ಪ್ರೀತಿಯ ಸಂಕೇತ ಕೆಂಪು ಗುಲಾಬಿ

– 

ಪೆಬ್ರವರಿ 14, ವಿಶ್ವದಾದ್ಯಂತ ಯುವ ಪ್ರೇಮಿಗಳು ಎದುರು ನೋಡುವ ದಿನ, ಅಂದರೆ ‘ವ್ಯಾಲಂಟೈನ್ಸ್ ಡೇ’. ಅಂದು ಎಲ್ಲಿ ನೋಡಿದರೂ ಕೆಂಪು ಗುಲಾಬಿಗಳದ್ದೇ ಕಾರುಬಾರು. ಹೂವುಗಳ ರಾಜ ಎಂದೇ ಪರಿಗಣಿಸಲ್ಪಡುವ ಗುಲಾಬಿ ಹೂವನ್ನು ಕಂಡರೆ ಯಾರಿಗೆ ತಾನೇ ಇಶ್ಟವಿಲ್ಲ? ಇಶ್ಟವಿಲ್ಲ ಎನ್ನುವವರಿಗೆ ರಸಿಕತೆ ಕಡಿಮೆ ಅನ್ನಬಹುದು. ವಿಶ್ವದಾದ್ಯಂತ ಪ್ರೇಮಿಗಳ ಮನಸ್ಸು ಮತ್ತು ಹ್ರುದಯವನ್ನು ಸೆರೆಹಿಡಿದಿರುವುದು ಈ ಕೆಂಪು ಗುಲಾಬಿಯಾಗಿದೆ. ಅದರ ಹೆಸರೇ ಜನರ ಮುಕಾರವಿಂದವನ್ನು ಅರಳಿಸುತ್ತದೆ. ಒಂದು ಕೆಂಪು ಗುಲಾಬಿ ಅತವಾ ಗುಲಾಬಿ ಹೂಗಳ ಸಣ್ಣ ಗೊಂಚಲನ್ನು ಮೊದಲ ಪ್ರೇಮ ನಿವೇದನೆಯ ಸಮಯದಲ್ಲಾಗಲಿ, ವ್ಯಾಲಂಟೈನ್ಸ್ ಡೇ ದಿನವಾಗಲಿ ನೀಡುವುದು; ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂಬ ಮನದ ಬಾವನೆಯನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ಸಂಕೇತವಾಗಿದೆ. ಇಂದಿಗೂ ಪ್ರೇಮಿಗಳ ದಿನ ಕೆಂಪು ಗುಲಾಬಿಕೊಳ್ಳಲು ಹದಿಹರೆಯದ ಯುವಕರು ಮುಗಿ ಬೀಳುತ್ತಾರೆ. ಬೇರೆಲ್ಲಾ ಹೂವುಗಳಿಗೆ ಮಹತ್ವವೇ ಇಲ್ಲವೇನೋ ಎನ್ನುವಂತೆ, ಕೆಂಪು ಗುಲಾಬಿ ಹೂ ಪ್ರೀತಿಯ ಸಂಕೇತವಾಗಿ ಅನಾದಿ ಕಾಲದಿಂದಲೂ ಬದಲಾಗದೆ ಉಳಿದಿದೆ. ಇತಿಹಾಸದುದ್ದಕ್ಕೂ ನೋಡಿದರೆ; ಕಲೆ, ಸಾಹಿತ್ಯ, ಪುರಾಣಗಳಲ್ಲಿ ಕೆಂಪು ಗುಲಾಬಿಯ ಸೌಂದರ‍್ಯ ಮತ್ತು ಅದರ ಪರಿಪೂರ‍್ಣತೆಯ ಬಗ್ಗೆ ಮೆಚ್ಚುಗೆ ದಾಕಲಾಗಿರುವುದು ಕಾಣಬರುತ್ತದೆ. ರೋಮಿಯೋ ಜೂಲಿಯಟ್‌ರಂತಹ ಶಾಸ್ತ್ರೀಯ ಪ್ರೇಮ ಕತೆಗಳಿಂದ ಹಿಡಿದು, ಸಲೀಂ ಅನಾರ‍್ಕಲಿಯಂತಹ ಚಲನಚಿತ್ರಗಳಲ್ಲೂ ಕೂಡ ಕೆಂಪು ಗುಲಾಬಿಯು, ಪ್ರೀತಿಯ ನಿರ‍್ವಿವಾದ ಸಂಕೇತವಾಗಿ ಕೆಲಸ ನಿರ‍್ವಹಿಸಿರುವುದು ನಮಗೆ ಕಾಣುತ್ತದೆ.

ಪುರಾಣ-ಕತೆಗಳಲ್ಲಿ ಕೆಂಪು ಗುಲಾಬಿ

ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ ಕೆಂಪು ಗುಲಾಬಿಯನ್ನು ಪ್ರೀತಿಯ ದೇವತೆಯಾದ ‘ಆಪ್ರೋಡೈಟ್ ಜೊತೆ ಗುರುತಿಸಲಾಗುತ್ತದೆ. ವಿಕ್ಟೋರಿಯನ್ ಯುಗದಲ್ಲಿ ಕೆಂಪು ಗುಲಾಬಿಗಳನ್ನು ಸಾರ‍್ವಜನಿಕ ಪ್ರದರ‍್ಶನಗಳಲ್ಲಿ ಪ್ರೀತಿಯ ಸಂದೇಶವಾಗಿ ಬಳಸಿದ್ದನ್ನು ಕಾಣಬಹುದು. ಜನಪ್ರಿಯ ‘ಅಲೀಸ್ ಇನ್ ದ ವಂಡರ್‌ಲ್ಯಾಂಡ್’ ಕತೆಯಲ್ಲಿ ಬರುವ ಅಲೀಸ್‌ಗೆ ಕೆಂಪು ಗುಲಾಬಿಗಳೆಂದರೆ ಬಹಳ ಇಶ್ಟ. ತೋಟದಲ್ಲಿ ಬೇರೆ ಬಣ್ಣದ ಗುಲಾಬಿ ಹೂವುಗಳನ್ನು ಕಂಡರೆ ಅವಳಿಗೆ ಕಡುಕೋಪ ಬರುತ್ತಿತ್ತು. ಅವಳು ನೀಡಬಹುದಾದ ಶಿರಚ್ಚೇದನ ಶಿಕ್ಶೆಯಿಂದ ತಪ್ಪಿಸಿಕೊಳ್ಳಲು, ತೋಟಗಾರರು ತೋಟದಲ್ಲಿನ ಎಲ್ಲಾ ಬಿಳಿ ಬಣ್ಣದ ಗುಲಾಬಿಗಳಿಗೂ ಕೆಂಪು ಬಣ್ಣ ಬಳಿಯುತ್ತಿದ್ದರಂತೆ!

ಪ್ರೇಮದ ಸಂಕೇತವಾಗಿ ಗುಲಾಬಿಗೆ ಇರುವ ಹೆಚ್ಚುಗಾರಿಕೆ

ಪ್ರೇಮದ ಸಂಕೇತವಾಗಿ ಕೆಂಪು ಗುಲಾಬಿಗಳೇ ಏಕೆ ಬೇಕು? ಬೇರಾವುದೂ ಇದರಶ್ಟು ಪ್ರಕ್ಯಾತವಾಗಿಲ್ಲವೇಕೆ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಏಳುವುದು ಸಹಜ. ಜನರು ತಮ್ಮ ಪ್ರೀತಿ ಪಾತ್ರರಿಗೆ ಕೆಂಪು ಗುಲಾಬಿ ನೀಡುವುದರ ಹಿಂದೆ ವಿಶೇಶ ಕಾರಣ ಅಡಗಿದೆ. ‘ಗಾಡ ಕೆಂಪು ಬಣ್ಣದ ಗುಲಾಬಿಗಳು, ಮನಸ್ಸಿನಲ್ಲಿನ ಗಾಡವಾದ ಬಾವನೆಗಳನ್ನು ಪ್ರಕರವಾಗಿ ಸೂಚಿಸುತ್ತವೆ’ ಎಂಬ ನಂಬಿಕೆ ಇದಕ್ಕೆ ಮೂಲವಾಗಿದೆ. ಕೆಂಪು ಗುಲಾಬಿಯಲ್ಲಿನ ಬಣ್ಣದ ಚಾಯೆ ಸಹ ಹಲವು ಬಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಪ್ರಕಾಶಮಾನವಾದ ಕೆಂಪು ಗುಲಾಬಿಯು ಪ್ರಣಯದ ಇಂಗಿತವನ್ನು ತೋರಿದರೆ, ಪ್ರೀತಿಯನ್ನು ಬಯಸುವವರು; ತಾವು ನೀಡುವ ಕೆಂಪು ಬಣ್ಣದ ಗುಲಾಬಿಯಲ್ಲಿ, ಕೆಂಪು ಬಣ್ಣದ ಚಾಯೆ ಕಡಿಮೆ ಪ್ರಮಾಣದಲ್ಲಿ ಇರುವುದನ್ನು ಬಳಸುವುದು ವಾಡಿಕೆಯಾಗಿದೆ. ಕೆಂಪು ಗುಲಾಬಿಯ ಮೊಗ್ಗು ನೀಡುವುದೂ ಸಹ ಮಹತ್ವ ಪಡೆದಿದೆ. ಇದು ಯುವ ಪ್ರೀತಿ, ಮುಗ್ದತೆ, ಶುದ್ದತೆಯನ್ನು ಹಾಗೂ ಸೋಗಿಲ್ಲದ ಪವಿತ್ರ ಪ್ರೀತಿ, ಸೌಂದರ‍್ಯವನ್ನು ಸಂಕೇತಿಸುತ್ತದೆ.

ಎಶ್ಟು ಗುಲಾಬಿ ಹೂಗಳನ್ನು ನೀಡುತ್ತಾರೆ ಎನ್ನುವುದಕ್ಕೂ ವಿಶೇಶ ಹುರುಳಿದೆ. ಒಂದೇ ಒಂದು ಕೆಂಪು ಗುಲಾಬಿ ಹೂವು, ಮೊದಲ ನೋಟದಲ್ಲೇ ಅಂಕುರಿಸಿದ ಪ್ರೀತಿಯನ್ನು ಪ್ರತಿನಿದಿಸುತ್ತದೆ. ಅಂದರೆ ಅದು ಪ್ರೇಮಿ ತಾನಿನ್ನು ಒಂಟಿ ಎನ್ನುವುದರ ಸಂಕೇತವಾಗಿದೆ. ಎರಡು ಕೆಂಪು ಗುಲಾಬಿಗಳು ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯವನ್ನು ಸೂಚಿಸಿದರೆ, ಮೂರು ಗುಲಾಬಿಗಳು, ಪ್ರೀತಿಯ ಒಡನಾಟಕ್ಕೆ ಒಂದು ತಿಂಗಳು ಕಳೆದಿದ್ದರ ಸಂಕೇತವಾಗಿರುತ್ತವೆ. ಆರು ಕೆಂಪು ಗುಲಾಬಿಗಳನ್ನು ನೀಡುವುದು, ಯಾರಿಗೆ ನೀಡುತ್ತಿದ್ದಾರೋ, ಅವರ ಪ್ರೇಮ ಪಾಶದಲ್ಲಿ ಸಿಕ್ಕಿಕೊಂಡಿದ್ದಾರೆಂದೂ ಮತ್ತು ಅವರ ಪ್ರೇಮಿಯಾಗಲು ಹಾತೊರೆಯುತ್ತಿದ್ದಾರೆಂದೂ ಸೂಚ್ಯವಾಗಿ ಬಿಂಬಿಸುತ್ತದೆ. ಆರಕ್ಕಿಂತ ಹೆಚ್ಚು ಅಂದರೆ, ಹತ್ತು ಕೆಂಪು ಗುಲಾಬಿಗಳ ಗೊಂಚಲನ್ನು ನೀಡಿದರೆ ಅದು ಪ್ರೀತಿಯ ಪರಿಪೂರ‍್ಣತೆಯನ್ನು ತೋರುತ್ತದೆ. ಹನ್ನೊಂದು ಕೆಂಪು ಗುಲಾಬಿಗಳ ಗೊಂಚಲ ಉಡುಗೊರೆ, ‘ನೀನು ನನಗೆ ಬಹಳ ಅಮೂಲ್ಯ’ ಎಂಬ ಸಂಕೇತದ ಜೊತೆಗೆ ನಿಜವಾದ ಹಾಗೂ ಆಳವಾದ ಪ್ರೀತಿ ತುಂಬಿದ ಬಾವನೆಯನ್ನು ವ್ಯಕ್ತಪಡಿಸುತ್ತದೆ. ‘ನೀವು ನನಗೆ ತುಂಬಾ ಇಶ್ಟವಾದವರು, ನನ್ನವರಾಗಿ’ ಎಂದು ಸರಳವಾಗಿ ಹೇಳುವವರ ಶ್ರೇಶ್ಟ ಕೊಡುಗೆ, ಹನ್ನೆರೆಡು ಅತವಾ ಒಂದು ಡಜನ್, ಕೆಂಪು ಗುಲಾಬಿಗಳ ಗೊಂಚಲನ್ನು ನೀಡುವುದರಲ್ಲಿದೆ.

