ಕವಿತೆ : ಎಲ್ಲರ ಬಾಳನು ಬೆಳಗಲಿ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.

ಸಂಕ್ರಾಂತಿ, Sankranti

ಮುಂಜಾನೆಯ ನಸುಕಿನಲ್ಲಿ
ಮಡಿಯನುಟ್ಟ ನೀರೆಯರು
ಅಂಗಳಕ್ಕೆ ನೀರೆರೆದು ಬಿಡಿಸಿಹರು
ಚಿತ್ತಾರದ ರಂಗವಲ್ಲಿ

ಮಾಗಿಯ ಚಳಿಯಲ್ಲಿ
ಮಾದವನ ನೆನೆದು
ಹುಗ್ಗಿಯ ಸವಿ ಸವಿದು
ಮುಳುಗಿಹರು ಸುಗ್ಗಿಯ ಸಂಬ್ರಮದಲ್ಲಿ

ರೈತರ ಶ್ರಮದಿ ಬಂದ
ವರುಶದ ಪಸಲು
ನೋಡುತಿರೆ ಆನಂದ
ದಾನ್ಯಗಳ ರಾಶಿಯ ಸಾಲು

ಸಿಂಗರಿಸಿದ ದನಕರುಗಳು
ಇವರು ಅನ್ನದಾತನ ಮಿತ್ರರು
ಮೆರವಣಿಗೆಗೆ ಸಿದ್ದವಾಗಿಹ ಜಾನುವಾರಗಳು
ಬೂದೇವಿಯ ಮೂಕಸೇವಕರು

ಎಳ್ಳು ಬೆಲ್ಲದ ಸಿಹಿಯ ಹಂಚುತ್ತಾ
ಸೌಹಾರ‍್ದವ ಸಾರುವ ಚಿಣ್ಣರು
ಕಬ್ಬಿನ ಜಲ್ಲೆಯ ರಸವ ಹೀರುತ್ತಾ
ಹಬ್ಬದ ಸಡಗರದಿ ನಲಿದಿಹರು

ಪತವ ಬದಲಿಸುತ್ತಿರಲು ಸೂರ‍್ಯನು
ಅದುವೇ ಉತ್ತರಾಯಣ
ಮಕರ ರಾಶಿಗೆ ಸಾಗುತ ನೇಸರನು
ತಂದಿಹ ಮಕರ ಸಂಕ್ರಮಣ

ಹೊಳೆಯುತಿರೆ ರವಿಯ ಕಾಂತಿ
ಮೂಡಲಿ ಮನಕೆ ಶಾಂತಿ
ಹೊರದೂಡಲಿ ಕ್ರಾಂತಿಯ ಬ್ರಾಂತಿ
ಎಲ್ಲರ ಬಾಳನು ಬೆಳಗಲಿ ಸಂಕ್ರಾಂತಿ

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: