ಆನೆಗಳಿಂದ ಒಂದು ಓಲೆ

– ಶಾಂತ್ ಸಂಪಿಗೆ.

ಆನೆಗಳು, elephants

ನಮಸ್ಕಾರ, ನಾವು ಆನೆಗಳು,

ಬಾರತ ದೇಶದ ಸಮ್ರುದ್ದ ಸಂಸ್ಕ್ರುತಿಯಲ್ಲಿ ಆನೆಗಳಾದ ನಮಗೆ ಪೂಜ್ಯ ಸ್ತಾನವನ್ನು ನೀವುಗಳು ನೀಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಅದರ ಪ್ರತೀಕವಾಗಿಯೇ ಬಹುತೇಕ ದೇವಸ್ತಾನಗಳಲ್ಲಿ ನಮ್ಮನ್ನು ಗಜರಾಜನೆಂದು ಅತ್ಯಂತ ಶ್ರದ್ದೆ, ಬಕ್ತಿಯಿಂಂದ ಸಾಕುತ್ತೀರ ಮತ್ತು ಪೂಜಿಸುತ್ತೀರ. ನಮ್ಮ ದಿನನಿತ್ಯದ ಜೀವನ ಹೇಗಿದೆ ಎಂದು ನಿಮಗೆ ಗೊತ್ತಿದೆಯಾ? ದಯಮಾಡಿ ಕೇಳಿ.

ನಮ್ಮದು ಸ್ತ್ರೀ ಪ್ರದಾನ ಕುಟುಂಬ ಶೈಲಿ. ಅಂದರೆ ನಮ್ಮ ಕುಟುಂಬಗಳಿಗೆ ಹಿರಿಯ ತಾಯಾನೆಯೇ ಮಾರ‍್ಗದರ‍್ಶಿ ಮತ್ತು ನಮ್ಮ ಕುಟುಂಬದ ದೈನಂದಿನ ಚಲನ ವಲನಗಳನ್ನು ಹಿರಿಯ ತಾಯಾನೇಯೆ ನಿರ‍್ದರಿಸುತ್ತದೆ. ನಮ್ಮನ್ನು ತುಂಬಾ ಜೋಪಾನವಾಗಿ ಕಾಪಾಡುವ ಹೊಣೆ ಅವಳದೇ. ದಟ್ಟ ಅರಣ್ಯಗಳಲ್ಲಿ ಆನೆಗಳ ಕುಟುಂಬಗಳನ್ನು ತಾಯಾನೆಯು ಅತ್ಯಂತ ಜಾಣ್ಮೆಯಿಂದ ರಕ್ಶಿಸುತ್ತ, ಪೋಶಿಸುತ್ತ ನಮ್ಮ ಸಂತತಿಯನ್ನು ಉಳಿಸಿಕೊಂಡು ಬಂದಿವೆ. ನಾವು ಗಾಂಬೀರ‍್ಯಕ್ಕೆ ಅತ್ಯಂತ ಹೆಸರುವಾಸಿ. ಕಾಡಿನಲ್ಲಿ ಯಾರೊಂದಿಗೂ ಸಹನೆ ಕಳೆದುಕೊಂಡು ಜಗಳವಾಡಿದ ಉದಾಹರಣೆಗಳು ತುಂಬಾ ವಿರಳ. ಆದ್ದರಿಂದಲೇ ನಮ್ಮನ್ನು ಎಲ್ಲಾ ಪ್ರಾಣಿ ಪಕ್ಶಿಗಳು ಕೂಡ ಗೌರವಿಸುತ್ತವೆ. ನಮ್ಮ ಕುಟುಂಬವನ್ನು ಮುನ್ನಡೆಸುವ ತಾಯಾನೆಗೆ ನಾವುಗಳು ದಿನನಿತ್ಯ ಸಾಗಬೇಕಾದ ಹಾದಿ ತಿಳಿದಿರುತ್ತದೆ ಮತ್ತು ಆ ಹಾದಿಯಲ್ಲಿ ಎಲ್ಲೆಲ್ಲಿ ನೀರಿನ ಸೌಕರ‍್ಯವಿದೆ ಮತ್ತು ಯಾವ ಯಾವ ರುತುಗಳಲ್ಲಿ ಆಹಾರ ಯಾವ ಜಾಗದಲ್ಲಿ ಸಿಗುತ್ತದೆ ಎನ್ನುವ ಸಂಪೂರ‍್ಣ ಅರಿವು ಇರುತ್ತದೆ. ನಾವು ದಿನಕ್ಕೆ 5 ರಿಂದ 10 ಕಿ.ಮೀ ದೂರ ಸಾಗುತ್ತೇವೆ.

ನಮಗೆ ನಮ್ಮ ಮರಿಯಾನೆಗಳನ್ನು ಕಂಡರೆ ಅತ್ಯಂತ ಅಚ್ಚುಮೆಚ್ಚು. ಆದ್ದರಿಂದಲೇ ನಾವು ಅವುಗಳನ್ನು ಯಾವಾಗಲೂ ಅತ್ಯಂತ ಜೋಪಾನವಾಗಿ ನಮ್ಮ ಗುಂಪಿನ ಮದ್ಯದಲ್ಲಿಯೆ ಕರೆದುಕೊಂಡು ಹೋಗುತ್ತೇವೆ. ನಾವು ಸಂಪೂರ‍್ಣ ಸಸ್ಯಹಾರಿಗಳು. ನಮಗೆ ದೇವರು ಅತ್ಯಂತ ತೀಕ್ಶ್ಣ ಬುದ್ದಿ ಶಕ್ತಿಯನ್ನು ನೀಡಿದ್ದಾನೆ. ನಾವು ನಮ್ಮ ಎಲ್ಲಾ ಬುದ್ದಿ ಶಕ್ತಿ ಸಾಮರ‍್ತ್ಯಗಳನ್ನು ಪ್ರಕ್ರುತಿ ಮಡಿಲಲ್ಲಿ ಸರಳ ಸುಂದರ ಜೀವನ ನಡೆಸಲು ಮತ್ತು ನಮ್ಮ ಕುಟುಂಬವನ್ನು ಉತ್ತಮವಾಗಿ ಸಲಹುತ್ತ ನಮ್ಮ ಸಂತತಿಯನ್ನು ಮುಂದಿನ ದಿನಗಳಿಗೆ ಉಳಿಸಲು ಬಳಸುತ್ತೇವೆ, ಅಶ್ಟೆ.

ನಮಗೆ ಇನ್ನೊಬ್ಬರಿಗೆ ಅಪಾಯವನ್ನು ತಂದೊಡ್ಡಿ ಬದುಕಬೇಕೆಂಬ ಹಂಬಲ ಕಿಂಚಿತ್ತೂ ಇಲ್ಲ. ಇಶ್ಟೇ ನೋಡಿ ನಮ್ಮ ಜೀವನ. ನಾವು ಪ್ರತಿ ವರ‍್ಶದಂತೆ ಈಗಲೂ ನಮ್ಮ ಹಾದಿಯಲ್ಲಿಯೇ ನೀರು ಮತ್ತು ಆಹಾರ ಹುಡುಕಿಕೊಂಡು ಸಾಗಿ ಬರುತ್ತಿದ್ದೇವೆ. ಆದರೆ ಈಗ ಕಾಲ ತುಂಬಾ ಬದಲಾಗಿದೆ. ನಮ್ಮ ಹಿರಿಯ ತಾಯಾನೆ ದಾರಿಕಾಣದೇ ಕಂಗಾಲಾಗಿದೆ. ನಾವು ಸಾಗುತ್ತಿದ್ದ ಹಾದಿ ಇಂದು ಕಾಣದಾಗಿದೆ. ನಮ್ಮನ್ನು ಜನರು ಕಾಡಾನೆಗಳು ಊರಿಗೆ ಬಂದಿವೆಯೆಂದು ಹೆದರಿಸುತ್ತಿದ್ದಾರೆ. ಗದರಿ ನಮ್ಮ ಕುಟುಂಬವನ್ನು ಚದುರಿಸಿ ಎಲ್ಲೆಲ್ಲೊ ಕರೆದುಕೊಂಡು ಹೋಗಿ ಬಿಡುತ್ತಿದ್ದಾರೆ. ನೀವೇ ಹೇಳಿ, ನಿಮ್ಮ ಚಿಕ್ಕ ಮಕ್ಕಳನ್ನು ನಿಮ್ಮಿಂದ ದೂರ ಮಾಡಿ ಒಂದು ಕಡೆ ಕೂಡಿಹಾಕಿ ಊಟ ನೀಡುತ್ತೇವೆ ಎಂದರೆ ನಿಮ್ಮ ಮಕ್ಕಳು ಚೆನ್ನಾಗಿರುತ್ತಾರೆಯೆ? ನಮಗೂ ಹಾಗೆ ನಮ್ಮ ಕುಟುಂಬವನ್ನು ಅಗಲಿದ ಮೇಲೆ ಹೊಸ ಮಾರ‍್ಗವನ್ನು ಅರಿಯಲಾಗದೆ ತುಂಬಾ ಕಂಗಾಲಾಗುತ್ತೇವೆ. ಅದೇ ಚಿಂತೆಯಲ್ಲಿ ಪ್ರಾಣ ಬಿಡುತ್ತೇವೆ. ನಮಗೆ ನಿಮ್ಮ ಹೊಸ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವ ಅರಿವು ಸ್ವಲ್ಪವೂ ಇಲ್ಲ. ಅದರ ಚಿಂತೆಯೂ ನಮಗೆ ಬೇಡ. ನೀವು ತುಂಬಾ ಬುದ್ದಿವಂತರು, ನಮ್ಮನ್ನು ನೀವೇ ರಕ್ಶಿಸುತ್ತೀರಿ ಎನ್ನುವ ಬಲವಾದ ನಂಬಿಕೆ ನಮಗಿದೆ.

ಈಗಾಗಲೇ ನಮ್ಮ ಹಾದಿಗಳೆಲ್ಲ ಹೊಸ ನಾಡಾಗಿವೆ, ರಸ್ತೆಗಳಾಗಿವೆ. ಕಾಡು ಕಿರಿದಾಗಿದೆ, ನಮಗೆ ನೀರು ಮತ್ತು ಆಹಾರಕ್ಕೆ ತುಂಬ ತೊಂದರೆಯಾಗುತ್ತಿದೆ. ದಯಮಾಡಿ ತಾವುಗಳು ನಮ್ಮ ರಕ್ಶಣೆಗೆ ಬನ್ನಿ. ನಮಗೆಂದು ಇರುವ ಕಾಡುಗಳನ್ನು ಉಳಿಸಿದರೆ, ನಾವು ಕೂಡ ಸೌಹಾರ‍್ದಯುತವಾಗಿ ನಿಮ್ಮ ಕರುಣೆಯ ನೆರಳಲ್ಲಿ ಬದುಕು ಕಟ್ಟಿಕೊಳ್ಳುತ್ತೇವೆ.

ಇಂತಿ,
ಆನೆಗಳು

1 ಅನಿಸಿಕೆ

  1. ಆನೆಗಳ ಆಂತರ್ಯದ ಮಾತು ಸೊಗಸಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.