ಕುವೆಂಪು ಕವನಗಳ ಓದು – 4ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಇಂದಿನ ದೇವರು

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೆ ದಾಸ್ಯವಾಯ್ತು
ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ನಿದ್ದೆ ಮಾಡುತ್ತಿಹರು ಹಲವು ದೇವತೆಗಳೆಲ್ಲ
ಬಿದ್ದವರು ಕಲ್ಲಾಗಿ ಕೆಲವರಿಹರು
ಕ್ಲೀಬತನದಲಿ ಮರೆತು ತಮ್ಮ ಪೌರುಷವನೆಲ್ಲ
ಸತ್ತೆ ಹೋದಂತಿಹರು ಮತ್ತುಳಿದಮರರು
ಅವರ ಗುಡಿ ಹಾಳಾಯ್ತು ಅವರ ನುಡಿ ಮಡಿದುಹೋಯ್ತು
ಅವರ ನೆಮ್ಮಿದ ನಮಗೆ ಬೀಳುಗತಿಯಾಯ್ತು
ಮುಂದಿವಳನಾರಾಧಿಸುವ ಶಕ್ತಿಯಾರ್ಜಿಸುವ
ಒಂದು ಶತಮಾನವನು ಒಂದೆ ದಿನ ಜೈಸುವ
ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು
ಭಾರತಾಂಬೆಯೆ ನಮಗಿಂದು ಜೀವನದ ದೇವತೆಯು
ವಿಶ್ವರೂಪಿಣಿಯವಳು ವಿಶ್ವಮುಖಿಯೈ
ನಮ್ಮೆಲ್ಲರಂಗಗಳೆ ನಮ್ಮಂಬೆಯಂಗವೈ
ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ
ಇಂದೊ ನಾಳೆಯೊ ದಾಸನೀಶನಾಗಲೆ ಬೇಕು
ಎಂದಿದೆ ಎದ್ದೇಳಿ ನಾಳೆಯೆನೆ ಹೋಕು
ನಾವೆ ದೇವತೆಗಳೈ ಭಾರತವೆ ಸ್ವರ್ಗವೈ
ಭಾರತಾಂಬೆಯೆ ನಮಗೆ ದೇವಿಯೈ ಜನನಿ.

ಬಾರತೀಯರು ತಮ್ಮ ಮಯ್ ಮನಕ್ಕೆ ಕಟ್ಟಿಬಿಗಿದಿರುವ ದಾಸ್ಯದ ಸಂಕೋಲೆಗಳನ್ನು ತಾವೇ ಕಿತ್ತೊಗೆದು, ತಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ತಾವೇ ರೂಪಿಸಿಕೊಂಡು, ತಾಯಿ ಸಮಾನಳಾದ ಬಾರತಾಂಬೆಯೊಬ್ಬಳನ್ನೇ ದೇವರೆಂದು ತಿಳಿದು ಪೂಜಿಸುವಂತೆ ಈ ಕವನದಲ್ಲಿ ಕರೆ ನೀಡಲಾಗಿದೆ.

ಕ್ರಿ.ಶ.1931 ರಲ್ಲಿ ಈ ಕವನ ರಚನೆಗೊಂಡಿದೆ. ಅಂದು ಇಂಡಿಯಾ ದೇಶದ ಜನಸಮುದಾಯವು ಆಂಗ್ಲರ ಆಡಳಿತದಲ್ಲಿ ರಾಜಕೀಯ ದಾಸ್ಯಕ್ಕೆ ಸಿಲುಕಿರುವುದರ ಜತೆಗೆ ನೂರಾರು ದೇವರುಗಳನ್ನು ಪೂಜಿಸುತ್ತ ಮಾನಸಿಕ ದಾಸ್ಯದಿಂದ ನರಳುತ್ತಿತ್ತು.

( ಇಂದು=ಈಗ/ಈ ದಿನ; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು ಇಲ್ಲವೇ ಶಕ್ತಿಯನ್ನು ದೇವರೆಂದು ಮಾನವ ಸಮುದಾಯ ಕಲ್ಪಿಸಿಕೊಂಡಿದೆ; ಇಂದಿನ ದೇವರು=ದೇಶದ ಜನಸಮುದಾಯದ ಮಯ್ ಮನವನ್ನು ಕಟ್ಟಿಬಿಗಿದಿರುವ ದಾಸ್ಯದ ಸಂಕೋಲೆಗಳನ್ನು ಕಡಿದು ತುಂಡರಿಸಿ, ಒಳ್ಳೆಯ ಬದುಕನ್ನು ನೀಡುವ ದೇವರು. ವ್ಯಕ್ತಿಯ ಮಯ್ ಮನದಲ್ಲಿ ಒಳಿತಿನ ನಡೆನುಡಿಗಳಿಗೆ ಪ್ರೇರಣೆಯನ್ನು ನೀಡುವ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ‘ ಇಂದಿನ ದೇವರು ‘ ಎಂದು ಕರೆಯಲಾಗಿದೆ; ದೇವರ್+ಅನ್+ಎಲ್ಲ; ಅನ್=ಅನ್ನು; ನೂಕು+ಆಚೆ; ನೂಕು=ತಳ್ಳು; ಆಚೆ=ಹೊರಗಡೆ;

ನೂರು ದೇವರನೆಲ್ಲ ನೂಕಾಚೆ ದೂರ=ಇದುವರೆಗೆ ನೀನು ಪೂಜಿಸಿಕೊಂಡು ಬಂದಿರುವ ಎಲ್ಲ ದೇವರನ್ನು ನಿನ್ನಿಂದ ಬಹು ದೂರ ತಳ್ಳು. ನಿನ್ನ ಮನಸ್ಸಿನಿಂದಲೇ ಹೊರಹಾಕು. ಏಕೆಂದರೆ ನಿನ್ನ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು ಯಾವ ದೇವರನ್ನು ನೀನು ಅವಲಂಬಿಸಬೇಕಾಗಿಲ್ಲ. ನಿನ್ನ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳುವ ಶಕ್ತಿಯು ನಿನ್ನಲ್ಲಿಯೇ ಇದೆ ಎಂಬುದನ್ನು ತಿಳಿ;

ಭಾರತ+ಅಂಬೆ; ಭಾರತ=ದೇಶದ ಜನಸಮುದಾಯ ನೆಲೆಸಿರುವ ಪ್ರಾಂತ್ಯದ ಹೆಸರು; ಅಂಬೆ=ತಾಯಿ; ಭಾರತಾಂಬೆ=ಬಾರತ ಮಾತೆ; ದೇವಿ=ದೇವತೆ; ನಮಗೆ+ಇಂದು; ಪೂಜೆ=ದೇವರ ವಿಗ್ರಹದ ಮುಂದೆ ಹೂಹಣ್ಣುಕಾಯಿಗಳನ್ನು ಸಲ್ಲಿಸಿ, ದೂಪದೀಪಗಳನ್ನು ಬೆಳಗುವ ಆಚರಣೆ; ಬಾರ=ಬನ್ನಿರಿ;

ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ=ಇಂದಿನಿಂದ ಬಾರತಾಂಬೆಯನ್ನು ಮಾತ್ರ ದೇವರೆಂದು ತಿಳಿದು ಪೂಜಿಸೋಣ ಬನ್ನಿರಿ. ನಾವು ಪೂಜಿಸುವ ಬಾರತಾಂಬೆಯು ಇನ್ನಿತರ ದೇವರುಗಳಂತೆ ಕಲ್ಲು, ಮಣ್ಣು, ಮರ, ಲೋಹದಿಂದ ಮಾಡಿದ ವಿಗ್ರಹರೂಪಿಯಲ್ಲ. ಅವಳು ದೇಶದ ಜನಮಾನಸದಲ್ಲಿ ನೆಲೆಸಿರುವ ದೇವಿ. ಆಕೆಯನ್ನು ಪೂಜಿಸುವುದು ಎಂದರೆ ಅವಳಿಗೆ ಹೂವು ಹಣ್ಣು ಕಾಯಿಗಳನ್ನು ಸಲ್ಲಿಸುವುದಲ್ಲ; ಅವಳ ಮುಂದೆ ದೂಪ ದೀಪಗಳನ್ನು ಬೆಳಗುವುದಲ್ಲ; ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಮತ್ತು ತನ್ನ ಕುಟುಂಬದ ಹಿತವನ್ನು ಕಾಪಾಡಿಕೊಳ್ಳುವಂತೆಯೇ ಸಹಮಾನವರ, ಸಮಾಜದ ಮತ್ತು ದೇಶದ ಹಿತಕ್ಕಾಗಿ ಪ್ರಾಮಾಣಿಕವಾದ ನಡೆನುಡಿಗಳಿಂದ ಬಾಳುವುದೇ ಬಾರತಾಂಬೆಗೆ ಮಾಡುವ ಪೂಜೆಯಾಗಿರುತ್ತದೆ;

ಶತಮಾನ=ಒಂದು ನೂರು ವರುಶ; ಬರಿ=ಕೇವಲ; ಜಡ=ಜೀವವಿಲ್ಲದ್ದು; ಶಿಲೆ=ಕಲ್ಲು; ಜಡಶಿಲೆ=ಕಲ್ಲಿನಿಂದ ರೂಪುಗೊಂಡಿರುವ ದೇವರ ವಿಗ್ರಹ; ಪೂಜಿಸಿ+ಆಯ್ತು; ಪೂಜಿಸಾಯ್ತು=ಪೂಜೆಯನ್ನು ಮಾಡಿದೆವು; ಪಾವ್+ಗಳಿಗೆ; ಪಾವು=ಹಾವು ; ಪಾಲ್+ಎರೆದು; ಪಾಲ್=ಹಾಲು; ಎರೆ=ಸುರಿ; ಪಾಲೆರೆದು=ನಾಗರಕಲ್ಲಿನ ಮೇಲೆ ಹಾಲನ್ನು ಎರೆದು ಪೂಜಿಸುವ ಆಚರಣೆ; ಪೋಷಿಸಿ+ಆಯ್ತು; ಪೋಷಿಸು=ಸಲಹು; ಬೇಡಿ+ಆಯ್ತು; ಬೇಡು=ಯಾಚಿಸು;

ದಾಸರು=ಮಾನವ ಜೀವನದ ಒಳಿತು ಕೆಡುಕುಗಳೆಲ್ಲಕ್ಕೂ ದೇವರೇ ಕಾರಣ. ಮಾನವರಾದ ನಾವು ಕೇವಲ ಅವನ ಕಯ್ ಗೊಂಬೆಗಳು. ಮಾನವರ ಬದುಕನ್ನು ನಿಯಂತ್ರಿಸುವ ಮತ್ತು ಮುನ್ನಡೆಸುವ ಶಕ್ತಿಯು ದೇವರಲ್ಲಿದೆ. ಅವನ ಇಚ್ಚೆಯಂತೆಯೇ ಜಗತ್ತು ನಡೆಯುತ್ತಿದೆ. ಅವನ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯು ಅಲುಗದು. ಆದ್ದರಿಂದ ದೇವರಿಗೆ ನಾವು ಸಂಪೂರ‍್ಣವಾಗಿ ಶರಣಾಗಬೇಕು ಎಂದು ಜನಗಳಿಗೆ ಹೇಳಿದವರು; ಪೂಜಿಸಿಯೆ=ದಾಸರ ಮಾತುಗಳನ್ನು ನಂಬಿ ನಡೆದದ್ದರಿಂದಲೇ; ದಾಸ್ಯ+ಆಯ್ತು; ದಾಸ್ಯ=ಅಡಿಯಾಳುತನ;

ದಿಟ್ಟತನದಿಂದ ಹಗೆಗಳನ್ನು ಎದುರಿಸುವ ಬದಲು ದೇವರು ಮಾಡಿದಂತಾಗಲಿ ಎಂದು ಕಯ್ ಕಟ್ಟಿ ಕುಳಿತಿದ್ದರಿಂದಲೇ ನಮ್ಮ ದೇಶದ ಮೇಲೆ ದಂಡೆತ್ತಿ ಬಂದವರು ಮತ್ತು ನಮ್ಮ ದೇಶಕ್ಕೆ ವ್ಯಾಪಾರಿಗಳಾಗಿ ಬಂದವರು ನಮ್ಮ ದೇಶವನ್ನು ವಶಪಡಿಸಿಕೊಂಡು ಆಳತೊಡಗಿದ್ದರಿಂದ ಬಾರತೀಯರು ನೂರಾರು ವರುಶಗಳ ಕಾಲ ಸ್ವಾತಂತ್ರ್ಯವನ್ನು ಕಳೆದುಕೊಂಡು ಅನ್ಯರಿಗೆ ಅಡಿಯಾಳಾದರು;

ಗುಡಿ+ಒಳಗೆ; ಗುಡಿ=ದೇಗುಲ; ಬೆಚ್ಚಗೆ+ಇರುವವರನ್+ಎಲ್ಲ; ಬೆಚ್ಚಗೆ=ನೆಮ್ಮದಿಯಾಗಿ; ಭಕ್ತ=ದೇವರನ್ನು ನಂಬಿದವನು; ರಕ್ತ=ನೆತ್ತರು; ಹೀರು=ಕುಡಿ; ಕೊಬ್ಬು+ಇಹರನ್+ಎಲ್ಲ; ಕೊಬ್ಬು=ದಪ್ಪನಾಗು/ನೆಣ; ಇಹರನ್=ಇರುವವರನ್ನು; ಕೊಬ್ಬಿಹರನ್=ಸೊಕ್ಕಿನಿಂದ ಮೆರೆಯುತ್ತಿರುವವರನ್ನು; ಗಂಟೆ=ಕಂಚು ಹಿತ್ತಾಳೆ ಮುಂತಾದ ಲೋಹಗಳಿಂದ ಮಾಡಿರುವ ಉಪಕರಣ. ಇದರಿಂದ ನಾದವನ್ನು ಹೊಮ್ಮಿಸಲಾಗುತ್ತದೆ; ಜಾಗಟೆ=ದನಿಯನ್ನು ಹೊರಡಿಸಲು ಬಳಸುವ ಉಪಕರಣ; ಬಡಿದು=ದನಿ ಹೊರಡುವಂತೆ ಮಾಡಿ; ಕುತ್ತಿಗೆ=ಕೊರಳು; ಕಡಲ್+ಅಡಿಗೆ; ಕಡಲ್=ಸಮುದ್ರ; ಅಡಿ=ಕೆಳಕ್ಕೆ; ತಳ್ಳಿರೈ=ತಳ್ಳಿರಿ; ಶಂಖ=ನಾದವನ್ನು ಹೊಮ್ಮಿಸುವ ಒಂದು ಬಗೆಯ ವಾದ್ಯ ; ಶಂಖದಿಂ ನುಡಿದು=ಶಂಕದಿಂದ ನಾದವನ್ನು ಮಾಡುತ್ತ;

ನಿದ್ದೆಮಾಡುತ್ತ+ಇಹರು; ದೇವತೆ+ಗಳ್+ಎಲ್ಲ; ದೇವತೆ=ಪ್ರಾಚೀನ ಕಾಲದಿಂದಲೂ ಜನಮನದ ಕಲ್ಪನೆಯಲ್ಲಿ ಮೂಡಿಬಂದಿರುವ ದೇವರುಗಳು; ಕೆಲವರ್+ಇಹರು; ಇಹರು=ಇರುವರು; ಕಲ್ಲಾಗಿ ಕೆಲವರಿಹರು=ಕೆಲವರು ಜಡರಾಗಿದ್ದಾರೆ;

ಕ್ಲೀಬತನ=ಹೇಡಿತನ; ಪೌರುಷ+ಅನ್+ಎಲ್ಲ; ಪೌರುಷ=ಜೀವಿಯು ತಾನು ಉಳಿದು ಬೆಳೆದು ಬಾಳುವುದಕ್ಕಾಗಿ ಮಾಡುವ ಪ್ರಯತ್ನಗಳು; ಅನ್=ಅನ್ನು; ಸತ್ತೆಹೋದಂತೆ+ಇಹರು; ಮತ್ತ್+ಉಳಿದ+ಅಮರರು; ಅಮರ=ದೇವತೆ;

ಹಾಳ್+ಆಯ್ತು; ಹಾಳು=ನಾಶ; ನುಡಿ=ಮಾತು/ಸೊಲ್ಲು; ಮಡಿದುಹೋಯ್ತು=ಇಲ್ಲವಾಯಿತು; ನೆಮ್ಮು=ಅವಲಂಬಿಸು; ಬೀಳುಗತಿ+ಆಯ್ತು; ಬೀಳುಗತಿ=ಕುಸಿತ;

ಮುಂದೆ+ಇವಳನ್+ಆರಾಧಿಸುವ; ಆರಾಧಿಸು=ಪೂಜಿಸು; ಶಕ್ತಿ+ಆರ್ಜಿಸುವ; ಶಕ್ತಿ=ಕಸುವು; ಆರ್ಜಿಸು=ಸಂಪಾದಿಸು; ಜೈಸುವ=ಗೆಲುವನ್ನು ಪಡೆಯೋಣ; ಸತ್ತ ಕಲ್ಗಳು=ಜಡರೂಪದ ದೇವರ ವಿಗ್ರಹಗಳು;

ಜೀವದಾತೆ+ಅನ್+ಇಂದು; ಜೀವದಾತೆ=ಉಸಿರನ್ನು ನೀಡಿದವಳು; ಕೂಗಬೇಕು=ಕರೆಯಬೇಕು; ಶಿಲೆ=ಕಲ್ಲು; ಮೂರ್ತಿ=ವಿಗ್ರಹ; ಶಿಲೆಯ ಮೂರ್ತಿ=ದೇವರ ಕಲ್ಲಿನ ವಿಗ್ರಹ; ನೆಯ್=ಹತ್ತಿಯ ನೂಲನ್ನು ಹೆಣೆದು ಬಟ್ಟೆಯನ್ನು ತಯಾರಿಸುವುದು; ಕಲೆ=ಕುಶಲ ವಿದ್ಯೆ; ಹೊದಿಕೆ+ಅನ್+ಒಯ್ದು; ಹೊದಿಕೆ=ಚಳಿಮಳೆಗಾಳಿಯಿಂದ ಕಾಪಾಡಿಕೊಳ್ಳಲು ಮಯ್ ಮೇಲೆ ಹಾಕಿಕೊಳ್ಳುವ ಅಗಲವಾಗಿಯೂ ಉದ್ದವಾಗಿಯೂ ಇರುವ ಬಟ್ಟೆ ; ಒಯ್=ತೆಗೆದುಕೊಂಡು ಹೋಗು; ನವೆ=ಕೊರಗುತ್ತಿರುವ; ತಾಯ್ಗೆ=ತಾಯಿಗೆ;