ಯಾರಾದರೂ ತಮ್ಮ ಪ್ರೇಯಸಿಗೆ ‘ಕ್ಶಮೆ’ ಕೇಳಬೇಕಿದ್ದಲ್ಲಿ, ಅದನ್ನು ಪದಗಳಲ್ಲಿ ನಿವೇದಿಸಲು ಸಾದ್ಯವಾಗದಿದ್ದಲ್ಲಿ ಹದಿನೈದು ಕೆಂಪು ಗುಲಾಬಿಗಳ ಗೊಂಚಲನ್ನು ಕೊಡಬಹುದು. ಅದೇ ಅವರ ಮನದ ಬಾವನೆಯ ಸಂಕೇತವಾಗುತ್ತದೆ. ಎರಡು ಡಜನ್ ಕೆಂಪು ಗುಲಾಬಿಯ ಗೊಂಚಲು ‘ನಾನು ನಿಮ್ಮವನು’ ಎಂಬುದನ್ನು ಸ್ಪಶ್ಟವಾಗಿ ಹೇಳುತ್ತದೆ. ಮೂರು ಡಜನ್ ಕೆಂಪು ಗುಲಾಬಿಯ ಗೊಂಚಲು ‘ನಿನ್ನ ಪ್ರೀತಿಯ ನೆರಳಿನಲ್ಲಿದ್ದೇನೆ’ ಎಂಬ ಸಂದೇಶವನ್ನು ರವಾನಿಸುತ್ತದೆ. ಐವತ್ತು ಕೆಂಪು ಗುಲಾಬಿಗಳ ಗೊಂಚಲು, ಪ್ರೀತಿಗೆ ಪರಿದಿಯಿಲ್ಲ ಎಂಬುದರ ಇಂಗಿತವಾಗಿದೆ.

ಕೆಂಪು ಗುಲಾಬಿಗಳಿಗೆ ಕಾಲಾನುಕಾಲದಿಂದ ನೀಡಿರುವ ವಿಶೇಶ ಸ್ತಾನಮಾನ ಎಶ್ಟು ಅರ‍್ತ ಪೂರ‍್ಣವಾಗಿದೆ ಎಂಬುದನ್ನು ಈ ಮೇಲಿನ ವಿವರಣೆಯು ಸೂಚಿಸುತ್ತದೆ. ಯಾರಾದರೂ ತಮ್ಮ ಅಂತಹಕರಣದ ಪ್ರೀತಿಯ ಬಾವನೆಯನ್ನು ವ್ಯಕ್ತ ಪಡಿಸಲು ಬಯಸಿದರೆ, ಕೆಂಪು ಗುಲಾಬಿ ನೀಡುವುದು ಅದರ ಸಂಕೇತವಾಗಿರುತ್ತದೆ. ಮಾತಲ್ಲಿ ವ್ಯಕ್ತಪಡಿಸಲು ಆಗದಿದ್ದಾಗ, ಎದುರಿಗೆ ಹೇಳಲು ಹಿಂಜರಿಕೆಯಾದಾಗ, ಸುಂದರವಾದ ಕೆಂಪು ಗುಲಾಬಿ ನೀಡುವುದು ಒಂದು ಸುಲಬದ ದಾರಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: floweraura.com, serenataflowers.com, pixabay.com )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks