2020 ಕಲಿಸಿದ 20 ಜೀವನ ಪಾಟಗಳು

– .

ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ, ಮಾನವರ ತಪ್ಪುಗಳನ್ನು ತಿದ್ದಿ ತೀಡಿದೆ.

ಈ ವರುಶ ಒಂತರಾ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಗಳ ಪ್ರತಿಯೊಂದು ಓವರ‍್‌ನ ಎಸೆತ, ರನ್, ಬೌಂಡರಿ, ಸಿಕ್ಸರ್, ವೈಡ್, ನೋಬಾಲ್, ಬೌನ್ಸರ್, ಪ್ರೀ ಹಿಟ್, ರನೌಟ್, ಹಿಟ್ ವಿಕೆಟ್, ಸೂಪರ್ ಓವರ್ ರೀತಿಯಲ್ಲಿಯೇ ರೋಚಕತೆ, ಕುತೂಹಲದಿಂದ ಕೂಡಿದ ವರ‍್ಶವಾಗಿತ್ತು. 2020ರ ಆರಂಬದಲ್ಲಿಯೇ ಜಗತ್ತಿನಾದ್ಯಂತ ಕೊರೊನಾ ಎಂಬ ವೈರಸ್ ತನ್ನ ಕಬಂದ ಬಾಹುಗಳನ್ನು ಚಾಚುತ್ತಲೇ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಲು ಸಜ್ಜಾಗಿ ನಿಂತಿತ್ತು. ಪ್ರಕ್ರುತಿಯ ಕೂಸಾದರೂ, ಇಡೀ ಪ್ರಕ್ರುತಿಯನ್ನು ತನ್ನ ದುರಾಸೆಯಿಂದ ಹಾಳು ಮಾಡುತ್ತಿದ್ದ ಬುದ್ದಿಜೀವಿ ಎನಿಸಿಕೊಂಡ ಮಾನವರಿಗೆ ಪಾಟ ಕಲಿಸಿದ ಈ ವರುಶ, ತನ್ನ ಪಯಣಕ್ಕೆ ನಾಂದಿ ಹಾಡುತ್ತಿದೆ.

ಈ ವರ‍್ಶವು ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದಂತಹ ವರ‍್ಶವಾಗಿ ಅಚ್ಚಳಿಯದೆ ಉಳಿಯುತ್ತದೆಂದು ಹೇಳಬಹುದು. ಈ ವರ‍್ಶವು ಮಾನವರಿಗೆ ಕಲಿಸಿದ ಇಪ್ಪತ್ತು ಜೀವನ ಪಾಟಗಳನ್ನು ನೋಡೋಣ.

1. ಮನೆಯೇ ಮಂತ್ರಾಲಯ

2020ರ ಇಸವಿಯು ಮಾನವರಿಗೆ ಕಲಿಸಿದ ಮೊದಲ ಪಾಟವಿದೆಂದು ಹೇಳಬಹುದು. ಮನೆಯಿಂದ ಹೊರಗೆ ಯಾವಾಗಲೂ ತಿರುಗಾಡುತ್ತಿದ್ದ ಮಾನವರಿಗೆ ಕೊರೊನಾ ವೈರಸ್ ಬಂದಾದ ಮೇಲೆ ಮನೆಯೊಳಗಿದ್ದರೆ ಸ್ವರ‍್ಗ, ಹೊರಗಡೆ ಕಾಲಿಟ್ಟರೆ ಜನರ ಜೀವ ಮತ್ತು ಜೀವನಕ್ಕೆ ಆಪತ್ತು ಎಂದು ತಿಳಿಸಿ, ಜೀವ ರಕ್ಶಣೆಗೆ ಮನೆಯೇ ಮಂತ್ರಾಲಯ ಎಂದು ಸಾರಿ ಸಾರಿ ಹೇಳಿತು.

2. ಪ್ರಕ್ರುತಿಯಾಟದ ಮುಂದೆ ಮಾನವರದು ದೊಂಬರಾಟ

ಮಹಾತ್ಮ ಗಾಂದಿಯವರು ಹೇಳುವಂತೆ “ಪ್ರಕ್ರುತಿ ಮಾನವರ ಆಸೆಗಳನ್ನು ಮಾತ್ರ ಪೂರೈಸುವುದೇ ವಿನಹ ದುರಾಸೆಗಳನ್ನಲ್ಲ”. ನಗರೀಕರಣ, ಜಾಗತೀಕರಣಗಳಿಂದಾಗಿ ಮಾನವರು ಪ್ರಕ್ರುತಿಯನ್ನು ಹಾಳುಗೆಡುವುತ್ತಿದ್ದಾರೆ. ಆದರೆ ಪ್ರಕ್ರುತಿಯ ಮುಂದೆ ಮಾನವರು ಕುಬ್ಜರು, ಪ್ರಕ್ರುತಿಯಾಟದ ಮುಂದೆ ಮಾನವರದು ದೊಂಬರಾಟ ಎಂದು ಈ ವರ‍್ಶ ಹೇಳಿಕೊಟ್ಟಿತು.

3. ಕಾಣದ ಕಡಲಿಗೆ ಹಂಬಲಿಸಿದವರು ಮರಳಿ ಗೂಡಿಗೆ

ದುಡಿಮೆಗೆಂದು ವಿದೇಶಗಳಿಗೆ ಹಾರಿ ಹೋಗಿದ್ದ ಬಹುತೇಕರು ವಿದೇಶಗಳಲ್ಲಿ ಪರದೇಶಿಗಳಾಗಿ ಸಂಕಶ್ಟಕ್ಕೊಳಗಾದಾಗ ಮರಳಿ ಗೂಡಿಗೆ ಬರಲು ಹಾತೊರೆಯುವಂತೆ ಈ ವರ‍್ಶ ಮಾಡಿತು.

4. ಸ್ವಚ್ಚತೆಯ ಪಾಟ

ಬುದ್ದಿವಂತ ಜೀವಿ ಎನಿಸಿಕೊಂಡರೂ ಮಾನವರು ಸ್ವಚ್ಚತೆಯ ವಿಶಯದಲ್ಲಿ ಅವಿವೇಕಿಗಳಂತೆ ವರ‍್ತಿಸುತ್ತಿದ್ದರು. ಆದರೆ ಈ ವರ‍್ಶವು ಮಾನವರಿಗೆ ಪ್ರತಿಕ್ಶಣವೂ ತಮ್ಮ ಮನೆ, ನೆರೆಹೊರೆ, ನಗರ, ರಾಜ್ಯ, ದೇಶದ ಸ್ವಚ್ಚತೆಯ ಬಗ್ಗೆ ಹಾಗೂ ಪದೇ ಪದೇ ಕೈ ತೊಳೆಯುವ, ಮುಕಗವಸಿನ ಬಳಕೆಯ ಬಗ್ಗೆ ಜಾಗ್ರುತಿ ಮೂಡಿಸಿತು.

5. ಬಂದನದಿಂದಾಚೆಯ ಸ್ವಾತಂತ್ರ್ಯದ ಅರ‍್ತ

ಪ್ರಾಣಿ ಪಕ್ಶಿಗಳನ್ನು ಬಂದನದಲ್ಲಿಟ್ಟು ಮಜಾ ನೋಡುತ್ತಾ, ಸದಾ ಸ್ವೇಚ್ಚೆಯಿಂದ ಹಾರಾಡುತ್ತಿದ್ದ ಮಾನವರಿಗೆ ಲಾಕ್ ಡೌನ್ ದಿಗ್ಬಂದನವು ಪ್ರಾಣಿ ಪಕ್ಶಿಗಳ ಬಂದನದ ಹಿಂಸೆಯ ನೋವುಗಳನ್ನು ತಿಳಿಸಿ, ಸ್ವಾತಂತ್ರ್ಯದ ಅರ‍್ತ ಸ್ಪಶ್ಟವಾಗಿ ತೋರಿಸಿ ಅರಿವು ಮೂಡಿಸಿತು‌.

6. ಹಾಸಿಗೆಯಿದ್ದಶ್ಟು ಕಾಲು ಚಾಚು

“ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ನಮ್ಮದೇ… ಚಿಂತೆಯೇತಕೆ?” ಎಂದು ದುಂದುವೆಚ್ಚ ಮಾಡಿ ಜೀವನ ಸಾಗಿಸುತ್ತಿದ್ದವರಿಗೆ ಆಪತ್ತಿಗೆ ಬೇಕಾದ ಸಂಪನ್ಮೂಲಗಳನ್ನು ಮೊದಲು ಕೂಡಿಟ್ಟು, ಇರೋದರಲ್ಲಿ ಜೀವನ ಸಾಗಿಸುವಂತೆ ಎಚ್ಚರಿಸಿ, ಹಾಸಿಗೆಯಿದ್ದಶ್ಟು ಕಾಲು ಚಾಚಬೇಕು ಎನ್ನುವ ಹಿರಿಯರ ಮಾತನ್ನು ನೆನಪಿಸಿತು.

7. ಆಹಾರದ ಮಿತ ಬಳಕೆ ಮಹತ್ವ

ಆಹಾರವನ್ನು ವ್ಯರ‍್ತವಾಗಿ ಚೆಲ್ಲದೇ, ಮಾನವರು ಆಹಾರವನ್ನು ಹಿತಮಿತವಾಗಿ ಬಳಸುವುದನ್ನು, ಹಂಚಿಕೊಂಡು ತಿನ್ನಬೇಕೆಂಬುದನ್ನು 2020 ಕಲಿಸಿತು.

8. ಹಣಕ್ಕಿಂತ ಪ್ರಾಣ ಮುಕ್ಯ

ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದರೇನು, ಜೀವ ಹೋಗುವ ಸಮಯದಲ್ಲಿ ಪ್ರಯೋಜನಕ್ಕೆ ಬಾರದ ಹಣಕ್ಕಿಂತ ಪ್ರಾಣವೇ ಮುಕ್ಯವೆಂದು ಈ ವರುಶ ತಿಳಿ ಹೇಳಿತು.

9. ಉಳಿತಾಯ ಶಿಕ್ಶಣ

ಇರುವುದರಲ್ಲಿ ಜೀವನ ಸಾಗಿಸುವುದರ ಜೊತೆಗೆ, ಬವಿಶ್ಯದ ದ್ರುಶ್ಟಿಯಿಂದ ದುಡಿದ ಹಣ, ಆಹಾರ ಸಾಮಗ್ರಿಗಳನ್ನು ಕೂಡಿಡಬೇಕೆಂಬುವ ಉಳಿತಾಯ ಶಿಕ್ಶಣವನ್ನು ಕಲಿಸಿತು.

10. ಸಹಬಾಳ್ವೆ ಜೀವನ

ದೇಶ, ದರ‍್ಮ, ಜಾತಿ, ಸಂಸ್ಕ್ರುತಿ, ಬಾಶೆಗಳ ವಿಚಾರದಲ್ಲಿ ಸದಾ ಕಚ್ಚಾಡುತ್ತಿದ್ದ ಜನರಲ್ಲಿ ಸಹಬಾಳ್ವೆಯ ಮನೋಬಾವನೆಯನ್ನು ಮೂಡಿಸಿತು. ಕಶ್ಟಕಾಲದಲ್ಲಿ ನಮ್ಮ ನೆರೆವಿಗೆ ಬರುವವರು ನಮ್ಮ ನೆರೆಹೊರೆಯವರೆಂಬುದನ್ನು ಸಾರಿ ಸಾರಿ ಹೇಳಿತು.

11. ಸರಳ ಸಮಾರಂಬಗಳು

ಅಪಾರ ಹಣ ಕರ‍್ಚು ಮಾಡಿ, ದಾಂ ದೂಂ ಅಂತ ಮಾಡುತ್ತಿದ್ದ ಗ್ರುಹ ಪ್ರವೇಶ, ಮದುವೆ, ಹುಟ್ಟು ಹಬ್ಬ, ಜಾತ್ರೆ ಮುಂತಾದ ಸಮಾರಂಬಗಳನ್ನು ಸರಳವಾಗಿ ಕೂಡ ಮಾಡಬಹುದೆಂಬುದನ್ನು ಕಲಿಸಿತು.

12. ಪಾಲಿಗೆ ಬಂದದ್ದು ಪಂಚಾಮ್ರುತ

ತಾವು ಗಳಿಸಿದ ವಿದ್ಯಾರ‍್ಹತೆ, ಅನುಬವಕ್ಕಿಂತ ಹೆಚ್ಚಾಗಿ ಜೀವನ ನಿರ‍್ವಹಣೆಗೆ ಸಿಗುವ ಕೆಲಸಗಳನ್ನು ಪಾಲಿಗೆ ಬಂದದ್ದು ಪಂಚಾಮ್ರುತ ಎಂದು ತಿಳಿದು ಮಾಡಬೇಕೆಂದು ಹೇಳಿಕೊಟ್ಟಿತು. ಲಕ್ಶ ರೂಪಾಯಿ ಸಂಬಳ ಪಡೆಯುತ್ತಿದ್ದವರೆಲ್ಲ, ಕೆಲಸವಿಲ್ಲದೆ ಬೀದಿಪಾಲಾದಾಗ ಅವರಿಗೆ ಯಾವ ಕೆಲಸವೂ ಕೀಳಲ್ಲವೆಂದು ಬುದ್ದಿ ಹೇಳಿ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿಗುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದು ಕಲಿಸಿತು.

13. ಮನೆಯಡುಗೆಯ ಮಹತ್ವ

ಬಾಯಿ ರುಚಿಗಾಗಿ, ಕಂಡಕಂಡ ಪಾಸ್ಟ್ ಪುಡ್ ಗಳನ್ನು ತಿಂದು ದೇಹದ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದವರಿಗೆ ಮನೆಯಡುಗೆ ಶುಚಿ ರುಚಿಯ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದೆಂದು ಸಾರಿ ಹೇಳಿತು.

14. ಪಟ್ಟಣದಿಂದ ಹಳ್ಳಿಯೆಡೆಗೆ

ಕೊರೊನಾ ವೈರಸ್ ಆರ‍್ಬಟವು ಜೀವನ ನಿರ‍್ವಹಣೆಗಾಗಿ ದುಡಿಯಲು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದ ಲಕ್ಶಾಂತರ ಜನ ಪಟ್ಟಣದಲ್ಲಿ ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿ, ಮತ್ತೆ ಹಳ್ಳಿಯ ಜೀವನವೇ ಉತ್ತಮವೆಂದು ತಿಳಿದು ಹಳ್ಳಿಗೆ ಮರಳಿ, ಮಣ್ಣಿನ ಮಕ್ಕಳಾಗುವಂತೆ ಮಾಡಿತು. ಅಲ್ಲದೇ ಕಲುಶಿತ ಗಾಳಿ-ನೀರಿನ ಪಟ್ಟಣಕ್ಕಿಂತ ಪರಿಶುದ್ದ ಗಾಳಿ-ನೀರು ಸಿಗುವ ವಾತಾವರಣದ ಹಳ್ಳಿಯೇ ಉತ್ತಮವೆಂಬ ಅರಿವು ಮೂಡಿಸಿದ್ದು ಈ ವರುಶ‌.

15. ಸಂಬಂದಗಳ ಬೆಲೆ

ಯಾವಾಗಲೂ ಹಣ, ಆಸ್ತಿ-ಅಂತಸ್ತು ಅಂತಾನೇ ರಕ್ತ ಸಂಬಂದಗಳನ್ನು ಮರೆತು ಹೋಗಿದ್ದವರಿಗೆ ಸಂಬಂದಗಳ ಬೆಲೆ ಏನೆಂಬುದನ್ನು ಅರ‍್ತ ಮಾಡಿಸಿತು. ತಂದೆ ತಾಯಿ, ಬಂದು ಬಳಗದವರ ಜೊತೆ ಕೂಡಿ ಬಾಳುವುದನ್ನು ಕಲಿಸಿತು.

16. ಯುದ್ದೋನ್ಮಾದ ಅಡಗಿಸಿತು

ದೇಶ ದೇಶಗಳ ನಡುವೆ ರಾಜಕೀಯ, ಆರ‍್ತಿಕ ವಿಚಾರಗಳಲ್ಲಿದ್ದ ಯುದ್ದೋನ್ಮಾದವನ್ನು ಮದ್ದು ಗುಂಡುಗಳಿಲ್ಲದೇ ಅಡಗಿಸಿತು.

17. ನಿಜವಾದ ದೇವರುಗಳ ದರ‍್ಶನ

ಕಣ್ಣಿಗೆ ಕಾಣದ ವೈರಸ್ ಒಂದು ಗುಡಿ, ಚರ‍್ಚ್, ಮಸೀದಿ, ಗುರುದ್ವಾರ, ಬಸದಿಗಳಲ್ಲಿ ಪೂಜಿಸಲ್ಪಡುತ್ತಿದ್ದ ದೇವರುಗಳ ಜೊತೆಗೆ ವೈದ್ಯರು, ಶುಶ್ರೂಶಕರು, ಪೌರ ಕಾರ‍್ಮಿಕರು, ಸಾಮಾಜಿಕ ಕಾರ‍್ಯಕರ‍್ತರು, ಸೈನಿಕರು, ಆರಕ್ಶಕರನ್ನು ನಿಜವಾದ ದೇವರುಗಳೆಂದು ಸಾರಿ ಹೇಳಿತು.

18. ಮನೆಯೇ ಗ್ರಂತಾಲಯ, ಚಿತ್ರಮಂದಿರ

ಲಾಕ್ ಡೌನ್ ದಿಗ್ಬಂದನದ ಸಮಯದಲ್ಲಿ ಮನೆಯೊಳಗೆ ಬಂದಿಯಾಗಿದ್ದ ಜನತೆಗೆ ಓದುವುದನ್ನು, ಸ್ರುಜನಾತ್ಮಕವಾಗಿ ಯೋಚಿಸುವುದನ್ನು, ಮನೋರಂಜನೆಯನ್ನು ಕುಟುಂಬದ ಸದಸ್ಯರ ಜೊತೆಯಲ್ಲಿ ಕಂಡುಕೊಳ್ಳುವುದನ್ನು ಕಲಿಸಿತು.

19. ಹಳೆ ಬೇರು, ಹೊಸ ಚಿಗುರು ಸಮ್ಮಿಲನ

ಆದುನಿಕತೆಯ ಬರಾಟೆಯಲ್ಲಿ ಕಳೆದು ಹೋಗಿ, ಅಜ್ಜ-ಅಜ್ಜಿಯರ ಸಂಪರ‍್ಕದಿಂದ ದೂರವಾಗಿದ್ದ ಮಕ್ಕಳನ್ನು ಮತ್ತೆ ಒಂದಾಗುವಂತೆ ಮಾಡಿ, ಹಳೆ ಬೇರು, ಹೊಸ ಚಿಗುರು ಒಂದೆಡೆ ಸೇರಿ, ಕೂಡಿ ಬಾಳುವ ಆನಂದವನ್ನು ಕಲಿಸಿತು. ಇದರೊಡನೆ ಶಿಕ್ಶಣ, ಔದ್ಯೋಗಿಕ ಕ್ಶೇತ್ರದಲ್ಲಿ ಸಹ ಸಾಂಪ್ರದಾಯಿಕ ಪದ್ದತಿಯ ಜೊತೆಗೆ ಹೊಸ ಮಾದರಿಯ ಶಿಕ್ಶಣ, ತಂತ್ರಜ್ನಾನಗಳ ಬಗ್ಗೆ ಅರಿವು ಮೂಡಿಸಿತು‌.

20. ನಮ್ಮ ಸಾಮರ‍್ತ್ಯ ಏನೆಂಬುದನ್ನು ಅರಿವಾಗಿಸಿದ್ದು

2020ರ ಇಸವಿಯು ಕಲಿಸಿದ ಅತಿಮುಕ್ಯವಾದ ಪಾಟ ಜೀವನದಲ್ಲಿ ಬರುವ ಪ್ರತಿಯೊಂದು ಸವಾಲುಗಳನ್ನು ಎದುರಿಸುವ ಸಾಮರ‍್ತ್ಯ ನಮ್ಮೊಳಗಿದೆ ಎಂಬುದನ್ನು ಜಾಗ್ರುತಗೊಳಿಸಿ, ಸಮಸ್ಯೆ, ಸವಾಲುಗಳೆದುರು ಹೋರಾಡುವ ಮನೋಸ್ತೈರ‍್ಯವನ್ನು ತುಂಬಿ, ಬದುಕುವ ಕಲೆಯನ್ನು ಕಲಿಸಿತು. ಬಯದ ವಾತಾವರಣದ ಕಗ್ಗತ್ತಲನ್ನು ಆತ್ಮಸ್ತೈರ‍್ಯದ ಬೆಳಕು ದೂರ ಮಾಡಬಲ್ಲುದು ಎಂಬುದನ್ನು ತಿಳಿಸಿಕೊಟ್ಟಿತು.

ಒಟ್ಟಿನಲ್ಲಿ 2020ರ ಇಸವಿಯು ಕಲಿಸಿದ ಪ್ರತಿಯೊಂದು ಪಾಟಗಳು ಮುಂದಿನ ದಿನಗಳಿಗೆ ದಾರಿದೀಪವಾಗಿ, ಹೇಗೆ ಬಾಳಬೇಕೆಂಬುದನ್ನು ಅರ‍್ತಮಾಡಿಸಿದೆ ಎನ್ನಬಹುದು.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Sanjeev Hs says:

    ಅರ್ಥಗರ್ಭಿತವಾಗಿದೆ

  2. Raghuramu N.V. says:

    ಚೆನ್ನಾಗಿದೆ ಸರ್

  3. shivamurthy H says:

    ಲೇಖನವನ್ನು ಪ್ರಕಟಿಸಿ, ಪ್ರೋತ್ಸಾಹಿಸಿದ ಸಂಪಾದಕರಿಗೆ ಹಾಗೂ ಲೇಖನವನ್ನು ಓದಿ ಮೆಚ್ಚಿದ ಸಹೃದಯರಿಗೆ ಹೃತ್ಪೂರ್ವಕ ಧನ್ಯವಾದಗಳು

Sanjeev Hs ಗೆ ಅನಿಸಿಕೆ ನೀಡಿ Cancel reply