ಸಾವಯವ ಆಹಾರ – ಒಂದು ಮೇಲ್ನೋಟ

– ಸಂಜೀವ್ ಹೆಚ್. ಎಸ್.

ಸಾವಯವ ಆಹಾರ

 

ಇತ್ತೀಚಿನ ದಿನಗಳಲ್ಲಿ ಜನರು ತಾವು ತಿನ್ನುವ ಆಹಾರದ ಬಗ್ಗೆ ಪ್ರಜ್ನಾವಂತರಾಗುತ್ತಿರುವುದು ಮತ್ತು ಆರೋಗ್ಯದೆಡೆಗೆ ತಮ್ಮ ಒಲವನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ, ಆದರೆ ಆರೋಗ್ಯದ ಬಗೆಗಿನ ವಿಶಯಗಳ ತಲೆಬುಡ ತಿಳಿಯದೆ, ಅದರ ಬಗ್ಗೆ ದಿಡೀರ್ ಕಾಳಜಿ ಬೆಳೆಸಿಕೊಂಡ ಕೆಲವರು ತಾವು ಸೇವಿಸುವುದೆಲ್ಲ ಸಾವಯವ ಆಗಿರಬೇಕು ಎನ್ನುವ ನಿಲುವನ್ನು ಹೊಂದಿರುವುದನ್ನು ಕಾಣಬಹುದು. ಜೊತೆಗೆ ಸಿಕ್ಕ ಸಿಕ್ಕಿದ್ದನ್ನೆಲ್ಲ ಸಾವಯವ ಎಂಬ ಹಣೆಪಟ್ಟಿ ಕಟ್ಟಿ ಮಾರಾಟ ಮಾಡುವವರ ಮದ್ಯೆ, ಹಿಂದೆ ಮುಂದೆ ನೋಡದೆ ಅವರು ಹೇಳಿದಶ್ಟು ಹಣಕೊಟ್ಟು ಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಸಾವಯವ ಆಹಾರ ಎಂದರೇನು ಮತ್ತು ಅದರ ಆಳ ಅಳತೆ ಎಶ್ಟು ಎಂಬುದನ್ನು ಅರಿಯುವುದು ಮುಕ್ಯವಾಗಿದೆ.

ಸಾವಯವ ಆಹಾರ ಎಂದರೇನು?

ಇಂದು  “Go organic, Grow organic” ಎಂಬ ಗೋಶವಾಕ್ಯ ಜನಜನಿತವಾಗುತ್ತಿದೆ. ಇಂದೊಂದು ರೀತಿಯ ಹೊಸ ಪ್ರವ್ರುತ್ತಿಯಾಗಿದೆ. ಆದರೆ ಇದರ ನಿಜವಾದ ಅರ‍್ತವೇನು? ಜನಸಾಮಾನ್ಯರಿಗೆ ಅರ‍್ತವಾಗುವ ರೀತಿಯಲ್ಲಿ ತಿಳಿಸಬೇಕೆಂದರೆ, ನಮ್ಮ ಮನೆಯ ಹಿತ್ತಲಲ್ಲಿ ಹುಟ್ಟಿದ ಸೀಬೆ ಗಿಡವನ್ನೇ ಉದಾಹರಣೆಯಾಗಿ ನೋಡಬಹುದು. ಕೇವಲ ನೀರು – ಹಸಿತ್ಯಾಜ್ಯಗಳನ್ನು ಹಾಕಿ ಬೆಳೆಸಿದ ಬಳಿಕ ಆ ಗಿಡದಲ್ಲಿ ಬರುವ ಪಸಲೇ ಸಾವಯವ ಆಹಾರ. ಏಕೆಂದರೆ ಇಲ್ಲಿ ಯಾವುದೇ ರೀತಿಯ ಕ್ರುತಕ ಪರ‍್ಯಾಯಗಳನ್ನು ಬಳಸಲಾಗುವುದಿಲ್ಲ. ಇಲ್ಲಿ ಗಿಡದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಯಾವುದೇ ರಾಸಾಯನಿಕಗಳನ್ನಾಗಲೀ, ಕ್ರುತಕ ಗೊಬ್ಬರಗಳನ್ನಾಗಲೀ, ಪರಾಗಸ್ಪರ‍್ಶವಾಗದೇ ಬೀಜವಿಲ್ಲದ ಹಣ್ಣು ಪಡೆಯಲು ಕ್ರುತಕ ರಸದೂತಗಳನ್ನಾಗಲೀ, ಕೀಟನಾಶಕಗಳನ್ನಾಗಲೀ, ಕ್ರುತಕ ಬೆಳಕಿನ ವ್ಯವಸ್ತೆ ಮೊದಲಾದವುಗಳನ್ನು ಉಪಯೋಗಿಸದೆ ಸೀಬೇಕಾಯಿ ಬೆಳೆಯಲಾಗುತ್ತದೆ. ಇದುವೇ ಸಾವಯವ ಕ್ರುಶಿ ಮತ್ತು ಇಂತಹ ಕ್ರುಶಿಯ ಪಸಲನ್ನು ಸಾವಯವ ಆಹಾರ ಎನ್ನುವರು. ಒಂದು ವೇಳೆ ಇವುಗಳಲ್ಲಿ ಒಂದು ಅತವಾ ಒಂದಕ್ಕಿಂತ ಹೆಚ್ಚು ವಿದಾನಗಳನ್ನು ಅನುಸರಿಸಿ ಬೆಳೆದರೆ ಇದು ಕ್ರುತಕ ಆಹಾರವಾಗುತ್ತದೆ. ಮಾಂಸಾಹಾರದಲ್ಲಿಯೂ ಅಶ್ಟೇ, ಹಾಲು, ಮಾಂಸ ಮತ್ತು  ಮೊಟ್ಟೆ ಮೊದಲಾದವುಗಳನ್ನು ನೈಸರ‍್ಗಿಕ ರೂಪದಲ್ಲಿ ಪಡೆದಾಗ ಇವು ಸಾವಯವ ಆಹಾರಗಳಾಗುತ್ತವೆ. ಹಾಲು, ಬೆಣ್ಣೆ, ತುಪ್ಪ ಮತ್ತು ಮೊಸರು ಎಲ್ಲಾ ಪದಾರ‍್ತಗಳಿಗೂ ಸಾವಯವ ಎಂಬ ಹಣೆಪಟ್ಟಿ ಸಿಗಬೇಕಾದರೆ ಪ್ರಾಣಿಗಳು (ಹಸು ಅತವಾ ಎಮ್ಮೆ) ಸೇವಿಸುವ ಆಹಾರ ಕೂಡ ಸಾವಯವ ರೀತಿಯಲ್ಲಿ ಬೆಳೆದಿರಬೇಕು. ಒಂದು ವೇಳೆ ಹೆಚ್ಚು ಲಾಬ ಪಡೆಯಲು ಆಂಟಿಬಯಾಟಿಕ್ (ಪ್ರತಿಜೀವಕ) ಔಶದಿಗಳು, ಕ್ರುತಕ ರಸದೂತಗಳು ಮತ್ತು  ದೇಹ ಅತಿ ಬೇಗನೆ ಬೆಳೆಯುವಂತೆ ಮಾಡುವ ಕ್ರುತಕ ಆಹಾರ ವಸ್ತುಗಳನ್ನು ಬಲವಂತವಾಗಿ ತಿನ್ನಿಸುವ ಮೂಲಕ ಪಡೆಯುವ ಯಾವುದೇ ಉತ್ಪನ್ನಗಳು ಕ್ರುತಕವಾಗುತ್ತವೆ.

1930 -1940ರ ದಶಕದಲ್ಲಿ ಕ್ರುಶಿ, ತೋಟಗಾರಿಕೆ ಮತ್ತು ಬೇಸಾಯ ಬೂಮಿಗಳು ರಾಸಾಯನಿಕ ಗೊಬ್ಬರ ಹಾಗೂ ಔಶದಿಗಳ ಮೇಲೆ ಅವಲಂಬಿತವಾಗಕೂಡದು ಎನ್ನುವ ಪರಿಕಲ್ಪನೆಯೊಂದಿಗೆ ಶುರುವಾದ ಸಾವಯವ ಚಳುವಳಿ ಇಂದಿಗೂ ಜೀವಂತವಾಗಿದೆ. ಜನಸಾಮಾನ್ಯರಲ್ಲಿ ಪರಿಸರದ ಪರಿಜ್ನಾನ ಮತ್ತು ಶ್ರದ್ದೆ ಹೆಚ್ಚಾದಂತೆಲ್ಲಾ ಮೂಲಬೂತವಾಗಿ ಸಾವಯವ ಚಳುವಳಿ ಒಂದು ಬೇಡಿಕೆಯ ಕೆಲಸವಾಗಿ ಪರಿಣಮಿಸಿತು. ಬಳಕೆದಾರರಿಂದ ಹಾಗೂ ಕೆಲವು ಸಂದರ‍್ಬಗಳಲ್ಲಿ ಸರಕಾರದ ಸಹಾಯದನದಿಂದ ಬೇಡಿಕೆಗಳು ಹೆಚ್ಚಾದ್ದರಿಂದ  ಆಕರ‍್ಶಿತರಾದ ಬೇಸಾಯಗಾರರು ಬದಲಾವಣೆಗಾಗಿ ಹಾತೊರೆದರು. ಪ್ರಗತಿಪರ ರಾಶ್ಟ್ರಗಳಲ್ಲಿನ ಬಹುಮಂದಿ ಬೇಸಾಯಗಾರರು ಹಿಂದಿನಿಂದ ಬಳುವಳಿಯಾಗಿ ಬಂದ ವಿದಾನಗಳಲ್ಲಿ ಬೇಸಾಯ ಮಾಡುತ್ತಿದ್ದವರಾಗಿದ್ದರು. ಆ ಬಗೆಗಳೆಲ್ಲವೂ ಸಾವಯವ ಕ್ರುಶಿ ಪದ್ದತಿಯೊಂದಿಗೆ ಬಹುಮಟ್ಟಿಗೆ ಹೋಲುವಂತಿದ್ದರೂ ಅವುಗಳಿಗೆ ಯಾವುದೇ ಬಗೆಯ ಮನ್ನಣಾ ಪತ್ರಗಳಿರಲಿಲ್ಲ. ಜೊತೆಗೆ ಕೆಲವು ವಿಶಯಗಳಲ್ಲಿ ಪ್ರಗತಿಪರ ರಾಶ್ಟ್ರಗಳ ಬೇಸಾಯಗಾರರು ಆರ‍್ತಿಕ ಕಾರಣಗಳಿಗಾಗಿ ತಮ್ಮ ವಿದಾನವನ್ನು ಬದಲಾಯಿಸಿಕೊಂಡರು. ವಿಶ್ವದ ಒಟ್ಟು ಕ್ರುಶಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣದ್ದು ಎನಿಸುತ್ತದೆಯಾದರೂ ಅದು ಯುರೋಪ್ ಸೇರಿದಂತೆ ಅನೇಕ ರಾಶ್ಟ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ.

ಸಾವಯವ ಮತ್ತು ಕ್ರುತಕ ಆಹಾರ ಸೇವನೆಯ ಪರಿಣಾಮಗಳು

ಸಾವಯವ ಆಹಾರ ಪದಾರ‍್ತಗಳು ಇತರ ಆಹಾರಗಳಿಗಿಂತ ಆರೋಗ್ಯಕರವಾಗಿವೆ ಹಾಗೂ ಸುರಕ್ಶಿತವಾಗಿವೆ. ಹೀಗೆನ್ನಲು ವೈಜ್ನಾನಿಕ ಆದಾರಗಳೂ ಸಹ ಇವೆ. ಹಲವು ಸಂಶೋದನೆಗಳ ಪ್ರಕಾರ ಸಾವಯವ ಆಹಾರ ಪದಾರ‍್ತಗಳಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳೂ, ಒಮೆಗಾ 3 ಕೊಬ್ಬಿನ ಆಮ್ಲಗಳೂ, ಸಿ ಎಲ್ ಎ ಹಾಗೂ ಸೂಕ್ಶ್ಮ ಪೋಶಕಾಂಶಗಳು ಇತರೆ ಕ್ರುತಕ ಆಹಾರ ಪದಾರ‍್ತಗಳಿಗಿಂತ ಹೆಚ್ಚಿರುತ್ತವೆ. ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟುಗಳ ಕೊರತೆಯೇ ಹಲವಾರು ಕಾಯಿಲೆಗಳು ಆವರಿಸಲು ಮುಕ್ಯ ಕಾರಣವಾಗಿರುವುದರಿಂದ ಸಾವಯವ ಆಹಾರದ ಬಳಕೆಯನ್ನು ಮುನ್ನೆಲೆಗೆ ತರುವುದು ಮುಕ್ಯವಾಗಿದೆ. ರಾಸಾಯನಿಕ ಗೊಬ್ಬರ ಅತವಾ ರಾಸಾಯನಿಕ ಔಶದಿ ಬಳಸಿ ಬೆಳೆಯುವ ಆಹಾರ ಪದಾರ‍್ತಗಳಿಗಿಂತ ಸಾವಯವ ಆಹಾರ ಪದಾರ‍್ತಗಳು ರುಚಿಕರವಾಗಿರುತ್ತವೆ. ಸಾವಯವ ಕ್ರುಶಿ ಪದ್ದತಿಯಲ್ಲಿ ಬೆಳೆದ ಬೆಳೆಗಳನ್ನು ಹೆಚ್ಚು ದಿನಗಳವರೆಗೆ ಶೇಕರಿಸಿಡದೇ ಬೇಗನೆ ಬಳಸುವ ಕಾರಣದಿಂದಾಗಿ ನಮಗೆ ಅವು ರುಚಿಯಾಗಿವೆ ಅಂತ ಅನ್ನಿಸಬಹುದೇನೋ! ಆದರೆ ಏನೇ ಆಗಲಿ ತಾಜಾ ಆಹಾರ ಪದಾರ‍್ತಗಳು ಯಾವತ್ತಿದ್ದರೂ ಉತ್ತಮ ಮತ್ತು ರುಚಿಕರವಾಗಿರುತ್ತದೆ.

ಕೀಟನಾಶಕಗಳಿಂದ ತುಂಬಿದ ಆಹಾರವನ್ನು ಸೇವಿಸಿದಾಗ ಈ ರಾಸಾಯನಿಕಗಳು ದೇಹವನ್ನು ಸೇರಿ ರೋಗ ನಿರೋದಕ ಶಕ್ತಿಯನ್ನು ಕುಗ್ಗಿಸುತ್ತವೆ. ಇಂತಹ ಆಹಾರವನ್ನು ಸತತವಾಗಿ ಸೇವಿಸುತ್ತಿದ್ದರೆ ರೋಗ ನಿರೋದಕ ವ್ಯವಸ್ತೆ ಅತಿಯಾಗಿ ಕಾರ‍್ಯ ನಿರ‍್ವಹಿಸುವ ಮೂಲಕ ಬೇಗನೇ ಹಾಳಾಗುತ್ತಾ ಹೋಗುತ್ತದೆ. ಹೀಗೆ ಶಿತಿಲವಾದ ರೋಗ ನಿರೋದಕ ಶಕ್ತಿಯ ಪರಿಣಾಮವಾಗಿ ಹುಟ್ಟುವ ಮಕ್ಕಳು ಸಾವನ್ನಪ್ಪುವ ಸಾದ್ಯತೆ ಹೆಚ್ಚುತ್ತದೆ ಹಾಗೂ ಲೈಂಗಿಕ ಅಸಮರ‍್ತತೆ ಸೇರಿದಂತೆ ಹಲವಾರು ಬಗೆಯ ರೋಗಗಳಿಗೆ ದಾರಿ ಮಾಡಿಕೊಡುವಂತಾಗುತ್ತದೆ. ಹಾಗಾಗಿ ಸಾದ್ಯವಿದ್ದಶ್ಟೂ ಸಾವಯವ ಆಹಾರಗಳನ್ನೇ ಸೇವಿಸುವುದು ಉತ್ತಮ.

ಸಾವಯವ ಪದ್ದತಿಯ ಮೂಲಕ ಬೆಳೆದ ಆಹಾರವು ಸೇವಿಸುವವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ, ಈ ಪದ್ದತಿಯು ವಾತಾವರಣದ ಮೇಲೂ ಮೆಚ್ಚತಕ್ಕ ಪರಿಣಾಮ ಬೀರುತ್ತದೆ. ಸಾವಯವ ವಿದಾನದ ಬೆಳೆಗಾರಿಕೆ ವಾತಾವರಣಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ನೀರಿನ ಬಳಕೆಯೂ ಇತಿಮಿತಿಯಲ್ಲಿರುತ್ತದೆ, ಬೂಮಿಯ ಮಣ್ಣಿನ ಮೇಲ್ಪದರ ಕೊಚ್ಚಿಕೊಂಡು ಹೋಗದಂತೆ ತಡೆಯುತ್ತದೆ, ಮಣ್ಣಿನಲ್ಲಿ ಸತ್ವವನ್ನು ಹೆಚ್ಚಿಸುತ್ತದೆ ಹಾಗೂ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇವೆಲ್ಲಾ ಕ್ರಮಗಳನ್ನು ಸತತವಾಗಿ ಅನುಸರಿಸುವ ಮೂಲಕ ಕ್ರಮೇಣ ವಾತಾವರಣವನ್ನೂ ಆರೋಗ್ಯಕರವಾಗಿ ಇಡಬಹುದು.

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications