ಬುದ್ದನ ಆಕಾರದ ಪೇರಲೆ ಹಣ್ಣು
ಸೂಪರ‍್ ಮಾರ‍್ಕೆಟ್ಟಿನಲ್ಲಿದ್ದ ಹಲವಾರು ವಸ್ತುಗಳಲ್ಲಿ ಚೀನಾದ ರೈತನೊಬ್ಬನ ಗಮನ ಸೆಳೆದಿದ್ದು ವಿವಿದ ಆಕಾರದಲ್ಲಿದ್ದ ಜೆಲ್ಲಿಗಳು. ಅವನ ಕುತೂಹಲ ಹೆಚ್ಚಾಗಿ ಮನಸ್ಸಿನಲ್ಲಿ ಒಂದು ಯೋಜನೆ ಹೊಳೆಯಿತು. ಅದನ್ನು ಕಾರ‍್ಯರೂಪಕ್ಕೆ ತರಲು ಹವಣಿಸಿದ, ಅದರಿಂದ ಹೊರ ಹೊಮ್ಮಿದ್ದೇ ಬುದ್ದನಾಕಾರದ ಪೇರಲೆ ಹಣ್ಣುಗಳು. ಆ ರೈತ ಬೇರಾರೂ ಅಲ್ಲ, ಹಾವೋ ಕ್ಸಿಯಾನ್ಜಾಂಗ್. ಈತ ತನ್ನ ತೋಟದಲ್ಲಿ ಬುದ್ದನ ಆಕಾರದ ಪೇರಲೆ ಹಣ್ಣುಗಳನ್ನು ಬೆಳೆಯುತ್ತಿದ್ದಾನೆ. ಈ ವಿಶೇಶ ಪೇರಲೆ ಹಣ್ಣುಗಳಿಗೆ ಹಲವು ನಾಡುಗಳಿಂದ ಬೇಡಿಕೆ ಬಂದಿದೆ.
ಬುದ್ದನ ಆಕಾರದ ಪೇರಲೆ ಹಣ್ಣನ್ನು ಹೊರ ತರುವಲ್ಲಿ ಹಾವೋ ಕ್ಸಿಯಾನ್ಜಾಂಗ್‍ನ ಸತತ ಆರು ವರ‍್ಶಗಳ ಪರಿಶ್ರಮವಿದೆ. ಈ ಪರಿಶ್ರಮದ ಪಲವೇ ಇಂದು ಹತ್ತು ಸಾವಿರಕ್ಕೂ ಹೆಚ್ಚು ಬುದ್ದನ ಆಕಾರದ ಪೇರಲೆ ಬೆಳೆಯನ್ನು ಒಂದೇ ರುತುವಿನಲ್ಲಿ ಬೆಳೆಯಲು ಆತನಿಂದ ಸಾದ್ಯವಾಗಿದೆ. ಬುದ್ದನನ್ನೇ ಹೋಲುವ ಅಚ್ಚಿನಲ್ಲಿ ಬೆಳೆದ ಈ ಬುದ್ದನ ಆಕಾರದ ರಸಬರಿತ ಪೇರಲೆ ಹಣ್ಣು ನೋಡುಗರಿಗೆ ನಿಜವಾದ ಗೊಂಬೆಯಂತೆ ಕಾಣುತ್ತದೆ. ಈ ವಿಶೇಶ ಹಣ್ಣುಗಳನ್ನು ಬೆಳೆಯುವ ಹಳ್ಳಿ ಈಶಾನ್ಯ ಚೀನಾದ ಹೆಕ್ಸಿಯಾದಲ್ಲಿದೆ. ಚತುರ ರೈತನ ತೋಟದ ಮರದಿಂದ ಪೇರಲೆ ಹಣ್ಣನ್ನು ಕತ್ತರಿಸಿದ ಕೂಡಲೇ, ಸ್ತಳೀಯರು ಅದನ್ನು ಕರೀದಿಸಲು ನಾ ಮುಂದು, ತಾ ಮುಂದು ಎಂದು ಹಾತೊರೆಯುತ್ತಿದ್ದಾರೆ. ಈ ಮುದ್ದಾದ ಬುದ್ದನ ಆಕಾರದ ಪೇರಲೆ ಹಣ್ಣು ಅದ್ರುಶ್ಟವನ್ನು ತರುತ್ತದೆಂದು ಜನರು ನಂಬಿದ್ದಾರೆ. ಈ ತೋಟದ ಪೇರಲೆ ಹಣ್ಣು ಅಗ್ಗವೇನಲ್ಲ, ಈ ವ್ಯವಹಾರ ಇಂದು ಸಾವಿರಾರು ಡಾಲರ್ ಮೀರಿದೆ. ಇಲ್ಲಿಂದ ಬಂದ ಲಾಬದಿಂದ ಪೇರಲೆ ಹಣ್ಣನ್ನು ಯೂರೋಪಿಗೆ ರಪ್ತು ಮಾಡಲು ಶುರುಮಾಡಿದ್ದಾರೆ.
ಹಾವೋ ಕ್ಸಿಯಾನ್ಜಾಂಗ್ ಬೆಳೆಯುವ ಪೇರಲೆ ಹಣ್ಣಿಗೆ ಸಾಕಶ್ಟು ತಾಲೀಮು ಅಗತ್ಯ. ಮೊದಲು ಬೇಬಿ ಬುದ್ದನ ಆಕಾರದ ಪೈಬರ‍್ ಗ್ಲಾಸ್ ಮತ್ತು ಪ್ಲಾಸ್ಟಿಕ್ ಅಚ್ಚುಗಳನ್ನು ತಯಾರಿಸಿಕೊಳ್ಳಬೇಕು. ಮರದಲ್ಲಿ ಸಣ್ಣ ಸಣ್ಣ ಪೇರಲೆ ಹಣ್ಣುಗಳು ಚಿಗುರೊಡೆದಾಗ ಅಚ್ಚುಗಳನ್ನು ಅದರ ತೊಟ್ಟಿಗೆ ಸರಿಯಾಗಿ ಕೂಡಿಸಿ, ಬಿಗಿ ಮಾಡಬೇಕು. ಹಣ್ಣುಗಳ ಬೆಳವಣಿಗೆಗೆ ವಾತಾವರಣದಲ್ಲಿ ಹೆಚ್ಚು ವ್ಯತ್ಯಾಸವಾಗದಂತೆ ಕಾಳಜಿ ವಹಿಸಬೇಕು. ಇದಕ್ಕಾಗಿ ಅವರು ಚಿಗುರೊಡೆದ ಹಣ್ಣುಗಳಿಗೆ ಪೈಬರ‍್ ಮತ್ತು ಪ್ಲಾಸ್ಟಿಕ್ ಮೂಲಕ ಸೂರ‍್ಯನ ರಶ್ಮಿ ಹಾಗೂ ಗಾಳಿ ಹಾಯುವಂತ ವ್ಯವಸ್ತೆ ಮಾಡಿದ್ದಾರೆ. ಈ ರೀತಿಯಲ್ಲಿ ಜೋಡಿಸಿದ ಅಚ್ಚುಗಳು ಸರಿಸುಮಾರು ಆರು ತಿಂಗಳಲ್ಲಿ ಪೂರ‍್ಣ ಪ್ರಮಾಣದಲ್ಲಿ ಬೆಳೆದು ಅಚ್ಚಿನ ಆಕಾರಕ್ಕೆ ಬರುವವರೆಗೂ ಬಿಡುತ್ತಾರೆ.
ಬುದ್ದನ ಆಕಾರದ ಪೇರಲೆ ಹಣ್ಣುಗಳನ್ನು ತನ್ನ ತೋಟದಲ್ಲಿ ವ್ಯವಸ್ತಿತವಾಗಿ ಬೆಳೆಯಲು ಹಾವೋ ಕ್ಸಿಯಾನ್ಜಾಂಗ್ ಪಟ್ಟ ಆರು ವರ‍್ಶಗಳ ಕಟಿಣ ಪರಿಶ್ರಮಕ್ಕೆ ಈಗ ತಕ್ಕ ಬೆಲೆ ದೊರೆತಿದೆ. 2009ರಲ್ಲಿ ಹಾವೋ ಕ್ಸಿಯಾನ್ಜಾಂಗ್ ಸುಮಾರು ಹದಿನೆಂಟು ಸಾವಿರ ಪೇರಲೆ ಹಣ್ಣುಗಳನ್ನು ಬೆಳೆದು ಮಾರಾಟ ಮಾಡಿದನಂತೆ. ಅದೂ, ಏಳು ಡಾಲರ್‌ಗೆ ಒಂದರಂತೆ. ಇದರ ಪ್ರಕ್ಯಾತಿ ಹರಡುತ್ತಿದ್ದಂತೆ, 2010ರಲ್ಲಿ 70,000ದಿಂದ 80,000ದಶ್ಟು ಪೇರಲೆ ಹಣ್ಣುಗಳ ಸರಬರಾಜಿಗೆ ಆದೇಶ ಪಡೆದನಂತೆ. ತನ್ನದೇ ಪ್ರದೇಶ, ಹೆಕ್ಸಿಯಾದ ಸ್ತಳೀಯರು ಈ ಅದ್ರುಶ್ಟದ ಪ್ರತಿ ಹಣ್ಣಿಗೆ ಐದು ಡಾಲರ‍್ನಂತೆಯೇ ಕರೀದಿಸಲು ಮುಂದೆ ಬರುತ್ತಿದ್ದಾರಂತೆ. ಇದರಿಂದಾಗಿ ರಪ್ತು ಮಾಡಲು ಬಹಳ ಕಶ್ಟವಾಗುತ್ತಿದೆ ಎನ್ನುತ್ತಾರೆ, ಹಾವೋ ಕ್ಸಿಯಾನ್ಜಾಂಗ್.
(ಮಾಹಿತಿ ಮತ್ತು ಚಿತ್ರ ಸೆಲೆ: abcnews.go.com, foodandwine, laughingsquid.com, dailymail.co.uk, trendhunter.com)
ಇತ್ತೀಚಿನ ಅನಿಸಿಕೆಗಳು