ಶಿಲೆಯ ಮೂರ‍್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು=ಜಡರೂಪಿಯಾದ ದೇವರಿಗೆ ಹೊದಿಸಬೇಕೆಂದು ನೆಯ್ದಿರುವ ಹೊದಿಕೆಯನ್ನು ತೆಗೆದುಕೊಂಡು ಹೋಗಿ ಚಳಿಯಲ್ಲಿ ನಡುಗುತ್ತ ಸಂಕಟಪಡುತ್ತಿರುವ ಜೀವಂತ ತಾಯಿಗೆ ಹೊದಿಸು;

ಭಾರತಿ=ಇಂಡಿಯಾ ದೇಶದ ಜನಮಾನಸದಲ್ಲಿ ನೆಲೆಸಿರುವ ದೇವತೆ; ನಮಗೆ+ಇಂದು; ಜೀವನ=ಬದುಕು/ಬಾಳ್ವೆ; ವಿಶ್ವರೂಪಿಣಿ+ಇವಳು; ವಿಶ್ವರೂಪಿಣಿ=ಜಗತ್ತನ್ನೇ ತನ್ನಲ್ಲಿ ಒಳಗೊಂಡವಳು; ವಿಶ್ವಮುಖಿ=ಜಗತ್ತಿನತ್ತ ಮೊಗಮಾಡಿದವಳು. ಅಂದರೆ ಜಗತ್ತಿನ ಜನರೆಲ್ಲರ ಒಳಿತನ್ನು ಬಯಸುವವಳು; ನಮ್ಮ+ಎಲ್ಲರ+ಅಂಗಗಳೆ; ಅಂಗ=ದೇಹ; ನಮ್ಮ+ಅಂಬೆಯ+ಅಂಗವೈ;

ನಮ್ಮೆಲ್ಲರಂಗಗಳೆ ನಮ್ಮಂಬೆಯಂಗವೈ=ನಮ್ಮ ಮಯ್ ಮನದಲ್ಲಿಯೇ ನಮ್ಮ ತಾಯಿಯು ನೆಲೆಸಿದ್ದಾಳೆ. ಆದ್ದರಿಂದ ನಮ್ಮ ಒಳಿತಿನ ಜತೆಜತೆಗೆ ಸಹಮಾನವರ, ಸಮಾಜದ ಮತ್ತು ಇಂಡಿಯಾ ದೇಶದ ಒಳಿತಾಗಿ ನಾವು ಮಾಡುವ ಕೆಲಸಗಳೇ ಬಾರತಾಂಬೆಗೆ ಮಾಡುವ ಪೂಜೆಯಾಗುತ್ತದೆ;

ಸ್ವಾತಂತ್ರ್ಯ=ವ್ಯಕ್ತಿಯು ಯಾರೊಬ್ಬರ ಇಲ್ಲವೇ ಯಾವುದೇ ಶಕ್ತಿಯ ಅಡಿಯಾಳಾಗದೇ ಇರುವುದು; ಸ್ವಾತಂತ್ರ್ಯದೊಳೆ=ಸ್ವಾತಂತ್ರ್ಯದ ಜೀವನದಿಂದಲೇ; ನಮ್ಮ+ಅಮ್ಮ; ನಮ್ಮಮ್ಮ=ನಮ್ಮ ತಾಯಿಯಾದ ಬಾರತಿಯು; ಸುಖ=ಆನಂದ ಮತ್ತು ನೆಮ್ಮದಿ; ಸುಖಿಯೈ=ನೆಮ್ಮದಿಯನ್ನು ಹೊಂದುತ್ತಾಳೆ ;

ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ=ದಾಸ್ಯದ ಎದುರು ಹೋರಾಡಿ ನಾವು ಸ್ವಾತಂತ್ರ್ಯವನ್ನು ಪಡೆದರೆ ತಾಯಿ ಬಾರತಿಯು ನೆಮ್ಮದಿಯಿಂದ ಬಾಳುತ್ತಾಳೆ;

ದಾಸನ್+ಈಶನ್+ಆಗಲೆ; ದಾಸ=ಅಡಿಯಾಳು/ಊಳಿಗದವನು; ಈಶ=ಒಡೆಯ/ಯಜಮಾನ; ಇಂದೊ ನಾಳೆಯೊ ದಾಸನೀಶನಾಗಲೆ ಬೇಕು=ಇಂದಲ್ಲ ನಾಳೆ ದಾಸನಾದವನು ತನ್ನ ಮಯ್ ಮನವನ್ನು ಬಿಗಿದಿರುವ ಸಂಕೋಲೆಗಳನ್ನು ಕಿತ್ತೊಗೆದು ಒಡೆಯನಾಗಲೇ ಬೇಕು. ಅಂದರೆ ಇಂಡಿಯಾದೇಶ ಸ್ವಾತಂತ್ಯವನ್ನು ಪಡೆದೇ ಪಡೆಯುತ್ತದೆ; ಎಂದು+ಇಂದೆ; ಇಂದೆ=ಈಗಲೇ; ಎದ್ದು+ಏಳಿ; ಎದ್ದೇಳಿ=ಗುಲಾಮತನದ ಎದುರು ಹೋರಾಡಲು ಅಣಿಯಾಗಿರಿ;

ನಾಳೆ+ಎನೆ; ಎನೆ=ಎಂದರೆ; ಹೋಕು=ಕಳೆದುಹೋಗುವುದು/ಇಲ್ಲವಾಗುವುದು; ನಾಳೆಯೆನೆ ಹೋಕು=ನಾಳೆ ಎಂದು ಆಲಸ್ಯ ಮಾಡಿದರೆ ಇಲ್ಲವೇ ಮುಂದೂಡಿದರೆ ಎಲ್ಲವೂ ಹಾಳಾಗುತ್ತದೆ; ಸ್ವರ್ಗ=ಒಂದು ಕಲ್ಪಿತ ಲೋಕ. ಇದು ಆನಂದ ಮತ್ತು ನೆಮ್ಮದಿಯ ತಾಣವೆಂಬ ನಂಬಿಕೆಯು ಜನಮನದಲ್ಲಿದೆ; ನಾವೆ ದೇವತೆಗಳೈ=ಮಾನವರಾದ ನಾವೇ ದೇವತೆಗಳಾಗಿದ್ದೇವೆ. ನಮಗೆ ಅಗತ್ಯವಾದುದನ್ನು ಪಡೆಯುವ ಶಕ್ತಿಯನ್ನು ಹೊಂದಿದ್ದೇವೆ; ದೇವಿಯೈ=ದೇವಿಯಾಗಿದ್ದಾಳೆ; ಜನನಿ=ತಾಯಿ;

ನಾವೆ ದೇವತೆಗಳೈ ಭಾರತವೇ ಸ್ವರ್ಗವೈ=ನಮ್ಮ ಬದುಕಿನಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿಕೊಂಡು, ನಮ್ಮಲ್ಲೆರ ಬದುಕಿಗೆ ಅಗತ್ಯವಾದ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯವನ್ನು ಪಡೆಯುವ ಶಕ್ತಿ ನಮ್ಮಲ್ಲಿಯೇ ಇದೆ. ಬಾರತಮಾತೆಯ ಮಕ್ಕಳಾದ ನಾವೆಲ್ಲರೂ ಪರಸ್ಪರ ಪ್ರೀತಿ, ಕರುಣೆ, ಗೆಳೆತನದಿಂದ ಜತೆಗೂಡಿ ಪ್ರಾಮಾಣಿಕವಾಗಿ ದುಡಿಯತೊಡಗಿದರೆ ಬಾರತ ದೇಶವೇ ಸ್ವರ‍್ಗದಂತೆ ಆನಂದ ಮತ್ತು ನೆಮ್ಮದಿಯ ನೆಲೆಬೀಡಾಗುತ್ತದೆ.)

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: