುದ=ಕಳೆದುಹೋದ ಕಾಲದಲ್ಲಿ ನಡೆದಿದ್ದ ಸಂಗತಿಗಳನ್ನು; ತಂದು+ಇಡುವರು; ಮುಂದೆ ತಂದಿಡುವರು=ಈಗ ಹೇಳಲು ತೊಡಗುತ್ತಾರೆ;

ಮಾತ=ಮಾತನ್ನು; ಮುಂದಿನ ಮಾತ=ಮುಂದಿನ ಜೀವನಕ್ಕೆ ಅಗತ್ಯವಾದ ಹಿತನುಡಿಗಳನ್ನು; ನೂಕು=ತಳ್ಳು ; ಹಿಂದಕ್ಕೆ ನೂಕುವರು=ಕಡೆಗಣಿಸುತ್ತಾರೆ; ಇಲ್ಲದುದನ್+ಉಂಟು; ಇಲ್ಲದುದನುಂಟು ಮಾಡಿ=ಇಲ್ಲದೇ ಇರುವುದನ್ನು ಇದೆಯೆಂದು ಹೇಳುತ್ತ; ಗಂಟನ್+ಇಕ್ಕಿ; ಗಂಟು=ತೊಡಕು/ಸಮಸ್ಯೆ; ಗಂಟನಿಕ್ಕಿ=ಸಮಸ್ಯೆಗಳನ್ನು ತಂದೊಡ್ಡಿ; ನೋಯಿಸುವರು ಗುರುಹಿರಿಯರ=ಗುರುಹಿರಿಯರ ಮನಸ್ಸನ್ನು ಗಾಸಿಗೊಳಿಸುತ್ತಾರೆ;

ಮತ್ತೆ=ಬಳಿಕ/ನಂತರ; ಶರಣ=ಒಳ್ಳೆಯ ನಡೆನುಡಿಯನ್ನೇ ಶಿವನೆಂದು ತಿಳಿದು ಬಾಳುತ್ತಿರುವವನು; ಮತ್ತೆ ತಾವು ಶರಣರೆಂದು ನುಡಿವರು= ಜೀವನದಲ್ಲಿ ಕೆಟ್ಟದ್ದನ್ನು ಮಾಡುತ್ತಿದ್ದರೂ ತಾವು ಶರಣರೆಂದು ಹೊಗಳಿಕೊಳ್ಳುತ್ತಿರುತ್ತಾರೆ;

ತಮ್ಮನ್ನು ತಾವು ದೇವಮಾನವರೆಂದು, ಮಹಾಗುರುಗಳೆಂದು, ಶಿವಶರಣರೆಂದು ಹೇಳಿಕೊಂಡು ಮೆರೆಯುತ್ತಿರುವ ವ್ಯಕ್ತಿಗಳು ಜನಸಮುದಾಯದ ಮನದಲ್ಲಿ ಒಳ್ಳೆಯ ಅರಿವು ಮತ್ತು ನಡೆನುಡಿಗಳಿಂದ ಕೂಡಿದ ಸಾಮಾಜಿಕ ಎಚ್ಚರವನ್ನು ಮೂಡಿಸುವ ಬದಲು “ ಜಾತಿ ಮತ ದೇವರ ಹೆಸರಿನಲ್ಲಿ ಈ ಹಿಂದೆ ನಡೆದಿದ್ದ ಕಹಿ ಪ್ರಸಂಗಗಳನ್ನು ಮತ್ತೆ ಮತ್ತೆ ಕೆದಕಿ ಹೇಳುತ್ತ, ಒಂದು ಜಾತಿ/ಮತದ ಎದುರು ಮತ್ತೊಂದು ಜಾತಿ/ಮತದ ಜನರನ್ನು ಎತ್ತಿಕಟ್ಟಿ, ಜನಸಮುದಾಯಗಳಲ್ಲಿ ಒಡಕನ್ನುಂಟುಮಾಡಿ ಜನರು ಪರಸ್ಪರ ಅಸೂಯೆ, ಅಪನಂಬಿಕೆ, ಹಗೆತನ ಮತ್ತು ಸೇಡಿನಿಂದ ಹೊಡೆದಾಡುವಂತೆ ಮಾಡುತ್ತಿರುವುದನ್ನು “ ವಚನಕಾರನು ಕಟುವಾಗಿ ಟೀಕಿಸಿದ್ದಾನೆ.

ಶರಣರಾದವರು ಜನರ ಮನಸ್ಸನ್ನು ಪರಸ್ಪರ ಒಲವು, ಕರುಣೆ ಮತ್ತು ಸ್ನೇಹದಿಂದ ಬೆಸೆದು, ಎಲ್ಲರಿಗೂ ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ,ಆರೋಗ್ಯ ದೊರೆಯುವಂತಹ ಸಂಗತಿಗಳನ್ನು ಕುರಿತು ಚಿಂತಿಸುತ್ತ , ಜನರೆಲ್ಲರೂ ಜತೆಗೂಡಿ ನಲಿವು ನೆಮ್ಮದಿಯಿಂದ ಬಾಳುವುದಕ್ಕೆ ನೆರವಾಗುವಂತಹ ಮಾತುಗಳನ್ನು ಆಡಬೇಕೆ ಹೊರತು, ಜನಸಮುದಾಯದ ಸಾವು ನೋವಿಗೆ ಕಾರಣವಾಗುವಂತಹ ಮಾತುಗಳನ್ನು ಆಡಬಾರದು ಎಂಬ ಇಂಗಿತವನ್ನು ಈ ಸಾಲುಗಳು ಸೂಚಿಸುತ್ತಿವೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: