ಆಟೊಮೊಬೈಲ್ ಜಗತ್ತಿನ ಸೋಜಿಗದ ಸಂಗತಿಗಳು!

– ಜಯತೀರ‍್ತ ನಾಡಗವ್ಡ.

ಈ ಸೋಜಿಗದ ಸಂಗತಿಗಳೇ ಹೀಗೆ, ಇವು ನಂಬಲು ಅಸಾದ್ಯ ಎನ್ನಿಸುವಂತಿದ್ದರೂ ಹಲವಾರು ಕಡೆಗಳಲ್ಲಿ ನಡೆದುಹೋಗುತ್ತವೆ. ಬಂಡಿಗಳ(automobile) ಲೋಕವೂ ಇದಕ್ಕೆ ಹೊರತಾಗಿಲ್ಲ. ಕಾರು, ಇಗ್ಗಾಲಿ ಬಂಡಿಗಳ(bike) ಕೈಗಾರಿಕೆಯ ಬಗ್ಗೆ ಕೆಲವು ಸೋಜಿಗದ ಸಂಗತಿಗಳಿವೆ. ಹಾಗೇ ಬೇರೆ ಬೇರೆ ದೇಶಗಳಲ್ಲಿ ಚಿತ್ರ ವಿಚಿತ್ರವಾದ ಕಟ್ಟಳೆಗಳಿವೆ . ಅವುಗಳನ್ನು ಇಲ್ಲಿ ಕಲೆಹಾಕಲಾಗಿದೆ.

  • ಹೆಚ್ಚಿನ ದೂರದವರೆಗೆ (ಸುಮಾರು 100ಕಿಮೀ ವರೆಗೆ), ಮೊದಲು ಕಾರು ನಡೆಸಿದ್ದು ಒಬ್ಬ ಮಹಿಳೆ. ಅವರೇ ಬೆರ‍್ತಾ ಬೆಂಜ್- ಮೊಟ್ಟ ಮೊದಲ ಕಾರು ಕಂಡುಹಿಡಿದ ಕಾರ‍್ಲ್ ಬೆಂಜ್ ರವರ ಮಡದಿ ಮತ್ತು ಅವರ ಬಿಸಿನೆಸ್ ಜತೆಗಾತಿ ಕೂಡ. ಬೆಂಜ್ ರವರು 29ನೇ ಜನವರಿ 1886ರಲ್ಲಿ ಈ ಮೊಟ್ಟ ಮೊದಲ ಕಾರಿಗೆ ಹಕ್ಕೋಲೆ(Patent) ಪಡೆದುಕೊಂಡಿದ್ದರು. ಇದೇ ಮೊಟ್ಟ ಮೊದಲ ಬಂಡಿಯ ಹುಟ್ಟು ಸಲ್ಲೋಲೆ(Birth Certificate) ಎಂದು ಹೇಳಲಾಗಿದೆ.
  • ಒಮ್ಮೆ ಹೆಸರುವಾಸಿ ಬಿಎಮ್‍ಡಬ್ಲ್ಯೂ ಕಂಪನಿಯು ಜಿಪಿಎಸ್ ಅಳವಡಿಸಲ್ಪಟ್ಟ ಕಾರುಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಗಿ ಬಂದಿತ್ತು. ಇದಕ್ಕೆ ಬಂದ ಕಾರಣ ವಿಚಿತ್ರವಾಗಿತ್ತು, ಜಿಪಿಎಸ್ ನಲ್ಲಿ ಕೇಳಿಬರುವ ದನಿ ಹೆಂಗಸಿನದಾಗಿತ್ತು, ನಮಗೆ ಹೆಣ್ಣು ದನಿ ಹೊಂದಿರುವ ತಲುಪುದಾರಿ ಏರ‍್ಪಾಟು (Navigation System) ಬೇಡವೆಂದು ಹಲವಾರು ಬಂಡಿ ಕೊಳ್ಳುಗರು ದೂರು ನೀಡಿದ್ದರಂತೆ!
  • ಹೆಸರುವಾಸಿ ಬಿಎಮ್‍ಡಬ್ಲ್ಯೂ ಕೂಟದವರು ಮೊಟ್ಟ ಮೊದಲಿಗೆ ಬಾನೋಡ(Aircraft) ಮತ್ತು ಬಾನೋಡದ ಬಿಣಿಗೆ(Aircraft Engine) ತಯಾರಿಸುವ ಕಂಪನಿಯಾಗಿ ಬೆಳೆದು ಬಂದರು. ತದನಂತರ ಇಗ್ಗಾಲಿ ಬಂಡಿ ತಯಾರಿಕೆಯಲ್ಲಿ ತೊಡಗಿಕೊಂಡು ಇದೀಗ ಸಿರಿಮೆಯ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
  • ಬಂಡಿಯ ರಿಮೋಟ್ ಬೀಗದ ಕೈಯನ್ನು ತಲೆಯ ಬಳಿ ಹಿಡಿದರೆ ಅದರ ಹರವು (Range) ಹೆಚ್ಚುವುದಂತೆ. ಮಾನವನ ತಲೆ ಬುರುಡೆ, ಅಲೆಗಳನ್ನು ಹೆಚ್ಚಿಸಿ  ಆಂಪ್ಲಿಪೈಯರ್ ರೀತಿ ಕೆಲಸ ಮಾಡುವುದು ಇದಕ್ಕೆ ಕಾರಣವಂತೆ.
  • ರೋಲ್ಸ್ ರಾಯ್ಸ್ ಕೂಟದವರು ನೂರಾರು ವರುಶಗಳಿಂದ ತಯಾರಿಸಿಕೊಂಡು ಬಂದ ಸುಮಾರು 75% ಕಾರುಗಳು ಈಗಲೂ ಬಳಕೆಯಲ್ಲಿವೆ.
  • ಅಮೇರಿಕಾದ ಮಸಾಚುಸೆಟ್ಸ್ ನ ಬಂಡಿ ಓಡಿಸುಗರೊಬ್ಬರು ಸುಮಾರು 82 ವರುಶ ತಮ್ಮ ರೋಲ್ಸ್ ರಾಯ್ಸ್ ಕಾರನ್ನು ಓಡಿಸಿ ದಾಕಲೆ ಬರೆದಿದ್ದಾರೆ.
  • ಸುಮಾರು 1908ರಲ್ಲಿ ಹೆನ್ರಿ ಪೋರ‍್ಡ್ ಅವರು ತಯಾರಿಸಿದ “ಮಾಡೆಲ್ ಟಿ” ಕಾರು -ಮೊದಲ ಬಾರಿಗೆ ಸಾರ‍್ವಜನಿಕರ ಬಳಕೆಗೆ ಹೊರತಂದ ಕಾರಾಗಿತ್ತು. ಅಂದಿನ ಹೊತ್ತಿಗೆ ಇದು ಬಲು ಅಗ್ಗದ ಕಾರು ಎಂದು ಹೆಸರು ಪಡೆದು, ಜಗತ್ತಿನ 55% ಕಾರು ಮಾರುಕಟ್ಟೆಯನ್ನು ಇದು ಗಳಿಸಿಕೊಂಡಿದ್ದು ಇಂದಿಗೂ ದಾಕಲೆಯಾಗಿಯೇ ಉಳಿದಿದೆ. 1908 ರಿಂದ 1927ರವರೆಗೂ ಸುಮಾರು 1.5ಕೋಟಿ ಮಾಡೆಲ್-ಟಿ ಕಾರುಗಳು ಮಾರಾಟಗೊಂಡಿದ್ದವು. ಮೊದಮೊದಲು ಮಾಡೆಲ್-ಟಿ ಕಾರೊಂದನ್ನು ತಯಾರಿಸಲು ಪೋರ‍್ಡ್ ಕೂಟಕ್ಕೆ 12 ಗಂಟೆ ತಗಲುತ್ತಿತ್ತು. 1926-27ರ ಹೊತ್ತಿಗೆ ಒಂದು ಮಾಡೆಲ್-ಟಿ ಕಾರು ತಯಾರಿಸಲು ಬರೀ 24ಸೆಕೆಂಡುಗಳು ಸಾಕಾಗಿತ್ತು. ಹೆನ್ರಿ ಪೋರ‍್ಡ್‍ರ ಈ ಗೆಲುವು ನೋಡಿ, ಜರ‍್ಮನಿಯ ಸರ‍್ವಾದಿಕಾರಿ ಹಿಟ್ಲರ್ ಕೂಡ ಡಾ.ಪರ‍್ಡಿನಾಂಡ್ ಪೋರ‍್ಶ್ ರವರಿಗೆ ಇದೇ ತೆರನಾಗಿ ಮಂದಿ ಕಾರನ್ನು (Volkswagen-People’s car) ತಯಾರಿಸುವಂತೆ ಹೇಳಿದ್ದ. ಇದರ ಪರಿಣಾಮವೇ ಪೋಕ್ಸ್ ವ್ಯಾಗನ್ ಬೀಟಲ್ ಕಾರು. ಬೀಟಲ್ ಕಾರಿನ ಮೊದಲ ಸ್ಕೆಚ್ ಕೂಡ ಹಿಟ್ಲರ್ ಮಾಡಿದ್ದನಂತೆ. 1938 ರಿಂದ 2003 ರವರೆಗೆ ಸುಮಾರು 2.1 ಕೋಟಿಗೂ ಹೆಚ್ಚು ಬೀಟಲ್ ಕಾರುಗಳು ಮಾರಾಟವಾಗಿ ಜಗತ್ತಿನ ಅಚ್ಚುಮೆಚ್ಚಿನ ಕಾರು ಎಂದು ಹೆಸರು ಮಾಡಿದೆ.
  • ಪೋಕ್ಸ್ ವ್ಯಾಗನ್ ಕೂಟದ ಕಾರು ಮಾದರಿಗಳ ಹೆಸರುಗಳು ಗಾಳಿಗೆ ಸಂಬಂದಿಸಿದ್ದವು. ಯೆಟ್ಟಾ ಎಂದರೆ ಜೆಟ್ ಸ್ಟ್ರೀಮ್, ಪಸ್ಸಟ್ ಎಂದರೆ ಟ್ರೇಡ್ ವಿಂಡ್ಸ್ ಮತ್ತು ಪೋಲೊ ಎಂದರೆ ಪೋಲಾರ್ ವಿಂಡ್ಸ್ ಎಲ್ಲ ಪದಗಳು ಗಾಳಿಗೆ ಸಂಬಂದಿಸಿದ್ದು.
  • ಜಗತ್ತಿನ ನೆಚ್ಚಿನ ಕಾರಿನ ಬಣ್ಣ ಬಿಳಿಯಂತೆ. ಜಗತ್ತಿನಲ್ಲಿ ಅತಿ ಹೆಚ್ಚು ಬಿಳಿ ಬಣ್ಣದ ಕಾರುಗಳು ಮಾರಾಟಗೊಂಡಿವೆ.
  • ಸಾಮಾನ್ಯ ಕಾರೊಂದರಲ್ಲಿ 30,000ಕ್ಕೂ ಹೆಚ್ಚು ಬಿಡಿಬಾಗಗಳು ಇರುತ್ತವೆ. ಅದರಲ್ಲಿ 80% ಹೆಚ್ಚಿನ ಬಾಗಗಳನ್ನು ಮರುಬಳಕೆ ಮಾಡಬಹುದಾಗಿರುತ್ತದೆ.
  • ಟೋಯೊಟಾದವರ ಕೊರೊಲ್ಲಾ ಕಾರು ಜಗತ್ತಿನ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಕಾರು. 1966 ರಿಂದ ಇಲ್ಲಿಯವರೆಗೆ ಬಾರತ ಸೇರಿದಂತೆ ಸುಮಾರು 150 ದೇಶಗಳಲ್ಲಿ 4.4 ಕೋಟಿಗೂ ಹೆಚ್ಚಿನ ಕೊರೊಲ್ಲಾ ಕಾರುಗಳು ಮಾರಾಟಗೊಂಡಿವೆ. ಪ್ರತಿ 15 ಸೆಕೆಂಡಿಗೊಂದು ಕೊರೊಲ್ಲಾ ಕಾರು ಮಾರಾಟವಾಗುತ್ತದಂತೆ.
  • ಜಗತ್ತಿನ ಅತಿ ಕಡಿಮೆ ಮೊತ್ತದ ಕಾರು ನಮ್ಮ ದೇಶದ ಟಾಟಾ ನ್ಯಾನೊ.
  • ಕ್ಯಾಲಿಪೋರ‍್ನಿಯಾ ನಗರದಲ್ಲಿ ಜನರಿಗಿಂತ ಹೆಚ್ಚಿನ ಸಂಕ್ಯೆಯಲ್ಲಿ ಕಾರುಗಳಿವೆ.
  • ಬಂಡಿ ಸುಯ್ ಅಂಕೆ ಏರ‍್ಪಾಟು(Cruise Control) ಕಂಡುಹಿಡಿದ ರಾಲ್ಪ್ ಟೀಟರ್ ಎಂಬುವವರು ಕುರುಡಾಗಿದ್ದರು ಎಂಬುದು ನಂಬಲಾಗದ ಸತ್ಯ!
  • ಅತಿ ಉದ್ದದ ಕಾರನ್ನು ಕ್ಯಾಲಿಪೋರ‍್ನಿಯಾದ ಕಾರ್ ಗುರು ಜಯ್ ಒಹ್ರಬರ‍್ಗ್ ಎಂಬುವರು ಸಿದ್ದಗೊಳಿಸಿದ್ದಾರೆ. 100 ಮೀಟರ್ ಉದ್ದದ ಈ ಲಿಮೋಸಿನ್ ಕಾರಿನಲ್ಲಿ ಈಜುಗೊಳ ಮತ್ತು ಹೆಲಿಪ್ಯಾಡ್ ಕೂಡ ಇವೆಯಂತೆ.
  • ಅತಿ ವೇಗದ ಪೋಲೀಸ್ ಕಾರು ಇರುವುದು ದುಬೈ ಪೋಲೀಸರ ಬಳಿ. ಗಂಟೆಗೆ 407ಕಿ.ಮೀ. ಓಡುವ ಬುಗ್ಯಾಟಿ ವೆಯ್ರೊನ್ (Bugatti Veyron) ಕಾರು, ಕಳ್ಳರು, ಅಪರಾದಿಗಳನ್ನು ಸಿನೆಮಾಗಳಲ್ಲಿ ತೋರುವಂತೆ ಬೆನ್ನತ್ತಲು ನೆರವಾಗುತ್ತದೆ.
  • ದಕ್ಶಿಣ ಆಪ್ರಿಕಾ ದೇಶದಲ್ಲಿ ಕಾರು ಕಳ್ಳತನ ಹೆಚ್ಚು. ಕಾರುಗಳ್ಳರಿಂದ ಕಾಪಾಡಲು, ಕಾರು ಹೊಂದಿದ ಬಹುತೇಕರು ತಮ್ಮ ಕಾರಿನಲ್ಲಿ ಬೆಂಕಿಯುಗುಳುವ ಸಲಕರಣೆಯನ್ನು(Flamethrower) ಹೊತ್ತು ತಿರುಗುವುದು ಇಲ್ಲಿ ಸರ‍್ವೇ ಸಾಮಾನ್ಯ.
  • ಕಾರಿನ ರಿಮೋಟ್ ಬೀಗದ ಕೈಯನ್ನು ಸತತವಾಗಿ 256 ಸಲ ಅದುಮಿದರೆ ಅದು ಹಾಳಾಗಿ ಕೆಲಸ ಮಾಡುವುದಿಲ್ಲ.

ಕೆಲವು ದೇಶಗಳ ವಿಚಿತ್ರ ಕಟ್ಟಳೆಗಳು

ಇನ್ನೂ ಬಂಡಿ ಓಡಿಸುವಿಕೆಗೆ ಕುರಿತಾದ ಕೆಲವು ದೇಶಗಳ ವಿಚಿತ್ರ ಕಟ್ಟಳೆಗಳು ಹೀಗಿವೆ.

  • ರಶಿಯಾದ ದೇಶದ ಕಾನೂನಿನಂತೆ ಕೊಳಕಾದ, ದೂಳಿಂದ ತುಂಬಿದ ಬಂಡಿಯನ್ನು ನೀವು ಓಡಿಸುವಂತಿಲ್ಲ. ಇದನ್ನು ಮೀರಿದರೆ ನೀವು ದಂಡ ತೆರಬೇಕು.
  • ಸ್ವೀಡನ್, ನಾರ‍್ವೆಯಂತ ಸ್ಕ್ಯಾಂಡಿನೇವಿಯನ್ ನಾಡುಗಳಲ್ಲಿ ನೀವು ಬಂಡಿ ಓಡಿಸುವಾಗ ನಿಮ್ಮ ಕಾರಿನ ಮುಂದೀಪ ಯಾವಾಗಲೂ ಉರಿಯತ್ತಲೇ ಇರಬೇಕು.
  • ತೈಲ್ಯಾಂಡ್ ದೇಶದಲ್ಲಿ ಅಂಗಿ ದರಿಸದೇ ಬಂಡಿ ಓಡಿಸುವಂತಿಲ್ಲ.
  • ಕಾರು, ಬಂಡಿ ಓಡಿಸುವಾಗ ಸಿಗರೇಟ್ ಸೇದುವುದು ಗ್ರೀಸ್ ದೇಶದಲ್ಲಿ ಅಪರಾದ.
  • ಪಿಲಿಪೈನ್ಸ್ ನಲ್ಲಿ ಸೋಮವಾರದ ದಿನ, 1 ಮತ್ತು 2 ರಿಂದ ಕೊನೆಗೊಳ್ಳುವ ಬಂಡಿ ನಂಬರ್ ಹೊಂದಿರುವವರು ಬಂಡಿ ಬೀದಿಗಿಳಿಸುವಂತಿಲ್ಲ. ಅದೇ ರೀತಿ ಮಂಗಳವಾರ 3 ಮತ್ತು 4 , ಹೀಗೆ ಶುಕ್ರವಾರದ ತನಕ ಇದೆ. ಬಂಡಿಗಳ ದಟ್ಟಣೆಯನ್ನು ತಗ್ಗಿಸಲು ಅಲ್ಲಿನ ಸರಕಾರದ ಕಟ್ಟಳೆಯಿದು.
  • ಬಂಡಿ ಓಡಿಸುವಾಗ ತಿನ್ನುವುದು, ಕುಡಿಯುವುದಕ್ಕೆ ಸಿಪ್ರಸ್ ದೇಶ ತಡೆಯೊಡ್ಡಿದೆ. ಬಂಡಿ ಓಡಿಸುವಾಗ ನೀರು ಕುಡಿಯಲು ಸಹ ಅನುಮತಿಯಿಲ್ಲ.
  • ಬೀದಿಯಲ್ಲಿ ನೀರು, ಕೆಸರು ತುಂಬಿದ್ದಾಗ ಅದರಲ್ಲಿ ಬಂಡಿ ಓಡಿಸಿಕೊಂಡು ಹೋಗುವಾಗ ಅಕ್ಕಪಕ್ಕದವರಿಗೆ ಇಲ್ಲವೇ ಸುತ್ತಲಿನ ಬಂಡಿಗಳಿಗೆ ನೀರು/ಕೆಸರು ಸಿಡಿದರೆ ಜಪಾನನಲ್ಲಿ ಬಂದಿಸಲಾಗುತ್ತದೆ.
  • ಆಸ್ಟ್ರೇಲಿಯಾದಲ್ಲಿ ಬಂಡಿ ಓಡಿಸುಗರು, ತಮ್ಮ ಬಂಡಿಯ ಕಿಟಕಿಯಾಚೆ ಕೈ,ಮುಂಗೈ ಇಲ್ಲವೇ ತೋಳು ಚಾಚಿದರೆ ದಂಡ ಹಾಕಿಸಿಕೊಳ್ಳಬೇಕಾಗುತ್ತದೆ. ಅಗತ್ಯ ಸಂದರ‍್ಬದಲ್ಲಿ ಇತರೆ ಓಡಿಸುಗರಿಗೆ ನೆರವಾಗುವ ಉದ್ದೇಶದಿಂದ ಈ ರೀತಿ ಮಾಡಿದ್ದರೆ ಅದಕ್ಕೆ ಮಾತ್ರ ರಿಯಾಯಿತಿ ನೀಡಲಾಗಿದೆ.
  • ಪ್ಲಿಪ್-ಪ್ಲಾಪ್ ತೆರನಾದ ಚಪ್ಪಲಿಗಳನ್ನು ದರಿಸಿ ಬಂಡಿ ಓಡಿಸುವುದನ್ನು ಸ್ಪೇನ್ ದೇಶ ತಡೆ ಹೇರಿದೆ.
  • ಡೆನ್ಮಾರ‍್ಕ್ ನಲ್ಲಿ ಬಂಡಿ ಓಡಿಸುವ ಮೊದಲು, ತಮ್ಮ ಬಂಡಿಯ ಕೆಳಗೆ ಯಾರಾದರೂ ಇದ್ದಾರೆಯೇ ಇಲ್ಲವೇ ಮಲಗಿದ್ದಾರೆಯೇ ಎಂಬುದನ್ನು ನೋಡಿ, ಇಲ್ಲವೆಂದು ಕಾತರಿ ಪಡಿಸಿಕೊಂಡು ಓಡಿಸುವುದು ಕಡ್ಡಾಯ.

(ಮಾಹಿತಿ ಮತ್ತು ಚಿತ್ರ ಸೆಲೆ: thefactfile.org, factretriever.com, businessinsider.in, carthrottle.com, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: