ನಾವೇಕೆ ಬಯ್ಯುತ್ತೇವೆ? – 1ನೆಯ ಕಂತು
– ಸಿ.ಪಿ.ನಾಗರಾಜ.
ಗುರುಗಳಾದ ಡಾ.ಕೆ.ವಿ.ನಾರಾಯಣ ಅವರ ಮಾರ‍್ಗದರ‍್ಶನದಲ್ಲಿ ಸಂಶೋದನೆ ಮಾಡಿ ನಾನು ರಚಿಸಿದ “ಕನ್ನಡ ಬಯ್ಗುಳಗಳ ಅದ್ಯಯನ” ಎಂಬ ಬರಹಕ್ಕೆ 1994 ನೆಯ ಇಸವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ. ಪದವಿ ಬಂದಾಗ ಮೆಚ್ಚಿದವರಿಗಿಂತ ಅಚ್ಚರಿಗೊಂಡವರು ಮತ್ತು ಆತಂಕಪಟ್ಟವರೇ ಹೆಚ್ಚು. ರಾಜ್ಯ ಮಟ್ಟದಲ್ಲಿ ಪ್ರಸಾರವಾಗುವ ದಿನ ಪತ್ರಿಕೆಯೊಂದರಲ್ಲಿ ಅಂದು ‘ಬಯ್ಗುಳಕ್ಕೆ ಪಿ.ಎಚ್‌ಡಿ.’ ಪದವಿ ಎಂಬ ತಲೆಬರಹದಲ್ಲಿ ಪ್ರಕಟಗೊಂಡ ಸುದ್ದಿಯನ್ನು ಓದಿದ ವಾಚಕರೊಬ್ಬರು “ಅಯ್ಯೋ, ನಮ್ಮ ವಿಶ್ವವಿದ್ಯಾಲಯಗಳ ಶೈಕ್ಶಣಿಕ ಮಟ್ಟ ಇಶ್ಟೊಂದು ಕುಸಿಯಿತೇ” ಎಂದು ಓದುಗರ ಪತ್ರದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. 2012 ನೆಯ ಇಸವಿಯಲ್ಲಿ ಸುಮಾರು ಒಂದು ವರುಶದ ಕಾಲ ವಿಜಯ ಕರ‍್ನಾಟಕ ದಿನ ಪತ್ರಿಕೆಯಲ್ಲಿ ಬಯ್ಗುಳದ ಪದಗಳಿಗೆ ನಾನು ಬರೆಯುತ್ತಿದ್ದ ಟಿಪ್ಪಣಿಯು ಪ್ರಕಟಗೊಳ್ಳುತ್ತಿದ್ದಾಗ , ಪತ್ರಿಕೆಯ ಓದುಗರ ವಿಬಾಗದ ಪತ್ರದಲ್ಲಿ “ಕೀಳು ಅಬಿರುಚಿಯುಳ್ಳ ನಿಕ್ರುಶ್ಟಮಟ್ಟದ ಬಯ್ಗುಳಗಳ ಬಗ್ಗೆ ನಾಡಿನ ಜನತೆಗೆ ಪಾಟ ಹೇಳುವಂತಹ ಅಗತ್ಯವೇನಿತ್ತು? ಇದರಿಂದ ನಮಗೆ ಕೆಟ್ಟ ಆಲೋಚನೆ ಬರುತ್ತದೆಯಲ್ಲವೇ? ಪ್ರಯೋಜನವಾದರೂ ಏನು…?” ಎಂದು ಕೆಲವು ಓದುಗರು ಪ್ರಶ್ನಿಸಿದರು.
ಇಂದಿಗೂ ನನ್ನ ಪಿ.ಎಚ್‌ಡಿ. , ಓದಿನ ವಿಶಯವನ್ನು ಕೇಳಿದಾಗ ಒಂದಲ್ಲ ಒಂದು ಬಗೆಯ ಉದ್ಗಾರವನ್ನು ವ್ಯಕ್ತಪಡಿಸದೆ ಸುಮ್ಮನಿರುವ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಈಗ ಈ ಬರಹವನ್ನು ಓದಲು ತೊಡಗಿರುವ ನಿಮ್ಮ ಮನದಲ್ಲಿಯೂ “ಬೋಳಿಮಗ್ನೆ, ಸೂಳೆಮಗ್ನೆ ಎಂಬಂತಹ ನೂರಾರು ಕೆಟ್ಟ ಪದಗಳಿಂದ ಕೂಡಿರುವ ಬಯ್ಗುಳದಲ್ಲಿ ಪಿ.ಎಚ್‌ಡಿ. ಪದವಿಯನ್ನು ಪಡೆಯುವಂತಹ ಸಂಗತಿಗಳು ಏನಿರಬಹುದು?” ಎಂಬ ಕುತೂಹಲ ಇದ್ದೇ ಇದೆ.
‘ಬಯ್ಗುಳ’ ಎಂದ ಕೂಡಲೇ “ಅದು ಕೆಟ್ಟದ್ದು” ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ನಮ್ಮ ಜೀವಮಾನದಲ್ಲಿ ಇತರರನ್ನು ಬಯ್ಯದೆ; ಪ್ರಾಣಿಪಕ್ಶಿಗಳನ್ನು ಮತ್ತು ವಸ್ತುಗಳನ್ನು ಬಯ್ಯದೆ; ಬೇರೆಯವರಿಂದ ಬಯ್ಯಿಸಿಕೊಳ್ಳದೆ; ಕೆಲವೊಮ್ಮೆ ನಮ್ಮನ್ನು ನಾವೇ ಬಯ್ದುಕೊಳ್ಳದೆ ಇರಲು ಸಾದ್ಯವೇ ಇಲ್ಲ. ನಾವೆಲ್ಲರೂ ಒಂದಲ್ಲ ಒಂದು ಬಗೆಯ ಬಯ್ಗುಳವನ್ನು ತಿಳಿದಿದ್ದೇವೆ ಮತ್ತು ಹಲವಾರು ಸನ್ನಿವೇಶಗಳಲ್ಲಿ ಅದನ್ನು ಆಡುತ್ತಿರುತ್ತೇವೆ. ಈ ರೀತಿ ನಮ್ಮ ನಡೆನುಡಿಯಲ್ಲಿ ಹಾಸುಹೊಕ್ಕಾಗಿ ಮಾನವರ ಸಾಮಾಜಿಕ ವರ‍್ತನೆಯ ಒಂದು ಬಾಗವಾಗಿರುವ ಬಯ್ಗುಳಗಳ ಬಗ್ಗೆ ಹೆಚ್ಚಿನ ಸಂಗತಿಯನ್ನು ತಿಳಿಯಬೇಕೆಂದರೆ ಜನರ ದಿನನಿತ್ಯದ ಜೀವನದ ಆಗುಹೋಗುಗಳಲ್ಲಿ ಬಯ್ಗುಳಗಳು ಬಳಕೆಗೊಂಡಿರುವ ಪ್ರಸಂಗಗಳನ್ನು ಗಮನಿಸಬೇಕಾದ ಅಗತ್ಯವಿದೆ.
“ಯಾರು ಯಾರಿಗೆ ಬಯ್ದರು? ಎಲ್ಲಿ ಬಯ್ದರು? ಯಾವಾಗ ಬಯ್ದರು? ಯಾತಕ್ಕಾಗಿ ಬಯ್ದರು? ಬಯ್ದಾಗ ಯಾವ ಬಗೆಯ ಬಯ್ಗುಳಗಳನ್ನು ಬಳಸಿದರು? ಬಯ್ಯುವಾಗ ಬಯ್ಯುವವರ ಮತ್ತು ಬಯ್ಯಿಸಿಕೊಳ್ಳುವವರ ಮುಕಬಾವ ಮತ್ತು ದೇಹದ ಚಲನವಲನಗಳು ಹೇಗಿದ್ದವು? ಬಯ್ಯಿಸಿಕೊಂಡವರು ಸುಮ್ಮನಿದ್ದರೆ ಇಲ್ಲವೇ ಎದುರಾಗಿ ಅವರು ಕೂಡ ಬಯ್ಯಲು ತೊಡಗಿದರೆ ಇಲ್ಲವೇ ಅಲ್ಲಿಂದ ದೂರ ಸರಿದರೆ? ಬಯ್ದವರು ಮತ್ತು ಬಯ್ಯಿಸಿಕೊಂಡವರಲ್ಲದೆ ಆ ಸಮಯದಲ್ಲಿ ಬೇರೆಯವರು ಯಾರಾದರೂ ಆ ಎಡೆಯಲ್ಲಿ ಇದ್ದರೆ? ಬಯ್ದವರ ಬಯ್ಯಿಸಿಕೊಂಡವರ ಮತ್ತು ಇತರರ ಮನದ ಮೇಲೆ ಉಂಟಾದ ಪರಿಣಾಮಗಳೇನು?” ಇವೇ ಮುಂತಾದ ಸಂಗತಿಗಳನ್ನು ತಿಳಿಯುವುದರ ಮೂಲಕ “ನಾವೇಕೆ ಬಯ್ಯುತ್ತೇವೆ ಇಲ್ಲವೇ ಜನರೇಕೆ ಬಯ್ಯುತ್ತಾರೆ?” ಎಂಬುದನ್ನು ಮನದಟ್ಟುಮಾಡಿಕೊಳ್ಳಬಹುದು.
ಪ್ರಸಂಗ – 1
ಬೆಳಗ್ಗೆ ಎಂಟು ಗಂಟೆ ಸಮಯ. ಹಳ್ಳಿಯೊಂದರ ದಾರಿಯಲ್ಲಿ ಹಾಯ್ದುಹೋಗುವ ಬಸ್ಸಿಗಾಗಿ ಅನೇಕ ಜನರು ಬಹಳ ಹೊತ್ತಿನಿಂದ ಕಾಯುತ್ತಾ ನಿಂತಿದ್ದಾರೆ. ಅವರಲ್ಲಿ ನಾಲ್ಕು ಮಂದಿ ಹುಡುಗರು ಒಮ್ಮೆ ತಮ್ಮ ಕಯ್ಯಲ್ಲಿ ಕಟ್ಟಿದ್ದ ವಾಚಿನ ಕಡೆ ಕಣ್ಣಾಡಿಸುತ್ತಾ, ಮತ್ತೊಮ್ಮೆ ಬಸ್ಸು ಬರುವ ದಾರಿಯ ಕಡೆಗೆ ನೋಡುತ್ತ ಚಡಪಡಿಸುತ್ತಿದ್ದಾರೆ. ಹಳ್ಳಿಯಿಂದ ನಗರದ ಕಾಲೇಜಿಗೆ ಪ್ರತಿನಿತ್ಯ ಬಸ್ಸಿನಲ್ಲಿ ಹೋಗಿ ಬರುವ ಈ ಹುಡುಗರಿಗೆ ಇಂದು ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ನಾಲ್ಕು ತಿಂಗಳಿಗೊಮ್ಮೆ ನಡೆಯುವ ಎಕ್ಸಾಮ್ ಇದೆ . ಪ್ರತಿ ನಿತ್ಯ ಏಳೂವರೆಗೆಲ್ಲಾ ಬರುತ್ತಿದ್ದ ಬಸ್ಸು , ಇಂದು ಗಂಟೆ ಎಂಟಾದರೂ ಬಂದಿರಲಿಲ್ಲ. ಕೆಲವೇ ಗಳಿಗೆಯಲ್ಲಿ ದೂರದಲ್ಲಿ ಬಸ್ಸು ಬರುತ್ತಿರುವ ದನಿ ಕೇಳಿಸಿತು.
ಅತ್ತ ನೋಡುತ್ತಿದ್ದಂತೆಯೇ ಬಸ್ಸು ಕಣ್ಣಿಗೆ ಬಿತ್ತು. ಬಸ್ಸಿನ ಒಳಗೆ ಜನರು ಕಿಕ್ಕಿರಿದು ತುಂಬಿದ್ದರಲ್ಲದೆ, ಬಸ್ ಟಾಪಿನ ಮೇಲೆಯೂ ಜನರು ಕುಳಿತಿದ್ದರು. ಬಸ್ಸು ನಿಲುಗಡೆಯ ಜಾಗಕ್ಕೆ ಬರುತ್ತಿದ್ದಂತೆಯೇ ಬಸ್ಸಿನ ವೇಗ ಕಡಿಮೆಯಾಗುವುದರ ಬದಲು, ಇನ್ನೂ ಹೆಚ್ಚಾಗಿ ಅಲ್ಲಿ ನಿಲ್ಲದೇ ಬಸ್ಸು ಮುಂದೆ ಸಾಗಿತು. ಕಾಯುತ್ತ ನಿಂತಿದ್ದ ಜನ ಬಸ್ಸನ್ನು ನಿಲ್ಲಿಸುವಂತೆ ಜೋರಾಗಿ ಕಿರುಚುತ್ತ, ನಾಲ್ಕಾರು ಹೆಜ್ಜೆ ಅದರ ಹಿಂದೆ ಓಡತೊಡಗಿದರು. ಆದರೆ ದೂಳೆಬ್ಬಿಸುತ್ತಾ ಬಸ್ಸು ಹೊರಟೇ ಹೋಯಿತು. ಇದರಿಂದ ಕಂಗಾಲಾದ ಹುಡುಗರು ತಮ್ಮ ತಮ್ಮಲ್ಲಿಯೇ ಮಾತನಾಡತೊಡಗಿದರು.
ಹುಡುಗ 1: ಡ್ರಯ್ವರ್ ಸೂಳೇಮಗ ಬಸ್ ನಿಲ್ಲಿಸ್ದೇ ಹೊಂಟೋದನಲ್ಲ. ಏನ್ರೋ ಮಾಡೋದು ಈಗ ?
ಹುಡುಗ 2: ನನ್ಮಗ ಎಂತಾ ಕಯ್ಕೊಟ್ಟನೋ ಇವತ್ತು.
ಹುಡುಗ 3: ಬಸ್ಸಿಗೆ ಕಲ್ ತಕೊಂಡು ಹೊಡಿಬೇಕಾಗಿತ್ತು ಕಣ್ರೋ. ಆಗಲಾದ್ರು ಲೋಪರ್ ನನ್ಮಗ ನಿಲ್ಲಿಸೋನೋ ಏನೋ?
ಹುಡುಗ 4- ತೂತ್ತೇರಿ… ಇನ್ನು ಒಂಬತ್ ಗಂಟೆ ತನಕ ಯಾವುದು ಬಸ್ಸೇ ಇಲ್ವಲ್ಲ… ಎಕ್ಸಾಮ್ಗೆ ಹೆಂಗೋ ಹೋಗೋದು? ಡ್ರಯ್ವರ್ ಅಲ್ಕ ಬಡ್ಡಿಮಗ ಇವತ್ತೇ ಎಂತಾ ಕೆಲಸ ಮಾಡ್ದ. ಒಂದು ಪೇಪರ್ ಹೊಯ್ತಲ್ರೋ… ಏನ್ರೋ ಮಾಡೋದು ಈಗ?
ಪ್ರಸಂಗ – 2
ಸಂಜೆ ನಾಲ್ಕರ ಸಮಯ. ಸುಮಾರು ಅರವತ್ತು ವಯಸ್ಸಿನ ರಾಮಣ್ಣನವರು ಮನೆಯಲ್ಲಿ ಕುರ‍್ಚಿಯಲ್ಲಿ ಕುಳಿತುಕೊಂಡು ಪುಸ್ತಕವೊಂದನ್ನು ಓದುತ್ತಿದ್ದರು. ಯಾರೋ ಕಾಲಿಂಗ್ ಬೆಲ್ ಮಾಡಿದ ಶಬ್ದ ಕೇಳಿ ಬಂತು. ಬಾಗಿಲನ್ನು ತೆರೆಯಲೆಂದು ಆತುರಾತುರವಾಗಿ ಮೇಲಕ್ಕೆದ್ದು ಹೆಜ್ಜೆಯಿಡುವಾಗ ಕುರ‍್ಚಿಯ ಒಂದು ಕಾಲಿಗೆ ಮೊಣಕಾಲು ಬಡಿದು ರಾಮಣ್ಣನವರಿಗೆ ತುಂಬಾ ನೋವಾಯಿತು. “ತೂ… ದರಿದ್ರದ್ದೆ… ಹಾಳಾದ್ದೆ” ಎಂದು ಕುರ‍್ಚಿಯನ್ನು ಶಪಿಸುತ್ತ, ಏಟು ಬಿದ್ದ ಜಾಗವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ ಬಾಗಿಲ ಬಳಿ ಬಂದರು.
ಪ್ರಸಂಗ – 3
ಬೆಳಗ್ಗೆ ಹತ್ತು ಗಂಟೆಯ ಹೊತ್ತಿಗೆ ಮಗ ಸೊಸೆ ಇಬ್ಬರೂ ಕೆಲಸಕ್ಕೆ ಹೋದ ನಂತರ, ಮನೆಯಲ್ಲಿದ್ದ ಬೋರಮ್ಮನವರು ತಿಂಡಿ ತಿಂದು, ಒಂದು ಗಳಿಗೆ ಮಲಗೋಣವೆಂದು ಚಾಪೆಯ ಮೇಲೆ ಒರಗಿದರು . ಇನ್ನೇನು ನಿದ್ದೆ ಹತ್ತುತ್ತಿತ್ತು . ಅಶ್ಟರಲ್ಲಿ ಅಡಿಗೆ ಮನೆಯಲ್ಲಿ ಪಾತ್ರೆಯೊಂದು ಉರುಳಿಬಿದ್ದ ದನಿಯೊಡನೆ, ದಡಾರೆನೆ ಏನೋ ನೆಗೆದು ಹಾರಿ ಹೋದ ಶಬ್ದ ಕೇಳಿಬಂತು. “ಅಯ್ಯೋ… ಹಾಳ್ ಬಸ್ತೀದೆ. ನೀನ್ ಎಕ್ಕುಟ್ಟೋಗ. ದಿನಾಲು ಹಿಂಗೆ ಬಂದು ಎಲ್ಲಾನು ಬೀಳಿಸ್ತೀಯಲ್ಲ. ನಿಂಗೇನು ಬಂದಿರೂದು ಮೊಲ್ಲಾಗ್ರು” ಎಂದು ಕೊತ್ತಿಯನ್ನು/ಬೆಕ್ಕನ್ನು ನಿಂದಿಸುತ್ತ, ಮೇಲೆದ್ದು ಅಡಿಗೆಮನೆಯತ್ತ ಹೆಜ್ಜೆಯಿಟ್ಟರು.
ಪ್ರಸಂಗ – 4
ಬೆಳಗ್ಗೆ ಹತ್ತು ಗಂಟೆಯ ಸಮಯ. ಬೆಂಗಳೂರು-ಮೈಸೂರಿನ ಹೆದ್ದಾರಿಯಲ್ಲಿ ಒಂದು ಸರ‍್ಕಾರಿ ಬಸ್ಸು ವೇಗದಲ್ಲಿ ಸಾಗುತ್ತಿತ್ತು. ನಾಲ್ಕು ರಸ್ತೆಗಳು ಸೇರುವ ಕಡೆಯೊಂದರಲ್ಲಿ ಯಾವ ಸಿಗ್ನಲ್ ಅನ್ನು ಗಮನಿಸದೆ, ಸ್ಕೂಟರ್ ಸವಾರನು ಅಡ್ಡಲಾಗಿ ಬಂದಾಗ, ಬಸ್ ಡ್ರಯ್ವರ್ ಸಡನ್ನಾಗಿ ಬ್ರೇಕ್ ಅನ್ನು ಒತ್ತಿ, ಬಸ್ಸನ್ನು ಸ್ವಲ್ಪ ಬಲಕೆ ತಿರುಗಿಸಿ, ಮತ್ತೆ ಎಡಕ್ಕೆ ತಿರುಗಿಸಿ ಬಸ್ಸನ್ನು ನಿಯಂತ್ರಣಕ್ಕೆ ತರುತ್ತಿದ್ದಂತೆಯೇ, ಸ್ಕೂಟರ್ ಸವಾರನು ಗಾಬರಿಯಿಂದ ಪಕ್ಕಕ್ಕೆ ಸರಿದು ಸ್ಕೂಟರ್ ನಿಲ್ಲಿಸಿದ. “ತೂ…. ಅಡ್ನಾಡಿಗುಟ್ದೋನೆ. ನಿಂಗೇನು ಬಂದಿತ್ತೋ ಕೇಡ್ಗಾಲ. ಲುಚ್ಚಾ ಬಾಂಚೊತ್… ಮನೇಲಿ ಹೇಳ್ಬುಟ್ಟು ಬಂದಿದ್ದೇನೋ ಇವತ್ತು ಸಾಯ್ತಿನಿ ಅಂತ” ಎಂದು ಸ್ಕೂಟರ್ ಸವಾರನ ಕಡೆಗೆ ನೋಡಿ ಬಯ್ಯುತ್ತ, ಬಸ್ಸನ್ನು ಮುನ್ನಡೆಸಿದ.
ಈ ಮೇಲ್ಕಂಡ ನಾಲ್ಕು ಸನ್ನಿವೇಶಗಳಲ್ಲಿ ಬಯ್ಗುಳಗಳು ಏಕೆ ಬಳಕೆಯಾಗಿವೆ ಎಂಬುದನ್ನು ಈಗ ಪರಿಶೀಲಿಸೋಣ.
ಎಕ್ಸಾಮ್ ತಪ್ಪಿಹೋಗಲಿರುವುದರಿಂದ ಹುಡುಗರಿಗೆ ಹಾನಿಯುಂಟಾಯಿತು; ಮೊಣಕೈಗೆ ಪೆಟ್ಟು ಬಿದ್ದು ರಾಮಣ್ಣನವರಿಗೆ ನೋವಾಯಿತು; ಬೋರಮ್ಮನವರ ನಿದ್ರೆಯು ಹಾಳಾಯಿತು; ಸ್ಕೂಟರ್ ಸವಾರನಿಗೆ ಬಸ್ಸು ಹೊಡೆದು ಸಾವು ನೋವು ಉಂಟಾಗಿದ್ದರೆ ಡ್ರಯ್ವರ್ ಪಾಲಿಗೆ ಅನೇಕ ತೊಂದರೆಗಳು ಉಂಟಾಗುತ್ತಿದ್ದವು. ಈ ಪ್ರಸಂಗಗಳಲ್ಲಿ ಹಾನಿ, ನೋವು, ಅಡಚಣೆ ಮತ್ತು ತೊಂದರೆಗೆ ಗುರಿಯಾದ ವ್ಯಕ್ತಿಗಳು ತಮ್ಮ ಮನದಲ್ಲಿ ಉಂಟಾದ ಬಾವನೆಗಳನ್ನು ವ್ಯಕ್ತಪಡಿಸಲು ಬಯ್ಗುಳವನ್ನು ಬಳಸಿದ್ದಾರೆ. ಒಂದು ವೇಳೆ ಈ ನಾಲ್ಕು ಪ್ರಸಂಗಗಳಲ್ಲಿ ಪಾಲ್ಗೊಂಡಿದ್ದವರು ಏನೊಂದನ್ನು ಮಾತನಾಡದೆ ಇಲ್ಲವೇ ಮನಸ್ಸಿನಲ್ಲಿ ಯಾವುದೇ ಬಗೆಯ ದುಗುಡವನ್ನು ಹೊಂದದೆ, ಯಾವುದೇ ಪ್ರತಿಕ್ರಿಯೆಯನ್ನು ಮಾಡದೆ ಸುಮ್ಮನಿರಬಹುದಿತ್ತೇ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಂಡರೆ, ಅವರ ಜಾಗದಲ್ಲಿ ನಾವೇ ಇದ್ದರೂ ಇಲ್ಲವೇ ಯಾವುದೇ ವ್ಯಕ್ತಿಯಿದ್ದರೂ ಸುಮ್ಮನಿರುವುದಕ್ಕೆ ಆಗುತ್ತಿರಲಿಲ್ಲವೆಂಬ ಉತ್ತರ ದೊರಕುತ್ತದೆ.
ಹಾಗಾದರೆ ಬಯ್ಗುಳದ ನುಡಿಗಳನ್ನಾಡುವುದಕ್ಕೆ ಬದಲಾಗಿ, ಮತ್ತಾವ ಬಗೆಯಲ್ಲಿ ಅವರೆಲ್ಲರೂ ತಮ್ಮ ಒಳಮಿಡಿತಗಳನ್ನು ಹೊರಹಾಕಬಹುದಾಗಿತ್ತು ಎಂಬ ಪ್ರಶ್ನೆಗೆ ಒಂದೆರಡು ಬಗೆಯ ಉತ್ತರಗಳನ್ನು ಮತ್ತು ಅದರಿಂದ ಉಂಟಾಗಬಹುದಾಗಿದ್ದ ಪರಿಣಾಮಗಳನ್ನು ಊಹಿಸಿಕೊಳ್ಳೊಣ.
1) ಬಸ್ಸಿಗೆ ಕಲ್ಲನ್ನು ಹೊಡೆದು ಹಾನಿ ಮಾಡಿ ನಿಲ್ಲಿಸಬಹುದಿತ್ತು. ಆ ರೀತಿ ಮಾಡಿದ್ದಲ್ಲಿ ಬಸ್ಸಿಗೆ ಹೊಡೆದ ಕಲ್ಲು ಪ್ರಯಾಣಿಸುತ್ತಿದ್ದ ಜನರಿಗೆ ಇಲ್ಲವೇ ಬಸ್ಸಿನ ಕಿಟಿಕಿಯ ಗಾಜುಗಳಿಗೆ ಬಡಿದು, ಇನ್ನೂ ಹೆಚ್ಚಿನ ಅನಾಹುತವಾಗಿ ಪ್ರಯಾಣಿಕರ ಜತೆ ಜಗಳವುಂಟಾಗಿ ಹೆಚ್ಚಿನ ಹಾನಿಯು ಹುಡುಗರಿಗೆ ಉಂಟಾಗುತ್ತಿತ್ತು.
2) ನೋವಿಗೆ ಕಾರಣವಾದ ಕುರ‍್ಚಿಯನ್ನು ಕಾಲಿನಿಂದ ಒದೆಯಬಹುದಿತ್ತು. ಆ ರೀತಿ ಒದ್ದಿದ್ದರೆ ರಾಮಣ್ಣನವರ ಕಾಲಿಗೆ ಮತ್ತೊಮ್ಮೆ ನೋವಾಗುತ್ತಿತ್ತು.
3) ಅಡುಗೆಮನೆಯಲ್ಲೇ ಇದ್ದ ಕೊತ್ತಿಯನ್ನು/ಬೆಕ್ಕನ್ನು ಕಂಡು ಅದರ ಮೇಲೆ ಎಸೆದ ಕೋಲು ಗಾಜಿನ ಕಿಟಕಿಗೆ ಬಡಿದು ಹಾನಿಯುಂಟಾಗಬಹುದಿತ್ತು.
4) ಡ್ರಯ್ವರನು ಬಸ್ಸನ್ನು ನಿಲ್ಲಿಸಿ ಕೆಳಕ್ಕೆ ಇಳಿದು ಬಂದು ಸ್ಕೂಟರ್ ಸವಾರನಿಗೆ ಎರಡೇಟು ಬಾರಿಸಬಹುದಿತ್ತು. ಆಗ ಸ್ಕೂಟರ್ ಸವಾರನು ಪ್ರತಿಯಾಗಿ ಕಯ್ ಮಾಡಬಹುದಿತ್ತು. ಈ ಸಮಯದಲ್ಲಿ ಸುತ್ತಮುತ್ತಲಿನ ಜನ ಸೇರಿ ಮತ್ತೇನಾದರೂ ದೊಡ್ಡ ಗಲಾಟೆಯೇ ಉಂಟಾಗುತ್ತಿತ್ತು.
ಹಾಗಾದರೆ ಇಂತಹ ಅನೇಕ ಬಗೆಯ ಅವಗಡ, ಹಾನಿ ಇಲ್ಲವೇ ತೊಂದರೆಗೆ ಒಳಗಾಗುವುದರ ಬದಲು ಒಂದೆರಡು ಬಯ್ಗುಳಗಳನ್ನು ಆಡುವುದರ ಮೂಲಕವೇ ತಮ್ಮ ಒಳಮಿಡಿತವನ್ನು ಹೊರಹಾಕಿದ್ದರಿಂದ, ವ್ಯಕ್ತಿಗಳ ಮನಸ್ಸಿನ ಕೋಪ ತಾಪವೂ ಕಡಿಮೆಯಾಯಿತು ಹಾಗೂ ಯಾವುದೇ ಬಗೆಯ ಅನಾಹುತ ನಡೆಯುವುದು ತಪ್ಪಿದಂತಾಯಿತು.
ಈ ಹಿನ್ನೆಲೆಯಲ್ಲಿ ಬಯ್ಗುಳಗಳನ್ನು ನೋಡಿದಾಗ ಒಂದು ಸಂಗತಿಯು ಎದ್ದು ಕಾಣುತ್ತದೆ. ನಮ್ಮ ಜೀವನದ ವ್ಯವಹಾರಗಳಲ್ಲಿ ಅಡ್ಡಿ, ಆತಂಕ, ನೋವು, ಹತಾಶೆ ಉಂಟಾದಾಗ, ನಮ್ಮ ಮಯ್ ಮನದಲ್ಲಿ ಕೆರಳುವ ಕೋಪದ ಒಳಮಿಡಿತವನ್ನು ಬಯ್ಗುಳದ ಮೂಲಕ ಹೊರಹಾಕುವುದರ ಬದಲು, ಅದಕ್ಕೆ ಕಾರಣವಾದ ವಸ್ತುವಿನ ಮೇಲೆ ಇಲ್ಲವೇ ವ್ಯಕ್ತಿಯ ಮಯ್ ಮೇಲೆ ಹಲ್ಲೆ ಮಾಡತೊಡಗಿದರೆ, ಅದು ಅನೇಕ ಬಗೆಯ ಅನಾಹುತಗಳಿಗೆ ಅದು ನಾಂದಿಯಾಗುತ್ತದೆ. ಮಯ್ ಮೇಲೆ ಹೊಡೆದು ಬಡಿದು ಹಲ್ಲೆ ಮಾಡಿ ನಮ್ಮ ಇಲ್ಲವೇ ಇತರರ ಮಾನ ಪ್ರಾಣಗಳಿಗೆ ಹಾನಿಯಾಗುವಂತೆ ನಡೆದುಕೊಳ್ಳುವುದರ ಬದಲು, ನಾಲ್ಕಾರು ನುಡಿಗಳ ಮೂಲಕ ಬಯ್ದು, ನಮ್ಮ ಮಯ್ ಮನದ ಉದ್ವೇಗವನ್ನು ಹೊರಹಾಕುವುದರಿಂದ, ಯಾರೊಬ್ಬರಿಗೂ ಹೆಚ್ಚಿನ ಹಾನಿಯುಂಟಾಗುವುದಿಲ್ಲ. ಆದುದರಿಂದಲೇ ಇತರರ ಮಯ್ ಮೇಲೆ ಕಯ್ ಮಾಡಿ ಹೊಡೆದು ಬಡಿದು ಹಲ್ಲೆ ಮಾಡುವುದರ ಬದಲು, ಮಾತಿನ ಮೂಲಕ ಹಲ್ಲೆ ಮಾಡುವ ಬಯ್ಯುವಿಕೆಯನ್ನು ಮಾನವನು ನಾಗರಿಕತೆಯತ್ತ ಅಡಿಯಿಟ್ಟ ದೊಡ್ಡ ಹೆಜ್ಜೆಗಳಲ್ಲಿ ಒಂದೆಂದು ಮನೋವಿಜ್ನಾನಿಯೊಬ್ಬರು ಅಬಿಪ್ರಾಯಪಟ್ಟಿದ್ದಾರೆ.
ಅಡುಗೆಯನ್ನು ಮಾಡುತ್ತಿರುವಾಗ ಕುಕ್ಕರಿನಲ್ಲಿ ಕುದಿಯುತ್ತಿರುವ ದ್ರವ ವಸ್ತುಗಳ ಬಿಸಿಯಾದ ಆವಿಯ ಪ್ರಮಾಣ ಹೆಚ್ಚಾದಾಗ, ಆವಿಯು ಹೊರಕ್ಕೆ ಹೋಗುವಂತಹ ಕವಾಟದ ವ್ಯವಸ್ತೆಯಿಲ್ಲದಿದ್ದರೆ, ಕುಕ್ಕರ್ ಸಿಡಿಯುತ್ತದೆ. ಅಂತೆಯೇ ನಮ್ಮ ಮನದಲ್ಲಿ ಕುದಿಯುವ ಒಳಮಿಡಿತಗಳನ್ನು ಹೊರಹಾಕದಿದ್ದರೆ, ಅದು ನಮ್ಮ ಮಯ್ ಮನದ ಮೇಲೆ ಬಹುಬಗೆಯಲ್ಲಿ ಗಾಸಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಬಯ್ಯುವಿಕೆಯು ನಮ್ಮ ಮಯ್ ಮನದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಇತರರಿಗೂ ಹಾನಿಯಾಗದಂತೆ ನಡೆದುಕೊಳ್ಳಲು ನೆರವಾಗುವಂತಹ ಒಂದು ಬಗೆಯ ಸಾಮಾಜಿಕ ವರ‍್ತನೆಯಾಗಿ ಬಳಕೆಯಲ್ಲಿದೆ.
(ಚಿತ್ರ ಸೆಲೆ: learnitaliango.com)
ಬಾಳ ಅದ್ಭುತವಾದ ವಿಷಯ ಮತ್ತು ಸೊಗಸಾದ ಅಂಕಣ. ನಾನು ದ್ವಿತೀಯ ಪಿಯುಸಿ ಓದುವಾಗ ಬೈಗುಳಗಳ ಬಗ್ಗೆ ಪಿ.ಎಚ್‌ಡಿ ಮಾಡಿದ್ದಾರೆ ಎಂದು ಸ್ನೇಹಿತ ಹೇಳಿದ್ದ ನಾನು ಕೂಡ ಎಲ್ಲರ ಹಾಗೆ ಆಶ್ಚರ್ಯಗೊಂಡಿದ್ದೆ. ಚೀನಾಲಿ ಮತ್ತು ಆಪತ್ತು ಬಂದು ಚಾಪೆ ಸುತ್ಕೊಂಡು ಹೋಗ ಎರಡು ಬೈಗುಳಗಳ ಅರ್ಥವನ್ನು ಕೂಡ ಸ್ನೇಹಿತ ವಿವರಿಸಿದ್ದ. ವಿವರಣೆ ತಿಳಿದು ಬಹಳ ಅರ್ಥಗರ್ಭಿತವಾಗಿದೆ ಎಂದೆನಿಸಿತ್ತು. ಇದು ವಿಬಿನ್ನ ವಿಷಯ. ನಾಗರಾಜ್ ಸರ್ ಗೆ ನನ್ನ ನಮನಗಳು.
ಅಂಕಣಕಾರರ ಅನುಮತಿಯ ಮೇರೆಗೆ ಅವರ ದೂರವಾಣಿ ಸಂಖ್ಯೆ ಸಿಗಬಹುದೇ?
ಬಯ್ಯದೆ ಇರುವ ಮನುಷ್ಯನೇ ಇಲ್ಲ ಅನಿಸುತ್ತದೆ . ಮನದ ದುಗುಡ ಹೊರ ಹಾಕಲು ದಿನ ನಿತ್ಯ ಸಣ್ಣ ಪುಟ್ಟ ಬಯ್ಯುವುದು ಇದ್ದೇ ಇರುತ್ತದೆ .ಚೆನ್ನಾಗಿದೆ ಸರ್
ಒಳ್ಳೆಯ ಅಧ್ಯಯನ