ಚಿಂತನಾ ಮಾಲಿನ್ಯ – ಆಲೋಚನೆಯಂತೆ ನಡೆ

.

ಮನಸು, Mind

ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಕೇಳಿದ್ದೇವೆ. ಇದ್ಯಾವುದು ಇದು ಚಿಂತನಾ ಮಾಲಿನ್ಯ? ಎಂದಿರಾ. ಹೌದು, ಎಲ್ಲ ಮಾಲಿನ್ಯದಂತೆ ಈ ಚಿಂತನಾ ಮಾಲಿನ್ಯವೂ ಕೂಡಾ ಆರೋಗ್ಯಕ್ಕೆ ಹಾನಿಕಾರಕ. ವಿರಾಮ ರಹಿತ, ದಟ್ಟ ಟ್ರಾಪಿಕ್ ನಂತೆ ಎಡೆಬಿಡದೆ ಯೋಚನೆಗಳು ಮನುಶ್ಯನ ಮೆದುಳಿನಲ್ಲಿ ಓಡಾಡತೊಡಗಿದರೆ ಸಹಜವಾಗಿ ಮನುಶ್ಯ ಯೋಚಿಸಿ ಯೋಚಿಸಿ ತನ್ನ ಸ್ತಿಮಿತ ಕಳೆದುಕೊಂಡು ಉದ್ವೇಗಕ್ಕೆ, ಒತ್ತಡಕ್ಕೆ ಒಳಗಾಗಿ ಒಂದು ರೀತಿಯಲ್ಲಿ ಹುಚ್ಚರಂತೆ ವರ‍್ತಿಸುವುದನ್ನು ನಾವು ನೋಡಿದ್ದೇವೆ.

ಬಾಲ್ಯ ಕಳೆದು ಯೌವ್ವನಕ್ಕೆ ಕಾಲಿಟ್ಟಂತೆ ಜವಾಬ್ದಾರಿಗಳು ಹೆಚ್ಚುತ್ತ ಹೋಗುತ್ತವೆ. ಜೊತೆ ಜೊತೆಗೆ ಜೀವನದ ಸಮಸ್ಯೆಗಳು ಕಾಡುವುದರಿಂದ ಸಹಜವಾಗಿ ಒತ್ತಡಗಳಿಗೆ ಒಳಗಾಗಿ ಕಾಯಿಲೆಗಳಿಗೆ ಈಡಾಗುವ ಸಂಬವ ಹೆಚ್ಚು. ಜೊತೆಗೆ ಆಗಾಗ ಕಿನ್ನತೆಯೂ ಕಾಡುತ್ತದೆ.

ಬಾಲ್ಯದಲ್ಲಿ ಆಡಿಪಾಡಿ, ಹಕ್ಕಿಯಂತೆ ರೆಕ್ಕೆ ಬಿಚ್ಚಿ ಆಗಸದಲ್ಲಿ ತೇಲುವ ಬಾವದಲ್ಲಿ, ಸ್ವಚ್ಚವಾದ, ನೀರಿನಂತೆ ತಿಳಿಯಾದ ಮನಸ್ಸು ಹೊಂದಿರುವುದರಿಂದ ಮಕ್ಕಳು ಆರೋಗ್ಯ ಪೂರ‍್ಣವಾಗಿರುತ್ತಾರೆ. ಪೋಶಕರ ರಕ್ಶಣೆಯಲ್ಲಿ ಪಾಲಿಸಲ್ಪಟ್ಟ ಮಕ್ಕಳು, ಹೊಟ್ಟೆತುಂಬ ಉಂಡು, ಕಣ್ಣು ತುಂಬ ನಿದ್ರೆ ಮಾಡಿ ಆರೋಗ್ಯದಿಂದ ನಳನಳಿಸುತ್ತಾರೆ. ಇದಕ್ಕೆ ವಿರುದ್ದವಾಗಿ, ರಕ್ಶಣಾ ರಹಿತ ಅನಾತ ಬಡ ಮಕ್ಕಳ ಪರಿಸ್ತಿತಿ, ಹಸಿವಿನಿಂದ ಬಿಕ್ಶೆ ಬೇಡುವಂತೆ ಇಲ್ಲ ಸಣ್ಣ ಪುಟ್ಟ ಅಪರಾದಗಳು ಎಸಗುವಂತೆ (ಎಲ್ಲವೂ ಹೊಟ್ಟೆ ಹಸಿವಿಗಾಗಿ) ಪ್ರೇರೇಪಿಸುತ್ತದೆ. ಈ ರೀತಿಯ ಸನ್ನಿವೇಶಗಳ ಮತ್ತು ಚಿಂತನೆಯ ಒತ್ತಡದಿಂದಾಗಿ ಕಿರು ವಯಸ್ಸಿನಲ್ಲಿಯೇ, ಮನೋ ವ್ಯಾಕುಲತೆ, ಕಿನ್ನತೆಯನ್ನು ಮಕ್ಕಳು ಅನುಬವಿಸುತ್ತಾರೆ. ಇದು ಅವರು ಬೆಳೆಯುವ ಪರಿಸರದ ಪರಿಣಾಮವಾಗಿಯೇ ಆಗಿರುತ್ತದೆ.

ಇನ್ನು ಯೌವ್ವನದ ಹುಚ್ಚಾಟದಲ್ಲಿ, ಸಹವಾಸ ದೋಶದಿಂದ ಮದ್ಯಪಾನ, ದೂಮಪಾನ, ಗಾಂಜಾ ಅಪೀಮು ಮುಂತಾದ ಮಾದಕ ದ್ರವ್ಯಗಳ ಸೇವನೆಯ ದಾಸರಾಗುವುದರ ಜೊತೆಗೆ ಹಣ, ಗನತೆ, ವ್ಯಕ್ತಿತ್ವ ಎಲ್ಲ ಕಳೆದುಕೊಂಡು ವ್ಯಸನಿಗಳಾಗಿ ಪರಿವರ‍್ತಿತರಾಗುವುದು ಕೂಡಾ ಚಿಂತನೆಯ ಮಾಲಿನ್ಯದಿಂದಲೇ! ಈ ಚಿಂತನಾ ಮಾಲಿನ್ಯ ಮದ್ಯಮ ವಯಸ್ಕರನ್ನೂ ಕಾಡುವುದು. ಮನದಲ್ಲಿ ಅತಿಯಾದ ಆಸೆ ಆಮಿಶಗಳನ್ನಿಟ್ಟುಕೊಂಡು, ತಮ್ಮ ಜೀವನ ಶೈಲಿ ವಿಶೇಶವಾಗಿರಬೇಕು, ಶ್ರೀಮಂತವಾಗಿರಬೇಕು ಎನ್ನುವ ರೀತಿಯಲ್ಲಿ ಆಲೋಚಿಸುವ ಹಾಗೆ ಮಾಡಿ, ತಮ್ಮ ಶಕ್ತಿಯ ಮಿತಿ ಮೀರಿ ನಡೆಯುವ ಹಾಗೆ ಮಾಡುವುದು. ಅದರಿಂದ ಅಡ್ಡದಾರಿಗಳು ತೆರೆದುಕೊಂಡು, ಕೆಲವರು ತಮಗರಿವಿಲ್ಲದೆ ಅಪರಾದ ಲೋಕಕ್ಕೆ ಕಾಲಿಟ್ಟು ಅಪರಾದಿಗಳಾಗಿ ಬಿಡುತ್ತಾರೆ. ಇದು ತಪ್ಪು ಎಂದು ಅರಿವಾಗುವಶ್ಟರಲ್ಲಿ ಬಹು ದೂರ ನಡೆದಿರುತ್ತಾರೆ. ಮತ್ತು ಅಪರಾದಿಗಳಾಗಿ ಕಾನೂನಿನ ಬಲೆಗೆ ಬಿದ್ದಾಗ ಒತ್ತಡ, ಉದ್ವೇಗ, ಕಿನ್ನತೆ ಉಂಟಾಗಿ ಮಾನಸಿಕ ರೋಗಿಗಳಾಗಿ ಬಿಡುತ್ತಾರೆ.

ನಮ್ಮ ಮೆದುಳಿನ ಆಲೋಚನೆ ಸ್ಪಶ್ಟವಾಗಿ ಏಕಮುಕವಾಗಿದ್ದರೆ, ಮುಂಜಾನೆಯ ಟ್ರಾಪಿಕ್ ಇಲ್ಲದ ಶಾಂತ, ನೀರವ ರಸ್ತೆಯಂತೆ ಸ್ವಸ್ತವಾಗಿರುತ್ತದೆ. ನಮ್ಮ ಮೆದುಳಿನ ಆಲೋಚನೆ, ನೂರಾರು ಆಸೆ, ಆಮಿಶ, ಕೈ ಮೀರಿದ ಕನಸು, ದುರಾಸೆ, ಈರ‍್ಶ್ಯೆ, ದ್ವೇಶಗಳಿಂದ ಕೂಡಿದ್ದರೆ ಗೌಜು, ಗದ್ದಲದಿಂದಿರುವ ಯೋಚನೆಗಳ ದಟ್ಟಣೆಯಿಂದ ಅನಾರೋಗ್ಯರಾಗಿ ಕಾಣಿಸುವಂತೆ ಮಾಡುತ್ತದೆ. ಚಿಂತನಾ ಮಾಲಿನ್ಯದಿಂದ ಮೆದುಳು ಸಿಡಿಯದೆ ಇರುತ್ತದೆಯೇ? ಸ್ವಸ್ತ ಮನುಶ್ಯ ಅಸ್ವಸ್ತನಾಗದೆ ಇರುತ್ತಾನಾ? ಕಂಡಿತವಾಗಿಯೂ ಆತನಲ್ಲಿ ಮಾನಸಿಕ ಅಸ್ವಸ್ತತೆಯ ವ್ಯಕ್ತಿತ್ವವೇ ಅನಾವರಣಗೊಳ್ಳುತ್ತದೆ.

ನಮ್ಮ ಇತಿಮಿತಿಯನರಿಯದೆ, ಮನಸ್ಸು ಹರಿದ ಕಡೆ ಹರಿಬಿಟ್ಟು, ಆಸೆ ಆಮಿಶಗಳನ್ನು ನಿಯಂತ್ರಿಸದೆ ಮುಟ್ಟಾಳರಾದರೆ, ತನಗೆ ಬೇಕು ಎನಿಸಿದ್ದನ್ನು ಶತಾಯಗತಾಯ ಪಡೆದೇ ತೀರುವ ಹಟಕ್ಕೆ ಬಿದ್ದರೆ ಅಂತವರು ಸಹಜವಾಗಿ ಅಪರಾದ ಲೋಕಕ್ಕೆ ಕಾಲಿಡದೆ ಏನು ಮಾಡಿಯಾರು? ಮತ್ತು ಅದರಲ್ಲಿ ಬಹಳ ದೂರ ಸಾಗಿ ಬಂದಾಗ ಅಪರಾದಿಗಳಾಗಿ, ನಂತರ ಪಶ್ಚತ್ತಾಪ ಪಟ್ಟು ಒತ್ತಡ, ಕಿನ್ನತೆಗೊಳಗಾಗಿ ಮನೋರೋಗಿಗಳಾಗುವುದು ಸಹಜ ಸತ್ಯ. ಮನುಶ್ಯ ತನ್ನ ಇತಿಮಿತಿ ಅರಿತು ಬಾಳಬೇಕು. ಆತ ಮನಸ್ಸನ್ನು ನಿಯಂತ್ರಿಸುವುದನ್ನು ಕಲಿಯಬೇಕು. ತನ್ನ ದಿನಚರಿಯಲ್ಲಿ ಆರೋಗ್ಯಪೂರ‍್ಣ ಚಟುವಟಿಕೆಗಳನ್ನು ನಿಯಮಿತವಾಗಿ ರೂಡಿಸಿಕೊಳ್ಳಬೇಕು. ದ್ಯಾನ, ವ್ಯಾಯಾಮ, ಯೋಗ, ಓದುವಿಕೆಯಂತಹ ಒಳ್ಳೆ ಹವ್ಯಾಸಗಳು ನಮ್ಮ ಮನಸ್ಸನ್ನು ನಿಯಂತ್ರಿಸುವುದರ ಜೊತೆಗೆ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಡುವಲ್ಲಿ ನೆರವಾಗುತ್ತವೆ.

ನಮ್ಮ ಆಲೋಚನೆಯಂತೆ ನಮ್ಮ ನಡೆ, ನಮ್ಮ ನಡೆಯಂತೆ ನಮ್ಮ ವ್ಯಕ್ತಿತ್ವ. ಅಲ್ಲವೇ?

( ಚಿತ್ರಸೆಲೆ : sloanreview.mit.edu )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. Raghuramu N.V. says:

    ಚಿಂತನಾ ಮಾಲಿನ್ಯ- ಚೆನ್ನಾಗಿದೆ ಸರ್

  2. Sanjeev Hs says:

    ಚಿಂತನೆಗೆ ಹಚ್ಚಿದ ‘ಚಿಂತನಾ ಮಾಲಿನ್ಯ’ ಚಿಂತನಾತ್ಮಕವಾಗಿದೆ ??

  3. ashoka p says:

    ತಮ್ಮ ಹಾರೈಕೆಗೆ ಅಭಿನಂದನೆಗಳು

ಅನಿಸಿಕೆ ಬರೆಯಿರಿ: