ಕೆಸುವಿನ ಗಿಡದ ಹಲವು ಉಪಯೋಗಗಳು
ಬಾಲ್ಯದ ದಿನಗಳನ್ನು ಮೆಲುಕುಹಾಕುತ್ತಿದ್ದಾಗ ನೆನಪಿಗೆ ಬಂದದ್ದು, ರಜೆ ಬಂದರೆ ಸಾಕು, ನಮ್ಮ ಊರಿಗೆ ಹೋದಾಗಲೆಲ್ಲಾ ತೋಟಕ್ಕೆ ಹೋಗಿ ಆಡುತ್ತಿದ್ದ ಆ ಸಂಬ್ರಮ!. ತೋಟದ ಮದ್ಯದಲ್ಲಿ ಸದಾ ತೆಳ್ಳಗೆ ಹರಿಯುವ ತೊರೆ, ಎತ್ತರವಾದ ಅಡಿಕೆ ಮರಗಳು, ದೈತ್ಯಕಾರದ ತೆಂಗಿನ ಮರಗಳು ಮತ್ತು ತೊರೆಯ ಅಕ್ಕಪಕ್ಕ ಆನೆಯ ಕಿವಿಯ ಆಕಾರವನ್ನು ಹೋಲುವ ದೊಡ್ಡಗಾತ್ರದ ಎಲೆಗಳುಳ್ಳ ಒಂದು ಗುಂಪಿನ ಗಿಡಗಳು ಬಹಳವಾಗಿ ಆಕರ‍್ಶಿಸುತ್ತಿದ್ದವು. ಆ ಗಿಡದ ಹೆಸರು ಕೆಸುವೆ/ಕೆಸುವಿನ ಗಿಡ. ಮಳೆಗಾಲದಲ್ಲಿ ತೊರೆಯು ಜೋರಾಗಿ ಹರಿದಂತೆ, ಆ ತೊರೆಗಳ ಅಂಚಿನಲ್ಲಿ ಮತ್ತು ಅದರ ಅಕ್ಕಪಕ್ಕದಲ್ಲಿನ ಕೆಸರಿನಲ್ಲಿ ಈ ಗಿಡಗಳು ಗುಂಪು ಗುಂಪಾಗಿ ಬೆಳೆಯುತ್ತಿದ್ದವು. ಅಗಲವಾದ ಈ ಎಲೆಯನ್ನು ಅಂಗೈಯಲ್ಲಿ ಹಿಡಿದು, ಅದರ ಮೇಲೆ ನೀರಿನ ಹನಿ ಹಾಕಿದಾಗ ಅದು ಗೋಲಿಯ ರೀತಿ ಓಡಾಡುತ್ತಿದ್ದುದ್ದೇ ಒಂದು ವಿಸ್ಮಯವಾಗಿತ್ತು.
ಸಸ್ಯಶಾಸ್ತ್ರದಲ್ಲಿ ‘ಕೊಲೊಕೇಸಿಯ ಎಸ್ಕ್ಯುಲೆಂಟ(Colocasia esculenta)’ ಎಂದು ಕರೆಯಲ್ಪಡುವ ಕೆಸುವಿನ ಗಿಡಗಳು, ಸದಾ ನೀರು ಹರಿಯುವ ಪ್ರದೇಶಗಳಲ್ಲಿ, ನೈಸರ‍್ಗಿಕವಾಗಿ ತಾನಾಗಿಯೇ ಹುಟ್ಟಿ ಬೆಳೆಯುವಂತಹ ಸಸ್ಯಗಳಾಗಿವೆ. ಇವು ಅಗಲವಾದ ಎಲೆಗಳನ್ನು ಹೊಂದಿದ್ದು, ಈ ಎಲೆಗಳಿಗೆ ಕಾಂಡಗಳು ಅಂಟಿಕೊಂಡಂತೆ ಕಂಡುಬರುತ್ತವೆ. ಈ ಕಾಂಡಗಳಿಗೆ ಇರುವ ಹೆಸರೇ ಕೆಸುವೆದಂಟು. ಇದು ಒಂದು ಔಶದೀಯ ಗುಣವುಳ್ಳ ಸಸ್ಯವಾಗಿದ್ದು, ಸಂಸ್ಕ್ರುತದಲ್ಲಿ ಇದಕ್ಕೆ ‘ಅಲೂಕಿ’ ಎಂಬ ಹೆಸರಿದೆ. ಇದು ತೇವವಿರುವ ಮಣ್ಣಿನಲ್ಲಿ ಹುಟ್ಟಿ ಬೆಳೆಯುವುದರಿಂದ, ಹಳ್ಳಿಗಳಲ್ಲಿ ಇದನ್ನು ಕೆಸರು ದಂಟಿನ ಗಿಡ ಎಂದು ಕರೆಯುವುದು ವಾಡಿಕೆಯಾಗಿದೆ. ಈ ಕೆಸುವಿನ ಗಿಡದಲ್ಲಿ ಸಾಕಶ್ಟು ಪ್ರಮಾಣದ ಜೀವಸತ್ವಗಳು, ರೋಗನಿರೋದಕ ಶಕ್ತಿ ಅಡಗಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಇದರ ಎಲೆಗಳನ್ನು ಬಳಸಿ ಸಾಂಬಾರ್, ಕೆಸುವೆ ಸೊಪ್ಪಿನ ಹುಳಿ ಹಾಗೂ ಇದರ ದಂಟನ್ನು ಬಳಸಿ ವಿವಿದ ಬಗೆಯ ಪಲ್ಯಗಳನ್ನು ಮಾಡಿ ಸವಿಯುವರು. ಇನ್ನು ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕೆಸುವಿನ ಎಲೆಯಿಂದ ಸಿಹಿ ಮತ್ತು ಕಾರದ ‘ಪತ್ರೊಡೆ’ ಮಾಡುವುದನ್ನು ಕಾಣಬಹುದು. ಉತ್ತರ ಕರ‍್ನಾಟಕದ ಜಿಲ್ಲೆಗಳಿಗಿಂತ ದಕ್ಶಿಣದ ಜಿಲ್ಲೆಗಳಲ್ಲಿ ಇದರ ಬಳಕೆಯನ್ನು ಸರ‍್ವೇ ಸಾಮಾನ್ಯವಾಗಿ ಕಾಣಬಹುದು. ಇದಲ್ಲದೇ ಕೆಸುವೆ ದಂಟಿನ ಚಟ್ನಿ, ಕೆಸುವಿನ ಎಲೆಯ ಪಲ್ಯ ಹೀಗೆ ಇತರೆ ಕಾದ್ಯಗಳನ್ನು ಇದರಿಂದ ಮಾಡಬಹುದು. ಬೆಂಗಳೂರು, ತುಮಕೂರು ಮತ್ತು ಮೈಸೂರು ಬಾಗದ ಜನರಿಗೂ ಕೆಸುವೆ ಚಿರಪರಿಚಿತ. ಕೆಸುವೆ ಗಿಡದ ರಸವು ತುಂಬಾ ನವೆ ಅತವಾ ತುರಿಕೆ ಉಂಟುಮಾಡುವುದರಿಂದ ಅದನ್ನು ಬಳಸುವ ಮುನ್ನ ಕೈಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಳ್ಳಬೇಕಾಗುತ್ತದೆ. ಕೆಸುವೆ ದಂಟಿನ ಪಲ್ಯ ತಯಾರಿಸಬೇಕಾದರೆ ಮೊದಲು ಅದರ ಮೇಲಿನ ನಾರನ್ನು ತೆಗೆದರೆ ಒಳಿತು. ಇದರ ಎಲೆಯ ಜೊತೆಗೆ ಮಿಶ್ರ ಸೊಪ್ಪಿನ ಸಾಂಬಾರಾದ, ಮಸೆದ ಸೊಪ್ಪಿನ ಜೊತೆಗೆ ಒಂದೆರಡು ಎಲೆಗಳನ್ನು ಹಾಕಬಹುದು. ಕೆಸುವಿನ ಗಿಡಗಳಲ್ಲಿ, ಮಾನವನ ದೇಹದ ಮೂತ್ರಕೋಶಗಳಲ್ಲಿ ಆಗುವ ಕಲ್ಲುಗಳಿಂದಾಗುವ ತೊಂದರೆಗಳನ್ನು ಗುಣಮಾಡಬಲ್ಲ ಮುಕ್ಯ ಗುಣವಿದೆ. ಇದನ್ನು ಆಹಾರದಲ್ಲಿ ನಿಯಮಿತವಾಗಿ ಉಪಯೋಗಿಸಿದರೆ ಮೂತ್ರ ಕೋಶದ ಸೋಂಕನ್ನು ತಡೆಗಟ್ಟಬಹುದು. ಕೆಸುವಿ ಗಿಡಗಳಲ್ಲಿ ‘ಎ’ ಜೀವಸತ್ವ, ರಂಜಕ, ಪೊಟಾಶಿಯಂ ಮತ್ತು ನಾರಿನಂಶ ಅದಿಕವಾಗಿದ್ದು, ಕರುಳು ಸಂಬಂದಿತ ಕಾಯಿಲೆ, ರಕ್ತ ಹೀನತೆ, ಸೇರಿದಂತೆ ಹ್ರುದಯ ಸಂಬಂದಿತ ಕಾಯಿಲೆಗಳನ್ನು ಗುಣಪಡಿಸುವುದರಲ್ಲಿ ಇದೊಂದು ಉತ್ತಮ ಮದ್ದಾಗಿದೆ ಎಂದು ಹೇಳಬಹುದು.
ಕೆಸುವೆ ದಂಟಿನ ಗಿಡದಲ್ಲಿ ಬೀಜಗಳು ಉತ್ಪತ್ತಿಯಾಗುವುದಿಲ್ಲ, ಬದಲಾಗಿ ಹೂ ಬಿಟ್ಟ ನಂತರ ಸಸ್ಯವು ಬಾಡಿ ಹೋಗಿ, ಉದುರಿ ಬೂಮಿಯ ಒಳಗೆ ಗೆಡ್ಡೆಯನ್ನು ಉಳಿಸಿರುತ್ತದೆ. ನಂತರ, ಮಳೆ ಬಿದ್ದಾಗ ಈ ಗೆಡ್ಡೆಯಿಂದ ಒಂದಕ್ಕಿಂತ ಹೆಚ್ಚು ಸಸಿಗಳು ಮೊಳಕೆಯೊಡೆದು ಚಿಗುರಿ ಕೆಸುವಿನ ಗಿಡಗಳು ಗುಂಪು ಗುಂಪಾಗಿ ಹಸಿರಾಗಿ ಸೊಂಪಾಗಿ ಬೆಳೆದು ನಿಲ್ಲುತ್ತವೆ. ಈ ಕೆಸುವಿನ ಗೆಡ್ಡೆಯನ್ನು ಆಯುರ‍್ವೇದಿಕ್ ಔಶದಿಯ ತಯಾರಿಕೆಯಲ್ಲಿ ಸಹ ಬಳಸುತ್ತಾರೆ ಎಂಬುದಾಗಿ ಹೇಳಲಾಗುತ್ತದೆ. ಈ ರೀತಿಯಾಗಿ ಕೆಸುವಿನ ಗಿಡವು ಹಲವು ವಿಶೇಶತೆಗಳಿಂದ ಕೂಡಿದ ಗಿಡವಾಗಿದೆ.
(ಚಿತ್ರ ಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು